ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನವದೆಹಲಿಯಲ್ಲಿ ಎಫ್‌ಸಿಎನ್‌ಆರ್ (ಬಿ), ಇಸಿಬಿ ಮತ್ತು ಒಎಫ್‌ಸಿಬಿ ಸ್ವಾಪ್ ಉಪಕ್ರಮಗಳ ಕುರಿತು ಬ್ಯಾಂಕುಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒಗಳೊಂದಿಗೆ ಸಂವಾದ ನಡೆಸಿದರು


ನಿಧಿ ಕ್ರೋಢೀಕರಣದ ವೇಗವನ್ನು ಕಾಯ್ದುಕೊಳ್ಳಲು ಅನಿವಾಸಿ ಭಾರತೀಯರ (ಎನ್‌ಆರ್‌ಐ) ಸಂಪರ್ಕವನ್ನು ಹೆಚ್ಚಿಸುವಂತೆ ಕೇಂದ್ರ ಹಣಕಾಸು ಸಚಿವರಿಂದ ಕರೆ

ಆರ್‌ಬಿಐನ ಎಫ್‌ಸಿಎನ್‌ಆರ್ (ಬಿ), ಇಸಿಬಿ ಮತ್ತು ಒಎಫ್‌ಸಿಬಿ ಸ್ವಾಪ್ ಯೋಜನೆಗಳ ಅಡಿಯಲ್ಲಿ ಬ್ಯಾಂಕುಗಳಿಂದ ಉತ್ತಮ ಪ್ರತಿಕ್ರಿಯೆ

2026-27ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬಲವಾದ ಇಸಿಬಿ ನಿಧಿ ಕ್ರೋಢೀಕರಣವನ್ನು ಅಂದಾಜಿಸಿರುವ ಸಾರ್ವಜನಿಕ ವಲಯದ ಬ್ಯಾಂಕುಗಳು; ವ್ಯಾಪಕ ಭಾಗವಹಿಸುವಿಕೆಯಿಂದ ಭಾರತದ ಬಾಹ್ಯ ವಲಯ ಮತ್ತಷ್ಟು ಬಲಿಷ್ಠ

प्रविष्टि तिथि: 13 JUL 2026 5:02PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ನವದೆಹಲಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್‌ಬಿ) ಮತ್ತು ಸಾರ್ವಜನಿಕ ಹಣಕಾಸು ಸಂಸ್ಥೆಗಳ (ಪಿಎಫ್‌ಐ) ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ (ಸಿಇಒ) ವಿದೇಶಿ ಕರೆನ್ಸಿ ಅನಿವಾಸಿ (ಬ್ಯಾಂಕ್) [ಎಫ್‌ಸಿಎನ್‌ಆರ್ (ಬಿ)] ಠೇವಣಿಗಳು, ಬಾಹ್ಯ ವಾಣಿಜ್ಯ ಸಾಲಗಳು (ಇಸಿಬಿ) ಮತ್ತು ಸಾಗರೋತ್ತರ ವಿದೇಶಿ ಕರೆನ್ಸಿ ಸಾಲಗಳ (ಒಎಫ್‌ಸಿಬಿ) ಸ್ವಾಪ್ ಉಪಕ್ರಮಗಳ ಕುರಿತು ಸಂವಾದ ನಡೆಸಿದರು.

ಹಣಕಾಸು ಸೇವೆಗಳ ಇಲಾ ಇಲಾಖೆ, ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ಕಂದಾಯ ಇಲಾಖೆಯ ಕಾರ್ಯದರ್ಶಿಗಳು, ಮುಖ್ಯ ಆರ್ಥಿಕ ಸಲಹೆಗಾರರು, ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಡೆಪ್ಯುಟಿ ಗವರ್ನರ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಹ ಈ ಸಂವಾದದಲ್ಲಿ ಭಾಗವಹಿಸಿದ್ದರು.

ಸಂವಾದದ ಸಮಯದಲ್ಲಿ, ಪಿಎಸ್‌ಬಿ ಮತ್ತು ಪಿಎಫ್‌ಐಗಳ ಎಂಡಿ ಮತ್ತು ಸಿಇಒಗಳು ಆರ್‌ಬಿಐನ ಎಫ್‌ಸಿಎನ್‌ಆರ್ (ಬಿ) ಠೇವಣಿಗಳು, ಇಸಿಬಿಗಳು ಮತ್ತು ಒಎಫ್‌ಸಿಬಿಗಳ ಸ್ವಾಪ್ ಸೌಲಭ್ಯ ಯೋಜನೆಗಳ ಅಡಿಯಲ್ಲಿ ಆಗಿರುವ ಪ್ರಗತಿಯ ಕುರಿತು ಕೇಂದ್ರ ಹಣಕಾಸು ಸಚಿವರಿಗೆ ಮಾಹಿತಿ ನೀಡಿದರು.

ಈ ಉಪಕ್ರಮಗಳು ವಿದೇಶದಲ್ಲಿರುವ ಅನಿವಾಸಿ ಭಾರತೀಯ ಸಮುದಾಯದಿಂದ ಉತ್ತೇಜನಕಾರಿ ಪ್ರತಿಕ್ರಿಯೆಯನ್ನು ಪಡೆದಿವೆ ಮತ್ತು ಎಫ್‌ಸಿಎನ್‌ಆರ್ (ಬಿ), ಇಸಿಬಿ ಹಾಗೂ ಒಎಫ್‌ಸಿಬಿಗಳಾದ್ಯಂತ ಉತ್ತಮ ಆಸಕ್ತಿ ಕಂಡುಬಂದಿದೆ ಎಂದು ಗಮನಿಸಲಾಯಿತು. ಈ ಯೋಜನೆಯಡಿ ಹೊಸ ಎಫ್‌ಸಿಎನ್‌ಆರ್ (ಬಿ) ಠೇವಣಿಗಳ ಮೇಲಿನ ಬಡ್ಡಿ ದರದ ಗರಿಷ್ಠ ಮಿತಿಯನ್ನು ಅಮಾನತುಗೊಳಿಸಿರುವುದರಿಂದ, ಬ್ಯಾಂಕುಗಳು ಐದು ವರ್ಷಗಳ ಠೇವಣಿ ಸೇರಿದಂತೆ ಎಫ್‌ಸಿಎನ್‌ಆರ್ (ಬಿ) ಠೇವಣಿಗಳ ಮೇಲೆ ಆಕರ್ಷಕ ಆದಾಯವನ್ನು ನೀಡುತ್ತಿವೆ ಎಂದು ವ್ಯವಸ್ಥಾಪಕ ನಿರ್ದೇಶಕರುಗಳು ಮಾಹಿತಿ ನೀಡಿದರು.

ಸಿಂಗಾಪುರ, ಹಾಂಗ್ ಕಾಂಗ್, ಪಶ್ಚಿಮ ಏಷ್ಯಾ, ಯುನೈಟೆಡ್ ಕಿಂಗ್‌ಡಮ್, ಅಮೆರಿಕ ಮತ್ತು ಇತರ ಸಾಗರೋತ್ತರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರಿಂದ ಗಮನಾರ್ಹ ಆಸಕ್ತಿ ವ್ಯಕ್ತವಾಗಿದೆ ಎಂದು ಎಂಡಿ ಮತ್ತು ಸಿಇಒಗಳು ತಿಳಿಸಿದರು.

ಈ ಸಕಾರಾತ್ಮಕ ಭಾವನೆಯ ಲಾಭವನ್ನು ಪಡೆಯಲು ಮತ್ತು ಯೋಜನೆಯ ಉಳಿದ ಅವಧಿಯಲ್ಲಿ ಠೇವಣಿ ಸಂಗ್ರಹಣೆಯನ್ನು ಚುರುಕುಗೊಳಿಸಲು ಎಂಡಿ ಮತ್ತು ಸಿಇಒಗಳು ತಮ್ಮ ಯೋಜನೆಗಳನ್ನು ವಿವರಿಸಿದರು. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್ 2026) ಇಸಿಬಿ ಸಂಗ್ರಹಣೆಗಳು ಬಲವಾದ ಆಕರ್ಷಣೆಯನ್ನು ಪಡೆದುಕೊಳ್ಳಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅನಿವಾಸಿ ಭಾರತೀಯ ಸಮುದಾಯದೊಂದಿಗೆ ತೊಡಗಿಸಿಕೊಳ್ಳಲು ಮತ್ತು ಠೇವಣಿ ಸಂಗ್ರಹಣೆಯನ್ನು ಹೆಚ್ಚಿಸಲು ಡಿಜಿಟಲ್ ಮಾಧ್ಯಮಗಳು ಸೇರಿದಂತೆ ವಿಶೇಷವಾಗಿ ರೂಪಿಸಲಾದ ಸಂಪರ್ಕ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದು ಪಿಎಸ್‌ಬಿಗಳು ತಿಳಿಸಿದವು. ಬ್ಯಾಂಕುಗಳು ನೀಡುತ್ತಿರುವ ಆಕರ್ಷಕ ಆದಾಯದ ಬೆಂಬಲದೊಂದಿಗೆ ಎಫ್‌ಸಿಎನ್‌ಆರ್ (ಬಿ) ಠೇವಣಿ ಸಂಗ್ರಹಣೆಯು ಸ್ಪಷ್ಟವಾದ ಹೆಚ್ಚಳದ ಪ್ರವೃತ್ತಿಯನ್ನು ತೋರಿಸಿದೆ ಎಂದು ಅವರು ಹೇಳಿದರು.

ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿರುವ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ (ಐಎಫ್‌ಎಸ್‌ಸಿ) ದಲ್ಲಿರುವ ಅಂತರರಾಷ್ಟ್ರೀಯ ಬ್ಯಾಂಕಿಂಗ್ ಘಟಕಗಳನ್ನು (ಐಬಿಯು) ಯುನೈಟೆಡ್ ಕಿಂಗ್‌ಡಮ್, ಅಮೆರಿಕ, ಪಶ್ಚಿಮ ಏಷ್ಯಾ, ಹಾಂಗ್ ಕಾಂಗ್, ಸಿಂಗಾಪುರ ಮತ್ತು ಆಗ್ನೇಯ ಏಷ್ಯಾ ಸೇರಿದಂತೆ ಹಲವು ರಾಷ್ಟ್ರಗಳಿಂದ ನಿಧಿ ಸಂಗ್ರಹಣೆಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಬ್ಯಾಂಕುಗಳು ಸಂವಾದದ ವೇಳೆ ತಿಳಿಸಿದವು. ಗಿಫ್ಟ್ ಸಿಟಿಯಲ್ಲಿ ಲಭ್ಯವಿರುವ ಹಣಕಾಸು ಸೇವೆಗಳು ಮತ್ತು ಸಾಂಸ್ಥಿಕ ಮೂಲಸೌಕರ್ಯಗಳ ಬಳಕೆಯನ್ನು ಗರಿಷ್ಠಗೊಳಿಸಲು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕುಗಳಿಗೆ ಕರೆ ನೀಡಿದರು.

ಚರ್ಚೆಯ ಸಂದರ್ಭದಲ್ಲಿ, ಆರ್‌ಬಿಐ ಡೆಪ್ಯುಟಿ ಗವರ್ನರ್ ಅವರು ಠೇವಣಿಗಳನ್ನು ಸಂಗ್ರಹಿಸಲು ಮತ್ತು ಅರ್ಹ ಸಾಲಗಳನ್ನು ಸುಗಮಗೊಳಿಸಲು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಕೇಂದ್ರ ಬ್ಯಾಂಕ್ ಸಕ್ರಿಯವಾಗಿ ಬೆಂಬಲ ನೀಡುತ್ತಿದೆ ಎಂದು ಭರವಸೆ ನೀಡಿದರು. ಆರ್‌ಬಿಐ ಸ್ಥಾಪಿಸಿರುವ ದೃಢವಾದ ದೈನಂದಿನ ವರದಿ ಮಾಡುವ ವ್ಯವಸ್ಥೆಯು ಭಾಗವಹಿಸುವ ಸಂಸ್ಥೆಗಳಾದ್ಯಂತ ಪ್ರಗತಿಯ ಪಾರದರ್ಶಕ, ನೈಜ-ಸಮಯದ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸಿದೆ ಎಂದು ಗಮನಿಸಲಾಯಿತು.

ಸಂವಾದದ ಸಮಯದಲ್ಲಿ, ಕೇಂದ್ರ ಹಣಕಾಸು ಸಚಿವರು ಉತ್ತೇಜನಕಾರಿ ಮತ್ತು ಉತ್ತಮ ಆರಂಭಿಕ ಪ್ರತಿಕ್ರಿಯೆಯನ್ನು ಶ್ಲಾಘಿಸಿದರು ಮತ್ತು ಎನ್‌ಆರ್‌ಐ ಸಮುದಾಯಕ್ಕೆ ಸಂಪರ್ಕವನ್ನು ಮತ್ತಷ್ಟು ತೀವ್ರಗೊಳಿಸಲು, ನವೀನ ಠೇವಣಿ ಉತ್ಪನ್ನಗಳನ್ನು ಪರಿಚಯಿಸಲು ಮತ್ತು ಯೋಜನೆಗಳ ಉಳಿದ ಅವಧಿಯಲ್ಲಿ ಸಂಗ್ರಹಣೆಯ ವೇಗವನ್ನು ಕಾಯ್ದುಕೊಳ್ಳಲು ಬ್ಯಾಂಕುಗಳಿಗೆ ಕರೆ ನೀಡಿದರು.

ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕುಗಳು ಮತ್ತು ಸಾರ್ವಜನಿಕ ಹಣಕಾಸು ಸಂಸ್ಥೆಗಳ ನಿರಂತರ ಮತ್ತು ವ್ಯಾಪಕ ಭಾಗವಹಿಸುವಿಕೆಯು ವಿದೇಶಿ ಕರೆನ್ಸಿ ಒಳಹರಿವನ್ನು ಕ್ರೋಢೀಕರಿಸುವಲ್ಲಿ, ಭಾರತದ ವಿದೇಶಿ ವಿನಿಮಯ ಮೀಸಲುಗಳನ್ನು ಬಲಪಡಿಸುವಲ್ಲಿ ಮತ್ತು ಜಾಗತಿಕ ಅನಿಶ್ಚಿತತೆಯ ನಡುವೆ ಬಾಹ್ಯ ವಲಯದ ಸ್ಥಿತಿಸ್ಥಾಪಕತ್ವವನ್ನು ಗಟ್ಟಿಗೊಳಿಸುವಲ್ಲಿ ಸ್ವಾಪ್ ಸೌಲಭ್ಯಗಳ ಪರಿಣಾಮಕಾರಿತ್ವವನ್ನು ಒತ್ತಿಹೇಳುತ್ತದೆ.

ಜೂನ್ 5, 2026ರ ಹಣಕಾಸು ನೀತಿ ಹೇಳಿಕೆಯಲ್ಲಿ ಆರ್‌ಬಿಐ ಗವರ್ನರ್ ಘೋಷಿಸಿದ ಯೋಜನೆಗಳು, ಹೊಸ ಎಫ್‌ಸಿಎನ್‌ಆರ್ (ಬಿ) ಠೇವಣಿಗಳಿಗೆ ಪೂರಕವಾಗಿ ಅಮೆರಿಕ ಡಾಲರ್-ರೂಪಾಯಿ ಫಾರೆಕ್ಸ್ ಸ್ವಾಪ್ ಸೌಲಭ್ಯವನ್ನು ಮತ್ತು ಅರ್ಹ ಇಸಿಬಿ ಹಾಗೂ ಒಎಫ್‌ಸಿಬಿಗಳಿಗೆ ರಿಯಾಯಿತಿ ಸ್ವಾಪ್ ಸೌಲಭ್ಯವನ್ನು ಒಳಗೊಂಡಿವೆ. ಇವು ವಿದೇಶಿ ಬಂಡವಾಳವನ್ನು ಆಕರ್ಷಿಸುವ, ಪಾವತಿಗಳ ಸಮತೋಲನವನ್ನು ಬಲಪಡಿಸುವ ಮತ್ತು ಬಂಡವಾಳದ ಒಳಹರಿವನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.

ಎಫ್‌ಸಿಎನ್‌ಆರ್ (ಬಿ) ಠೇವಣಿಗಳು ಸೆಪ್ಟೆಂಬರ್ 30, 2026 ರವರೆಗೆ ಯೋಜನೆಯಡಿ ಅರ್ಹವಾಗಿರುತ್ತವೆ, ಇಸಿಬಿಗಳು ಮತ್ತು ಒಎಫ್‌ಸಿಬಿಗಳು ಡಿಸೆಂಬರ್ 31, 2026 ರವರೆಗೆ ಅರ್ಹವಾಗಿರುತ್ತವೆ.

 

******


(रिलीज़ आईडी: 2284253) आगंतुक पटल : 13
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Gujarati , Tamil