ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ವಿಜ್ಞಾನ ಸಚಿವಾಲಯಗಳಿಂದ 2026ರ ಸೆಪ್ಟೆಂಬರ್ 10 ರಿಂದ 19 ರವರೆಗೆ ದೇಶಾದ್ಯಂತ ನಡೆಯಲಿರುವ 'ಸ್ವಚ್ಛ ಸಾಗರ, ಸುರಕ್ಷಿತ ಸಾಗರ' ಕರಾವಳಿ ಸ್ವಚ್ಛತಾ ಅಭಿಯಾನಕ್ಕೆ ಸಿದ್ಧತೆ; ವೈಜ್ಞಾನಿಕ ಉಪಕ್ರಮಗಳನ್ನು ಜನಾಂದೋಲನವನ್ನಾಗಿ ಪರಿವರ್ತಿಸಲು ಹೆಚ್ಚಿನ ಸಮನ್ವಯತೆಗೆ ಡಾ. ಜಿತೇಂದ್ರ ಸಿಂಗ್ ಕರೆ
ರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಗಳಾದ್ಯಂತ ಸಮನ್ವಯತೆಯನ್ನು ಬಲಪಡಿಸಲು ವಿಜ್ಞಾನ ಸಚಿವಾಲಯಗಳ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ ಡಾ. ಜಿತೇಂದ್ರ ಸಿಂಗ್
ಭಾರತದ ವೈಜ್ಞಾನಿಕ ಸಾಧನೆಗಳ ಕುರಿತು ಸಂಯೋಜಿತ ಸಂವಹನ ಕಾರ್ಯತಂತ್ರದ ಮೂಲಕ ಸಾರ್ವಜನಿಕ ಸಂಪರ್ಕವನ್ನು ವಿಸ್ತರಿಸಲು ವಿಜ್ಞಾನ ಸಚಿವಾಲಯಗಳ ನಿರ್ಧಾರ
प्रविष्टि तिथि:
12 JUL 2026 1:54PM by PIB Bengaluru
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನಗಳ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು ಪ್ರಧಾನ ಮಂತ್ರಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆಗಳ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಇಂದು ಭಾರತ ಸರ್ಕಾರದ ವಿಜ್ಞಾನ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು ಮತ್ತು ರಾಷ್ಟ್ರೀಯ ಆದ್ಯತೆಗಳ ವಿತರಣೆಯನ್ನು ವೇಗಗೊಳಿಸಲು ವೈಜ್ಞಾನಿಕ ಸಂಸ್ಥೆಗಳ ನಡುವೆ ತಡೆರಹಿತ ಸಮನ್ವಯತೆಗೆ ಕರೆ ನೀಡಿದರು.
2026ರ ಸೆಪ್ಟೆಂಬರ್ 10 ರಿಂದ 19 ರವರೆಗೆ ದೇಶಾದ್ಯಂತ ನಡೆಯಲಿರುವ 'ಸ್ವಚ್ಛ ಸಾಗರ, ಸುರಕ್ಷಿತ ಸಾಗರ' ಕರಾವಳಿ ಸ್ವಚ್ಛತಾ ಅಭಿಯಾನದ ಸಿದ್ಧತೆಗಳು ನಡೆಯುತ್ತಿರುವುದರಿಂದ, ಗರಿಷ್ಠ ರಾಷ್ಟ್ರೀಯ ಪರಿಣಾಮಕ್ಕಾಗಿ ತಾಂತ್ರಿಕ ನಾವೀನ್ಯತೆ, ಸಾರ್ವಜನಿಕ ಸಹಭಾಗಿತ್ವ ಮತ್ತು ಅಂತರ-ಇಲಾಖಾ ಸಹಯೋಗವನ್ನು ಸಂಯೋಜಿಸಲು ವೈಜ್ಞಾನಿಕ ಸಂಸ್ಥೆಗಳು ನಿಕಟ ಸಹಯೋಗದಲ್ಲಿ ಕೆಲಸ ಮಾಡಬೇಕು ಎಂದು ಸಚಿವರು ಉಲ್ಲೇಖಿಸಿದರು.
ನವದೆಹಲಿಯ ಸಿ ಎಸ್ ಐ ಆರ್-ವಿಜ್ಞಾನ ಕೇಂದ್ರದಲ್ಲಿ ನಡೆದ ಈ ಸಭೆಯಲ್ಲಿ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಅಜಯ್ ಕುಮಾರ್ ಸೂದ್; ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿ ಎಸ್ ಟಿ) ಕಾರ್ಯದರ್ಶಿ ಪ್ರೊ. ಉಮೇಶ್ ವಿ. ವಾಗ್ಮರೆ; ಜೈವಿಕ ತಂತ್ರಜ್ಞಾನ ಇಲಾಖೆಯ (ಡಿಬಿಟಿ) ಕಾರ್ಯದರ್ಶಿ ಡಾ. ರಾಜೇಶ್ ಎಸ್. ಗೋಖಲೆ; ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ (ಡಿ ಎಸ್ ಐ ಆರ್) ಮತ್ತು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ. ಎನ್. ಕಲೈಸೆಲ್ವಿ; ಅವರೊಂದಿಗೆ ಸಂಬಂಧಪಟ್ಟ ವೈಜ್ಞಾನಿಕ ಇಲಾಖೆಗಳು ಮತ್ತು ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದಿನ ಸಮನ್ವಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಕೈಗೊಂಡ ಕ್ರಮಗಳ ವರದಿಗಳನ್ನು ಪರಿಶೀಲಿಸಿದ ಡಾ. ಜಿತೇಂದ್ರ ಸಿಂಗ್ ಅವರು, ವೈಜ್ಞಾನಿಕ ಇಲಾಖೆಗಳು ಪ್ರತ್ಯೇಕ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವ ಬದಲು ಒಂದು ಸಂಯೋಜಿತ ಪರಿಸರ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಒತ್ತಿ ಹೇಳಿದರು. ಸಚಿವಾಲಯಗಳ ನಡುವಿನ ನಿಯಮಿತ ಸಂವಾದ, ಜ್ಞಾನ ಹಂಚಿಕೆ, ಜಂಟಿ ಉಪಕ್ರಮಗಳು ಮತ್ತು ಸಂಯೋಜಿತ ಅನುಷ್ಠಾನವು ನಾವೀನ್ಯತೆಯನ್ನು ವೇಗಗೊಳಿಸಲು, ಆಡಳಿತವನ್ನು ಸುಧಾರಿಸಲು ಮತ್ತು ವೈಜ್ಞಾನಿಕ ಸಾಧನೆಗಳು ನೇರವಾಗಿ ನಾಗರಿಕರಿಗೆ ಪ್ರಯೋಜನವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
2026ರ ಸೆಪ್ಟೆಂಬರ್ 10 ರಿಂದ 19 ರವರೆಗೆ ದೇಶದ ಕರಾವಳಿಯುದ್ದಕ್ಕೂ ಆಯೋಜಿಸಲು ಉದ್ದೇಶಿಸಲಾಗಿರುವ 'ಸ್ವಚ್ಛ ಸಾಗರ, ಸುರಕ್ಷಿತ್ ಸಾಗರ' ಅಭಿಯಾನವು ಸಭೆಯ ಪ್ರಮುಖ ಗಮನವಾಗಿತ್ತು. ಸಚಿವರು ಪರಿಸರ ಸಂರಕ್ಷಣೆಯನ್ನು ಸಾರ್ವಜನಿಕ ಜಾಗೃತಿ ಮತ್ತು ಸಮುದಾಯದ ಸಹಭಾಗಿತ್ವದೊಂದಿಗೆ ಸಂಯೋಜಿಸಲು ಬಯಸುವ ಈ ದೇಶಾದ್ಯಂತದ ಉಪಕ್ರಮದ ಜನಸಂಪರ್ಕ ಕಾರ್ಯತಂತ್ರ ಮತ್ತು ಸಿದ್ಧತೆಗಳ ಬಗ್ಗೆ ಚರ್ಚಿಸಿದರು. ಈ ಅಭಿಯಾನವು ದೇಶದ ಅತಿ ದೊಡ್ಡ ಕರಾವಳಿ ಸ್ವಚ್ಛತಾ ಆಂದೋಲನಗಳಲ್ಲಿ ಒಂದಾಗಿದ್ದು, ಇದರಲ್ಲಿ ವೈಜ್ಞಾನಿಕ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು, ಸ್ವಯಂಸೇವಕರು, ಶಿಕ್ಷಣ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳನ್ನು ಒಟ್ಟುಗೂಡಿಸುವ ನಿರೀಕ್ಷೆಯಿದೆ.
ಕಳೆದ ಹನ್ನೆರಡು ವರ್ಷಗಳ, ವಿಶೇಷವಾಗಿ ಪ್ರಸ್ತುತ ಸರ್ಕಾರದ ಕಳೆದ ಎರಡು ವರ್ಷಗಳ ಸಾಧನೆಗಳು ಹೆಚ್ಚಿನ ಜನರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ವಿವಿಧ ವಿಜ್ಞಾನ ಸಚಿವಾಲಯಗಳ ಸಂವಹನ ಕಾರ್ಯತಂತ್ರವನ್ನು ಸಹ ಸಭೆಯು ಪರಿಶೀಲಿಸಿತು. ಭಾರತದ ಬೆಳೆಯುತ್ತಿರುವ ವೈಜ್ಞಾನಿಕ ಸಾಮರ್ಥ್ಯಗಳನ್ನು ಪ್ರದರ್ಶಿಸುವ ವೀಡಿಯೊಗಳು, ಸಾಕ್ಷ್ಯಚಿತ್ರಗಳು, ವಿಷಯಾಧಾರಿತ ಅಭಿಯಾನಗಳು, ಇನ್ಫೋಗ್ರಾಫಿಕ್ಸ್, ಯಶೋಗಾಥೆಗಳು ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯ ಉಪಕ್ರಮಗಳ ಮೂಲಕ ಡಿಜಿಟಲ್ ಸಂಪರ್ಕವನ್ನು ಬಲಪಡಿಸುವ ಯೋಜನೆಗಳನ್ನು ಇಲಾಖೆಗಳು ಹಂಚಿಕೊಂಡವು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ಎ ಎನ್ ಆರ್ ಎಫ್), ರಾಷ್ಟ್ರೀಯ ಕ್ವಾಂಟಮ್ ಮಿಷನ್, ಅಂತರಶಿಸ್ತೀಯ ಸೈಬರ್-ಭೌತಿಕ ವ್ಯವಸ್ಥೆಗಳ ರಾಷ್ಟ್ರೀಯ ಮಿಷನ್, ಸಂಶೋಧನಾ ಅಭಿವೃದ್ಧಿ ಮತ್ತು ನಾವೀನ್ಯತೆ ಯೋಜನೆ ಮತ್ತು ಇತರ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಗಳಂತಹ ಪ್ರಮುಖ ಉಪಕ್ರಮಗಳನ್ನು ಒಳಗೊಂಡ ತನ್ನ ಔಟ್ರೀಚ್ ಯೋಜನೆಯನ್ನು ಮಂಡಿಸಿತು. ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯನ್ನು ಉಳಿಸಿಕೊಳ್ಳಲು ಮತ್ತು ಭಾರತದ ವೈಜ್ಞಾನಿಕ ಸಾಧನೆಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಹಂತ-ಹಂತದ ಪ್ರಸಾರ ಕಾರ್ಯತಂತ್ರವನ್ನು ಸಿದ್ಧಪಡಿಸಲಾಗಿದೆ.
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯು, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಸಿ ಎಸ್ ಐ ಆರ್ ಸಂಸ್ಥಾಪನಾ ದಿನದಂದು ಬಿಡುಗಡೆ ಮಾಡಲು ಕಳೆದ ಹನ್ನೆರಡು ವರ್ಷಗಳಲ್ಲಿ ತನ್ನ ಪ್ರಮುಖ ಸಾಧನೆಗಳನ್ನು ದಾಖಲಿಸುವ ಸಮಗ್ರ ಪ್ರಕಟಣೆಯನ್ನು ಸಿ ಎಸ್ ಐ ಆರ್ ಸಿದ್ಧಪಡಿಸುತ್ತಿದೆ ಎಂದು ತಿಳಿಸಿತು. ಡಿಜಿಟಲ್ ವೇದಿಕೆಗಳ ಮೂಲಕ ಯಶೋಗಾಥೆಗಳ ನಿಯಮಿತ ಪ್ರಸಾರ ಮತ್ತು ನಡೆಯುತ್ತಿರುವ "ಇನ್ನೋವೇಶನ್ ಇನ್ ಆಕ್ಷನ್" ಉಪನ್ಯಾಸ ಸರಣಿಗಳು ವಿಶಾಲವಾದ ಪ್ರೇಕ್ಷಕರ ಮುಂದೆ ಭಾರತದ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಮತ್ತು ವೈಜ್ಞಾನಿಕ ಸಂಸ್ಥೆಗಳ ನಡುವಿನ ಸಂವಾದವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಜೈವಿಕ ತಂತ್ರಜ್ಞಾನ ಇಲಾಖೆಯು ಸಾರ್ವಜನಿಕ ಆರೋಗ್ಯ, ಬಯೋಇಕಾನಮಿ (ಜೈವಿಕ ಆರ್ಥಿಕತೆ), ಜೀನೋಮಿಕ್ಸ್, ಕೃಷಿ ಜೈವಿಕ ತಂತ್ರಜ್ಞಾನ, ಸಂಶೋಧನಾ ಮೂಲಸೌಕರ್ಯ, ಜೈವಿಕ ತಂತ್ರಜ್ಞಾನದ ನವೋದ್ಯಮಗಳು ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ತನ್ನ ಕೊಡುಗೆಗಳನ್ನು ಪ್ರದರ್ಶಿಸುವ ವಿಷಯಾಧಾರಿತ ಪ್ರಕಟಣೆಗಳ ಸರಣಿಯನ್ನು ಪ್ರಾರಂಭಿಸಿದೆ ಎಂದು ತಿಳಿಸಿತು. ಇಲಾಖೆಯು ಸಂಯೋಜಿತ ಸಾಮಾಜಿಕ ಮಾಧ್ಯಮ ಉಪಕ್ರಮಗಳ ಮೂಲಕ ಜನಸಂಪರ್ಕವನ್ನು ವಿಸ್ತರಿಸುವ ಜೊತೆಗೆ ಸಂವಾದಾತ್ಮಕ ಜ್ಞಾನ ಆಧಾರಿತ ಚಟುವಟಿಕೆಗಳ ಮೂಲಕ ವೈಜ್ಞಾನಿಕ ಜಾಗೃತಿಯನ್ನು ಉತ್ತೇಜಿಸಲು ದೇಶಾದ್ಯಂತ #DBT Quest ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯ ಅಭಿಯಾನವನ್ನೂ ನಡೆಸುತ್ತಿದೆ.
ವಿಜ್ಞಾನ ಇಲಾಖೆಗಳ ನಡುವೆ ಅಂತರ-ಸಚಿವಾಲಯ ಸಹಯೋಗವನ್ನು ಆಳಗೊಳಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಸಭೆಯು ಪರಾಮರ್ಶಿಸಿತು. ಸಿ ಎಸ್ ಐ ಆರ್, ಇಸ್ರೋ, ಡಿ ಎಸ್ ಟಿ, ಡಿಬಿಟಿ, ಬಿ ಎ ಆರ್ ಸಿ ಮತ್ತು ಇತರ ವೈಜ್ಞಾನಿಕ ಸಂಸ್ಥೆಗಳನ್ನು ಒಳಗೊಂಡ ತಂತ್ರಜ್ಞಾನ ಅಭಿವೃದ್ಧಿ ಪಾಲುದಾರಿಕೆಗಳು, ಬಯೋಮೆಡಿಕಲ್ ಸಂಶೋಧನಾ ಉಪಕ್ರಮಗಳು, ನಾವೀನ್ಯತೆ ವೇದಿಕೆಗಳು ಮತ್ತು ಈಶಾನ್ಯ ವಲಯಕ್ಕೆ ಸಂಯೋಜಿತ ಕಾರ್ಯಕ್ರಮಗಳು ಸೇರಿದಂತೆ ಸಹಯೋಗದ ಕಾರ್ಯಕ್ರಮಗಳ ಪ್ರಗತಿಯನ್ನು ಚರ್ಚಿಸಲಾಯಿತು. ಇಲಾಖೆಗಳು ವಲಯಗಳಾದ್ಯಂತ ಜ್ಞಾನ ವಿನಿಮಯವನ್ನು ಬಲಪಡಿಸಲು ವಿಜ್ಞಾನಿಗಳು, ಸಂಶೋಧಕರು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ನಿಯಮಿತ ಸಂವಾದದ ಕಾರ್ಯವಿಧಾನಗಳ ನವೀಕರಣಗಳನ್ನು ಸಹ ಹಂಚಿಕೊಂಡವು.
ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ (ಎ ಎನ್ ಆರ್ ಎಫ್) ಅಡಿಯಲ್ಲಿನ ಪ್ರಗತಿಯನ್ನೂ ಸಹ ಪರಿಶೀಲನೆಗೆ ತೆಗೆದುಕೊಳ್ಳಲಾಯಿತು. ಚರ್ಚೆಗಳು SARAL_AI ವೇದಿಕೆಯ ವ್ಯಾಪಕ ಅಳವಡಿಕೆ, ಸಂಸ್ಥೆಗಳಾದ್ಯಂತ ಸಂಶೋಧಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಸಂಶೋಧನಾ ಯೋಜನೆಗಳ ಮಾಹಿತಿಗೆ ಸಾರ್ವಜನಿಕ ಪ್ರವೇಶವನ್ನು ವಿಸ್ತರಿಸುವುದನ್ನು ಒಳಗೊಂಡಿದ್ದವು. ಎ ಎನ್ ಆರ್ ಎಫ್ - ಬೆಂಬಲಿತ ಉಪಕ್ರಮಗಳಲ್ಲಿ ಹೆಚ್ಚಿನ ಜಾಗೃತಿ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ವೈಜ್ಞಾನಿಕ ಇಲಾಖೆಗಳು ಹಂಚಿಕೊಂಡವು.
ESTIC-2026, ಇಂಡಿಯಾ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ (ಐ ಐ ಎಸ್ ಎಫ್) 2026, ರಾಷ್ಟ್ರೀಯ ಬಾಹ್ಯಾಕಾಶ ದಿನ 2026 ಮತ್ತು ಇತರ ಪ್ರಮುಖ ಕಾರ್ಯಕ್ರಮಗಳು ಸೇರಿದಂತೆ ಮುಂಬರುವ ರಾಷ್ಟ್ರೀಯ ವೈಜ್ಞಾನಿಕ ಕಾರ್ಯಕ್ರಮಗಳ ಸಿದ್ಧತೆಗಳನ್ನು ಸಹ ಪರಿಶೀಲಿಸಲಾಯಿತು. ಸಂಶೋಧಕರು, ಉದ್ಯಮಗಳು, ನವೋದ್ಯಮಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ವ್ಯಾಪಕ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಸಾಂಸ್ಥಿಕ ಸಿದ್ಧತೆ, ಔಟ್ರೀಚ್ ಯೋಜನೆಗಳು ಮತ್ತು ಸಹಯೋಗದ ಚಟುವಟಿಕೆಗಳ ಬಗ್ಗೆ ಇಲಾಖೆಗಳು ಸಚಿವರಿಗೆ ಮಾಹಿತಿ ನೀಡಿದವು.
ಭಾರತದ ವೈಜ್ಞಾನಿಕ ಪರಿಸರ ವ್ಯವಸ್ಥೆಯು ಹೊಸ ಹಂತವನ್ನು ಪ್ರವೇಶಿಸಿದೆ, ಇದರಲ್ಲಿ ಸಂಶೋಧನಾ ಶ್ರೇಷ್ಠತೆ, ತಾಂತ್ರಿಕ ನಾವೀನ್ಯತೆ, ಸಾಂಸ್ಥಿಕ ಸಮನ್ವಯ ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆ ಒಟ್ಟಿಗೆ ಸಾಗಬೇಕು ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ವೈಜ್ಞಾನಿಕ ಇಲಾಖೆಗಳ ನಡುವೆ ಬೆಳೆಯುತ್ತಿರುವ ಸಹಯೋಗವು ವಿಜ್ಞಾನವನ್ನು ಹೆಚ್ಚು ಸುಲಭವಾಗಿ ಪ್ರವೇಶಿಸುವಂತೆ ಮಾಡುವ, ಹೆಚ್ಚು ಪರಿಣಾಮಕಾರಿಯಾಗಿಸುವ ಮತ್ತು ದೇಶದ ಅಭಿವೃದ್ಧಿ ಆದ್ಯತೆಗಳೊಂದಿಗೆ ಹೆಚ್ಚು ನಿಕಟವಾಗಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಸಚಿವರು ಆಡಳಿತಾತ್ಮಕ ಕಾರ್ಯಕ್ಷಮತೆ, ಸಾಂಸ್ಥಿಕ ಸಮನ್ವಯ ಮತ್ತು ವಿಜ್ಞಾನ ಆಡಳಿತಗಾರರ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದ ಕ್ರಮಗಳನ್ನು ಪರಿಶೀಲಿಸಿದರು, ಜೊತೆಗೆ ವೈಜ್ಞಾನಿಕ ಸಂಸ್ಥೆಗಳಾದ್ಯಂತ ಅತ್ಯುತ್ತಮ ಕಾರ್ಯವಿಧಾನಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಲು ಮತ್ತು ಸಹಯೋಗದ ಆಡಳಿತವನ್ನು ಬಲಪಡಿಸಲು ಇಲಾಖೆಗಳಿಗೆ ಕರೆ ನೀಡಿದರು.
RTBQ.jpeg)
(1)PXJ1.jpeg)
(1)DTNH.jpeg)
9AZ3.jpeg)
BU4A.jpeg)
******
(रिलीज़ आईडी: 2283956)
आगंतुक पटल : 16