ಭಾರತವನ್ನು ವಿಶ್ವದ ಸೃಜನಶೀಲ ಶಕ್ತಿಯನ್ನಾಗಿ ರೂಪಿಸುವ ಕರೆಯೊಂದಿಗೆ ಆರಂಭಗೊಂಡ 19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026
ಭಾರತದ ವೇಗವಾಗಿ ಬೆಳೆಯುತ್ತಿರುವ ಮಾಧ್ಯಮ ಆರ್ಥಿಕತೆ, ಜಾಗತಿಕ ಕಥೆ ಹೇಳುವ ಸಾಮರ್ಥ್ಯ ಮತ್ತು ಸೃಜನಶೀಲ-ಚಾಲಿತ ಭವಿಷ್ಯದ ಬಗ್ಗೆ ಬೆಳಕು ಚೆಲ್ಲಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್
ಸಾಕ್ಷ್ಯಚಿತ್ರ, ಕಿರುಚಿತ್ರ ಮತ್ತು ಅನಿಮೇಷನ್ ಚಿತ್ರಗಳಿಗಾಗಿ ಭಾರತದ ಪ್ರತಿಷ್ಠಿತ ಚಲನಚಿತ್ರೋತ್ಸವವಾಗಿರುವ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಎಂ ಐ ಎಫ್ ಎಫ್) 19ನೇ ಆವೃತ್ತಿಯನ್ನು ಸೋಮವಾರ ಸಂಜೆ ಮುಂಬೈನ ದಾದರ್ ನಲ್ಲಿರುವ ರವೀಂದ್ರ ನಾಟ್ಯ ಮಂದಿರದಲ್ಲಿ ಅದ್ಧೂರಿಯಾಗಿ ಉದ್ಘಾಟಿಸಲಾಯಿತು. ಚಿತ್ರರಂಗದ ಶ್ರೇಷ್ಠತೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸೃಜನಶೀಲ ಆವಿಷ್ಕಾರಗಳ ಭವ್ಯ ಆಚರಣೆಯೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು. ಇದು ಕಥೆ ಹೇಳುವಿಕೆ, ವಿಷಯ ಸೃಷ್ಟಿ (ಕಂಟೆಂಟ್ ಕ್ರಿಯೇಷನ್) ಮತ್ತು ಸೃಜನಶೀಲ ಉದ್ಯಮಶೀಲತೆಗೆ ಭಾರತವನ್ನು ಜಾಗತಿಕ ಹಬ್ ಆಗಿ ಬಿಂಬಿಸುವ ಮೂಲಕ ಒಂದು ವಾರ ಕಾಲ ನಡೆಯುವ ಈ ಉತ್ಸವಕ್ಕೆ ನಾಂದಿ ಹಾಡಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಮುರುಗನ್, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರವು ಸಾಧಿಸಿರುವ ಬೆಳವಣಿಗೆಯನ್ನು ಶ್ಲಾಘಿಸಿದರು. "ಇಂದು ಭಾರತವನ್ನು ಜಗತ್ತಿನಾದ್ಯಂತ ಸೃಜನಶೀಲ ಶಕ್ತಿ ಮತ್ತು ಕಂಟೆಂಟ್ ಕ್ರಿಯೇಷನ್ ನಲ್ಲಿ ನಂಬಿಕಸ್ಥ ಪಾಲುದಾರ ಎಂದು ಗುರುತಿಸಲಾಗಿದೆ. ಖಂಡಗಳಾದ್ಯಂತ ಇರುವ ಪ್ರೇಕ್ಷಕರನ್ನು ಪ್ರೇರೇಪಿಸುವ ಸಾಮರ್ಥ್ಯ ನಮ್ಮ ಕಥೆಗಳಿಗಿದೆ ಹಾಗೂ ನಮ್ಮ ಸೃಜನಶೀಲ ಪ್ರತಿಭೆಗಳ ವ್ಯಾಪ್ತಿ ಮತ್ತು ಸಾಮರ್ಥ್ಯಕ್ಕೆ ಯಾವುದೇ ಸಾಟಿಯಿಲ್ಲ" ಎಂದು ಅವರು ಹೇಳಿದರು.
"ವೇಗದ ಡಿಜಿಟಲ್ ರೂಪಾಂತರ ಮತ್ತು ಕಂಟೆಂಟ್ ಬಳಕೆಯ ಹೆಚ್ಚಳದಿಂದಾಗಿ ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮವು 2025 ರಲ್ಲಿ ಶೇಕಡಾ 9 ರಷ್ಟು ಬೆಳವಣಿಗೆ ಸಾಧಿಸಿ ₹2.78 ಲಕ್ಷ ಕೋಟಿಗೆ ತಲುಪಿದೆ. ಡಿಜಿಟಲ್ ಮಾಧ್ಯಮವು ಈ ಉದ್ಯಮದ ಅತಿ ದೊಡ್ಡ ವಲಯವಾಗಿ ಹೊರಹೊಮ್ಮಿದ್ದು, ಮೊದಲ ಬಾರಿಗೆ ₹1 ಲಕ್ಷ ಕೋಟಿ ಆದಾಯದ ಮೈಲಿಗಲ್ಲನ್ನು ದಾಟಿದೆ" ಎಂದು ಸಚಿವರು ತಿಳಿಸಿದರು. ಈ ಕ್ಷೇತ್ರವು ಶೇಕಡಾ 7 ಕ್ಕಿಂತ ಹೆಚ್ಚು ಸಿಎಜಿಆರ್ ಬೆಳವಣಿಗೆಯೊಂದಿಗೆ 2028 ರ ವೇಳೆಗೆ ₹3.3 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ. 2025 ರಲ್ಲೇ ಭಾರತದಲ್ಲಿ 1,900 ಕ್ಕೂ ಹೆಚ್ಚು ಚಲನಚಿತ್ರಗಳು ಬಿಡುಗಡೆಯಾಗಿದ್ದು, ಚಿತ್ರಮಂದಿರಗಳ ಆದಾಯದಲ್ಲಿ ಶೇಕಡಾ 16 ರಷ್ಟು ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಅವರು ಹೇಳಿದರು.
ಮುಂಬೈ ನಗರವನ್ನು ಭಾರತದ ಸೃಜನಶೀಲ ರಾಜಧಾನಿ ಎಂದು ಬಣ್ಣಿಸಿದ ಅವರು, 2025 ರಲ್ಲಿ ಈ ನಗರದಲ್ಲಿ ಯಶಸ್ವಿಯಾಗಿ ನಡೆದ 'ವಿಶ್ವ ಶ್ರವ್ಯ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ' (ವೇವ್ಸ್) ಯನ್ನು ನೆನಪಿಸಿಕೊಂಡರು. ಭಾರತವನ್ನು ವಿಶ್ವದ ಪ್ರಮುಖ ಕ್ರಿಯೇಟರ್ಸ್ ಹಬ್ ಮಾಡುವ ನಿಟ್ಟಿನಲ್ಲಿ ಎಂ ಐ ಎಫ್ ಎಫ್ ನಂತಹ ವೇದಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಸಾಕ್ಷ್ಯಚಿತ್ರ ನಿರ್ದೇಶಕರನ್ನು ನಿರ್ಮಾಪಕರು, ವಿತರಕರು, ಉದ್ಯಮದ ತಜ್ಞರು ಮತ್ತು ಜಾಗತಿಕ ಪ್ರೇಕ್ಷಕರೊಂದಿಗೆ ಜೋಡಿಸುವ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿರುವ 'ವೇವ್ಸ್ ಡಾಕ್ ಬಜಾರ್' ನ ಬೆಳೆಯುತ್ತಿರುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಡಾ. ಮುರುಗನ್, ಈ ಉಪಕ್ರಮವು ಉದಯೋನ್ಮುಖ ಪ್ರತಿಭೆಗಳು ಮತ್ತು ಹಿರಿಯ ವೃತ್ತಿಪರರ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿದೆ ಮತ್ತು ಪ್ರಭಾವಶಾಲಿ ಸಾಕ್ಷ್ಯಚಿತ್ರಗಳ ಸೃಷ್ಟಿ ಹಾಗೂ ಅಂತಾರಾಷ್ಟ್ರೀಯ ವಿತರಣೆಗೆ ಅನುವು ಮಾಡಿಕೊಡುತ್ತಿದೆ ಎಂದು ಹೇಳಿದರು.
ವಾರ್ತಾ ಮತ್ತು ಪ್ರಸಾರ ಸಚಿವಾಲಯ, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಮತ್ತು ಚಲನಚಿತ್ರೋತ್ಸವದೊಂದಿಗೆ ನಂಟು ಹೊಂದಿರುವ ಎಲ್ಲಾ ಪಾಲುದಾರರನ್ನು ಅಭಿನಂದಿಸಿದ ಡಾ. ಮುರುಗನ್, ಮಿಫ್ 2026 ನಾವೀನ್ಯತೆ, ಸೃಜನಶೀಲತೆ ಮತ್ತು ಸಹಯೋಗದ ಮೂಲಕ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಆಶಿಶ್ ಶೆಲಾರ್ ಅವರು, ಪ್ರಪಂಚದಾದ್ಯಂತದ ಭಾಗವಹಿಸುವವರನ್ನು ಮುಂಬೈಗೆ ಸ್ವಾಗತಿಸಿದರು ಮತ್ತು ಸೃಜನಶೀಲ ಉದ್ಯಮಗಳಿಗೆ ಬೆಂಬಲ ನೀಡುವ ರಾಜ್ಯದ ಬದ್ಧತೆಯನ್ನು ಪುನರುಚ್ಚರಿಸಿದರು. ಮುಂಬೈನಲ್ಲಿ ದೇಶದ ಮೊದಲ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ' ಅನ್ನು ಸ್ಥಾಪಿಸಿದ್ದಕ್ಕಾಗಿ ಭಾರತ ಸರ್ಕಾರವನ್ನು ಶ್ಲಾಘಿಸಿದ ಸಚಿವರು, ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ನಗರದಲ್ಲಿ ಮಾಧ್ಯಮ ಹಬ್ (ಮೀಡಿಯಾ ಹಬ್) ಸ್ಥಾಪಿಸುವ ಯೋಜನೆ ರಾಜ್ಯ ಸರ್ಕಾರಕ್ಕಿದೆ ಎಂದು ಹೇಳಿದರು. 2025 ರಲ್ಲಿ ಮುಂಬೈನಲ್ಲಿ ನಡೆದ ವಿಶ್ವ ಆಡಿಯೋ ವಿಶುಯಲ್ ಮತ್ತು ಎಂಟರ್‌ಟೈನ್‌ಮೆಂಟ್ ಶೃಂಗಸಭೆಯ ಉಪಕ್ರಮಕ್ಕಾಗಿ ಶ್ರೀ ಶೆಲಾರ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಇದಕ್ಕೂ ಮುನ್ನ ಸಭೆಯನ್ನು ಸ್ವಾಗತಿಸಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರು, ಮುಕ್ತ ಆಲೋಚನೆಗಳ ವಿನಿಮಯ ಮತ್ತು ಸೃಜನಶೀಲ ಅಭಿವ್ಯಕ್ತಿಯಲ್ಲಿ ಭಾರತಕ್ಕಿರುವ ಪುರಾತನ ನಾಗರಿಕತೆಯ ನಂಬಿಕೆಯ ಆಚರಣೆಯೇ 'ಮಿಫ್' ಆಗಿದೆ ಎಂದರು. ಋಗ್ವೇದದ ಅಮರ ಸಂದೇಶವಾದ "ನಮಗೆ ಎಲ್ಲಾ ಕಡೆಗಳಿಂದಲೂ ಉದಾತ್ತ ಆಲೋಚನೆಗಳು ಬರಲಿ" ಎಂಬುದನ್ನು ಉಲ್ಲೇಖಿಸಿದ ಅವರು, ಈ ಉತ್ಸವವು ಪ್ರಪಂಚದಾದ್ಯಂತದ ಚಲನಚಿತ್ರಗಳು, ಆಲೋಚನೆಗಳು ಮತ್ತು ಸೃಷ್ಟಿಕರ್ತರನ್ನು ಒಂದೆಡೆ ಸೇರಿಸುತ್ತದೆ ಎಂದರು. ಆಳವಾದ ಸತ್ಯಗಳನ್ನು ಅನ್ವೇಷಿಸಲು ಮತ್ತು ಅವುಗಳನ್ನು ಸಿನಿಮೀಯ ಕಥೆಗಳ ಮೂಲಕ ಪ್ರಸ್ತುತಪಡಿಸಲು ಧೈರ್ಯ ಮಾಡುವ ಚಲನಚಿತ್ರ ನಿರ್ಮಾಪಕರಿಗೆ ಪ್ರಮುಖ ವೇದಿಕೆಯನ್ನು ಒದಗಿಸುವ ಮೂಲಕ ಮಿಫ್, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಕ್ರಿಯೇಟ್ ಇನ್ ಇಂಡಿಯಾ’ (ಭಾರತದಲ್ಲೇ ಸೃಷ್ಟಿಸಿ) ದೂರಾಚಾರವನ್ನು ಪ್ರತಿಬಿಂಬಿಸುತ್ತದೆ ಎಂದು ಕಾರ್ಯದರ್ಶಿ ಹೇಳಿದರು.
ಭಾರತೀಯ ಚಿತ್ರರಂಗದ ಕೊಡುಗೆಗಾಗಿ ಜೈದೀಪ್ ಅಹ್ಲಾವತ್ಗೆ ಸನ್ಮಾನ
ಈ ಸಂಜೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ, ಹೆಸರಾಂತ ನಟ ಜೈದೀಪ್ ಅಹ್ಲಾವತ್ ಅವರಿಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಸನ್ಮಾನಿಸಲಾಯಿತು. ಇತರ ಗಣ್ಯರ ಸಮ್ಮುಖದಲ್ಲಿ ಡಾ. ಎಲ್. ಮುರುಗನ್ ಅವರು ಈ ಗೌರವವನ್ನು ಪ್ರದಾನ ಮಾಡಿದರು.
ಗೌರವ ಸ್ವೀಕರಿಸಿ ಮಾತನಾಡಿದ ಅಹ್ಲಾವತ್ ಅವರು ಕೃತಜ್ಞತೆ ಸಲ್ಲಿಸಿದರು ಮತ್ತು ಅರ್ಥಪೂರ್ಣ ಕಥೆ ಹೇಳುವಿಕೆಗೆ ಜಾಗವನ್ನು ಸೃಷ್ಟಿಸುವಲ್ಲಿ ಮತ್ತು ಮುಖ್ಯವಾಹಿನಿಯ ಕಥೆಗಳನ್ನು ಮೀರಿ ಹೊಸ ಸಿನಿಮೀಯ ಧ್ವನಿಗಳನ್ನು ಪ್ರೋತ್ಸಾಹಿಸುವಲ್ಲಿ ಮಿಫ್‌ನಂತಹ ಚಲನಚಿತ್ರೋತ್ಸವಗಳ ಪ್ರಾಮುಖ್ಯತೆಯನ್ನು ಶ್ಲಾಘಿಸಿದರು.
ಉದ್ಘಾಟನಾ ಚಲನಚಿತ್ರಗಳ ತಾಂತ್ರಿಕ ತಂಡಕ್ಕೆ ಗೌರವ
ಚಲನಚಿತ್ರೋತ್ಸವದ ಉದ್ಘಾಟನಾ ಚಲನಚಿತ್ರಗಳ ಹಿಂದಿನ ಸೃಜನಶೀಲ ತಂಡಗಳನ್ನು ಸಹ ಸಮಾರಂಭದಲ್ಲಿ ಗೌರವಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸಿಸಲ್ಪಟ್ಟ ಕಿರುಚಿತ್ರ ‘ಅಗಾಪಿಟೊ’ (Agapito) ಮತ್ತು ಸಾಕ್ಷ್ಯಚಿತ್ರ ‘ಟೈಮ್ ಅಂಡ್ ವಾಟರ್’ (Time & Water) ನ ಪ್ರತಿನಿಧಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
‘ಅಗಾಪಿಟೊ’ ಚಿತ್ರದ ನಟ ಆಂಟನ್ ನೋಲಾಸ್ಕೋ ಮತ್ತು ಕಾಸಿಂಗ್ ಡೈರೆಕ್ಟರ್ ಮಾ. ಕ್ರಿಸ್ಟಿನಾ ಸೈಮನ್ ಅವರನ್ನು ಗೌರವಿಸಲಾಯಿತು, ಹಾಗೆಯೇ ಜಾಗತಿಕ ಕಥೆಗಳನ್ನು ಪ್ರೇಕ್ಷಕರ ಮುಂದೆ ತಂದಿದ್ದಕ್ಕಾಗಿ ‘ಟೈಮ್ ಅಂಡ್ ವಾಟರ್’ ಚಿತ್ರದೊಂದಿಗೆ ಸಂಬಂಧ ಹೊಂದಿರುವ ನ್ಯಾಷನಲ್ ಜಿಯಾಗ್ರಫಿಕ್ ಮತ್ತು ಜಿಯೋಸ್ಟಾರ್ ತಂಡಗಳ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು.
ಜೂರಿ (ನಿರ್ಣಾಯಕರ) ಸನ್ಮಾನ
ಉದ್ಘಾಟನಾ ಸಮಾರಂಭದ ಇನ್ನೊಂದು ಭಾಗದಲ್ಲಿ, ಚಲನಚಿತ್ರೋತ್ಸವವು ಅಂತಾರಾಷ್ಟ್ರೀಯ ಸ್ಪರ್ಧಾ ಜೂರಿ, ರಾಷ್ಟ್ರೀಯ ಸ್ಪರ್ಧಾ ಜೂರಿ ಮತ್ತು ಫಿಪ್ರೆಸ್ಕಿ (FIPRESCI) ಜೂರಿ ಸದಸ್ಯರನ್ನು ಅಧಿಕೃತವಾಗಿ ಸ್ವಾಗತಿಸಿ ಸನ್ಮಾನಿಸಿತು.
ಈ ಜೂರಿ ಸಮಿತಿಗಳು ಭಾರತ ಮತ್ತು ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾಪಕರು, ವಿಮರ್ಶಕರು, ವಿದ್ವಾಂಸರು ಮತ್ತು ಮಾಧ್ಯಮ ವೃತ್ತಿಪರರನ್ನು ಒಳಗೊಂಡಿದ್ದು, ಉತ್ಸವದ ವಿವಿಧ ವಿಭಾಗಗಳ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಮತ್ತು ಅನಿಮೇಷನ್ ಚಿತ್ರಗಳನ್ನು ಮೌಲ್ಯಮಾಪನ ಮಾಡುವ ಜವಾಬ್ದಾರಿಯನ್ನು ಇವರಿಗೆ ವಹಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಭಾರತದ ಕಲಾತ್ಮಕ ಪರಂಪರೆಯನ್ನು ಪ್ರದರ್ಶಿಸುವ ರೋಮಾಂಚಕ ಸಾಂಸ್ಕೃತಿಕ ಪ್ರಸ್ತುತಿಯೂ ಇತ್ತು. ಈ ಸಮಾರಂಭದಲ್ಲಿ ಪ್ರಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಇಫಿ (IFFI) 2026 ರ ಉತ್ಸವ ನಿರ್ದೇಶಕ ಶ್ರೀ ಅಶುತೋಷ್ ಗೋವಾರಿಕರ್, ಪ್ರಸಾರ ಭಾರತಿಯ ಅಧ್ಯಕ್ಷ ಶ್ರೀ ಪ್ರಸೂನ್ ಜೋಶಿ, ಎನ್‌ಎಫ್‌ಡಿಸಿ ಅಧ್ಯಕ್ಷ ಶ್ರೀ ಕೃಷ್ಣಕುಮಾರ್ ಜಿ, ಮಿಫ್ ಉತ್ಸವ ನಿರ್ದೇಶಕ ಮತ್ತು ಎನ್‌ಎಫ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶ್ ಮಗ್ದುಮ್, ಇಂಡಿಯನ್ ಡಾಕ್ಯುಮೆಂಟರಿ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (IDPA) ಅಧ್ಯಕ್ಷ ಶ್ರೀ ಸಂಸ್ಕಾರ್ ದೇಸಾಯಿ, ಉದ್ಯಮದ ಮುಖಂಡರು, ಚಲನಚಿತ್ರ ನಿರ್ಮಾಪಕರು, ಜೂರಿ ಸದಸ್ಯರು ಮತ್ತು ಭಾರತ ಹಾಗೂ ವಿದೇಶಗಳ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಎರಡು ವರ್ಷಕ್ಕೊಮ್ಮೆ ಆಯೋಜಿಸಲ್ಪಡುವ ಮತ್ತು ಎನ್‌ಎಫ್‌ಡಿಸಿ (NFDC) ಇವರಿಂದ ನಿರ್ವಹಿಸಲ್ಪಡುವ ಈ ಏಳು ದಿನಗಳ ಚಲನಚಿತ್ರೋತ್ಸವವು ಚಲನಚಿತ್ರ ನಿರ್ಮಾಪಕರು, ಉದ್ಯಮದ ವೃತ್ತಿಪರರು ಮತ್ತು ಸಿನೆಮಾ ಪ್ರೇಮಿಗಳಿಗೆ ಸಮೃದ್ಧ ಅನುಭವವನ್ನು ನೀಡುವ ಭರವಸೆ ನೀಡುತ್ತದೆ. ಪ್ರಾದೇಶಿಕ ಸಿನಿಮೀಯ ಧ್ವನಿಗಳನ್ನು ಪ್ರದರ್ಶಿಸುವ ಮತ್ತು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸುವ ಉದ್ದೇಶದಿಂದ ಈ ವರ್ಷದ ಆವೃತ್ತಿಯಲ್ಲಿ "ಮರಾಠಿ ಚಲನಚಿತ್ರಗಳು" ಮತ್ತು "ಎಕೋಸ್ ಫ್ರಮ್ ನಾರ್ತ್ ಈಸ್ಟ್" (ಈಶಾನ್ಯ ಭಾರತದ ಧ್ವನಿಗಳು) ಎಂಬ ಎರಡು ಹೊಸ ವಿಭಾಗಗಳನ್ನು ಪರಿಚಯಿಸಲಾಗಿದೆ.
ಭಾರತ ಮತ್ತು ಪ್ರಪಂಚದಾದ್ಯಂತದ ವಿಶಿಷ್ಟ ಚಲನಚಿತ್ರಗಳು, ಧ್ವನಿಗಳು ಮತ್ತು ದೃಷ್ಟಿಕೋನಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮಿಫ್ (MIFF) ಕಾರ್ಯಕ್ರಮಗಳ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಇಲ್ಲಿ ಪಡೆಯಬಹುದು.
19ನೇ ಮಿಫ್ (MIFF) 2026 ರ ಬಗ್ಗೆ
ಬಾಹ್ಯರಹಿತ (ನಾನ್-ಫೀಚರ್) ಸಿನಿಮಾಗಳಿಗಾಗಿ ಮೀಸಲಾದ ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಚಲನಚಿತ್ರೋತ್ಸವ ಎಂದು ಗುರುತಿಸಲ್ಪಟ್ಟಿರುವ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (MIFF) ಸಾಕ್ಷ್ಯಚಿತ್ರ, ಕಿರುಚಿತ್ರ ಮತ್ತು ಅನಿಮೇಷನ್ ಚಲನಚಿತ್ರಗಳ ಆಚರಣೆಯ ವೇದಿಕೆಯಾಗಿದೆ. 1990 ರಲ್ಲಿ ಸ್ಥಾಪನೆಯಾದ ಮತ್ತು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆಶ್ರಯದಲ್ಲಿ ಆಯೋಜಿಸಲಾಗುವ ಮಿಫ್, ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ಸಿನಿಮಾ ಪ್ರೇಮಿಗಳನ್ನು ಆಕರ್ಷಿಸುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ವೇದಿಕೆಯಾಗಿ ಬೆಳೆದಿದೆ.
ಮಿಫ್‌ನ 19ನೇ ಆವೃತ್ತಿಯು ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರಗಳ ಪ್ರದರ್ಶನದ ಜೊತೆಗೆ ಉದ್ಯಮ-ಕೇಂದ್ರಿತ ಉಪಕ್ರಮಗಳೊಂದಿಗೆ ಸಿನಿಮೀಯ ಅನುಭವವನ್ನು ನೀಡುವ ಭರವಸೆ ನೀಡುತ್ತದೆ.
- ಈ ವರ್ಷ, ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಭಾರತ ಸೇರಿದಂತೆ 46 ದೇಶಗಳಿಂದ 1,459 ಚಲನಚಿತ್ರಗಳು ಪ್ರವೇಶ ಪಡೆದಿವೆ.
- ಉತ್ಸವವು 42 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಮತ್ತು 30 ಕ್ಕೂ ಹೆಚ್ಚು ವಿದೇಶಿ ಭಾಷೆಗಳ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದ್ದು, ಇದು ಅದರ ಜಾಗತಿಕ ವ್ಯಾಪ್ತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ.
- ಪ್ರಪಂಚದಾದ್ಯಂತದ ಪ್ರಶಂಸನೀಯ ಚಲನಚಿತ್ರ ನಿರ್ಮಾಪಕರ ಕೃತಿಗಳನ್ನು ಒಳಗೊಂಡಿರುವ ಈ ಉತ್ಸವವು ಕೆಲವು ಅತ್ಯುತ್ತಮ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು, ಅನಿಮೇಷನ್‌ಗಳು, ಚೊಚ್ಚಲ ನಿರ್ದೇಶಕರ ಚಲನಚಿತ್ರಗಳು ಮತ್ತು ವಿದ್ಯಾರ್ಥಿ ಚಲನಚಿತ್ರಗಳನ್ನು ಪ್ರಸ್ತುತಪಡಿಸಲಿದೆ.
- ಚಲನಚಿತ್ರ ಪ್ರದರ್ಶನಗಳ ಜೊತೆಗೆ, 'ಡಾಕ್ ಬಜಾರ್'ನ 2ನೇ ಆವೃತ್ತಿ, ಮಾಸ್ಟರ್‌ಕ್ಲಾಸ್‌ಗಳು ಮತ್ತು ಐಡಿಪಿಎ (IDPA) ಅವರ ಓಪನ್ ಫೋರಂ ಚಲನಚಿತ್ರೋತ್ಸವದಲ್ಲಿ ಸೃಜನಶೀಲ ವಿನಿಮಯವನ್ನು ಮತ್ತಷ್ಟು ಹೆಚ್ಚಿಸಲಿವೆ.
ಮಿಫ್ 2026 ರ ಕಥೆ ಹೇಳುವ ಜಗತ್ತಿಗೆ ಹೆಜ್ಜೆ ಇಡಿ, ಇಲ್ಲಿ ಶಕ್ತಿಯುತ ಸಿನಿಮಾ, ಸೃಜನಶೀಲ ಮನಸ್ಸುಗಳು ಮತ್ತು ಸ್ಪೂರ್ತಿದಾಯಕ ಧ್ವನಿಗಳು ಒಟ್ಟಿಗೆ ಸೇರಿ ಸಾಕ್ಷ್ಯಚಿತ್ರ, ಅನಿಮೇಷನ್ ಮತ್ತು ಕಿರುಚಿತ್ರಗಳ ಮರೆಯಲಾಗದ ಸಂಭ್ರಮವನ್ನು ಸೃಷ್ಟಿಸುತ್ತವೆ.
*****
रिलीज़ आईडी:
2273370
| Visitor Counter:
9