ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳ (ಅನುಚಿತ ಮಾರ್ಗಗಳ ತಡೆ) ತಿದ್ದುಪಡಿ ವಿಧೇಯಕ, 2026 ಅನ್ನು ಮಂಡಿಸಿದ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್


ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ವಿಧೇಯಕವು ತ್ವರಿತ ತನಿಖೆ, ವಿಶೇಷ ವೇಗದೊಗತಿಯ ನ್ಯಾಯಾಲಯಗಳು ಮತ್ತು ಕಠಿಣ ಶಿಕ್ಷೆಯ ನಿಬಂಧನೆಗಳನ್ನು ಗುರಿಯಾಗಿ ಹೊಂದಿದೆ

ಪರೀಕ್ಷಾ ಅಕ್ರಮಗಳ ವಿರುದ್ಧ ತ್ವರಿತ ನ್ಯಾಯ ಮತ್ತು ಬಲವಾದ ತಡೆಗೋಡೆಯನ್ನು ನಿರೀಕ್ಷಿಸಲಾಗಿದೆ

प्रविष्टि तिथि: 27 JUL 2026 6:46PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ; ಭೂ ವಿಜ್ಞಾನ ಸಹಾಯಕ ಸಚಿವರು (ಸ್ವತಂತ್ರ ಪ್ರಭಾರ) ಹಾಗೂ ಪ್ರಧಾನ ಮಂತ್ರಿಗಳ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಪರಮಾಣು ಇಂಧನ ಮತ್ತು ಬಾಹ್ಯಾಕಾಶ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಇಂದು ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳ (ಅನುಚಿತ ಮಾರ್ಗಗಳ ತಡೆ) ತಿದ್ದುಪಡಿ ವಿಧೇಯಕ, 2026 ಅನ್ನು ಮಂಡಿಸಿದರು.

ಈ ತಿದ್ದುಪಡಿ ವಿಧೇಯಕವು ಸಾರ್ವಜನಿಕ ಪರೀಕ್ಷೆಗಳಲ್ಲಿನ ಅನುಚಿತ ಮಾರ್ಗಗಳು ಮತ್ತು ಸಂಘಟಿತ ಅಕ್ರಮಗಳನ್ನು ಪರಿಣಾಮಕಾರಿಯಾಗಿ ತಡೆಯಲು ತ್ವರಿತ ತನಿಖೆ, ವಿಶೇಷ ವೇಗದೊಗತಿಯ ನ್ಯಾಯಾಲಯಗಳ  ಮೂಲಕ ಶೀಘ್ರ ವಿಚಾರಣೆ, ವಿಶೇಷ ಸರ್ಕಾರಿ ಅಭಿಯೋಜಕರ ನೇಮಕ, ಮೇಲ್ಮನವಿಗಳ ಕಾಲಮಿತಿಯ ವಿಲೇವಾರಿ ಮತ್ತು ಹೆಚ್ಚು ಕಠಿಣವಾದ ಶಿಕ್ಷೆಯ ನಿಬಂಧನೆಗಳನ್ನು ಒದಗಿಸುವ ಮೂಲಕ ಸಾರ್ವಜನಿಕ ಪರೀಕ್ಷೆಗಳ (ಅನುಚಿತ ಮಾರ್ಗಗಳ ತಡೆ) ಕಾಯ್ದೆ, 2024 ರ ನಿಬಂಧನೆಗಳನ್ನು ಮತ್ತಷ್ಟು ಬಲಪಡಿಸಲು ಬಯಸುತ್ತದೆ.

ಇತ್ತೀಚಿನ ವರ್ಷಗಳಲ್ಲಿ ವರದಿಯಾದ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸಂಘಟಿತ ಪರೀಕ್ಷೆಗೆ ಸಂಬಂಧಿಸಿದ ಅಕ್ರಮಗಳ ಘಟನೆಗಳ ಹಿನ್ನೆಲೆಯಲ್ಲಿ ಈಗಿರುವ ಕಾನೂನು ಚೌಕಟ್ಟನ್ನು ಬಲಪಡಿಸಲು ಪ್ರಸ್ತಾವಿತ ತಿದ್ದುಪಡಿಗಳನ್ನು ತರಲಾಗಿದೆ. ಇವು ಹೆಚ್ಚಿನ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು, ಇಂತಹ ಅಪರಾಧಗಳ ವಿರುದ್ಧ ತಡೆಗೋಡೆಯನ್ನು ಬಲಪಡಿಸಲು ಮತ್ತು ಸಾರ್ವಜನಿಕ ಪರೀಕ್ಷೆಗಳ ಪವಿತ್ರತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿವೆ.

ಅನುಚಿತ ಮಾರ್ಗಗಳನ್ನು ಅನುಸರಿಸುವ ವ್ಯಕ್ತಿಗಳಿಗೆ ಜೈಲು ಶಿಕ್ಷೆಯ ಅವಧಿಯನ್ನು ಪ್ರಸ್ತುತ ಇರುವ ಕನಿಷ್ಠ ಮೂರು ವರ್ಷಗಳಿಂದ (ಐದು ವರ್ಷಗಳವರೆಗೆ ವಿಸ್ತರಿಸಬಹುದಾದ) ಕನಿಷ್ಠ ಐದು ವರ್ಷಗಳಿಗೆ ಹೆಚ್ಚಿಸಲು ಮತ್ತು ಅದನ್ನು ಹತ್ತು ವರ್ಷಗಳವರೆಗೆ ವಿಸ್ತರಿಸಲು ವಿಧೇಯಕವು ಪ್ರಸ್ತಾವಿಸುತ್ತದೆ. ಗರಿಷ್ಠ ದಂಡವನ್ನು ಸಹ ₹10 ಲಕ್ಷದಿಂದ ₹50 ಲಕ್ಷಕ್ಕೆ ಹೆಚ್ಚಿಸಲು ಪ್ರಸ್ತಾವಿಸಲಾಗಿದೆ.
 
ಈ ಕಾಯ್ದೆಯಡಿಯಲ್ಲಿ ಅಪರಾಧಗಳಲ್ಲಿ ತೊಡಗಿಸಿಕೊಂಡಿರುವ ಸೇವಾ ಪೂರೈಕೆದಾರರಿಗೆ, ಗರಿಷ್ಠ ದಂಡವನ್ನು ₹1 ಕೋಟಿಯಿಂದ ₹5 ಕೋಟಿಗೆ ಹೆಚ್ಚಿಸಲು ಮತ್ತು ಯಾವುದೇ ಸಾರ್ವಜನಿಕ ಪರೀಕ್ಷೆಯನ್ನು ನಡೆಸುವುದರಿಂದ ಅನರ್ಹಗೊಳಿಸುವ ಅವಧಿಯನ್ನು ನಾಲ್ಕು ವರ್ಷಗಳಿಂದ ಎಂಟು ವರ್ಷಗಳಿಗೆ ವಿಸ್ತರಿಸಲು ವಿಧೇಯಕವು ಪ್ರಸ್ತಾವಿಸುತ್ತದೆ.

ಸೇವಾ ಪೂರೈಕೆದಾರರ ನಿರ್ವಹಣಾ ಸಿಬ್ಬಂದಿಗೆ ಕನಿಷ್ಠ ಐದು ವರ್ಷಗಳಿಂದ ಹಾಗೂ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ಒದಗಿಸುವ ಮೂಲಕ ಹಾಗೂ ಗರಿಷ್ಠ ದಂಡವನ್ನು ₹1 ಕೋಟಿಯಿಂದ ₹5 ಕೋಟಿಗೆ ಹೆಚ್ಚಿಸುವ ಮೂಲಕ ಹೆಚ್ಚಿನ ಶಿಕ್ಷೆಯನ್ನು ವಿಧೇಯಕವು ಪ್ರಸ್ತಾವಿಸುತ್ತದೆ.

ಸಂಘಟಿತ ಪರೀಕ್ಷೆಗೆ ಸಂಬಂಧಿಸಿದ ಅಪರಾಧಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು, ತಿದ್ದುಪಡಿ ವಿಧೇಯಕವು ಕನಿಷ್ಠ ಜೈಲು ಶಿಕ್ಷೆಯ ಅವಧಿಯನ್ನು ಐದು ವರ್ಷಗಳಿಂದ ಏಳು ವರ್ಷಗಳಿಗೆ (ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ) ಹೆಚ್ಚಿಸಲು ಮತ್ತು ಗರಿಷ್ಠ ದಂಡವನ್ನು ₹1 ಕೋಟಿಯಿಂದ ₹10 ಕೋಟಿಗೆ ಹೆಚ್ಚಿಸಲು ಪ್ರಸ್ತಾವಿಸುತ್ತದೆ.

ಕಾಯ್ದೆಯಡಿಯಲ್ಲಿನ ಅಪರಾಧಗಳ ತನಿಖೆಯನ್ನು ಈ ಉದ್ದೇಶಕ್ಕಾಗಿ ರಚಿಸಲಾದ ವಿಶೇಷ ಕಾರ್ಯಪಡೆಗೆ  ವಹಿಸಲು ಈ ವಿಧೇಯಕವು ಕೇಂದ್ರ ಸರ್ಕಾರಕ್ಕೆ ಮತ್ತಷ್ಟು ಅಧಿಕಾರ ನೀಡುತ್ತದೆ.

ತ್ವರಿತ ತನಿಖೆ ಮತ್ತು ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು, ವಿಧೇಯಕವು ಹೊಸ ‘ಸೆಕ್ಷನ್ 12A’ ಅನ್ನು ಸೇರಿಸಲು ಪ್ರಸ್ತಾವಿಸುತ್ತದೆ. ಇದು ಎರಡು ತಿಂಗಳ ಒಳಗೆ ತನಿಖೆಯನ್ನು ಪೂರ್ಣಗೊಳಿಸುವುದು, ಈ ಕಾಯ್ದೆಯಡಿಯ ಅಪರಾಧಗಳ ದಿನನಿತ್ಯದ ವಿಚಾರಣೆಗಾಗಿ ಸೆಷನ್ಸ್ ನ್ಯಾಯಾಲಯಗಳನ್ನು ವಿಶೇಷ ವೇಗದೊಗತಿಯ ನ್ಯಾಯಾಲಯಗಳಾಗಿ  ನಿಯೋಜಿಸುವುದು, ಚಾರ್ಜ್ ಶೀಟ್ ಸಲ್ಲಿಸಿದ ದಿನಾಂಕದಿಂದ ಮೂರು ತಿಂಗಳ ಒಳಗೆ ವಿಚಾರಣೆಯನ್ನು ಪೂರ್ಣಗೊಳಿಸುವುದು ಮತ್ತು ಪ್ರತಿಯೊಂದು ವಿಶೇಷ ವೇಗದೊಗತಿಯ ನ್ಯಾಯಾಲಯಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡುವುದಕ್ಕೆ ಅವಕಾಶ ಕಲ್ಪಿಸುತ್ತದೆ.

ವಿಶೇಷ ವೇಗದೊಗತಿಯ ನ್ಯಾಯಾಲಯದ ಯಾವುದೇ ತೀರ್ಪು, ಆದೇಶ ಅಥವಾ ಶಿಕ್ಷೆಯ ವಿರುದ್ಧ ಮೂವತ್ತು ದಿನಗಳ ಅವಧಿಯಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು ಮತ್ತು ಸಾಧ್ಯವಾದಷ್ಟು ಮಟ್ಟಿಗೆ ಮೂರು ತಿಂಗಳ ಅವಧಿಯಲ್ಲಿ ಅದನ್ನು ವಿಲೇವಾರಿ ಮಾಡಲಾಗುವುದು ಎಂದು ಒದಗಿಸುವ ಹೊಸ ‘ಸೆಕ್ಷನ್ 12B’ ಅನ್ನು ಸೇರಿಸಲು ವಿಧೇಯಕವು ಪ್ರಸ್ತಾವಿಸುತ್ತದೆ.

ಫೆಬ್ರವರಿ 12, 2024 ರಂದು ಅಂಗೀಕರಿಸಲ್ಪಟ್ಟು, ಜೂನ್ 21, 2024 ರಿಂದ ಜಾರಿಗೆ ತರಲಾದ ಸಾರ್ವಜನಿಕ ಪರೀಕ್ಷೆಗಳ (ಅನುಚಿತ ಮಾರ್ಗಗಳ ತಡೆ) ಕಾಯ್ದೆ, 2024, ಸಾರ್ವಜನಿಕ ಪರೀಕ್ಷೆಗಳಲ್ಲಿ ಅನುಚಿತ ಮಾರ್ಗಗಳನ್ನು ತಡೆಯಲು ಸಮಗ್ರ ರಾಷ್ಟ್ರೀಯ ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಈ ಕಾಯ್ದೆಯು ಕೇಂದ್ರ ಸಾರ್ವಜನಿಕ ಸೇವಾ ಆಯೋಗ (UPSC), ಸಿಬ್ಬಂದಿ ನೇಮಕಾತಿ ಆಯೋಗ (SSC), ರೈಲ್ವೆ ನೇಮಕಾತಿ ಮಂಡಳಿಗಳು (RRB), ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS), ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA), ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳು ಹಾಗೂ ನೇಮಕಾತಿಗಾಗಿ ಅವುಗಳ ಸಂಯೋಜಿತ ಮತ್ತು ಅಧೀನ ಕಚೇರಿಗಳು ಮತ್ತು ಕೇಂದ್ರ ಸರ್ಕಾರದಿಂದ ಅಧಿಸೂಚಿಸಲ್ಪಡುವ ಇತರ ಪ್ರಾಧಿಕಾರಗಳು ನಡೆಸುವ ಪರೀಕ್ಷೆಗಳಿಗೆ ಅನ್ವಯಿಸುತ್ತದೆ. ಈ ಕಾಯ್ದೆಯಡಿಯಲ್ಲಿನ ಎಲ್ಲಾ ಅಪರಾಧಗಳು ಸಂಜ್ಞೇಯ (cognizable), ಜಾಮೀನು ರಹಿತ (non-bailable) ಮತ್ತು ರಾಜಿ-ರಹಿತವಾಗಿದ್ದು, ಜೈಲು ಶಿಕ್ಷೆ, ದಂಡ ಮತ್ತು ಆಸ್ತಿ ಮುಟ್ಟುಗೋಲಿಗೆ ಸಂಬಂಧಿಸಿದ ಕಠಿಣ ನಿಯಮಗಳನ್ನು ಒಳಗೊಂಡಿವೆ.

ಪ್ರಸ್ತಾವಿತ ತಿದ್ದುಪಡಿಗಳು ಪ್ರಶ್ನೆ ಪತ್ರಿಕೆ ಸೋರಿಕೆ, ಆಳುಮಾರಾಟ ಮತ್ತು ಸಂಘಟಿತ ವಂಚನೆ ಸೇರಿದಂತೆ ಪರೀಕ್ಷೆಗೆ ಸಂಬಂಧಿಸಿದ ಅಕ್ರಮಗಳನ್ನು ತಡೆಯಲು ಕಾನೂನು ಚೌಕಟ್ಟನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ, ಜೊತೆಗೆ ತ್ವರಿತ ತನಿಖೆ, ಶೀಘ್ರ ವಿಚಾರಣೆ ಮತ್ತು ಮೇಲ್ಮನವಿಗಳ ಕಾಲಮಿತಿಯ ವಿಲೇವಾರಿಯನ್ನು ಖಚಿತಪಡಿಸುತ್ತವೆ. ಇಂತಹ ಅಪರಾಧಗಳ ವಿರುದ್ಧ ತಡೆಗೋಡೆಯನ್ನು ಬಲಪಡಿಸುವ ಮೂಲಕ ಮತ್ತು ತ್ವರಿತ ನ್ಯಾಯ ವಿತರಣೆಯನ್ನು ಖಚಿತಪಡಿಸುವ ಮೂಲಕ, ತಿದ್ದುಪಡಿ ವಿಧೇಯಕವು ಸಾರ್ವಜನಿಕ ಪರೀಕ್ಷೆಗಳ ಪವಿತ್ರತೆ, ನಿಷ್ಪಕ್ಷಪಾತತೆ ಮತ್ತು ಪಾರದರ್ಶಕತೆಯನ್ನು ಎತ್ತಿಹಿಡಿಯಲು, ಅರ್ಹ ಮತ್ತು ಪ್ರತಿಭಾವಂತ ಅಭ್ಯರ್ಥಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಹಾಗೂ ದೇಶದ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ಪವಿತ್ರತೆ, ನಿಷ್ಪಕ್ಷಪಾತತೆ ಮತ್ತು ಪಾರದರ್ಶಕತೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸಲು ಶ್ರಮಿಸುತ್ತದೆ.

 

*****


(रिलीज़ आईडी: 2290184) आगंतुक पटल : 19
इस विज्ञप्ति को इन भाषाओं में पढ़ें: English , Urdu , हिन्दी , Marathi , Gujarati , Tamil , Malayalam