ಹಣಕಾಸು ಸಚಿವಾಲಯ
ಹಣಕಾಸು ಸೇವೆಗಳ ಇಲಾಖೆಯಿಂದ (DFS) ಪಿಎಸ್‌ಬಿ (PSB) ಸಮಾವೇಶ 2026: ಮೊದಲ ದಿನದ ಚರ್ಚೆಗಳು ನಾಲ್ಕು ವಿಷಯಗಳ ಮೇಲೆ ಕೇಂದ್ರೀಕೃತ ಹರಿಸಿವೆ- ಠೇವಣಿ ಕ್ರೋಢೀಕರಣ, ಯುವಜನರಿಗಾಗಿ ಬ್ಯಾಂಕಿಂಗ್, ಹೂಡಿಕೆ ಚಕ್ರಕ್ಕೆ ಬೆಂಬಲ ಮತ್ತು ಗ್ಲೋಬಲ್ ಕೆಪಬಿಲಿಟಿ ಸೆಂಟರ್‌ಗಳು
ಭವಿಷ್ಯದ ಬ್ಯಾಂಕಿಂಗ್‌ಗಾಗಿ ಯುವಜನರನ್ನು ನಿರ್ಣಾಯಕ ಆದ್ಯತಾ ಕ್ಷೇತ್ರವಾಗಿ ಬಿಂಬಿಸಿದ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್
ವಿಕಸಿತ ಭಾರತಕ್ಕಾಗಿ ಬ್ಯಾಂಕಿಂಗ್ ಸುಧಾರಣೆಗಳ ಕುರಿತ ಉನ್ನತಾಧಿಕಾರ ಸಮಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು: ಶ್ರೀಮತಿ ನಿರ್ಮಲಾ ಸೀತಾರಾಮನ್
ವಿಕಸಿತ ಭಾರತಕ್ಕಾಗಿ ಉದ್ದೇಶಿತ ಉನ್ನತಾಧಿಕಾರ ಬ್ಯಾಂಕಿಂಗ್ ಸಮಿತಿಗೆ ಮಹತ್ವದ ಮಾಹಿತಿ ಒದಗಿಸಲಿರುವ ಪಿಎಸ್‌ಬಿ ಸಮಾವೇಶದ ತೀರ್ಮಾನಗಳು
ಭಾರತದ ವಿಕಸನಗೊಳ್ಳುತ್ತಿರುವ ಬೆಳವಣಿಗೆಯ ಆಕಾಂಕ್ಷೆಗಳನ್ನು ಬೆಂಬಲಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸಾರ್ವಜನಿಕ ಹಣಕಾಸು ಸಂಸ್ಥೆಗಳಿಗೆ ದಿಕ್ಸೂಚಿಯಾದ ಸಮಾವೇಶ
प्रविष्टि तिथि:
17 AUG 2026 5:08PM by PIB Bengaluru
ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ (DFS) ಆಯೋಜಿಸಿರುವ ಎರಡು ದಿನಗಳ 'ಪಿಎಸ್‌ಬಿ (PSB) ಸಮಾವೇಶ 2026'ರ ಮೊದಲ ದಿನದಂದು, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಉದಯೋನ್ಮುಖ ಅವಕಾಶಗಳು ಹಾಗೂ ಕಾರ್ಯತಂತ್ರದ ಆದ್ಯತೆಗಳ ಕುರಿತು ಚರ್ಚಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳ (PSB) ಮತ್ತು ಸಾರ್ವಜನಿಕ ಹಣಕಾಸು ಸಂಸ್ಥೆಗಳ (PFI) ಹಿರಿಯ ನಾಯಕರು, ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ವಿಷಯ ತಜ್ಞರು ಒಂದೆಡೆ ಸೇರಿದ್ದರು.
ಪಿಎಸ್‌ಬಿಗಳು ಮತ್ತು ಪಿಎಫ್‌ಐಗಳಿಗೆ ಪ್ರಮುಖ ಅವಕಾಶಗಳ ಕ್ಷೇತ್ರಗಳನ್ನು ಒಳಗೊಂಡಿರುವ ಏಳು ವಿಷಯಗಳ (themes) ಸುತ್ತ ಈ ಸಮಾವೇಶವನ್ನು ರೂಪಿಸಲಾಗಿದೆ. ಸಂಸ್ಥೆಗಳಾದ್ಯಂತ ಅಳವಡಿಸಿಕೊಳ್ಳಬಹುದಾದ ಮತ್ತು ವಿಸ್ತರಿಸಬಹುದಾದ ಪ್ರಾಯೋಗಿಕ ಕಾರ್ಯತಂತ್ರಗಳು ಹಾಗೂ ಪರಿಹಾರಗಳನ್ನು ಗುರುತಿಸುವ ಉದ್ದೇಶವನ್ನು ಈ ಚರ್ಚೆಗಳು ಹೊಂದಿವೆ.

ಮೊದಲ ದಿನದಂದು, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಗಳು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಎರಡು ದಿನಗಳ ಸಮಾವೇಶದಲ್ಲಿ ಚರ್ಚೆಗಾಗಿ ಗುರುತಿಸಲಾದ ಏಳು ವಿಷಯಗಳು, ಬ್ಯಾಂಕಿಂಗ್ ವಲಯ, ಆರ್ಥಿಕ ಸೇರ್ಪಡೆ ಮತ್ತು ಸಾಲ ವಿತರಣೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ವಹಿಸುವ ನಿರ್ಣಾಯಕ ಪಾತ್ರವನ್ನು ಕೇಂದ್ರ ಹಣಕಾಸು ಸಚಿವರು ಎತ್ತಿ ತೋರಿಸಿದರು. ಐತಿಹಾಸಿಕವಾಗಿ ಅತ್ಯಂತ ಕಡಿಮೆ ಮಟ್ಟದಲ್ಲಿರುವ ವಸೂಲಾಗದ ಸಾಲಗಳ (NPAs - ಅನುತ್ಪಾದಕ ಆಸ್ತಿಗಳು) ಪ್ರಮಾಣವು, ಸುಧಾರಣೆಗಳ ಮುಂದಿನ ಹಂತವನ್ನು ಮುನ್ನಡೆಸಲು ಬ್ಯಾಂಕಿಂಗ್ ವಲಯವನ್ನು ಬಲವಾದ ಸ್ಥಿತಿಯಲ್ಲಿರಿಸಿದೆ ಎಂದು ಅವರು ಒತ್ತಿ ಹೇಳಿದರು.

ಯುವಜನರಿಗಾಗಿ ಬ್ಯಾಂಕಿಂಗ್ ಕುರಿತು ಮಾತನಾಡಿದ ಹಣಕಾಸು ಸಚಿವರು, ಭಾರತದ ಜನಸಂಖ್ಯೆಯಲ್ಲಿ 15 ರಿಂದ 29 ವರ್ಷ ವಯಸ್ಸಿನವರು ಶೇಕಡಾ 29ರಷ್ಟಿದ್ದು, ಭವಿಷ್ಯದ ಬ್ಯಾಂಕಿಂಗ್ ವ್ಯವಸ್ಥೆಯು ಭಾರತದ ಯುವಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸಬೇಕು ಎಂದು ಪ್ರತಿಪಾದಿಸಿದರು.
ಡಿಎಫ್‌ಎಸ್ (DFS) ಕಾರ್ಯದರ್ಶಿಗಳು ಸಮಾವೇಶದ ಉದ್ದೇಶಗಳನ್ನು ಮತ್ತು ಚರ್ಚೆಗಳನ್ನು ಕಾಂಕ್ರೀಟ್ ಹಾಗೂ ಕಾರ್ಯಗತಗೊಳಿಸಬಹುದಾದ ಫಲಿತಾಂಶಗಳಾಗಿ ಪರಿವರ್ತಿಸುವ ಮಹತ್ವವನ್ನು ವಿವರಿಸಿದರು. ಆರ್ಥಿಕತೆಯ ಮುಂದಿನ ಹಂತದ ಬೆಳವಣಿಗೆಯನ್ನು ಬೆಂಬಲಿಸಲು ಪಿಎಸ್‌ಬಿಗಳು ಮತ್ತು ಪಿಎಫ್‌ಐಗಳು ಉದಯೋನ್ಮುಖ ಅವಕಾಶಗಳನ್ನು ನಿರೀಕ್ಷಿಸುವ, ಸಾಂಸ್ಥಿಕ ಸಾಮರ್ಥ್ಯಗಳನ್ನು ಬಲಪಡಿಸುವ, ಸಂಸ್ಥೆಗಳಾದ್ಯಂತ ಯಶಸ್ವಿ ವಿಧಾನಗಳನ್ನು ಅಳವಡಿಸಿಕೊಳ್ಳುವ ಮತ್ತು ತಮ್ಮ ಸಾಮೂಹಿಕ ಅನುಭವವನ್ನು ಬಳಸಿಕೊಳ್ಳುವ ಅಗತ್ಯದ ಬಗ್ಗೆ ಅವರು ಮಾತನಾಡಿದರು.

ಮೊದಲ ದಿನದಂದು ಏಳು ವಿಷಯಗಳ ಪೈಕಿ ನಾಲ್ಕು ವಿಷಯಗಳ ಕುರಿತು ವಿವರವಾದ ಚರ್ಚೆಗಳನ್ನು ಕೈಗೆತ್ತಿಕೊಳ್ಳಲಾಯಿತು: ಠೇವಣಿ ಕ್ರೋಢೀಕರಣ, ಯುವಜನರಿಗಾಗಿ ಬ್ಯಾಂಕಿಂಗ್, ಹೂಡಿಕೆ ಚಕ್ರಕ್ಕೆ ಬೆಂಬಲ ಮತ್ತು ಗ್ಲೋಬಲ್ ಕೆಪಬಿಲಿಟಿ ಸೆಂಟರ್‌ಗಳು (GCCs). ಆಳವಾದ ಗ್ರಾಹಕ ಸಂಪರ್ಕದ ಮೂಲಕ ಠೇವಣಿ ಮೂಲವನ್ನು ಬಲಪಡಿಸುವ ವಿಧಾನಗಳು; ಭಾರತದ ಯುವಜನರ ಆಕಾಂಕ್ಷೆಗಳು ಮತ್ತು ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುವ ಬ್ಯಾಂಕಿಂಗ್ ಪ್ರಸ್ತಾವನೆಗಳನ್ನು ಅಭಿವೃದ್ಧಿಪಡಿಸುವುದು; ವಿಕಸನಗೊಳ್ಳುತ್ತಿರುವ ಹೂಡಿಕೆ ಚಕ್ರವನ್ನು ಬೆಂಬಲಿಸಲು ಸಾಂಸ್ಥಿಕ ಸಾಮರ್ಥ್ಯಗಳು ಮತ್ತು ಹಣಕಾಸು ಪರಿಹಾರಗಳನ್ನು ವೃದ್ಧಿಸುವುದು; ಹಾಗೂ ವಿಸ್ತರಿಸುತ್ತಿರುವ ಜಿಸಿಸಿ (GCC) ಪರಿಸರ ವ್ಯವಸ್ಥೆಯಾದ್ಯಂತ ಉದಯೋನ್ಮುಖ ಅವಕಾಶಗಳನ್ನು ಬಳಸಿಕೊಳ್ಳಲು ಪಿಎಸ್‌ಬಿಗಳು ಮತ್ತು ಪಿಎಫ್‌ಐಗಳನ್ನು ಸಜ್ಜುಗೊಳಿಸುವುದು - ಈ ಅಂಶಗಳ ಕುರಿತು ಚರ್ಚೆಗಳು ಬೆಳಕು ಚೆಲ್ಲಿದವು. ಜೆಎಸ್‌ಡಬ್ಲ್ಯು (JSW) ಗ್ರೂಪ್ ಸಿಎಫ್‌ಒ (CFO) ಶ್ರೀ ಶೇಷಗಿರಿ ರಾವ್ ಎಂ.ವಿ.ಎಸ್. ಅವರು ಹೂಡಿಕೆ ಚಕ್ರವನ್ನು ಬೆಂಬಲಿಸುವ ಕುರಿತು ಮತ್ತು ಜಿಸಿಸಿ ಎಂಟರ್‌ಪ್ರೈಸ್ ಟ್ರಾನ್ಸ್‌ಫಾರ್ಮೇಶನ್ ಎಕ್ಸ್‌ಪರ್ಟ್ ಶ್ರೀ ತನಯ್ ಕೇಡಿಯಾಲ್ ಅವರು ವಿಕಸನಗೊಳ್ಳುತ್ತಿರುವ ಜಿಸಿಸಿ ಪರಿಸರ ವ್ಯವಸ್ಥೆಯ ಕುರಿತು ತಮ್ಮ ಪರಿಣಿತ ದೃಷ್ಟಿಕೋನಗಳನ್ನು ಹಂಚಿಕೊಳ್ಳುವ ಮೂಲಕ ಚರ್ಚೆಗಳನ್ನು ಮತ್ತಷ್ಟು ಶ್ರೀಮಂತಗೊಳಿಸಿದರು.

ಯುವಜನರಿಗಾಗಿ ಬ್ಯಾಂಕಿಂಗ್ ಕುರಿತ ಚರ್ಚೆಗಳ ಭಾಗವಾಗಿ, ಯುವಜನರ ವ್ಯಾಪಕ ಪಾಲ್ಗೊಳ್ಳುವಿಕೆಗಾಗಿ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯುವಜನ ವ್ಯವಹಾರಗಳ ಇಲಾಖೆಯ ರಾಷ್ಟ್ರೀಯ ವೇದಿಕೆಯಾದ 'ಮೈ ಭಾರತ್' (Mera Yuva Bharat - MY Bharat) ಅನ್ನು ಬಳಸಿಕೊಳ್ಳುವ ಸಾಧ್ಯತೆಗಳನ್ನು ಅನ್ವೇಷಿಸಲಾಯಿತು. ಮೈ ಭಾರತ್ ಸಿಇಒ ಡಾ. ಪ್ರಿಯಾಂಕಾ ಶುಕ್ಲಾ ಅವರು ಪರಿಣಿತ ಭಾಷಣಕಾರರಾಗಿ ಭಾಗವಹಿಸಿ ಯುವಜನರನ್ನು ತಲುಪುವ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು. 2.60 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರು ಮತ್ತು ವ್ಯಾಪಕ ಸಂಪರ್ಕ ಜಾಲವನ್ನು ಹೊಂದಿರುವ ಮೈ ಭಾರತ್, ಔಪಚಾರಿಕ ಹಣಕಾಸು ವ್ಯವಸ್ಥೆಯೊಂದಿಗೆ ಯುವಜನರ ಸಂಪರ್ಕವನ್ನು ಬಲಪಡಿಸಲು ಹಾಗೂ ಶಿಕ್ಷಣ ಸಾಲ, ಉದ್ಯಮಶೀಲತೆ, ಇಂಟರ್ನ್‌ಶಿಪ್‌ಗಳು ಮತ್ತು ಹಣಕಾಸು ವಲಯದಲ್ಲಿನ ವೃತ್ತಿಜೀವನಕ್ಕೆ ಸಂಬಂಧಿಸಿದ ಅವಕಾಶಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಲು ಸಹಾಯ ಮಾಡುತ್ತದೆ.
ಎರಡನೇ ದಿನದಂದು, ಉಳಿದ ಮೂರು ವಿಷಯಗಳಾದ: ಕೃಷಿ ಮತ್ತು ತೋಟಗಾರಿಕೆ ಮೌಲ್ಯ ಸರಣಿ ಮೂಲಸೌಕರ್ಯ, ಆದ್ಯತಾ ವಲಯದ ಸಾಲ ವಿತರಣೆ, ಮತ್ತು ಕ್ರೆಡಿಟ್ ಕಾರ್ಡ್ ವ್ಯವಹಾರದ ಮರು-ಕಲ್ಪನೆ ಕುರಿತು ಚರ್ಚೆಗಳು ನಡೆಯಲಿವೆ. ತದನಂತರ ಎಲ್ಲಾ ಏಳು ವಿಷಯಾಧಾರಿತ ಗುಂಪುಗಳಿಂದ ಹೊರಹೊಮ್ಮುವ ಕಾರ್ಯಗತಗೊಳಿಸಬಹುದಾದ ಕಾರ್ಯತಂತ್ರಗಳು ಮತ್ತು ನವೀನ ಪರಿಹಾರಗಳ ಕುರಿತ ಪ್ರಸ್ತುತಿಗಳು ನಡೆಯಲಿವೆ.
ಬ್ಯಾಂಕಿಂಗ್ ವಲಯವು ಸಾಧಿಸಿದ ಪ್ರಗತಿಯನ್ನು ಆಧರಿಸಿ ಮುನ್ನಡೆಯಲು ಮತ್ತು ಉದಯೋನ್ಮುಖ ಅವಕಾಶಗಳಿಗೆ ಸಿದ್ಧರಾಗಲು ಸರ್ಕಾರ, ಪಿಎಸ್‌ಬಿಗಳು ಮತ್ತು ಪಿಎಫ್‌ಐಗಳ ಸಾಮೂಹಿಕ ಪ್ರಯತ್ನವನ್ನು ಈ ಸಮಾವೇಶವು ಪ್ರತಿಬಿಂಬಿಸುತ್ತದೆ. ಈ ಚರ್ಚೆಗಳು ಸಾಂಸ್ಥಿಕ ಸಾಮರ್ಥ್ಯಗಳು ಮತ್ತು ಸ್ಪರ್ಧಾತ್ಮಕತೆಯನ್ನು ಬಲಪಡಿಸಲು ಹಾಗೂ ಭಾರತದ ವಿಕಸನಗೊಳ್ಳುತ್ತಿರುವ ಬೆಳವಣಿಗೆಯ ಆಕಾಂಕ್ಷೆಗಳನ್ನು ಮತ್ತು ವಿಕಸಿತ ಭಾರತ 2047ರ ಕಡೆಗಿನ ಅದರ ಪಯಣವನ್ನು ಪರಿಣಾಮಕಾರಿಯಾಗಿ ಬೆಂಬಲಿಸಲು ಪಿಎಸ್‌ಬಿಗಳು ಮತ್ತು ಪಿಎಫ್‌ಐಗಳನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿವೆ.

******
(रिलीज़ आईडी: 2300614)
आगंतुक पटल : 18