ಜವಳಿ ಸಚಿವಾಲಯ
ಭಾರತ್ ಟೆಕ್ಸ್ 2026 ಅಭೂತಪೂರ್ವ ವ್ಯಾಪಾರ ಚಟುವಟಿಕೆ ಮತ್ತು ಭಾರಿ ಜನಸಂದಣಿಗೆ ಸಾಕ್ಷಿ
ಜಾಗತಿಕ ಜವಳಿ ಸಂಬಂಧಿತ ವಸ್ತುಗಳ ಪಡೆಯುವಿಕೆ ಮತ್ತು ನಾವೀನ್ಯತೆಯ ಪ್ರಮುಖ ಕೇಂದ್ರವಾಗಿ ಭಾರತದ ಸ್ಥಾನವನ್ನು ಪುನರುಚ್ಚರಿಸಿದೆ
प्रविष्टि तिथि:
17 JUL 2026 3:11PM by PIB Bengaluru
ಭಾರತ್ ಟೆಕ್ಸ್ 2026ರ ಮೊದಲ ಮೂರು ದಿನಗಳು ಭಾರತ್ ಮಂಟಪವನ್ನು ಜಾಗತಿಕ ಜವಳಿ ಮತ್ತು ಉಡುಪು ಉದ್ಯಮದ ಕೇಂದ್ರಬಿಂದುವನ್ನಾಗಿ ಪರಿವರ್ತಿಸಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ಪಾಲುದಾರರಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆದಿವೆ. ವಿಶ್ವದ ಅತಿ ದೊಡ್ಡ ಸಂಯೋಜಿತ ಜವಳಿ ಕಾರ್ಯಕ್ರಮವು ಅತಿ ಹೆಚ್ಚು ಸಂದರ್ಶಕರ ಸಂಖ್ಯೆ, ಚೈತನ್ಯದಾಯಕ ವ್ಯಾಪಾರ ಚಟುವಟಿಕೆಗಳು, ವ್ಯಾಪಕವಾದ ಖರೀದಿದಾರ ಮಾರಾಟಗಾರರ ತೊಡಗಿಸಿಕೊಳ್ಳುವಿಕೆಗಳು ಮತ್ತು ಕ್ರಿಯಾತ್ಮಕ ಜ್ಞಾನ ವಿನಿಮಯವನ್ನು ದಾಖಲಿಸಿದೆ. ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತವು ವಿಶ್ವಾಸಾರ್ಹ ಜಾಗತಿಕ ಸಂಬಂಧಿತ ವಸ್ತುಗಳ ಪಡೆಯುವಿಕೆ (ಸೋರ್ಸಿಂಗ್), ಉತ್ಪಾದನೆ, ನಾವೀನ್ಯತೆ ಮತ್ತು ಹೂಡಿಕೆಯ ತಾಣವಾಗಿ ಹೊರಹೊಮ್ಮುತ್ತಿರುವುದನ್ನು ಇದು ಪುನರುಚ್ಚರಿಸಿದೆ.

16 ಲಕ್ಷ ಚದರ ಅಡಿಗೂ ಹೆಚ್ಚು ವಿಸ್ತೀರ್ಣದಲ್ಲಿ ಹರಡಿರುವ ಭಾರತ್ ಟೆಕ್ಸ್ 2026, 1,647 ಪ್ರದರ್ಶಕರು, 20,000ಕ್ಕೂ ಹೆಚ್ಚು ಪುನರಾವರ್ತಿತ ಭೇಟಿಗಳೊಂದಿಗೆ ಸುಮಾರು 95,000 ವ್ಯಾಪಾರ ಸಂದರ್ಶಕರು 6,090 ಅಂತರರಾಷ್ಟ್ರೀಯ ಖರೀದಿದಾರರು ಸೇರಿದಂತೆ, 11,315 ಖರೀದಿದಾರರು ಹಾಗೂ 138 ದೇಶಗಳ 3,461 ಪ್ರತಿನಿಧಿಗಳು ಮತ್ತು ಭಾಗವಹಿಸುವವರನ್ನು ಒಟ್ಟುಗೂಡಿಸಿದೆ. ಇದು ಭಾರತದ ವೇಗವಾಗಿ ವಿಕಸನಗೊಳ್ಳುತ್ತಿರುವ ಜವಳಿ ಪರಿಸರ ವ್ಯವಸ್ಥೆಯ ಮೇಲಿನ ಅಭೂತಪೂರ್ವ ಜಾಗತಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಮೊದಲ ಮೂರು ದಿನಗಳಲ್ಲಿ 28,500ಕ್ಕೂ ಹೆಚ್ಚು ಬಿ2ಬಿ ಸಭೆಗಳು, 100 ಕ್ಕೂ ಹೆಚ್ಚು ಬಿ2ಜಿ ಮತ್ತು ಜಿ2ಜಿ ಸಂವಾದಗಳು ಹಾಗೂ ಹಲವಾರು ಆಯಕಟ್ಟಿನ ಹೂಡಿಕೆ ಚರ್ಚೆಗಳು ಪ್ರದರ್ಶನ ಸಭಾಂಗಣಗಳನ್ನು ಚಟುವಟಿಕೆಯಿಂದ ಕೂಡಿರುವಂತೆ ಮಾಡಿದವು.
ಭಾರತ್ ಟೆಕ್ಸ್ 2026 ವಿವಿಧ ರಾಜ್ಯಗಳಿಂದ 30ಕ್ಕೂ ಹೆಚ್ಚು ಒಪ್ಪಂದಗಳೊಂದಿಗೆ ಸುಮಾರು 14,300 ಕೋಟಿ ರೂ. ಜವಳಿ ಹೂಡಿಕೆಯ ಬದ್ಧತೆಗಳಿಗೆ ವೇಗವರ್ಧನೆ ನೀಡಿದೆ. ಇದರಲ್ಲಿ ಕರ್ನಾಟಕ (2,821 ಕೋಟಿ ರೂ., 11,020 ಉದ್ಯೋಗಗಳು), ಬಿಹಾರ (1,476 ಕೋಟಿ ರೂ., 40,500+ ಉದ್ಯೋಗಗಳು), ಮಹಾರಾಷ್ಟ್ರ (1,095 ಕೋಟಿ ರೂ.) ಮತ್ತು ಆಂಧ್ರಪ್ರದೇಶ (4,100 ಕೋಟಿ ರೂ.) ಒಳಗೊಂಡಿದ್ದು, ಭಾರತದ ಜವಳಿ ಮತ್ತು ಉಡುಪು ವಲಯದಲ್ಲಿ ವಿಕೇಂದ್ರೀಕೃತ, ರಾಜ್ಯ ನೇತೃತ್ವದ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಈ ಕಾರ್ಯಕ್ರಮದ ಪಾತ್ರವನ್ನು ಬಲಪಡಿಸಿದೆ. ಇದಲ್ಲದೆ, ಆರ್ ಇ & ಯುಪಿ ಸಂಸ್ಥೆಯು ಭಾರತದಲ್ಲಿ 4,800 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಹಾಗೆಯೇ, ಈ ಕಾರ್ಯಕ್ರಮದ ಅವಧಿಯಲ್ಲಿ ಸುಮಾರು 2.8 ಶತಕೋಟಿ ಡಾಲರ್ ಮೌಲ್ಯದ ವಾಸ್ತವವಾದ ವ್ಯಾಪಾರ ವಿಚಾರಣೆಗಳು ನಡೆದವು.
ಈ ಕಾರ್ಯಕ್ರಮವು ಭಾರತದ ರಾಜ್ಯಗಳಿಂದ ಗಮನಾರ್ಹ ಭಾಗವಹಿಸುವಿಕೆಯನ್ನು ಆಕರ್ಷಿಸಿದ್ದು, ಬಿಹಾರ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಪಾಲುದಾರ ರಾಜ್ಯಗಳಾಗಿ ಭಾಗವಹಿಸಿದ್ದವು. ಇನ್ನು ಹಲವಾರು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಜವಳಿ ಸಾಮರ್ಥ್ಯವನ್ನು ಪ್ರದರ್ಶಿಸಲು ಪ್ರತ್ಯೇಕ ಮಳಿಗೆಗಳನ್ನು ಸ್ಥಾಪಿಸಿದ್ದವು. ಮಧ್ಯಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಮತ್ತು ಪಂಜಾಬಿನ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಭಗವಂತ್ ಸಿಂಗ್ ಮಾನ್ ಅವರೊಂದಿಗೆ ಮಹಾರಾಷ್ಟ್ರ, ತಮಿಳುನಾಡು, ಅಸ್ಸಾಂ, ಉತ್ತರ ಪ್ರದೇಶ ಮತ್ತು ಬಿಹಾರದ ಹಿರಿಯ ಸಚಿವರ ಉಪಸ್ಥಿತಿಯು, ಭಾರತದ ಪ್ರಮುಖ ಜವಳಿ ವೇದಿಕೆಯಾಗಿ ಭಾರತ್ ಟೆಕ್ಸ್ ನ ಪ್ರಾಮುಖ್ಯತೆಯನ್ನು ಮತ್ತಷ್ಟು ಎತ್ತಿ ತೋರಿಸಿತು.
ವಿದೇಶಗಳ ಭಾಗವಹಿಸುವಿಕೆಯೂ ಅಷ್ಟೇ ಪ್ರಭಾವಶಾಲಿಯಾಗಿದ್ದು, ನ್ಯೂಜಿಲೆಂಡ್, ಶ್ರೀಲಂಕಾ, ರಷ್ಯಾ, ಕಾಂಬೋಡಿಯಾ ಮತ್ತು ಪೋರ್ಚುಗಲ್ ದೇಶಗಳ ಸಚಿವರ ನಿಯೋಗಗಳು, ಐರೋಪ್ಯ ಒಕ್ಕೂಟದ ಪ್ರತಿನಿಧಿಗಳು ಹಾಗೂ ಅಮೆರಿಕ, ಜಪಾನ್, ಯುನೈಟೆಡ್ ಕಿಂಗ್ ಡಮ್, ಸ್ಪೇನ್, ಇಟಲಿ, ದಕ್ಷಿಣ ಕೊರಿಯಾ, ಯುಎಇ, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ವಿವಿಧ ದೇಶಗಳ 30ಕ್ಕೂ ಹೆಚ್ಚು ಉದ್ಯಮ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ನಿಯೋಗಗಳು ಭಾಗವಹಿಸಿದ್ದವು.
ಜ್ಞಾನ ಹಂಚಿಕೆಯು ಈ ಕಾರ್ಯಕ್ರಮದ ಒಂದು ವಿಶಿಷ್ಟ ವೈಶಿಷ್ಟ್ಯವಾಗಿದ್ದು, 600ಕ್ಕೂ ಹೆಚ್ಚು ನೀತಿ ನಿರೂಪಕರು, ಜಾಗತಿಕ ತಜ್ಞರು, ಉದ್ಯಮದ ಮುಖಂಡರು, ಸಿಎಕ್ಸ್ ಒಗಳು ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡ 100 ಉನ್ನತ ಪ್ರಭಾವಿ ಜ್ಞಾನದ ಗೋಷ್ಠಿಗಳು ನಡೆದವು. ಚರ್ಚೆಗಳು, ದುಂಡುಮೇಜಿನ ಸಭೆಗಳು ಮತ್ತು ಮಾಸ್ಟರ್ ಕ್ಲಾಸ್ ಗಳು ಜಾಗತಿಕ ವ್ಯಾಪಾರದ ಲಕ್ಷಣಗಳು, ಸುಸ್ಥಿರತೆ, ಮರುಬಳಕೆ, ತಾಂತ್ರಿಕ ಆವಿಷ್ಕಾರ, ಕೃತಕ ಬುದ್ಧಿಮತ್ತೆ, ಜವಾಬ್ದಾರಿಯುತ ಸೋರ್ಸಿಂಗ್, ಹೂಡಿಕೆ ಅವಕಾಶಗಳು, ತಾಂತ್ರಿಕ ಜವಳಿ ಮತ್ತು ಇನ್ನೂ ಹೆಚ್ಚಿನ ಪ್ರಮುಖ ವಿಷಯಗಳ ಕುರಿತು ಚರ್ಚಿಸಿದವು.
ಟಿಬಿಡಿ ಪೆವಿಲಿಯನ್ ನಲ್ಲಿ ನಡೆದ 'ಸಂರಚನಾ ಹ್ಯಾಕಥಾನ್' ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು, ಇದು ತಾಂತ್ರಿಕ ಜವಳಿ ಕ್ಷೇತ್ರದಲ್ಲಿ ಭಾರತದ ಯುವ ನಾವೀನ್ಯಕಾರರ ಕೌಶಲ್ಯವನ್ನು ಪ್ರದರ್ಶಿಸಿತು. ದೇಶಾದ್ಯಂತದ ವಿದ್ಯಾರ್ಥಿಗಳು ಮತ್ತು ನಾವೀನ್ಯಕಾರರು ರೈತರಿಗೆ ರಕ್ಷಣಾತ್ಮಕ ಉಡುಪುಗಳು ಮತ್ತು ಸುಧಾರಿತ ಮಧುಮೇಹದ ಗಾಯದ ಆರೈಕೆ ಉತ್ಪನ್ನಗಳಿಂದ ಹಿಡಿದು ತೀವ್ರ ಹವಾಮಾನಕ್ಕಾಗಿ ಹಗುರವಾದ ಇನ್ಸುಲೇಟೆಡ್ ಹಾಸಿಗೆಗಳವರೆಗೆ ಕಾರ್ಯಸಾಧ್ಯವಾದ ಪರಿಹಾರಗಳನ್ನು ಪ್ರಸ್ತುತಪಡಿಸಿದರು. ಕೇಂದ್ರ ಜವಳಿ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಮತ್ತು ಕೇಂದ್ರ ಜವಳಿ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಪವಿತ್ರ ಮಾರ್ಗರಿಟಾ ಅವರಿಂದ ಗುರುತಿಸಲ್ಪಟ್ಟ ಈ ಉಪಕ್ರಮವು, ಮುಂದಿನ ಪೀಳಿಗೆಯ ತಾಂತ್ರಿಕ ಜವಳಿ ಪರಿಹಾರಗಳನ್ನು ಮುನ್ನಡೆಸುವಲ್ಲಿ ಶಿಕ್ಷಣ ಸಂಸ್ಥೆಗಳು, ಉದ್ಯಮ ಮತ್ತು ಸರ್ಕಾರದ ನಡುವಿನ ಸಹಯೋಗದ ಪರಿವರ್ತನಾ ಪಾತ್ರವನ್ನು ಪ್ರದರ್ಶಿಸಿತು.
ಎಲ್ಲರನ್ನೊಳಗೊಳ್ಳುವ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವ ಮಹತ್ವದ ಉಪಕ್ರಮವಾಗಿ, ಭಾರತ್ ಟೆಕ್ಸ್ 2026 ಭಾರತದಾದ್ಯಂತದ ಆಕಾಂಕ್ಷಿ ಜಿಲ್ಲೆಗಳ 250ಕ್ಕೂ ಹೆಚ್ಚು ಉದ್ಯಮಿಗಳು ಮತ್ತು ನೇಕಾರರಿಗೆ ವಿಶೇಷ ಪ್ರದರ್ಶನದ ಭೇಟಿಗಳನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಎಂಎಸ್ಎಂಇಗಳಿಗೆ ಖರೀದಿದಾರರು, ಪ್ರದರ್ಶಕರು ಮತ್ತು ಉದ್ಯಮ ತಜ್ಞರೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿತು. ಇದರಿಂದ ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳು, ಬ್ರ್ಯಾಂಡಿಂಗ್, ಉತ್ಪನ್ನ ನಾವೀನ್ಯತೆ ಮತ್ತು ರಫ್ತು ಅವಕಾಶಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಿ, ತಳಮಟ್ಟದ ಉದ್ಯಮಶೀಲತೆಯನ್ನು ಬಲಪಡಿಸಿತು. ಜಾಗತಿಕ ಉಡುಪು ತಯಾರಿಕೆಯಲ್ಲಿ ಭಾರತದ ಬೆಳೆಯುತ್ತಿರುವ ಪ್ರಭಾವವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ, ಅಂತಾರಾಷ್ಟ್ರೀಯ ಅಪ್ಯಾರಲ್ ಫೆಡರೇಶನ್ (ಐಎಎಫ್ ) ಮಂಡಳಿಯ ಸಭೆಯನ್ನು ಭಾರತ್ ಟೆಕ್ಸ್ 2026 ರ ಜೊತೆಯಲ್ಲೇ ಆಯೋಜಿಸಲಾಗಿತ್ತು.
ವಿಶ್ವದ ಅತ್ಯಂತ ಪ್ರತಿಷ್ಠಿತ ಜವಳಿ ಮತ್ತು ಫ್ಯಾಷನ್ ಸೋರ್ಸಿಂಗ್ ವೇದಿಕೆಗಳಲ್ಲಿ ಒಂದಾದ ಪ್ರೀಮಿಯರ್ ವಿಷನ್ ಪ್ಯಾರಿಸ್ ಮತ್ತು ಭಾರತ್ ಟೆಕ್ಸ್ ಟ್ರೇಡ್ ಫೆಡರೇಶನ್ (ಬಿಟಿಟಿಎಫ್) ನಡುವೆ ಒಪ್ಪಂದದ ಪತ್ರಕ್ಕೆ (ಎಲ್ ಒ ಐ) ಸಹಿ ಹಾಕಿರುವುದು ಈ ಕಾರ್ಯಕ್ರಮದ ಒಂದು ಮೈಲಿಗಲ್ಲಾಗಿದೆ. ಈ ಕಾರ್ಯತಂತ್ರದ ಸಹಯೋಗವು ಮಾರುಕಟ್ಟೆಗೆ ಸುಲಭಲಭ್ಯತೆ ಪ್ರವೇಶ, ಸುಸ್ಥಿರ ಸೋರ್ಸಿಂಗ್, ವಿನ್ಯಾಸ ಬುದ್ಧಿಮತ್ತೆ ಮತ್ತು ಖರೀದಿದಾರ-ಮಾರಾಟಗಾರರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವ ಮೂಲಕ ಭಾರತ ಮತ್ತು ಐರೋಪ್ಯ ಒಕ್ಕೂಟದ ಜವಳಿ ಪಾಲುದಾರಿಕೆಯನ್ನು ಸುದೀರ್ಘಗೊಳಿಸುವ ಗುರಿಯನ್ನು ಹೊಂದಿದೆ. ಇದು ಭಾರತೀಯ ತಯಾರಕರು, ರಫ್ತುದಾರರು ಮತ್ತು ಎಂಎಸ್ಎಂಇಗಳಿಗೆ ಹೊಸ ಜಾಗತಿಕ ಅವಕಾಶಗಳನ್ನು ಸೃಷ್ಟಿಸುತ್ತದೆ. ಭಾರತ್ ಟೆಕ್ಸ್ 2026 ಭಾರತದ ಪರಂಪರೆಯ ಜವಳಿಗಳನ್ನು ಪ್ರೀಮಿಯಂ ಜಾಗತಿಕ ಬ್ರ್ಯಾಂಡ್ ಗಳಾಗಿ ರೂಪಿಸುವ ಕುರಿತು ಅರ್ಥಪೂರ್ಣ ಚರ್ಚೆಗಳನ್ನು ನಡೆಸಿತು. ಪ್ರಖ್ಯಾತ ವಿನ್ಯಾಸಕರಾದ ರಾಹುಲ್ ಮಿಶ್ರಾ ಮತ್ತು ವೈಶಾಲಿ ಶಡಂಗುಲೆ ಅವರು ಉದ್ಯಮದ ಮುಖಂಡರೊಂದಿಗೆ ಮಾತನಾಡುತ್ತಾ, ಭಾರತದ ಕೈಮಗ್ಗ, ಕರಕುಶಲ ವಸ್ತುಗಳು ಮತ್ತು ಸಾಂಪ್ರದಾಯಿಕ ನೇಯ್ಗೆಯ ಶ್ರೀಮಂತ ಪರಂಪರೆಯು, ಕರಕುಶಲತೆ ಮತ್ತು ಸಾಂಸ್ಕೃತಿಕ ಕಥೆ ಹೇಳುವಿಕೆಯ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದೇಶದ ಬಲವಾದ ವಿಭಿನ್ನತೆಯ ಗುರುತಾಗಬಹುದು ಎಂದು ಒತ್ತಿ ಹೇಳಿದರು.
ಪ್ರದರ್ಶನ ಸ್ಥಳವು ವಿಶೇಷ ವಿಷಯಾಧಾರಿತ ಮಳಿಗೆಗಳಾದ್ಯಂತ ವ್ಯಾಪಾರ ಚಟುವಟಿಕೆಯಿಂದ ಗಿಜಿಗುಡುತ್ತಿತ್ತು. ಹಾಲ್ ನಂ. 4 ರಲ್ಲಿನ ಸಿಎಂಎಐ ನ 'ಬ್ರ್ಯಾಂಡ್ಸ್ ಆಫ್ ಇಂಡಿಯಾ ಪೆವಿಲಿಯನ್' ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಹೊರಹೊಮ್ಮಿತು, ಇದು 70ಕ್ಕೂ ಹೆಚ್ಚು ಪ್ರಮುಖ ಭಾರತೀಯ ಉಡುಪು ಬ್ರ್ಯಾಂಡ್ ಗಳನ್ನು ಒಟ್ಟುಗೂಡಿಸಿ ಖರೀದಿದಾರರಿಗೆ ಭಾರತದ ಚೈತನ್ಯದಾಯಕ ಫ್ಯಾಷನ್ ಮತ್ತು ಉಡುಪು ಪರಿಸರ ವ್ಯವಸ್ಥೆಯ ಸಾಟಿಯಿಲ್ಲದ ಪ್ರದರ್ಶನವನ್ನು ನೀಡಿತು. ಮೊದಲ ಬಾರಿಗೆ, ಈ ಪೆವಿಲಿಯನ್ ಭಾರತದ ವೇಗವಾಗಿ ಬೆಳೆಯುತ್ತಿರುವ ಇಂಟಿಮೇಟ್ ಮತ್ತು ಇನ್ನರ್ವೇರ್ (ಒಳ ಉಡುಪು) ವಿಭಾಗದ ಪ್ರದರ್ಶನವನ್ನು ಸಹ ಒಳಗೊಂಡಿತ್ತು, ಮುಂಬೈ ಮತ್ತು ದೆಹಲಿಯ ಪ್ರಮುಖ ಬ್ರ್ಯಾಂಡ್ ಗಳು ಇತ್ತೀಚಿನ ಉತ್ಪನ್ನಗಳ ಆವಿಷ್ಕಾರಗಳನ್ನು ಪ್ರಸ್ತುತಪಡಿಸಿದವು. ವೆಸ್ಟ್ ಸೈಡ್, ಟಾಮಿ ಹಿಲ್ ಫಿಗರ್, ಕ್ಯಾಲ್ವಿನ್ ಕ್ಲೈನ್, ಯುಎಸ್ ಪೋಲೊ ಅಸೋಸಿಯೇಷನ್, ಆರೋ, ಫ್ಲೈಯಿಂಗ್ ಮೆಷಿನ್, ಲೂಯಿ ಫಿಲಿಪ್, ವ್ಯಾನ್ ಹ್ಯೂಸೆನ್, ಅಲೆನ್ ಸೋಲಿ, ಪೀಟರ್ ಇಂಗ್ಲೆಂಡ್, ರೀಬಾಕ್, ಅಮೇರಿಕನ್ ಈಗಲ್, ರಾಲ್ಫ್ ಲಾರೆನ್, ಸಬ್ಯಸಾಚಿ, ತರುಣ್ ತಹಿಲಿಯಾನಿ, ಜೈಪುರ್, ಡಬ್ಲ್ಯೂ ಫಾರ್ ವುಮನ್, ಬೇವಕೂಫ್, ಡಾಲರ್, ಬಾಡಿಕೇರ್, ಡ್ಯೂಕ್ ಮತ್ತು ಹಲವಾರು ಜಾಗತಿಕ ಹಾಗೂ ಭಾರತೀಯ ಬ್ರ್ಯಾಂಡ್ ಗಳು ಖರೀದಿದಾರರು ಮತ್ತು ಚಿಲ್ಲರೆ ವ್ಯಾಪಾರಿಗಳನ್ನು ಆಕರ್ಷಿಸಿದವು.
ಸಿಎಂಎಐ ಮತ್ತು ಜಾಗತಿಕ ಜವಳಿ ಸುಸ್ಥಿರತೆ ಒಕ್ಕೂಟ (ಜಿಎಟಿಎಸ್) ಜಂಟಿಯಾಗಿ ಪ್ರಸ್ತುತಪಡಿಸಿದ 'ಎಕೋ-ಸ್ಟಿಚ್ ಸಸ್ಟೈನಬಿಲಿಟಿ ಮತ್ತು ಸರ್ಕ್ಯುಲಾರಿಟಿ ಹಬ್' ಮೂಲಕ ಸುಸ್ಥಿರತೆಯು ಭಾರತ್ ಟೆಕ್ಸ್ 2026ರ ಪ್ರಮುಖ ಆಶಯವಾಗಿ ಉಳಿದಿತ್ತು. "ಸುಸ್ಥಿರ, ವೃತ್ತಾಕಾರದ ಮತ್ತು ಸ್ಪರ್ಧಾತ್ಮಕ ಭಾರತ" ಎಂಬ ವಿಷಯದ ಸುತ್ತ ನಿರ್ಮಿಸಲಾದ ಈ ಪೆವಿಲಿಯನ್, ಮರುಬಳಕೆದಾರರು, ತಯಾರಕರು, ಬ್ರ್ಯಾಂಡ್ ಗಳು, ನಾವೀನ್ಯಕಾರರು, ತಂತ್ರಜ್ಞಾನ ಪೂರೈಕೆದಾರರು ಮತ್ತು ಪರಿಸರ ವ್ಯವಸ್ಥೆಯ ಪಾಲುದಾರರನ್ನು ಇಂಡಿಯಾ ಇಂಪ್ಯಾಕ್ಟ್ ವಾಲ್, ಸರ್ಕ್ಯುಲಾರಿಟಿ ಅಟ್ ಸ್ಕೇಲ್, ಫ್ರಮ್ ವೇಸ್ಟ್ ಟು ಗ್ಲೋಬಲ್ ವಾರ್ಡ್ರೋಬ್, ಮೇಡ್ ಇನ್ ಸರ್ಕ್ಯುಲಾರ್ ಭಾರತ್, ಮೆಟೀರಿಯಲ್ ಮತ್ತು ಇನ್ನೋವೇಶನ್ ಲೈಬ್ರರಿ ಮತ್ತು ಸರ್ಕ್ಯುಲಾರ್ ಭಾರತ್ ಫೋರಮ್ ಒಳಗೊಂಡಂತೆ ಮೀಸಲಾದ ವಿಷಯಾಧಾರಿತ ವಲಯಗಳಲ್ಲಿ ಒಟ್ಟುಗೂಡಿಸಿ, ಹೆಚ್ಚು ಸುಸ್ಥಿರ ಜವಳಿ ಭವಿಷ್ಯದ ಕಡೆಗೆ ಕಾರ್ಯಸಾಧ್ಯವಾದ ಮಾರ್ಗಗಳನ್ನು ಪ್ರದರ್ಶಿಸಿತು.
ತುಂಬಿ ತುಳುಕುತ್ತಿದ್ದ ಪ್ರದರ್ಶನ ಸಭಾಂಗಣಗಳು, ಕಿಕ್ಕಿರಿದ ಸಮ್ಮೇಳನದ ಕಾರ್ಯಕ್ರಮಗಳು, ಚೈತನ್ಯದಾಯಕ ನೆಟ್ ವರ್ಕಿಂಗ್ ಅವಕಾಶಗಳು ಮತ್ತು ಸ್ಥಳದಾದ್ಯಂತ ಬಲವಾದ ವ್ಯಾಪಾರ ತೊಡಗಿಸಿಕೊಳ್ಳುವಿಕೆಯೊಂದಿಗೆ, ಭಾರತ್ ಟೆಕ್ಸ್ 2026 ಜವಳಿ ಉತ್ಪಾದನೆ, ಸೋರ್ಸಿಂಗ್, ನಾವೀನ್ಯತೆ ಮತ್ತು ಜವಾಬ್ದಾರಿಯುತ ಬೆಳವಣಿಗೆಗೆ ಜಾಗತಿಕವಾಗಿ ಭಾರತವನ್ನು ಆದ್ಯತೆಯ ತಾಣವನ್ನಾಗಿ ಮಾಡುವ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುತ್ತಿದೆ. ಇದು ಜಾಗತಿಕ ಜವಳಿ ಮತ್ತು ಉಡುಪು ಮೌಲ್ಯ ಸರಪಳಿಯಲ್ಲಿ ದೇಶದ ನಾಯಕತ್ವವನ್ನು ಇನ್ನಷ್ಟು ಬಲಪಡಿಸುತ್ತದೆ.
*****
(रिलीज़ आईडी: 2285765)
आगंतुक पटल : 6