ಹಣಕಾಸು ಸಚಿವಾಲಯ
ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಫ್ರಾನ್ಸ್ ಗೆ ತೆರಳಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್
ಭಾರತ-ಫ್ರಾನ್ಸ್ ಆರ್ಥಿಕ ಮತ್ತು ಹಣಕಾಸು ಸಂವಾದದ (ಇಎಫ್‌ಡಿ) ಸಹ-ಅಧ್ಯಕ್ಷತೆ ವಹಿಸಲಿರುವ ಹಣಕಾಸು ಸಚಿವರಾದ ಶ್ರೀಮತಿ ಸೀತಾರಾಮನ್; ಅವರು ಉನ್ನತ ಮಟ್ಟದ ಆರ್ಥಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಉದ್ಯಮದ ನಾಯಕರೊಂದಿಗೆ ಸಂವಹನ ನಡೆಸಲಿದ್ದಾರೆ
ಕೇಂದ್ರ ವಿತ್ತ ಸಚಿವರ ಈ ಭೇಟಿಯು ಫ್ರಾನ್ಸ್ ನೊಂದಿಗೆ ಭಾರತದ ಕಾರ್ಯತಾಂತ್ರಿಕ ಆರ್ಥಿಕ ಪಾಲುದಾರಿಕೆಯನ್ನು ಗಾಢಗೊಳಿಸುವ ಬದ್ಧತೆಯನ್ನು ಸೂಚಿಸುತ್ತದೆ
प्रविष्टि तिथि:
01 JUL 2026 12:56PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಫ್ರಾನ್ಸ್ ಗೆ ಅಧಿಕೃತ ಭೇಟಿ ನೀಡಿದ್ದಾರೆ. ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದು, ಆರ್ಥಿಕ ಸಹಕಾರವನ್ನು ಹೆಚ್ಚಿಸುವುದು ಮತ್ತು ಹೂಡಿಕೆ, ತಂತ್ರಜ್ಞಾನ ಸಹಯೋಗ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಗಳಲ್ಲಿ ಅವರು ಭಾಗವಹಿಸಲಿದ್ದಾರೆ.

ಈ ಭೇಟಿಯ ಸಮಯದಲ್ಲಿ ಪ್ರಮುಖ ಸಮಾಲೋಚನೆಯ ವಿಷಯವೆಂದರೆ ಭಾರತ ಮತ್ತು ಫ್ರಾನ್ಸ್ ಆರ್ಥಿಕ ಮತ್ತು ಹಣಕಾಸು ಸಂವಾದ (EFD). ಈ ಸಂವಾದದಲ್ಲಿ ಶ್ರೀಮತಿ ಸೀತಾರಾಮನ್ ಮತ್ತು ಫ್ರಾನ್ಸ್ ನ ಆರ್ಥಿಕ, ಹಣಕಾಸು ಮತ್ತು ಕೈಗಾರಿಕಾ ಮತ್ತು ಇಂಧನ ಸಾರ್ವಭೌಮತ್ವ ಸಚಿವರಾದ ಶ್ರೀ ರೋಲ್ಯಾಂಡ್ ಲೆಸ್ಕ್ಯೂರ್ ಅವರು ಐಕ್ಸ್-ಎನ್-ಪ್ರೊವೆನ್ಸ್ ನಲ್ಲಿ ಜಂಟಿಯಾಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಆರ್ಥಿಕ ಮತ್ತು ಹಣಕಾಸು ಸಂವಾದದ ಭಾಗವಾಗಿ, ಎರಡೂ ದೇಶಗಳು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ದ್ವಿಪಕ್ಷೀಯ ಸಹಕಾರಕ್ಕಾಗಿ ಸಂಭಾವ್ಯ ವಿಷಯಗಳನ್ನು ಚರ್ಚಿಸಿ, ಭಾರತ ಮತ್ತು ಫ್ರಾನ್ಸ್ ನಡುವಿನ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿವೆ.
ಈ ಭೇಟಿಯ ಸಮಯದಲ್ಲಿ, ಭಾರತದ ಕೇಂದ್ರ ಹಣಕಾಸು ಸಚಿವರು ಆಯ್ದ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಮುಖಾಮುಖಿ ಭೇಟಿ ಮಾಡಲಿದ್ದಾರೆ. ಅವರು ಭಾರತದ ದೃಢವಾದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು, ಪ್ರಚಲಿತ ರಚನಾತ್ಮಕ ಸುಧಾರಣೆಗಳು, ವಿಸ್ತರಿಸುತ್ತಿರುವ ಹೂಡಿಕೆಯ ಅವಕಾಶಗಳು ಮತ್ತು ದೀರ್ಘಾವಧಿಯ ಬೆಳವಣಿಗೆಯ ನಿರೀಕ್ಷೆಗಳನ್ನು ವಿವರಿಸಲು ಪ್ರಮುಖ ವ್ಯಾಪಾರ ಕಾರ್ಯನಿರ್ವಾಹಕರೊಂದಿಗೆ ದುಂಡುಮೇಜಿನ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜಾಗತಿಕ ಆರ್ಥಿಕ ಮತ್ತು ಸಾರ್ವಜನಿಕ ನೀತಿ ವಿಷಯಗಳನ್ನು ಚರ್ಚಿಸಲು ಯುರೋಪಿನ ಪ್ರಮುಖ ವಾರ್ಷಿಕ ವೇದಿಕೆಗಳಲ್ಲಿ ಒಂದಾದ ಲೆಸ್ ರೆನ್‌ಕಾಂಟ್ರೆಸ್ ಎಕಾನಮಿಕ್ ಡಿ'ಐಕ್ಸ್-ಎನ್-ಪ್ರೊವೆನ್ಸ್ ನಲ್ಲಿ "ಹೊಸ ಮಧ್ಯಮ ವರ್ಗದ ಬೆಳವಣಿಗೆಯನ್ನು ಹೇಗೆ ಉತ್ತೇಜಿಸುವುದು" ಎಂಬ ವಿಷಯದ ಕುರಿತಾಗಿ ಹಣಕಾಸು ಸಚಿವರಾದ ಶ್ರೀಮತಿ ಸೀತಾರಾಮನ್ ಅವರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಲೆ ಸೆರ್ಕಲ್ ಡೆಸ್ ಎಕಾನಮಿಸ್ಟೆಸ್ ಆಯೋಜಿಸಿರುವ ಈ ವೇದಿಕೆಯಲ್ಲಿ, ಸಮಕಾಲೀನ ಆರ್ಥಿಕ ಸವಾಲುಗಳ ಕುರಿತು ಚರ್ಚಿಸಲು ಪ್ರಪಂಚದಾದ್ಯಂತದ ಸರ್ಕಾರಿ ಮುಖ್ಯಸ್ಥರು, ಮಂತ್ರಿಗಳು, ಕೇಂದ್ರ ಬ್ಯಾಂಕರ್‌ಗಳು, ವ್ಯಾಪಾರ ಮುಖಂಡರು, ಅರ್ಥಶಾಸ್ತ್ರಜ್ಞರು, ಶಿಕ್ಷಣ ತಜ್ಞರು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಕೇಂದ್ರ ಹಣಕಾಸು ಸಚಿವರು ಕ್ಯಾಡರಾಚೆಯಲ್ಲಿ ಅಂತರರಾಷ್ಟ್ರೀಯ ಥರ್ಮೋನ್ಯೂಕ್ಲಿಯರ್ ಪ್ರಾಯೋಗಿಕ ರಿಯಾಕ್ಟರ್ (ITER) ಯೋಜನೆಗೆ ಭೇಟಿ ನೀಡಲಿದ್ದಾರೆ. ಥರ್ಮೋನ್ಯೂಕ್ಲಿಯರ್ ಪ್ರಾಯೋಗಿಕ ರಿಯಾಕ್ಟರ್ ಭಾರತ ಮತ್ತು ಫ್ರಾನ್ಸ್ ಸೇರಿದಂತೆ 30 ಕ್ಕೂ ಹೆಚ್ಚು ಪಾಲುದಾರ ರಾಷ್ಟ್ರಗಳನ್ನು ಒಳಗೊಂಡ ಪರಮಾಣು ಸಮ್ಮಿಳನ ಶಕ್ತಿಯ ಕುರಿತಾದ ವಿಶ್ವದ ಅತಿದೊಡ್ಡ ಅಂತಾರಾಷ್ಟ್ರೀಯ ವೈಜ್ಞಾನಿಕ ಸಹಯೋಗಗಳಲ್ಲಿ ಒಂದಾಗಿದೆ. ಅವರು ಫ್ರಾನ್ಸ್ ನ ರಾಷ್ಟ್ರೀಯ ಕೇಂದ್ರವಾದ ಕ್ಯಾಂಪಸ್ ಸೈಬರ್‌ಗೆ ಭೇಟಿ ನೀಡಲಿದ್ದಾರೆ. ಇದು ಸರ್ಕಾರ, ಕೈಗಾರಿಕೆ ಮತ್ತು ಶೈಕ್ಷಣಿಕ ವಲಯಗಳ ನಡುವೆ ಸೈಬರ್ ಭದ್ರತಾ ನಾವೀನ್ಯತೆ, ಸಂಶೋಧನೆ, ಕೌಶಲ್ಯ ಅಭಿವೃದ್ಧಿ ಮತ್ತು ಸಹಯೋಗಕ್ಕೆ ಮೀಸಲಾದ ಕ್ಯಾಂಪಸ್ ಸೈಬರ್ ಆಗಿದೆ. ಈ ಭೇಟಿಯು ಸೈಬರ್ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ನಾವೀನ್ಯತೆಯನ್ನು ತರುವ ಅನುಭವಗಳು ಮತ್ತು ಉತ್ತಮ ಅಭ್ಯಾಸಗಳ ವಿನಿಮಯಕ್ಕೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ವಿತ್ತ ಸಚಿವರಾದ ಶ್ರೀಮತಿ ಸೀತಾರಾಮನ್ ಅವರು ಪ್ರೊವೆನ್ಸ್-ಆಲ್ಪೆಸ್-ಕೋಟ್ ಡಿ'ಅಜುರ್ (ಪಿಎಸಿಎ) ಪ್ರದೇಶದ ಅಧ್ಯಕ್ಷರಾದ ಶ್ರೀ ರೆನಾಡ್ ಮುಸೆಲಿಯರ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಹೂಡಿಕೆ, ನಾವೀನ್ಯತೆ, ಶುದ್ಧ ಇಂಧನ, ತಂತ್ರಜ್ಞಾನ ಮತ್ತು ಪ್ರಾದೇಶಿಕ ಆರ್ಥಿಕ ಪಾಲುದಾರಿಕೆಗಳು ಸೇರಿದಂತೆ ಪರಸ್ಪರ ಆಸಕ್ತಿಕರ ವಿಷಯಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಕೂಡಾ ಕುರಿತು ಚರ್ಚಿಸಲಿದ್ದಾರೆ.
ಕೇಂದ್ರ ಹಣಕಾಸು ಸಚಿವರು ತಮ್ಮ ಅಧಿಕೃತ ಭೇಟಿಯನ್ನು ಭಾರತೀಯ ವಲಸಿಗರೊಂದಿಗೆ ಸಮುದಾಯ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳಿಸಲಿದ್ದಾರೆ.
*****
(रिलीज़ आईडी: 2279900)
आगंतुक पटल : 8