ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 26.07.2026 ರಂದು ಮಾಡಿದ ‘ಮನ್ ಕಿ ಬಾತ್’ – 136ನೇ ಸಂಚಿಕೆಯ ಕನ್ನಡ ಅವತರಣಿಕೆ

प्रविष्टि तिथि: 26 JUL 2026 12:08PM by PIB Bengaluru

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ.

ನಮ್ಮ ಜೀವನದಲ್ಲಿ ಕೆಲವು ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಲುಕ್ಯಾಲೆಂಡರ್ ಅಗತ್ಯವೇ ಇರುವುದಿಲ್ಲ. ಇಂದು, ಅಂದರೆ ಜುಲೈ 26, ಅಂತಹದ್ದೇ ಒಂದು ದಿನಾಂಕವಾಗಿದೆ. ಇಂದು ‘ಕಾರ್ಗಿಲ್ ವಿಜಯ ದಿವಸ’. ಈ ದಿನ ನಮ್ಮಲ್ಲಿ ಹೆಮ್ಮೆಯನ್ನು ತುಂಬುತ್ತದೆ. ಇದು ನಮ್ಮ ವೀರ ಸೈನಿಕರ ಅಸಾಧಾರಣ ಧೈರ್ಯವನ್ನುನೆನಪಿಸುತ್ತದೆ. ಕಾರ್ಗಿಲ್ಲಿನಎತ್ತರವಾದ ಶಿಖರಗಳು, ಪ್ರತಿಕೂಲ ಹವಾಮಾನ, ಶತ್ರುಗಳ ತೀವ್ರ ಸವಾಲುಗಳು ಮತ್ತು ಎಲ್ಲ ರೀತಿಯಪರಿಸ್ಥಿತಿಗಳು—ಇವೆಲ್ಲವೂ ನಮ್ಮ ಯೋಧರ ಮುಂದಿದ್ದವು. ಆದರೆ, ಅವರ ಅಚಲ ಧೈರ್ಯ, ಅಸಾಧಾರಣ ಶೌರ್ಯ ಮತ್ತು ದೇಶಭಕ್ತಿಯಸಂಕಲ್ಪವು ಪ್ರತಿಯೊಂದು ಸವಾಲಿಗಿಂತಲೂ ಎತ್ತರವಾಗಿ ನಿಂತಿತು. ಮಾತೃಭೂಮಿಯ ಭದ್ರತೆ, ಸ್ವಾಭಿಮಾನ ಮತ್ತು ಸಾರ್ವಭೌಮತ್ವವನ್ನು ಕಾಪಾಡುವ ಉದ್ದೇಶದಿಂದ ಅವರು ತಮ್ಮ ಸರ್ವಸ್ವವನ್ನು ಭಾರತ ಮಾತೆಗೆ ಸಮರ್ಪಿಸಿದರು. ಇಂದು ‘ಕಾರ್ಗಿಲ್ ವಿಜಯ ದಿವಸ’ ದಂದು ನಾನು ಎಲ್ಲ ವೀರ ಸೈನಿಕರಿಗೆ ಮತ್ತು ಹುತಾತ್ಮರಿಗೆಶೃದ್ಧೆಯಿಂದನಮಿಸುತ್ತೇನೆ.

ಸ್ನೇಹಿತರೇ,

ಇಂದು ಭಾರತ ತನ್ನ ವೀರರನ್ನುಸ್ಮರಿಸಿಕೊಳ್ಳುವುದು ಮಾತ್ರವಲ್ಲದೆ, ಹೊಸ ಪೀಳಿಗೆಗೆ ಅವರ ಗಾಥೆಯನ್ನು ತಿಳಿಸುತ್ತದೆ. ಇದೇ ಭಾವನೆಯೊಂದಿಗೆ, ಈ ವರ್ಷ ಒಂದು ವಿಶೇಷ ‘ಶೌರ್ಯ ವಿಜಯ ಯಾತ್ರೆ’ ಯನ್ನು ಆಯೋಜಿಸಲಾಗಿದೆ. ಜುಲೈ 14 ರಂದು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಿಂದ ಪ್ರಾರಂಭವಾಗಿರುವ ಈ ಮೋಟಾರ್ ಸೈಕಲ್ ಯಾತ್ರೆ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕವನ್ನು ತಲುಪಲಿದೆ. “One Ride, One Nation, One Salute” ಎಂಬುದೇ ಇದರ ಸಂದೇಶವಾಗಿದೆ. ರಾಷ್ಟ್ರಕ್ಕಾಗಿ ಮಾಡಿದ ತ್ಯಾಗವನ್ನು ಎಂದಿಗೂ ಮರೆಯಲಾಗದು ಎಂಬುದನ್ನು ಈ ಯಾತ್ರೆ ನಮಗೆ ನೆನಪಿಸುತ್ತದೆ.

ಸ್ನೇಹಿತರೇ,

ಇಂದು ಭಾರತವು ತನ್ನ ಸೈನಿಕರ ಸಾಹಸದ ಜೊತೆ ಜೊತೆಗೆ, ತನ್ನ ತಾಂತ್ರಿಕ ಸಾಮರ್ಥ್ಯಗಳನ್ನು ನಿರಂತರವಾಗಿ ಬಲಪಡಿಸುತ್ತಿದೆ. ಕೆಲವು ದಿನಗಳ ಹಿಂದೆ, ಐಎನ್‌ಎಸ್ಮಹೇಂದ್ರಗಿರಿಯನ್ನು ಭಾರತೀಯ ನೌಕಾಪಡೆಗೆ ಸೇರಿಸಲಾಯಿತು. ಈ ಆಧುನಿಕ ಯುದ್ಧನೌಕೆಯನ್ನು ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಿ ಭಾರತದಲ್ಲಿಯೇ ನಿರ್ಮಿಸಲಾಗಿದೆ. ಶೇಕಡ 75ಕ್ಕೂ ಹೆಚ್ಚು ಸ್ಥಳೀಯ ವಸ್ತುಗಳನ್ನು ಇದರಲ್ಲಿ ಬಳಸಲಾಗಿದೆ. ಇದು 'ಆತ್ಮ ನಿರ್ಭರ ಭಾರತ - ಸ್ವಾವಲಂಬಿ ಭಾರತ’ದ ವೃದ್ಧಿಸುತ್ತಿರುವ ಶಕ್ತಿಯ ಸಂಕೇತವಾಗಿದೆ. ಈ ತಿಂಗಳು, ಡಿಆರ್‌ಡಿಒ ಪಿನಾಕಾ Long Range Guided Rocket ಅನ್ನು ಕೂಡ ಯಶಸ್ವಿಯಾಗಿ ಪರೀಕ್ಷಿಸಿತು. ಈ ಯಶಸ್ಸಿನ ಹಿಂದೆ ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಸಾಮೂಹಿಕ ಪರಿಶ್ರಮ ಅಡಗಿದೆ. ಕೇವಲ ಎರಡು ಅಥವಾ ಮೂರು ದಿನಗಳ ಹಿಂದೆ, ಕುಶಾ ಕ್ಷಿಪಣಿಯನ್ನು ಸಹ ಡಿಆರ್‌ಡಿಒ ಯಶಸ್ವಿಯಾಗಿ ಪರೀಕ್ಷಿಸಿತು.

ಸ್ನೇಹಿತರೇ,

ಇಂದು ರಕ್ಷಣಾ ಉತ್ಪಾದನೆಯಾಗಲಿ, ರಕ್ಷಣಾ ರಫ್ತುಗಳಾಗಲಿ ಅಥವಾ ಸ್ನೇಹಪರ ರಾಷ್ಟ್ರಗಳೊಂದಿಗೆ ರಾಜಕೀಯ ಸಹಕಾರವಾಗಲಿ - ಭಾರತ ನಿರಂತರವಾಗಿ ಹೊಸ ಎತ್ತರಕ್ಕೆ ಏರುತ್ತಿದೆ. ಈ ತಿಂಗಳ ಆರಂಭದಲ್ಲಿ, ನಾನು ಇಂಡೋನೇಷ್ಯಾದಲ್ಲಿದ್ದೆ, ಅಲ್ಲಿ ಬ್ರಹ್ಮೋಸ್ ಮತ್ತು ಅಸ್ತ್ರ ಎಂಬ ಕ್ಷಿಪಣಿಗಳ ಕುರಿತು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಭಾರತದ ರಕ್ಷಣಾ ಉಪಕರಣಗಳು ಮತ್ತು ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ವಿಶ್ವಾಸ ವೃಧ್ಧಿಸುತ್ತಿದೆ. ಬನ್ನಿ ಈ 'ಕಾರ್ಗಿಲ್ ವಿಜಯ್ ದಿವಸ್'ದಂದು, ನಮ್ಮ ಅಮರ ಹುತಾತ್ಮರಿಗೆ ಗೌರವ ಸಲ್ಲಿಸೋಣ ಮತ್ತು ಸುರಕ್ಷಿತ, ಸಮರ್ಥ ಮತ್ತುಆತ್ಮನಿರ್ಭರ- ಸ್ವಾವಲಂಬಿ ಭಾರತವನ್ನು ನಿರ್ಮಿಸುವ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸೋಣ.

ನನ್ನ ಪ್ರಿಯ ದೇಶವಾಸಿಗಳೇ,

ಮನದ ಮಾತಿನ ಹಿಂದಿನ ಸಂಚಿಕೆಯಲ್ಲಿ, 'ಕ್ಯಾಚ್ದಿರೈನ್' ಅಭಿಯಾನದ ಬಗ್ಗೆ ನಾನು ನಿಮ್ಮೊಂದಿಗೆ ಮಾತನಾಡಿದ್ದೆ. ಪ್ರತಿ ಹನಿ ಮಳೆಯನ್ನು ಸಂರಕ್ಷಿಸುವ ಈ ಅಭಿಯಾನವನ್ನು ಸಾಮೂಹಿಕ ಚಳುವಳಿಯಾಗಿ ಪರಿವರ್ತಿಸಬೇಕೆಂದು ಆಗ್ರಹಿಸಿದ್ದೆ. 'ಕ್ಯಾಚ್ದಿರೈನ್' ಸಂದೇಶವು ತುಂಬಾ ಸರಳವಾಗಿದೆ: ಎಲ್ಲಿ ಮಳೆ ಬೀಳುವುದೋ ಮತ್ತು ಯಾವಾಗ ಮಳೆ ಬೀಳುವುದೋ ಆಗ ನೀರನ್ನು ಸಂಗ್ರಹಿಸಿ. ಈ ನಿಟ್ಟಿನಲ್ಲಿ ಜುಲೈ 4 ರಿಂದ ರಾಷ್ಟ್ರವ್ಯಾಪಿ ವಿಶೇಷ ಅಭಿಯಾನ ಕೂಡಾ ನಡೆಯುತ್ತಿದೆ. ಈ ಉಪಕ್ರಮದಡಿಯಲ್ಲಿ, ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ, ಹಳೆಯ ಜಲಮೂಲಗಳ ಪುನರುಜ್ಜೀವನ ಮತ್ತು ವೃಕ್ಷಾರೋಪಣವನ್ನು ಮತ್ತಷ್ಟು ಉತ್ತೇಜಿಸಲಾಗುತ್ತಿದೆ. ಗ್ರಾಮಗಳಾಗಲಿ ಅಥವಾ ನಗರಗಳಾಗಲಿ, ಪಂಚಾಯತ್‌ಗಳು ಅಥವಾ ಸಾಮಾಜಿಕ ಸಂಸ್ಥೆಗಳಾಗಲಿ ಎಲ್ಲೆಡೆ ಜನರು ಉತ್ಸಾಹದಿಂದ ಭಾಗವಹಿಸುತ್ತಿರುವುದು ನನಗೆ ಬಹಳ ಸಂತಸ ತಂದಿದೆ. ಕೆಲವೆಡೆ, ಹಳೆಯ ಕೆರೆಗಳಿಂದ ಹೂಳು ತೆಗೆಯಲಾಗುತ್ತಿದ್ದರೆ, ಇನ್ನು ಕೆಲವೆಡೆ, ಬಾವಿಗಳು ಮತ್ತು ಮೆಟ್ಟಿಲು ಬಾವಿಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಬಳಕೆಯಾಗದಬೋರ್‌ವೆಲ್‌ಗಳು ಈಗ ಅಂತರ್ಜಲ ಮರುಪೂರಣಕ್ಕೆ ಮಾಧ್ಯಮಗಳಾಗಿವೆ.

ಸ್ನೇಹಿತರೇ,

ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಸುಮಾರು 1,500 ಕೊಳಗಳನ್ನು ನಿರ್ಮಿಸಲಾಗಿದೆ. ನರಸಿಂಗ್‌ಪುರದಲ್ಲಿ 'ಅಮೃತ ಸರೋವರಗಳು' ಅಂದರೆ ಪುನರುಜ್ಜೀವನಗೊಂಡ ಜಲಮೂಲಗಳನ್ನು ಪುನಃಸ್ಥಾಪಿಸಲಾಗಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಗಮನಾರ್ಹ ಮಟ್ಟದಲ್ಲಿ ಜಲ ಸಂಗ್ರಹ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲಾಗಿದೆ. ಆಂಧ್ರಪ್ರದೇಶದ ನಂದ್ಯಾಲ್‌ನಲ್ಲಿ, ಎಲ್ಲಾ ಗ್ರಾಮ ಪಂಚಾಯತ್‌ಗಳು ಈ ಅಭಿಯಾನಕ್ಕೆ ಸೇರಿಕೊಂಡಿವೆ. ಅಲ್ಲದೆ ಹಳೆಯ ಕೆರೆಗಳನ್ನು ಮತ್ತೆ ಜನೋಪಯೋಗಿಗೊಳಿಸಲಾಗಿದೆ. ನಮ್ಮ ನಗರಗಳು ಸಹ ಹಿಂದುಳಿದಿಲ್ಲ, ಛತ್ತೀಸ್‌ಗಢದ ಕೋರ್ಬಾ, ಒಡಿಶಾದ ಭುವನೇಶ್ವರ ಮತ್ತು ಆಂಧ್ರಪ್ರದೇಶದ ವಿಜಯನಗರಂ ನಲ್ಲಿ ಈ ಅಭಿಯಾನದ ಉತ್ಸಾಹಪೂರ್ವಕ ಫಲಿತಾಂಶಗಳು ಗೋಚರಿಸುತ್ತಿವೆ. ಬನ್ನಿ ನಮ್ಮ ಸುತ್ತಮುತ್ತಲಿನ ಕೊಳ, ಬಾವಿ ಅಥವಾ ಮೆಟ್ಟಿಲುಬಾವಿಯ ಜವಾಬ್ದಾರಿಯನ್ನು ವಹಿಸಿಕೊಳ್ಳೋಣ. ಪ್ರತಿ ಹನಿ ನೀರನ್ನು ಉಳಿಸೋಣ. ಇಂದು ಉಳಿಸಲಾದ ಪ್ರತಿಯೊಂದು ಹನಿಯೂ ಮುಂಬರುವ ಪೀಳಿಗೆಯ ಭವಿಷ್ಯಕ್ಕೆ ದೊಡ್ಡ ಆಸ್ತಿಯಾಗಲಿದೆ.

ನನ್ನ ಪ್ರಿಯ ದೇಶಬಾಂಧವರೆ,

ಕೆಲವೇ ದಿನಗಳ ಹಿಂದೆ  ಗ್ಲಾಸ್ಗೋದಲ್ಲಿ ಕಾಮನ್‌ವೆಲ್ತ್ಕ್ರೀಡಾಕೂಟವು ಪ್ರಾರಂಭವಾಯಿತು. ಪ್ರತಿಯೊಬ್ಬ ಭಾರತೀಯರೂ ಭಾರತೀಯ ತಂಡಗಳಿಗೆ ನಿರಂತರವಾಗಿ ತಮ್ಮ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ. ಎಲ್ಲಾ ಆಟಗಾರರು ಮತ್ತು ಕ್ರೀಡಾಪಟುಗಳು ಅಸಾಧಾರಣ ಪ್ರದರ್ಶನ ನೀಡಿ ಜನರ ಹೃದಯ ಗೆಲ್ಲಬೇಕೆಂಬುದು ಅವರ ಆಶಯ. ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ನಮ್ಮ ಯುವಕರು ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ. ಜಪಾನ್ ಓಪನ್ ಬ್ಯಾಡ್ಮಿಂಟನ್ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಿ ವಿ ಸಿಂಧು ಪಾತ್ರರಾಗಿದ್ದಾರೆ. ಅವರ ಈ ಸಾಧನೆ ಬಗ್ಗೆ ಇಡೀ ರಾಷ್ಟ್ರ ಹೆಮ್ಮೆಪಡುತ್ತದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯವನ್ನುಗೆದ್ದಿದೆ. ಇದು ಐತಿಹಾಸಿಕ ಗೆಲುವು. ನಮ್ಮ ತಂಡ 270ರನ್‌ಗಳ ಬೃಹತ್ ಅಂತರದಿಂದ ಪಂದ್ಯವನ್ನು ಗೆದ್ದಿದೆ. ಆದರೆ ವಿಷಯ ಇಷ್ಟಕ್ಕೆ ಸೀಮಿತವಾಗಿಲ್ಲ; ಲಾರ್ಡ್ಸ್‌ನ ಸುದೀರ್ಘ ಇತಿಹಾಸದಲ್ಲಿ ಮಹಿಳಾ ತಂಡದ ಮೊದಲ ಟೆಸ್ಟ್ ಪಂದ್ಯ ಇದಾಗಿತ್ತು. 1983ರಲ್ಲಿ ಭಾರತ ತನ್ನ ಮೊದಲ ಕ್ರಿಕೆಟ್ ವಿಶ್ವಕಪ್ ಅನ್ನು ಗೆದ್ದಿದ್ದು ಇದೇ ಮೈದಾನದಲ್ಲಿ. ಈಗ, ನಮ್ಮ 'ನಾರಿ ಶಕ್ತಿ' ಇಲ್ಲಿ ರಾಷ್ಟ್ರದ ಹೆಸರನ್ನು ಪ್ರಕಾಶಮಾನಗೊಳಿಸಿದೆ.

ಸ್ನೇಹಿತರೇ,

ಅತ್ಯಂತ ಮಹತ್ವಪೂರ್ಣವಾದಂತಹ ಕೆಲವು ಸಣ್ಣ ಉಪಕ್ರಮಗಳು ಸಹ ಇವೆ. ಕೇರಳದ ಎರ್ನಾಕುಲಂನ ದಕ್ಷಿಣ ಚಿತ್ತೂರಿನಲ್ಲಿ ಅಂತಹ ಒಂದು ಕ್ರೀಡಾ-ಸಂಬಂಧಿತ ಉಪಕ್ರಮದ ಬಗ್ಗೆ ನನಗೆ ತಿಳಿದುಬಂದಿದೆ. ಅಲ್ಲಿನ ಒಂದು ಶಾಲೆಯಲ್ಲಿ ಸಂಸ್ಕೃತ ಕ್ಲಬ್ ಇದೆ. ಈ ಶಾಲೆಯ ಅಭಿಲಾಷ್ ಎನ್ನುವ ಶಿಕ್ಷಕಿ ಬಹಳ ವಿಶಿಷ್ಟ ರೀತಿಯಲ್ಲಿ ಸಂಸ್ಕೃತವನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಈ ಉಪಕ್ರಮಕ್ಕೆ 'ಅಕ್ಷರಕಂದುಕ್' ಎಂದು ಹೆಸರಿಡಲಾಗಿದೆ. ಇದರಲ್ಲಿ ಸಂಸ್ಕೃತ ಅಕ್ಷರಗಳನ್ನು ಫುಟ್‌ಬಾಲ್‌ನಲ್ಲಿ ಬಳಸುವ ಪದಗಳಿಗೆ ಜೋಡಿಸುವ ಮೂಲಕ ಸರಳ ರೀತಿಯಲ್ಲಿ ವಿವರಿಸಲಾಗುತ್ತದೆ. ಇದರಿಂದ ಕಲಿಕೆ ಆನಂದದಾಯಕವಾಗುತ್ತದೆ ಮತ್ತು ಜನರು ಮತ್ತು ಕ್ರೀಡೆಗಳತ್ತ ಜನರ ಆಕರ್ಷಣೆ ಹೆಚ್ಚುತ್ತದೆ.

ನನ್ನ ಪ್ರಿಯ ದೇಶವಾಸಿಗಳೇ,

ಕಳೆದ ಭಾನುವಾರ ವಿಕ್ರಮ್ -1 ರ ಯಶಸ್ವಿ ಉಡಾವಣೆಯ ನಂತರ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಬೀಗುತ್ತಿದ್ದಾನೆ. ಭಾರತದ ಬಾಹ್ಯಾಕಾಶ ವಲಯದ ಯಶಸ್ಸಿನ ಈ ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಇದು ಖಾಸಗಿ ವಲಯದಿಂದ ಅಭಿವೃದ್ಧಿಪಡಿಸಲ್ಪಟ್ಟ ಭಾರತದ ಮೊದಲ ರಾಕೆಟ್ ಆಗಿದೆ. ಒಂದು ಕಾಲದಲ್ಲಿ ಕಲ್ಪನೆಗೂ ಎಟುಕದಂತಹದ್ದು ಎಂದು ಪರಿಗಣಿಸಲ್ಪಟ್ಟ ರಾಕೆಟ್ ಅನ್ನು ಇಂದು ನಮ್ಮ ಯುವ ನಾವೀನ್ಯಕಾರರು ಸಾಧಿಸಿ ತೋರಿಸಿದ್ದಾರೆ. ಅವರು ಗಮನಾರ್ಹ ರೀತಿಯಲ್ಲಿ ತಮ್ಮ ಕೌಶಲ್ಯ, ಉತ್ಸಾಹ ಮತ್ತು ತಾಳ್ಮೆಯನ್ನು ಪ್ರದರ್ಶಿಸಿದ್ದಾರೆ. ಸುದೀರ್ಘಕಾಲದವರೆಗೆ, ನಮ್ಮ ಬಾಹ್ಯಾಕಾಶ ವಲಯ ಖಾಸಗಿ ವಲಯಕ್ಕೆಮುಕ್ತವಾಗಿರಲಿಲ್ಲ. ಹಾಗಾಗಿ ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ಅನೇಕ ಯುವಕರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಲಭಿಸುತ್ತಿರಲಿಲ್ಲ. ಯುವಕರಹಿತಾಸಕ್ತಿಗಳನ್ನುಗಮನದಲ್ಲಿಟ್ಟುಕೊಂಡು, ನಾವು ಬಾಹ್ಯಾಕಾಶವಲಯವನ್ನು ಖಾಸಗಿ ಉದ್ಯಮಕ್ಕೆಮುಕ್ತಗೊಳಿಸಿದ್ದೇವೆ. ಇಂದು, ಅದರ ಫಲಿತಾಂಶಗಳಿಗೆ ಜಗತ್ತು ಸಾಕ್ಷಿಯಾಗುತ್ತಿದೆ.

ಸ್ನೇಹಿತರೇ,

ನಮ್ಮ ಯುವಕರು ವಿಜ್ಞಾನ ಕ್ಷೇತ್ರದಲ್ಲಿಯೂ ಭಾರತದಹಿರಿಮೆಯನ್ನು ಉಚ್ಛ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ವಿಜ್ಞಾನ ಒಲಿಂಪಿಯಾಡ್‌ಗಳು ವಿಶ್ವದ ಪ್ರಮುಖ ಸ್ಪರ್ಧೆಗಳ ಪಟ್ಟಿಗೆ ಸೇರಿವೆ. ಈ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಇದೇ ತಿಂಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿಒಲಿಂಪಿಯಾಡ್‌ಗಳು ನಡೆದವು. ಈ ಸ್ಪರ್ಧೆಗಳಲ್ಲಿ ಭಾರತೀಯ ತಂಡವು ಅದ್ಭುತ ಪ್ರದರ್ಶನ ನೀಡಿತು. ಭೌತಶಾಸ್ತ್ರ ಒಲಿಂಪಿಯಾಡ್‌ನಲ್ಲಿ, ನಮ್ಮ ಐವರು ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಗೆದ್ದರು ಮತ್ತು ಭಾರತವು ಅಗ್ರ ಶ್ರೇಯಾಂಕವನ್ನುಪಡೆದುಕೊಂಡಿತು.

ಕಳೆದ ದಶಕದಲ್ಲಿ, ಪ್ರತಿ ಭೌತಶಾಸ್ತ್ರ ಒಲಿಂಪಿಯಾಡ್‌ನಲ್ಲಿಯೂ ನಮ್ಮ ದೇಶದ ವಿದ್ಯಾರ್ಥಿಗಳು ಚಿನ್ನ ಅಥವಾ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ರಸಾಯನಶಾಸ್ತ್ರ ಒಲಿಂಪಿಯಾಡ್‌ನಲ್ಲಿಯೂ ಸಹ, ನಮ್ಮ ಎಲ್ಲಾ ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನುಗೆದ್ದಿದ್ದಾರೆ. ಇಲ್ಲಿಯವರೆಗಿನ ನಮ್ಮ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಜೀವಶಾಸ್ತ್ರ ಒಲಿಂಪಿಯಾಡ್‌ನಲ್ಲಿ ಕೂಡಾ ನಮ್ಮ ಎಲ್ಲಾ ವಿದ್ಯಾರ್ಥಿಗಳು ಚಿನ್ನದ ಪದಕ ಸೇರಿದಂತೆ ಅನೇಕ ಪದಕಗಳನ್ನುಗೆದ್ದಿದ್ದಾರೆ. ಅದೇ ರೀತಿ, ಗಣಿತ ಒಲಿಂಪಿಯಾಡ್‌ನಲ್ಲಿ, ನಮ್ಮ ವಿದ್ಯಾರ್ಥಿಗಳು ಎರಡು ಚಿನ್ನ ಮತ್ತು ನಾಲ್ಕು ಬೆಳ್ಳಿ ಪದಕಗಳನ್ನುಗಿಟ್ಟಿಸಿಕೊಂಡರು. ದೇಶದ ಯುವ ಶಕ್ತಿಯ ಬಗ್ಗೆ ನನಗೆ ಅಪಾರ ಹೆಮ್ಮೆ ಎನಿಸುತ್ತದೆ. ಒಲಿಂಪಿಯಾಡ್‌ಗಳು ಮತ್ತು ಹ್ಯಾಕಥಾನ್‌ಗಳ ಸಂಸ್ಕೃತಿ ಭಾರತದಲ್ಲಿ ಸ್ಥಿರವಾಗಿ ಬೆಳೆಯುತ್ತಿರುವುದನ್ನು ನೋಡಿ ಬಹಳ ಸಂತೋಷವಾಗುತ್ತದೆ. ದೇಶದ ಹೆಚ್ಚು ಹೆಚ್ಚು ಯುವಕರು ಇಂತಹ ವೇದಿಕೆಗಳಲ್ಲಿ ಆಸಕ್ತಿ ತೋರಿಸುತ್ತಾರೆ ಮತ್ತು ಭಾರತಕ್ಕೆ ಕೀರ್ತಿ ತರುತ್ತಾರೆ ಎಂದು ನನಗೆ ವಿಶ್ವಾಸವಿದೆ.

ನನ್ನ ಪ್ರಿಯ ದೇಶಬಾಂಧವರೆ,

ಪ್ರತಿಭೆ ಮತ್ತು ಏನನ್ನಾದರೂ ಸಾಧಿಸುವ ಛಲ ಎರಡನ್ನೂ ಹೊಂದಿರುವಾಗ, ಪ್ರತಿಯೊಂದು ಮಾರ್ಗವು ಸುಲಭವಾಗುತ್ತದೆ. ಕಾಶ್ಮೀರದ ಸಾಂಪ್ರದಾಯಿಕ 'ವಗು' ಚಾಪೆಯ ಕುರಿತು ಪ್ರಸ್ತುತ ಮಾಡಲಾಗುತ್ತಿರುವಪ್ರಯತ್ನಗಳಲ್ಲಿ ಇಂತಹ ಒಂದು ನೋಟವನ್ನು ನಾವು ಕಾಣಬಹುದು. ಇದನ್ನು ಜೊಂಡು ಮತ್ತು ಭತ್ತದ ಹುಲ್ಲಿನಿಂದ ಸಿದ್ಧಪಡಿಸಲಾಗುತ್ತದೆ. ಈ ಚಾಪೆ ತಯಾರಿಸುವ ಸಂಪ್ರದಾಯ ಹಲವಾರು ವರ್ಷಗಳಷ್ಟು ಹಿಂದಿನದು. ಈ ಪ್ರಕ್ರಿಯೆಯು ಕಾಶ್ಮೀರದ ಜೌಗು ಪ್ರದೇಶಗಳಿಂದ ಹುಲ್ಲು ಮತ್ತು ಜೊಂಡುಗಳನ್ನು ಕೊಯ್ಲು ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಬಿಸಿಲಿನಲ್ಲಿ ಒಣಗಿಸಿ ವಸ್ತುಗಳನ್ನು ವಿಂಗಡಿಸಿ ಸ್ವಚ್ಚಗೊಳಿಸಿದ ನಂತರ, ಕೈಯಿಂದ ನೇಯ್ಗೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಇಬ್ಬರು ಕುಶಲಕರ್ಮಿಗಳು ಒಂದು ಚಾಪೆಯನ್ನುನೇಯಲು ಸುಮಾರು ನಾಲ್ಕು ದಿನಗಳು ಬೇಕಾಗುತ್ತದೆ. ಈ ಚಾಪೆ ವಿಶಿಷ್ಟವಾಗಿದೆ ಮತ್ತು ಪರಿಸರ ಸ್ನೇಹಿಯೂ ಆಗಿದೆ.

ಈ ಚಾಪೆಯ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಬೇಸಿಗೆಯಲ್ಲಿ ಇದು ತಂಪನ್ನು ಮತ್ತು ಚಳಿಗಾಲದಲ್ಲಿ ಉಷ್ಣತೆಯನ್ನು ನೀಡುತ್ತದೆ. ಹಿಂದೆ ಪ್ರತಿ ಕಾಶ್ಮೀರಿ ಮನೆಯಲ್ಲೂ ಇದು ಕಂಡುಬರುತ್ತಿದ್ದರೂ, ಕಳೆದ ಕೆಲವು ವರ್ಷಗಳಿಂದ ಇದರ ಬಳಕೆ ಗಣನೀಯವಾಗಿಕಡಿಮೆಯಾಗಿದೆ. ಇಂಥ ಪರಿಸ್ಥಿತಿಯಲ್ಲಿ, ಶ್ರೀನಗರದ ಗುಲಾಮ್ ಹುಸೇನ್ ಅವರು ಮತ್ತು ಅವರ ಮಗಳು ತಂಝಿಲಾ ಒಂದು ಪ್ರತಿಜ್ಞೆ ಕೈಗೊಂಡರು. ಇಬ್ಬರೂ 'ವಗು' ಕರಕುಶಲತೆಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ಟೊಂಕ ಕಟ್ಟಿ ನಿಂತರು. ಗುಲಾಮ್ ಹುಸೇನ್ ಅವರು ಬಹಳ ಸಾಧಾರಣ ಕುಟುಂಬದ ಹಿನ್ನೆಲೆಯವರು. ಈ ಪ್ರಯತ್ನದಲ್ಲಿ ಅವರು ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಆದಾಗ್ಯೂ, 'ವಗು' ಅನ್ನು ಸಂರಕ್ಷಿಸುವ ಅವರ ಸಂಕಲ್ಪವು ದೃಢವಾಗಿತ್ತು. ನೋಡ ನೋಡುತ್ತಲೇ ಈ ಉಪಕ್ರಮಕ್ಕೆ ಬಹಳಷ್ಟು ಜನರು ಕೈ ಜೋಡಿಸಿದರು. ಗುಲಾಮ್ ಹುಸೇನ್ ಅವರು ಈ ಕರಕುಶಲತೆಯನ್ನು ಸಾಕಷ್ಟು ಅಭಿವೃದ್ಧಿಪಡಿಸಿದರು. ತಮ್ಮ ಧ್ಯೇಯಕ್ಕಾಗಿ ಅವರಿಗೆ ಸ್ಥಳೀಯ ಮಟ್ಟದಲ್ಲಿ ಸರ್ಕಾರದ ಬೆಂಬಲ ಕೂಡ ಲಭಿಸಿತು. ಇಂದು, ಬಹಳಷ್ಟು ಜನಪ್ರಿಯತೆಯನ್ನುಗಳಿಸುತ್ತಿರುವ'ವಗು' ದೇಶದ ಇತರ ಭಾಗಗಳನ್ನು ಸಹ ತಲುಪುತ್ತಿದೆ. ಈ ಪ್ರಯತ್ನದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ಇಂದು, ನಾವೆಲ್ಲರೂ ಸ್ಥಳೀಯ ಉತ್ಪನ್ನಗಳಿಗೆ ಒತ್ತು ನೀಡುತ್ತಿದ್ದೇವೆ; 'ವೋಕಲ್ ಫಾರ್ ಲೋಕಲ್ - ಸ್ಥಳೀಯ ವಸ್ತುಗಳಿಗೆ ಪ್ರಾಧಾನ್ಯತೆ' ಎಂಬ ಮಂತ್ರದೊಂದಿಗೆ ನಾವು ಮುಂದುವರಿಯುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ, ಕಾಶ್ಮೀರದ 'ವಗು' ನಿಮ್ಮ ಮನೆಯನ್ನೂಅಲಂಕರಿಸಲಿ ಎಂಬ ಬಗ್ಗೆ ಆಲೋಚಿಸಿ.

ಸ್ನೇಹಿತರೇ,

ನಮ್ಮ ದೇಶದಲ್ಲಿ ‘ಚಹಾ’ ಕೇವಲ ಪಾನೀಯ ಮಾತ್ರವಲ್ಲ, - ಇದು ಒಂದು ರೀತಿಯ ಆತ್ಮೀಯತೆಯ ಅನುಭೂತಿಯೂ ಆಗಿದೆ. ಬೆಳಗಿನ ಆರಂಭವೇ ಇರಲಿ, ಸ್ನೇಹಿತರೊಂದಿಗೆ ಭೇಟಿಯೇ ಇರಲಿ, ಅಥವಾ ಕುಟುಂಬದರೊಡನೆ ಕೆಲ ಕಾಲ ಕಳೆಯುವ ಸಮಯವೇ ಇರಲಿ, ‘ಚಹಾ’ ಪ್ರತಿಯೊಂದು ಸಂದರ್ಭದ ಭಾಗವೇ ಆಗಿಬಿಡುತ್ತದೆ. ಹಾಗೆಯೇ ಚಹಾದೊಂದಿಗೆ ನನ್ನ ಸಂಬಂಧ ಏನೆಂದು ನಿಮಗೆಲ್ಲಾ ತಿಳಿದೇ ಇದೆ. ಆದರೆ ಇಂದು ನಾನು ಮಾತನಾಡುತ್ತಿರುವ ಚಹಾ ಕೇವಲ ರುಚಿಯನ್ನು ಮಾತ್ರವಲ್ಲದೇ, ಅನೇಕ ಸೋದರಿಯರ ಜೀವನದಲ್ಲಿ ಸ್ವಾವಲಂಬನೆಯ ಹೊಸ ಸುವಾಸನೆಯನ್ನು ಕರಗಿಸಿ ತುಂಬಿಸಿದೆ. ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಲಖೀವಾಲಾ ಗ್ರಾಮದಲ್ಲಿ ಸ್ವ ಸಹಾಯ ಗುಂಪಿನೊಂದಿಗೆ ತೊಡಗಿಕೊಂಡಿರುವ ಮಹಿಳೆಯರು ‘ವಿದುರ್ ಪ್ರೇರಣಾ ಸ್ವದೇಶೀ ಹರ್ಬಲ್ ಟೀ’ ತಯಾರಿಸಿದ್ದಾರೆ. ಇದರಲ್ಲಿ ನಿಂಬೆ ಹುಲ್ಲು,ಅಮೃತಬಳ್ಳಿ, ಜ್ಯೇಷ್ಠಮಧು, ತುಳಸಿ, ಕಚ್ಚಾ ಅರಿಶಿಣ, ದಾಲ್ಚಿನ್ನಿ, ಏಲಕ್ಕಿ ಮತ್ತು ಸೋಂಪು ಇತ್ಯಾದಿ ನೈಸರ್ಗಿಕ ವಸ್ತುಗಳು ಬೆರೆತಿವೆ. ತನ್ನ ವಿಶಿಷ್ಟ ರುಚಿ ಮತ್ತು ಗುಣಲಕ್ಷಣಗಳಿಂದಾಗಿ,ಈ ಚಹಾ ಬಹಳ ಕಡಿಮೆ ಸಮಯದಲ್ಲಿ ಜನಪ್ರಿಯತೆಯನ್ನುಗಳಿಸಿದೆ. ಈ ಗಿಡಮೂಲಿಕೆ ಚಹಾವುಪ್ರಯಾಗ್‌ ರಾಜ್‌ ನಲ್ಲಿ ನಡೆದ ಮಹಾ ಕುಂಭಮೇಳ ಮತ್ತು ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಆಹಾರ ಉತ್ಸವದಲ್ಲಿ ವ್ಯಾಪಕ ಪ್ರಶಂಸೆಯನ್ನುಗಳಿಸಿದೆ. ವಿದೇಶಗಳಿಂದ ಬಂದ ಪ್ರವಾಸಿಗರು ಸಹ ಇದರ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ವಿದೇಶಗಳಿಂದ ಬಂದವರು ಕೂಡಾ ಇದರ ಬಗ್ಗೆ ಬಹಳ ಆಸಕ್ತಿ ತೋರಿದ್ದರು.

ಸ್ನೇಹಿತರೇ,

ಅತ್ಯಂತ ಸ್ಪೂರ್ತಿದಾಯಕವಿಷಯವೆಂದರೆ ಇದರ ಆರಂಭ. ಈ ಸಂಪೂರ್ಣ ಪ್ರಯತ್ನವು ಕೇವಲ ಒಂದು ಲಕ್ಷ ರೂಪಾಯಿನಿಂದ ಪ್ರಾರಂಭವಾಯಿತು. ಇಂದು,ಈ ಬ್ರ್ಯಾಂಡ್ದೇಶಾದ್ಯಂತ ಪ್ರಮುಖ ಸಂಸ್ಥೆಗಳನ್ನು ತಲುಪಿದೆ. ಸ್ಥಳೀಯ ಜ್ಞಾನ,ಪ್ರಕೃತಿ ಮತ್ತು ಮಹಿಳೆಯರ ಆತ್ಮವಿಶ್ವಾಸ ಒಟ್ಟಿಗೆ ಸೇರಿದಾಗ,ಒಂದು ಸಣ್ಣ ಪ್ರಯತ್ನ ಕೂಡ ದೊಡ್ಡ ಬದಲಾವಣೆಯಆರಂಭವಾಗಬಹುದು ಎಂದು ಈ ಉಪಕ್ರಮವು ನಮಗೆ ಸಾರುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು ದೇಶಾದ್ಯಂತ,ಜನರು "ತಾಯಿಯ ಹೆಸರಿನಲ್ಲಿ ಒಂದು ವೃಕ್ಷ" ಅಭಿಯಾನದ ಮೂಲಕ ಪ್ರಕೃತಿಯ ಕಡೆಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಸಮಾಜವು ಈ ಮನೋಭಾವದೊಂದಿಗೆಸಂಪರ್ಕಗೊಂಡಾಗ,ಅನೇಕ ಸುಂದರ ಮತ್ತು ಸ್ಪೂರ್ತಿದಾಯಕ ಉದಾಹರಣೆಗಳು ಹೊರಹೊಮ್ಮುತ್ತವೆ. ಸ್ನೇಹಿತರೇ, ಅಹಮದಾಬಾದ್ ನಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯ ಅದ್ಭುತ ಶಕ್ತಿಯನ್ನು ಪ್ರದರ್ಶಿಸಲಾಯಿತು. ಭಾಡಜ್ ಪ್ರದೇಶದಲ್ಲಿ ಒಂದು ಗಂಟೆಯೊಳಗೆ 3.5 ಲಕ್ಷಕ್ಕೂ ಹೆಚ್ಚು ಸಸಿಗಳನ್ನುನೆಡಲಾಯಿತು, 25,000  ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಶಾಲಾ ಮಕ್ಕಳು,ಎನ್‌ ಸಿಸಿ ಕೆಡೆಟ್‌ ಗಳು,ಸ್ವಯಂಸೇವಕರು ಮತ್ತು ನಾಗರಿಕರು ಎಲ್ಲರೂ ಈ ಅಭಿಯಾನದಲ್ಲಿ ಭಾಗವಹಿಸಿದ್ದರು. ಮುಂಬರುವ ವರ್ಷಗಳಲ್ಲಿ,ಈ ಸಸಿಗಳು ದಟ್ಟವಾದ ನಗರಾರಣ್ಯವನ್ನು ರೂಪಿಸುತ್ತವೆ. ಈ ಪ್ರಯತ್ನವನ್ನುಗಿನ್ನೆಸ್ ಪುಸ್ತಕದಲ್ಲಿ ದಾಖಲಿಸಲಾಗಿದೆ. ಸ್ನೇಹಿತರೇ, "ತಾಯಿಯ ಹೆಸರಿನಲ್ಲಿ ಒಂದು ಮರ" ಅಭಿಯಾನದ ಅಡಿಯಲ್ಲಿ,ಉತ್ತರ ಪ್ರದೇಶದಲ್ಲಿಯೂಜನಶಕ್ತಿಯ ಅದ್ಭುತ ಸಂಕಲ್ಪ ಕಂಡುಬಂದಿದೆ. ಜುಲೈ 12 ರಂದು ಒಂದೇ ದಿನದಲ್ಲಿ 35 ಕೋಟಿಗೂ ಹೆಚ್ಚು ಸಸಿಗಳನ್ನು ಅಲ್ಲಿ ನೆಡಲಾಯಿತು. ಉತ್ತರ ಪ್ರದೇಶದ ಸಂಸತ್ಸದಸ್ಯನಾಗಿ,ಇದು ನನಗೆ ವಿಶೇಷ ಹೆಮ್ಮೆಯ ವಿಷಯವಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಮರ ಕೇವಲ ಮನುಷ್ಯರಿಗಾಗಿ ಮಾತ್ರವಲ್ಲ, ಇದು ಅಸಂಖ್ಯಾತ ಜೀವರಾಶಿಗೆ ನಿವಾಸವೂ ಆಗಿರುತ್ತದೆ. ಗುಜರಾತ್ ನ ಗಿರ್ ಕಾಡುಗಳಲ್ಲಿ ಸುಮಾರು 60 ವರ್ಷಗಳ ನಂತರ ಭಾರತೀಯ ಬೂದು ಮಂಗಟ್ಟೆ ಹಕ್ಕಿಗಳು ಪುನಃ ತಮ್ಮ ಗೂಡು ಕಟ್ಟುತ್ತಿವೆ. ಇದು ಗಿರ್ ನಲ್ಲಿ ವರ್ಷಗಳಿಂದ ನಡೆಯುತ್ತಾ ಬಂದಿರುವ ಸಂರಕ್ಷಣೆ ಮತ್ತು ಪುನರ್ಸ್ಥಾಪನೆ ಪ್ರಯತ್ನಗಳ ಫಲವಾಗಿದೆ. ಮಂಗಟ್ಟೆ ಪಕ್ಷಿಗಳನ್ನು ಕಾಡುಗಳ ರೈತ ಎಂದು ಕರೆಯಲಾಗುತ್ತದೆ. ಇವು ಹಣ್ಣುಗಳನ್ನು ತಿನ್ನುತ್ತವೆ ಮತ್ತು ಬೀಜಗಳನ್ನು ದೂರ ದೂರವರೆಗೆ ತಲುಪಿಸುತ್ತವೆ, ಅವೇ ಬೀಜಗಳಿಂದ ಕಾಡಿನಲ್ಲಿ ಹೊಸ ಮರಗಳು ತಲೆಯೆತ್ತುತ್ತವೆ ಈ ರೀತಿ ಒಂದು ಹಕ್ಕಿ ಕಾಡನ್ನು ಪುನಃ ಹಸಿರಿನಿಂದ ನಳ ನಳಿಸುವಂತೆ ಮಾಡುವುದರಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಜೀವನದಲ್ಲಿನ ಕೆಲವು ವಿಶೇಷ ಸಂದರ್ಭಗಳನ್ನುಪ್ರಕೃತಿಯೊಂದಿಗೆಸಂಪರ್ಕಿಸಲು ನಾನು ನಿಮ್ಮೆಲ್ಲರಲ್ಲೂ ಕೇಳುತ್ತೇನೆ. ತಾಯಿಯ ಹೆಸರಿನಲ್ಲಿ ಒಂದು ಗಿಡವನ್ನುನೆಡಿ. ಇಂದು ನೆಟ್ಟ ಒಂದು ಸಣ್ಣ ಸಸಿ ಹಸಿರು, ಶುದ್ಧ ಗಾಳಿ ಮತ್ತು ಮುಂದಿನ ಪೀಳಿಗೆಗೆ ಸುಂದರ ಭವಿಷ್ಯದ ಪರಂಪರೆಯಾಗಬಹುದು.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು ಪ್ಲಾಸ್ಟಿಕ್ ಮಾಲಿನ್ಯ ಇಡೀ ವಿಶ್ವದ ಪರಿಸರಕ್ಕೆ ಭಾರೀ ಸವಾಲೆನಿಸಿದೆ ಎಂಬುದು ನಿಮಗೆಲ್ಲಾ ತಿಳಿದಿರುವ ವಿಷಯವೇ ಆಗಿದೆ. ಏಕ ಬಳಕೆ ಪ್ಲಾಸ್ಟಿಕ್ ನ ತ್ಯಾಜ್ಯವು ವರ್ಷಗಳ ಕಾಲ ಪ್ರಕೃತಿಗೆಹಾನಿಯುಂಟು ಮಾಡುತ್ತಲೇ ಇರುತ್ತದೆ. ಆದ್ದರಿಂದ ಪ್ಲಾಸ್ಟಿಕ್ ನ ಸರಿಯಾದ ವಿಲೇವಾರಿ ಅತ್ಯಗತ್ಯವಾಗಿದೆ. ಸ್ನೇಹಿತರೇ, ಬಿಹಾರದ ಸೀತಾಮಢಿಯಲ್ಲಿ, ಕಸದಿಂದ ರಸ - ‘Waste to Wealth’ ನ ಒಂದು ಅದ್ಭುತ ಉದಾಹರಣೆ ಕಂಡುಬಂದಿದೆ. ಇಲ್ಲಿ ತ್ಯಾಜ್ಯದ ರಿಸೈಕ್ಲಿಂಗ್ ಮಾಡಿ ಅದರಿಂದ ಆಕರ್ಷಕ ಬೆಂಚು ತಯಾರಿಸಲಾಗುತ್ತಿದೆ. ಒಂದು ಬೆಂಚು ತಯಾರಾಗಲು, ಸುಮಾರು 40 ಕಿಲೋ ಏಕ ಬಳಕೆ ಪ್ಲಾಸ್ಟಿಕ್ ಬಳಸಲಾಗುತ್ತದೆ. ಇದು ಬಲವಾಗಿರುತ್ತದೆ, ಬಾಳಿಕೆ ಬರುತ್ತದೆ ಮತ್ತು ಆರಾಮದಾಯಕವಾಗಿರುವ ಜೊತೆಯಲ್ಲಿ ಪರಿಸರ-ಸ್ನೇಹಿಯೂ ಆಗಿರುತ್ತದೆ. ಇದನ್ನು ಸರ್ಕಾರಿ ಶಾಲೆಗಳಲ್ಲಿ, ಉದ್ಯಾನವನಗಳಲ್ಲಿ, ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ನೆಲೆಗೊಳಿಸಲಾಗುತ್ತದೆ. ಇದರ ಮೂಲಕ ಜನರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿಯೂ ಹೆಚ್ಚಾಗುತ್ತಿದೆ. ಈ ಪ್ರಯತ್ನದಲ್ಲಿ ಸ್ಥಳೀಯ ಘಟಕ ಹಾಗೂ ಜಿಲ್ಲಾಡಳಿತ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಇದು ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನುಸೃಷ್ಟಿಸುತ್ತಿದೆ. ಸೀತಾಮಡಿಯಲ್ಲಿನ ಈ ಉಪಕ್ರಮವುರೆಡ್ಯೂಸ್, ರೀಯೂಸ್ ಮತ್ತು ರೀಸೈಕಲ್ ಎನ್ನುವುದು ಕೇವಲ ಘೋಷಣೆಗಳಲ್ಲ,ಬದಲಾಗಿ ನಮ್ಮ ಜೀವನದ ಒಂದು ಭಾಗವಾಗುತ್ತಿದೆ ಎಂಬುದನ್ನು ತೋರಿಸುತ್ತದೆ.

ಸ್ನೇಹಿತರೇ,

ಕಳೆದ ಬಾರಿ ಮನ್ ಕಿ ಬಾತ್ ನಲ್ಲಿ ನಾನು ‘ಗಣೇಶ ಹಬ್ಬದ’ ಬಗ್ಗೆ ಮಾತನಾಡಿದ್ದು ನಿಮಗೆ ನೆನಪಿರಬಹುದು. ನಾವು ನಮ್ಮ ದೇಶದ ಮಣ್ಣಿನಿಂದಲೇ ತಯಾರಿಸಲಾದ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಬೇಕೆಂದು ನಾನು ಮನವಿ ಮಾಡಿದ್ದೆ. POP (ಪಿ.ಒ.ಪಿ.) ನಿಂದ ತಯಾರಿಸಲಾದ ಗಣೇಶ ಮೂರ್ತಿಯಾಗಲೀ ಅಥವಾ ವಿದೇಶದಿಂದ ಬಂದ ಗಣೇಶನ ಪ್ರತಿಮೆಯೇ ಆಗಿರಲಿ ಅದರ ಬದಲು ನಾವು ನಮ್ಮದೇ ದೇಶದ ಮಣ್ಣಿನಿಂದ ತಯಾರಿಸಲಾದ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಬೇಕು. ಈ ವಿಷಯ ಕುರಿತಂತೆ ಅನೇಕರು ನನಗೆ ಸಂದೇಶ ಕಳಿಸಿದ್ದಾರೆ ಮತ್ತು ತಮ್ಮ ಚಿಂತನೆಗಳನ್ನು ತಿಳಿಯಪಡಿಸಿದ್ದಾರೆ. ತಾವು ನನ್ನ ಈ ಮನವಿಯನ್ನು ಪಾಲಿಸುವುದಾಗಿ ತಿಳಿಸಿದ್ದಾರೆ. ಸ್ಥಳೀಯ ಮಣ್ಣಿನಿಂದ ತಯಾರಿಸಲಾಗುವ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಸಂಕಲ್ಪ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಈ ವಿಷಯವನ್ನು ಈಗಾಗಲೇ "ಮನ್ಕಿಬಾತ್" ನಲ್ಲಿ ಚರ್ಚಿಸಲಾಗಿದೆ ಮತ್ತು ಅದು ಸರಿಯಾದ ಸಮಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿದೆ ಎಂದು ಜನರು ಬರೆದಿದ್ದಾರೆ. ನಾನು ನನ್ನ ವಿನಂತಿಯನ್ನುಪುನರುಚ್ಚರಿಸುತ್ತೇನೆ: ಈ ಗಣೇಶನ ಹಬ್ಬದಂದುನಿಮ್ಮ ಮನೆಯಲ್ಲಿ ಸ್ಥಳೀಯ ಮಣ್ಣಿನಿಂದ ಮಾಡಿದ ಗಣೇಶನ ವಿಗ್ರಹವನ್ನು ಸ್ಥಾಪಿಸಿ ಮತ್ತು ಅವನನ್ನು ಪೂಜಿಸಿ. ನಿಮ್ಮ ಈ ಪ್ರಯತ್ನವುಪ್ರಕೃತಿಯನ್ನುಆರಾಧಿಸುವ ಒಂದು ರೂಪವೂ ಆಗಿರುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನೀವು ಬಹಳ ಹೆಮ್ಮೆ ಪಡುವಂತಹ ಓರ್ವ ವ್ಯಕ್ತಿಯ ಬಗ್ಗೆ ಈಗ ನಾನು ನಿಮಗೆ ತಿಳಿಸಲಿದ್ದೇನೆ. ವಿಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವ ಈ ವ್ಯಕ್ತಿ, ಜಗತ್ತಿನಲ್ಲಿ ಮನ್ನಣೆ ಗಳಿಸುತ್ತಿರುವ ವ್ಯಕ್ತಿಯಾದರೂ, ತಮ್ಮ ಮೂಲ ಬೇರುಗಳೊಂದಿಗೆ ಆಳವಾದ ಸಂಪರ್ಕ ಹೊಂದಿರುವ ವ್ಯಕ್ತಿ ಇವರಾಗಿದ್ದಾರೆ. ಅವಕಾಶ ದೊರೆತಾಗಲೆಲ್ಲಾ ತಮ್ಮ ಮಣ್ಣನ್ನು ಗೌರವಿಸುವುದನ್ನು ಎಂದಿಗೂ ಮರೆಯದ ಆ ವ್ಯಕ್ತಿಯೇ ಮಣಿಪುರದ Dr. Ronaldo Laishram. ಅವರ ಹೆಸರು ರೊನಾಲ್ಡೋ ಆದರೆ ಅವರ ಕೆಲಸ ಖಗೋಳ ಭೌತ ಶಾಸ್ತ್ರಜ್ಞನದ್ದು. ಇವರು ಜಪಾನ್ ದೇಶದಲ್ಲಿ ಕೆಲಸ ಮಾಡುತ್ತಾರೆ ಮತ್ತು ಯಂಗ್ ಗೆಲಕ್ಸಿಗಳ ದೊಡ್ಡ ಸಮೂಹವನ್ನು ಕಂಡುಹಿಡಿದ ತಂಡದ ಭಾಗವಾಗಿದ್ದರು. ಅವರು ಮಾಡಿದ ಕೆಲಸ ಏನೆಂದು ನೀವು ತಿಳಿಯಲು ಬಯಸಬಹುದು. ವಾಸ್ತವದಲ್ಲಿ, ಅವರು ಈ ಸಂಪೂರ್ಣ ಕ್ಲಸ್ಟರ್‌ ಗೆ ಮಣಿಪುರದಸುಂದರವಾದ ಸರೋವರದ ಲೋಕ್ಟಕ್ಪ್ರೋಟೋ-ಕ್ಲಸ್ಟರ್ ಎಂದು ಹೆಸರಿಸಿದ್ದಾರೆ. ಲೋಕ್ಟಕ್ ಒಂದು ದೊಡ್ಡ ಸಿಹಿನೀರಿನಸರೋವರವಾಗಿದೆ. ಲೋಕ್ಟಕ್ಸರೋವರದಲ್ಲಿರುವ ತೇಲುವ ಫಮ್ಡಿಗಳು ಒಟ್ಟಾಗಿ ಒಂದು ವಿಶಿಷ್ಟ ಭೂದೃಶ್ಯವನ್ನುಸೃಷ್ಟಿಸುತ್ತವೆ. ಸಣ್ಣ ದ್ವೀಪಗಳು ವಿಶಾಲ ಸಾಗರದಲ್ಲಿತೇಲುತ್ತಿರುವಂತೆ ಕಾಣುತ್ತದೆ. ಅದೇ ರೀತಿ, ವಿಶ್ವದಲ್ಲಿರುವ ಈ ಯಂಗ್ ತಾರಾಗಣಗಳು ಕೂಡಾ ಒಂದು ದೊಡ್ಡ ರಚನೆಯನ್ನು ರೂಪಿಸುತ್ತವೆ. ಇಂದು ಮಣಿಪುರದ ಲೋಕ್ಟಕ್ ಕೇವಲ ದೇಶದ ಭೂಪಟದಲ್ಲಿ ಮಾತ್ರವಲ್ಲದೆ, ವಿಶಾಲ ವಿಶ್ವದಲ್ಲಿ ಕೂಡಾ ಪ್ರಕಾಶಮಾನವಾಗಿ ಹೊಳಪನ್ನು ಪ್ರಸರಿಸುತ್ತಿದೆ. ಈ ಸಾಧನೆಯ ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಹೆಚ್ಚಿಸುವಂತಹದ್ದಾಗಿದೆ. ತಮ್ಮ ಸಂಪ್ರದಾಯಗಳೊಂದಿಗೆಸಂಪರ್ಕದಲ್ಲಿರುತ್ತಲೇ ಹೊಸ ಎತ್ತರವನ್ನುತಲುಪಬಹುದು ಎಂಬುದನ್ನು ಇದು ನಮ್ಮ ಯುವಜನತೆಗೆ ಕಲಿಸುತ್ತದೆ. ಇವು ನಕ್ಷತ್ರಗಳಜಗತ್ತನ್ನೂಪ್ರಜ್ವಲಿಸುವಂತೆ ಮಾಡುವ ಬೇರುಗಳಾಗಿವೆ. |

ನನ್ನ ಪ್ರೀತಿಯ ದೇಶವಾಸಿಗಳೇ,

ಕೆಲವೇ ದಿನಗಳ ನಂತರ ಆಗಸ್ಟ್ 7 ರಂದು ನಮ್ಮ ದೇಶ ‘ರಾಷ್ಟ್ರೀಯ ಕೈಮಗ್ಗ ದಿನ’ ಆಚರಿಸಲಿದೆ. ಈ ಸಂದರ್ಭದಲ್ಲಿ,ನಾವು ನಮ್ಮ ನೇಕಾರ ಸೋದರ-ಸೋದರಿಯರ ಕೌಶಲ್ಯ ಮತ್ತು ಸೃಜನಶೀಲತೆಯನ್ನುಆಚರಿಸುತ್ತೇವೆ. ನಮ್ಮ ಈ ಸಹೋದ್ಯೋಗಿಗಳು ತಲೆಮಾರುಗಳಿಂದ ಬಂದ ಸಂಪ್ರದಾಯಗಳನ್ನುಮುಂದುವರೆಸುತ್ತಿದ್ದಾರೆ.

ಸ್ನೇಹಿತರೇ,

ಕೈಮಗ್ಗದಲ್ಲಿ ತಯಾರಾಗುವ ಪ್ರತಿಯೊಂದು ಉಡುಪೂ ಒಂದಲ್ಲಾ ಒಂದು ಪ್ರದೇಶ, ಸಮುದಾಯ ಮತ್ತು ಇದರೊಂದಿಗೆ ಇರುವ ಅಸಂಖ್ಯಾತ ಜನರ ಕತೆಯನ್ನು ನಮ್ಮ ಮುಂದೆ ಇಡುತ್ತದೆ. ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಹೆಮ್ಮೆಯಿಂದ ಸಂರಕ್ಷಿಸುವಲ್ಲಿ ತೊಡಗಿರುವ ಜನರು ಇವರಾಗಿದ್ದಾರೆ. ಈ ದಿನದಂದು,ಕರಕುಶಲ ವಸ್ತುಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಸಹ ನೇಕಾರರನ್ನುಗೌರವಿಸಬೇಕೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಸ್ಥಳೀಯರಿಗೆಧ್ವನಿಯಾಗುವ, ಅವರನ್ನು ಪ್ರೋತ್ಸಾಹಿಸುವ (ವೋಕಲ್ ಫಾರ್ ಲೋಕಲ್) ಮನೋಭಾವವನ್ನು ಮತ್ತಷ್ಟು ಬಲಪಡಿಸೋಣ.

ಸ್ನೇಹಿತರೇ,

ದೇಶದಲ್ಲಿ ಈಗ ಕೈಮಗ್ಗಕ್ಕೆ ನೀಡಲಾಗುತ್ತಿರುವ ಉತ್ತೇಜನದಿಂದಾಗಿ, ಹೆಚ್ಚಿನ ಜನರ ಜೀವನದಲ್ಲಿ ಸಾಕಷ್ಟು ಸುಧಾರಣೆಯಾಗುತ್ತಿದೆ. ಪೋಚಂಪಲ್ಲಿಯಿಂದ ಪಾಟ್ನಾ ಮತ್ತು ಕುಥಮ್ ಪಲ್ಲಿಯಿಂದ ಕಛ್ ವರೆಗೂ ಇದರ ಹಲವು ಉದಾಹರಣೆಗಳು ಕಾಣಸಿಗುತ್ತವೆ. ಇಂದು ಕೈಮಗ್ಗದ ನಮ್ಮ ಹೆಮ್ಮೆಯ ಸಂಪ್ರದಾಯಕ್ಕೆ ಹೊಸ ಶಕ್ತಿ ಮತ್ತು ಗುರುತು ನೀಡುತ್ತಿರುವ ಹಲವು ವ್ಯಕ್ತಿಗಳು ಮತ್ತು ಸಮೂಹಗಳಿವೆ. ಕೆಲವು ‘ಪೋಚಂಪಲ್ಲಿ ಇಕ್ಕತ್’ ನ ಸುಂದರ ಸಂಪ್ರದಾಯವನ್ನು ಮುಂದುವರಿಸುತ್ತಿದ್ದರೆ, ಮತ್ತೆ ಕೆಲವು ಮಹಿಳಾ ನೇಕಾರರನ್ನು ಒಗ್ಗೂಡಿಸಿ ಉಣ್ಣೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಕೆಲವರು ಕೇರಳದ ಸಾಂಪ್ರದಾಯಿಕ 'ಕಸಾವು ಕಲೆ'ಯನ್ನು ಸಂರಕ್ಷಿಸುತ್ತಿದ್ದಾರೆ. ಇದು ನಮ್ಮ ತಾಯಂದಿರು ಮತ್ತು ಸೋದರಿಯರಿಗೆಉದ್ಯೋಗವನ್ನೂಒದಗಿಸುತ್ತಿದೆ.

ಸ್ನೇಹಿತರೇ,

ನಾನು ವಿಶೇಷವಾಗಿ ಉಲ್ಲೇಖಿಸಲು ಬಯಸುವ ಮತ್ತೊಂದು ವಿಷಯವಿದೆ, ಅದೇ ‘ಖಾದಿ’. ‘ಖಾದಿ’ ಮಹಾತ್ಮಾಗಾಂಧಿಯವರಿಗೆ ಬಹಳ ಪ್ರೀತಿಪಾತ್ರವಾಗಿತ್ತೆಂದು ನಮಗೆಲ್ಲರಿಗೂ ತಿಳಿದಿದೆ. ಕಳೆದ ಕೆಲವು ವರ್ಷಗಳಲ್ಲಿ ‘ಖಾದಿ’ಬಹಳ ಜನಪ್ರಿಯವಾಗಿದೆ. ಕಳೆದ 12 ವರ್ಷಗಳಲ್ಲಿ ಇದರ ಮಾರಾಟ 6 ಪಟ್ಟು ಹೆಚ್ಚಾಗಿದೆ. ಈ ಮಾರಾಟದ ಅಂಕಿ ಈಗ 8,000 ಕೋಟಿ ರೂಪಾಯಿ ತಲುಪಿದೆ. ಮುಂಬರುವಹಬ್ಬಗಳ ಸಮಯದಲ್ಲಿ ನಿಮ್ಮೆಲ್ಲರನ್ನೂ ಸ್ವಲ್ಪ ಖಾದಿ,ಸ್ವಲ್ಪ ಕೈಮಗ್ಗ,ಕೆಲವು ಕರಕುಶಲ ವಸ್ತುಗಳನ್ನು ಖರೀದಿಸುವಂತೆ ನಾನು ವಿನಂತಿಸುತ್ತೇನೆ.

ನನ್ನ ಪ್ರೀತಿಯ ದೇಶಬಾಂಧವರೇ,

ಭಾರತದಲ್ಲಿ ಎಷ್ಟು ವಿಧದ ಸಂಗೀತ ವಾದ್ಯಗಳಿವೆ ಎಂದು ನಿಮ್ಮನ್ನು ಕೇಳಿದರೆ, ನೀವು ಆಲೋಚನೆ ಮಾಡತೊಡಗುತ್ತೀರಿ.  ಏಕೆಂದರೆ, ನಮ್ಮ ದೇಶದಲ್ಲಿ ಬಹಳಷ್ಟು ಸಂಗೀತ ವಾದ್ಯಗಳಿವೆ ಮತ್ತು ಅವುಗಳೊಂದಿಗೆಬೆಸೆದುಕೊಂಡಿರುವಸಂಪ್ರದಾಯಗಳಿವೆ. ಇದೇ ರೀತಿಯ ಒಂದು ವಾದ್ಯ – ತ್ರಿಪುರಾದ ‘ಚೌಂಗ್ ಪ್ರೆಂಗ್’ ಇದು ಅಲ್ಲಿನ ಬುಡಕಟ್ಟು ಸಮುದಾಯಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಬಿದಿರಿನಿಂದ ತಯಾರಿಸಿದ ಈ ವಾದ್ಯಯಂತ್ರದಲ್ಲಿ ಮೂರು ತಂತಿಗಳು ಇರುತ್ತವೆ. ಇದರಿಂದ ಹೊರಡುವ ರಾಗ ಸುಮಧುರವಾಗಿರುತ್ತದೆ ಇದು ಸರೋದ್ ಸ್ವರವನ್ನು ಸ್ವಲ್ಪ ಮಟ್ಟಿಗೆ ಹೋಲುತ್ತದೆ. ಕೆಲವು ಕಾರಣಗಳಿಂದಾಗಿ, ಯುವಜನತೆಯಲ್ಲಿ ಇದರ ಜನಪ್ರಿಯತೆ ಸ್ವಲ್ಪ ಕಡಿಮೆಯಾಗತೊಡಗಿತ್ತು. ಆಗ ಸೂರಜ್ ಕುಮಾರ್ ದೇಬಬರ್ಮಾ ಅವರು ಇದನ್ನು ಪುನಃ ಜನಪ್ರಿಯಗೊಳಿಸುವ ಸಂಕಲ್ಪ ಕೈಗೊಂಡರು. ಇಂದು ಅವರ ಪ್ರಯತ್ನ ಫಲ ಕೊಡುತ್ತಿದೆ. ಅವರು ಚೌಂಗ್ ಪ್ರೆಂಗ್ ಜೊತೆಯಲ್ಲಿಯೇ ಅಲ್ಲಿನ ಇತರ ಸಾಂಪ್ರದಾಯಿಕ ವಾದ್ಯಯಂತ್ರಗಳನ್ನು ಕೂಡಾ ನುಡಿಸುತ್ತಾ ಪ್ರದರ್ಶನ ನೀಡುತ್ತಿದ್ದಾರೆ. Kokborok folk songs, Baul songs, Bangali Folk ಅವರಿಗೆ ಬಹಳ ಇಷ್ಟವಾಗುತ್ತವೆ. ಈಗ ನಾನು ನಿಮಗೆ ಒಂದು ಸಣ್ಣ ಕ್ಲಿಪ್ ಕೇಳಿಸಬಯಸುತ್ತೇನೆ. ಈ ಸಂಗೀತವನ್ನು ನೀವು ಎಂದಿಗೂ ಮರೆಯಲು ಸಾಧ್ಯವಿಲ್ಲ.

#(ಸಂಗೀತ)#

ಸ್ನೇಹಿತರೇ,

ಇದನ್ನು ಆಲಿಸಿ ನಿಮ್ಮ ಮನಸ್ಸಿಗೆ ಬಹಳ ಸಂತೋಷವಾಯಿತೆಂಬ ವಿಶ್ವಾಸ ನನಗಿದೆ. ನನಗೆ ದೇಬಬರ್ಮ ಅವರ ಬಗ್ಗೆ ಬಹಳ ಹೆಮ್ಮೆಯಿದೆ. ಸಾಂಪ್ರದಾಯಿಕ ಸಂಗೀತವನ್ನು ಜನಪ್ರಿಯಗೊಳಿಸುವ ಅವರ ಪ್ರಯತ್ನ ಬಹಳ ಶ್ಲಾಘನೀಯ. ನೀವು ಕೂಡಾ ನಿಮ್ಮ ಸುತ್ತಮುತ್ತಲಿನಸಾಂಪ್ರದಾಯಿಕ ಸಂಗೀತ ವಾದ್ಯಗಳ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿಹಂಚಿಕೊಳ್ಳಬೇಕೆಂದುವಿನಂತಿಸುತ್ತೇನೆ. ನಿಮ್ಮ ಈ ಪ್ರಯತ್ನವು ಖಂಡಿತವಾಗಿಯೂ ಇತರರನ್ನು ಸಾಂಪ್ರದಾಯಿಕ ಭಾರತೀಯ ಸಂಗೀತದೊಂದಿಗೆಸಂಪರ್ಕಿಸುತ್ತದೆ.

ನನ್ನ ಪ್ರೀತಿಯ ದೇಶಬಾಂಧವರೇ,

ನಾಳೆ ಅಂದರೆ ಜುಲೈ 27 ರಂದು ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯ ತಿಥಿ. ಡಾ. ಕಲಾಂ ಅವರ ವ್ಯಕ್ತಿತ್ವವು ಹಲವು ಸ್ಪೂರ್ತಿದಾಯಕಅಂಶಗಳನ್ನುಹೊಂದಿತ್ತಾದರೂ, ಶಿಕ್ಷಕರ ಪಾತ್ರ ಅವರ ಹೃದಯಕ್ಕೆ ಅತ್ಯಂತ ನಿಕಟವಾಗಿತ್ತು. ಅವರು ಮಕ್ಕಳು ಮತ್ತು ಯುವಕರು ದೊಡ್ಡ ಕನಸು ಕಾಣುವಂತೆ ಪ್ರೇರೇಪಿಸಿದರು. ಪ್ರಾಸಂಗಿಕವಾಗಿ, ಈ ವಾರ ನಾವು 'ಗುರು ಪೂರ್ಣಿಮೆ'ಯ ಪವಿತ್ರ ಹಬ್ಬವನ್ನು ಆಚರಿಸುತ್ತೇವೆ. ನಮ್ಮ ತಾಯಿ ತಂದೆಯರೇ ನಮ್ಮ ಮೊದಲ ಗುರುಗಳು. ಶಾಲಾ ಶಿಕ್ಷಕರು ನಮಗೆ ಅಕ್ಷರ ಜ್ಞಾನ ನೀಡುತ್ತಾರೆ. ಗುರು ಪೂರ್ಣಿಮೆಯು ಅಂತಹ ಎಲ್ಲಾ ಗುರುಗಳಿಗೆಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂದರ್ಭವಾಗಿದೆ. ದೇಶದ ಎಲ್ಲಾ ಶಿಕ್ಷಕರು ಮತ್ತು ಗುರುಗಳಿಗೆ ನಾನು ಗೌರವದಿಂದ ವಂದಿಸುತ್ತೇನೆ.

ಸ್ನೇಹಿತರೇ,

ಕೆಲವೇ ವಾರಗಳ ನಂತರ, ನಾವು ನಮ್ಮ ಸ್ವಾತಂತ್ರ್ಯದ ಮಹಾಉತ್ಸವ ಆಚರಿಸಲಿದ್ದೇವೆ. ಆಗಸ್ಟ್ 15 ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ದಿನವಾಗಿದೆ. ಇದು ಭಾರತಾಂಬೆಯ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ಸಮರ್ಪಿಸಿದಂತಹ ಅಸಂಖ್ಯಾತ ವೀರರನ್ನು ಸ್ಮರಿಸುವಂತಹ ದಿನವಾಗಿದೆ. ಅವರ ತ್ಯಾಗ ಮತ್ತು ಸಮರ್ಪಣೆಯ ಕಾರಣದಿಂದಾಗಿಯೇ ಇಂದು ನಮ್ಮ ಕೈಗಳಲ್ಲಿ ತ್ರಿವರ್ಣ ಧ್ವಜವಿದೆ. ಈ ತ್ರಿವರ್ಣ ಧ್ವಜದಲ್ಲಿ ನಮ್ಮ ಸಂವಿಧಾನದ ಆದರ್ಶಗಳಿವೆ.

ಸ್ನೇಹಿತರೇ,

ಕಳೆದ ಕೆಲವು ವರ್ಷಗಳಲ್ಲಿ ಮನೆ ಮನೆಯಲ್ಲೂ ಕೈಗೊಂಡ ಹರ್ ಘರ್ ತಿರಂಗಾ – ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಅಭಿಯಾನವು ಇಡೀ ದೇಶವನ್ನು ಒಂದು ಅದ್ಭುತ ಅನುಭೂತಿಯಲ್ಲಿ ಒಗ್ಗೂಡಿಸಿದೆ. ಪ್ರತಿ ಮನೆ, ಪ್ರತಿ ಗಲ್ಲಿಯಲ್ಲಿ ತ್ರಿವರ್ಣ ಧ್ವಜದ ಹಬ್ಬ ಗೋಚರಿಸುತ್ತದೆ. ಈ ವರ್ಷವೂ ನಾವು ಹರ್ ಘರ್ ತಿರಂಗಾ - ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಅಭಿಯಾನವನ್ನು ಸಂಪೂರ್ಣ ಉತ್ಸಾಹ, ಉಲ್ಲಾಸದಿಂದ ಮುಂದುವರಿಸಬೇಕು. ನಮ್ಮ ಮನೆಗಳಲ್ಲಿ ಸಂಪೂರ್ಣ ಗೌರವದೊಂದಿಗೆ ತ್ರಿವರ್ಣ ಧ್ವಜ ಹಾರಿಸಬೇಕು.

ಸ್ನೇಹಿತರೇ,

ಪ್ರತಿ ವರ್ಷ ಆಗಸ್ಟ್ 15 ಕ್ಕೆ ಮೊದಲು ನೀವು ನನಗೆ ಬಹಳಷ್ಟು ವಿಚಾರಗಳನ್ನು ಮತ್ತು ಸಲಹೆಗಳನ್ನು ಕಳುಹಿಸುತ್ತೀರಿ. ಈ ವರ್ಷ ಕೂಡಾ ನೀವು ನಿಮ್ಮ ಚಿಂತನೆಗಳನ್ನು ಮೈ ಗೌ (My gov)ವೇದಿಕೆಯಲ್ಲಿ ಖಂಡಿತವಾಗಿಯೂ ನನ್ನೊಂದಿಗೆಹಂಚಿಕೊಳ್ಳಿ. ನಾನು ನಿಮ್ಮ ಸಲಹೆಗಳಿಗಾಗಿ ಎದುರು ನೋಡುತ್ತಿರುತ್ತೇನೆ.

ಸ್ನೇಹಿತರೇ,

ಇಂದಿನ ‘ಮನ್ ಕಿ ಬಾತ್’ ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇನೆ. ದೇಶಬಾಂಧವರ ಅನೇಕ ಹೊಸ ಸಾಧನೆಗಳು ಮತ್ತು ಸ್ಫೂರ್ತಿದಾಯಕ ಪ್ರಯತ್ನಗಳೊಂದಿಗೆ ಮುಂದಿನ ತಿಂಗಳು ನಾವು ಪುನಃ ಭೇಟಿಯಾಗೋಣ. ಅಲ್ಲಿಯವರೆಗೆ ನನಗೆ ಅನುಮತಿ ನೀಡಿ. ಅನೇಕಾನೇಕ ಧನ್ಯವಾದ. ನಮಸ್ಕಾರ.

 

*****


(रिलीज़ आईडी: 2289567) आगंतुक पटल : 58
इस विज्ञप्ति को इन भाषाओं में पढ़ें: Odia , Urdu , Telugu , Manipuri , English , हिन्दी , Marathi , Bengali , Assamese , Gujarati , Tamil , Malayalam