ಕೃಷಿ ಸಚಿವಾಲಯ
ಐಸಿಎಆರ್ ನಿಂದ ಆಫ್ರಿಕನ್ ಹಂದಿ ಜ್ವರಕ್ಕೆ (ಎ ಎಸ್ ಎಫ್) ಸ್ವದೇಶಿ ಲಸಿಕೆ ಆವಿಷ್ಕಾರ: ಭಾರತದ ಜೈವಿಕ ಭದ್ರತೆಗೆ ಬಲ
ಐಸಿಎಆರ್ ಸಂಸ್ಥಾಪನಾ ದಿನದಂದು ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಅವರ ಸಮ್ಮುಖದಲ್ಲಿ ದೇಶಕ್ಕೆ ಲಸಿಕೆ ಸಮರ್ಪಿಸಿದರು
ಪಶುವೈದ್ಯಕೀಯ ಲಸಿಕೆ ತಯಾರಿಕೆಯಲ್ಲಿ 'ಆತ್ಮನಿರ್ಭರ ಭಾರತ'ದತ್ತ ಪ್ರಮುಖ ಹೆಜ್ಜೆ; ಕಡಿಮೆ ವೆಚ್ಚದ ಲಸಿಕೆಯನ್ನು ಜಗತ್ತಿಗೆ ಪೂರೈಸಲು ಭಾರತ ಸಿದ್ಧ
प्रविष्टि तिथि:
04 AUG 2026 4:14PM by PIB Bengaluru
ಆಫ್ರಿಕನ್ ಹಂದಿ ಜ್ವರ ವೈರಾಣು (ಎ ಎಸ್ ಎಫ್ ವಿ) ವಿನಿಂದ ಬರುವ ಆಫ್ರಿಕನ್ ಹಂದಿ ಜ್ವರ (ಎ ಎಸ್ ಎಫ್) ಎಂಬುದು ವಿಶ್ವದಾದ್ಯಂತ ಸಾಕು ಮತ್ತು ಕಾಡು ಹಂದಿಗಳಿಗೆ ಬರುವ ಅತ್ಯಂತ ಭೀಕರ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ. ತೀವ್ರ ಜ್ವರ, ರಕ್ತಸ್ರಾವ ಮತ್ತು ಶೇಕಡಾ 100 ರಷ್ಟು ಸಾವಿನ ಪ್ರಮಾಣವನ್ನು ಹೊಂದಿರುವ ಈ ರೋಗವು, ಜಾಗತಿಕ ಹಂದಿ ಸಾಕಾಣಿಕೆ ಕ್ಷೇತ್ರಕ್ಕೆ ಭಾರಿ ಸಾಮಾಜಿಕ ಹಾಗೂ ಆರ್ಥಿಕ ನಷ್ಟವನ್ನು ಉಂಟುಮಾಡಿದೆ. 2020 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಾಗಿನಿಂದ, ಈ ರೋಗವು ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹರಡಿದೆ. ಇದರಿಂದಾಗಿ ಅಪಾರ ಸಂಖ್ಯೆಯ ಹಂದಿಗಳು ಮೃತಪಟ್ಟಿದ್ದು, ಹಂದಿ ಉತ್ಪಾದನೆಗೆ ಅಡಚಣೆ, ಪ್ರಾಣಿಗಳ ಸಾಗಾಟ ಮತ್ತು ವ್ಯಾಪಾರದ ಮೇಲೆ ನಿರ್ಬಂಧಗಳು ಹಾಗೂ ಮುಖ್ಯವಾಗಿ ಈಶಾನ್ಯ ಭಾರತದ ಸಣ್ಣ ಹಂದಿ ಸಾಕಾಣಿಕೆದಾರರ ಜೀವನೋಪಾಯಕ್ಕೆ ಹೆಚ್ಚಿನ ಹಾನಿಯಾಗಿದೆ. ಭಾರತದಲ್ಲಿ ಸೂಕ್ತ ಚಿಕಿತ್ಸೆ ಅಥವಾ ಅನುಮೋದಿತ ಲಸಿಕೆ ಇಲ್ಲದಿದ್ದರಿಂದ, ರೋಗ ನಿಯಂತ್ರಣವು ಕೇವಲ ತ್ವರಿತ ರೋಗ ಪತ್ತೆ, ಸೋಂಕಿತ ಪ್ರಾಣಿಗಳನ್ನು ಕೊಲ್ಲುವುದು ಮತ್ತು ಕಟ್ಟುನಿಟ್ಟಿನ ಜೈವಿಕ ಭದ್ರತಾ ಕ್ರಮಗಳನ್ನು ಮಾತ್ರ ಅವಲಂಬಿಸಿತ್ತು.

ಭಾರತದಲ್ಲಿ ಈ ರೋಗ ಹರಡುವಿಕೆಯಿಂದಾದ ಆರ್ಥಿಕ ಹಾನಿ ದೊಡ್ಡದಾಗಿತ್ತು. 2020 ಮತ್ತು 2021 ರಲ್ಲಿ ಅಸ್ಸಾಂನಲ್ಲಿ ಆರಂಭದಲ್ಲಿ ರೋಗ ಬಂದಾಗ, ಹಂದಿಗಳ ಸಾವು ಮತ್ತು ಅವುಗಳನ್ನು ಕೊಂದಿದ್ದರಿಂದ ಸುಮಾರು ₹276 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಮಿಜೋರಾಂನಲ್ಲಿ 2025 ರವರೆಗೆ ಈ ರೋಗದಿಂದ 11,382 ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಈಡಾಗಿದ್ದು, ಸುಮಾರು ₹982 ಕೋಟಿ ಆರ್ಥಿಕ ನಷ್ಟವಾಗಿದೆ ಎಂದು ವರದಿಯಾಗಿದೆ. ಈ ಸಾಂಕ್ರಾಮಿಕ ರೋಗಗಳು, ರೋಗ ತಡೆಗಟ್ಟುವಿಕೆಯನ್ನು ಬಲಪಡಿಸಲು, ರೈತರ ಜೀವನೋಪಾಯವನ್ನು ರಕ್ಷಿಸಲು ಮತ್ತು ದೇಶದ ಹಂದಿ ಸಾಕಾಣಿಕೆ ರಂಗದಲ್ಲಿ ಸ್ಥಿರತೆಯನ್ನು ತರಲು ಪರಿಣಾಮಕಾರಿ ಸ್ವದೇಶಿ ಪರಿಹಾರದ ತುರ್ತು ಅಗತ್ಯವನ್ನು ಎತ್ತಿ ತೋರಿಸಿದ್ದವು.
ಈ ಪ್ರಮುಖ ಸವಾಲನ್ನು ಎದುರಿಸಲು, ಭೋಪಾಲ್ ನ ಐಸಿಎಆರ್-ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆಯ (ICAR-NIHSAD) ವಿಜ್ಞಾನಿಗಳು ಭಾರತದ ಮೊದಲ ಸ್ವದೇಶಿ 'ಎಂಎ-104 ಸೆಲ್ ಲೈನ್ ಆಧಾರಿತ ಆಫ್ರಿಕನ್ ಹಂದಿ ಜ್ವರ (ಎ ಎಸ್ ಎಫ್) ಲಸಿಕೆ' ಯನ್ನು ಅಭಿವೃದ್ಧಿಪಡಿಸಿದ್ದಾರೆ. ಎಂಎ-104 ಸೆಲ್ ಲೈನ್ ನಲ್ಲಿ ವಿಶಿಷ್ಟ ಜೀನ್ ತಿದ್ದುಪಡಿಗಳೊಂದಿಗೆ ಹೊಸ ತಳಿಯ ದುರ್ಬಲಗೊಳಿಸಿದ ಎ ಎಸ್ ಎಫ್ ವಿ ಜೆನೋಟೈಪ್-II ವೈರಾಣು ಬಳಸಿ ರೂಪಿಸಲಾದ ಈ ಲಸಿಕೆಯು, ಪಶುವೈದ್ಯಕೀಯ ಸಂಶೋಧನೆಯಲ್ಲಿ ಬಹುದೊಡ್ಡ ಮೈಲಿಗಲ್ಲಾಗಿದ್ದು, ಬೃಹತ್ ಪ್ರಮಾಣದ ಉತ್ಪಾದನೆಗೆ ಅತ್ಯಂತ ಸೂಕ್ತವಾಗಿದೆ.
ಈ ಲಸಿಕೆಯು ಪ್ರಯೋಗಾಲಯದಲ್ಲಿ ಸೂಕ್ಷ್ಮಾಣುಮುಕ್ತತೆ, ಶುದ್ಧತೆ, ಸುರಕ್ಷತೆ, ತಳಿ ಸ್ಥಿರತೆ, ರೋಗನಿರೋಧಕ ಶಕ್ತಿ, ರಕ್ಷಣಾತ್ಮಕ ಸಾಮರ್ಥ್ಯ ಮತ್ತು ವಿಷಕಣ ಮರುಕಳಿಸದಿರುವಿಕೆ ಕುರಿತಾದ ಸಂಪೂರ್ಣ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಜೊತೆಗೆ, ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಕ್ಷೇತ್ರ ಮಟ್ಟದಲ್ಲೂ ಪರೀಕ್ಷಿಸಲಾಗಿದ್ದು, ಪ್ರಯೋಗಾಲಯದಾಚೆಗೂ ಇದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವ ಸಾಬೀತಾಗಿದೆ. ಈ ಲಸಿಕೆಯನ್ನು ಎಂಟು ವಾರಗಳಿಗಿಂತ ಹೆಚ್ಚಿನ ವಯಸ್ಸಿನ ಆರೋಗ್ಯವಂತ ಹಂದಿಗಳಿಗೆ 1 ಎಂಎಲ್ ನೀಡಲು ಹಾಗೂ ಮೊದಲ ಲಸಿಕೆ ನೀಡಿದ 14 ದಿನಗಳ ನಂತರ ಬೂಸ್ಟರ್ ಡೋಸ್ ನೀಡಲು ಶಿಫಾರಸು ಮಾಡಲಾಗಿದೆ.
ಈ ಸ್ವದೇಶಿ ಲಸಿಕೆಯು ಹಂದಿಗಳ ಸಾವಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ, ಆರ್ಥಿಕ ನಷ್ಟವನ್ನು ತಡೆಯುವ ಮತ್ತು ದೇಶಾದ್ಯಂತ ಇರುವ ಹಂದಿ ಸಾಕಾಣಿಕೆದಾರರ ಜೀವನೋಪಾಯವನ್ನು ಸುಧಾರಿಸುವ ನಿರೀಕ್ಷೆಯಿದೆ. ಜಗತ್ತಿನ ಅತ್ಯಂತ ವಿನಾಶಕಾರಿ ಜಾನುವಾರು ರೋಗವೊಂದಕ್ಕೆ ಪರಿಣಾಮಕಾರಿ ತಡೆಗೋಡೆಯನ್ನು ಒದಗಿಸುವ ಮೂಲಕ, ಇದು ಭಾರತದ ಪ್ರಾಣಿ ಆರೋಗ್ಯ ಭದ್ರತೆಯನ್ನು ಗಣನೀಯವಾಗಿ ಬಲಪಡಿಸುತ್ತದೆ ಮತ್ತು ಹಂದಿ ಸಾಕಾಣಿಕೆ ಕ್ಷೇತ್ರದ ಸುಸ್ಥಿರ ಬೆಳವಣಿಗೆಗೆ ನೆರವಾಗುತ್ತದೆ.
ಡಿ ಎ ಆರ್ ಇ ಕಾರ್ಯದರ್ಶಿ ಹಾಗೂ ಐಸಿಎಆರ್ ಮಹಾನಿರ್ದೇಶಕರಾದ ಡಾ. ಎಂ.ಎಲ್. ಜಾಟ್ ಅವರು, "ಈ ಯಶಸ್ಸು ಪಶುವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಯುಗದ ಆರಂಭವಾಗಿದೆ. ಇದು ಜಾಗತಿಕ ಮಟ್ಟದ ಪ್ರಾಣಿ ಆರೋಗ್ಯ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಭಾರತದ ವೈಜ್ಞಾನಿಕ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದ್ದು, ಜಾನುವಾರುಗಳ ಆರೋಗ್ಯವನ್ನು ಬಲಪಡಿಸುವ, ರೋಗ ಎದುರಿಸುವ ಸಿದ್ಧತೆಯನ್ನು ಹೆಚ್ಚಿಸುವ ಹಾಗೂ ದೇಶದ ಆಹಾರ ಮತ್ತು ಜೈವಿಕ ಭದ್ರತೆಗೆ ಬೆಂಬಲ ನೀಡುವ ಹೊಸ ಪೀಳಿಗೆಯ ಸ್ವದೇಶಿ ಲಸಿಕೆಗಳು ಮತ್ತು ನವೀನ ತಂತ್ರಜ್ಞಾನಗಳಿಗೆ ಹಾದಿ ಮಾಡಿಕೊಡುತ್ತದೆ" ಎಂದಿದ್ದಾರೆ.
ಪ್ರಸ್ತುತ, ವಿಯೆಟ್ನಾಂನಲ್ಲಿ ಮಾತ್ರ ವಾಣಿಜ್ಯ ಬಳಕೆಯ ಪರವಾನಗಿ ಹೊಂದಿರುವ ಒಂದೆರಡು ಎ ಎಸ್ ಎಫ್ ಲಸಿಕೆಗಳು ಲಭ್ಯವಿವೆ. ಆ ಲಸಿಕೆಗಳನ್ನು ಪೇಟೆಂಟ್ ಹೊಂದಿರುವ ಖಾಸಗಿ ಹಕ್ಕುಸ್ವಾಮ್ಯದ ಸೆಲ್ ಲೈನ್ಸ್ ಬಳಸಿ ತಯಾರಿಸಲಾಗುತ್ತದೆ. ಆದರೆ, ಐಸಿಎಆರ್-ನಿಹಸಾದ್ (ICAR-NIHSAD) ಅಭಿವೃದ್ಧಿಪಡಿಸಿದ ಈ ಸ್ವದೇಶಿ ಲಸಿಕೆಯು ಸುಲಭವಾಗಿ ಲಭ್ಯವಿರುವ ಎಂಎ-104 ಸೆಲ್ ಲೈನ್ ಬಳಸುವುದರಿಂದ ಇದೊಂದು ಪ್ರಮುಖ ತಾಂತ್ರಿಕ ಕ್ರಾಂತಿಯಾಗಿದೆ. ಇದು ಖಾಸಗಿ ಉತ್ಪಾದನಾ ವೇದಿಕೆಗಳ ಮೇಲಿನ ಅವಲಂಬನೆಯನ್ನು ತಪ್ಪಿಸುತ್ತದೆ, ಲಸಿಕೆಯನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಲು ಅನುವು ಮಾಡಿಕೊಡುತ್ತದೆ ಮತ್ತು ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
*****
(रिलीज़ आईडी: 2294613)
आगंतुक पटल : 31