ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಾದ್ಯಂತ 17 ಜಿಲ್ಲೆಗಳನ್ನು ಒಳಗೊಂಡಿರುವ, ಭಾರತೀಯ ರೈಲ್ವೆಯ ಪ್ರಸ್ತುತ ಜಾಲವನ್ನು ಸುಮಾರು 540 ಕಿ.ಮೀ. ಹೆಚ್ಚಿಸುವ ಐದು ಮಲ್ಟಿಟ್ರ್ಯಾಕಿಂಗ್ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ
ಯೋಜನೆಗಳ ಒಟ್ಟು ಅಂದಾಜು ವೆಚ್ಚ ರೂ. 10,021 ಕೋಟಿ ಹಾಗೂ ಇವುಗಳನ್ನು 2029-30 ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ
ಪ್ರಕಟಣಾ ದಿನಾಂಕ:
09 SEP 2026 3:33PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ರೈಲ್ವೆ ಸಚಿವಾಲಯದ ಒಟ್ಟು ಸುಮಾರು ರೂ. 10,021 ಕೋಟಿ ವೆಚ್ಚದ ಐದು ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳು ಹೀಗಿವೆ:
ಎ. ಅರಕ್ಕೋಣಂ - ರೇಣಿಗುಂಟ 3ನೇ ಮತ್ತು 4ನೇ ಮಾರ್ಗ – 77 ಕಿ.ಮೀ.
ಬಿ. ವೈಟ್ಫೀಲ್ಡ್ - ಬಂಗಾರಪೇಟೆ 3ನೇ ಮತ್ತು 4ನೇ ಮಾರ್ಗ – 47 ಕಿ.ಮೀ.
ಸಿ. ಹೊಸೂರು - ಓಮಲೂರು ದ್ವಿಪಥ – 147 ಕಿ.ಮೀ.
ಡಿ. ಸೇಲಂ - ಕರೂರು - ದಿಂಡಿಗಲ್ ದ್ವಿಪಥ – 159 ಕಿ.ಮೀ.
ಇ. ಸಿಕಂದರಾಬಾದ್ (ಘಾಟ್ಕೇಸರ್) - ಕಾಜಿಪೇಟ ಮಲ್ಟಿಟ್ರ್ಯಾಕಿಂಗ್ – 110 ಕಿ.ಮೀ.
ಹೆಚ್ಚಿದ ಮಾರ್ಗಗಳ ಸಾಮರ್ಥ್ಯವು ರೈಲುಗಳ ಓಡಾಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಇದರ ಪರಿಣಾಮವಾಗಿ ಭಾರತೀಯ ರೈಲ್ವೆಗೆ ಸುಧಾರಿತ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಉಂಟಾಗುತ್ತದೆ. ಈ ಮಲ್ಟಿಟ್ರ್ಯಾಕಿಂಗ್ ಯೋಜನೆಗಳು ಕಾರ್ಯಾಚರಣೆಯನ್ನು ಸುಗಮಗೊಳಿಸಲು ಮತ್ತು ದಟ್ಟಣೆಯನ್ನು ಕಡಿಮೆ ಮಾಡಲು ಸಜ್ಜಾಗಿವೆ. ಈ ಯೋಜನೆಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ನವ ಭಾರತ'ದ ದೃಷ್ಟಿಕೋನಕ್ಕೆ ಅನುಗುಣವಾಗಿದ್ದು, ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಯ ಮೂಲಕ ಜನರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ ಅವರನ್ನು "ಆತ್ಮನಿರ್ಭರ"ರನ್ನಾಗಿ ಮಾಡುತ್ತದೆ.
ಸಂಯೋಜಿತ ಯೋಜನೆ ಮತ್ತು ಪಾಲುದಾರರ ಸಮಾಲೋಚನೆಗಳ ಮೂಲಕ ಬಹು-ಮಾದರಿ ಸಂಪರ್ಕ ಮತ್ತು ಸಾಗಾಣಿಕೆಯ ದಕ್ಷತೆಯನ್ನು ಹೆಚ್ಚಿಸುವುದರ ಮೇಲೆ ಗಮನ ಹರಿಸಿ, ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಈ ಯೋಜನೆಗಳನ್ನು ಯೋಜಿಸಲಾಗಿದೆ. ಈ ಯೋಜನೆಗಳು ಜನರು, ಸರಕುಗಳು ಮತ್ತು ಸೇವೆಗಳ ಸಂಚಾರಕ್ಕೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತವೆ.
ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಾದ್ಯಂತ 17 ಜಿಲ್ಲೆಗಳನ್ನು ಒಳಗೊಂಡಿರುವ ಈ ಐದು ಯೋಜನೆಗಳು ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವನ್ನು ಸುಮಾರು 540 ಕಿ.ಮೀ.ಗಳಷ್ಟು ಹೆಚ್ಚಿಸುತ್ತವೆ. ಅನುಮೋದಿತ ಮಲ್ಟಿಟ್ರ್ಯಾಕಿಂಗ್ ಯೋಜನೆಗಳು ಸುಮಾರು 52 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸುಮಾರು 2,121 ಹಳ್ಳಿಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತವೆ.
ಅನುಮೋದಿತ ಸಾಮರ್ಥ್ಯ ವರ್ಧನೆಯು ದೇಶದಾದ್ಯಂತ ಇರುವ ತಿರುಪತಿ, ಸುಬ್ರಹ್ಮಣ್ಯ ಸ್ವಾಮಿ ದೇವಾಲಯ (ತಿರುತ್ತಣಿ), ಶ್ರೀ ಪದ್ಮಾವತಿ ಅಮ್ಮಾವಾರಿ ದೇವಾಲಯ (ತಿರುಚನೂರು), ಕೋಟಿಲಿಂಗೇಶ್ವರ ದೇವಾಲಯ, ಶ್ರೀ ಸೀತಿ ಬೈರವೇಶ್ವರ ಸ್ವಾಮಿ ದೇವಾಲಯ, ಬಂಗಾರು ತಿರುಪತಿ, ಕೋಲಾರ ಚಿನ್ನದ ಗಣಿ, ಹೊಗೇನಕಲ್ ಜಲಪಾತ, ಹೊಸೂರು ಕೋಟೆ, ಮೆಟ್ಟೂರು ಅಣೆಕಟ್ಟು, ಕೆೊಡೈಕೆನಾಲ್ ಬೆಟ್ಟಗಳು, ಸತ್ಯಮಂಗಲಂ ವನ್ಯಜೀವಿ ಅಭಯಾರಣ್ಯ, ನಾಮಕ್ಕಲ್ ಆಂಜನೇಯ ದೇವಾಲಯ, ನಾಮಕ್ಕಲ್ ಕೋಟೆ, ಕಲ್ಯಾಣ ಪಶುಪತೀಶ್ವರ ದೇವಾಲಯ, ಯಾದಗಿರಿಗುಟ್ಟ ದೇವಾಲಯ, ಭೋಂಗೀರ್ ಕೋಟೆ, ಸುರೇಂದ್ರಪುರಿ, ಸ್ವರ್ಣಗಿರಿ ದೇವಸ್ಥಾನ ಮುಂತಾದ ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವನ್ನು ಸುಧಾರಿಸುತ್ತದೆ.
ಕಲ್ಲಿದ್ದಲು, ಸಿಮೆಂಟ್, ಕಬ್ಬಿನ ಮತ್ತು ಉಕ್ಕು, ಕಂಟೇನರ್, ಆಟೋಮೊಬೈಲ್, ಆಹಾರ ಧಾನ್ಯಗಳು, ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರಗಳು ಮುಂತಾದ ಸರಕುಗಳ ಸಾಗಣೆಗೆ ಈ ಯೋಜನೆಗಳು ಪ್ರಮುಖ ಮಾರ್ಗಗಳಾಗಿವೆ. ಸಾಮರ್ಥ್ಯ ಹೆಚ್ಚಳದ ಕಾಮಗಾರಿಗಳು ವರ್ಷಕ್ಕೆ 47 ದಶಲಕ್ಷ ಟನ್ ಗಳಷ್ಟು (ಎಂಟಿಪಿಎ) ಹೆಚ್ಚುವರಿ ಸರಕು ಸಾಗಣೆಗೆ ಕಾರಣವಾಗುತ್ತವೆ. ರೈಲ್ವೆಯು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷತೆಯ ಸಾರಿಗೆಯಾಗಿದ್ದು, ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ದೇಶದ ಸಾಗಾಣಿಕೆ ವೆಚ್ಚವನ್ನು ಕಡಿಮೆ ಮಾಡಲು, ತೈಲ ಆಮದನ್ನು ಕಡಿಮೆ ಮಾಡಲು (~8 ಕೋಟಿ ಲೀಟರ್ಗಳು) ಮತ್ತು ಇಂಗಾಲ ಹೊರಸೂಸುವಿಕೆಯನ್ನು (~42 ಕೋಟಿ ಕೆಜಿ) ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಸುಮಾರು 2 ಕೋಟಿ ಗಿಡಗಳನ್ನು ನೆಡುವುದಕ್ಕೆ ಸಮಾನವಾಗಿದೆ.
*****
(ಪ್ರಕಟಣೆ ಐ.ಡಿ.: 2308286)
ವಿಸಿಟರ್ ಕೌಂಟರ್ : 72
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam