ಆಯುಷ್
azadi ka amrit mahotsav

ಸಿ ಸಿ ಆರ್‌ ಎ ಎಸ್ - ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಜಂಟಿ ಉಪಕ್ರಮ: ಭಾರತದ ಆಯುರ್ವೇದ ಜ್ಞಾನ ಪರಂಪರೆಯ ಸಂರಕ್ಷಣೆಗೆ ಬಲ


ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿರುವ 15 ದಿನಗಳ ತರಬೇತಿ ಶಿಬಿರ: ತಿಗಳಾರಿ ಮತ್ತು ಹಳಗನ್ನಡ ಹಸ್ತಪ್ರತಿಗಳ ಲಿಪ್ಯಂತರಕ್ಕೆ ವಿಶೇಷ ಒತ್ತು

ಇದುವರೆಗೆ ಪ್ರಕಟವಾಗದ ಅಪರೂಪದ ಆಯುರ್ವೇದ ಗ್ರಂಥಗಳ ಪ್ರಕಟಣೆಗೆ ವಿದ್ವಾಂಸರ ಶ್ರಮ

प्रविष्टि तिथि: 15 JUN 2026 1:57PM by PIB Bengaluru

ಭಾರತದ ಸಾಂಪ್ರದಾಯಿಕ ಜ್ಞಾನ ಪರಂಪರೆಯನ್ನು ಸಂರಕ್ಷಿಸುವ ನಿರಂತರ ಪ್ರಯತ್ನಗಳ ಭಾಗವಾಗಿ, ತಿಗಳಾರಿ ಮತ್ತು ಹಳಗನ್ನಡ ಲಿಪಿಗಳಲ್ಲಿ ಬರೆಯಲಾದ ಆಯುರ್ವೇದ ಹಸ್ತಪ್ರತಿಗಳನ್ನು ಆಧುನಿಕ ಲಿಪಿಗೆ ಬದಲಾಯಿಸುವ (ಲಿಪ್ಯಂತರ) ಸಾಮರ್ಥ್ಯ ಅಭಿವೃದ್ಧಿ ತರಬೇತಿ ಶಿಬಿರವನ್ನು ಇಂದು ಉಡುಪಿಯ ಗೀತಾ ಮಂದಿರದ ಶ್ರೀ ಪುತ್ತಿಗೆ ನರಸಿಂಹ ಸಭಾಭವನದಲ್ಲಿ ಉದ್ಘಾಟಿಸಲಾಯಿತು.

ಭಾರತ ಸರ್ಕಾರದ ಆಯುಷ್ ಸಚಿವಾಲಯದ ಅಡಿಯಲ್ಲಿ ಬರುವ 'ಕೇಂದ್ರ ಆಯುರ್ವೇದ ವಿಜ್ಞಾನಗಳ ಸಂಶೋಧನಾ ಪರಿಷತ್' (ಸಿ ಸಿ ಆರ್‌ ಎ ಎಸ್) ಮತ್ತು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ 'ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ' (ಸಿ ಎಸ್‌ ಯು), ಶ್ರೀ ವಾದಿರಾಜ ರಿಸರ್ಚ್ ಫೌಂಡೇಶನ್ ಸಹಯೋಗದೊಂದಿಗೆ ಈ ಕಾರ್ಯಾಗಾರವನ್ನು ಜಂಟಿಯಾಗಿ ಆಯೋಜಿಸಿವೆ.

ಶ್ರೀ ಪುತ್ತಿಗೆ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಮಠದ ಕಿರಿಯ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದೆ. ಮುಖ್ಯವಾಗಿ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಕಂಡುಬರುವ ತಿಗಳಾರಿ ಮತ್ತು ಹಳಗನ್ನಡ ಲಿಪಿಗಳಲ್ಲಿ ಸಂರಕ್ಷಿಸಲಾದ ಆಯುರ್ವೇದ ಹಸ್ತಪ್ರತಿಗಳನ್ನು ಓದುವ, ಅರ್ಥೈಸುವ ಮತ್ತು ಅವುಗಳನ್ನು ಲಿಪ್ಯಂತರ ಮಾಡುವಲ್ಲಿ ವಿದ್ವಾಂಸರಿಗೆ ಪರಿಣತಿ ಮೂಡಿಸುವುದು ಈ ಉಪಕ್ರಮದ ಮುಖ್ಯ ಗುರಿಯಾಗಿದೆ.

ಸಿ ಸಿ ಆರ್‌ ಎ ಎಸ್ ನ ಮಹಾನಿರ್ದೇಶಕರಾದ ಪ್ರೊ. ವೈದ್ಯ ರಬಿನಾರಾಯಣ್ ಆಚಾರ್ಯ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಪುತ್ತಿಗೆ ಮಠದ ಆಡಳಿತಾಧಿಕಾರಿ ಮತ್ತು ದಿವಾನರಾದ ಶ್ರೀ ನಾಗರಾಜ ಆಚಾರ್ಯ; ಹೈದರಾಬಾದ್‌ ನ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಪರಂಪರೆ ಸಂಸ್ಥೆಯ (ಎನ್‌ ಐ ಐ ಎಂ ಎಚ್) ಸಹಾಯಕ ನಿರ್ದೇಶಕರಾದ ಡಾ. ಜಿ. ಪಿ. ಪ್ರಸಾದ್; ಬೆಂಗಳೂರಿನ ಕೇಂದ್ರ ಆಯುರ್ವೇದ ಸಂಶೋಧನಾ ಸಂಸ್ಥೆಯ (ಸಿ ಇ ಎ ಆರ್‌ ಐ) ಸಹಾಯಕ ನಿರ್ದೇಶಕರಾದ ಡಾ. ಟಿ. ಮಹೇಶ್ವರ್; ಮತ್ತು ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ಪದ್ಧತಿ (ಐಕೆಎಸ್) ಕೇಂದ್ರದ ನಿರ್ದೇಶಕರಾದ ಡಾ. ಸುಧೀರ್ ರಾಜ್ ಕೆ. ಉಪಸ್ಥಿತರಿದ್ದರು. ಶ್ರೀ ವಾದಿರಾಜ ರಿಸರ್ಚ್ ಫೌಂಡೇಶನ್‌‌ ನ ನಿರ್ದೇಶಕರಾದ ವಿದ್ವಾನ್ ಗೋಪಾಲಾಚಾರ್ಯ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರೊ. ವೈದ್ಯ ರಬಿನಾರಾಯಣ್ ಆಚಾರ್ಯ ಅವರು, ಆಯುರ್ವೇದ ಜ್ಞಾನದ ಸಂರಕ್ಷಣೆ, ದಾಖಲೀಕರಣ ಮತ್ತು ಪ್ರಸಾರಕ್ಕಾಗಿ ಸಿ ಸಿ ಆರ್ ಎ ಎಸ್ ಕೈಗೊಂಡಿರುವ ವಿವಿಧ ಯೋಜನೆಗಳನ್ನು ವಿವರಿಸಿದರು. ದೇಶದ ಶ್ರೀಮಂತ ಜ್ಞಾನ ಪರಂಪರೆಯನ್ನು ಉಳಿಸಲು ಮತ್ತು ಉತ್ತೇಜಿಸಲು ಭಾರತ ಸರ್ಕಾರವು 'ಜ್ಞಾನ ಭಾರತಂ ಮಿಷನ್' ಅಡಿಯಲ್ಲಿ ಮಾಡುತ್ತಿರುವ ಪ್ರಯತ್ನಗಳನ್ನು ಅವರು ಒತ್ತಿ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ಸುಧೀರ್ ರಾಜ್ ಕೆ. ಅವರು, ಭಾರತದ ಹಸ್ತಪ್ರತಿ ಪರಂಪರೆಯನ್ನು ಸಂರಕ್ಷಿಸುವ ಅಗತ್ಯವನ್ನು ಮನಗಾಣಿಸಿದರು ಹಾಗೂ ಸಂಶೋಧನೆ ಮತ್ತು ಜ್ಞಾನದ ಪ್ರಸಾರವನ್ನು ಬಲಪಡಿಸುವಲ್ಲಿ 'ಭಾರತೀಯ ಜ್ಞಾನ ಪದ್ಧತಿ'ಯ ಪಾತ್ರವನ್ನು ಎತ್ತಿ ತೋರಿಸಿದರು.

ಈ 15 ದಿನಗಳ ತರಬೇತಿ ಕಾರ್ಯಕ್ರಮವು ಆಯುರ್ವೇದ ಮತ್ತು ಸಂಸ್ಕೃತ ಹಿನ್ನೆಲೆಯ ಯುವ ವಿದ್ವಾಂಸರಿಗೆ ಪರಿಣತರೊಂದಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಲಿದೆ. ಇದುವರೆಗೆ ಪ್ರಕಟವಾಗದ ಆಯುರ್ವೇದ ಹಸ್ತಪ್ರತಿಗಳನ್ನು ಓದಿ, ಲಿಪ್ಯಂತರ ಮಾಡಿ, ಸಂಪಾದಿಸಿ, ಪ್ರಕಟಣೆಗೆ ಸಿದ್ಧಪಡಿಸಲು ಇದು ನೆರವಾಗಲಿದೆ.

ಸಿ ಸಿ ಆರ್ ಎ ಎಸ್ ಮತ್ತು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಜಂಟಿಯಾಗಿ ಆಯೋಜಿಸುತ್ತಿರುವ ಮೂರನೇ ಕಾರ್ಯಾಗಾರ ಇದಾಗಿದೆ. ಇದಕ್ಕೂ ಮುನ್ನ ಒಡಿಶಾದ ಪುರಿಯಲ್ಲಿ ಕರಣಿ/ದೇವನಾಗರಿ ಲಿಪಿಗಳ ಕುರಿತು ಮತ್ತು ಕೇರಳದ ಗುರುವಾಯೂರಿನಲ್ಲಿ ವಟ್ಟೆಳುತ್ತು/ಮಲಯಾಳಂ ಲಿಪಿಗಳ ಕುರಿತು ಇಂತಹ ಕಾರ್ಯಾಗಾರಗಳನ್ನು ನಡೆಸಲಾಗಿತ್ತು.

ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮತ್ತು ಶ್ರೀ ಪುತ್ತಿಗೆ ಮಠದ ಗುರುಕುಲದ ಸಂಸ್ಕೃತ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.

ಈ ಕಾರ್ಯಕ್ರಮದ ಅವಧಿಯಲ್ಲಿ ಲಿಪ್ಯಂತರ ಮಾಡಲಾದ ಹಸ್ತಪ್ರತಿಗಳನ್ನು ಮುಂದೆ ಸಿ ಸಿ ಆರ್ ಎ ಎಸ್ ಮತ್ತು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಪುಸ್ತಕ ರೂಪದಲ್ಲಿ ಪ್ರಕಟಿಸಲಿವೆ. ಇದು ಭಾರತದ ಸಾಂಪ್ರದಾಯಿಕ ಜ್ಞಾನ ಸಂಪತ್ತಿನ ಸಂರಕ್ಷಣೆ ಮತ್ತು ವ್ಯಾಪಕ ಪ್ರಚಾರಕ್ಕೆ ಮಹತ್ತರ ಕೊಡುಗೆ ನೀಡಲಿದೆ.

 

*****


(रिलीज़ आईडी: 2273074) आगंतुक पटल : 14
इस विज्ञप्ति को इन भाषाओं में पढ़ें: Gujarati , English , Urdu , हिन्दी , Assamese , Tamil