ಶಿಕ್ಷಣ ಸಚಿವಾಲಯ
13ನೇ ಬ್ರಿಕ್ಸ್ ಶಿಕ್ಷಣ ಸಚಿವರ ಸಭೆಯಲ್ಲಿ, ಬ್ರಿಕ್ಸ್ ಸಹಕಾರಕ್ಕಾಗಿ 'ಜನಕೇಂದ್ರಿತ' ಮತ್ತು 'ಮಾನವೀಯತೆಗೆ ಮೊದಲ ಆದ್ಯತೆ' ನೀಡುವ ಭಾರತದ ಬದ್ಧತೆಯನ್ನು ಕೇಂದ್ರ ಶಿಕ್ಷಣ ಸಚಿವರು ಪುನರುಚ್ಚರಿಸಿದರು
ಭವಿಷ್ಯದ ಪೀಳಿಗೆಯ ಆಕಾಂಕ್ಷೆಗಳನ್ನು ಈಡೇರಿಸಲು ಶಿಕ್ಷಣ ವ್ಯವಸ್ಥೆಯು ನಿರಂತರವಾಗಿ ವಿಕಸನಗೊಳ್ಳಲು ನಾವೀನ್ಯತೆ ಅತ್ಯಗತ್ಯ: ಶ್ರೀ ಪ್ರಲ್ಹಾದ್ ಜೋಶಿ
13ನೇ ಬ್ರಿಕ್ಸ್ ಶಿಕ್ಷಣ ಸಚಿವರ ಘೋಷಣೆಯನ್ನು ಅಂಗೀಕರಿಸುವುದರೊಂದಿಗೆ ಭುವನೇಶ್ವರದಲ್ಲಿ ಸಭೆಯು ಮುಕ್ತಾಯಗೊಂಡಿತು
प्रविष्टि तिथि:
07 AUG 2026 5:03PM by PIB Bengaluru
ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಬ್ರಿಕ್ಸ್ ಸಹಕಾರದಲ್ಲಿ ಭಾರತವು ಜನಕೇಂದ್ರಿತ ಹಾಗೂ ಮಾನವೀಯತೆ ಮೊದಲು ಎಂಬ ಧೋರಣೆಗೆ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. ಅವರು ಒಡಿಶಾದ ಭುವನೇಶ್ವರದಲ್ಲಿ ನಡೆದ 13ನೇ ಬ್ರಿಕ್ಸ್ ಶಿಕ್ಷಣ ಸಚಿವರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯು 13ನೇ ಬ್ರಿಕ್ಸ್ ಶಿಕ್ಷಣ ಸಚಿವರ ಘೋಷಣೆಯನ್ನು ಅಂಗೀಕರಿಸುವ ಮೂಲಕ ಮುಕ್ತಾಯಗೊಂಡಿತು.


ಭಾರತವು ಎಲ್ಲಾ ಬ್ರಿಕ್ಸ್ ಪಾಲುದಾರ ರಾಷ್ಟ್ರಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವ ಬದ್ಧತೆಯನ್ನು ಪುನರುಚ್ಚರಿಸಿದ ಕೇಂದ್ರ ಸಚಿವರು, ಈ ಸಭೆಯಲ್ಲಿ ಸೃಷ್ಟಿಯಾದ ಆವೇಗವು ಅರ್ಥಪೂರ್ಣ ಕಾರ್ಯರೂಪಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 2026ರ ಭಾರತದ ಬ್ರಿಕ್ಸ್ ಅಧ್ಯಕ್ಷತೆಯ ಧ್ಯೇಯವಾಕ್ಯವಾದ "ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ" ಅನ್ನು ಉಲ್ಲೇಖಿಸಿದ ಅವರು, ಶಿಕ್ಷಣ ವ್ಯವಸ್ಥೆಗಳು ಮಾನವೀಯ ಮೌಲ್ಯಗಳಲ್ಲಿ ದೃಢವಾಗಿ ಬೇರೂರಿರುವುದರ ಜೊತೆಗೆ, ಉದಯೋನ್ಮುಖ ಅವಕಾಶಗಳಿಗೆ ಯುವಜನರನ್ನು ಸಜ್ಜುಗೊಳಿಸಬೇಕು ಎಂದು ಹೇಳಿದರು. ಕಲಿಯುವವರು, ಶಿಕ್ಷಕರು, ಸಂಶೋಧಕರು ಹಾಗೂ ಯುವಜನರು ನೀತಿ ನಿರೂಪಣೆ ಮತ್ತು ಅಂತರರಾಷ್ಟ್ರೀಯ ಸಹಕಾರದ ಕೇಂದ್ರಬಿಂದುವಾಗಿರಬೇಕು ಎಂದು ಅವರು ತಿಳಿಸಿದರು.

ಶಿಕ್ಷಣವು ಅಂತರ್ಗತ ಅಭಿವೃದ್ಧಿ ಮತ್ತು ಹಂಚಿಕೆಯ ಸಮೃದ್ಧಿಗೆ ಅಡಿಪಾಯವಾಗಿದೆ ಎಂದು ಶ್ರೀ ಜೋಶಿ ಹೇಳಿದರು. ಅಂಗೀಕರಿಸಲಾದ ಘೋಷಣೆಯು ಬ್ರಿಕ್ಸ್ ರಾಷ್ಟ್ರಗಳು ಗುರುತಿಸಿರುವ ಐದು ಆದ್ಯತಾ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಸಾಂಪ್ರದಾಯಿಕ ಹಾಗೂ ಸ್ಥಳೀಯ ಜ್ಞಾನ ವ್ಯವಸ್ಥೆಗಳನ್ನು ಸಂರಕ್ಷಿಸಿ ಉತ್ತೇಜಿಸುವ ಮಹತ್ವವನ್ನು ಅವರು ಒತ್ತಿಹೇಳಿದರು. ನಾವೀನ್ಯತೆ ಮತ್ತು ಪರಂಪರೆ ಪರಸ್ಪರ ಪೂರಕವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ಬ್ರಿಕ್ಸ್ ರಾಷ್ಟ್ರಗಳ ಶ್ರೀಮಂತ ನಾಗರಿಕತೆಯ ಪರಂಪರೆಗಳು ಸಾಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸಲು, ಅದನ್ನು ಆಳವಾಗಿ ಅಧ್ಯಯನ ಮಾಡಲು ಹಾಗೂ ಅದರ ಮೌಲ್ಯವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ವಿಶಿಷ್ಟ ಅವಕಾಶವನ್ನು ಒದಗಿಸುತ್ತವೆ ಎಂದು ಅವರು ಹೇಳಿದರು.
ಪ್ರಾಚೀನ ಕಲಿಕೆಯ ಕೇಂದ್ರವಾಗಿ ಒಡಿಶಾದ ಶ್ರೀಮಂತ ಪರಂಪರೆಯನ್ನು ಎತ್ತಿತೋರಿಸಿದ ಸಚಿವರು, ಭಾರತದ ಶಾಶ್ವತ ನಾಗರಿಕತೆಯ ಮೌಲ್ಯಗಳಾದ "ಅತಿಥಿ ದೇವೋ ಭವ" ಹಾಗೂ "ವಸುಧೈವ ಕುಟುಂಬಕಂ" ಕುರಿತು ಉಲ್ಲೇಖಿಸಿದರು. ರಾಷ್ಟ್ರಗಳ ಸಂಪ್ರದಾಯಗಳು ಮತ್ತು ಅನುಭವಗಳು ವಿಭಿನ್ನವಾಗಿರಬಹುದು, ಆದರೆ ಅವುಗಳ ಪ್ರಗತಿ ಪರಸ್ಪರ ಸಂಬಂಧ ಹೊಂದಿದೆ ಎಂದು ಅವರು ಒತ್ತಿ ಹೇಳಿದರು.
ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ಇರಾನ್, ಇಥಿಯೋಪಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಬ್ರಿಕ್ಸ್ ಶಿಕ್ಷಣ ಸಹಕಾರದಡಿ ಸಹಯೋಗವನ್ನು ಮತ್ತಷ್ಟು ವೃದ್ಧಿಸುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿತ್ತು.
13ನೇ ಬ್ರಿಕ್ಸ್ ಶಿಕ್ಷಣ ಸಚಿವರ ಘೋಷಣೆಯನ್ನು ಅಂಗೀಕರಿಸುವ ಮೂಲಕ, ಶಿಕ್ಷಣವು ಬ್ರಿಕ್ಸ್ ಸಹಕಾರದ ಪ್ರಮುಖ ಸ್ತಂಭವಾಗಿದೆ ಎಂಬುದನ್ನು ಪುನರುಚ್ಚರಿಸಲಾಯಿತು. ಭಾರತದ ಅಧ್ಯಕ್ಷತೆಯಲ್ಲಿ ಗುರುತಿಸಲಾದ ಐದು ಆದ್ಯತಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಂಚಿಕೆಯ ಮಾರ್ಗಸೂಚಿಯನ್ನು ಈ ಘೋಷಣೆ ರೂಪಿಸಿತು. ಅದರ ಪ್ರಮುಖ ಫಲಿತಾಂಶಗಳು ಈ ಕೆಳಗಿನಂತಿವೆ:
-
ಬಾಲ್ಯದ ಆರೈಕೆ ಮತ್ತು ಶಿಕ್ಷಣ (ECCE) ಹಾಗೂ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN) ಬಲಪಡಿಸುವುದು: ಗುಣಮಟ್ಟದ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಸಾರ್ವತ್ರಿಕ ಹಾಗೂ ಸಮಗ್ರವಾಗಿ ಎಲ್ಲರಿಗೂ ತಲುಪಿಸಲು, ಶಾಲಾ ಸನ್ನದ್ಧತೆಯನ್ನು ಬಲಪಡಿಸಲು ಹಾಗೂ ಆರಂಭಿಕ ಕಲಿಕೆಗೆ ವಯೋಮಾನಕ್ಕೆ ಸೂಕ್ತವಾದ ಡಿಜಿಟಲ್ ಪರಿಹಾರಗಳ ಬಳಕೆಯನ್ನು ಉತ್ತೇಜಿಸಲು ಸಹಮತ ಸೂಚಿಸಲಾಯಿತು.
-
ಕೌಶಲ್ಯಾಭಿವೃದ್ಧಿ ಮತ್ತು ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಮತ್ತು ತರಬೇತಿ (TVET) ಕ್ಷೇತ್ರದಲ್ಲಿ ಸಹಕಾರ ಬಲಪಡಿಸುವುದು: ಬ್ರಿಕ್ಸ್ ಟಿವಿಇಟಿ ಸಹಕಾರ ಒಕ್ಕೂಟದ (BRICS-TCA) ಪಾತ್ರವನ್ನು ಸಹಯೋಗವನ್ನು ವೃದ್ಧಿಸುವಲ್ಲಿ ಮಹತ್ವದ್ದೆಂದು ಗುರುತಿಸಲಾಯಿತು. ಇದರಲ್ಲಿ ಶೀಘ್ರದಲ್ಲೇ ಪ್ರಕಟವಾಗಲಿರುವ ದ್ವೈವಾರ್ಷಿಕ ಪ್ರಗತಿ ವರದಿ ಹಾಗೂ ಸುಸ್ಥಿರ ಕೌಶಲ್ಯ ಉಪಕ್ರಮಗಳ ಸಂಕಲನವೂ ಸೇರಿವೆ. ಆಸಕ್ತ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಸ್ವಯಂಪ್ರೇರಿತ ಭಾಗವಹಿಸುವಿಕೆಯೊಂದಿಗೆ ಅಂತರರಾಷ್ಟ್ರೀಯ ಕೌಶಲ್ಯ ಕೊರತೆ ಅಧ್ಯಯನವನ್ನು ಕೈಗೊಳ್ಳುವ ಭಾರತದ ಉಪಕ್ರಮವನ್ನೂ ಘೋಷಣೆಯಲ್ಲಿ ಶ್ಲಾಘಿಸಲಾಯಿತು.
-
ಸಂಶೋಧನೆ, ನಾವೀನ್ಯತೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುವುದು: ಜಂಟಿ ಸಂಶೋಧನೆಯನ್ನು ಉತ್ತೇಜಿಸಲು, ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯ (AI) ಸುರಕ್ಷಿತ, ನೈತಿಕ ಹಾಗೂ ಮಾನವಕೇಂದ್ರಿತ ಬಳಕೆಯನ್ನು ಪ್ರೋತ್ಸಾಹಿಸಲು, ನಾವೀನ್ಯತೆ ಆಧಾರಿತ ಉದ್ಯಮಶೀಲತೆಯನ್ನು ಬಲಪಡಿಸಲು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು, ಸಂಶೋಧಕರು ಮತ್ತು ನವೋದ್ಯಮ ಪರಿಸರ ವ್ಯವಸ್ಥೆಗಳ ನಡುವಿನ ಸಹಕಾರವನ್ನು ಗಾಢಗೊಳಿಸಲು ಒಪ್ಪಿಕೊಳ್ಳಲಾಯಿತು.
-
ವಿದ್ಯಾರ್ಹತೆಗಳ ಪರಸ್ಪರ ಮಾನ್ಯತೆ (MRQ)ಗೆ ಉತ್ತೇಜನ ನೀಡುವುದು: ವಿದ್ಯಾರ್ಹತೆಗಳ ಪರಸ್ಪರ ಮಾನ್ಯತೆಗೆ ಸಂಬಂಧಿಸಿದ ತಿಳುವಳಿಕೆ ಒಪ್ಪಂದ ಕುರಿತ ಚರ್ಚೆಯನ್ನು ಮುಂದುವರಿಸಲು ಕಾರ್ಯಕಾರಿ ಸಭೆಗಳನ್ನು ಕರೆಯಲು ಒಪ್ಪಿಕೊಳ್ಳಲಾಯಿತು. ಇದರಿಂದ ಶೈಕ್ಷಣಿಕ ಚಲನಶೀಲತೆ ಮತ್ತು ಸಹಕಾರವನ್ನು ಇನ್ನಷ್ಟು ಸುಗಮಗೊಳಿಸುವ ಉದ್ದೇಶ ಹೊಂದಲಾಗಿದೆ.
-
ಶೈಕ್ಷಣಿಕ ನಾಯಕತ್ವ ಮತ್ತು ಸಾಂಸ್ಥಿಕ ಅಭಿವೃದ್ಧಿಗಾಗಿ ಸಾಮರ್ಥ್ಯ ವೃದ್ಧಿಯನ್ನು ಬಲಪಡಿಸುವುದು: 'ಬ್ರಿಕ್ಸ್ ರೆಕ್ಟರ್ಸ್ ಫೋರಮ್' ನ ನಿರಂತರ ಆಯೋಜನೆ, ಅಧ್ಯಾಪಕರು ಮತ್ತು ನಾಯಕತ್ವದ ವಿನಿಮಯ, ಸ್ಟೆಮ್ (STEM) ಆಧಾರಿತ ವಿದ್ಯಾರ್ಥಿವೇತನ ಕಾರ್ಯಕ್ರಮಗಳು ಮತ್ತು 'ಬ್ರಿಕ್ಸ್ ವಿಶ್ವವಿದ್ಯಾಲಯ ಜಾಗತಿಕ ಶ್ರೇಯಾಂಕ ಮತ್ತು ಮೌಲ್ಯಮಾಪನ ವ್ಯವಸ್ಥೆ'ಗಾಗಿ ಪೂರ್ವಭಾವಿ ಕಾರ್ಯಗಳನ್ನು ಕೈಗೊಳ್ಳಲು ಕರೆ ನೀಡಲಾಯಿತು.
ಸಾಂಪ್ರದಾಯಿಕ ಮತ್ತು ಸ್ಥಳೀಯ ಜ್ಞಾನ ವ್ಯವಸ್ಥೆಗಳ ಕುರಿತು ಶೈಕ್ಷಣಿಕ ಸಹಕಾರವನ್ನು ಬಲಪಡಿಸಲು ಭಾರತವು ಮಂಡಿಸಿದ ಬ್ರಿಕ್ಸ್ ಮಾರ್ಗದರ್ಶಕ ತತ್ವಗಳ ಉಪಕ್ರಮವನ್ನು ಸಹ ಸಭೆಯು ಸ್ವಾಗತಿಸಿತು. ಜೊತೆಗೆ, ಬ್ರಿಕ್ಸ್ ನೆಟ್‌ವರ್ಕ್ ವಿಶ್ವವಿದ್ಯಾಲಯವು ಸಾಂಪ್ರದಾಯಿಕ ಮತ್ತು ಸ್ಥಳೀಯ ಜ್ಞಾನ ವ್ಯವಸ್ಥೆಗಳನ್ನು ಹೆಚ್ಚುವರಿ ಅಂತರರಾಷ್ಟ್ರೀಯ ವಿಷಯಾಧಾರಿತ ಗುಂಪಾಗಿ ಪರಿಗಣಿಸಬಹುದೆಂದು ಸೂಚಿಸಲಾಯಿತು.
ಭಾರತದ ಬ್ರಿಕ್ಸ್ ಅಧ್ಯಕ್ಷತೆಯ ಅಂಗವಾಗಿ, ಶಿಕ್ಷಣ ಸಚಿವಾಲಯವು 2026ರ ಆಗಸ್ಟ್ 5ರಂದು ಭುವನೇಶ್ವರದಲ್ಲಿ 3ನೇ ಬ್ರಿಕ್ಸ್ ಹಿರಿಯ ಅಧಿಕಾರಿಗಳ ಸಭೆ (ಎಸ್ಒಎಂ) ಯನ್ನು ಆಯೋಜಿಸಿತು. ಸದಸ್ಯ ರಾಷ್ಟ್ರಗಳು ಅಂತರ್ಗತ, ಸ್ಥಿತಿಸ್ಥಾಪಕ ಮತ್ತು ಭವಿಷ್ಯಸನ್ನದ್ಧ ಶಿಕ್ಷಣ ವ್ಯವಸ್ಥೆಗಳನ್ನು ಹೆಚ್ಚಿನ ಸಹಕಾರ, ನಾವೀನ್ಯತೆ ಹಾಗೂ ಜ್ಞಾನ ವಿನಿಮಯದ ಮೂಲಕ ಅಭಿವೃದ್ಧಿಪಡಿಸುವ ತಮ್ಮ ಸಮಾನ ಬದ್ಧತೆಯನ್ನು ಈ ಚರ್ಚೆಗಳು ಮತ್ತೊಮ್ಮೆ ದೃಢಪಡಿಸಿದವು.
ಭಾರತವು ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬ್ರಿಕ್ಸ್ ಸಚಿವರ ಸಭೆಗಳನ್ನು ಆಯೋಜಿಸುವುದನ್ನು ಮುಂದುವರಿಸಲಿದ್ದು, ಸೆಪ್ಟೆಂಬರ್ 12-13, 2026 ರಂದು ನವದೆಹಲಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯೊಂದಿಗೆ ಇದು ಮುಕ್ತಾಯಗೊಳ್ಳಲಿದೆ.
******
(रिलीज़ आईडी: 2296297)
आगंतुक पटल : 23