ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಉತ್ತರ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾನೂನು ಮಾಪನಶಾಸ್ತ್ರ ಸುಧಾರಣೆಗಳ ಅನುಷ್ಠಾನದ ಪರಿಶೀಲನೆ
ವಿಶ್ವಾಸ ಆಧಾರಿತ ನಿಯಂತ್ರಣ, ಸರಳೀಕೃತ ಅನುಸರಣೆ ಮತ್ತು ಗ್ರಾಹಕ ರಕ್ಷಣೆಯ ಮೇಲೆ ಗಮನ
ಹಿಂದಿನ ಪರವಾನಗಿ ಆಧಾರಿತ ವ್ಯವಸ್ಥೆಯಿಂದ ಜಿಎಟಿಸಿ ನಿಯಮಗಳ ಅನುಷ್ಠಾನ ಮತ್ತು ನೋಂದಣಿ ಆಧಾರಿತ ಚೌಕಟ್ಟಿನ ಅನುಷ್ಠಾನದಲ್ಲಿ ಪ್ರಗತಿ
ಜಿಎಟಿಸಿ ನಿಯಮಗಳು ಮತ್ತು ನೋಂದಣಿ ಆಧಾರಿತ ಚೌಕಟ್ಟಿನ ಅನುಷ್ಠಾನದ ಪೂರ್ವ ಹಂತದಲ್ಲಿ ರಾಜ್ಯ ಮತ್ತುಕೇಂದ್ರಾಡಳಿತ ಪ್ರದೇಶಗಳು
ಪ್ರಕಟಣಾ ದಿನಾಂಕ:
31 MAY 2026 3:23PM by PIB Bengaluru
ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ಪ್ರಾದೇಶಿಕ ಪರಿಶೀಲನೆಗಳ ಸರಣಿಯ ಭಾಗವಾಗಿ ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಲಡಾಖ್ ಗಳಲ್ಲಿ ಕಾನೂನು ಮಾಪನಶಾಸ್ತ್ರ ಸುಧಾರಣೆಗಳ ಅನುಷ್ಠಾನವನ್ನು ಪರಿಶೀಲಿಸಲಾಯಿತು. ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಕಾಯ್ದೆ, 2026ರ ಅನುಷ್ಠಾನ ಮತ್ತು ನಿಯಂತ್ರಕ ಸುಧಾರಣೆಗಳ ಕುರಿತಾದ ಉನ್ನತ ಮಟ್ಟದ ಸಮಿತಿಯ (ಎಚ್.ಎಲ್.ಸಿ) ಶಿಫಾರಸುಗಳನ್ನು ಸುಲಭಗೊಳಿಸಲು ಈ ಪರಿಶೀಲನಾ ಸಭೆಯನ್ನು ಆಯೋಜಿಸಲಾಗಿತ್ತು. ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ನಿಧಿ ಖರೆ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ವಾರದ ಆರಂಭದಲ್ಲಿ ದಕ್ಷಿಣದ ರಾಜ್ಯಗಳೊಂದಿಗೆ ನಡೆದ ಇಂತಹದೇ ಸಮಾಲೋಚನೆಗಳ ಮುಂದುವರಿಕೆಯಾಗಿ ಈ ಸಭೆ ನಡೆದಿದೆ. ಕಾನೂನು ಮಾಪನಶಾಸ್ತ್ರ ಕಾಯ್ದೆ, 2009ರ ಅಡಿಯಲ್ಲಿ ಇತ್ತೀಚೆಗೆ ಪರಿಚಯಿಸಲಾದ ಸುಧಾರಣೆಗಳ ಸುಗಮ, ಏಕರೂಪದ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಇಲಾಖೆಯು ನಡೆಸುತ್ತಿರುವ ನಿರಂತರ ತೊಡಗಿಸಿಕೊಳ್ಳುವಿಕೆಯ ಭಾಗ ಇದಾಗಿದೆ.
ಸಭೆಯಲ್ಲಿ, ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿಯಂತ್ರಕರು ಮತ್ತು ಕಾನೂನು ಮಾಪನಶಾಸ್ತ್ರ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಅನುಸರಣೆಯ ಹೊರೆಯನ್ನು ಕಡಿಮೆ ಮಾಡುವ, ವ್ಯಾಪಾರ ಮಾಡುವ ಸುಲಭತೆಯನ್ನು ಸುಧಾರಿಸುವ ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವುದರ ಜೊತೆಗೆ ಹೆಚ್ಚು ವಿಶ್ವಾಸ ಆಧಾರಿತ ನಿಯಂತ್ರಕ ಚೌಕಟ್ಟನ್ನು ರಚಿಸುವ ಗುರಿಯನ್ನು ಹೊಂದಿರುವ ಪ್ರಮುಖ ಸುಧಾರಣೆಗಳ ಪ್ರಗತಿಯನ್ನು ಪರಿಶೀಲಿಸಿದರು.
ತೂಕ ಮತ್ತು ಅಳತೆಗಳ ತಯಾರಕರು, ವಿತರಕರು ಮತ್ತು ದುರಸ್ತಿ ಮಾಡುವವರಿಗೆ ಅಸ್ತಿತ್ವದಲ್ಲಿರುವ ಪರವಾನಗಿ ತೆಗೆದುಹಾಕಿ ಅದರ ಬದಲಿಗೆ ನೋಂದಣಿ ಆಧಾರಿತ ವ್ಯವಸ್ಥೆಯನ್ನು ತರುವುದು ಚರ್ಚೆಯ ಪ್ರಮುಖ ಗಮನವಾಗಿತ್ತು. ಈ ಸುಧಾರಣೆಯ ಉದ್ದೇಶವು ಕೇವಲ "ಪರವಾನಗಿ" ಎಂಬ ಪದದ ಬದಲಿಗೆ "ನೋಂದಣಿ" ಎಂದು ಬದಲಾಯಿಸುವುದಷ್ಟೇ ಅಲ್ಲ, ಬದಲಾಗಿ ನಿಯಂತ್ರಕ ಪ್ರಕ್ರಿಯೆಯನ್ನು ಮೂಲಭೂತವಾಗಿ ಸರಳಗೊಳಿಸುವುದಾಗಿದೆ ಎಂದು ರಾಜ್ಯಗಳಿಗೆ ತಿಳಿಸಲಾಯಿತು. ನಿಗದಿತ ದಾಖಲೆಗಳನ್ನು ಸಲ್ಲಿಸಿದ ಕೂಡಲೇ ಸ್ವಯಂಚಾಲಿತವಾಗಿ ನೋಂದಣಿಗಳನ್ನು ಮಂಜೂರು ಮಾಡಬೇಕಾಗಿದ್ದು, ಇದರಿಂದ ವಿಳಂಬವನ್ನು ಕಡಿಮೆ ಮಾಡಬಹುದಾಗಿದೆ ಮತ್ತು ವ್ಯವಹಾರಗಳು ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವುದನ್ನು ಸುಲಭವಾಗುತ್ತದೆ.
ʻಜನ್ ವಿಶ್ವಾಸ್ʼ ಸುಧಾರಣೆಗಳ ಅಡಿಯಲ್ಲಿ ಹೊಸದಾಗಿ ಪರಿಚಯಿಸಲಾದ "ಸುಧಾರಣಾ ಸೂಚನೆ " (ಸುಧಾರಣಾ ನೋಟಿಸ್) ಕಾರ್ಯವಿಧಾನದ ಅನುಷ್ಠಾನವನ್ನೂ ಇಲಾಖೆಯು ಪರಿಶೀಲಿಸಿತು. ಈ ನಿಬಂಧನೆಯು ಮೊದಲ ಬಾರಿಗೆ ನಿಯಮಾವಳಿ ಉಲ್ಲಂಘನೆ ಮಾಡಿದಾಗ ದಂಡ ವಿಧಿಸುವ ಮೊದಲು ಅದನ್ನು ಸರಿಪಡಿಸಿಕೊಳ್ಳಲು ಅವಕಾಶವನ್ನು ನೀಡುವ ಮೂಲಕ ಸ್ವಯಂಪ್ರೇರಿತ ಅನುಸರಣೆಯನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತದೆ. ಈ ಸುಧಾರಣೆಯು ಅನಗತ್ಯ ಮೊಕದ್ದಮೆಗಳನ್ನು ಕಡಿಮೆ ಮಾಡುತ್ತದೆ ಹಾಗು ಹೆಚ್ಚು ಅನುಸರಣೆ ಆಧಾರಿತ ನಿಯಂತ್ರಕ ವಾತಾವರಣವನ್ನು ಪೋಷಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ತೂಕ ಮತ್ತು ಅಳತೆಗಳ ಪರಿಶೀಲನೆ ಮತ್ತು ಸ್ಟ್ಯಾಂಪಿಂಗ್ (ಮುದ್ರೆ ಹಾಕುವುದು )ಚರ್ಚೆಯ ಮತ್ತೊಂದು ಪ್ರಮುಖ ಕ್ಷೇತ್ರವಾಗಿತ್ತು. ಸರ್ಕಾರಿ ಅನುಮೋದಿತ ಪರೀಕ್ಷಾ ಕೇಂದ್ರಗಳ (ಜಿಎಟಿಸಿ) ಚೌಕಟ್ಟಿನ ವಿಸ್ತರಣೆ ಮತ್ತು ಸ್ವಯಂ ಪರಿಶೀಲನೆ ಹಾಗೂ ಮೂರನೇ ಪಕ್ಷದ ಪರಿಶೀಲನಾ ಕಾರ್ಯವಿಧಾನಗಳ ಹೆಚ್ಚುತ್ತಿರುವ ಪಾತ್ರದ ಬಗ್ಗೆ ರಾಜ್ಯಗಳಿಗೆ ಮಾಹಿತಿ ನೀಡಲಾಯಿತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಜಿಎಟಿಸಿ ನಿಯಮಗಳನ್ನು ಆದಷ್ಟು ಬೇಗ ಸೂಚಿಸುವಂತೆ ಮತ್ತು ಪರಿಶೀಲನಾ ಸೇವೆಗಳ ಲಭ್ಯತೆಯನ್ನು ಸುಧಾರಿಸಲು ಹಾಗೂ ವ್ಯವಹಾರಗಳ ಮುಗಿಸುವಿಕೆಯ ಸಮಯವನ್ನುಕಡಿಮೆ ಮಾಡಲು ಹೆಚ್ಚಿನ ವರ್ಗಗಳ ತೂಕ ಮತ್ತು ಅಳತೆ ಉಪಕರಣಗಳನ್ನು ಜಿಎಟಿಸಿ ಚೌಕಟ್ಟಿನ ಅಡಿಗೆ ತರುವಂತೆ ಇಲಾಖೆಯು ಒತ್ತಾಯಿಸಿತು.
ಇ-ಮಾಪ್ ಪೋರ್ಟಲ್ ಸೇರಿದಂತೆ ಡಿಜಿಟಲೀಕರಣ ಉಪಕ್ರಮಗಳು, ಕಾನೂನು ಮಾಪನಶಾಸ್ತ್ರ ಅಧಿಕಾರಿಗಳ ಸಾಮರ್ಥ್ಯ ವೃದ್ಧಿ ಮತ್ತು ದೇಶಾದ್ಯಂತ ಪರಿಶೀಲನಾ ಮೂಲಸೌಕರ್ಯಗಳನ್ನು ಬಲಪಡಿಸುವ ಕ್ರಮಗಳ ಪ್ರಗತಿಯನ್ನು ಸಭೆಯು ಪರಿಶೀಲಿಸಿತು. ರಾಜ್ಯಗಳು ತಮ್ಮ ಜಾರಿ ನಿಯಮಗಳ ತಿದ್ದುಪಡಿಗಳ ಕುರಿತ ಹೊಸ ಮಾಹಿತಿಗಳನ್ನು ಹಂಚಿಕೊಂಡವು ಮತ್ತು ಇತ್ತೀಚಿನ ಸುಧಾರಣೆಗಳೊಂದಿಗೆ ತಮ್ಮ ನಿಯಂತ್ರಕ ಚೌಕಟ್ಟುಗಳನ್ನು ಹೊಂದಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ವಿವರಿಸಿದವು.
ಕಾರ್ಯವಿಧಾನದ ಅನುಸರಣೆಗಳನ್ನು ಸರಳಗೊಳಿಸಲಾಗುತ್ತಿದೆ ಮತ್ತು ನಿಯಂತ್ರಕ ಪ್ರಕ್ರಿಯೆಗಳನ್ನು ಉದ್ಯಮ ಸ್ನೇಹಿಯನ್ನಾಗಿ ಮಾಡಲಾಗುತ್ತಿದ್ದರೂ, ಗ್ರಾಹಕ ರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಇರುವುದಿಲ್ಲ ಎಂದು ಇಲಾಖೆಯು ಪುನರುಚ್ಚರಿಸಿತು. ಗ್ರಾಹಕರ ಮೇಲೆ ಪರಿಣಾಮ ಬೀರುವ ವಂಚನೆ, ತಿದ್ದುವಿಕೆ ಮತ್ತು ಉದ್ದೇಶಪೂರ್ವಕ ಉಲ್ಲಂಘನೆಗಳ ವಿರುದ್ಧ ಕಾನೂನು ಮಾಪನಶಾಸ್ತ್ರ ಚೌಕಟ್ಟಿನಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಮುಂದುವರಿಯುತ್ತದೆ.
ಪ್ರಸ್ತುತ ನಡೆಯುತ್ತಿರುವ ಪ್ರಾದೇಶಿಕ ಸಮಾಲೋಚನೆಗಳು ವ್ಯಾಪಾರ ಸುಲಭತೆಯನ್ನು ಉತ್ತೇಜಿಸುವ, ಸ್ವಯಂಪ್ರೇರಿತ ಅನುಸರಣೆಯನ್ನು ಪ್ರೋತ್ಸಾಹಿಸುವ ಮತ್ತು ದೇಶಾದ್ಯಂತ ಗ್ರಾಹಕರ ವಿಶ್ವಾಸವನ್ನು ಬಲಪಡಿಸುವ ಆಧುನಿಕ, ಪಾರದರ್ಶಕ ಮತ್ತು ದಕ್ಷ ಕಾನೂನು ಮಾಪನಶಾಸ್ತ್ರ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.
*****
(ಪ್ರಕಟಣೆ ಐ.ಡಿ.: 2267274)
ವಿಸಿಟರ್ ಕೌಂಟರ್ : 12