ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಟಿಬಿ ಮುಕ್ತ ಭಾರತ್ ಅಭಿಯಾನಕ್ಕೆ ಬೆಂಬಲವನ್ನು ಬಲಪಡಿಸಲು ಯುವಜನ ವ್ಯವಹಾರಗಳು ಮತ್ತು ಕ್ರೀಡೆ, ಕಾರ್ಮಿಕ ಮತ್ತು ಉದ್ಯೋಗ, ಮತ್ತು ರಕ್ಷಣಾ ಸಚಿವಾಲಯಗಳೊಂದಿಗೆ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ
ಟಿಬಿ ಮುಕ್ತ ಭಾರತ್ ಅಭಿಯಾನವನ್ನು ದೇಶಾದ್ಯಂತ ಜನ ಆಂದೋಲನವನ್ನಾಗಿ ಮಾಡಲು ಭಾರತದ ಯುವಶಕ್ತಿಯನ್ನು ಬಳಸಿಕೊಳ್ಳಬೇಕು: ಶ್ರೀ ಜೆ.ಪಿ. ನಡ್ಡಾ
ಟಿಬಿ-ಮುಕ್ತ ಭಾರತವನ್ನು ಸಾಧಿಸಲು ಯುವಕರು ಮತ್ತು ಎಲ್ಲಾ ಪಾಲುದಾರರ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ: ಕೇಂದ್ರ ಆರೋಗ್ಯ ಸಚಿವರು
ಡಿಸೆಂಬರ್ 2024ರಲ್ಲಿ ಟಿಬಿ-ಮುಕ್ತ ಭಾರತ್ ಅಭಿಯಾನ ಪ್ರಾರಂಭವಾದಾಗಿನಿಂದ, 28 ಕೋಟಿಗೂ ಹೆಚ್ಚು ದುರ್ಬಲ ವ್ಯಕ್ತಿಗಳ ತಪಾಸಣೆ; 39 ಲಕ್ಷ ಟಿಬಿ ರೋಗಿಗಳ ಪತ್ತೆ, ಇದರಲ್ಲಿ ಸಕ್ರಿಯ ತಪಾಸಣೆಯ ಮೂಲಕ ಗುರುತಿಸಲಾದ 12.93 ಲಕ್ಷ ರೋಗಲಕ್ಷಣವಿಲ್ಲದ ರೋಗಿಗಳೂ ಸೇರಿದ್ದಾರೆ
ಯುವಕರು ಮತ್ತು ಎನ್ ಸಿ ಸಿ ಸ್ವಯಂಸೇವಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು, ಕೆಲಸದ ಸ್ಥಳಗಳಲ್ಲಿ ಟಿಬಿ ತಪಾಸಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರಕ್ಷಣಾ ಸಿಬ್ಬಂದಿ ಹಾಗೂ ಕೆಡೆಟ್ ಗಳ ಮೂಲಕ ಸಮುದಾಯದ ತಲುಪುವಿಕೆಯನ್ನು ವಿಸ್ತರಿಸಲು ಸಚಿವಾಲಯಗಳಿಗೆ ಕರೆ
प्रविष्टि तिथि:
07 JUL 2026 3:21PM by PIB Bengaluru
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಇಂದು ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಮತ್ತು ರಕ್ಷಣಾ ಸಚಿವಾಲಯದ ಕೇಂದ್ರ ರಾಜ್ಯ ಸಚಿವರಾದ ಶ್ರೀ ಸಂಜಯ್ ಸೇಠ್ ಅವರೊಂದಿಗೆ ಉನ್ನತ ಮಟ್ಟದ ಅಂತರ-ಸಚಿವಾಲಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇಡೀ ಸರ್ಕಾರದ ಸಂಘಟಿತ ಪ್ರಯತ್ನದ ಮೂಲಕ 'ಟಿಬಿ ಮುಕ್ತ ಭಾರತ ಅಭಿಯಾನ'ದ ಅನುಷ್ಠಾನವನ್ನು ಹೆಚ್ಚಿಸಲು ಮತ್ತು ಅದರ ಒಮ್ಮುಖತೆಯನ್ನು ಬಲಪಡಿಸಲು ಈ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು, ಇತ್ತೀಚಿನ ಪ್ರಗತಿ ಪರಾಮರ್ಶನಾ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿದರು. ಟಿಬಿ ಮುಕ್ತ ಭಾರತ ಅಭಿಯಾನವನ್ನು ದೇಶಾದ್ಯಂತ ಜನಾಂದೋಲನವನ್ನಾಗಿ ಪರಿವರ್ತಿಸಲು ಭಾರತದ ಯುವಶಕ್ತಿಯನ್ನು ಬಳಸಿಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿಹೇಳಿದ್ದರು. ಈ ದೂರದೃಷ್ಟಿಗೆ ಅನುಗುಣವಾಗಿ, ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಸಾಧಿಸಲು ಇಡೀ ಸರ್ಕಾರ ಮತ್ತು ಇಡೀ ಸಮಾಜದ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಶ್ರೀ ನಡ್ಡಾ ಒತ್ತಿಹೇಳಿದರು. ಪ್ರತಿಯೊಂದು ಸಚಿವಾಲಯ, ಸಂಸ್ಥೆ ಮತ್ತು ಪಾಲುದಾರರು ತಮ್ಮದೇ ಆದ ಸಾಮರ್ಥ್ಯ ಮತ್ತು ವ್ಯಾಪ್ತಿಯ ಮೂಲಕ ಇದಕ್ಕೆ ಕೊಡುಗೆ ನೀಡಬೇಕು ಎಂದರು. ಯುವಕರು, ಸಮುದಾಯ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಕೆಲಸದ ಸ್ಥಳಗಳು ಮತ್ತು ಸರ್ಕಾರಿ ಇಲಾಖೆಗಳ ಸಕ್ರಿಯ ಭಾಗವಹಿಸುವಿಕೆಯು ಜಾಗೃತಿ, ಆರಂಭಿಕ ಪತ್ತೆ, ಚಿಕಿತ್ಸೆಗೆ ಬದ್ಧತೆ ಮತ್ತು ರೋಗಿಗಳ ಬೆಂಬಲವನ್ನು ಚುರುಕುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಆ ಮೂಲಕ ಟಿಬಿ-ಮುಕ್ತ ಭಾರತದ ರಾಷ್ಟ್ರೀಯ ಗುರಿಯನ್ನು ಮುನ್ನಡೆಸುತ್ತದೆ ಎಂದು ಅವರು ಗಮನ ಸೆಳೆದರು.
ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದೊಂದಿಗೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವರು, ಪ್ರಸ್ತುತ ಇರುವ 'ಟಿಬಿ ಮುಕ್ತ ಭಾರತ ಟೋಲಿ' ಮಾದರಿಯನ್ನು ಆಧರಿಸಿ, ಅಭಿಯಾನದಲ್ಲಿ 'ಮೈ ಭಾರತ್' ಸ್ವಯಂಸೇವಕರು ಮತ್ತು ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್ ಸಿ ಸಿ) ಕೆಡೆಟ್ ಗಳ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಸಚಿವಾಲಯಕ್ಕೆ ಕರೆ ನೀಡಿದರು. ತಪಾಸಣಾ ಶಿಬಿರಗಳಿಗಾಗಿ ಸ್ವಯಂಸೇವಕರ ನೇತೃತ್ವದ ಸಜ್ಜುಗೊಳಿಸುವಿಕೆಯನ್ನು ವಿಸ್ತರಿಸಲು, ಸ್ವಯಂಸೇವಕರಿಗೆ ʻಲೀಡ್ ನಿ-ಕ್ಷಯ್ʼ ಮಿತ್ರರಾಗಿ ತರಬೇತಿ ನೀಡುವ 'ಪ್ರಾಯೋಗಿಕ ಕಲಿಕಾ ಕಾರ್ಯಕ್ರಮ'ದ ಹಾದಿಯನ್ನು ಬಲಪಡಿಸಲು ಮತ್ತು ಶಾಲೆಗಳು, ಕಾಲೇಜುಗಳು ಹಾಗೂ ಸಮುದಾಯಗಳಲ್ಲಿ ಯುವಕರ ನೇತೃತ್ವದ ಜಾಗೃತಿ ಪ್ರಯತ್ನಗಳನ್ನು ಆಳವಾಗಿಸಲು ಅವರು ಸಚಿವಾಲಯವನ್ನು ಕೇಳಿದರು.
ರಕ್ಷಣಾ ಸಚಿವಾಲಯದಿಂದ, ಸಮುದಾಯ ಜಾಗೃತಿ ರ‍್ಯಾಲಿಗಳು, ತಪಾಸಣಾ ಶಿಬಿರಗಳಿಗೆ ಜನರನ್ನು ಸಜ್ಜುಗೊಳಿಸುವುದು, ಮನೆ-ಮನೆಗೆ ಭೇಟಿ ನೀಡಿ ಸಂಪರ್ಕ ಶಿಕ್ಷಣ ಮತ್ತು ಟಿಬಿ ರೋಗಿಗಳಿಗೆ ಪೌಷ್ಟಿಕಾಂಶದ ಬೆಂಬಲ ನೀಡುವ ಕಾರ್ಯಕ್ರಮಗಳಲ್ಲಿ ಎನ್ ಸಿ ಸಿ ಕೆಡೆಟ್ ಗಳು ಮತ್ತು ರಕ್ಷಣಾ ಸಿಬ್ಬಂದಿಯಿಂದ ನಿರಂತರ ಮತ್ತು ವಿಸ್ತೃತ ಬೆಂಬಲವನ್ನು ಸಚಿವರು ಕೋರಿದರು. ಇದರೊಂದಿಗೆ ಪ್ರಸ್ತುತ ಇರುವ ಎನ್ ಸಿ ಸಿ ತರಬೇತಿ ಶಿಬಿರಗಳು, ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂತಹ ವಿಶೇಷ ಸಂದರ್ಭದ ಚಟುವಟಿಕೆಗಳು, ಸಾಹಸ ಶಿಬಿರಗಳು ಮತ್ತು ಗ್ರಾಮೀಣ ತಲುಪುವಿಕೆ ಕಾರ್ಯಕ್ರಮಗಳಲ್ಲಿ ಟಿಬಿ ಜಾಗೃತಿಯನ್ನು ಸಂಯೋಜಿಸಲು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವೀಯ ಅವರು, ಟಿಬಿ ಮುಕ್ತ ಭಾರತ ಅಭಿಯಾನಕ್ಕೆ ಹೆಚ್ಚಿನ ಉತ್ತೇಜನ ನೀಡಲು ಬಲವಾದ ಸಾಂಸ್ಥಿಕ ಒಮ್ಮುಖತೆ ಮತ್ತು ಸಂಘಟಿತ ಕ್ರಮವನ್ನು ಸೂಚಿಸಿದರು. ದೇಶದಲ್ಲಿ ಸುಮಾರು 6 ಲಕ್ಷ ಪದವಿ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸುಮಾರು 2 ಲಕ್ಷ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿದ್ದಾರೆ ಎಂದು ಉಲ್ಲೇಖಿಸಿದರು. ಇವರು ದೇಶಾದ್ಯಂತದ ವೈದ್ಯಕೀಯ ಕಾಲೇಜುಗಳ ಮೂಲಕ ಅಭಿಯಾನದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಬಹುದಾದ ತರಬೇತಿ ಪಡೆದ ಮಾನವ ಸಂಪನ್ಮೂಲದ ದೊಡ್ಡ ಸಮೂಹವಾಗಿದ್ದಾರೆ ಎಂದು ಹೇಳಿದರು.
ಜಿಲ್ಲಾ ಮಟ್ಟದಲ್ಲಿ ಸಮನ್ವಯವನ್ನು ಮತ್ತಷ್ಟು ಬಲಪಡಿಸಲು, 'ಪ್ರತಿಭಾ ಸೇತು' ಕಾರ್ಯಕ್ರಮದ ಅಭ್ಯರ್ಥಿಗಳನ್ನು ಜಿಲ್ಲಾ ಕ್ಷಯರೋಗ ಸಮನ್ವಯ ಸಮಿತಿಯಲ್ಲಿ ಸೂಕ್ತವಾಗಿ ತೊಡಗಿಸಿಕೊಳ್ಳಬಹುದು ಎಂದು ಡಾ. ಮಾಂಡವೀಯ ಸಲಹೆ ನೀಡಿದರು. ಈ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 600 ಅಧಿಕಾರಿಗಳು ಭಾರತ ಸರ್ಕಾರ, ವೈದ್ಯಕೀಯ ಕಾಲೇಜುಗಳ ಡೀನ್ ಗಳು ಮತ್ತು ರಾಜ್ಯ ಸರ್ಕಾರದ ಜಿಲ್ಲಾ ಟಿಬಿ ಅಧಿಕಾರಿಗಳ ನಡುವೆ ಪರಿಣಾಮಕಾರಿ ಸಮನ್ವಯಕಾರರಾಗಿ ಸೇವೆ ಸಲ್ಲಿಸಬಹುದು, ಆ ಮೂಲಕ ಜಿಲ್ಲಾ ಮಟ್ಟದಲ್ಲಿ ಟಿಬಿ ನಿರ್ಮೂಲನೆ ಚಟುವಟಿಕೆಗಳ ಉತ್ತಮ ಯೋಜನೆ, ಅನುಷ್ಠಾನ ಮತ್ತು ಉಸ್ತುವಾರಿಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ವೈದ್ಯಕೀಯ ಕಾಲೇಜುಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಯುವ ಜಾಲಗಳೊಂದಿಗೆ ಸಮನ್ವಯವನ್ನು ಮತ್ತಷ್ಟು ಬಲಪಡಿಸಲು ಶಿಕ್ಷಣ ಸಚಿವಾಲಯವನ್ನು ಸಹ ಜೊತೆಗೂಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಶ್ರೀ ಮಾಂಡವೀಯ ಒತ್ತಿಹೇಳಿದರು. ಇದು ವ್ಯಾಪಕ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಟಿಬಿ-ಮುಕ್ತ ಭಾರತದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಇಡೀ ಸರ್ಕಾರದ ಸಂಘಟಿತ ಪ್ರಯತ್ನವನ್ನು ಬಲಪಡಿಸುತ್ತದೆ ಎಂದರು.

ಡಿಸೆಂಬರ್ 2024ರಲ್ಲಿ ಪ್ರಾರಂಭಿಸಲಾದ ಟಿಬಿ ಮುಕ್ತ ಭಾರತ ಅಭಿಯಾನವು ಸಕ್ರಿಯ ಪ್ರಕರಣಗಳ ಪತ್ತೆ, ಹೆಚ್ಚಿಸಿದ ರೋಗಿಗಳ ಬೆಂಬಲ ಮತ್ತು ಇಡೀ ಸರ್ಕಾರದ ಸಂಘಟಿತ ಪ್ರಯತ್ನದ ಮೂಲಕ ಭಾರತದ ಕ್ಷಯರೋಗ ನಿರ್ಮೂಲನೆ ಪ್ರಯತ್ನಗಳನ್ನು ಗಣನೀಯವಾಗಿ ಚುರುಕುಗೊಳಿಸಿದೆ.
ಈ ಅಭಿಯಾನವು ಪ್ರಾರಂಭವಾದಾಗಿನಿಂದ, ದೇಶಾದ್ಯಂತ 28 ಕೋಟಿಗೂ ಹೆಚ್ಚು ರೋಗಕ್ಕೆ ತುತ್ತಾದ ವ್ಯಕ್ತಿಗಳನ್ನು ಟಿಬಿಗಾಗಿ ತಪಾಸಣೆ ಮಾಡಲಾಗಿದೆ, ಇದು 39 ಲಕ್ಷಕ್ಕೂ ಹೆಚ್ಚು ಟಿಬಿ ರೋಗಿಗಳ ಪತ್ತೆಗೆ ಕಾರಣವಾಗಿದೆ. ಗಮನಾರ್ಹವಾಗಿ, ಎದೆಯ ಕ್ಷ-ಕಿರಣಗಳನ್ನು ಬಳಸಿಕೊಂಡು ಸಕ್ರಿಯ ತಪಾಸಣೆಯ ಮೂಲಕ 12.93 ಲಕ್ಷ ರೋಗಲಕ್ಷಣ ರಹಿತ ಟಿಬಿ ರೋಗಿಗಳನ್ನು ಗುರುತಿಸಲಾಗಿದೆ. ಇದು ರೋಗಲಕ್ಷಣಗಳಿಲ್ಲದೆ, ರೋಗ ಪತ್ತೆಯಾಗದೆ ಉಳಿದು ತಮ್ಮ ಸಮುದಾಯಗಳಲ್ಲಿ ರೋಗವನ್ನು ಹರಡುತ್ತಲೇ ಇರುತ್ತಿದ್ದ ವ್ಯಕ್ತಿಗಳ ಆರಂಭಿಕ ರೋಗನಿರ್ಣಯವನ್ನು ಸಾಧ್ಯವಾಗಿಸಿದೆ.

ಈ ಅಭಿಯಾನವು ರೋಗಿ-ಕೇಂದ್ರಿತ ಬೆಂಬಲ ವ್ಯವಸ್ಥೆಯನ್ನು ಸಹ ಬಲಪಡಿಸಿದೆ. 5.7 ಲಕ್ಷಕ್ಕೂ ಹೆಚ್ಚು 'ನಿ-ಕ್ಷಯ್ ಮಿತ್ರರು' ಈ ಉಪಕ್ರಮದ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಮತ್ತು ಟಿಬಿ ರೋಗಿಗಳಿಗೆ 38.9 ಲಕ್ಷ ಪೌಷ್ಟಿಕಾಂಶದ ಬುಟ್ಟಿಗಳನ್ನು ವಿತರಿಸಿದ್ದಾರೆ. ಹೆಚ್ಚುವರಿಯಾಗಿ, ಕಾರ್ಯಕ್ರಮದ ವಿಭಿನ್ನ ಆರೈಕೆ ವಿಧಾನದ ಅಡಿಯಲ್ಲಿ 20 ಲಕ್ಷಕ್ಕೂ ಹೆಚ್ಚು ರೋಗಿಗಳನ್ನು ಪರೀಕ್ಷಿಸಲಾಗಿದೆ ಮತ್ತು ವೈಯಕ್ತಿಕ ಬೆಂಬಲವನ್ನು ಒದಗಿಸಲಾಗಿದೆ, ಚಿಕಿತ್ಸೆ ಮತ್ತು ಆರೈಕೆಯನ್ನು ಅವರ ವೈದ್ಯಕೀಯ ಮತ್ತು ಸಾಮಾಜಿಕ ಅಗತ್ಯಗಳಿಗೆ ಅನುಗುಣವಾಗಿ ಮಾಡಲಾಗಿದೆ ಎನ್ನುವುದನ್ನು ಖಚಿತಪಡಿಸುತ್ತದೆ.
ಭಾಗವಹಿಸುವ ಸಚಿವಾಲಯಗಳ ಸಾಂಸ್ಥಿಕ ಸಾಮರ್ಥ್ಯಗಳು ಮತ್ತು ವ್ಯಾಪಕವಾದ ತಲುಪುವಿಕೆಯ ಜಾಲಗಳನ್ನು ಬಳಸಿಕೊಳ್ಳುವ ಜೊತೆಗೆ, ಕ್ಷಯರೋಗ ತಡೆಗಟ್ಟುವಿಕೆ, ಆರಂಭಿಕ ಪತ್ತೆ, ಚಿಕಿತ್ಸೆಗೆ ಬದ್ಧತೆ, ಪೌಷ್ಟಿಕಾಂಶದ ಬೆಂಬಲ ಮತ್ತು ಸಮುದಾಯದ ಭಾಗವಹಿಸುವಿಕೆಯ ವ್ಯಾಪ್ತಿಯನ್ನು ವಿಸ್ತರಿಸಲು ಅಂತರ ವಲಯ ಸಮನ್ವಯವನ್ನು ಹೆಚ್ಚಿಸುವತ್ತ ಸಭೆಯು ಗಮನ ಹರಿಸಿತು.

ಸಚಿವಾಲಯಗಳಾದ್ಯಂತ ಸಂಘಟಿತ ಕ್ರಮದ ಮೂಲಕ ಟಿಬಿ ಮುಕ್ತ ಭಾರತ ಅಭಿಯಾನದ ಅನುಷ್ಠಾನವನ್ನು ಬಲಪಡಿಸಲು ಸರಣಿ ಸಹಯೋಗದ ಮಧ್ಯಸ್ಥಿಕೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. 'ಮೈ ಭಾರತ್' ಸ್ವಯಂಸೇವಕರು, ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್ ಸಿಸಿ) ಕೆಡೆಟ್ಗಳು ಮತ್ತು ಯುವ ಸಂಸ್ಥೆಗಳ ವ್ಯಾಪಕ ಜಾಲವನ್ನು ಪ್ರಸ್ತುತ ಇರುವ 'ಟಿಬಿ ಮುಕ್ತ ಭಾರತ ಟೋಲಿ' ಮಾದರಿಯನ್ನು ವಿಸ್ತರಿಸಲು, ಟಿಬಿ ತಪಾಸಣಾ ಶಿಬಿರಗಳಿಗಾಗಿ ಸಮುದಾಯದ ಸಜ್ಜುಗೊಳಿಸುವಿಕೆಯನ್ನು ಬೆಂಬಲಿಸಲು, ʻಲೀಡ್ ನಿ-ಕ್ಷಯ್ʼ ಮಿತ್ರರನ್ನು ಅಭಿವೃದ್ಧಿಪಡಿಸಲು ಪ್ರಾಯೋಗಿಕ ಕಲಿಕಾ ಕಾರ್ಯಕ್ರಮವನ್ನು ಬಲಪಡಿಸಲು ಮತ್ತು ಶಾಲೆಗಳು, ಕಾಲೇಜುಗಳು ಹಾಗೂ ಸಮುದಾಯಗಳಲ್ಲಿ ಯುವಕರ ನೇತೃತ್ವದ ಜಾಗೃತಿ ಅಭಿಯಾನಗಳನ್ನು ತೀವ್ರಗೊಳಿಸಲು ಬಳಸಿಕೊಳ್ಳಲು ಒಪ್ಪಿಕೊಳ್ಳಲಾಯಿತು.
ಕೆಲಸದ ಸ್ಥಳ ಆಧಾರಿತ ಟಿಬಿ ಮಧ್ಯಸ್ಥಿಕೆಗಳನ್ನು ಹೆಚ್ಚಿಸಲು, ವೃತ್ತಿಪರ ಆರೋಗ್ಯ ಪದ್ಧತಿಗಳಲ್ಲಿ ಟಿಬಿ ತಪಾಸಣೆಯನ್ನು ಸಂಯೋಜಿಸುವ ಮೂಲಕ 'ಟಿಬಿ-ಮುಕ್ತ ಕೆಲಸದ ಸ್ಥಳ' ಚೌಕಟ್ಟನ್ನು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆಗಳು ಗಮನ ಹರಿಸಿದವು, ವಿಶೇಷವಾಗಿ ಗಣಿಗಾರಿಕೆ, ನಿರ್ಮಾಣ, ಜವಳಿ, ಸಾರಿಗೆ ಮತ್ತು ವಲಸೆ ಕಾರ್ಮಿಕರಂತಹ ಹೆಚ್ಚಿನ ಅಪಾಯದ ವಲಯಗಳಲ್ಲಿ ಇದನ್ನು ಜಾರಿಗೊಳಿಸಲು ಚರ್ಚಿಸಲಾಯಿತು. ಉದ್ಯೋಗದಾತರು, ಕಾರ್ಮಿಕ ಸಂಘಗಳು ಮತ್ತು ನೌಕರರ ರಾಜ್ಯ ವಿಮೆ ನಿಗಮ (ಇ ಎಸ್ ಐ ಸಿ) ಮತ್ತು ಫ್ಯಾಕ್ಟರಿ ಸಲಹಾ ಸೇವೆ ಮತ್ತು ಶ್ರಮ ಸಂಸ್ಥೆಗಳ ಮಹಾನಿರ್ದೇಶನಾಲಯ (ಡಿಜಿಎಫ್ ಎ ಎಸ್ ಎಲ್ ಐ) ಸೇರಿದಂತೆ ಕಾರ್ಮಿಕ ಕಲ್ಯಾಣ ಸಂಸ್ಥೆಗಳನ್ನು ಕೆಲಸದ ಸ್ಥಳದಲ್ಲಿ ತಪಾಸಣೆಗೆ ಅನುಕೂಲ ಮಾಡಿಕೊಡಲು, ಚಿಕಿತ್ಸೆಯ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಟಿಬಿ ಚಿಕಿತ್ಸೆಗೆ ಒಳಗಾಗುತ್ತಿರುವ ಕಾರ್ಮಿಕರಿಗೆ ಪೋಷಕ ಕ್ರಮಗಳನ್ನು ಉತ್ತೇಜಿಸಲು ಸಜ್ಜುಗೊಳಿಸುವಿಕೆಯನ್ನು ಸಭೆಯು ಒತ್ತಿಹೇಳಿತು.

ಅಭಿಯಾನದ ಅಡಿಯಲ್ಲಿ ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವಲ್ಲಿ ರಕ್ಷಣಾ ಸಂಸ್ಥೆಗಳ ಪ್ರಮುಖ ಪಾತ್ರವನ್ನು ಸಭೆಯು ಮತ್ತಷ್ಟು ಒತ್ತಿಹೇಳಿತು. ಜಾಗೃತಿ ರ‍್ಯಾಲಿಗಳು, ಟಿಬಿ ತಪಾಸಣಾ ಶಿಬಿರಗಳಿಗೆ ಜನರನ್ನು ಸಜ್ಜುಗೊಳಿಸುವುದು, ಮನೆ ಮನೆಗೆ ಭೇಟಿ ನೀಡಿ ಸಂಪರ್ಕಿತರ ಶಿಕ್ಷಣ ಮತ್ತು ಟಿಬಿ ರೋಗಿಗಳಿಗೆ ಪೌಷ್ಟಿಕಾಂಶದ ಬೆಂಬಲ ಉಪಕ್ರಮಗಳನ್ನು ಬೆಂಬಲಿಸಲು ಎನ್ ಸಿ ಸಿ ಕೆಡೆಟ್ ಗಳು ಮತ್ತು ರಕ್ಷಣಾ ಸಿಬ್ಬಂದಿಯ ವ್ಯಾಪಕ ಜಾಲವನ್ನು ಮತ್ತಷ್ಟು ಬಳಸಿಕೊಳ್ಳಲು ಒಪ್ಪಿಕೊಳ್ಳಲಾಯಿತು.
ಶ್ರೀಮತಿ ಪುಣ್ಯ ಸಲಿಲ ಶ್ರೀವಾಸ್ತವ, ಕಾರ್ಯದರ್ಶಿ, ಆರೋಗ್ಯ; ಡಾ. ಪಲ್ಲವಿ ಜೈನ್ ಗೋವಿಲ್, ಕಾರ್ಯದರ್ಶಿ, ಯುವಜನ ವ್ಯವಹಾರಗಳ ಇಲಾಖೆ; ಶ್ರೀ ಹರಿ ರಂಜನ್ ರಾವ್, ಕಾರ್ಯದರ್ಶಿ, ಕ್ರೀಡಾ ಇಲಾಖೆ; ಶ್ರೀಮತಿ ಆರಾಧನಾ ಪಟ್ನಾಯಕ್, ಎಎಸ್ ಮತ್ತು ಎಂಡಿ, ಎನ್ಎಚ್ಎಂ; ವೈಸ್ ಅಡ್ಮಿರಲ್ ಆರ್ತಿ ಸರಿನ್, ಡಿಜಿ, ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು; ಡಾ. ಪ್ರಿಯಾಂಕಾ ಶುಕ್ಲಾ, ಸಿಇಒ, ಮೈ ಭಾರತ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ರಕ್ಷಣಾ ಸಚಿವಾಲಯ ಮತ್ತು ಇತರ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
*****
(रिलीज़ आईडी: 2282068)
आगंतुक पटल : 24