ಎಂ ಐ ಎಫ್ ಎಫ್ 2026 ರಲ್ಲಿ, ಕಲ್ಪನೆಯಿಂದ ಚಿತ್ರಕಥೆಯವರೆಗಿನ ಸುದೀರ್ಘ, ಏಕಾಂಗಿ ಮತ್ತು ಸುಂದರವಾದ ಪ್ರಯಾಣದ ರಹಸ್ಯ ಬಿಚ್ಚಿಟ್ಟ ಬಿಪ್ಲಬ್ ಗೋಸ್ವಾಮಿ
“ನಿಮ್ಮ ಮೇಲೆ ನಿಮಗೆ ನಂಬಿಕೆ ಇರುವುದನ್ನು ಬಿಟ್ಟರೆ ಬರವಣಿಗೆಗೆ ಯಾವುದೇ ಸೂತ್ರವಿಲ್ಲ” ಎಂದ ‘ಲಾಪತಾ ಲೇಡೀಸ್’ ಚಿತ್ರದ ಲೇಖಕ
ಮನಸ್ಸಿನಲ್ಲಿ ಮೂಡುವ ಒಂದು ಸಣ್ಣ ಆಲೋಚನೆಯು ಸಂಪೂರ್ಣ ಚಿತ್ರಕಥೆಯಾಗಿ ಹೇಗೆ ಬದಲಾಗುತ್ತದೆ? ಒಂದು ಕಥೆಯು ಅಂತಿಮವಾಗಿ ತೆರೆಯ ಮೇಲೆ ಬರುವ ಮುನ್ನ, ಒಬ್ಬ ಲೇಖಕನು ವರ್ಷಗಳ ಕಾಲ ಆ ಕಥೆಗೆ ಹೇಗೆ ಬದ್ಧನಾಗಿ ಇರಲು ಸಾಧ್ಯ? ಇವು 19ನೇ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಎಂ ಐ ಎಫ್ ಎಫ್) 2026 ರ ಬಹುನಿರೀಕ್ಷಿತ ಕಾರ್ಯಾಗಾರಗಳ ಸರಣಿಯನ್ನು ಇಂದು ಆರಂಭಿಸಿದ, ಚಿತ್ರಕಥೆಗಾರ, ಸಂಕಲನಕಾರ ಮತ್ತು ನಿರ್ದೇಶಕ ಬಿಪ್ಲಬ್ ಗೋಸ್ವಾಮಿ ಅವರ "ಫ್ರಮ್ ಐಡಿಯಾ ಟು ಔಟ್‌ಲೈನ್: ದಿ ಅನ್ಯಾಟಮಿ ಆಫ್ ಎ ಸೀನ್" ಎಂಬ ಕಾರ್ಯಾಗಾರದಲ್ಲಿ ಅವರು ಚರ್ಚಿಸಿದ ಕೆಲವು ಪ್ರಮುಖ ಪ್ರಶ್ನೆಗಳಾಗಿದ್ದವು.
2025ರ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿದ್ದ ಮತ್ತು ಇತ್ತೀಚಿನ ವರ್ಷಗಳ ಅತ್ಯಂತ ಪ್ರಶಂಸನೀಯ ಚಲನಚಿತ್ರಗಳಲ್ಲಿ ಒಂದಾದ ‘ಲಾಪತಾ ಲೇಡೀಸ್’ ಚಿತ್ರದ ಬರವಣಿಗೆಗಾಗಿ ಹೆಸರುವಾಸಿಯಾದ ಗೋಸ್ವಾಮಿ ಅವರು, ಕಥೆ ಹೇಳುವಿಕೆಯ ಗೊಂದಲಮಯ, ಆಳವಾದ ವೈಯಕ್ತಿಕ ಮತ್ತು ತೀವ್ರವಾದ ಶ್ರಮದಾಯಕ ಪ್ರಕ್ರಿಯೆಯ ಮೂಲಕ ಭಾಗವಹಿಸಿದವರನ್ನು ಮುಖಾಮುಖಿಯಾದರು.
onJune16,2026.N7WY.JPG)
"ಯಾವುದೇ ಸೂತ್ರವಿಲ್ಲ," ಎಂದು ಅವರು ಇಡೀ ಗೋಷ್ಠಿಯಲ್ಲಿ ಪದೇ ಪದೇ ಹೇಳಿದರು. ಪ್ರತಿ ಕಥೆಯೂ ವಿಭಿನ್ನವಾಗಿ ಪ್ರಾರಂಭವಾಗುತ್ತದೆ. ಕೆಲವೊಮ್ಮೆ ಅದು ಸಹಜವಾಗಿ ಮೂಡುತ್ತದೆ, ಕೆಲವೊಮ್ಮೆ ವೀಕ್ಷಣೆಯಿಂದ ಮತ್ತು ಕೆಲವೊಮ್ಮೆ ಆಲೋಚನೆಯನ್ನು ಪ್ರಚೋದಿಸುವ ಒಂದು ಘಟನೆಯಿಂದ ಹೊರಹೊಮ್ಮುತ್ತದೆ. "ಬರಹಗಾರರಾಗಿ ನಾವು ಯಾವಾಗಲೂ ಹುಡುಕಾಟದಲ್ಲಿರುತ್ತೇವೆ. ಕೆಲವೊಮ್ಮೆ ನಮಗೆ ಕಲ್ಪನೆಗಳ ಅಗತ್ಯವಿರುತ್ತದೆ. ಕೆಲವೊಮ್ಮೆ ಕಥೆಯು ತಾನಾಗಿಯೇ ಬರುತ್ತದೆ. ಇದಕ್ಕೆ ಯಾವುದೇ ನಿರ್ದಿಷ್ಟ ಮಾರ್ಗವಿಲ್ಲ" ಎಂದು ಗೋಸ್ವಾಮಿ ಹೇಳಿದರು.
ಸೃಜನಶೀಲ ಪ್ರಕ್ರಿಯೆಯ ಜೊತೆಗಿರುವ ಮಾನಸಿಕ ಸವಾಲುಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದರು. ಯಾವುದೇ ನಿರ್ಮಾಪಕರು ಯೋಜನೆಗೆ ಬೆಂಬಲ ನೀಡುತ್ತಾರೆ ಎಂಬ ಗ್ಯಾರಂಟಿ ಇಲ್ಲದಿದ್ದಾಗಲೂ ಬರವಣಿಗೆಯನ್ನು ಮುಂದುವರಿಸುವುದು ಅತ್ಯಂತ ದೊಡ್ಡ ಅಡಚಣೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. "ನಿಮ್ಮ ಬಳಿ ಉತ್ತಮ ಕಥೆ ಇರಬಹುದು, ಆದರೆ ಯಾವುದೇ ನಿರ್ಮಾಪಕರಿಲ್ಲದಿರಬಹುದು. ಅದು ನಿರಾಶಾದಾಯಕವಾಗಿರಬಹುದು. ಆದರೆ ನೀವು ಸಿನಿಮಾವನ್ನು ನಿಜವಾಗಿಯೂ ಪ್ರೀತಿಸಿದರೆ, ನೀವು ಯಾವುದನ್ನೂ ಲೆಕ್ಕಿಸದೆ ಬರೆಯುವುದನ್ನು ಮುಂದುವರಿಸುತ್ತೀರಿ" ಎಂದು ಅವರು ಹೇಳಿದರು. ನಾನು ಒಬ್ಬ ಲೇಖಕ, ನಿರ್ದೇಶಕ ಮತ್ತು ನಿರ್ಮಾಪಕನ ದೃಷ್ಟಿಕೋನದಿಂದ ಏಕಕಾಲದಲ್ಲಿ ಬರೆಯುತ್ತೇನೆ. ನಿರ್ಮಾಪಕರು ಇಲ್ಲದಿದ್ದರೂ, ನಾನು ಬರೆಯುತ್ತಲೇ ಇರುತ್ತೇನೆ ಎಂದು ಅವರು ಹೇಳಿದರು. ಸಿನಿಮಾವನ್ನು ಎಲ್ಲವನ್ನೂ ನುಂಗುವ ಹಂಬಲ ಎಂದು ಕರೆದ ಗೋಸ್ವಾಮಿ, ಚಲನಚಿತ್ರ ನಿರ್ಮಾಣಕ್ಕೆ ಒಂದು ರೀತಿಯ ಉನ್ಮಾದ ಅಥವಾ ಹುಚ್ಚುತನದ ಅಗತ್ಯವಿದೆ ಎಂದರು.
onJune16,2026.(2)4QRS.JPG)
"ಸಿನಿಮಾ ಎಲ್ಲರಿಗೂ ಅಲ್ಲ. ನೀವು ಅದರ ಬಗ್ಗೆ ಹುಚ್ಚರಾಗಿರಬೇಕು. ಅದಕ್ಕಾಗಿ ಹಸಿದಿರಬೇಕು. ಕೆಲವೊಮ್ಮೆ ಬೇರೆ ಪ್ರಪಂಚದಲ್ಲಿದ್ದಂತೆ ಇರಬೇಕು ಮತ್ತು ಮರೆಗುಳಿತನ ಹೊಂದಿರಬೇಕು, ಏಕೆಂದರೆ ನೀವು ನಿರಂತರವಾಗಿ ಕಥೆಗಳ ಒಳಗೆ ಬದುಕುತ್ತಿರುತ್ತೀರಿ. ಆಗ ಮಾತ್ರ ನೀವು ಈ ಪ್ರಕ್ರಿಯೆಯಲ್ಲಿ ಬದುಕುಳಿಯಲು ಸಾಧ್ಯ" ಎಂದು ಅವರು ಹೇಳಿದರು. ಅವರು ಕಥೆ ಹೇಳುವಿಕೆಯನ್ನು ಅನುಮಾನ ಮತ್ತು ಆಯಾಸದ ಕ್ಷಣಗಳಿಂದ ತುಂಬಿದ ಸುದೀರ್ಘ ಪ್ರಯಾಣ ಎಂದು ಬಣ್ಣಿಸಿದರು. "ನಾವು ಏನನ್ನಾದರೂ ಸೃಷ್ಟಿಸಲು ಬಯಸಿ ಪ್ರಾರಂಭಿಸುತ್ತೇವೆ. ನಂತರ ಮಧ್ಯದಲ್ಲಿ ಎಲ್ಲೋ ದಣಿಯುತ್ತೇವೆ. ಕೆಲವೊಮ್ಮೆ ಗಮ್ಯಸ್ಥಾನವನ್ನು ತಲುಪುವ ಮೊದಲು ವರ್ಷಗಳೇ ಕಳೆದುಹೋಗುತ್ತವೆ. ಆದರೆ ಕಥೆಗಳಿಗೆ ಸಮಯ ಬೇಕಾಗುತ್ತದೆ. ನೀವು ಅವುಗಳೊಂದಿಗೆ ಬದುಕಬೇಕು" ಎಂದು ಅವರು ಹೇಳಿದರು.
‘ಲಾಪತಾ ಲೇಡೀಸ್’ ಚಿತ್ರದ ವಿಕಸನವೇ ಇದಕ್ಕೆ ಪ್ರಬಲ ಉದಾಹರಣೆಯಾಯಿತು. ಗೋಸ್ವಾಮಿ ಅವರು ಈ ಕಥೆಯನ್ನು ಮೊದಲು 2014 ರಲ್ಲಿ ನೋಂದಾಯಿಸಿದ್ದರು, ಆಗ ಅದು ಕೇವಲ 22 ದೃಶ್ಯಗಳ ಸಂಗ್ರಹವಾಗಿ ಅಸ್ತಿತ್ವದಲ್ಲಿತ್ತು ಎಂದು ಬಹಿರಂಗಪಡಿಸಿದರು. "ನಂತರ ಜೀವನ ಸಾಗಿತು. ಆರ್ಥಿಕವಾಗಿ ಬದುಕುಳಿಯಲು ನಾನು ಕೆಲಸ ಮಾಡಬೇಕಾಯಿತು. ಚಲನಚಿತ್ರ ಬಿಡುಗಡೆಯಾಗುವ ಹೊತ್ತಿಗೆ ಜಗತ್ತು ಬದಲಾಗಿತ್ತು. ಆದರೆ ನಾನು ಇನ್ನೂ ಅದೇ ಕಥೆಯನ್ನು ಹೇಳಬೇಕಾಗಿತ್ತು. ನಿನ್ನೆಯ ಕಥೆಯನ್ನು ಇಂದಿನ ಪ್ರೇಕ್ಷಕರಿಗೆ ಹೇಗೆ ಹೇಳುವುದು ಎಂಬುದನ್ನು ಕಂಡುಕೊಳ್ಳುವುದೇ ಸವಾಲಾಗಿತ್ತು." ಈ ಪ್ರಕ್ರಿಯೆಯು ನೋವಿನಿಂದ ಕೂಡಿತ್ತು ಎಂದು ಅವರು ಒಪ್ಪಿಕೊಂಡರು. "ಹಗಲು ರಾತ್ರಿ ನೀವು ಕಥೆಯ ಬಗ್ಗೆ ಯೋಚಿಸುತ್ತೀರಿ. ನೀವು ಏನು ಬರೆಯಬೇಕು? ಪ್ರೇಕ್ಷಕರು ಯಾವುದಕ್ಕೆ ಕನೆಕ್ಟ್ ಆಗುತ್ತಾರೆ? ಒತ್ತಡವಿರುತ್ತದೆ. ಆದರೆ ಅಂತಿಮವಾಗಿ ನೀವು ದಾರಿಯನ್ನು ಕಂಡುಕೊಳ್ಳುತ್ತೀರಿ" ಎಂದು ಅವರು ಹೇಳಿದರು.
onJune16,2026.(1)BSHE.JPG)
ಕಾರ್ಯಾಗಾರದ ಅತ್ಯಂತ ಆಕರ್ಷಕ ಭಾಗವೆಂದರೆ ಚಲನಚಿತ್ರದ ನಿರ್ಮಾಣ ಪ್ರಾರಂಭವಾಗುವ ಮೊದಲೇ ಚಿತ್ರಕಥೆಯನ್ನು ಕಲ್ಪಿಸಿಕೊಳ್ಳುವುದು. ಬರಹಗಾರರು ತಮ್ಮದೇ ಆದ ಚಲನಚಿತ್ರಗಳಿಗೆ ಮೊದಲ ಪ್ರೇಕ್ಷಕರಾಗಲು ಗೋಸ್ವಾಮಿ ಕರೆ ನೀಡಿದರು. "ನಾನು ಬರೆಯುವಾಗ, ಒಂದು ಕಾಲ್ಪನಿಕ ಪರದೆಯ ಮೇಲೆ ಚಲನಚಿತ್ರವನ್ನು ನೋಡುತ್ತೇನೆ. ನಾನು ಮೊದಲ ವೀಕ್ಷಕನಾಗುತ್ತೇನೆ. ನಂತರ ಪ್ರೇಕ್ಷಕರು ಅದನ್ನು ಹೇಗೆ ನೋಡುತ್ತಾರೆ ಎಂಬುದನ್ನು ನಾನು ಕಲ್ಪಿಸಿಕೊಳ್ಳುತ್ತೇನೆ. ನಾನು ಮನಸ್ಸಿನಲ್ಲೇ ಎಡಿಟಿಂಗ್ ಟೇಬಲ್ ಗೆ ಭೇಟಿ ನೀಡಿ ದೃಶ್ಯಗಳನ್ನು ಹೇಗೆ ಜೋಡಿಸಲಾಗಿದೆ ಎಂಬುದನ್ನು ಸಹ ನೋಡುತ್ತೇನೆ. ಈ ಅಭ್ಯಾಸವು ಚಲನಚಿತ್ರವನ್ನು ಬಹು ಆಯಾಮಗಳಿಂದ ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.
ಚಲನಚಿತ್ರ ಸಂಕಲನಕಾರನಾಗಿ ಅವರ ಹಿನ್ನೆಲೆಯು ಅವರ ಬರವಣಿಗೆಯ ಪ್ರಕ್ರಿಯೆಯ ಮೇಲೆ ಗಮನಾರ್ಹ ಪ್ರಭಾವ ಬೀರಿದೆ. ಒಟ್ಟಾಗಿ ಕೆಲಸ ಮಾಡುವ ಮಹತ್ವವನ್ನು ಒತ್ತಿಹೇಳಿದ ಅವರು, ಸಿನಿಮಾ ಎಂಬುದು ಎಂದಿಗೂ ಒಬ್ಬನೇ ವ್ಯಕ್ತಿಯ ಕೆಲಸವಲ್ಲ ಎಂಬುದನ್ನು ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾತೃಗಳಿಗೆ ನೆನಪಿಸಿದರು. "ಚಲನಚಿತ್ರವು ಒಂದು ಸಾಮೂಹಿಕ ಮಾಧ್ಯಮವಾಗಿದೆ. ಬರಹಗಾರರು ಇತರ ವಿಭಾಗಗಳನ್ನು ಸಹ ಅರ್ಥಮಾಡಿಕೊಳ್ಳಬೇಕು. ನೀವು ಏನನ್ನಾದರೂ ಬರೆದ ನಂತರ, ನೀವು ಅದರಿಂದ ದೂರ ಸರಿಯಬೇಕು. ನೀವು ಕಠಿಣವಾಗಿ ವರ್ತಿಸಿ, ಎಲ್ಲವೂ ನೀವು ಕಲ್ಪಿಸಿಕೊಂಡಂತೆಯೇ ಇರಬೇಕೆಂದು ಪಟ್ಟು ಹಿಡಿದರೆ, ನೀವು ಸಮಸ್ಯೆಗಳನ್ನು ಎದುರಿಸುತ್ತೀರಿ. ಇತರ ವಿಭಾಗಗಳು ತಮ್ಮದೇ ಆದ ದೃಷ್ಟಿಕೋನಗಳನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಹೊಂದಿರಬೇಕು." ಎಂದರು. ಚಿತ್ರಕಥೆಯ ಸಿದ್ಧಾಂತಗಳು ಮತ್ತು ಕಥೆ ಹೇಳುವ ಸೂತ್ರಗಳ ಬಗ್ಗೆ ಕೇಳಿದಾಗ, ಗೋಸ್ವಾಮಿ ಅವರು ಕಠಿಣ ಚೌಕಟ್ಟುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. "ನಾನು ಸಿದ್ಧಾಂತಗಳ ಮೇಲೆ ಗಮನ ಹರಿಸುವುದಿಲ್ಲ. ನಾನು ಕಥೆಯ ಮೇಲೆ ಗಮನ ಹರಿಸುತ್ತೇನೆ. ಸಿನಿಮಾ ಎಂದರೆ ಅಂತಿಮವಾಗಿ ಕಥೆ ಹೇಳುವುದು" ಎಂದು ಅವರು ಹೇಳಿದರು. "ಕೆಲವೊಮ್ಮೆ ಆಶ್ಚರ್ಯಕರ ಘಟನೆಯೊಂದು ಕಥೆಯನ್ನು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಎರಡನೇ ಟೇಕ್-ಆಫ್ ಇರುತ್ತದೆ. ಪ್ರತಿ ಕಥೆಯೂ ತನ್ನದೇ ಆದ ಲಯವನ್ನು ಕಂಡುಕೊಳ್ಳುತ್ತದೆ" ಎಂದು ಅವರು ಹೇಳಿದರು.
onJune16,2026.(3)QK3H.JPG)
ಅವರ ಪ್ರಕಾರ, ಮಹತ್ವಾಕಾಂಕ್ಷಿ ಬರಹಗಾರರು ಭರವಸೆಯ ಆಲೋಚನೆಯನ್ನು ಹೊಂದಿದ್ದಾಗ ಹೆಚ್ಚಾಗಿ ಆತಂಕಕ್ಕೊಳಗಾಗುತ್ತಾರೆ, ಆದರೆ ಅದನ್ನು ಸಂಪೂರ್ಣ ಚಿತ್ರಕಥೆಯಾಗಿ ವಿಸ್ತರಿಸಲು ಹೆಣಗಾಡುತ್ತಾರೆ. "ನೀವು ಹೇಗೆ ಬರೆಯುತ್ತಿದ್ದೀರಿ ಎಂಬುದರ ಬಗ್ಗೆ ಹೆಚ್ಚು ಚಿಂತಿಸಬೇಡಿ. ನೀವು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೀರಿ ಎಂಬುದರ ಮೇಲೆ ಗಮನ ಹರಿಸಿ. ಕೆಲವೊಮ್ಮೆ ನಾನು ಒಂದೇ ಸಾಲಿನಿಂದ ಪ್ರಾರಂಭಿಸುತ್ತೇನೆ. ನಂತರ ಅದು ಸಿನಾಪ್ಸಿಸ್ ಆಗುತ್ತದೆ. ನಂತರ ದೃಶ್ಯಗಳು ಮೂಡುತ್ತವೆ. ಇನ್ನು ಕೆಲವು ಸಂದರ್ಭಗಳಲ್ಲಿ, ನಾನು ಮೊದಲಿನಿಂದಲೂ ದೃಶ್ಯದ ನಂತರ ದೃಶ್ಯವನ್ನು ಬರೆಯುತ್ತೇನೆ. ಇದಕ್ಕೆ ಯಾವುದೇ ನಿಯಮವಿಲ್ಲ" ಎಂದು ಅವರು ಹೇಳಿದರು. ಅತ್ಯಂತ ಮುಖ್ಯವಾದುದು ಪರಿಶ್ರಮ ಮತ್ತು ಪಟ್ಟು ಬಿಡದಿರುವುದು ಎಂದು ಅವರು ಒತ್ತಿ ಹೇಳಿದರು. "ಮೊದಲು ನಿಮ್ಮನ್ನು ನೀವು ನಂಬಿ. ಬರೆಯುವುದನ್ನು ಮುಂದುವರಿಸಿ. ನಂತರ, ನೀವು ಅದನ್ನು ವೃತ್ತಿಪರವಾಗಿ ಪ್ರಸ್ತುತಪಡಿಸಿದಾಗ, ಉದ್ಯಮದ ಮಾನದಂಡಗಳ ಪ್ರಕಾರ ಅದನ್ನು ರಚಿಸಬಹುದು." ಬರವಣಿಗೆಯನ್ನು ಕೇವಲ ಶಾರ್ಟ್‌ಕಟ್ ಗಳು ಅಥವಾ ತಾಂತ್ರಿಕ ತಂತ್ರಗಳ ಮೂಲಕ ಮಾತ್ರ ಕರಗತ ಮಾಡಿಕೊಳ್ಳಬಹುದು ಎಂಬ ಕಲ್ಪನೆಯನ್ನು ಗೋಸ್ವಾಮಿ ಪ್ರಶ್ನಿಸಿದರು. "ಯಾವುದೇ ಶಾರ್ಟ್‌ಕಟ್ ಗಳಿಲ್ಲ. ಬರವಣಿಗೆ ಕಷ್ಟ. ನೀವು ತಂತ್ರಗಳನ್ನು ಕಲಿಯಬಹುದು, ಆದರೆ ಅವು ನಿಮ್ಮನ್ನು ಸ್ವಯಂಚಾಲಿತವಾಗಿ ಉತ್ತಮ ಬರಹಗಾರರನ್ನಾಗಿ ಮಾಡುವುದಿಲ್ಲ" ಎಂದರು. ಬದಲಿಗೆ, ನೋಡುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಅವರು ಭಾಗವಹಿಸಿದವರನ್ನು ಒತ್ತಾಯಿಸಿದರು. "ಜನರನ್ನು ಗಮನಿಸಿ. ಸಮಾಜವನ್ನು ಗಮನಿಸಿ. ಭಾವನೆಗಳು, ಸಂಬಂಧಗಳು ಮತ್ತು ಸಂದರ್ಭಗಳನ್ನು ಗಮನಿಸಿ. ಆ ವೀಕ್ಷಣೆಗಳೇ ನಿಮ್ಮ ಪಾತ್ರಗಳು ಮತ್ತು ನಿಮ್ಮ ಕಥೆಗಳಾಗುತ್ತವೆ." ಎಂದರು.
ಈ ಅಧಿವೇಶನವು ಮಹತ್ವಾಕಾಂಕ್ಷಿ ಬರಹಗಾರರಿಗೆ ನಿರೂಪಣೆ, ಪಾತ್ರ ಮತ್ತು ದೃಶ್ಯ ನಿರ್ಮಾಣದ ಬಗ್ಗೆ ಪ್ರಾಯೋಗಿಕ ಒಳನೋಟಗಳನ್ನು ಮಾತ್ರ ನೀಡದೆ, ಪ್ರತಿ ಚಿತ್ರಕಥೆಯೂ ತನ್ನದೇ ಆದ ಹಾದಿಯನ್ನು ಕಂಡುಕೊಳ್ಳುತ್ತದೆ ಎಂಬ ಭರವಸೆಯನ್ನು ನೀಡಿತು. ಉದಯೋನ್ಮುಖ ಕಥೆಗಾರರು ಮತ್ತು ಚಲನಚಿತ್ರ ಉತ್ಸಾಹಿಗಳಿಂದ ತುಂಬಿದ್ದ ಕೋಣೆಯಲ್ಲಿ, ಗೋಸ್ವಾಮಿ ಅವರ ಸಂದೇಶ ಸರಳ ಹಾಗೂ ಶಕ್ತಿಯುತವಾಗಿತ್ತು: ಕಥೆಯನ್ನು ನಂಬಿ, ಪ್ರಕ್ರಿಯೆಯನ್ನು ನಂಬಿ ಮತ್ತು ಮುಖ್ಯವಾಗಿ, ಬರೆಯುವುದನ್ನು ಮುಂದುವರಿಸಿ. ಕೋಲ್ಕತ್ತಾದ ಸತ್ಯಜಿತ್ ರೇ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ನಿಂದ (ಎಸ್ ಆರ್ ಎಫ್ ಟಿ ಐ) ಚಲನಚಿತ್ರ ಸಂಕಲನದಲ್ಲಿ ಪದವಿ ಪಡೆದಿರುವ ಬಿಪ್ಲಬ್ ಗೋಸ್ವಾಮಿ ಅವರು ಪ್ರಸ್ತುತ ಅಗರ್ತಲಾದ ತ್ರಿಪುರಾ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ನಲ್ಲಿ (ಟಿ ಎಫ್ ಟಿ ಐ) ಸಲಹೆಗಾರರಾಗಿದ್ದಾರೆ.
19ನೇ ಎಂ ಐ ಎಫ್ ಎಫ್ ಬಗ್ಗೆ
ಎಂ ಐ ಎಫ್ ಎಫ್ ನ 19ನೇ ಆವೃತ್ತಿಯು ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರಗಳ ಪ್ರದರ್ಶನದ ಜೊತೆಗೆ ಉದ್ಯಮ-ಕೇಂದ್ರಿತ ಉಪಕ್ರಮಗಳ ರೋಮಾಂಚಕಾರಿ ಸರಣಿಯನ್ನು ಒಳಗೊಂಡಿರುವ ಆಳವಾದ ಮತ್ತು ತಲ್ಲೀನಗೊಳಿಸುವ ಸಿನಿಮೀಯ ಅನುಭವವನ್ನು ನೀಡುತ್ತದೆ.
- ಈ ವರ್ಷ, ಉತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಭಾರತ ಸೇರಿದಂತೆ 47 ದೇಶಗಳಿಂದ 1,459 ಚಲನಚಿತ್ರಗಳ ಪ್ರವೇಶ ಬಂದಿದೆ.
- ಈ ಚಲನಚಿತ್ರೋತ್ಸವವು 42 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಮತ್ತು ಭಾರತದ ಹೊರಗಿನ 30 ಕ್ಕೂ ಹೆಚ್ಚು ಭಾಷೆಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ, ಇದು ಅದರ ಜಾಗತಿಕ ವ್ಯಾಪ್ತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಫಲಿಸುತ್ತದೆ.
- ಪ್ರಪಂಚದಾದ್ಯಂತದ ಹೆಸರಾಂತ ಚಲನಚಿತ್ರ ನಿರ್ಮಾಪಕರ ಕೃತಿಗಳನ್ನು ಒಳಗೊಂಡಿರುವ ಈ ಉತ್ಸವವು ಕೆಲವು ಅತ್ಯುತ್ತಮ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು, ಅನಿಮೇಷನ್ ಗಳು, ಚೊಚ್ಚಲ ನಿರ್ದೇಶಕರ ಚಲನಚಿತ್ರಗಳು ಮತ್ತು ವಿದ್ಯಾರ್ಥಿ ಚಲನಚಿತ್ರಗಳನ್ನು ಪ್ರಸ್ತುತಪಡಿಸಲಿದೆ.
- ಚಲನಚಿತ್ರ ಪ್ರದರ್ಶನಗಳ ಜೊತೆಗೆ, ಡಾಕ್ ಬಜಾರ್ ನ 2ನೇ ಆವೃತ್ತಿ, ಮಾಸ್ಟರ್‌ಕ್ಲಾಸ್ ಗಳು ಮತ್ತು ಐಡಿಪಿಎ ನಡೆಸುವ ಮುಕ್ತ ಸಂವಾದವು ಉತ್ಸವದಲ್ಲಿ ಸಿನಿಮೀಯ ಮತ್ತು ಸೃಜನಶೀಲ ವಿನಿಮಯವನ್ನು ಇನ್ನಷ್ಟು ಹೆಚ್ಚಿಸಲಿದೆ.
ಎಂ ಐ ಎಫ್ ಎಫ್ 2026 ರ ಕಥೆ ಹೇಳುವಿಕೆಯ ರೋಮಾಂಚಕ ಜಗತ್ತಿಗೆ ಹೆಜ್ಜೆ ಇಡಿ, ಅಲ್ಲಿ ಶಕ್ತಿಯುತ ಸಿನಿಮಾ, ಸೃಜನಶೀಲ ಮನಸ್ಸುಗಳು ಮತ್ತು ಸ್ಪೂರ್ತಿದಾಯಕ ಧ್ವನಿಗಳು ಒಟ್ಟಿಗೆ ಸೇರಿ ಸಾಕ್ಷ್ಯಚಿತ್ರ, ಅನಿಮೇಷನ್ ಮತ್ತು ಕಿರುಚಿತ್ರ ನಿರ್ಮಾಣದ ಮರೆಯಲಾಗದ ಆಚರಣೆಯನ್ನು ಸೃಷ್ಟಿಸುತ್ತವೆ.
*****
रिलीज़ आईडी:
2273787
| Visitor Counter:
13