ಕೃಷಿ ಸಚಿವಾಲಯ
azadi ka amrit mahotsav

 ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ 36 ನೇ ವಾರ್ಷಿಕ ಸಮ್ಮೇಳನ ನವದೆಹಲಿಯಲ್ಲಿ ಆರಂಭ


ಕೃಷಿ ಶಿಕ್ಷಣವನ್ನು ನೀಡಲಾಗುವ ಪದವಿಗಳ ಸಂಖ್ಯೆಯಿಂದಲ್ಲ, ಬದಲಾಗಿ ರೈತರ ಮೇಲೆ ಬೀರುವ ಪರಿಣಾಮದಿಂದ ಪ್ರಭಾವದಿಂದ ಅಳೆಯಬೇಕು: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಸಂಶೋಧನೆಯು ಪ್ರಯೋಗಾಲಯಗಳಿಂದ ಹೊಲಗಳಿಗೆ ತಲುಪಬೇಕು ಮತ್ತು ರೈತರಿಗೆ ಪರಿಹಾರಗಳನ್ನು ಒದಗಿಸಬೇಕು: ಶ್ರೀ ಚೌಹಾಣ್

ಯುವಜನರನ್ನು ಕೇವಲ ಉದ್ಯೋಗಗಳಿಗಾಗಿ ಮಾತ್ರವಲ್ಲದೆ, ಉದ್ಯಮಿಗಳು, ನಾವೀನ್ಯಕಾರರು ಮತ್ತು ಉದ್ಯೋಗ ಸೃಷ್ಟಿಕರ್ತರಾಗುವಂತೆ ರೂಪಿಸಬೇಕು: ಕೇಂದ್ರ ಕೃಷಿ ಸಚಿವರು

ಪ್ರತಿಯೊಂದು ಸಮ್ಮೇಳನವೂ ಸ್ಪಷ್ಟ ನಿರ್ಣಯಗಳು, ಕ್ರಿಯಾ ಯೋಜನೆಗಳು ಮತ್ತು ನಿಖರ ಫಲಿತಾಂಶಗಳನ್ನು ನೀಡಬೇಕು: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಪ್ರಕಟಣಾ ದಿನಾಂಕ: 25 AUG 2026 6:52PM by PIB Bengaluru

ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ 36 ನೇ ವಾರ್ಷಿಕ ಸಮ್ಮೇಳನವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ನವದೆಹಲಿಯಲ್ಲಿ ಉದ್ಘಾಟಿಸಿದರು. ವಿಕಸಿತ ಭಾರತ@2047ಕ್ಕಾಗಿ ಕೃಷಿ ಉನ್ನತ ಶಿಕ್ಷಣವನ್ನು ಮರುರೂಪಿಸುವುದು ಎಂಬ ವಿಷಯದಡಿ ಆಯೋಜಿಸಲಾಗಿರುವ ಈ ಎರಡು ದಿನಗಳ ಸಮ್ಮೇಳನವು (25–26 ಆಗಸ್ಟ್ 2026) ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ (ಡಿ ಎ ಆರ್‌ ಇ) ಹಾಗೂ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)ಯ ಹಿರಿಯ ಅಧಿಕಾರಿಗಳು, ಉಪ ಮಹಾನಿರ್ದೇಶಕರು, ಹೆಚ್ಚುವರಿ ಮಹಾನಿರ್ದೇಶಕರು ಮತ್ತು ಹಿರಿಯ ವಿಜ್ಞಾನಿಗಳನ್ನು ಒಂದೆಡೆ ಸೇರಿಸಿದ್ದು, ಭವಿಷ್ಯದ ಅಗತ್ಯಗಳಿಗೆ ಸಿದ್ಧವಾಗಿರುವ ಕೃಷಿ ಶಿಕ್ಷಣ ವ್ಯವಸ್ಥೆಗಾಗಿ ಸುಧಾರಣೆಗಳು ಮತ್ತು ಆದ್ಯತೆಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ.

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ಭಗೀರಥ್ ಚೌಧರಿ ಮತ್ತು ಶ್ರೀ ರಾಮನಾಥ್ ಠಾಕೂರ್ ಹಾಗೂ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ ಮತ್ತು ಐಸಿಎಆರ್ ಮಹಾನಿರ್ದೇಶಕ ಡಾ. ಎಂ. ಎಲ್. ಜಾಟ್ ಅವರು ಹಿರಿಯ ಅಧಿಕಾರಿಗಳು ಮತ್ತು ಗಣ್ಯರೊಂದಿಗೆ ಭಾಗವಹಿಸಿದ್ದರು.

ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು, ಕೃಷಿ ಶಿಕ್ಷಣದ ಯಶಸ್ಸನ್ನು ನೀಡಲಾಗುವ ಪದವಿಗಳ ಸಂಖ್ಯೆಯಿಂದ ಅಳೆಯಬಾರದು. ಬದಲಾಗಿ, ಸೃಷ್ಟಿಯಾಗುವ ಜ್ಞಾನ ಮತ್ತು ಕೌಶಲ್ಯಗಳು ಹಾಗೂ ರೈತರ ಜೀವನದಲ್ಲಿ ಉಂಟಾಗುವ ಸ್ಪಷ್ಟ ಬದಲಾವಣೆಯ ಆಧಾರದ ಮೇಲೆ ಅಳೆಯಬೇಕು ಎಂದು ಹೇಳಿದರು. ಕೃಷಿ ಶಿಕ್ಷಣವನ್ನು ಮರುರೂಪಿಸಿ, ಅದನ್ನು ಪ್ರಾಯೋಗಿಕ, ತಂತ್ರಜ್ಞಾನ ಆಧಾರಿತ ಹಾಗೂ ರೈತರ ಅಗತ್ಯಗಳಿಗೆ ನಿಕಟವಾಗಿ ಹೊಂದಿಕೊಳ್ಳುವಂತೆ ಮಾಡಬೇಕೆಂದು ಅವರು ಕರೆ ನೀಡಿದರು. ಕೃಷಿ ವಿಶ್ವವಿದ್ಯಾಲಯಗಳು, ಐಸಿಎಆರ್, ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ), ರೈತ ಉತ್ಪಾದಕ ಸಂಘಟನೆಗಳು (ಎಫ್‌ ಪಿ ಒ), ಕೈಗಾರಿಕೆಗಳು ಮತ್ತು ರೈತರ ನಡುವೆ ಬಲವಾದ ಸಹಯೋಗದ ಮೂಲಕ ಸಂಶೋಧನೆಯು ಪ್ರಯೋಗಾಲಯಗಳಿಂದ ಹೊಲಗಳಿಗೆ ತಲುಪುವಂತಾಗಬೇಕು ಎಂದು ಅವರು ಒತ್ತಿ ಹೇಳಿದರು. ವಿಶ್ವವಿದ್ಯಾಲಯಗಳು ಸ್ಪಷ್ಟ ಗುರಿಗಳನ್ನು ನಿಗದಿಪಡಿಸಿ, ಕಾರ್ಯಗತಗೊಳಿಸಬಹುದಾದ ಮಾರ್ಗಸೂಚಿಗಳನ್ನು ರೂಪಿಸಿ, ಫಲಿತಾಂಶಗಳನ್ನು ಅಳೆಯಬೇಕು. ಇದರಿಂದ ಪ್ರತಿಯೊಂದು ಸಮ್ಮೇಳನವೂ ಸ್ಪಷ್ಟ ನಿರ್ಧಾರಗಳಿಗೆ ಕಾರಣವಾಗುವುದರ ಜೊತೆಗೆ ವಿಕಸಿತ ಭಾರತಕ್ಕಾಗಿ ಆಧುನಿಕ, ಸ್ಥಿತಿಸ್ಥಾಪಕ ಮತ್ತು ಸಮೃದ್ಧ ಕೃಷಿ ಕ್ಷೇತ್ರವನ್ನು ನಿರ್ಮಿಸಲು ಕೊಡುಗೆ ನೀಡುವಂತಾಗಬೇಕು ಎಂದು ಅವರು ಹೇಳಿದರು.

ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಶ್ರೀ ಭಗೀರಥ್ ಚೌಧರಿ ಅವರು, ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಬಲಿಷ್ಠ ಮತ್ತು ಸಮೃದ್ಧ ಕೃಷಿ ಕ್ಷೇತ್ರ ಹಾಗೂ ಸಬಲೀಕೃತ ರೈತರು ಅಗತ್ಯ ಎಂದು  ಹೇಳಿದರು. ಆಹಾರದ ಕೊರತೆಯಿಂದ ಸ್ವಾವಲಂಬನೆಯತ್ತ ಭಾರತದ ಪಯಣವು ರೈತರು, ವಿಜ್ಞಾನಿಗಳು, ಶಿಕ್ಷಕರು ಮತ್ತು ಸಂಸ್ಥೆಗಳ ಸಾಮೂಹಿಕ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ. ಮುಂದಿನ ಆದ್ಯತೆಯು ಕೃಷಿಯನ್ನು ತಂತ್ರಜ್ಞಾನ ಆಧಾರಿತ, ನವೀನ ಮತ್ತು ಭವಿಷ್ಯದ ಅಗತ್ಯಗಳಿಗೆ ಸಿದ್ಧವಾಗಿರುವ ಕ್ಷೇತ್ರವನ್ನಾಗಿ ರೂಪಿಸುವುದಾಗಿರಬೇಕು ಎಂದು ಅವರು ಹೇಳಿದರು. ಆಧುನಿಕ ತಂತ್ರಜ್ಞಾನಗಳು, ಸಂಶೋಧನೆ, ಉದ್ಯಮಶೀಲತೆ ಮತ್ತು ಕೃಷಿ ವ್ಯವಹಾರಗಳಲ್ಲಿ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಯುವಜನರನ್ನು ಕೃಷಿಯತ್ತ ಆಕರ್ಷಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ಕೃಷಿ ವಿಶ್ವವಿದ್ಯಾಲಯಗಳು ಶಿಕ್ಷಣ ಮತ್ತು ಸಂಶೋಧನೆಯನ್ನು ರೈತರ ಅಗತ್ಯಗಳಿಗೆ ಹೊಂದಿಕೊಳ್ಳುವಂತೆ ಮಾಡಬೇಕು ಎಂದು ಅವರು ಕರೆ ನೀಡಿದರು. ಕುಲಪತಿಗಳ ಸಮ್ಮೇಳನದ ಚರ್ಚೆಗಳು ಕೃಷಿ ಶಿಕ್ಷಣವನ್ನು ಬಲಪಡಿಸಿ, ನಾವೀನ್ಯತೆಗೆ ಉತ್ತೇಜನ ನೀಡಿ, ವಿಕಸಿತ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಸ್ಥಿತಿಸ್ಥಾಪಕ, ಸುಸ್ಥಿರ ಮತ್ತು ಸಮೃದ್ಧ ಕೃಷಿ ಕ್ಷೇತ್ರ ನಿರ್ಮಾಣಕ್ಕೆ ಕೊಡುಗೆ ನೀಡಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಅವರು, ಕೃಷಿಯನ್ನು ಬಲಪಡಿಸುವುದು ಮತ್ತು ರೈತರನ್ನು ಸಬಲೀಕರಣಗೊಳಿಸುವುದು ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವ ಮೂಲಭೂತ ಅಂಶಗಳಾಗಿವೆ ಎಂದು ಹೇಳಿದರು. ಕೃಷಿ ಶಿಕ್ಷಣವನ್ನು ಆಧುನೀಕರಿಸುವುದು, ನಾವೀನ್ಯತೆಗೆ ಉತ್ತೇಜನ ನೀಡುವುದು ಹಾಗೂ ಉದಯೋನ್ಮುಖ ಸವಾಲುಗಳನ್ನು ಎದುರಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಯುವಜನರಿಗೆ ಒದಗಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಸಂಶೋಧನೆ ಮತ್ತು ಶಿಕ್ಷಣವು ರೈತರ ಅಗತ್ಯಗಳೊಂದಿಗೆ ನಿಕಟವಾಗಿ ಸಂಪರ್ಕ ಹೊಂದಿರಬೇಕು ಮತ್ತು ಅವುಗಳನ್ನು ಕ್ಷೇತ್ರಮಟ್ಟದಲ್ಲಿ ಅನುಷ್ಠಾನಗೊಳಿಸಬಹುದಾದ ಪ್ರಾಯೋಗಿಕ ಪರಿಹಾರಗಳಾಗಿ ಪರಿವರ್ತಿಸಬೇಕು ಎಂದು ಅವರು ಹೇಳಿದರು. ಸುಸ್ಥಿರ ಮತ್ತು ತಂತ್ರಜ್ಞಾನ ಆಧಾರಿತ ಕೃಷಿಯ ಮೇಲೆ ಬಲವಾದ ಗಮನ ಹರಿಸುವುದರೊಂದಿಗೆ, ಕೃಷಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ನಾವೀನ್ಯತೆ, ಉದ್ಯಮಶೀಲತೆ ಹಾಗೂ ಶ್ರೇಷ್ಠತೆಯ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಅವರು ಕರೆ ನೀಡಿದರು. ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯಲ್ಲಿನ ಸಾಮೂಹಿಕ ಪ್ರಯತ್ನಗಳು ಕೃಷಿ ಪರಿವರ್ತನೆಯನ್ನು ವೇಗಗೊಳಿಸುವುದರ ಜೊತೆಗೆ ರೈತರ ಆದಾಯ ಮತ್ತು ಜೀವನೋಪಾಯವನ್ನು ಸುಧಾರಿಸಲು ನೆರವಾಗಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಡಿ ಎ ಆರ್‌ ಇ ಕಾರ್ಯದರ್ಶಿ ಹಾಗೂ ಐಸಿಎಆರ್ ಮಹಾನಿರ್ದೇಶಕ ಡಾ. ಎಂ. ಎಲ್. ಜಾಟ್ ಅವರು, ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಕೃಷಿ ಉನ್ನತ ಶಿಕ್ಷಣದಲ್ಲಿ ಮೂಲಭೂತ ಪರಿವರ್ತನೆಯ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಸಾಂಪ್ರದಾಯಿಕ ಮಾದರಿಗಳಿಂದ ಭವಿಷ್ಯದ ಅಗತ್ಯಗಳಿಗೆ ಸಿದ್ಧವಾಗಿರುವ, ಕೌಶಲ್ಯ ಆಧಾರಿತ ಮತ್ತು ನಾವೀನ್ಯತೆ ಚಾಲಿತ ವ್ಯವಸ್ಥೆಯಾಗಿ ಕೃಷಿ ಉನ್ನತ ಶಿಕ್ಷಣವನ್ನು ಪರಿವರ್ತಿಸಬೇಕಾಗಿದೆ ಎಂದು ಅವರು ಹೇಳಿದರು. ಕೈಗಾರಿಕೆ–ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವವನ್ನು ಬಲಪಡಿಸುವುದು, ಬೇಡಿಕೆ ಆಧಾರಿತ ಸಂಶೋಧನೆಗೆ ಉತ್ತೇಜನ ನೀಡುವುದು, ಬಲವಾದ ಮಾನ್ಯತೆ ವ್ಯವಸ್ಥೆಯನ್ನು ಖಚಿತಪಡಿಸುವುದು ಹಾಗೂ ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವಿಕೆಯನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ವೈಜ್ಞಾನಿಕ ಜ್ಞಾನವನ್ನು ಕ್ಷೇತ್ರಮಟ್ಟದ ಪರಿಹಾರಗಳು ಮತ್ತು ರೈತರಿಗೆ ದೊರೆಯುವ ಸ್ಪಷ್ಟ ಪ್ರಯೋಜನಗಳಾಗಿ ಪರಿವರ್ತಿಸಲು ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳ ಸುಗಮ ಸಮನ್ವಯ ಅತ್ಯಗತ್ಯ ಎಂದು ಅವರು ಹೇಳಿದರು. “ಭವಿಷ್ಯದ ಕೃಷಿ ಶಿಕ್ಷಣದ ಉದ್ದೇಶವು ಕೇವಲ ಪದವಿಗಳನ್ನು ನೀಡುವುದಕ್ಕೆ ಸೀಮಿತವಾಗದೆ, ರಾಷ್ಟ್ರೀಯ ಆದ್ಯತೆಗಳು ಮತ್ತು ಭಾರತೀಯ ಕೃಷಿಯ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯಪೂರ್ಣ, ನವೀನ ಹಾಗೂ ಜಾಗತಿಕವಾಗಿ ಸ್ಪರ್ಧಾತ್ಮಕ ಮಾನವ ಸಂಪನ್ಮೂಲವನ್ನು ರೂಪಿಸುವುದಾಗಿರಬೇಕು ಎಂದು ಅವರು ಹೇಳಿದರು.

ಸಮ್ಮೇಳನವನ್ನು 14 ಕಾರ್ಯಸೂಚಿ ವಿಷಯಗಳನ್ನು ಒಳಗೊಂಡ ಐದು ಅಧಿವೇಶನಗಳಾಗಿ ಆಯೋಜಿಸಲಾಗಿದ್ದು, ವಿದ್ಯಾರ್ಥಿ ಕೇಂದ್ರಿತ ಸುಧಾರಣೆಗಳು, ಉನ್ನತ ಶಿಕ್ಷಣ, ಬೋಧಕ ವರ್ಗದ ಅಭಿವೃದ್ಧಿ, ಸಂಸ್ಥೆಗಳ ಬಲವರ್ಧನೆ, ಗುಣಮಟ್ಟ ಸುಧಾರಣೆ, ಶೈಕ್ಷಣಿಕ ಸುಧಾರಣೆಗಳು, ಸಂಶೋಧನೆ, ನಾವೀನ್ಯತೆ ಮತ್ತು ಸಾಂಸ್ಥಿಕ ಶ್ರೇಷ್ಠತೆಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ವಿದ್ಯಾರ್ಥಿ ಕೇಂದ್ರಿತ ಸುಧಾರಣೆಗಳು ಮತ್ತು ಕೃಷಿ ಉನ್ನತ ಶಿಕ್ಷಣದ ಕುರಿತ ಚರ್ಚೆಯಲ್ಲಿ ಹಿಂದಿನ ಕುಲಪತಿಗಳ ಸಮ್ಮೇಳನದ ಕ್ರಮ ಕೈಗೊಂಡ ವರದಿ, ಪ್ರವೇಶ ವ್ಯವಸ್ಥೆಗಳು, ಸಂಶೋಧನಾ ಫೆಲೋಶಿಪ್‌ ಹಾಗೂ ರಾಜ್ಯ/ವರ್ಗವಾರು ಶೇ.40ರ ಸೀಮಿತ ಪ್ರಮಾಣದ ಸೀಟು ಹಂಚಿಕೆ ಕುರಿತು ಚರ್ಚಿಸಲಾಯಿತು.

ಐಸಿಎಆರ್-ಎಐಕ್ಯೂ ಕೌನ್ಸೆಲಿಂಗ್ ಮತ್ತು ಪರಿಶೀಲನೆಯನ್ನು ಸಕಾಲದಲ್ಲಿ ನಡೆಸುವುದು, ಪಶುವೈದ್ಯಕೀಯ ವಿಜ್ಞಾನಕ್ಕಾಗಿ ಪ್ರತ್ಯೇಕ ಪಿ ಎಚ್ ಡಿ ಕೌನ್ಸೆಲಿಂಗ್ ನಡೆಸುವುದು ಹಾಗೂ ಕೃಷಿ ಅರ್ಹತೆ ಹೊಂದಿರುವ ಮತ್ತು ಹಿಂದಿ ಮಾಧ್ಯಮದ ವಿದ್ಯಾರ್ಥಿಗಳಿಗೆ ಪದವಿ ಪ್ರವೇಶ ಅರ್ಹತೆ ಕುರಿತೂ ಚರ್ಚಿಸಲಾಯಿತು. ಕೃಷಿ ಶಿಕ್ಷಣವನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಹಾಗೂ ಎಲ್ಲರನ್ನೂ ಒಳಗೊಂಡಂತೆ ಮಾಡುವ ಉದ್ದೇಶದಿಂದ ಈ ಕ್ರಮಗಳನ್ನು ಚರ್ಚಿಸಲಾಯಿತು.

ಜೆ ಆರ್‌ ಎಫ್/‌ ಎಸ್‌ ಆರ್‌ ಎಫ್ ಸಂಶೋಧನೆಯನ್ನು ರಾಷ್ಟ್ರೀಯ ಆದ್ಯತೆಗಳಿಗೆ ಹೊಂದಾಣಿಕೆ ಮಾಡುವುದು, ಮಾನ್ಯತೆ ಮತ್ತು ಗುಣಮಟ್ಟದ ಭರವಸೆಯನ್ನು ಬಲಪಡಿಸುವುದು ಹಾಗೂ ಹಣಕಾಸು ನಿರ್ವಹಣೆ, ಹೊಣೆಗಾರಿಕೆ ಮತ್ತು ಕಾರ್ಯಕ್ಷಮತೆ ಆಧಾರಿತ ನಿಧಿ ಹಂಚಿಕೆಯನ್ನು ಸುಧಾರಿಸುವ ಕ್ರಮಗಳನ್ನೂ ಸಮ್ಮೇಳನದಲ್ಲಿ ಪರಿಶೀಲಿಸಲಾಯಿತು. ಕೈಗಾರಿಕೆ - ಶೈಕ್ಷಣಿಕ ಸಂಸ್ಥೆಗಳ ನಡುವಿನ ಬಲವಾದ ಸಂಪರ್ಕ, ಅಪ್ರೆಂಟಿಸ್‌ ಶಿಪ್ ಮತ್ತು ಇಂಟರ್ನ್‌ಶಿಪ್‌, ಪಠ್ಯಕ್ರಮ ಪರಿಷ್ಕರಣೆ ಹಾಗೂ ಟ್ವಿನ್ನಿಂಗ್ ಮತ್ತು ಜಂಟಿ ಪದವಿ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ವಿನಿಮಯಕ್ಕೆ ಉತ್ತೇಜನ ನೀಡುವ ಕುರಿತು ಒತ್ತು ನೀಡಲಾಯಿತು.

ಬೋಧಕ ವರ್ಗದ ಅಭಿವೃದ್ಧಿ ಮತ್ತು ಸಂಸ್ಥೆಗಳ ಬಲವರ್ಧನೆಯಡಿ ಕೃಷಿ ಹಾಗೂ ಸಂಬಂಧಿತ ವಿಜ್ಞಾನಗಳಲ್ಲಿನ ಪದವಿಗಳ ಸಮಾನತೆ, ತರಬೇತಿ ಅಗತ್ಯಗಳ ಗುರುತಿಸುವಿಕೆ, ತರಬೇತಿ ಘಟಕಗಳ ಅಭಿವೃದ್ಧಿ ಹಾಗೂ ತಜ್ಞರು/ವಿಷಯ ಪರಿಣಿತರ ಗುರುತಿಸುವಿಕೆ ಕುರಿತು ಭಾಗವಹಿಸಿದವರು ಚರ್ಚಿಸಿದರು. ಶೈಕ್ಷಣಿಕ ವ್ಯವಸ್ಥೆಗೆ ವೃತ್ತಿಪರ ಪರಿಣತಿ ಮತ್ತು ಪ್ರಾಯೋಗಿಕ ಜ್ಞಾನವನ್ನು ತರಲು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರಾಕ್ಟೀಸ್ ಪ್ರೊಫೆಸರ್ಗಳ ನೇಮಕಾತಿಯ ಪ್ರಸ್ತಾವನೆಯನ್ನೂ ಚರ್ಚಿಸಲಾಯಿತು.

ಸಾಕ್ಷ್ಯಾಧಾರಿತ ಯೋಜನೆ, ಮೇಲ್ವಿಚಾರಣೆ ಮತ್ತು ನಿರ್ಧಾರ ಕೈಗೊಳ್ಳುವಿಕೆಗೆ ಸಮಗ್ರ ಕೃಷಿ ಶಿಕ್ಷಣ ದತ್ತಾಂಶ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕುರಿತೂ ಸಮ್ಮೇಳನದಲ್ಲಿ ಚರ್ಚಿಸಲಾಯಿತು. ವಿದ್ಯಾರ್ಥಿಗಳನ್ನು ಗ್ರಾಮೀಣ ವಾಸ್ತವಾಂಶಗಳೊಂದಿಗೆ ಸಂಪರ್ಕಿಸುವ ಮತ್ತು ಗ್ರಾಮೀಣ ಪರಿವರ್ತನೆಗೆ ಬೆಂಬಲ ನೀಡುವ ಪ್ರಮುಖ ಮಾರ್ಗವಾಗಿ ಗ್ರಾಮೀಣ ಕೃಷಿ ಕೆಲಸದ ಅನುಭವವನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಲಾಯಿತು. ಮೇಲ್ವಿಚಾರಣೆ, ಮೌಲ್ಯಮಾಪನ, ಕಲಿಕೆ ಮತ್ತು ಪರಿಣಾಮದ ಅಂದಾಜು ಹಾಗೂ ಸಮಗ್ರ ವಿದ್ಯಾರ್ಥಿ ಅಭಿವೃದ್ಧಿಯನ್ನು ಉತ್ತೇಜಿಸಲು Agriunifest ಮತ್ತು Agrisports2026ನಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಹೆಚ್ಚಿನ ಭಾಗವಹಿಸುವಿಕೆಯ ಕುರಿತೂ ಚರ್ಚಿಸಲಾಯಿತು.

ಶೈಕ್ಷಣಿಕ ಸುಧಾರಣೆಗಳು, ಸಂಶೋಧನೆ, ನಾವೀನ್ಯತೆ ಮತ್ತು ಸಾಂಸ್ಥಿಕ ಶ್ರೇಷ್ಠತೆಗೆ ಸಂಬಂಧಿಸಿದ ಚರ್ಚೆಗಳಲ್ಲಿ ಭಾರತೀಯ ಕೃಷಿ ವಿಶ್ವವಿದ್ಯಾಲಯಗಳ ಸಂಘ (ಐಎಯುಎ)ದ ಸಾಮಾನ್ಯ ಕಾರ್ಯಸೂಚಿ ವಿಷಯಗಳು, ಯುಜಿಸಿ ಪಿ ಎಚ್ ಡಿ ನಿಯಮಾವಳಿ, 2016ರ ಏಕರೂಪ ಅನುಷ್ಠಾನ ಹಾಗೂ ಸಂಶೋಧನೆಯನ್ನು ಪ್ರಾಯೋಗಿಕ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳಾಗಿ ಪರಿವರ್ತಿಸುವುದನ್ನು ವೇಗಗೊಳಿಸಲು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಲ್ಲಿ ತಂತ್ರಜ್ಞಾನ ಸಿದ್ಧತಾ ಮಟ್ಟವನ್ನು ಉತ್ತೇಜಿಸುವ ಕುರಿತು ಚರ್ಚಿಸಲಾಯಿತು. ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗಾಗಿ ಎನ್‌ ಐ ಆರ್‌ ಎಫ್ ನ ರೇಟಿಂಗ್ ಮಾನದಂಡಗಳು ಹಾಗೂ ಪ್ರಾಕ್ಟೀಸ್ ಪ್ರೊಫೆಸರ್‌‌ ಗಳ ಮೂಲಕ ಪರಿಣತಿಯನ್ನು ಹಂಚಿಕೊಳ್ಳುವ ವ್ಯವಸ್ಥೆಗಳ ಕುರಿತೂ ಸಮ್ಮೇಳನದಲ್ಲಿ ಚರ್ಚಿಸಲಾಯಿತು.

ಶಿಕ್ಷಣ, ಸಂಶೋಧನೆ, ನಾವೀನ್ಯತೆ, ಕೈಗಾರಿಕೆ ಮತ್ತು ಗ್ರಾಮೀಣ ಸಂಪರ್ಕವನ್ನು ಸಮನ್ವಯಗೊಳಿಸುವ, ಕ್ರಿಯಾಶೀಲ, ತಂತ್ರಜ್ಞಾನ ಸಶಕ್ತ ಮತ್ತು ಫಲಿತಾಂಶ ಆಧಾರಿತ ವ್ಯವಸ್ಥೆಗಳಾಗಿ ಕೃಷಿ ವಿಶ್ವವಿದ್ಯಾಲಯಗಳು ರೂಪಾಂತರಗೊಳ್ಳಬೇಕೆಂಬ ಅಗತ್ಯವನ್ನು ಈ ಎಲ್ಲಾ ಚರ್ಚೆಗಳು ಹೇಳಿದವು. ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಸಂಸ್ಥೆಗಳನ್ನು ನಿರ್ಮಿಸಲು ಬಲವಾದ ಶೈಕ್ಷಣಿಕ ಸಹಭಾಗಿತ್ವ, ಗುಣಮಟ್ಟದ ಭರವಸೆ, ದತ್ತಾಂಶ ಆಧಾರಿತ ಆಡಳಿತ ಹಾಗೂ ರಾಷ್ಟ್ರೀಯ ಆದ್ಯತೆಗಳಿಗೆ ಹೊಂದಿಕೊಂಡ ಸಂಶೋಧನೆಗಳು ನಿರ್ಣಾಯಕ ಅಂಶಗಳೆಂದು ಗುರುತಿಸಲಾಯಿತು.

ಇದಕ್ಕೂ ಮುನ್ನ, ಐಸಿಎಆರ್ (ಕೃಷಿ ಶಿಕ್ಷಣ)  ಉಪ ಮಹಾನಿರ್ದೇಶಕ ಡಾ. ಯಶಪಾಲ್ ಮಲಿಕ್ ಅವರು ಸ್ವಾಗತ ಮತ್ತು ಸಮ್ಮೇಳನದ ಹಿನ್ನೆಲೆ ಕುರಿತ ಭಾಷಣ ಮಾಡಿದರು. ಉದ್ಘಾಟನಾ ಅಧಿವೇಶನದಲ್ಲಿ ಹಿಂದಿನ ಸಮ್ಮೇಳನದ ಕ್ರಮ ಕೈಗೊಂಡ ವರದಿಯ ಪ್ರಸ್ತುತಿ ಮತ್ತು ಚರ್ಚೆ ಹಾಗೂ ಹಿಂದಿನ ನಿರ್ಧಾರಗಳ ಅನುಷ್ಠಾನದ ಪ್ರಗತಿಯ ಪರಿಶೀಲನೆಯೂ ನಡೆಯಿತು.

******

 


(ಪ್ರಕಟಣೆ ಐ.ಡಿ.: 2303304) ವಿಸಿಟರ್ ಕೌಂಟರ್ : 50
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Punjabi , Gujarati , Tamil