ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಐಐಎಸ್ (ಭಾರತೀಯ ವಾರ್ತಾ ಸೇವೆ) ಅಧಿಕಾರಿಗಳ ಪಾತ್ರವು ಸಂವಹನವನ್ನು ಮೀರಿದೆ: ಅವರು ಆಡಳಿತ ಮತ್ತು ನಾಗರಿಕರ ಆಕಾಂಕ್ಷೆಗಳ ನಡುವಿನ ಪ್ರಮುಖ ಕೊಂಡಿಯಾಗಿದ್ದಾರೆ, ನಿಖರತೆ, ವಿಶ್ವಾಸಾರ್ಹತೆ ಮತ್ತು ಸಹಾನುಭೂತಿಯ ಮೂಲಕ ವಿಶ್ವಾಸವನ್ನು ನಿರ್ಮಿಸುತ್ತಾರೆ: ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ


ಐಐಎಂಸಿ ಡೀಮ್ಡ್ ವಿಶ್ವವಿದ್ಯಾಲಯವಾಗಿ, ಐಐಎಸ್ ಅಧಿಕಾರಿ ಪ್ರಶಿಕ್ಷಣಾರ್ಥಿಗಳಿಗೆ ಮೊಟ್ಟಮೊದಲ ಬಾರಿಗೆ ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದೆ

ಸಂವಹನವೆಂದರೆ ಕೇವಲ ಮಾಹಿತಿಯನ್ನು ರವಾನಿಸುವುದಲ್ಲ, ಬದಲಾಗಿ ತಿಳುವಳಿಕೆಯನ್ನು ಮೂಡಿಸುವುದಾಗಿದೆ: ಐಐಎಂಸಿ ಉಪಕುಲಪತಿ

ಪ್ರಕಟಣಾ ದಿನಾಂಕ: 01 SEP 2026 3:29PM by PIB Bengaluru

ಭಾರತೀಯ ಸಮೂಹ ಮಾಧ್ಯಮ ಸಂವಹನ ಸಂಸ್ಥೆ (ಐಐಎಂಸಿ)ಯು ಇಂದು ಭಾರತೀಯ ವಾರ್ತಾ ಸೇವೆಯ (ಐಐಎಸ್) 2009, 2023 ಮತ್ತು 2024ನೇ ಬ್ಯಾಚ್‌ ಗಳ ಗ್ರೂಪ್ ‘ಎ’ ಅಧಿಕಾರಿ ಪ್ರಶಿಕ್ಷಣಾರ್ಥಿಗಳ ಸಮಾರೋಪ ಸಮಾರಂಭ ಮತ್ತು ಘಟಿಕೋತ್ಸವವನ್ನು ಆಯೋಜಿಸಿತು.

ಈ ಸಮಾರಂಭವು ಐಐಎಂಸಿ ಮತ್ತು ಭಾರತೀಯ ವಾರ್ತಾ ಸೇವೆಗೆ ಒಂದು ಐತಿಹಾಸಿಕ ಮೈಲಿಗಲ್ಲಾಗಿದ್ದು, ಡೀಮ್ಡ್ ವಿಶ್ವವಿದ್ಯಾಲಯವಾದ ನಂತರ ಐಐಎಂಸಿ ಮೊದಲ ಬಾರಿಗೆ ಐಐಎಸ್ ಅಧಿಕಾರಿ ಪ್ರಶಿಕ್ಷಣಾರ್ಥಿಗಳಿಗೆ ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಿದೆ.

ಅಧಿಕಾರಿ ಪ್ರಶಿಕ್ಷಣಾರ್ಥಿಗಳಿಗೆ ನಿಗದಿತ ಶೈಕ್ಷಣಿಕ ಮತ್ತು ವೃತ್ತಿಪರ ಅಗತ್ಯತೆಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ 'ಸಾರ್ವಜನಿಕ ಸಂವಹನ ಮತ್ತು ಆಡಳಿತ' ವಿಷಯದಲ್ಲಿ ಎಂ.ಎ. ಪದವಿಯನ್ನು ನೀಡಲಾಯಿತು. ಈ ಎಂ.ಎ. ಪರಿಚಯವು ಐಐಎಸ್ ವೃತ್ತಿಪರ ತರಬೇತಿಯ ಶೈಕ್ಷಣಿಕ ಅಂಶವನ್ನು ಮತ್ತಷ್ಟು ಬಲಪಡಿಸುವಲ್ಲಿ ಮತ್ತು ಸಾರ್ವಜನಿಕ ಸಂವಹನ, ಮಾಧ್ಯಮ ಹಾಗೂ ಆಡಳಿತದ ಅಧ್ಯಯನವನ್ನು ಸಂಯೋಜಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರು, ಸಾರ್ವಜನಿಕ ಸಂವಹನವು ಆಡಳಿತದ ಅವಿಭಾಜ್ಯ ಅಂಗವಾಗಿದ್ದು, ಬದಲಾಗುತ್ತಿರುವ ತಂತ್ರಜ್ಞಾನಗಳು ಮತ್ತು ವೇದಿಕೆಗಳಿಗೆ ಅನುಗುಣವಾಗಿ ಅದು ವಿಕಸನಗೊಳ್ಳಬೇಕು ಎಂದು ಹೇಳಿದರು. ಕೃತಕ ಬುದ್ಧಿಮತ್ತೆಯು ಮಹತ್ವದ ಬದಲಾವಣೆ ತರುವ ಶಕ್ತಿಯಾಗಿ ಹೊರಹೊಮ್ಮುತ್ತಿದ್ದು, ತಪ್ಪು ಮಾಹಿತಿ, ಡೀಪ್‌ ಫೇಕ್‌ ಮತ್ತು ಕೃತಕವಾಗಿ ಸೃಜಿಸಲಾದ ವಿಷಯಗಳು ಹೊಸ ಸವಾಲುಗಳನ್ನು ಒಡ್ಡುತ್ತಿರುವ ಈ ಸಂದರ್ಭದಲ್ಲಿ ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಅಧಿಕಾರಿಗಳು ನಿರಂತರವಾಗಿ ಅರಿವು ಹೊಂದಿರಬೇಕು ಎಂದು ಅವರು ತಿಳಿಸಿದರು.

ಸಂವಹನವು ಎರಡೂ ಕಡೆಯಿಂದ ನಡೆಯುವ ಪ್ರಕ್ರಿಯೆಯಾಗಿರಬೇಕು; ನಾಗರಿಕರಿಂದ ದೊರೆಯುವ ಪ್ರತಿಕ್ರಿಯೆಗಳು ನೀತಿಗಳು ಮತ್ತು ಅವುಗಳ ಅನುಷ್ಠಾನವನ್ನು ಸುಧಾರಿಸಲು ನೆರವಾಗಬೇಕು. ಎಂದು ಅವರು ಒತ್ತಿಹೇಳಿದರು. ವೇಗವು ಮುಖ್ಯವಾದರೂ, ನಿಖರತೆ ಮತ್ತು ವಿಶ್ವಾಸಾರ್ಹತೆಯಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ, ಏಕೆಂದರೆ ಪ್ರತಿಯೊಂದು ಸಂವಹನವು ಸಂಸ್ಥೆಯ ಅಧಿಕೃತತೆಯನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು.

ಅಧಿಕಾರಿಗಳು ನಿರಂತರವಾಗಿ ತಮ್ಮ ಕೌಶಲ್ಯಗಳನ್ನು ಉನ್ನತೀಕರಿಸಿಕೊಳ್ಳಬೇಕು, ಕ್ಷೇತ್ರದೊಂದಿಗೆ ಸಂಪರ್ಕದಲ್ಲಿರಬೇಕು ಹಾಗೂ ಸಂವಹನವನ್ನು ಮೀರಿದ ಜವಾಬ್ದಾರಿಗಳನ್ನು ವಹಿಸಿದಾಗ ಆಡಳಿತದ ಇತರ ಆಯಾಮಗಳನ್ನು ಅರ್ಥಮಾಡಿಕೊಂಡು ನಿರ್ವಹಿಸಲು ಸಿದ್ಧರಾಗಿರಬೇಕು ಎಂದು ಅವರು ಹೇಳಿದರು. ಎಲ್ಲಕ್ಕಿಂತ ಮುಖ್ಯವಾಗಿ, ನಾಗರಿಕರು ಕೇಂದ್ರಬಿಂದುವಾಗಿರಬೇಕು. ವಿಶೇಷವಾಗಿ ಅತ್ಯಂತ ಬಡವರೂ ಸೇರಿದಂತೆ ಜನರಿಗೆ ತಮ್ಮ ಕೆಲಸವು ನೆರವಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಸದಾ ಪ್ರಶ್ನಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಹಾಗಿಲ್ಲದಿದ್ದರೆ, ಅವರು ತಮ್ಮ ಕಾರ್ಯವಿಧಾನವನ್ನು ಮರುಪರಿಶೀಲಿಸಿ, ಮರುಯೋಜನೆ ರೂಪಿಸಬೇಕು. ಜನರ ಸಮಸ್ಯೆಗಳನ್ನು ಸದಾ ಸಹಾನುಭೂತಿಯಿಂದ ಪರಿಗಣಿಸಿ, ಅವರಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಐಐಎಂಸಿ ಕುಲಪತಿ ಡಾ. ಪ್ರಜ್ಞಾ ಪಾಲಿವಾಲ್ ಗೌರ್ ಅವರು ಮಾತನಾಡಿ, ಈ ಅಧಿಕಾರಿ ಪ್ರಶಿಕ್ಷಣಾರ್ಥಿಗಳು ಈ ಸ್ನಾತಕೋತ್ತರ ಪದವಿಯ ಮೊದಲ ಫಲಾನುಭವಿಗಳಾಗಿದ್ದು, ಇದು ಐಐಎಂಸಿಯ ಶೈಕ್ಷಣಿಕ ಪಾತ್ರ ಬಲಗೊಳ್ಳುತ್ತಿರುವುದನ್ನು ಹಾಗೂ ಸಂವಹನ ಕ್ಷೇತ್ರದಲ್ಲಿನ ವೃತ್ತಿಪರ ತರಬೇತಿಯೊಂದಿಗೆ ಅದು ಹೊಂದಿರುವ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಸಂವಹನವೆಂದರೆ ಕೇವಲ ಮಾಹಿತಿಯನ್ನು ರವಾನಿಸುವುದಲ್ಲ, ಬದಲಾಗಿ ತಿಳುವಳಿಕೆಯನ್ನು ಮೂಡಿಸುವುದಾಗಿದೆ, ಮತ್ತು ಅಧಿಕಾರಿ ಪ್ರಶಿಕ್ಷಣಾರ್ಥಿಗಳು ಸ್ಪಷ್ಟತೆ, ವಸ್ತುನಿಷ್ಠತೆ ಮತ್ತು ಸೂಕ್ಷ್ಮತೆಯೊಂದಿಗೆ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂದು ಅವರು ತಿಳಿಸಿದರು. ನಿರಂತರವಾಗಿ ವಿಕಸನಗೊಳ್ಳುತ್ತಿರುವ ಕ್ಷೇತ್ರದಲ್ಲಿ ನಿರಂತರ ಕಲಿಕೆಯ ಪ್ರಾಮುಖ್ಯತೆಯನ್ನು ಈ ಎಂ.ಎ. ಪದವಿಯು ನೆನಪಿಸುತ್ತದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಪ್ರಭಾತ್; ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಕೆ. ಕೆ. ನಿರಾಲಾ; ತರಬೇತಿ ಮಹಾನಿರ್ದೇಶಕರಾದ ಶ್ರೀ ಎಲ್. ಮಧು ನಾಗ್; ಹಿರಿಯ ಅಧಿಕಾರಿಗಳು, ಬೋಧಕ ಸಿಬ್ಬಂದಿ ಹಾಗೂ ಅಧಿಕಾರಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

 

*****


(ಪ್ರಕಟಣೆ ಐ.ಡಿ.: 2305516) ವಿಸಿಟರ್ ಕೌಂಟರ್ : 32
ಪ್ರಕಟಣೆಯನ್ನು ಇದರಲ್ಲಿ ಓದಿ: Gujarati , English , Urdu , हिन्दी , Assamese , Bengali , Bengali-TR , Odia , Tamil , Telugu , Malayalam