ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಗೃಹಬಳಕೆಯೇತರ ಎಲ್.ಪಿ.ಜಿ ಪೂರೈಕೆಯನ್ನು ಬಿಕ್ಕಟ್ಟಿಗೆ ಮುಂಚಿನ ಮಟ್ಟಕ್ಕೆ ಮರುಸ್ಥಾಪಿಸಿದ ಸರ್ಕಾರ; ವಲಯವಾರು ಪೂರೈಕೆ ನಿರ್ಬಂಧಗಳ ಹಿಂತೆಗೆತ
प्रविष्टि तिथि:
25 JUN 2026 6:39PM by PIB Bengaluru
ಕೈಗಾರಿಕಾ ಮತ್ತು ವಾಣಿಜ್ಯ ಎಲ್.ಪಿ.ಜಿ ಗ್ರಾಹಕರಿಗೆ ದೊಡ್ಡ ಪರಿಹಾರ ನೀಡುವ ನಿಟ್ಟಿನಲ್ಲಿ, ಗೃಹಬಳಕೆಯೇತರ ಎಲ್.ಪಿ.ಜಿ ಪೂರೈಕೆಯ ಮೇಲಿದ್ದ ಎಲ್ಲಾ ವಲಯವಾರು ನಿರ್ಬಂಧಗಳನ್ನು ಸರ್ಕಾರವು ತೆಗೆದುಹಾಕಿದೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟಿಗಿಂತ ಮುಂಚೆ ಇದ್ದ ಮಟ್ಟಕ್ಕೆ ಪೂರೈಕೆಯನ್ನು ಮರುಸ್ಥಾಪಿಸಿದೆ. ಇದಲ್ಲದೆ, ಬಿಕ್ಕಟ್ಟಿನ ಆರಂಭದಲ್ಲಿ ಸ್ಥಗಿತಗೊಳಿಸಲಾಗಿದ್ದ ಬಲ್ಕ್ (ಬೃಹತ್ ಪ್ರಮಾಣದ) ಎಲ್.ಪಿ.ಜಿ ಪೂರೈಕೆಯನ್ನು, ಬಿಕ್ಕಟ್ಟಿಗೂ ಮುಂಚಿನ ಬಳಕೆಯ ಶೇಕಡಾ 50 ರಷ್ಟು ಸಡಿಲಗೊಳಿಸಲಾಗಿದ್ದು, ಇದು ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಗಮನಾರ್ಹ ಪರಿಹಾರವನ್ನು ನೀಡಿದೆ. ಇತ್ತೀಚೆಗೆ ಎಲ್.ಪಿ.ಜಿ ಪೂರೈಕೆಯ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಈ ಮರುಸ್ಥಾಪನೆ ಕ್ರಮ ಕೈಗೊಳ್ಳಲಾಗಿದೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಸಂದರ್ಭದಲ್ಲಿ, ದೇಶೀಯ ಎಲ್.ಪಿ.ಜಿ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ಅತ್ಯಗತ್ಯ ವಸ್ತುಗಳ ಕಾಯ್ದೆಯಡಿ ಆದೇಶಗಳನ್ನು ಹೊರಡಿಸಿತ್ತು. ಇದರ ಪ್ರಕಾರ, ಸಿ3-ಸಿ4 ಸ್ಟ್ರೀಮ್‌ಗಳನ್ನು (ಪ್ರೊಪೇನ್ ಮತ್ತು ಬ್ಯುಟೇನ್ ಅನಿಲದ ಮಿಶ್ರಣ) ಪೆಟ್ರೋಕೆಮಿಕಲ್ ಮತ್ತು ಇತರ ಪೂರಕ ಬಳಕೆಯಿಂದ ಬೇರೆಡೆಗೆ ತಿರುಗಿಸಿ, ಕೇವಲ ಎಲ್.ಪಿ.ಜಿ ಉತ್ಪಾದನೆಗೆ ಮಾತ್ರ ಪ್ರತ್ಯೇಕವಾಗಿ ಬಳಸಬೇಕಾಗಿತ್ತು.
ಈಗ ದೇಶೀಯ ಎಲ್.ಪಿ.ಜಿ ಉತ್ಪಾದನೆ ಸುಧಾರಿಸಿರುವುದನ್ನು ಮತ್ತು ಆಮದು ಮಾಡಿಕೊಳ್ಳಲಾಗುವ ಎಲ್.ಪಿ.ಜಿ ಸರಕುಗಳ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸಿ3/ಸಿ4 ಸ್ಟ್ರೀಮ್‌ಗಳನ್ನು ಎಲ್.ಪಿ.ಜಿ ಪೂಲ್‌ಗೆ ತಿರುಗಿಸುವುದನ್ನು ಕಡಿಮೆ ಮಾಡಲು ಸಹ ಸರ್ಕಾರ ನಿರ್ಧರಿಸಿದೆ.
ಗೃಹಬಳಕೆ ಎಲ್.ಪಿ.ಜಿ ಲಭ್ಯತೆಗೆ ಯಾವುದೇ ತೊಂದರೆಯಾಗದಂತೆ ಮತ್ತು ಒಟ್ಟಾರೆ ದೇಶೀಯ ಎಲ್.ಪಿ.ಜಿ ಉತ್ಪಾದನೆಯನ್ನು ದಿನಕ್ಕೆ ಕನಿಷ್ಠ 40 ಟಿ.ಎಂ.ಟಿ ಗಿಂತ ಕಡಿಮೆ ಇಲ್ಲದಂತೆ ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಲೇ, ಎಲ್.ಪಿ.ಜಿಯೇತರ ಬಳಕೆಗಾಗಿ ಸಿ3-ಸಿ4 ಸ್ಟ್ರೀಮ್‌ಗಳ ಹೆಚ್ಚಿನ ಹಂಚಿಕೆಯನ್ನು ಜಾರಿಗೆ ತರಲಾಗುವುದು.
ಪೆಟ್ರೋಕೆಮಿಕಲ್ ಮತ್ತು ಇತರ ಪ್ರಮುಖ ವಲಯಗಳಿಗಾಗಿ ಹೆಚ್ಚಿಸಲಾದ ಈ ಸಿ3/ಸಿ4 ಸ್ಟ್ರೀಮ್‌ಗಳ ಸಂಸ್ಥೆವಾರು ಹಂಚಿಕೆಯನ್ನು ಬಿಡುಗಡೆ ಮಾಡಲು ಮತ್ತು ಸಚಿವಾಲಯಕ್ಕೆ ನಿಯಮಿತ ವರದಿಗಳನ್ನು ಸಲ್ಲಿಸಲು ಸಚಿವಾಲಯದ ಅಡಿಯಲ್ಲಿರುವ ಉನ್ನತ ತಂತ್ರಜ್ಞಾನ ಕೇಂದ್ರಕ್ಕೆ ನಿರ್ದೇಶನ ನೀಡಲಾಗಿದೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಜಾಗತಿಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗಿನಿಂದ, ದೇಶಾದ್ಯಂತದ ಗೃಹಬಳಕೆಯ ಗ್ರಾಹಕರಿಗೆ ಎಲ್.ಪಿ.ಜಿ ನಿರಂತರವಾಗಿ ಲಭ್ಯವಾಗುವಂತೆ ಮಾಡುವುದಕ್ಕೆ ಸರ್ಕಾರವು ಅತ್ಯುನ್ನತ ಆದ್ಯತೆ ನೀಡಿದೆ. ಇದಕ್ಕೆ ಅನುಗುಣವಾಗಿ, ವಾಣಿಜ್ಯ ಬಳಕೆಯ ಸಿಲಿಂಡರ್ ಎಲ್.ಪಿ.ಜಿ ಪೂರೈಕೆಯ ಮೇಲೆ ತಾತ್ಕಾಲಿಕ ನಿರ್ಬಂಧಗಳನ್ನು ಹೇರಲಾಗಿತ್ತು. ತೈಲ ಮಾರುಕಟ್ಟೆ ಕಂಪನಿಗಳು (OMCs) ಕೈಗೊಂಡ ಸಕಾಲಿಕ ನೀತಿ ಹಸ್ತಕ್ಷೇಪಗಳು ಮತ್ತು ಸಂಘಟಿತ ಪ್ರಯತ್ನಗಳು ಜಾಗತಿಕ ಪೂರೈಕೆ ಸರಪಳಿಯ ಸವಾಲುಗಳ ನಡುವೆಯೂ ಸ್ಥಿರವಾದ ಪೂರೈಕೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡಿದವು.
ದಕ್ಷ ಯೋಜನೆ ಮತ್ತು ಪೂರೈಕೆ ನಿರ್ವಹಣೆಯನ್ನು ಸುಲಭಗೊಳಿಸಲು ವಾಣಿಜ್ಯ ಮತ್ತು ಕೈಗಾರಿಕಾ ಎಲ್.ಪಿ.ಜಿ ಗ್ರಾಹಕರ ಸಮಗ್ರ ಡೇಟಾವನ್ನು ಕಾಯ್ದುಕೊಳ್ಳುವುದನ್ನು ಮುಂದುವರಿಸಲು ತೈಲ ಮಾರುಕಟ್ಟೆ ಕಂಪನಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ. ಉಸ್ತುವಾರಿ ಮತ್ತು ಕಾರ್ಯಾಚರಣೆಯ ಸಮನ್ವಯವನ್ನು ಬಲಪಡಿಸಲು ತೈಲ ಮಾರುಕಟ್ಟೆ ಕಂಪನಿಗಳಾದ್ಯಂತ ಏಕೀಕೃತ ವಲಯವಾರು ಡೇಟಾಬೇಸ್ ಅನ್ನು ಸಹ ನಿರ್ವಹಿಸಲಾಗುತ್ತದೆ.
ಅದೇ ಸಮಯದಲ್ಲಿ, ಪಿ.ಎನ್.ಜಿ (ಪೈಪ್ ಮೂಲಕ ಸರಬರಾಜು ಮಾಡುವ ನೈಸರ್ಗಿಕ ಅನಿಲ) ಸಂಪರ್ಕವನ್ನು ವಿಸ್ತರಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಪಿ.ಎನ್.ಜಿಗೆ ಬದಲಾಗಿರುವ ವಾಣಿಜ್ಯ ಮತ್ತು ಬೃಹತ್ ಗ್ರಾಹಕರು ಪಿ.ಎನ್.ಜಿಯಲ್ಲೇ ಮುಂದುವರಿಯಲಿದ್ದಾರೆ. ಪಿ.ಎನ್.ಜಿ ನೆಟ್‌ವರ್ಕ್ ಲಭ್ಯವಿರುವ ಇತರ ಅರ್ಹ ಎಲ್.ಪಿ.ಜಿ ಗ್ರಾಹಕರನ್ನು ಅಥವಾ ಪಿ.ಎನ್.ಜಿಗೆ ಬದಲಾಗುವ ಪ್ರಕ್ರಿಯೆಯಲ್ಲಿರುವವರನ್ನು ನಗರ ಅನಿಲ ವಿತರಕ (ಸಿ.ಜಿ.ಡಿ) ಸಂಸ್ಥೆಗಳ ಸಮನ್ವಯದೊಂದಿಗೆ ಹಂತಹಂತವಾಗಿ ಪಿ.ಎನ್.ಜಿಗೆ ಪರಿವರ್ತಿಸಲಾಗುವುದು.
ಈ ನಿಟ್ಟಿನಲ್ಲಿ, ಪರಿಷ್ಕೃತ ಪೂರೈಕೆ ವ್ಯವಸ್ಥೆಗಳನ್ನು ಸುಗಮವಾಗಿ ಜಾರಿಗೆ ತರುವುದನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಯವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಈ ನಿರ್ಧಾರವು ರಾಷ್ಟ್ರೀಯ ಇಂಧನ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ಸರ್ಕಾರದ ಜವಾಬ್ದಾರಿಯುತ ವಿಧಾನವನ್ನು ಪ್ರತಿಬಿಂಬಿಸುತ್ತದೆ. ದೇಶದ ಇಂಧನ ಅಗತ್ಯತೆಗಳನ್ನು ಸಮತೋಲನಗೊಳಿಸುತ್ತಲೇ, ಸ್ವಚ್ಛ, ಸುರಕ್ಷಿತ ಮತ್ತು ಹೆಚ್ಚು ದಕ್ಷ ಇಂಧನಗಳ ಬಳಕೆಯನ್ನು ವಿಸ್ತರಿಸುವ ತನ್ನ ನಿರಂತರ ಬದ್ಧತೆಯನ್ನು ಇದು ತೋರಿಸುತ್ತದೆ.
******
(रिलीज़ आईडी: 2278055)
आगंतुक पटल : 28
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Gujarati
,
Odia
,
Tamil
,
Telugu
,
Malayalam