ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ರಾಷ್ಟ್ರೀಯ ಪೋಷಣಾ ಮಾಸ 2026ಕ್ಕೆ ಚಾಲನೆ: ಆಹಾರ ವೈವಿಧ್ಯತೆ, ಸಮರ್ಪಕ ಪ್ರೋಟೀನ್‌ ಸೇವನೆ ಮತ್ತು ತಾಜಾ ಬಿಸಿ ಊಟಕ್ಕೆ ಒತ್ತು ನೀಡುವ ರಾಷ್ಟ್ರವ್ಯಾಪಿ ಅಭಿಯಾನ


ಅಂಗನವಾಡಿ ಕೇಂದ್ರಗಳನ್ನು ಚೈತನ್ಯಭರಿತ ಸಮುದಾಯ ಸಂಸ್ಥೆಗಳಾಗಿ ಪರಿವರ್ತಿಸಲಾಗಿದೆ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

14 ಲಕ್ಷಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳ ಮೂಲಕ 7.5 ಕೋಟಿಗೂ ಅಧಿಕ ಮಕ್ಕಳು ಹಾಗೂ 1.10 ಕೋಟಿ ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರಿಗೆ ಪೌಷ್ಟಿಕಾಂಶ, ಆರೋಗ್ಯ ಮತ್ತು ಬಾಲ್ಯದ ಆರೈಕೆ ಸೇವೆ: ಶ್ರೀಮತಿ ಅನ್ನಪೂರ್ಣಾ ದೇವಿ

ಸುಪೋಷಿತ ಭಾರತ ಮತ್ತು ವಿಕಸಿತ ಭಾರತ@2047ರ ಗುರಿಯತ್ತ ಪೋಷಣೆಯನ್ನು ನಿಜವಾದ ಜನಾಂದೋಲನವಾಗಿಸಲು ನಾಗರಿಕರಿಗೆ ಕರೆ: ಶ್ರೀಮತಿ ಅನ್ನಪೂರ್ಣಾ ದೇವಿ

ಪ್ರಕಟಣಾ ದಿನಾಂಕ: 09 SEP 2026 4:44PM by PIB Bengaluru

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಇಂದು ವಾರಾಣಸಿಯ ರುದ್ರಾಕ್ಷ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರದಲ್ಲಿ (RICCC) 9ನೇ ರಾಷ್ಟ್ರೀಯ ಪೋಷಣಾ ಮಾಸ 2026ಕ್ಕೆ ಚಾಲನೆ ನೀಡಿತು. “ನಮ್ಮ ಅಂಗನವಾಡಿ, ನಮ್ಮ ಜವಾಬ್ದಾರಿ” ಎಂಬ ವಿಷಯದಡಿ ಪೋಷಣೆಗೆ ಸಂಬಂಧಿಸಿದ ಒಂದು ತಿಂಗಳ ಅವಧಿಯ ರಾಷ್ಟ್ರವ್ಯಾಪಿ ಜನಾಂದೋಲನಕ್ಕೆ ಚಾಲನೆ ನೀಡಲಾಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣಾ ದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಹಾಗೂ ಉತ್ತರ ಪ್ರದೇಶ ಸರ್ಕಾರದ ಮಹಿಳಾ ಕಲ್ಯಾಣ, ಮಕ್ಕಳ ಅಭಿವೃದ್ಧಿ ಮತ್ತು ಪೋಷಣಾ ಸಚಿವರಾದ ಶ್ರೀಮತಿ ಬೇಬಿ ರಾಣಿ ಮೌರ್ಯ ಅವರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು, ಅಭಿವೃದ್ಧಿ ಪಾಲುದಾರರು, ಮುಂಚೂಣಿ ಸಿಬ್ಬಂದಿ ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು.

ವಿಶೇಷ ಭಾಷಣ ಮಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು, ಪೋಷಣಾ ಅಭಿಯಾನದ ಉದ್ದೇಶಗಳನ್ನು ಮುನ್ನಡೆಸುವಲ್ಲಿ ಹಾಗೂ ತಳಮಟ್ಟದ ಪೌಷ್ಟಿಕಾಂಶ ಸೇವೆಗಳನ್ನು ಬಲಪಡಿಸುವಲ್ಲಿ ಅಂಗನವಾಡಿ ಕೇಂದ್ರಗಳ ಪರಿವರ್ತನಾತ್ಮಕ ಪಾತ್ರವನ್ನು ಒತ್ತಿಹೇಳಿದರು. ಅಪೌಷ್ಟಿಕತೆ ಮುಕ್ತ ಭಾರತ ನಿರ್ಮಾಣದ ಗುರಿ ಸಾಧಿಸಲು ಇಲಾಖೆಗಳ ನಡುವಿನ ನಿರಂತರ ಸಮನ್ವಯ, ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಮುಂಚೂಣಿ ಸಿಬ್ಬಂದಿಯ ಸಮರ್ಪಣೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಕಳೆದ ಹಲವು ವರ್ಷಗಳಲ್ಲಿ ಆಗಿರುವ ಮಹತ್ವದ ಸುಧಾರಣೆಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿಯವರು, ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಿಸಿ, ನವೀಕರಿಸಿ, ಸುಧಾರಿತ ಮೂಲಸೌಕರ್ಯ ಮತ್ತು ಕಲಿಕಾ ವಾತಾವರಣ ಹೊಂದಿರುವ ಚೈತನ್ಯಭರಿತ ಸಮುದಾಯ ಸಂಸ್ಥೆಗಳಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಲಾಗಿದ್ದು, ಇದರಿಂದ ನೈಜ-ಸಮಯದ ದತ್ತಾಂಶ ನಮೂದು ಹಾಗೂ ಡಿಜಿಟಲ್ ಮೇಲ್ವಿಚಾರಣೆಯ ಮೂಲಕ ಸೇವೆಗಳ ಉತ್ತಮ ವಿತರಣೆ ಸಾಧ್ಯವಾಗಿದೆ ಎಂದು ಅವರು ಹೇಳಿದರು. ಪೂರಕ ಪೌಷ್ಟಿಕಾಂಶ ಸೇವೆಗಳನ್ನು ಬಲಪಡಿಸಿರುವುದನ್ನು ಉಲ್ಲೇಖಿಸಿದ ಶ್ರೀ ಯೋಗಿ ಆದಿತ್ಯನಾಥ್ ಅವರು, ಅಂಗನವಾಡಿ ಕೇಂದ್ರಗಳಲ್ಲಿ ಅರ್ಹ ಫಲಾನುಭವಿಗಳಿಗೆ ನಿಯಮಿತವಾಗಿ ಬಿಸಿಯೂಟ ಮತ್ತು ಮನೆಗೆ ಕೊಂಡೊಯ್ಯುವ ಪಡಿತರ ನೀಡಲಾಗುತ್ತಿದ್ದು, ಇದರಿಂದ ರಾಜ್ಯಾದ್ಯಂತ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕಾಂಶದ ಸ್ಥಿತಿ ಸುಧಾರಿಸಲು ನೆರವಾಗುತ್ತಿದೆ ಎಂದು ಹೇಳಿದರು. ಪೌಷ್ಟಿಕಾಂಶದ ಮೇಲಿನ ಹೂಡಿಕೆ ಎಂದಿಗೂ ವ್ಯರ್ಥವಾಗುವುದಿಲ್ಲ. ಏಕೆಂದರೆ ಅದು ಆರೋಗ್ಯವಂತ ಮಕ್ಕಳು, ಸಶಕ್ತ ಕುಟುಂಬಗಳು ಮತ್ತು ಬಲಿಷ್ಠ ರಾಷ್ಟ್ರದ ರೂಪದಲ್ಲಿ ಜೀವಮಾನವಿಡೀ ಪ್ರಯೋಜನಗಳನ್ನು ನೀಡುತ್ತದೆ ಎಂದು ಅವರು ಒತ್ತಿಹೇಳಿದರು.

ತಮ್ಮ ಮುಖ್ಯ ಭಾಷಣದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣಾ ದೇವಿ ಅವರು, ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಮಿಷನ್‌ಗಳ ಮೂಲಕ ಪೌಷ್ಟಿಕಾಂಶದ ಫಲಿತಾಂಶಗಳನ್ನು ಸುಧಾರಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಪ್ರಸ್ತುತ 14 ಲಕ್ಷಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳ ಮೂಲಕ 7.5 ಕೋಟಿಗೂ ಅಧಿಕ ಮಕ್ಕಳು, 1.10 ಕೋಟಿ ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರು ಹಾಗೂ ಸುಮಾರು 16 ಲಕ್ಷ ಹದಿಹರೆಯದ ಬಾಲಕಿಯರಿಗೆ ಪೌಷ್ಟಿಕಾಂಶ, ಆರೋಗ್ಯ ಮತ್ತು ಬಾಲ್ಯದ ಆರೈಕೆ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಜೀವನದ ಮೊದಲ 1,000 ದಿನಗಳ ಮಹತ್ವವನ್ನು ಒತ್ತಿಹೇಳಿದ ಅವರು, 2 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಸಕ್ಷಮ್ ಅಂಗನವಾಡಿಗಳಾಗಿ ಉನ್ನತೀಕರಿಸಲಾಗುತ್ತಿದ್ದು, ಈ ಪೈಕಿ ಸುಮಾರು 24,000 ಕೇಂದ್ರಗಳಿಗೆ ಉತ್ತರ ಪ್ರದೇಶದಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (PMMVY) ಜಾರಿಯಾಗಿ ಹತ್ತು ವರ್ಷಗಳನ್ನು ಪೂರ್ಣಗೊಳಿಸಿದ್ದು, ಇದುವರೆಗೆ ದೇಶಾದ್ಯಂತ 4.65 ಕೋಟಿಗೂ ಅಧಿಕ ತಾಯಂದಿರಿಗೆ ನೇರ ಲಾಭ ವರ್ಗಾವಣೆ ಮೂಲಕ ₹21,000 ಕೋಟಿಗೂ ಅಧಿಕ ಮೊತ್ತವನ್ನು ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದರು. ಆಹಾರ ವೈವಿಧ್ಯತೆ, ಸಮರ್ಪಕ ಪ್ರೋಟೀನ್‌ ಸೇವನೆ, ತಾಜಾ ಬಿಸಿಯೂಟ, ನೈರ್ಮಲ್ಯ ಹಾಗೂ ಬಾಲ್ಯಾವಸ್ಥೆಯ ಬೆಳವಣಿಗೆಯನ್ನು ಸುಧಾರಿಸುವಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಅವರು ಒತ್ತಿಹೇಳಿದರು. ಸುಪೋಷಿತ ಭಾರತ ಮತ್ತು ವಿಕಸಿತ ಭಾರತ@2047ರ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪೋಷಣೆಯನ್ನು ನಿಜವಾದ ಜನಾಂದೋಲನವಾಗಿಸಲು ಅವರು ನಾಗರಿಕರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣಾ ದೇವಿ ಅವರು, ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಚಲನಚಿತ್ರಗಳಲ್ಲಿ ತಮ್ಮ ಅಂಗನವಾಡಿ ಕೇಂದ್ರಗಳನ್ನು ತೋರಿಸಲಾಗಿದ್ದ ಆಯ್ದ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ನೇರ ಸಂವಾದ ನಡೆಸಿದರು. ಕಾರ್ಯಕ್ರಮದ ವಿಶೇಷ ವಿಭಾಗದಲ್ಲಿ ಬಿಸಿಯೂಟ, ಮನೆಗೆ ಕೊಂಡೊಯ್ಯುವ ಪಡಿತರ, ಮನೆ ಭೇಟಿಗಳು ಹಾಗೂ ಬಾಲ್ಯಾವಸ್ಥೆಯ ಆರೈಕೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಫಲಾನುಭವಿಗಳ ಅನುಭವಗಳನ್ನು ಒಳಗೊಂಡ ವೀಡಿಯೊಗಳನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರು, ಪೌಷ್ಟಿಕಾಂಶದ ಆಂದೋಲನದಲ್ಲಿ ಸಮುದಾಯಗಳು, ಪಂಚಾಯತ್ ರಾಜ್ ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಮತ್ತು ಕುಟುಂಬಗಳು ಸಕ್ರಿಯವಾಗಿ ಪಾಲ್ಗೊಂಡು, ತಳಮಟ್ಟದಲ್ಲಿ ಪೌಷ್ಟಿಕಾಂಶ ಮತ್ತು ಮಕ್ಕಳ ಆರೈಕೆ ಸೇವೆಗಳ ವಿತರಣೆಯನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.

ಸ್ವಾಗತ ಭಾಷಣ ಮಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಅನಿಲ್ ಮಲಿಕ್ ಅವರು, ಪೋಷಣಾ ಅಭಿಯಾನವು ಸರ್ಕಾರಿ ಕಾರ್ಯಕ್ರಮದಿಂದ ರಾಷ್ಟ್ರವ್ಯಾಪಿ ಜನಾಂದೋಲನವಾಗಿ ವಿಕಸನಗೊಂಡಿದೆ. ಮುಂದಿನ ಹಂತದಲ್ಲಿ ಸಮುದಾಯದ ಮಾಲೀಕತ್ವ ಮತ್ತು ಹೊಣೆಗಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಹೇಳಿದರು. ಸಾಂಸ್ಥಿಕ ಮತ್ತು ತಾಂತ್ರಿಕ ಬಲವರ್ಧನೆಯನ್ನು ಪ್ರತಿಯೊಂದು ಅಂಗನವಾಡಿ ಕೇಂದ್ರದಲ್ಲೂ ಸುಧಾರಿತ ಸೇವಾ ಗುಣಮಟ್ಟವಾಗಿ ಪರಿವರ್ತಿಸುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.

ಔಪಚಾರಿಕ ಚಾಲನಾ ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ಕಾರ್ಯಕ್ರಮ ನಡೆದ ಸ್ಥಳದಲ್ಲಿನ ಪೋಷಣಾ ಮೇಳಕ್ಕೆ ಭೇಟಿ ನೀಡಿದರು. ಇಲ್ಲಿ ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ನವೀನ ಪ್ರಯತ್ನಗಳು, ಸ್ಥಳೀಯ ಪೌಷ್ಟಿಕ ಆಹಾರಗಳು ಹಾಗೂ ಅಂಗನವಾಡಿ ಕೇಂದ್ರಗಳ ಉತ್ತಮ ಕಾರ್ಯವಿಧಾನಗಳನ್ನು ಪ್ರದರ್ಶಿಸಲಾಗಿತ್ತು.

ಪೋಷಣಾ ಮಾಸ 2026ಕ್ಕೆ ಸಂಬಂಧಿಸಿದ ವಿಶೇಷ ಶ್ರವ್ಯ-ದೃಶ್ಯ ಪ್ರಸ್ತುತಿಯನ್ನು ಪ್ರದರ್ಶಿಸಲಾಯಿತು. ಇದಾದ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣಾ ದೇವಿ ಅವರು ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಔಪಚಾರಿಕವಾಗಿ ಚಾಲನೆ ನೀಡಿದರು. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (PMMVY) ಜಾರಿಯಾಗಿ 10 ವರ್ಷಗಳು ಪೂರ್ಣಗೊಂಡಿರುವುದನ್ನು ಸ್ಮರಿಸುವ ಚಲನಚಿತ್ರವನ್ನೂ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ದೇಶಾದ್ಯಂತ ತಾಯಂದಿರ ಆರೋಗ್ಯ ಮತ್ತು ಪೌಷ್ಟಿಕಾಂಶದ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಈ ಯೋಜನೆಯ ಕೊಡುಗೆಯನ್ನು ಚಿತ್ರದಲ್ಲಿ ತೋರಿಸಲಾಯಿತು.

2018ರಲ್ಲಿ ಪೋಷಣಾ ಅಭಿಯಾನ ಆರಂಭವಾದಾಗಿನಿಂದ, ಪೋಷಣಾ ಮಾಸ, ಪೋಷಣಾ ಪಖ್ವಾಡಾ ಹಾಗೂ ಇತರ ಸಮುದಾಯದ ಪಾಲ್ಗೊಳ್ಳುವಿಕೆ ಉಪಕ್ರಮಗಳ ಮೂಲಕ 150 ಕೋಟಿಗೂ ಅಧಿಕ ಜನಾಂದೋಲನ ಚಟುವಟಿಕೆಗಳನ್ನು ನಡೆಸಲಾಗಿದೆ. ರಾಷ್ಟ್ರೀಯ ಪೋಷಣಾ ಮಾಸ 2026 ಅನ್ನು ಸೆಪ್ಟೆಂಬರ್ 9ರಿಂದ ಅಕ್ಟೋಬರ್ 8ರವರೆಗೆ ದೇಶಾದ್ಯಂತ ಆಚರಿಸಲಾಗುತ್ತಿದ್ದು, ಈ ಕೆಳಗಿನ ವಿಷಯಗಳ ಮೇಲೆ ಕೇಂದ್ರೀಕೃತ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು:

  • ·ಆಹಾರ ವೈವಿಧ್ಯತೆ ಮತ್ತು ಸಮರ್ಪಕ ಪ್ರೋಟೀನ್‌ ಸೇವನೆ
  • ಅಂಗನವಾಡಿ ಕೇಂದ್ರಗಳಲ್ಲಿ ತಾಜಾ ಬಿಸಿಯೂಟ
  • ಅಂಗನವಾಡಿ ನಿರ್ವಹಣಾ ಸಮಿತಿಗಳು ಮತ್ತು ಪೂರಕ ಪೌಷ್ಟಿಕಾಂಶ ಯೋಜನೆ (SNP) ಮೆನು ಫಲಕಗಳ ಮೂಲಕ ಸಮುದಾಯದ ಮಾಲೀಕತ್ವ
  • ಮಕ್ಕಳ ಬೆಳವಣಿಗೆಗಾಗಿ ಪೌಷ್ಟಿಕಾಂಶ ಮತ್ತು ಆರಂಭಿಕ ಉತ್ತೇಜನ
  • ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (PMMVY)ಯ 10 ವರ್ಷಗಳು

ಒಂದು ತಿಂಗಳ ಅವಧಿಯ ಈ ಅಭಿಯಾನವು ಅಂಗನವಾಡಿ ಕೇಂದ್ರಗಳೊಂದಿಗೆ ಸಮುದಾಯದ ಬಾಂಧವ್ಯವನ್ನು ಮತ್ತಷ್ಟು ಗಾಢಗೊಳಿಸುವ ಹಾಗೂ ಉತ್ತಮ ಪೌಷ್ಟಿಕಾಂಶ, ತಾಯಂದಿರ ಆರೋಗ್ಯ ಮತ್ತು ಬಾಲ್ಯಾವಸ್ಥೆಯ ಬೆಳವಣಿಗೆಗಾಗಿ ಸಾಮೂಹಿಕ ಕ್ರಮಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ. ಇದರ ಮೂಲಕ ಸುಪೋಷಿತ ಭಾರತದ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.

https://webcast.gov.in/mwcd/

******

 


(ಪ್ರಕಟಣೆ ಐ.ಡಿ.: 2308470) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: Tamil , English , Urdu , Marathi , हिन्दी , Assamese , Gujarati