ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಇ20 ಪೆಟ್ರೋಲ್‌ನಲ್ಲಿ ತೇವಾಂಶ ಮತ್ತು ಕ್ಲೋರೈಡ್ ಇರುವಿಕೆಯ ಬಗ್ಗೆ ತೈಲ ಮಾರುಕಟ್ಟೆ ಕಂಪನಿಗಳಿಂದ (ಒಎಂಸಿ) ಪರೀಕ್ಷೆ: 500 ಪಿಪಿಎಂ ಕ್ಲೋರೈಡ್ ಮತ್ತು ತೇವಾಂಶ ಇದೆ ಎಂಬ ಆರೋಪಗಳು ಆಧಾರರಹಿತ
प्रविष्टि तिथि:
08 AUG 2026 11:20AM by PIB Bengaluru
ʻಇಬಿಎಂಎಸ್ʼನಲ್ಲಿ (ಇ20 ಪೆಟ್ರೋಲ್) ತೇವಾಂಶ ಮತ್ತು ಕ್ಲೋರೈಡ್ ಇರುವ ಬಗ್ಗೆ ಇತ್ತೀಚಿನ ಮಾಧ್ಯಮ ವರದಿಗಳ ಮಧ್ಯೆ, ತೈಲ ಮಾರಾಟ ಕಂಪನಿಗಳು (ಒಎಂಸಿ) ದೇಶಾದ್ಯಂತ ಇಡೀ ʻಇಬಿಎಂಎಸ್ʼ ಪೂರೈಕೆ ಸರಪಳಿಯುದ್ದಕ್ಕೂ ಹೆಚ್ಚುವರಿ ತೀವ್ರ ಪರೀಕ್ಷೆಗಳನ್ನು ಕೈಗೊಂಡಿವೆ. ಇಂಧನದ ಗುಣಮಟ್ಟವು ನಿಗದಿತ ಮಿತಿಯೊಳಗೆ ಸ್ಥಿರ ಮತ್ತು ಉತ್ತಮವಾಗಿರುತ್ತದೆ ಎಂದು ಸಂಶೋಧನೆಗಳು ಪುನರುಚ್ಚರಿಸಿವೆ. ಯಾದೃಚ್ಛಿಕ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತಿರುವ ಕೆಲವು ಪ್ರತಿಪಾದನೆಗಳಿಗೆ ವ್ಯತಿರಿಕ್ತವಾಗಿ, ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ ಪರೀಕ್ಷೆಗಳ ಮೂಲಕ ಈ ಅಭಿಯಾನ ನಡೆಸಲಾಗಿದ್ದು, ವ್ಯಾಪಕವಾದ ಇಂಧನ ಮಾಲಿನ್ಯದ ಬಗ್ಗೆ ಯಾವುದೇ ಆತಂಕ ಅಗತ್ಯವಿಲ್ಲ ಎಂದು ಪುರಾವೆಗಳು ತೋರಿಸಿವೆ.
ಇಂಧನ ಗುಣಮಟ್ಟವನ್ನು ಹೆಚ್ಚಿನ ಆದ್ಯತೆಯ ವಿಷಯವೆಂದು ಪರಿಗಣಿಸಲಾಗುವುದು ಮತ್ತು ವಾಹನದ ಕಾರ್ಯಕ್ಷಮತೆ ಅಥವಾ ಗ್ರಾಹಕರ ವಿಶ್ವಾಸದ ಮೇಲೆ ಪರಿಣಾಮ ಬೀರುವ ಯಾವುದೇ ಸಮಸ್ಯೆಯನ್ನು ವೈಜ್ಞಾನಿಕ ತನಿಖೆ ಮೂಲಕ ತ್ವರಿತವಾಗಿ ಪರಿಹರಿಸಲಾಗುವುದು ಎಂದು ತೈಲ ಮಾರಾಟ ಸಂಸ್ಥೆಗಳು ತಮ್ಮೆಲ್ಲಾ ಗ್ರಾಹಕರಿಗೆ ಭರವಸೆ ನೀಡಲು ಬಯಸುತ್ತವೆ.
ಪೆಟ್ರೋಲ್ ಮಿಶ್ರಣದಲ್ಲಿ ಬಳಸುವ ಎಥೆನಾಲ್‌ಗಾಗಿ ಭಾರತ ಸರ್ಕಾರವು ಕಠಿಣ ಕ್ಲೋರೈಡ್ ನಿರ್ದಿಷ್ಟತೆಯನ್ನು ಸೂಚಿಸಿದೆ ಮತ್ತು ಇಡೀ ಪೂರೈಕೆ ಸರಪಳಿಯಲ್ಲಿ ಇದರ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಹೈ-ಫ್ರೀಕ್ವೆನ್ಸಿ ಮಾನಿಟರಿಂಗ್ ಕಾರ್ಯವಿಧಾನವನ್ನು ಸ್ಥಾಪಿಸಿದೆ. ದೇಶಾದ್ಯಂತ ಸಂಸ್ಕರಣಾಗಾರಗಳು, ಡಿಸ್ಟಿಲರಿಗಳು, ಡಿಪೋಗಳು / ಟರ್ಮಿನಲ್‌ಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳು ಸೇರಿದಂತೆ ಪೂರೈಕೆ ಸರಪಳಿಯ ಅನೇಕ ಹಂತಗಳಲ್ಲಿ ಕ್ಲೋರೈಡ್ ಮೇಲ್ವಿಚಾರಣೆಯನ್ನು ಮಾಡಲಾಗುತ್ತಿದೆ. ಇದು ಪೂರೈಕೆ ಸರಪಳಿಯುದ್ದಕ್ಕೂ ಗುಣಮಟ್ಟವನ್ನು ಸ್ಥಿರವಾಗಿ ಕಾಯ್ದುಕೊಳ್ಳುವುದನ್ನು ಖಚಿತಪಡಿಸಿದೆ.
ಈಗಾಗಲೇ ಜಾರಿಗೊಳಿಸಲಾಗಿರುವ ಗುಣಮಟ್ಟ ಭರವಸೆ ನಿಯಮಗಳ ಜೊತೆಗೆ, ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಚಿಲ್ಲರೆ ಮಾರಾಟ ಮಳಿಗೆಯಲ್ಲಿ ಪ್ರತಿದಿನ 8-12 ಬಾರಿ ತೇವಾಂಶ ಸೇರ್ಪಡೆ ಮತ್ತು ಸಾಂದ್ರತೆಯ ಪರೀಕ್ಷೆಗಳನ್ನು ನಡೆಸುವ ಮೂಲಕ ಕಣ್ಗಾವಲನ್ನು ಮತ್ತಷ್ಟು ಬಲಪಡಿಸಿವೆ. ಸಂಚಾರಿ ಇಂಧನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳನ್ನು ಸಹ ನಿಯೋಜಿಸಲಾಗಿದೆ. ಅತ್ಯುನ್ನತ ಗುಣಮಟ್ಟದ ಭರವಸೆಯ ಖಚಿತಪಡಿಸಿಕೊಳ್ಳಲು ಪರೀಕ್ಷಾ ಫಲಿತಾಂಶಗಳನ್ನು ಇಂಧನ ಪ್ರಯೋಗಾಲಯಗಳ ಮೂಲಕ ಸ್ವತಂತ್ರವಾಗಿ ಮೌಲ್ಯೀಕರಿಸಲಾಗುತ್ತಿದೆ.
ಪೂರೈಕೆ ಸರಪಳಿಯಾದ್ಯಂತ ಈ ಬಹುಮುಖಿ ಹಂತದ ಪರೀಕ್ಷಾ ಶಿಷ್ಟಾಚಾರಗಳು ನಮ್ಮ ಅತ್ಯುನ್ನತ ಇಂಧನ ಗುಣಮಟ್ಟದ ಮಾನದಂಡಗಳನ್ನು ಮೌಲ್ಯೀಕರಿಸಿವೆ.
- ಸಂಸ್ಕರಣಾಗಾರದಿಂದ ಎಂಎಸ್: ಪೆಟ್ರೋಲ್‌ನಲ್ಲಿ ನೈಜ ಕ್ಲೋರೈಡ್ ಮಟ್ಟವು 1 ಪಿಪಿಎಂ ಒಳಗೆ ಇದೆ
ವಿವಿಧ ಸಂಸ್ಕರಣಾಗಾರಗಳಲ್ಲಿ 100ಕ್ಕೂ ಹೆಚ್ಚು ಯಾದೃಚ್ಛಿಕವಾಗಿ ಆಯ್ಕೆ ಮಾಡಿದ ಪೆಟ್ರೋಲ್ ಮಾದರಿಗಳು ಪರೀಕ್ಷಿಸಲಾಗಿದ್ದು, ಇವುಗಳಲ್ಲಿ ಹೆಚ್ಚುವರಿ ಕ್ಲೋರೈಡ್ ಅಂಶವು ಸ್ಥಿರ ಹಾಗೂ ಕಡಿಮೆ ಮಟ್ಟದಲ್ಲಿರುವುದು ದೃಢಪಟ್ಟಿದೆ. ಎಲ್ಲಾ ಮಾದರಿಗಳಲ್ಲೂ ಕ್ಲೋರೈಡ್ ಅಂಶವು 1 ಪಿಪಿಎಂ ಅಥವಾ ಅದಕ್ಕಿಂತ ಕಡಿಮೆ ವರದಿಯಾಗಿವೆ. ಇದು ಭಾರತದ ದೃಢವಾದ ಸಂಸ್ಕರಣೆ ಮತ್ತು ರವಾನೆ ಪ್ರಕ್ರಿಯೆಯಲ್ಲಿ ನಿರ್ಮಿಸಲಾದ ಗುಣಮಟ್ಟ ಪರಿಶೀಲನೆಗಳ ನಿರಂತರ ಪರಿಣಾಮಕಾರಿತ್ವವನ್ನು ಸೂಚಿಸುತ್ತದೆ.
2. ಡಿಸ್ಟಿಲರಿಗಳಿಂದ ಶುದ್ಧ ಎಥೆನಾಲ್:
ಡಿಸ್ಟಿಲರಿಗಳು ಪೂರೈಸುವ ಎಥೆನಾಲ್‌ನಲ್ಲೂ(ಪ್ರಮುಖ ಮಿಶ್ರಣ ಘಟಕ) ಕ್ಲೋರೈಡ್ ಮಟ್ಟವು ನಿಗದಿಪಡಿಸಿದ ಮಟ್ಟಕ್ಕಿಂತಲೂ ಗಮನಾರ್ಹವಾಗಿ ಕಡಿಮೆ ಇರುವುದು ಕಂಡುಬಂದಿದೆ. ಇದು ಉತ್ಪಾದನಾ ಹಂತದಲ್ಲಿ ದೃಢವಾದ ಗುಣಮಟ್ಟ ನಿಯಂತ್ರಣ ಕಾರ್ಯವಿಧಾನಗಳನ್ನು ಸೂಚಿಸುತ್ತದೆ.
ತೈಲ ಮಾರಾಟ ಕಂಪನಿಗಳು ಮತ್ತು ʻಸಿಎಚ್‌ಟಿʼ ಸದಸ್ಯರನ್ನು ಒಳಗೊಂಡ ವಿಶೇಷ ಕಾರ್ಯಪಡೆಯು ಕಳೆದ 10 ದಿನಗಳಲ್ಲಿ ದೇಶಾದ್ಯಂತ 80 ಡಿಸ್ಟಿಲರಿಗಳಿಂದ ಎಥೆನಾಲ್ ಮಾದರಿಗಳನ್ನು ಪರಿಶೀಲಿಸಿದೆ ಮತ್ತು ಎಲ್ಲಾ ಮಾದರಿಗಳಲ್ಲಿ ಕ್ಲೋರೈಡ್ ಅಂಶವು 3 ʻಪಿಪಿಎಂʼಗಿಂತ ಕಡಿಮೆ ಇರುವುದು ಕಂಡುಬಂದಿದೆ.
3. ತೈಲ ಮಾರಾಟ ಸಂಸ್ಥೆಗಳ ಮಾರುಕಟ್ಟೆ ಮೂಲಸೌಕರ್ಯದ ಮೂಲಕ ವಿತರಿಸಲಾದ ಎಥೆನಾಲ್ ಮಿಶ್ರಿತ ಎಂಎಸ್ (ಇ 20):
ಡಿಪೋಗಳು / ಟ್ಯಾಂಕ್ ಟ್ರಕ್‌ಗಳು: ಡಿಪೋಗಳು ಮತ್ತು ಟರ್ಮಿನಲ್‌ಗಳಲ್ಲಿ ಪರೀಕ್ಷಿಸಿದ ಎಥೆನಾಲ್ ಮತ್ತು ಇ20 ಮಾದರಿಗಳು ನಿಗದಿತ ಮಿತಿಯಲ್ಲೇ ಕ್ಲೋರೈಡ್ ಹೊಂದಿದೆ. ಇಂಧನವು ಸಂಗ್ರಹ ಹಂತದಿಂದ ವಿತರಣೆ ಜಾಲಕ್ಕೆ ತಲುಪುವ ಹಾದಿಯುದ್ದಕ್ಕೂ ನಿಯಮಿತ ಮೇಲ್ವಿಚಾರಣೆಯೊಂದಿಗೆ ಗುಣಮಟ್ಟವನ್ನು ಕಾಯ್ದುಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ. ದೇಶಾದ್ಯಂತ ವಿವಿಧ ತೈಲ ಮಾರಟ ಸಂಸ್ಥೆಗಳ ಟರ್ಮಿನಲ್‌ಗಳಿಂದ ಸಂಗ್ರಹಿಸಿದ 80ಕ್ಕೂ ಹೆಚ್ಚು ಮಾದರಿಗಳಲ್ಲಿ 3 ʻಪಿಪಿಎಂʼಗಿಂತ ಕಡಿಮೆ ಕ್ಲೋರೈಡ್ ಅಂಶ ಕಂಡುಬಂದಿದೆ.
ಚಿಲ್ಲರೆ ಮಾರಾಟ ಮಳಿಗೆಗಳು (ಆರ್‌ಒ): 1000ಕ್ಕೂ ಹೆಚ್ಚು ಮಾದರಿಗಳ ತೀವ್ರ ಮೇಲ್ವಿಚಾರಣೆ ಕಾರ್ಯಕ್ರಮದಡಿಯಲ್ಲಿ, ಕಳೆದ ಕೆಲವು ದಿನಗಳಲ್ಲಿ ಇಲ್ಲಿಯವರೆಗೆ 160 ಪರೀಕ್ಷಾ ವರದಿಗಳನ್ನು ಕ್ಲೋರೈಡ್ ಅಂಶಕ್ಕಾಗಿ ವಿಶ್ಲೇಷಿಸಲಾಗಿದೆ. ಈ ವೇಳೆ, ಕ್ಲೋರೈಡ್ ಮಟ್ಟವು 0-3 ಪಿಪಿಎಂ ವ್ಯಾಪ್ತಿಯಲ್ಲಿರುವುದು ಕಂಡುಬಂದಿದ್ದು, ನೂರಾರು ʻಪಿಪಿಎಂʼ ಕ್ಲೋರೈಡ್ ಅಂಶವಿದೆ ಎಂಬ ಹೇಳಿಕೆಗಳಿಗೆ ಇದು ತದ್ವಿರುದ್ಧವಾಗಿದೆ. ಕಣ್ಗಾವಲು ವ್ಯವಸ್ಥೆಯು ಹೆಚ್ಚಿನ ಕ್ಲೋರೈಡ್ ಮಟ್ಟವನ್ನು ಪತ್ತೆಹಚ್ಚಿದ ನಾಲ್ಕು ಪ್ರತ್ಯೇಕ ನಿದರ್ಶನಗಳನ್ನು ಮಾತ್ರ ಗುರುತಿಸಲಾಗಿದೆ. ಇವುಗಳನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದ್ದು, ವಿವರವಾದ ಮೂಲ-ಕಾರಣ ವಿಶ್ಲೇಷಣೆ ನಡೆಸಲಾಗಿದೆ. ಸರಬರಾಜು ಪುನಃಸ್ಥಾಪನೆಗೆ ಮೊದಲು ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ.
4. ತೇವಾಂಶ ಸೇರ್ಪಡೆ ಪರೀಕ್ಷೆ:
ಸುಮಾರು 90,000 ರೀಟೇಲ್ ಮಳಿಗೆಗಳು ಭೂಗತ ಶೇಖರಣಾ ಟ್ಯಾಂಕ್‌ಗಳ ಕಡ್ಡಾಯ ತಪಾಸಣೆ ಮತ್ತು ಮೇಲ್ವಿಚಾರಣೆಯನ್ನು ಪ್ರಾರಂಭಿಸಿವೆ. ರೀಟೇಲ್ ಮಳಿಗೆಗಳಲ್ಲಿನ ಭೂಗತ ಟ್ಯಾಂಕ್‌ಗಳನ್ನು ಪ್ರತಿದಿನ 8-12 ಬಾರಿ ಪರಿಶೀಲಿಸಲಾಗುತ್ತಿದೆ ಮತ್ತು ಇಲ್ಲಿಯವರೆಗೆ ಯಾವುದೇ ನೀರು ಸೇರ್ಪಡೆ ವರದಿಯಾಗಿಲ್ಲ.
ಮೇಲಿನ ಪರೀಕ್ಷೆಗಳ ಕೋಷ್ಟಕದ ಸಾರಾಂಶವು ʻಸಿಎಚ್‌ಟಿʼಯ ಅಧಿಕೃತ ವೆಬ್‌ಸೈಟ್ www.cht.gov.in. ನಲ್ಲಿ ಲಭ್ಯವಿದೆ. ಹೆಚ್ಚಿನ ಪರೀಕ್ಷಾ ಫಲಿತಾಂಶಗಳು ಲಭ್ಯವಾದಾಗ ಇದನ್ನು ನವೀಕರಿಸಲಾಗುತ್ತದೆ.
ತೈಲ ಮಾರುಕಟ್ಟೆ ಕಂಪನಿಗಳು ಇಂಧನ ಗುಣಮಟ್ಟವು ತಮ್ಮ ಅತ್ಯುನ್ನತ ಆದ್ಯತೆಯಾಗಿ ಉಳಿದಿದೆ ಎಂದು ಗ್ರಾಹಕರಿಗೆ ಭರವಸೆ ನೀಡಲು ಬಯಸುತ್ತವೆ. ಪೂರೈಕೆ ಸರಪಳಿಯಾದ್ಯಂತ ನಿರಂತರವಾಗಿ ಗುಣಮಟ್ಟದ ಕಣ್ಗಾವಲು ಕೈಗೊಳ್ಳಲಾಗುತ್ತದೆ ಮತ್ತು ಯಾವುದೇ ಉಲ್ಲಂಘನೆ ಪತ್ತೆಯಾದಲ್ಲೆಲ್ಲಾ ತ್ವರಿತ ಮತ್ತು ನಿರ್ಣಾಯಕ ಪರಿಹಾರ ಕ್ರಮವನ್ನು ಪ್ರಾರಂಭಿಸಲಾಗುತ್ತದೆ.
ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, ಗ್ರಾಹಕರು ಇ20 ಪೆಟ್ರೋಲ್ ಅನ್ನು ವಿಶ್ವಾಸದಿಂದ ಬಳಸುವುದನ್ನು ಮುಂದುವರಿಸಬಹುದಾಗಿದೆ. ಏಕೆಂದರೆ ತೈಲ ಮಾರಾಟ ಸಂಸ್ಥೆಗಳು ತಮ್ಮ ವಿತರಣಾ ಜಾಲದ ಮೂಲಕ ಸರಬರಾಜು ಮಾಡುವ ಇಂಧನವು ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿರುತ್ತದೆ ಮತ್ತು ಪೂರೈಕೆ ಸರಪಳಿಯ ಪ್ರತಿಯೊಂದು ಹಂತದಲ್ಲೂ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ದೃಢವಾದ ಗುಣಮಟ್ಟದ ಭರವಸೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ.
*****
(रिलीज़ आईडी: 2296461)
आगंतुक पटल : 28