ಗೃಹ ವ್ಯವಹಾರಗಳ ಸಚಿವಾಲಯ
'ಬಾಸ್ ಹಗರಣ'ದ ವಿರುದ್ಧ ಕಾರ್ಪೊರೇಟ್‌ಗಳು ಮತ್ತು ಹಣಕಾಸು ವೃತ್ತಿಪರರಿಗೆ ಎಚ್ಚರಿಕೆ ನೀಡಿದ ಐ4ಸಿ: ಅಧಿಕ ಮೌಲ್ಯದ ಹಣಕಾಸು ವಂಚನೆಯನ್ನು ಗುರಿಯಾಗಿಸಿಕೊಂಡು, ದುರುದ್ದೇಶಪೂರಿತವಾದ 'ಸ್ಟೇಟ್‌ಮೆಂಟ್ ಆಫ್ ಅಕೌಂಟ್', 'ಎಂಸಿಎ' ಮತ್ತು 'ಆರ್‌ಬಿಐ' ಕಡತಗಳ ಹೆಸರಿನಲ್ಲಿ ವಾಟ್ಸ್‌ಆಪ್ ಖಾತೆಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ
ಅಕೌಂಟ್ ಸ್ಟೇಟ್‌ಮೆಂಟ್‌ಗಳು ಮತ್ತು ಆರ್‌ಬಿಐ ಸಂವಹನಗಳ ಸೋಗಿನಲ್ಲಿ ಸ್ವಯಂ-ಹರಡುವ ಮಾಲ್‌ವೇರ್‌ಗಳನ್ನು ವಾಟ್ಸಾಪ್, ಎಸ್‌ಎಂಎಸ್ ಮತ್ತು ಇ-ಮೇಲ್ ಮೂಲಕ ಕಳುಹಿಸಲಾಗುತ್ತಿದೆ; ಚಾರ್ಟರ್ಡ್ ಅಕೌಂಟೆಂಟ್‌ಗಳು, ಕಂಪನಿ ನಿರ್ದೇಶಕರು, ʻಸಿಎಫ್‌ಒʼಗಳು ಮತ್ತು ಕಾರ್ಪೊರೇಟ್ ಹಣಕಾಸು ತಂಡಗಳು ಇದರ ಪ್ರಮುಖ ಗುರಿ
ಹಿರಿಯ ಅಧಿಕಾರಿಗಳ ವಾಟ್ಸಾಪ್ ಖಾತೆಗಳನ್ನು ಹ್ಯಾಕಿಂಗ್ ಮೂಲಕ ದುರ್ಬಳಕೆ ಮಾಡಿಕೊಂಡು, ಮ್ಯೂಲ್ (ಹಣ ಜಮೆಗೆ ವಂಚಕರು ಬಳಸುವ ನಕಲಿ ಅಕೌಂಟ್) ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ಹಣಕಾಸು ಸಿಬ್ಬಂದಿಗೆ ಸೂಚನೆ ನೀಡಲಾಗುತ್ತಿದೆ
ಕಳೆದ 30 ದಿನಗಳಲ್ಲಿ '14CMHA-G' ಎಂಬ ʻಎಸ್‌ಎಂಎಸ್ʼ ಹೆಡರ್ ಮೂಲಕ 58,000ಕ್ಕೂ ಹೆಚ್ಚು ಸಂಭಾವ್ಯ ಸಂತ್ರಸ್ತರಿಗೆ ʻI4Cʼ ಮಾಹಿತಿ ನೀಡಿದೆ; ಸಿಇಆರ್‌ಟಿ-ಇನ್(CERT-In), ಮೈಕ್ರೋಸಾಫ್ಟ್, ಭಾರತೀಯ ಆಂಟಿ-ವೈರಸ್ ಮತ್ತು ಥ್ರೆಟ್ ಇಂಟೆಲಿಜೆನ್ಸ್ ಕಂಪನಿಗಳೊಂದಿಗೂ ಬೆದರಿಕೆ ಸಂದೇಶಗಳನ್ನು ಹಂಚಿಕೊಳ್ಳಲಾಗಿದೆ
प्रविष्टि तिथि:
07 AUG 2026 1:01PM by PIB Bengaluru
ಅಕೌಂಟ್ ಸ್ಟೇಟ್‌ಮೆಂಟ್‌ಗಳು ಮತ್ತು ನಿಯಂತ್ರಕ ಸಂವಹನಗಳ ಸೋಗಿನಲ್ಲಿ ಹರಡುವ ದುರುದ್ದೇಶಪೂರಿತ ಫೈಲ್‌ಗಳ ಮೂಲಕ ವೃತ್ತಿಪರರು ಮತ್ತು ವ್ಯಾಪಾರಸ್ಥರ ವಾಟ್ಸ್‌ಆಪ್ ಖಾತೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ʻರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ʼನಲ್ಲಿ (NCRP) ದೂರುಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗಿರುವುದನ್ನು ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ `ಸೈಬರ್ ಅಪರಾಧ ಸಮನ್ವಯ ಕೇಂದ್ರ’ವು (I4C) ಗಮನಿಸಿದೆ. ಕಳೆದ ಕೆಲವು ದಿನಗಳಲ್ಲಿ, ದೆಹಲಿ, ಗುಜರಾತ್, ಮಹಾರಾಷ್ಟ್ರ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಿಂದ ಇದೇ ರೀತಿಯ ಕಾರ್ಯವಿಧಾನವನ್ನು ಅನುಸರಿಸುವ ಘಟನೆಗಳು ವರದಿಯಾಗಿವೆ. ಹೆಚ್ಚುತ್ತಿರುವ ಈ ರೀತಯ ವಂಚನೆ ಬಗ್ಗೆ 22 ಜೂನ್ 2026 ರಂದು ಹೊರಡಿಸಲಾದ ತನ್ನ ಮಾರ್ಗಸೂಚಿ ಮೂಲಕ ನಾಗರಿಕರಿಗೆ ʻI4Cʼ ಎಚ್ಚರಿಕೆ ನೀಡಿತ್ತು. “ನಿಯಂತ್ರಕ ಮತ್ತು ಕಾರ್ಯಕಾರಿ ಸಿಬ್ಬಂದಿಯ ಸೋಗಿನಲ್ಲಿ ದುರುದ್ದೇಶಪೂರಿತ ʻವಿಂಡೋಸ್ ಎಕ್ಸಿಕ್ಯೂಟಬಲ್ʼ ಫೈಲ್ʼಗಳು ಮತ್ತು ವಾಟ್ಸ್‌ಆಪ್ ಖಾತೆ ಸ್ವಾಧೀನದ ಮೂಲಕ ಅಧಿಕ ಮೌಲ್ಯದ ಹಣಕಾಸು ವಂಚನೆ” ಎಂಬ ಶೀರ್ಷಿಕೆಯಡಿ ಈ ಮಾರ್ಗಸೂಚಿಯನ್ನು ನೀಡಲಾಗಿತ್ತು.
ವರದಿಯಾದ ಘಟನೆಗಳಲ್ಲಿ, ಸಂತ್ರಸ್ತರು ವಾಟ್ಸ್‌ಆಪ್, ಎಸ್‌ಎಂಎಸ್ ಅಥವಾ ಇ-ಮೇಲ್ ಮೂಲಕ ಸಂಕುಚಿತಗೊಂಡ (.zip) ಫೈಲ್ ಅನ್ನು "Statement of Account.zip" (ಸಾಮಾನ್ಯವಾಗಿ ದಿನಾಂಕವನ್ನು ಪೂರ್ವಪ್ರತ್ಯಯವಾಗಿ ಸೇರಿಸಲಾಗಿರುತ್ತದೆ, ಉದಾ. "0714 Statement of Account.zip") ಅಥವಾ "RBI.zip", "MCA.zip" ಮುಂತಾದ ಹೆಸರುಗಳೊಂದಿಗೆ ಸ್ವೀಕರಿಸಿರುತ್ತಾರೆ. ಇದರೊಂದಿಗಿನ ಸಂದೇಶವನ್ನು ದಿನನಿತ್ಯದ ಅಕೌಂಟ್ ಸ್ಟೇಟ್‌ಮೆಂಟ್‌ನಂತೆ ಅಥವಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಂತಹ ನಿಯಂತ್ರಕರಿಂದ ತುರ್ತು ಸೂಚನೆಯಂತೆ ಕಾಣುವಂತೆ ರಚಿಸಲಾಗಿರುತ್ತದೆ. ಅಲ್ಲದೆ, ಅತಿ ಕಡಿಮೆ ಅವಧಿಯೊಳಗೆ ಕಾರ್ಯಪ್ರವೃತ್ತವಾಗುವಂತೆ ಈ ಸಂದೇಶದ ಮೂಲಕ ಒತ್ತಾಯಿಸಲಾಗುತ್ತದೆ. ಈ ಕಡತವು ʻಡೈನಾಮಿಕ್ ಲಿಂಕ್ ಲೈಬ್ರರಿʼ(.dll) ಫೈಲ್‌ನೊಂದಿಗೆ ದುರುದ್ದೇಶಪೂರಿತ ʻವಿಂಡೋಸ್ ಎಕ್ಸಿಕ್ಯೂಟಬಲ್ʼ (.exe) ಅನ್ನು ಹೊಂದಿರುತ್ತದೆ. ಈ ಫೈಲ್ ಅನ್ನು ವಿಂಡೋಸ್ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಎಕ್ಸ್‌ಟ್ರಾಕ್ಟ್ ಮಾಡಿದಾಗ ಮತ್ತು ತೆರೆದಾಗ, ಒಂದು ಟ್ರೋಜನ್ (Trojan) ವೈರಸ್ ಸಂತ್ರಸ್ತರ ಸಾಧನದಲ್ಲಿ ಇನ್‌ಸ್ಟಾಲ್ ಆಗುತ್ತದೆ. ಇದು ಸಾಧನವನ್ನು ರಾಜಿ ಮಾಡಿಕೊಳ್ಳುತ್ತದೆ ಮತ್ತು ಸಂತ್ರಸ್ತರ ಸಕ್ರಿಯ ವಾಟ್ಸಾಪ್ ವೆಬ್ ಸೆಶನ್ ಅನ್ನು ಹೈಜಾಕ್ ಮಾಡುತ್ತದೆ. ಅನೇಕ ಸಂದರ್ಭಗಳಲ್ಲಿ ಆದಾಯ ತೆರಿಗೆ ಇಲಾಖೆಯ ಸೋಗಿನಲ್ಲಿಯೂ ಇಮೇಲ್‌ಗಳನ್ನು ಸಹ ಕಳುಹಿಸಲಾಗುತ್ತದೆ.
ಬಳಿಕ, ಹ್ಯಾಕ್ ಮಾಡಲಾದ ವಾಟ್ಸ್‌ಆಪ್ ಖಾತೆಯನ್ನು ದುರ್ಬಳಕೆ ಮಾಡಿಕೊಂಡು, ಸಂತ್ರಸ್ತರ ಎಲ್ಲಾ ಸಂಪರ್ಕಗಳು ಮತ್ತು ಗ್ರೂಪ್‌ಗಳಿಗೆ ಅದೇ ದುರುದ್ದೇಶಪೂರಿತ ಫೈಲ್ ಅನ್ನು ಸ್ವಯಂಚಾಲಿತವಾಗಿ ರವಾನಿಸಲಾಗುತ್ತದೆ. ಸಾಮಾನ್ಯವಾಗಿ ಈ ಫೈಲ್ ಅನ್ನು ಸ್ವೀಕರಿಸುವವರ "ಕಂಪನಿಯ ಹಣಕಾಸು ವ್ಯವಸ್ಥಾಪಕರಿಗೆ ಪರಿಶೀಲನೆಗಾಗಿ" ಫಾರ್ವರ್ಡ್ ಮಾಡಲು ಮತ್ತು ಅದನ್ನು ಕಂಪ್ಯೂಟರ್‌ನಲ್ಲಿ ತೆರೆಯಲು ವಿನಂತಿಸಲಾಗುತ್ತದೆ. ಆ ಮೂಲಕ ಕಾರ್ಪೊರೇಟ್ ನೆಟ್‌ವರ್ಕ್‌ಗಳ ಆಳಕ್ಕೆ ವೈರಸ್ ಸೋಂಕಿನ ಸರಪಳಿಯನ್ನು ವಿಸ್ತರಿಸಲಾಗುತ್ತದೆ. ವಂಚನೆಯ ಮುಂದುವರಿದ ಹಂತದಲ್ಲಿ, ಇದನ್ನು ಸಾಮಾನ್ಯವಾಗಿ "ಬಾಸ್ ಸ್ಕ್ಯಾಮ್" ಅಥವಾ ʻಸಿಇಒʼ ಸೋಗಿನ ವಂಚನೆ ಎಂದು ಕರೆಯಲಾಗುತ್ತದೆ. ವಂಚಕರು ಹಿರಿಯ ಅಧಿಕಾರಿಯ ನೈಜ ವಾಟ್ಸ್‌ಆಪ್ ಖಾತೆಯನ್ನು ಬಳಸುತ್ತಾರೆ ಅಥವಾ ಹ್ಯಾಕ್ ಮಾಡಲಾದ ಸಾಧನದಲ್ಲಿ ದಾಳಿಕೋರ-ನಿಯಂತ್ರಿತ ಸಂಖ್ಯೆಯನ್ನು "ಸಿಇಒ" ಹೆಸರಿನಲ್ಲಿ ರಹಸ್ಯವಾಗಿ ಉಳಿಸುತ್ತಾರೆ ಮತ್ತು ʻಮ್ಯೂಲ್ ಬ್ಯಾಂಕ್ʼ ಖಾತೆಗಳಿಗೆ ಹಣವನ್ನು ತುರ್ತಾಗಿ ವರ್ಗಾಯಿಸಲು ಅಕೌಂಟ್ಸ್ ಮತ್ತು ಹಣಕಾಸು ಉದ್ಯೋಗಿಗಳಿಗೆ ಸೂಚನೆ ನೀಡುತ್ತಾರೆ.
ರಾಷ್ಟ್ರೀಯ ಗಡಿಗಳಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸಂಘಟಿತ ನೆಟ್‌ವರ್ಕ್‌ಗಳ ಮೂಲಕ ಈ ಅಭಿಯಾನವು ಕಾರ್ಯನಿರ್ವಹಿಸುತ್ತಿದೆ ಮತ್ತು ʻಡಿಎಲ್‌ಎಲ್ʼ ಸೈಡ್‌ಲೋಡಿಂಗ್ ವಿಧಾನದ ಮೂಲಕ ಅತ್ಯಾಧುನಿಕ ಪ್ರಸರಣ ಮತ್ತು ಪತ್ತೆ-ತಪ್ಪಿಸುವಿಕೆ ಸಾಮರ್ಥ್ಯಗಳೊಂದಿಗೆ ಸುಧಾರಿತ ಮಾಲ್‌ವೇರ್ ಅನ್ನು ಬಳಸಿಕೊಳ್ಳುತ್ತದೆ ಎಂದು ʻI4Cʼನ ನ್ಯಾಷನಲ್ ಸೈಬರ್‌ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಯುನಿಟ್ (NCTAU) ನಡೆಸಿದ ತಾಂತ್ರಿಕ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಸಂಬಂಧಪಟ್ಟ ಕಾನೂನು ಜಾರಿ ಮತ್ತು ತಾಂತ್ರಿಕ ಏಜೆನ್ಸಿಗಳ ಸಮನ್ವಯದೊಂದಿಗೆ ತನಿಖೆಯನ್ನು ಮುಂದುವರಿಸಲಾಗುತ್ತಿದೆ.
ಮಾಲ್‌ವೇರ್ ತಂತ್ರಾಂಶವು ವಿಂಡೋಸ್ ಕಂಪ್ಯೂಟರ್‌ಗಳಲ್ಲಿ ಮಾತ್ರ ಸಕ್ರಿಯಗೊಳ್ಳುವುದರಿಂದ ಮತ್ತು ಆಮಿಷದ ದಾಖಲೆಗಳು ʻಅಕೌಂಟ್ ಸ್ಟೇಟ್‌ಮೆಂಟ್ʼಗಳು ಹಾಗೂ ನಿಯಂತ್ರಕ ಅನುಸರಣೆಯನ್ನು ಉಲ್ಲೇಖಿಸುವುದರಿಂದ, ಈ ಅಭಿಯಾನವು ಚಾರ್ಟರ್ಡ್ ಅಕೌಂಟೆಂಟ್‌ಗಳು, ಕಂಪನಿ ನಿರ್ದೇಶಕರು, ಮುಖ್ಯ ಹಣಕಾಸು ಅಧಿಕಾರಿಗಳು (ಸಿಎಫ್‌ಒ) ಮತ್ತು ಕಂಪನಿಗಳ ಹಣಕಾಸು ಹಾಗೂ ಅಕೌಂಟ್ಸ್ ಸಿಬ್ಬಂದಿಗೆ ವಿಶೇಷ ಅಪಾಯವನ್ನು ಉಂಟುಮಾಡುತ್ತದೆ. ಎಲ್ಲಾ ಕಾರ್ಪೊರೇಟ್ ಘಟಕಗಳು ತಮ್ಮ ಉದ್ಯೋಗಿಗಳಿಗೆ, ವಿಶೇಷವಾಗಿ ಹಣಕಾಸು ತಂಡಗಳಿಗೆ ತಕ್ಷಣವೇ ಈ ಬಗ್ಗೆ ಅರಿವು ಮೂಡಿಸಲು ಸಲಹೆ ನೀಡಲಾಗಿದೆ. ವಾಟ್ಸ್‌ಆಪ್ ಅಥವಾ ಇ-ಮೇಲ್ ಮೂಲಕ ಸ್ವೀಕರಿಸಿದ ಯಾವುದೇ ತುರ್ತು ಹಣ-ವರ್ಗಾವಣೆ ಸೂಚನೆ ಅಥವಾ ಖಾತೆ-ಬದಲಾವಣೆ ವಿನಂತಿಯ ಕುರಿತಾಗಿ ಕಾರ್ಯಪ್ರವೃತ್ತರಾಗುವ ಮೊದಲು ನೇರ ಧ್ವನಿ ಕರೆ (ವಾಯ್ಸ್ ಕಾಲ್) ಅಥವಾ ಖುದ್ದಾಗಿ ದೃಢೀಕರಣದ ಮೂಲಕ ಸ್ವತಂತ್ರವಾಗಿ ಪರಿಶೀಲಿಸಲು ಸೂಚಿಸಲಾಗಿದೆ.
ಈ ಅಪಾಯವನ್ನು ಎದುರಿಸಲು, ಈ ಕೆಳಗಿನ ಕ್ರಮಗಳನ್ನು ʻI4Cʼ ಕೈಗೊಂಡಿದೆ:
(i) ಸಂತ್ರಸ್ತರಿಗೆ ಮಾಹಿತಿ: ದೂರು ವಿಶ್ಲೇಷಣೆ ಮತ್ತು ತಾಂತ್ರಿಕ ಬುದ್ಧಿಮತ್ತೆಯ ಮೂಲಕ ಗುರುತಿಸಲ್ಪಟ್ಟ ಸಂತ್ರಸ್ತರು ಮತ್ತು ಸಂಭಾವ್ಯ ಸಂತ್ರಸ್ತರಿಗೆ ಪೂರ್ವಭಾವಿಯಾಗಿ ಈ ಬಗ್ಗೆ I4C ಮಾಹಿತಿ ನೀಡುತ್ತಿದೆ. ಇದರಿಂದ ಲಿಂಕ್ ಮಾಡಲಾದ ಸಾಧನಗಳಿಂದ ಲಾಗ್‌ಔಟ್ ಮಾಡುವುದು ಮತ್ತು ಖಾತೆಗಳನ್ನು ಭದ್ರಪಡಿಸುವಂತಹ ಸಕಾಲಿಕ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬಹುದು.
(ii) ಥ್ರೆಟ್ ಸಿಗ್ನಲ್ ವಿನಿಮಯ: ವಿವಿಧ ವೇದಿಕೆಗಳು ಮತ್ತು ಭದ್ರತಾ ಉತ್ಪನ್ನಗಳಾದ್ಯಂತ ದುರುದ್ದೇಶಪೂರಿತ ಫೈಲ್‌ಗಳನ್ನು ತ್ವರಿತವಾಗಿ ಪತ್ತೆಹಚ್ಚಲು, ನಿರ್ಬಂಧಿಸಲು ಮತ್ತು ತೆಗೆದುಹಾಕಲು ಅನುವು ಮಾಡಿಕೊಡಲು ಮಾಲ್‌ವೇರ್‌ನ ಬೆದರಿಕೆ ಸಂಕೇತಗಳು ಮತ್ತು ತಾಂತ್ರಿಕ ಸೂಚಕಗಳನ್ನು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In), ಮೈಕ್ರೋಸಾಫ್ಟ್ ಡಿಫೆಂಡರ್ ಮತ್ತು ಪ್ರಮುಖ ಭಾರತೀಯ ಆಂಟಿ-ವೈರಸ್ ಕಂಪನಿಗಳಾದ ʻಕ್ವಿಕ್ ಹೀಲ್ʼ, ʻK7 ಕಂಪ್ಯೂಟಿಂಗ್ʼ ಮತ್ತು ʻನೆಟ್ ಪ್ರೊಟೆಕ್ಟರ್ʼ ಜೊತೆ
(iii) ನಾಗರಿಕರ ರಕ್ಷಣೆ: ಈ ಸಂಘಟಿತ ಮಧ್ಯಸ್ಥಿಕೆಗಳ ಮೂಲಕ, ಇಲ್ಲಿಯವರೆಗೆ 10,000 ಕ್ಕೂ ಹೆಚ್ಚು ಭಾರತೀಯರನ್ನು ಈ ವಂಚನೆಯಿಂದ ರಕ್ಷಿಸಲಾಗಿದೆ. ಸಹಯೋಗ ಪೋರ್ಟಲ್ ಮೂಲಕ ಮಾಲ್‌ವೇರ್‌ಗಳನ್ನು ನಿಯಮಿತವಾಗಿ ನಿರ್ಬಂಧಿಸಲಾಗುತ್ತಿದೆ.
(iv) '14CMHA-G' ಅಥವಾ 'I4CMHA-G' ಎಂಬ ಎಸ್‌ಎಂಎಸ್ ಶೀರ್ಷಿಕೆ ಮೂಲಕ ಎಚ್ಚರಿಕೆಗಳು:
'I4CMHA-G' ಎಸ್‌ಎಂಎಸ್ ಶೀರ್ಷಿಕೆ ಮೂಲಕ ಬಾಧಿತ ನಾಗರಿಕರಿಗೆ I4C ಎಚ್ಚರಿಕೆಗಳನ್ನು ಕಳುಹಿಸುತ್ತಿದೆ. I4C ಕಳೆದ 30 ದಿನಗಳಲ್ಲಿ 'I4CMHA-G' ಎಸ್‌ಎಂಎಸ್ ಶೀರ್ಷಿಕೆ ಮೂಲಕ 58,000ಕ್ಕೂ ಹೆಚ್ಚು ಸಂಭಾವ್ಯ ಸಂತ್ರಸ್ತರಿಗೆ ಮಾಹಿತಿ ನೀಡಿದೆ; ʻCERT-Inʼ, ಮೈಕ್ರೋಸಾಫ್ಟ್, ಭಾರತೀಯ ಆಂಟಿ-ವೈರಸ್ ಮತ್ತು ಥ್ರೆಟ್ ಇಂಟೆಲಿಜೆನ್ಸ್ ಕಂಪನಿಗಳೊಂದಿಗೆ ಬೆದರಿಕೆ ಸಂಕೇತಗಳನ್ನು ಹಂಚಿಕೊಳ್ಳಲಾಗಿದೆ. 'I4CMHA-G' ಎಸ್‌ಎಂಎಸ್ ಶೀರ್ಷಿಕೆಯಡಿ ಸ್ವೀಕರಿಸಿದ ಸಂದೇಶಗಳ ಮೇಲೆ ನಿಗಾ ಇಡಲು ಮತ್ತು ಅದರಲ್ಲಿರುವ ಸಲಹೆಯ ಮೇಲೆ ತ್ವರಿತವಾಗಿ ಕಾರ್ಯನಿರ್ವಹಿಸಲು ನಾಗರಿಕರನ್ನು ವಿನಂತಿಸಲಾಗಿದೆ.
ನಾಗರಿಕರು ಮತ್ತು ಸಂಸ್ಥೆಗಳು ಈ ಕೆಳಗಿನ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ:
- ಅಪರಿಚಿತ ಅಥವಾ ಪರಿಶೀಲಿಸದ ಮೂಲಗಳಿಂದ ಸ್ವೀಕರಿಸಿದ zip ಫೈಲ್‌ಗಳು ಅಥವಾ ಎಕ್ಸಿಕ್ಯೂಟಬಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ, ಎಕ್ಸ್‌ಟ್ರಾಕ್ಟ್ ಮಾಡಬೇಡಿ ಅಥವಾ ತೆರೆಯಬೇಡಿ. ವಾಟ್ಸ್‌ಆಪ್ ʻಅಟ್ಯಾಚ್‌ಮೆಂಟ್‌ಗಳʼ ಮೂಲಕ ಸಾಫ್ಟ್‌ವೇರ್ ಅಪ್‌ಡೇಟ್‌ಗಳು, ಭದ್ರತಾ ಫಿಕ್ಸ್‌ಗಳು ಅಥವಾ ಅಕೌಂಟ್ ಸ್ಟೇಟ್‌ಮೆಂಟ್‌ಗಳನ್ನು ಆರ್‌ಬಿಐ ನಂತಹ ನಿಯಂತ್ರಕರು ಎಂದಿಗೂ ವಿತರಿಸುವುದಿಲ್ಲ.
- ವಾಟ್ಸ್‌ಆಪ್ ಅಪ್ಲಿಕೇಶನ್‌ನಲ್ಲಿ ಲಿಂಕ್ ಮಾಡಲಾದ ಸಾಧನಗಳನ್ನು (Settings > Linked Devices) ನಿಯಮಿತವಾಗಿ ಪರಿಶೀಲಿಸಿ ಮತ್ತು ಸಕ್ರಿಯ ಬಳಕೆಯಲ್ಲಿಲ್ಲದ ವಾಟ್ಸ್‌ಆಪ್ ವೆಬ್ ಸೆಷನ್‌ಗಳಿಂದ ಲಾಗ್‌ಔಟ್ ಆಗಿ.
- ಬಳಕೆದಾರರ ಪ್ರೊಫೈಲ್ ಡೈರೆಕ್ಟರಿಗಳಿಂದ ಅಪರಿಚಿತ .exe ಮತ್ತು .dll ಫೈಲ್‌ಗಳ ಕಾರ್ಯಗತಗೊಳಿಸುವಿಕೆಯನ್ನು ನಿರ್ಬಂಧಿಸಲು ಸಿಸ್ಟಮ್ ನಿರ್ವಾಹಕರು ಸಾಫ್ಟ್‌ವೇರ್ ನಿರ್ಬಂಧ ನೀತಿಗಳನ್ನು ಜಾರಿಗೊಳಿಸಬೇಕು ಮತ್ತು ಎಲ್ಲಾ ವಿಂಡೋಸ್ ಎಂಡ್‌ಪಾಯಿಂಟ್‌ಗಲ್ಲಿ ಇತ್ತೀಚೆಗೆ ನವೀಕರಿಸಿದ ಆಂಟಿ-ಮಾಲ್‌ವೇರ್ ಪರಿಹಾರಗಳು ಚಾಲನೆಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು.
- ಒಂದು ವೇಳೆ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದರೆ, ತಕ್ಷಣವೇ ಎಲ್ಲಾ ಲಿಂಕ್ ಮಾಡಲಾದ ಸಾಧನಗಳಿಂದ ಲಾಗ್‌ಔಟ್ ಮಾಡಿ, ಖಾತೆಯಿಂದ ಸ್ವೀಕರಿಸಿದ ಯಾವುದೇ ಫೈಲ್ ಅನ್ನು ತೆರೆಯದಂತೆ ನಿಮ್ಮ ಕಾಂಟಾಕ್ಟ್ ಲಿಸ್ಟ್‌ನಲ್ಲಿರುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿ ಮತ್ತು ನವೀಕರಿಸಿದ ಆಂಟಿ-ವೈರಸ್‌ನಿಂದ ಕಂಪ್ಯೂಟರ್ ಅನ್ನು ಸ್ಕ್ಯಾನ್ ಮಾಡಿ.
ಈ ಸ್ವರೂಪದ ಸೈಬರ್ ವಂಚನೆಗಳು ಮತ್ತು ಅನುಮಾನಾಸ್ಪದ ಸಂವಹನಗಳನ್ನು ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಅಥವಾ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ www.cybercrime.gov.in ನಲ್ಲಿ ವರದಿ ಮಾಡಬೇಕು. ವಿವರವಾದ ಮಾರ್ಗಸೂಚಿಯು ಪೋರ್ಟಲ್‌ನಲ್ಲಿ ಲಭ್ಯವಿದೆ.
*****
(रिलीज़ आईडी: 2295919)
आगंतुक पटल : 11