ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯು ವಿಕಸಿತ ಭಾರತದೆಡೆಗೆ ಭಾರತದ ಪರಿವರ್ತನೆಯನ್ನು ಮುನ್ನಡೆಸುತ್ತಿದೆ: ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ
ಭಾರತದಲ್ಲಿ 102 GWp ಗಿಂತ ಅಧಿಕ ತೇಲುವ ಸೌರ ಪಿವಿ (PV) ಸಾಮರ್ಥ್ಯ ಮೌಲ್ಯಮಾಪನ; ನಿರ್ದಿಷ್ಟ ತೇಲುವ ಸೌರ ಯೋಜನೆಯ ಪರಿಚಯ
ಪಾರದರ್ಶಕತೆ ಮತ್ತು ವೇಗದ ಅನುಷ್ಠಾನವನ್ನು ಹೆಚ್ಚಿಸಲು ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆಗಾಗಿ ಆನ್‌ಲೈನ್ ಪೋರ್ಟಲ್‌ಗೆ ಚಾಲನೆ
ರಕ್ಷಣಾ ಸಂಸ್ಥೆಗಳಲ್ಲಿ ನವೀಕರಿಸಬಹುದಾದ ಇಂಧನವನ್ನು ಉತ್ತೇಜಿಸಲು ಎನ್‌ಐಎಸ್‌ಇ (NISE) ಮತ್ತು ಮಿಲಿಟರಿ ಎಂಜಿನಿಯರಿಂಗ್ ಸರ್ವೀಸಸ್ (MES) ನಡುವೆ ಒಪ್ಪಂದ ವಿನಿಮಯ
प्रविष्टि तिथि:
10 JUN 2026 7:03PM by PIB Bengaluru
ಕಳೆದ ಹನ್ನೆರಡು ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ನಾಯಕತ್ವವು ಭಾರತವನ್ನು ಜಾಗತಿಕ ಶುದ್ಧ ಇಂಧನ ನಾಯಕನನ್ನಾಗಿ ಪರಿವರ್ತಿಸಿದೆ ಮತ್ತು ವಿಕಸಿತ ಭಾರತದೆಡೆಗೆ ದೇಶದ ಪಯಣವನ್ನು ವೇಗಗೊಳಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ವೆಂಕಟೇಶ್ ಜೋಶಿ ಅವರು ಇಂದು ತಿಳಿಸಿದರು. ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಬಗ್ಗೆ ಕೇವಲ ಚರ್ಚಿಸುವುದರಿಂದಾಚೆಗೆ ತಳಮಟ್ಟದಲ್ಲಿ ಅಳೆಯಬಹುದಾದ ಫಲಿತಾಂಶಗಳನ್ನು ನೀಡುವತ್ತ ಭಾರತ ಸಾಗಿದೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯ, ಉತ್ಪಾದನೆ ಮತ್ತು ನಾಗರಿಕರ ಭಾಗವಹಿಸುವಿಕೆಯು ದೇಶದ ಶುದ್ಧ ಇಂಧನ ಪರಿವರ್ತನೆಯನ್ನು ವ್ಯಾಖ್ಯಾನಿಸುತ್ತದೆ ಎಂದು ಅವರು ಹೇಳಿದರು.
ಈ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಪ್ರಸ್ತಾಪಿಸಿದ ಶ್ರೀ ಜೋಶಿ ಅವರು, ಭಾರತದ ತೇಲುವ ಸೌರ ಪಿವಿ (PV) ಸಾಮರ್ಥ್ಯದ ಮೌಲ್ಯಮಾಪನ ವರದಿಯನ್ನು ಬಿಡುಗಡೆ ಮಾಡಿದರು. ಇದು ದೇಶದ ತೇಲುವ ಸೌರ ಸಾಮರ್ಥ್ಯವನ್ನು 102 GWp ಗಿಂತ ಅಧಿಕವೆಂದು ಅಂದಾಜು ಮಾಡಿದೆ ಮತ್ತು ಭಾರತದ ಒಟ್ಟು ಅಂದಾಜು ಮಾಡಲಾದ ಸೌರ ಸಾಮರ್ಥ್ಯವನ್ನು 3,445 GWp ಗೆ ಕೊಂಡೊಯ್ಯುತ್ತದೆ. ದೇಶಾದ್ಯಂತ ತೇಲುವ ಸೌರ ವಿದ್ಯುತ್ ಯೋಜನೆಯನ್ನು ಉತ್ತೇಜಿಸಲು ಸಚಿವಾಲಯವು ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ತೇಲುವ ಸೌರ ಯೋಜನೆಗಳ ಮೂಲಕ ಜಲಾಶಯಗಳು ಮತ್ತು ಇತರ ಜಲಮೂಲಗಳು ಶುದ್ಧ ಇಂಧನ ಉತ್ಪಾದನೆಗೆ ಪ್ರಮುಖ ಸಂಪನ್ಮೂಲಗಳಾಗಿ (Assets) ಹೊರಹೊಮ್ಮುತ್ತಿವೆ ಎಂದು ಶ್ರೀ ಜೋಶಿ ಅವರು ಹೇಳಿದರು. ಈ ಉಪಕ್ರಮಗಳು ಭಾರತದ ಶುದ್ಧ ಇಂಧನ ಪರಿವರ್ತನೆಯನ್ನು ವೇಗಗೊಳಿಸುವುದರೊಂದಿಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸುಸ್ಥಿರ ಮತ್ತು ಪರಿಣಾಮಕಾರಿ ರೀತಿಯಲ್ಲಿ ಬಳಸಿಕೊಳ್ಳುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.
ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆಗಾಗಿ ಆನ್‌ಲೈನ್ ಪೋರ್ಟಲ್‌ಗೂ ಸಹ ಸಚಿವರು ಚಾಲನೆ ನೀಡಿದರು. ಇದು ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಈ ಉಪಕ್ರಮವು 2017 ರಿಂದ ಸಣ್ಣ ಜಲವಿದ್ಯುತ್ ವಲಯದಲ್ಲಿ ಮೊದಲ ಪ್ರಮುಖ ನೀತಿ ಹಸ್ತಕ್ಷೇಪವನ್ನು ಗುರುತಿಸುತ್ತದೆ ಎಂದು ಅವರು ತಿಳಿಸಿದರು.
ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ ಮತ್ತು ಪಿಎಂ-ಕುಸುಮ್‌ನಂತಹ ಪ್ರಮುಖ ಕಾರ್ಯಕ್ರಮಗಳು ಭಾರತದ ಶುದ್ಧ ಇಂಧನ ಪರಿವರ್ತನೆಯಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ವಿಸ್ತರಿಸುತ್ತಿವೆ ಮತ್ತು ದೇಶಾದ್ಯಂತ ನವೀಕರಿಸಬಹುದಾದ ಇಂಧನ ಅಳವಡಿಕೆಯನ್ನು ವೇಗಗೊಳಿಸುತ್ತಿವೆ ಎಂದು ಶ್ರೀ ಜೋಶಿ ಅವರು ಹೇಳಿದರು.
ಭಾರತವು ವಿಶ್ವದ ಪ್ರಮುಖ ಸೌರ ಮಾರುಕಟ್ಟೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಶ್ರೀ ಜೋಶಿ ಅವರು ಎತ್ತಿ ತೋರಿಸಿದರು. ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವು 2014 ರಲ್ಲಿ 81 GW ನಿಂದ 288 GW ಗೆ ಮತ್ತು ಸೌರ ಸಾಮರ್ಥ್ಯವು 2.8 GW ನಿಂದ 155 GW ಗೆ ಏರಿಕೆಯಾಗಿದೆ. ದೇಶೀಯ ಸೌರ ಉತ್ಪಾದನಾ ಸಾಮರ್ಥ್ಯವು ಗಮನಾರ್ಹವಾಗಿ ವಿಸ್ತರಿಸಿದೆ, ಮಾಡ್ಯೂಲ್ ಉತ್ಪಾದನೆಯು 192 GW ತಲುಪಿದೆ ಮತ್ತು ಸೌರಕೋಶ (Cell) ಉತ್ಪಾದನಾ ಸಾಮರ್ಥ್ಯವು 30 GW ತಲುಪಿದೆ ಎಂದು ಅವರು ಹೇಳಿದರು.
ಭಾರತದ ಶುದ್ಧ ಇಂಧನ ಸಾಧನೆಗಳು ಜಾಗತಿಕ ಮನ್ನಣೆಯನ್ನು ಗಳಿಸಿವೆ ಮತ್ತು ಮಹತ್ವಾಕಾಂಕ್ಷೆಯ ಹವಾಮಾನ ಮತ್ತು ಇಂಧನ ಗುರಿಗಳನ್ನು ಸಾಧಿಸುವ ದೇಶದ ಸಾಮರ್ಥ್ಯವನ್ನು ಪ್ರದರ್ಶಿಸಿವೆ ಎಂದು ಸಚಿವರು ಹೇಳಿದರು. ಭಾರತವು ವಿದ್ಯುತ್ ಕೊರತೆಯ ರಾಷ್ಟ್ರದಿಂದ ವಿದ್ಯುತ್ ಹೆಚ್ಚುವರಿ ರಾಷ್ಟ್ರವಾಗಿ ಮಾರ್ಪಟ್ಟಿದೆ ಮತ್ತು ಪ್ರಮುಖ ನವೀಕರಿಸಬಹುದಾದ ಇಂಧನ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎನ್‌ಐಎಸ್‌ಇ (NISE) ಮತ್ತು ಮಿಲಿಟರಿ ಎಂಜಿನಿಯರಿಂಗ್ ಸರ್ವೀಸಸ್ (MES) ಸಂಸ್ಥೆಗಳು ರಕ್ಷಣಾ ಸಂಸ್ಥೆಗಳಲ್ಲಿ ಸೌರಶಕ್ತಿಯ ಅಳವಡಿಕೆಯನ್ನು ಬಲಪಡಿಸಲು ಒಪ್ಪಂದವನ್ನು ವಿನಿಮಯ ಮಾಡಿಕೊಂಡವು. ಈ ಸಹಯೋಗದ ಅಡಿಯಲ್ಲಿ ಎನ್‌ಐಎಸ್‌ಇ ನವೀಕರಿಸಬಹುದಾದ ಇಂಧನ ಯೋಜನೆಗಳ (Projects) ಯೋಜಿಸುವಿಕೆಗೆ (Planning), ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ.
ಡಾ. ಮೊಹಮ್ಮದ್ ರಿಹಾನ್ ಅವರು ಬರೆದ "ಗ್ರೀನ್ ಎನರ್ಜಿ ಮತ್ತು ಸುಸ್ಥಿರ ಅಭಿವೃದ್ಧಿ" ಪುಸ್ತಕವನ್ನು ಸಹ ಸಚಿವರಾದ ಶ್ರೀ ಜೋಶಿ ಅವರು ಬಿಡುಗಡೆ ಮಾಡಿದರು. ಈ ಪ್ರಕಟಣೆಯು ವಿದ್ಯಾರ್ಥಿಗಳು, ಸಂಶೋಧಕರು, ನೀತಿ ನಿರೂಪಕರು ಮತ್ತು ಇತರ ಪಾಲುದಾರರಿಗೆ ಅಮೂಲ್ಯವಾದ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ನವೀಕರಿಸಬಹುದಾದ ಇಂಧನ ಮಹತ್ವಾಕಾಂಕ್ಷೆಗಳನ್ನು ಮುನ್ನಡೆಸುವಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ತಾಂತ್ರಿಕ ಬೆಂಬಲಕ್ಕೆ ಎನ್‌ಐಎಸ್‌ಇ ಮತ್ತು ಅದರ ತಂಡ ನೀಡಿದ ಕೊಡುಗೆಯನ್ನು ಸಚಿವರು ಶ್ಲಾಘಿಸಿದರು. ಇಂದು ಆರಂಭಿಸಲಾದ ಉಪಕ್ರಮಗಳು ಶುದ್ಧ ಇಂಧನದಿಂದ ನಡೆಸಲ್ಪಡುವ ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಎಂದು ಅವರು ಹೇಳಿದರು.
ವರದಿಯ ಸಾರಾಂಶವು ಈ ಕೆಳಗಿನ ಲಿಂಕ್‌ನಲ್ಲಿ ಲಭ್ಯವಿದೆ: https://drive.google.com/file/d/1kn0CPo5ukjezJteKw598V7BdACSlvhlN/view?usp=sharing




****
(रिलीज़ आईडी: 2271336)
आगंतुक पटल : 11