ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫ್ರಾನ್ಸ್ ಮತ್ತು ಸ್ಲೋವಾಕಿಯಾಕ್ಕೆ ಭೇಟಿ ನೀಡುವ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ

प्रविष्टि तिथि: 13 JUN 2026 10:05AM by PIB Bengaluru

ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಸ್ಲೋವಾಕ್ ಗಣರಾಜ್ಯದ ಪ್ರಧಾನಮಂತ್ರಿ ಶ್ರೀ ರಾಬರ್ಟ್ ಫಿಕೊ ಅವರ ಆಹ್ವಾನದ ಮೇರೆಗೆ, ನಾನು 2026ರ ಜೂನ್ 13 ರಿಂದ 18 ರವರೆಗೆ ಫ್ರಾನ್ಸ್ ಮತ್ತು ಸ್ಲೋವಾಕ್ ಗಣರಾಜ್ಯಕ್ಕೆ ಅಧಿಕೃತ ಭೇಟಿ ಕೈಗೊಳ್ಳುತ್ತಿದ್ದೇನೆ.

ಭಾರತದ ವ್ಯೂಹಾತ್ಮಕ ದೃಷ್ಟಿಕೋನದಲ್ಲಿ ಫ್ರಾನ್ಸ್ ವಿಶೇಷ ಸ್ಥಾನವನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ, ಅಧ್ಯಕ್ಷರಾದ ಮ್ಯಾಕ್ರನ್ ಭಾರತಕ್ಕೆ ಭೇಟಿ ನೀಡಿದ್ದರು ಮತ್ತು ನಾವು ನಮ್ಮ ಸಂಬಂಧವನ್ನು ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ಮಟ್ಟಕ್ಕೆ ಏರಿಸಿದ್ದೇವೆ. ನಾನು ನೈಸ್ ನಗರದಲ್ಲಿ ಅಧ್ಯಕ್ಷರಾದ ಮ್ಯಾಕ್ರನ್ ಅವರನ್ನು ಭೇಟಿಯಾದಾಗ, ನಾವು ಫೆಬ್ರವರಿಯಿಂದ ಆಗಿರುವ ಪ್ರಗತಿಯನ್ನು ಪರಿಶೀಲಿಸುತ್ತೇವೆ ಮತ್ತು ನಮ್ಮ ಸಹಕಾರದ ಮುಂದಿನ ಹಂತಗಳನ್ನು ರೂಪಿಸುತ್ತೇವೆ. ಪರಸ್ಪರ ಹಿತಾಸಕ್ತಿಯ ಜಾಗತಿಕ ವಿಷಯಗಳ ಬಗ್ಗೆ ನಮ್ಮ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ.

ನೈಸ್‌ನಲ್ಲಿ, 2026ರ ಜೂನ್ 14ರಂದು ಅಧ್ಯಕ್ಷರಾದ ಮ್ಯಾಕ್ರನ್ ಅವರೊಂದಿಗೆ 'ಭಾರತ್ ಇನ್ನೋವೇಟ್ಸ್' ಅನ್ನು ಉದ್ಘಾಟಿಸಲು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಭಾರತ-ಫ್ರಾನ್ಸ್ ನಾವೀನ್ಯತೆಯ ವರ್ಷದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಹೆಗ್ಗುರುತಿನ ಕಾರ್ಯಕ್ರಮವು ಭಾರತದ ಅತ್ಯಂತ ಭರವಸೆಯ ನವೋದ್ಯಮಗಳನ್ನು ಜಾಗತಿಕ ಹೂಡಿಕೆಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಭಾರತದ ಉನ್ನತ ಶಿಕ್ಷಣ ಪರಿಸರ ವ್ಯವಸ್ಥೆಯಿಂದ ಹೊರಹೊಮ್ಮುವ ನಾವೀನ್ಯತೆಗಳಿಗೆ ಪ್ರಮುಖ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ.

ನೈಸ್ ನಗರದಿಂದ, ನಾನು 2026ರ ಜೂನ್ 14ರಿಂದ 15ರವರೆಗೆ ಸ್ಲೋವಾಕ್ ಗಣರಾಜ್ಯಕ್ಕೆ ಅಧಿಕೃತ ಭೇಟಿಗಾಗಿ ಪ್ರಯಾಣಿಸಲಿದ್ದೇನೆ, ಇದು 1993ರಲ್ಲಿ ಸ್ಲೋವಾಕಿಯಾದ ಸ್ವಾತಂತ್ರ್ಯದ ನಂತರ ಭಾರತದ ಪ್ರಧಾನಮಂತ್ರಿಯೊಬ್ಬರ ಮೊದಲ ಭೇಟಿಯಾಗಿದೆ. ಈ ಐತಿಹಾಸಿಕ ಭೇಟಿಯು ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಬಲಗೊಳಿಸಲಿದೆ. ಬ್ರಾಟಿಸ್ಲಾವಾದಲ್ಲಿ ಅಧ್ಯಕ್ಷ ಪೆಲ್ಲೆಗ್ರಿನಿ ಮತ್ತು ಪ್ರಧಾನಮಂತ್ರಿ ಫಿಕೊ ಅವರೊಂದಿಗೆ ಮಾತುಕತೆ ನಡೆಸಲು ನಾನು ಎದುರು ನೋಡುತ್ತಿದ್ದೇನೆ. ಸ್ಲೋವಾಕ್‌ನ ವಾಣಿಜ್ಯ ಮುಖಂಡರೊಂದಿಗೆ ಸಂವಾದ ನಡೆಸುವ ಅವಕಾಶವೂ ನನಗೆ ದೊರೆತಿದೆ. ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದದ ವೇಗವರ್ಧನೆಯ ಜೊತೆಗೆ, ಈ ಭೇಟಿಯು ಯುರೋಪಿಯನ್ ಒಕ್ಕೂಟದೊಂದಿಗಿನ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ, ಏಕೆಂದರೆ, ಇದರಲ್ಲಿ ಸ್ಲೋವಾಕಿಯಾ ಪ್ರಮುಖ ಮತ್ತು ಮೌಲ್ಯಯುತ ಸದಸ್ಯ ರಾಷ್ಟ್ರವಾಗಿದೆ.

ಸ್ಲೋವಾಕಿಯಾದಿಂದ, ನಾನು ಎವಿಯಾನ್‌ಗೆ ಪ್ರಯಾಣಿಸುತ್ತೇನೆ, ಅಲ್ಲಿ ನಾನು 2026ರ ಜೂನ್ 16 ಮತ್ತು 17ರಂದು ʻಜಿ 7ʼ ಶೃಂಗಸಭೆಯಲ್ಲಿ ಭಾಗವಹಿಸುತ್ತೇನೆ. ʻಜಿ 7ʼ ಕೂಟದಲ್ಲಿ ಭಾರತದ ಉಪಸ್ಥಿತಿಯು ನಮ್ಮ ಪಾಲುದಾರರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಮ್ಮ ಬೆಳೆಯುತ್ತಿರುವ ಜಾಗತಿಕ ಚಿತ್ರಣವನ್ನು ಪ್ರತಿಬಿಂಬಿಸುತ್ತದೆ. ಇದು ಸತತ 8ನೇ ಜಿ7 ಶೃಂಗಸಭೆಯಾಗಿದ್ದು, ಇದಕ್ಕೆ ಭಾರತವನ್ನು ಆಹ್ವಾನಿಸಲಾಗಿದೆ. ಜಿ7 ಶೃಂಗಸಭೆಯಲ್ಲಿ, ಭಾರತವು ತನ್ನ ಪರವಾಗಿ ಮಾತನಾಡುವುದು ಮಾತ್ರವಲ್ಲದೆ, ಜಾಗತಿಕ ದಕ್ಷಿಣದ ಆಕಾಂಕ್ಷೆಗಳಿಗೆ ಧ್ವನಿ ನೀಡುತ್ತದೆ.

ನಾನು 2026ರ ಜೂನ್ 18ರಂದು ಪ್ಯಾರಿಸ್‌ನಲ್ಲಿ ನನ್ನ ಫ್ರಾನ್ಸ್ ಭೇಟಿಯನ್ನು ಮುಕ್ತಾಯಗೊಳಿಸಲಿದ್ದೇನೆ, ಅಲ್ಲಿ ನಾನು ಅಧ್ಯಕ್ಷರಾದ ಮ್ಯಾಕ್ರನ್ ಅವರೊಂದಿಗೆ ʻವಿವಾಟೆಕ್ 2026ʼ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ʻವಿವಾಟೆಕ್ʼ - ಇದು ಯುರೋಪಿನ ತಂತ್ರಜ್ಞಾನ ಮತ್ತು ನಾವೀನ್ಯತೆಯ ಅಗ್ರಗಣ್ಯ ಸಮಾವೇಶವಾಗಿದೆ ಮತ್ತು ಈ ಆವೃತ್ತಿಯಲ್ಲಿ ಭಾರತವು ಅತಿದೊಡ್ಡ ರಾಷ್ಟ್ರೀಯ ಪೆವಿಲಿಯನ್ ಅನ್ನು ಹೊಂದಿರಲಿದೆ. ಇದು ಭಾರತೀಯ ಮತ್ತು ಯುರೋಪಿಯನ್ ನಾವೀನ್ಯತೆ ಪರಿಸರ ವ್ಯವಸ್ಥೆಗಳ ನಡುವಿನ ಪಾಲುದಾರಿಕೆಯ ಅಗಾಧ ಸಾಮರ್ಥ್ಯದ ಸೂಕ್ತ ಸಂಕೇತವಾಗಿದೆ. ನಮ್ಮ ಎರಡು ರಾಷ್ಟ್ರಗಳ ನಡುವೆ ಜೀವಂತ ಸೇತುವೆಯಾಗಿರುವ ಪ್ಯಾರಿಸ್ ನಲ್ಲಿರುವ ಭಾರತೀಯ ಸಮುದಾಯದ ಸದಸ್ಯರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ.

ಫ್ರಾನ್ಸ್ ಮತ್ತು ಸ್ಲೋವಾಕ್ ಗಣರಾಜ್ಯಕ್ಕೆ ನನ್ನ ಭೇಟಿಗಳು ಯುರೋಪ್ ಮತ್ತು ಜಿ 7 ಎರಡರೊಂದಿಗೂ ಭಾರತದ ಆಳವಾದ ಸಂಬಂಧವನ್ನು ಬಲಪಡಿಸುತ್ತವೆ ಮತ್ತು ಖಂಡ ಮತ್ತು ಅದರಾಚೆಗಿನ ನಮ್ಮ ಪಾಲುದಾರಿಕೆಯ ವ್ಯಾಪ್ತಿಯನ್ನು ವಿಸ್ತರಿಸುವ ನಮ್ಮ ದೃಢವಾದ ಬದ್ಧತೆಯನ್ನು ಪ್ರದರ್ಶಿಸುತ್ತವೆ ಎಂದು ನನಗೆ ವಿಶ್ವಾಸವಿದೆ.

 

*****


(रिलीज़ आईडी: 2272415) आगंतुक पटल : 12
इस विज्ञप्ति को इन भाषाओं में पढ़ें: Malayalam , English , Urdu , हिन्दी , Marathi , Bengali , Assamese , Gujarati , Tamil , Telugu