ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ 2026ರ ಜೂನ್ 17 ರಿಂದ 26 ರವರೆಗೆ “ನಶಾ ಮುಕ್ತ ಭಾರತ ಅಭಿಯಾನ – ವಿಕಸಿತ ಭಾರತ್ ಕಿ ಪೆಹಚಾನ್” ಅಡಿಯಲ್ಲಿ ‘ನಶಾ ಮುಕ್ತ ಭಾರತ ಸಪ್ತಾಹ’ ಆಚರಣೆ

प्रविष्टि तिथि: 16 JUN 2026 3:50PM by PIB Bengaluru

ಮಾದಕ ವಸ್ತುಗಳ ಬೇಡಿಕೆ ಕಡಿತಗೊಳಿಸುವಲ್ಲಿ ನೋಡಲ್ ಇಲಾಖೆಯಾಗಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು (DoSJE) 2026ರ ಜೂನ್ 26 ರಂದು “ಮಾದಕ ದ್ರವ್ಯಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ಅಂತರರಾಷ್ಟ್ರೀಯ ದಿನ”ವನ್ನು ಆಚರಿಸುತ್ತಿದೆ. ಈ ದಿನದ ಮಹತ್ವವನ್ನು ಗುರುತಿಸಿ, ಪ್ರತಿ ವರ್ಷವೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳಾದ್ಯಂತ ಆನ್‌ಲೈನ್ ಮತ್ತು ಆಫ್‌ಲೈನ್ (ನೇರ) ಚಟುವಟಿಕೆಗಳ ಸರಣಿಯನ್ನು ನಡೆಸಲಾಗುತ್ತದೆ. ಈ ಪ್ರಯತ್ನಗಳನ್ನು ಇನ್ನಷ್ಟು ತೀವ್ರಗೊಳಿಸಲು, ಇಲಾಖೆಯು ದೇಶಾದ್ಯಂತ “ನಶಾ ಮುಕ್ತ್ ಭಾರತ್ ಅಭಿಯಾನ್ – ವಿಕಸಿತ್ ಭಾರತ್ ಕಿ ಪೆಹಚಾನ್” ಎಂಬ ವಿಷಯದ ಅಡಿಯಲ್ಲಿ 2026ರ ಜೂನ್ 17 ರಿಂದ 26 ರವರೆಗೆ ‘ನಶಾ ಮುಕ್ತ ಭಾರತ ಸಪ್ತಾಹ’ವನ್ನು ಆಯೋಜಿಸುತ್ತಿದೆ.

ಈ ಸಪ್ತಾಹವನ್ನು ಜೂನ್ 17 ರಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು 'ನಶಾ ಮುಕ್ತಿ ಮಿತ್ರ' (NMM) ಗಾಗಿ ವೈಯಕ್ತಿಕ ಡ್ಯಾಶ್‌ಬೋರ್ಡ್ ಮತ್ತು ನಶಾ ಮುಕ್ತ ಭಾರತ ಅಭಿಯಾನ (NMBA) ಕುರಿತಾದ ಕಿರುಚಿತ್ರ ಬಿಡುಗಡೆಯಂತಹ ಪ್ರಮುಖ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಈ ಉಪಕ್ರಮಗಳು ದೇಶಾದ್ಯಂತ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ, ಸ್ವಯಂಸೇವಕರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವ ಮತ್ತು ಮಾದಕ ದ್ರವ್ಯ ವ್ಯಸನದ ವಿರುದ್ಧದ ಜಾಗೃತಿಯನ್ನು ವಿಸ್ತರಿಸುವ ಗುರಿ ಹೊಂದಿವೆ.

ಈ ನಶಾ ಮುಕ್ತ ಭಾರತ ಸಪ್ತಾಹವು ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಜಿಲ್ಲಾ ಆಡಳಿತಗಳು, ಆಧ್ಯಾತ್ಮಿಕ ಸಂಸ್ಥೆಗಳು ಮತ್ತು ಸಹಾಯಾನುದಾನ (GIA) ಪಡೆಯುವ ಸಂಸ್ಥೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಪಾಲುದಾರರನ್ನು ಒಳಗೊಳ್ಳಲಿದೆ. ಮಾದಕ ದ್ರವ್ಯ ವ್ಯಸನವನ್ನು ತಡೆಗಟ್ಟಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ದೇಶಾದ್ಯಂತ ಸಮನ್ವಯದೊಂದಿಗೆ ಈ ಪ್ರಯತ್ನವನ್ನು ಮಾಡಲಾಗುತ್ತಿದೆ.

2026ರ ಜೂನ್ 17 ರಿಂದ 26 ರವರೆಗೆ ದೇಶಾದ್ಯಂತ ಸರಣಿ ಜಾಗೃತಿ ಮತ್ತು ಸಮುದಾಯ ಸಜ್ಜುಗೊಳಿಸುವ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಇವುಗಳಲ್ಲಿ ಸಾಮೂಹಿಕ ಪ್ರತಿಜ್ಞಾ ವಿಧಿ ಸ್ವೀಕಾರ ಅಭಿಯಾನಗಳು, ಜಾಗೃತಿ ರ‍್ಯಾಲಿಗಳು, ಸೈಕಲ್ ರ‍್ಯಾಲಿಗಳು, ಯುವಜನರ-ನೇತೃತ್ವದ ಅಭಿಯಾನಗಳು, ಪೋಸ್ಟರ್ ತಯಾರಿಕೆ, ಘೋಷಾವಾಕ್ಯ ಬರವಣಿಗೆ ಮತ್ತು ಪ್ರಬಂಧ ಸ್ಪರ್ಧೆಗಳು, ವೆಬಿನಾರ್‌ಗಳು, ತಜ್ಞರೊಂದಿಗಿನ ಸಂವಾದಗಳು, ಬೀದಿ ನಾಟಕಗಳು, ಜಾನಪದ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ತಲುಪುವ ಉಪಕ್ರಮಗಳು ಸೇರಿವೆ.

ಶಾಲೆಗಳು, ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ಯುವಜನರನ್ನು ತೊಡಗಿಸಿಕೊಳ್ಳಲು ವಿಶೇಷ ಒತ್ತು ನೀಡಲಾಗುವುದು. ತಳಮಟ್ಟದ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಪಂಚಾಯತ್ ರಾಜ್ ಸಂಸ್ಥೆಗಳು, ಎನ್‌ಎಸ್‌ಎಸ್ (NSS) ಸ್ವಯಂಸೇವಕರು, ಮೈ ಭಾರತ್ ಸ್ವಯಂಸೇವಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಸ್ಥಳೀಯ ನಾಯಕರ ಜಾಲಗಳ ಮೂಲಕವೂ ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು.

ಮಾದಕ ದ್ರವ್ಯ ವ್ಯಸನವನ್ನು ತಡೆಗಟ್ಟುವಲ್ಲಿ ಉತ್ತಮ ಆರೋಗ್ಯ ಮತ್ತು ಆರೋಗ್ಯಕರ ಜೀವನಶೈಲಿಯ ಪಾತ್ರವನ್ನು ಗುರುತಿಸಿ, 2026ರ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲೂ ವಿಶೇಷ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಇದರಲ್ಲಿ "ಆರೋಗ್ಯಕ್ಕಾಗಿ ಯೋಗ, ಮಾದಕ ದ್ರವ್ಯಗಳಿಗೆ ಬೇಡ ಎನ್ನಿ" ಎಂಬ ಸಂದೇಶದ ಅಡಿಯಲ್ಲಿ ಯೋಗ ಮತ್ತು ಧ್ಯಾನದ ಅವಧಿಗಳು, ಸ್ವಾಸ್ಥ್ಯ ಕಾರ್ಯಕ್ರಮಗಳು ಮತ್ತು ಸಮುದಾಯ ಆಧಾರಿತ ಜಾಗೃತಿ ಉಪಕ್ರಮಗಳನ್ನು ಆಯೋಜಿಸಲಾಗುವುದು.

ನೇರ ಜಾಗೃತಿ ಚಟುವಟಿಕೆಗಳಿಗೆ ಪೂರಕವಾಗಿ ಸಮಗ್ರ ಮಲ್ಟಿಮೀಡಿಯಾ ಪ್ರಚಾರ ತಂತ್ರವನ್ನು ಬಳಸಿಕೊಳ್ಳಲಾಗುವುದು. ಈ ಅಭಿಯಾನವು #NashaMuktBharat ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಸಮೂಹ ಮಾಧ್ಯಮಗಳನ್ನು ಬಳಸಿಕೊಳ್ಳಲಿದೆ. ಎಲ್ಲಾ ನಾಗರಿಕರು ದೇಶವ್ಯಾಪಿ ಹಮ್ಮಿಕೊಂಡಿರುವ ಇ-ಪ್ರತಿಜ್ಞೆಯಲ್ಲಿ (e-Pledge) ಪಾಲ್ಗೊಳ್ಳಲು ಹಾಗೂ https://nmba.dosje.gov.in/volunteer/registration ಲಿಂಕ್ ಮೂಲಕ ಅಥವಾ ಕೆಳಗೆ ನೀಡಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ 'ನಶಾ ಮುಕ್ತಿ ಮಿತ್ರ' ಆಗಲು ಪ್ರೋತ್ಸಾಹಿಸಲಾಗುತ್ತದೆ. ಈ ಮೂಲಕ ಆರೋಗ್ಯವಂತ, ಜಾಗೃತ ಮತ್ತು ಸಬಲ ನಾಗರಿಕರಿಂದ ಕೂಡಿದ 'ವಿಕಸಿತ ಭಾರತ'ದ ದೂರದೃಷ್ಟಿಯನ್ನು ಬಲಪಡಿಸಲು ಕೋರಲಾಗಿದೆ.

****


(रिलीज़ आईडी: 2273757) आगंतुक पटल : 8
इस विज्ञप्ति को इन भाषाओं में पढ़ें: Tamil , English , Urdu , हिन्दी , Telugu , Malayalam