ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉಜ್ಬೇಕಿಸ್ತಾನ್ ಮತ್ತು ಕಿರ್ಗಿಜ್ ಗಣರಾಜ್ಯಕ್ಕೆ ಭೇಟಿ (29 ಆಗಸ್ಟ್-1 ಸೆಪ್ಟೆಂಬರ್ 2026)
ಪ್ರಕಟಣಾ ದಿನಾಂಕ:
28 AUG 2026 8:01PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 29-30 ರವರೆಗೆ ದ್ವಿಪಕ್ಷೀಯ ಭೇಟಿಗಾಗಿ ಉಜ್ಬೇಕಿಸ್ತಾನ್ ಮತ್ತು ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರವರೆಗೆ ನಡೆಯಲಿರುವ 26ನೇ ಶಾಂಘ್ಯ ಸಹಕಾರ ಸಂಘ (ಎಸ್ ಸಿ ಒ) ಶೃಂಗಸಭೆಗಾಗಿ ಕಿರ್ಗಿಜ್ ಗಣರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಉಜ್ಬೇಕಿಸ್ತಾನ್ ಅಧ್ಯಕ್ಷ ಘನತೆವೆತ್ತ ಶ್ರೀ ಶವ್ಕತ್ ಮಿರ್ಜಿಯೋಯೆವ್ ಅವರ ಆಹ್ವಾನದ ಮೇರೆಗೆ, ಪ್ರಧಾನ ಮಂತ್ರಿಗಳು 2026ರ ಆಗಸ್ಟ್ 29-30 ರಂದು ತಾಷ್ಕೆಂಟ್‌ಗೆ ರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಇದು ಉಜ್ಬೇಕಿಸ್ತಾನ್‌ಗೆ ಪ್ರಧಾನಮಂತ್ರಿಯವರ ನಾಲ್ಕನೇ ಭೇಟಿಯಾಗಲಿದೆ. ಈ ಭೇಟಿಯ ಸಮಯದಲ್ಲಿ ಅವರು ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಅಧ್ಯಕ್ಷ ಮಿರ್ಜಿಯೋಯೆವ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ. ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ, ಡಿಜಿಟಲ್ ಸಂಪರ್ಕ, ಇಂಧನ, ಶಿಕ್ಷಣ ಮತ್ತು ಜನರ ನಡುವೆ ಸಂಪರ್ಕ ವಲಯಗಳಲ್ಲಿ ಸಹಕಾರ ಸಂಬಂಧಗಳನ್ನು ಉಭಯ ನಾಯಕರು ಪರಾಮರ್ಶಿಸಲಿದ್ದಾರೆ ಮತ್ತು ಮುಂದಿನ ಹಾದಿಗೆ ಕಾರ್ಯಸೂಚಿಯನ್ನು ನಿಗದಿಪಡಿಸಲಿದ್ದಾರೆ. ವಿಕಸಿತ ಭಾರತ 2047 ಮತ್ತು ಉಜ್ಬೇಕಿಸ್ತಾನ್-2030 ರ ಹಂಚಿಕೆಯ ಅಭಿವೃದ್ಧಿ ದೂರದೃಷ್ಟಿಯನ್ನು ಮುನ್ನಡೆಸುವ ಬಗ್ಗೆ ಅವರು ತಮ್ಮ ಮುನ್ನೋಟವನ್ನು ಹಂಚಿಕೊಳ್ಳಲಿದ್ದಾರೆ. ಪ್ರಧಾನ ಮಂತ್ರಿ ಅವರು ತಾಷ್ಕೆಂಟ್‌ನಲ್ಲಿರುವ ಶಾಸ್ತ್ರಿ ಸ್ಮಾರಕ ಮತ್ತು ತಾಷ್ಕೆಂಟ್ ರಾಜ್ಯ ಓರಿಯೆಂಟಲ್ ಅಧ್ಯಯನ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಕೇಂದ್ರಕ್ಕೂ ಭೇಟಿ ನೀಡುವ ನಿರೀಕ್ಷೆಯಿದೆ.
ಕಿರ್ಗಿಜ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಸದಿರ್ ಝಪರೋವ್ ಅವರ ಆಹ್ವಾನದ ಮೇರೆಗೆ, ಪ್ರಧಾನ ಮಂತ್ರಿಯವರು 2026ರ ಆಗಸ್ಟ್ 31 - ಸೆಪ್ಟೆಂಬರ್ 1 ರಂದು 26ನೇ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ತಾಷ್ಕೆಂಟ್‌ನಿಂದ ಬಿಷ್ಕೆಕ್‌ಗೆ ಪ್ರಯಾಣಿಸಲಿದ್ದಾರೆ. 2017 ರಿಂದ ಭಾರತ ಕಾಯಂ ಸದಸ್ಯರಾಗಿರುವ ಶಾಂಘೈ ಸಹಕಾರ ಸಂಸ್ಥೆಯ 25ನೇ ವಾರ್ಷಿಕೋತ್ಸವದ ಅಂಗವಾಗಿ ಈ ಶೃಂಗಸಭೆಯನ್ನು ಆಯೋಜಿಸಲಾಗಿದೆ. ಪ್ರಧಾನಮಂತ್ರಿ ಅವರು ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಅಲ್ಲಿ ಅವರು ಭಾರತದ ಭದ್ರತೆ, ಸಂಪರ್ಕ ಮತ್ತು ಅವಕಾಶಗಳ ಆದ್ಯತೆಗಳನ್ನು ವೇದಿಕೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಿದ್ದಾರೆ. ಶೃಂಗಸಭೆಯ ಹೊರತಾಗಿ ಪ್ರಧಾನ ಮಂತ್ರಿಯವರು ಎಸ್‌ಸಿಒ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಮಧ್ಯ ಏಷ್ಯಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಆಚರಣೆಯಾದ 6ನೇ ವಿಶ್ವ ಅಲೆಮಾರಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿಯೂ ಅವರು ಭಾಗವಹಿಸಲಿದ್ದಾರೆ.
*****
(ಪ್ರಕಟಣೆ ಐ.ಡಿ.: 2304869)
ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam