ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಮೋದಿ ಸರ್ಕಾರದ 12 ವರ್ಷಗಳು ಮಹತ್ವಾಕಾಂಕ್ಷೆಯ ಭಾರತವನ್ನು ಸೃಷ್ಟಿಸಿವೆ: ಡಾ. ಜಿತೇಂದ್ರ ಸಿಂಗ್
ನಿರಂತರವಾಗಿ ಚುನಾಯಿತ ಪ್ರಧಾನಮಂತ್ರಿಯಾಗಿ ಶ್ರೀ ಮೋದಿ ಅವರು ಅಧಿಕಾರಾವಧಿಯಲ್ಲಿ ಕಳೆದ 4,399 ದಿನಗಳ ಕುರಿತು ಮಾತನಾಡಿದ ಡಾ. ಜಿತೇಂದ್ರ ಸಿಂಗ್, ಕಳೆದ ದಶಕದಲ್ಲಿ ಕಂಡುಬಂದ ಹಲವಾರು ಗಣನೀಯ ಫಲಿತಾಂಶಗಳನ್ನು ಉಲ್ಲೇಖಿಸಿದ್ದಾರೆ:
ಮೋದಿ ಯುಗದ ಅತ್ಯಂತ ದೊಡ್ಡ ಸಾಧನೆಯೆಂದರೆ ಭಾರತದ ಮನಸ್ಥಿತಿಯಲ್ಲಿ ಉಂಟಾಗಿರುವ ಬದಲಾವಣೆ ಎಂದು ಸಚಿವರು ತಿಳಿಸಿದ್ದಾರೆ
ಶಿಫಾರಸಿನಿಂದ ಅರ್ಹತೆ ಕಡೆಗೆ: ಆಡಳಿತ ಸುಧಾರಣೆಗಳು ಸಾರ್ವಜನಿಕ ಆಕಾಂಕ್ಷೆಗಳನ್ನು ಮರುರೂಪಿಸಿವೆ
ಬಾಹ್ಯಾಕಾಶ ಮತ್ತು ಪರಮಾಣು ವಲಯಗಳನ್ನು ಖಾಸಗಿ ಸಹಭಾಗಿತ್ವಕ್ಕೆ ಮುಕ್ತಗೊಳಿಸಿದ್ದು ನಾವೀನ್ಯತೆಯ ಚಿತ್ರಣವನ್ನೇ ಬದಲಾಯಿಸಿದೆ
ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಯು ವಿಸ್ತರಿಸುತ್ತಿರುವುದರಿಂದ ಬಾಹ್ಯಾಕಾಶ ನವೋದ್ಯಮಗಳ ಸಂಖ್ಯೆ 400ಕ್ಕೆ ಏರಿಕೆಯಾಗಿದೆ
प्रविष्टि तिथि:
07 JUN 2026 5:01PM by PIB Bengaluru
ನರೇಂದ್ರ ಮೋದಿ ಸರ್ಕಾರದ ಹನ್ನೆರಡು ವರ್ಷಗಳು ಭಾರತವನ್ನು ಅವಕಾಶಗಳು, ನಾವೀನ್ಯತೆ ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯುವ ಮಹತ್ವಾಕಾಂಕ್ಷೆಯ ರಾಷ್ಟ್ರವನ್ನಾಗಿ ಪರಿವರ್ತಿಸಿವೆ ಎಂದು ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಿಳಿಸಿದರು. ಆಡಳಿತಾತ್ಮಕ ಸುಧಾರಣೆಗಳು, ತಾಂತ್ರಿಕ ಸಾರ್ವತ್ರೀಕರಣ ಮತ್ತು ನಾಗರಿಕ-ಕೇಂದ್ರಿತ ನೀತಿಗಳು ಭಾರತೀಯರು ತಮ್ಮ ಭವಿಷ್ಯವನ್ನು ನೋಡುವ ವಿಧಾನವನ್ನು ಮೂಲಭೂತವಾಗಿ ಬದಲಾಯಿಸಿವೆ ಎಂದು ಅವರು ಪ್ರತಿಪಾದಿಸಿದರು. ದೇಶವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ಸಾಗುತ್ತಿರುವಾಗ, ಪ್ರಸ್ತುತ ಸುಮಾರು $9 ಶತಕೋಟಿ ಇರುವ ಭಾರತದ ಬಾಹ್ಯಾಕಾಶ ಆರ್ಥಿಕತೆಯು ಮುಂದಿನ ಏಳರಿಂದ ಎಂಟು ವರ್ಷಗಳಲ್ಲಿ ಸುಮಾರು $45 ಶತಕೋಟಿಗೆ ವಿಸ್ತರಿಸುವ ನಿರೀಕ್ಷೆಯಿದೆ ಎಂದು ಸಚಿವರು ಬೆಳವಣಿಗೆಯ ಮುಂದಿನ ಹಂತವನ್ನು ವಿವರಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿರಂತರವಾಗಿ ಚುನಾಯಿತ ಪ್ರಧಾನಮಂತ್ರಿಯಾಗಿ 4,399 ದಿನಗಳ ಅಧಿಕಾರಾವಧಿಯನ್ನು ಸ್ಮರಿಸಿದ ಡಾ. ಜಿತೇಂದ್ರ ಸಿಂಗ್, ಕಳೆದ ದಶಕದಲ್ಲಿ ಕಂಡುಬಂದ ಹಲವಾರು ಗಣನೀಯ ಫಲಿತಾಂಶಗಳನ್ನು ಉಲ್ಲೇಖಿಸಿದರು. ಕೆಲವು ವರ್ಷಗಳ ಹಿಂದೆ ಕೇವಲ ಒಂದಂಕಿ ಸಂಖ್ಯೆಯಲ್ಲಿದ್ದ ಭಾರತದ ಬಾಹ್ಯಾಕಾಶ ನವೋದ್ಯಮ ಪರಿಸರ ವ್ಯವಸ್ಥೆಯು ಇಂದು ಸುಮಾರು 400ಕ್ಕೆ ಬೆಳೆದಿದೆ ಮತ್ತು ಇತ್ತೀಚೆಗೆ ಒಂದು ʻಸ್ಟಾರ್ಟ್ಅಪ್ ಯೂನಿಕಾರ್ನ್ʼ ಸ್ಥಾನಮಾನವನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು. ಭಾರತದ ಬಾಹ್ಯಾಕಾಶ ಆರ್ಥಿಕತೆಯು ಪ್ರಸ್ತುತ ಸುಮಾರು $9 ಶತಕೋಟಿ ಮೌಲ್ಯದ್ದಾಗಿದ್ದು, ಮುಂದಿನ ಏಳರಿಂದ ಎಂಟು ವರ್ಷಗಳ ಅಂತ್ಯದ ವೇಳೆಗೆ $45 ಶತಕೋಟಿ ತಲುಪುವ ನಿರೀಕ್ಷೆ ಇದೆ. 2014 ರಲ್ಲಿ ಸುಮಾರು 350-400 ಇದ್ದ ದೇಶದ ನವೋದ್ಯಮ ಪರಿಸರ ವ್ಯವಸ್ಥೆಯು ಪ್ರಸ್ತುತ 2.3 ಲಕ್ಷಕ್ಕೂ ಹೆಚ್ಚು ಸಂಖ್ಯೆಗೆ ವಿಸ್ತರಿಸಿದ್ದು, ಸುಮಾರು 24-25 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಸಚಿವರು ತಿಳಿಸಿದರು. ಈ ನವೋದ್ಯಮಗಳಲ್ಲಿ ಸುಮಾರು ಅರ್ಧದಷ್ಟು ಟೈರ್ 1 ಮತ್ತು ಟೈರ್ 3 (Tier-II ಮತ್ತು Tier-III) ನಗರಗಳಲ್ಲಿವೆ, ಹಾಗೆಯೇ ಶೇಕಡಾ 35-39 ರಷ್ಟು ನವೋದ್ಯಮಗಳನ್ನು ಮಹಿಳೆಯರು ಮುನ್ನಡೆಸುತ್ತಿದ್ದಾರೆ. ಇತ್ತೀಚಿನ ಬಾಹ್ಯಾಕಾಶ ಉಡಾವಣೆಯೊಂದರಲ್ಲಿ ಸುಮಾರು 1,500 ಮಾಧ್ಯಮ ಸಿಬ್ಬಂದಿ ಮತ್ತು ಸುಮಾರು 10,000 ಪ್ರೇಕ್ಷಕರು ಭಾಗವಹಿಸಿದ್ದರು, ಇದು ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಸಾರ್ವಜನಿಕರ ಒಡನಾಟ ಹೆಚ್ಚುತ್ತಿರುವುದನ್ನು ಬಿಂಬಿಸುತ್ತದೆ ಎಂದು ಅವರು ಹೇಳಿದರು.
ಸರ್ಕಾರದ ಆರಂಭಿಕ ಕೆಲವು ಸುಧಾರಣೆಗಳು ನಾಗರಿಕ-ಕೇಂದ್ರಿತ ಆಡಳಿತ ಮಾದರಿಯತ್ತ ಹೆಜ್ಜೆ ಇಟ್ಟಿರುವುದರ ಸಂಕೇತವಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ದಾಖಲೆಗಳ ದೃಢೀಕರಣಕ್ಕಾಗಿ ಗೆಜೆಟೆಡ್ ಅಧಿಕಾರಿಗಳ ಸಹಿ ಪಡೆಯುವ ಅಗತ್ಯವನ್ನು ಕೊನೆಗೊಳಿಸಿ, ಸ್ವಯಂ-ದೃಢೀಕರಣಕ್ಕೆ ಅವಕಾಶ ನೀಡಿದ ನಿರ್ಧಾರವು ನಾಗರಿಕರ ಮೇಲೆ, ವಿಶೇಷವಾಗಿ ಯುವಕರ ಮೇಲೆ ನಂಬಿಕೆಯನ್ನು ಇಟ್ಟ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಉಲ್ಲೇಖಿಸಿದರು. ಸರ್ಕಾರಿ ನೇಮಕಾತಿಗಳ ಹಲವಾರು ವಿಭಾಗಗಳಲ್ಲಿ ಸಂದರ್ಶನಗಳನ್ನು ರದ್ದುಗೊಳಿಸಿರುವುದನ್ನು ಪ್ರಸ್ತಾಪಿಸಿದ ಸಚಿವರು, ಈ ಕ್ರಮವು ಸ್ವಜನಪಕ್ಷಪಾತ, ಸ್ವಂತ ವಿವೇಚನೆ ಮತ್ತು ದುರುಪಯೋಗದ ಅವಕಾಶಗಳನ್ನು ಕಡಿಮೆ ಮಾಡಿದೆ ಹಾಗೂ ಅರ್ಹತೆ ಆಧಾರಿತ ಆಯ್ಕೆಯನ್ನು ಬಲಪಡಿಸಿದೆ ಎಂದರು. ಈ ಸುಧಾರಣೆಗಳು ಯಾವುದೇ ಪ್ರಭಾವ ಅಥವಾ ಶಿಫಾರಸುಗಳಿಗಿಂತ ಹೆಚ್ಚಾಗಿ, ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಸಾಧಿಸಬಹುದು ಎನ್ನುವ ಆತ್ಮವಿಶ್ವಾಸವನ್ನು ಮೂಡಿಸಲು ಸಹಾಯ ಮಾಡಿವೆ ಎಂದು ಸಚಿವರು ತಿಳಿಸಿದರು.
ಕಳೆದ 12 ವರ್ಷಗಳ ಅತ್ಯಂತ ಗಹನವಾದ ಬದಲಾವಣೆಯು ಕೇವಲ ಕಾರ್ಯವಿಧಾನದಲ್ಲಿ ಮಾತ್ರವಲ್ಲದೆ ಮಾನಸಿಕವಾಗಿಯೂ ಆಗಿದೆ ಎಂದು ಹೇಳಿದ ಡಾ. ಜಿತೇಂದ್ರ ಸಿಂಗ್, ಭಾರತವು ಹೊಸ ಮಹತ್ವಾಕಾಂಕ್ಷೆಯ ಸಂಸ್ಕೃತಿಯ ಉದಯಕ್ಕೆ ಸಾಕ್ಷಿಯಾಗಿದೆ ಎಂದರು. "ಪ್ರಧಾನಮಂತ್ರಿ ಮೋದಿ ಅವರ ನಾಯಕತ್ವದಲ್ಲಿ ಕಳೆದ 12 ವರ್ಷಗಳಲ್ಲಿ ನಡೆದಿರುವ ಮನಸ್ಥಿತಿಯ ಬದಲಾವಣೆಯು ಅತ್ಯಂತ ದೊಡ್ಡ ಹೆಗ್ಗುರುತುಗಳಲ್ಲಿ ಒಂದಾಗಿದೆ" ಎಂದು ಅವರು ಹೇಳಿದರು. "ನನ್ನಿಂದಲೂ ಇದನ್ನು ಮಾಡಲು ಸಾಧ್ಯ' ಎಂಬ ರೀತಿಯ ಮಹತ್ವಾಕಾಂಕ್ಷೆಯ ಚೈತನ್ಯವು ಈ ಹಿಂದೆ ಇರಲಿಲ್ಲ." ಸಣ್ಣ ನಗರಗಳು ಮತ್ತು ಮಹಾನಗರವಲ್ಲದ ಹಿನ್ನೆಲೆಯಿಂದ ಬರುವ ನಾಗರಿಕ ಸೇವೆಗಳ ಟಾಪರ್ ಗಳ ಸಂಖ್ಯೆ ಹೆಚ್ಚುತ್ತಿರುವುದರಲ್ಲಿ ಈ ಬದಲಾವಣೆಯು ಸ್ಪಷ್ಟವಾಗಿ ಗೋಚರಿಸುತ್ತದೆ, ಇದು ತಂತ್ರಜ್ಞಾನ, ಪಾರದರ್ಶಕತೆ ಮತ್ತು ನ್ಯಾಯಯುತ ಸ್ಪರ್ಧೆಯ ಮೂಲಕ ಅವಕಾಶಗಳ ಸಾರ್ವತ್ರೀಕರಣವನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವರು ಹೇಳಿದರು.
ಭಾರತದ ವೈಜ್ಞಾನಿಕ ಸಾಧನೆಗಳನ್ನು ಈ ವ್ಯಾಪಕ ಪರಿವರ್ತನೆಗೆ ಸಚಿವರು ಜೊತೆಗೂಡಿಸಿದರು. ಚಂದ್ರಯಾನ ಯೋಜನೆಗಳನ್ನು ಉಲ್ಲೇಖಿಸಿದ ಅವರು, ನಾಗರಿಕರು ರಾಷ್ಟ್ರೀಯ ವೈಜ್ಞಾನಿಕ ಸಾಧನೆಗಳೊಂದಿಗೆ ಹೆಚ್ಚಾಗಿ ಗುರುತಿಸಿಕೊಳ್ಳುವ ಮತ್ತು ನಾವೀನ್ಯತೆಯನ್ನು ಹಂಚಿಕೊಂಡ ರಾಷ್ಟ್ರೀಯ ಪ್ರಯತ್ನವಾಗಿ ನೋಡುವ ಸಂಸ್ಕೃತಿಯನ್ನು ಸರ್ಕಾರವು ಉತ್ತೇಜಿಸಿದೆ ಎಂದರು. ಹಿನ್ನಡೆಗಳ ನಂತರ ಪ್ರಧಾನಮಂತ್ರಿ ಮೋದಿ ಅವರು ವಿಜ್ಞಾನಿಗಳನ್ನು ಪ್ರೋತ್ಸಾಹಿಸಿದ್ದನ್ನು ಮತ್ತು ಅವರ ಯಶಸ್ಸನ್ನು ಸಂಭ್ರಮಿಸಿದ್ದನ್ನು ಅವರು ನೆನಪಿಸಿಕೊಂಡರು, ಇದು ವೈಫಲ್ಯವು ನಾವೀನ್ಯತೆ ಮತ್ತು ಪ್ರಗತಿಯ ಒಂದು ಭಾಗ ಎಂಬ ಕಲ್ಪನೆಯನ್ನು ಸಾಮಾನ್ಯವಾಗಿಸಲು ಸಹಾಯ ಮಾಡಿತು. ಚಂದ್ರನ ದಕ್ಷಿಣ ಧ್ರುವದ ಬಳಿ ಭಾರತವು ಯಶಸ್ವಿಯಾಗಿ ಇಳಿದಿರುವುದು ವಿಜ್ಞಾನದ ಬಗ್ಗೆ ಸಾರ್ವಜನಿಕ ಆಸಕ್ತಿಯನ್ನು ಬಲಪಡಿಸಿದೆ, ಭಾರತದ ಚಂದ್ರನ ಯೋಜನೆಗಳ ಹಿಂದಿನ ಆವಿಷ್ಕಾರಗಳು ಚಂದ್ರನ ಮೇಲೆ ನೀರಿನ ಅಣುಗಳ ಪುರಾವೆಗಳನ್ನು ಗುರುತಿಸಲು ಸಹಾಯ ಮಾಡಿದ್ದವು ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.
ಸಾಂಸ್ಥಿಕ ಬದಲಾವಣೆಗಳನ್ನು ಉಲ್ಲೇಖಿಸಿದ ಡಾ. ಜಿತೇಂದ್ರ ಸಿಂಗ್, ಮೋದಿ ಸರ್ಕಾರವು ಬಾಹ್ಯಾಕಾಶ ಮತ್ತು ಪರಮಾಣು ಪರಿಸರ ವ್ಯವಸ್ಥೆಯ ಕೆಲವು ಭಾಗಗಳಂತಹ ಆಯಕಟ್ಟಿನ ವಲಯಗಳನ್ನು ಖಾಸಗಿ ಸಹಭಾಗಿತ್ವಕ್ಕೆ ಮುಕ್ತಗೊಳಿಸಿದೆ ಮತ್ತು ದಶಕಗಳ ನಿರ್ಬಂಧಿತ ಪ್ರವೇಶವನ್ನು ಕೊನೆಗೊಳಿಸಿದೆ ಎಂದು ಹೇಳಿದರು. ಈ ವಲಯಗಳು ಸಾಂಪ್ರದಾಯಿಕವಾಗಿ ಸಾರ್ವಜನಿಕವಾಗಿ ಮುಕ್ತವಾಗಿರದೆ ಕಾರ್ಯನಿರ್ವಹಿಸುತ್ತಿದ್ದವು, ಆದರೆ ಈಗ ಉದ್ಯಮ, ಉದ್ಯಮಿಗಳು ಮತ್ತು ನವೋದ್ಯಮಗಳೊಂದಿಗೆ ಸಂಯೋಜಿಸಲ್ಪಟ್ಟಿವೆ. ಸಚಿವರ ಪ್ರಕಾರ, ಈ ನೀತಿ ಬದಲಾವಣೆಯು ವೃತ್ತಿಜೀವನದ ಅವಕಾಶಗಳನ್ನು ವಿಸ್ತರಿಸಿದೆ, ನಾವೀನ್ಯತೆಯನ್ನು ವೇಗಗೊಳಿಸಿದೆ ಮತ್ತು ಭಾರತದ ವೈಜ್ಞಾನಿಕ ಪರಿಸರ ವ್ಯವಸ್ಥೆಯನ್ನು ಜಾಗತಿಕ ಅತ್ಯುತ್ತಮ ಅಭ್ಯಾಸಗಳೊಂದಿಗೆ ಜೋಡಿಸಿದೆ. 'ವಿಕಸಿತ ಭಾರತ' ದಂತಹ ಉಪಕ್ರಮಗಳು ಭಾರತದ ಪ್ರಗತಿಯನ್ನು ಕೇವಲ ದೇಶೀಯ ಹೋಲಿಕೆಗಳಿಗಿಂತ ಹೆಚ್ಚಾಗಿ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಅಳೆಯುವ ವಿಶಾಲವಾದ ಒತ್ತು ನೀಡಿವೆ ಎಂದು ಅವರು ಹೇಳಿದರು.
ಕಲ್ಯಾಣ ಯೋಜನೆಗಳ ವಿತರಣೆಯು ಸಹ ಸಾರ್ವತ್ರಿಕ ಮತ್ತು ಪಾರದರ್ಶಕ ಅನುಷ್ಠಾನದತ್ತ ಸಾಗಿದೆ ಎಂದು ಸಚಿವರು ಹೇಳಿದರು. ವಸತಿ ಮತ್ತು ಇತರ ಕಲ್ಯಾಣ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ ಅವರು, ಜಾತಿ, ಧರ್ಮ ಅಥವಾ ಯಾವುದೇ ಇತರ ಸಂಬಂಧಗಳ ಆಧಾರದ ಮೇಲೆ ತಾರತಮ್ಯವಿಲ್ಲದೆ ಪ್ರಯೋಜನಗಳನ್ನು ತಲುಪಿಸಲಾಗುತ್ತಿದೆ, ಇದು ಸಾರ್ವಜನಿಕ ಸಂಸ್ಥೆಗಳು ಮತ್ತು ಆಡಳಿತ ವ್ಯವಸ್ಥೆಗಳ ಮೇಲೆ ಹೆಚ್ಚಿನ ನಂಬಿಕೆಯನ್ನು ಮೂಡಿಸಿದೆ ಎಂದರು.
ಭವಿಷ್ಯದ ದಿನಗಳ ಕುರಿತು ಮಾತನಾಡಿದ ಡಾ. ಜಿತೇಂದ್ರ ಸಿಂಗ್, ಭಾರತದ ಅಭಿವೃದ್ಧಿಯ ಪಯಣಕ್ಕೆ ಗಾಡವಾದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ, ಮಹಿಳೆಯರು ಮತ್ತು ಯುವಕರ ಬಲವಾದ ಭಾಗವಹಿಸುವಿಕೆ, ಬಾಹ್ಯಾಕಾಶ, ಪರಮಾಣು ಶಕ್ತಿ ಮತ್ತು ಕ್ವಾಂಟಮ್ ತಂತ್ರಜ್ಞಾನಗಳಂತಹ ಉದಯೋನ್ಮುಖ ವಲಯಗಳ ನಿರಂತರ ವಿಸ್ತರಣೆ ಹಾಗೂ ಕಾರ್ಯಕ್ಷಮತೆ ಮತ್ತು ನಾವೀನ್ಯತೆಯ ಜಾಗತಿಕ ಮಾನದಂಡಗಳ ಪಾಲನೆ ಅಗತ್ಯವಿರುತ್ತದೆ ಎಂದು ಹೇಳಿದರು. ಸರ್ಕಾರದ ದೀರ್ಘಾವಧಿಯ ಉದ್ದೇಶವು ಕೇವಲ ಆರ್ಥಿಕ ಬೆಳವಣಿಗೆಯಲ್ಲ, ಬದಲಿಗೆ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನಕ್ಕೆ ಕೊಡುಗೆ ನೀಡುವ ಸಾಮರ್ಥ್ಯವಿರುವ ಸಬಲ ಮತ್ತು ಮಹತ್ವಾಕಾಂಕ್ಷೆಯ ಸಮಾಜವನ್ನು ನಿರ್ಮಿಸುವುದಾಗಿದೆ ಎಂದು ಸಚಿವರು ಒತ್ತಿ ಹೇಳಿದರು.
ಈ ಹೇಳಿಕೆಗಳು ಸರ್ಕಾರದ 12 ವರ್ಷಗಳ ದಾಖಲೆಯನ್ನು ಆಡಳಿತ ಸುಧಾರಣೆ, ಸಾಂಸ್ಥಿಕ ಪರಿವರ್ತನೆ ಮತ್ತು ಭಾರತವನ್ನು ಹಕ್ಕು ಪ್ರತಿಪಾದಿಸುವ ಹಾಗೂ ಅವಲಂಬನೆಯ ಸಂಸ್ಕೃತಿಯಿಂದ ಆಕಾಂಕ್ಷೆ, ಅರ್ಹತೆ ಮತ್ತು ನಾವೀನ್ಯತೆಯಿಂದ ಮುನ್ನಡೆಯುವ ಸಂಸ್ಕೃತಿಯತ್ತ ಕೊಂಡೊಯ್ಯುವ ವಿಶಾಲವಾದ ನಿರೂಪಣೆಯೊಳಗೆ ಬಿಂಬಿಸುತ್ತವೆ.

*****
(रिलीज़ आईडी: 2270166)
आगंतुक पटल : 4