ಕೃಷಿ ಸಚಿವಾಲಯ
azadi ka amrit mahotsav

ಮೂರನೇ ಮುಂಗಡ ಅಂದಾಜಿನ ವಿವರಗಳು ಭಾರತದ ಕೃಷಿ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ; ದಾಖಲೆಯ ಬೆಳೆ ಅಂದಾಜಿನ ವಿವರಗಳಿಗೆ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅನುಮೋದನೆ


ಭಾರತದಲ್ಲಿ ಇದುವರೆಗಿನ ಅತ್ಯಧಿಕ ಆಹಾರ ಧಾನ್ಯ ಉತ್ಪಾದನೆ ದಾಖಲು; ರೈತರಿಗೆ ಅಭಿನಂದನೆ ಸಲ್ಲಿಸಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

ದಾಖಲೆಯ ಆಹಾರ ಧಾನ್ಯ ಉತ್ಪಾದನೆ 376.56 ದಶಲಕ್ಷ  ಟನ್ ಗಳಷ್ಟಿರಬಹುದು ಎಂದು ಅಂದಾಜಿಸಲಾಗಿದೆ: ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರೈತರ ಏಳಿಗೆಗಾಗಿ ಸರ್ಕಾರದ ನಿರಂತರ ಪ್ರಯತ್ನಗಳು ಐತಿಹಾಸಿಕ ಫಲಿತಾಂಶಗಳನ್ನು ನೀಡುತ್ತಿವೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಅಕ್ಕಿ, ಗೋಧಿ ಮತ್ತು ಮೆಕ್ಕೆಜೋಳ ಉತ್ಪಾದನೆಯಲ್ಲಿ ಭಾರೀ ಏರಿಕೆ; ದಾಖಲೆಯ ಮಟ್ಟವನ್ನು ತಲುಪಿದ ಹಲವು ಬೆಳೆಗಳು: ಶ್ರೀ ಚೌಹಾಣ್

ಭಾರತದ ಕೃಷಿ ಬೆಳವಣಿಗೆಯು ವೇಗವನ್ನು ಪಡೆದುಕೊಳ್ಳುತ್ತಿದ್ದಂತೆ ಎಣ್ಣೆಕಾಳುಗಳು ಮತ್ತು ಕಬ್ಬಿನ ಉತ್ಪಾದನೆಯಲ್ಲಿ ಗಣನೀಯ ಜಿಗಿತ: ಶ್ರೀ ಶಿವರಾಜ್ ಸಿಂಗ್

ಐತಿಹಾಸಿಕ ಸುಗ್ಗಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೈತ ಕೇಂದ್ರಿತ ದೂರದೃಷ್ಟಿಯ ಅಡಿಯಲ್ಲಿ ಭಾರತದ ಆಹಾರ ಧಾನ್ಯ ಉತ್ಪಾದನೆ ಹೊಸ ಎತ್ತರಕ್ಕೆ ತಲುಪಿದೆ

ಪ್ರಕಟಣಾ ದಿನಾಂಕ: 27 MAY 2026 6:01PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಇಂದು 2025–26ನೇ ಸಾಲಿನ ಪ್ರಮುಖ ಕೃಷಿ ಬೆಳೆಗಳ ಉತ್ಪಾದನೆಯ ಮೂರನೇ ಮುಂಗಡ ಅಂದಾಜು ವಿವರಗಳನ್ನು ಬಿಡುಗಡೆ ಮಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರವು ರೈತರ ಏಳಿಗೆ ಮತ್ತು ಕೃಷಿ ವಲಯದ ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ, ಇದರ ಸಕಾರಾತ್ಮಕ ಪರಿಣಾಮವು ಈಗ ದಾಖಲೆ ಮಟ್ಟದ ಕೃಷಿ ಉತ್ಪಾದನೆಯ ರೂಪದಲ್ಲಿ ಗೋಚರಿಸುತ್ತಿದೆ ಎಂದು ಅವರು ಹೇಳಿದರು.

ಮೂರನೇ ಮುಂಗಡ ಅಂದಾಜು ವಿವರಗಳ ಪ್ರಕಾರ, ದೇಶದ ಒಟ್ಟು ಆಹಾರ ಧಾನ್ಯ ಉತ್ಪಾದನೆಯು 376.563 ದಶಲಕ್ಷ ಟನ್ ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದೆ. ಇದು ಕಳೆದ ವರ್ಷದ 357.732 ದಶಲಕ್ಷ ಟನ್ ಉತ್ಪಾದನೆಗಿಂತ ಸುಮಾರು 18.8 ದಶಲಕ್ಷ ಟನ್ (5.3%) ಹೆಚ್ಚಾಗಿದೆ. ಇದು ದೇಶದ ಇತಿಹಾಸದಲ್ಲೇ ಅತ್ಯಧಿಕ ಆಹಾರ ಧಾನ್ಯ ಉತ್ಪಾದನೆಯಾಗಿದೆ. ಈ ಐತಿಹಾಸಿಕ ಸಾಧನೆಗಾಗಿ ಶ್ರೀ ಚೌಹಾಣ್ ಅವರು ದೇಶದ ರೈತರನ್ನು ಅಭಿನಂದಿಸಿದರು.

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ಮೂರನೇ ಮುಂಗಡ ಅಂದಾಜು ವಿವರಗಳು ಭಾರತದ ಕೃಷಿ ಪ್ರಗತಿಯ ಬಲವಾದ ಮತ್ತು ಪ್ರೋತ್ಸಾಹದಾಯಕ ಚಿತ್ರಣವನ್ನು ಪ್ರಸ್ತುತಪಡಿಸುತ್ತವೆ. ಬೆಳೆವಾರು ಸಾರಾಂಶವನ್ನು ಹಂಚಿಕೊಂಡ ಕೇಂದ್ರ ಕೃಷಿ ಸಚಿವರು, ಅಕ್ಕಿ ಉತ್ಪಾದನೆಯು ದಾಖಲೆಯ 154.024 ದಶಲಕ್ಷ ಟನ್, ಗೋಧಿ 120.657 ದಶಲಕ್ಷ ಟನ್ ಮತ್ತು ಮೆಕ್ಕೆಜೋಳ ದಾಖಲೆಯ 55.093 ದಶಲಕ್ಷ ಟನ್ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದೆ ಎಂದರು. ಶ್ರೀ ಅನ್ನದ ಉತ್ಪಾದನೆ 17.584 ದಶಲಕ್ಷ ಟನ್, ತೊಗರಿ 3.592 ದಶಲಕ್ಷ ಟನ್, ಕಡಲೆ 12.514 ದಶಲಕ್ಷ ಟನ್ ಮತ್ತು ಮಸೂರ ಬೇಳೆ   ಉತ್ಪಾದನೆ 1.762 ದಶಲಕ್ಷ ಟನ್ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದೆ.

ಒಟ್ಟು ಎಣ್ಣೆಕಾಳುಗಳ ಉತ್ಪಾದನೆಯು 43.059 ದಶಲಕ್ಷ ಟನ್ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದೆ. ಕಡಲೆಕಾಯಿ ಉತ್ಪಾದನೆಯು ದಾಖಲೆಯ 13.074 ದಶಲಕ್ಷ ಟನ್ ಗಳನ್ನು ತಲುಪಿದೆ, ಸೋಯಾಬೀನ್ ಉತ್ಪಾದನೆಯು 12.596 ದಶಲಕ್ಷ ಟನ್ ಮತ್ತು ಸಾಸಿವೆ   ಉತ್ಪಾದನೆಯು ದಾಖಲೆಯ 13.768 ದಶಲಕ್ಷ ಟನ್ ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದೆ. ಕಬ್ಬಿನ ಉತ್ಪಾದನೆಯು ದಾಖಲೆಯ 500.063 ದಶಲಕ್ಷ ಟನ್ಗಳಷ್ಟು ಎಂದು ಅಂದಾಜಿಸಲಾಗಿದ್ದರೆ, ಹತ್ತಿ ಉತ್ಪಾದನೆಯು 29.024 ದಶಲಕ್ಷ ಬೇಲ್ಗಳು ಮತ್ತು ಸೆಣಬಿನ ಉತ್ಪಾದನೆಯು 9.176 ದಶಲಕ್ಷ ಬೇಲ್ಗಳಷ್ಟು  ಇರಬಹುದೆಂದು ಅಂದಾಜಿಸಲಾಗಿದೆ.

ಪ್ರತಿ ಬೆಳೆಯ ವಿವರವಾದ ಅಂಕಿ-ಅಂಶಗಳನ್ನು ನೀಡಿದ ಶ್ರೀ ಚೌಹಾಣ್ ಅವರು, 2024–25ರಲ್ಲಿ 150.184 ದಶಲಕ್ಷ ಟನ್ ಇದ್ದ ಅಕ್ಕಿ ಉತ್ಪಾದನೆಗೆ ಹೋಲಿಸಿದರೆ ಈ ಬಾರಿ 154.024 ದಶಲಕ್ಷ ಟನ್ಗಳಷ್ಟು ಅಂದಾಜಿಸಲಾಗಿದ್ದು, 3.84 ದಶಲಕ್ಷ ಟನ್ ಹೆಚ್ಚಳ ದಾಖಲಿಸಿದೆ ಎಂದರು. ಗೋಧಿ ಉತ್ಪಾದನೆಯು 120.657 ದಶಲಕ್ಷ ಟನ್ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದ್ದು, ಇದು ಕಳೆದ ವರ್ಷದ 117.945 ದಶಲಕ್ಷ ಟನ್ಗಳಿಗಿಂತ 2.712 ದಶಲಕ್ಷ ಟನ್ ಹೆಚ್ಚಾಗಿದೆ. ಶ್ರೀ ಅನ್ನದ ಉತ್ಪಾದನೆ 17.584 ದಶಲಕ್ಷ ಟನ್ಗಳಷ್ಟು ಎಂದು ಅಂದಾಜಿಸಲಾಗಿದೆ. ಮೆಕ್ಕೆಜೋಳದ ಉತ್ಪಾದನೆಯು ದಾಖಲೆಯ 55.093 ದಶಲಕ್ಷ ಟನ್ಗಳನ್ನು ತಲುಪಿದ್ದು, ಇದು ಕಳೆದ ವರ್ಷದ 43.409 ದಶಲಕ್ಷ ಟನ್ ಉತ್ಪಾದನೆಗಿಂತ 11.684 ದಶಲಕ್ಷ ಟನ್ ಹೆಚ್ಚಾಗಿದೆ. ಪೌಷ್ಟಿಕ ಮತ್ತು ಒರಟು ಧಾನ್ಯಗಳ ಉತ್ಪಾದನೆಯೂ ಹೆಚ್ಚಿನ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಒಟ್ಟು ಉತ್ಪಾದನೆಯು 74.472 ದಶಲಕ್ಷ ಟನ್ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದೆ.

ಬೇಳೆಕಾಳುಗಳಲ್ಲಿ, ತೊಗರಿ ಉತ್ಪಾದನೆಯು 3.592 ದಶಲಕ್ಷ ಟನ್ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದ್ದು, ಇದು ಕಳೆದ ವರ್ಷದ 3.624 ದಶಲಕ್ಷ ಟನ್ ಗಳಿಗೆ ಸರಿಸುಮಾರು ಸಮಾನವಾಗಿದೆ. ಕಡಲೆ ಉತ್ಪಾದನೆಯು 12.514 ದಶಲಕ್ಷ ಟನ್ ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದ್ದು, ಇದು ಕಳೆದ ವರ್ಷದ 11.114 ದಶಲಕ್ಷ ಟನ್ಗಳಿಗಿಂತ 1.4 ದಶಲಕ್ಷ ಟನ್ ಹೆಚ್ಚಾಗಿದೆ. ಮಸೂರ ಬೇಳೆ ಉತ್ಪಾದನೆಯು 1.762 ದಶಲಕ್ಷ ಟನ್ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದೆ.

ಎಣ್ಣೆಕಾಳುಗಳಲ್ಲಿ, ಒಟ್ಟು ಉತ್ಪಾದನೆಯು 43.059 ದಶಲಕ್ಷ ಟನ್ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದೆ. ಕಡಲೆಕಾಯಿ ಉತ್ಪಾದನೆಯು 13.074 ದಶಲಕ್ಷ ಟನ್ ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದ್ದು, ಇದು ಕಳೆದ ವರ್ಷದ 11.942 ದಶಲಕ್ಷ ಟನ್ಗಳಿಗಿಂತ 1.132 ದಶಲಕ್ಷ ಟನ್ ಹೆಚ್ಚಾಗಿದೆ. ಸೋಯಾಬೀನ್ ಉತ್ಪಾದನೆಯು 12.596 ದಶಲಕ್ಷ ಟನ್ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದೆ. ಸಾಸಿವೆ ಉತ್ಪಾದನೆಯು 13.768 ದಶಲಕ್ಷ ಟನ್ ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದ್ದು, ಇದು ಕಳೆದ ವರ್ಷದ 12.667 ದಶಲಕ್ಷ ಟನ್ಗಳಿಗೆ ಹೋಲಿಸಿದರೆ 1.101 ದಶಲಕ್ಷ ಟನ್ಗಳಷ್ಟು ಹೆಚ್ಚಳವಾಗಿದೆ.

ವಾಣಿಜ್ಯ ಬೆಳೆಗಳ ಪೈಕಿ ಕಬ್ಬಿನ ಉತ್ಪಾದನೆಯು 500.063 ದಶಲಕ್ಷ ಟನ್ಗಳಷ್ಟು ಇರಬಹುದೆಂದು ಅಂದಾಜಿಸಲಾಗಿದ್ದು, ಇದು ಕಳೆದ ವರ್ಷದ 454.611 ದಶಲಕ್ಷ ಟನ್ ಉತ್ಪಾದನೆಗಿಂತ 45.452 ದಶಲಕ್ಷ ಟನ್ ಹೆಚ್ಚಾಗಿದೆ ಎಂದು ಕೃಷಿ ಸಚಿವರು ತಿಳಿಸಿದರು. ಹತ್ತಿ ಉತ್ಪಾದನೆಯು 29.024 ದಶಲಕ್ಷ ಬೇಲ್ ಗಳು (ಪ್ರತಿಯೊಂದು ಬೇಲ್ 170 ಕೆಜಿ ತೂಕ) ಮತ್ತು ಸೆಣಬಿನ ಉತ್ಪಾದನೆಯು 9.176 ದಶಲಕ್ಷ ಬೇಲ್ ಗಳು (ಪ್ರತಿಯೊಂದು ಬೇಲ್ 180 ಕೆಜಿ ತೂಕ) ಇರಬಹುದೆಂದು ಅಂದಾಜಿಸಲಾಗಿದೆ.

ಮೂರನೇ ಮುಂಗಡ ಅಂದಾಜು ವಿವರಗಳು ದೇಶದಲ್ಲಿ ಆಹಾರ ಧಾನ್ಯಗಳು, ಪ್ರಮುಖ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ವಾಣಿಜ್ಯ ಬೆಳೆಗಳ ಉತ್ಪಾದನಾ ಸ್ಥಿತಿಯು ಸದೃಢವಾಗಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ ಮತ್ತು ಹಲವಾರು ಬೆಳೆಗಳು ದಾಖಲೆಯ ಉತ್ಪಾದನಾ ಮಟ್ಟವನ್ನು ಸಾಧಿಸುವ ನಿರೀಕ್ಷೆಯಿದೆ ಎಂದು ಶ್ರೀ ಚೌಹಾಣ್ ಹೇಳಿದರು.

ಭಾರತೀಯ ಕೃಷಿ ಸಂಶೋಧನಾ ಮಂಡಳಿ  (ಐಸಿಎಆರ್ )ಮತ್ತು ಅದರ ಸಂಸ್ಥೆಗಳು ಕೈಗೊಂಡ ಕೃಷಿ ಸಂಶೋಧನೆಗಳು ಪ್ರಮುಖ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಅವರು ಹೊಗಳಿದರು. ಈ ಪ್ರಯತ್ನಗಳಲ್ಲಿ ಹವಾಮಾನ ವೈಪರಿತ್ಯದಿಂದ ಚೇತರಿಸಿಕೊಳ್ಳುವ  ಬೆಳೆ ತಳಿಗಳ ಅಭಿವೃದ್ಧಿ, ಮಳೆ ಆಶ್ರಿತ ಉತ್ಪಾದನಾ ತಂತ್ರಜ್ಞಾನಗಳು ಮತ್ತು ಸಂಶೋಧನಾ ಫಲಿತಾಂಶಗಳನ್ನು ತಳಮಟ್ಟದಲ್ಲಿ ರೈತರಿಗೆ ತಲುಪಿಸುವುದು ಸೇರಿವೆ.

ಕಳೆದ ವರ್ಷ ಹಮ್ಮಿಕೊಳ್ಳಲಾಗಿದ್ದ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ದ ಅಡಿಯಲ್ಲಿ, ವಿಜ್ಞಾನಿಗಳು ನೇರವಾಗಿ ರೈತರನ್ನು ತಲುಪುವ ಮೂಲಕ ದೇಶಾದ್ಯಂತ ಕೃಷಿ ಪದ್ಧತಿಗಳನ್ನು ಮತ್ತಷ್ಟು ಬಲಪಡಿಸಲಾಯಿತು. ರೈತರಿಗೆ ಹವಾಮಾನ ವೈಪರಿತ್ಯದಿಂದ ಚೇತರಿಸಿಕೊಳ್ಳುವ ತಂತ್ರಜ್ಞಾನಗಳು, ಸುಧಾರಿತ ಬೆಳೆ ಉತ್ಪಾದನಾ ತಂತ್ರಗಳು, ಮಳೆ ಆಶ್ರಿತ ಬೇಸಾಯ ಪದ್ಧತಿಗಳು ಮತ್ತು ಸಮಗ್ರ ಕೃಷಿ ಅಭಿವೃದ್ಧಿಗಾಗಿ ವೈಜ್ಞಾನಿಕ ಸಲಹಾ ಬೆಂಬಲವನ್ನು ಒದಗಿಸಲಾಯಿತು.

2025–26ರಲ್ಲಿ, ಐಸಿಎಆರ್ ದೇಶದ ವಿವಿಧ ಕೃಷಿ ಹವಾಮಾನ ವಲಯಗಳಿಗೆ ಸೂಕ್ತವಾದ 339 ಬೆಳೆ ತಳಿಗಳನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಧಾನ್ಯಗಳು, ಎಣ್ಣೆಕಾಳುಗಳು, ಬೇಳೆಕಾಳುಗಳು, ವಾಣಿಜ್ಯ ಬೆಳೆಗಳು ಮತ್ತು ಮೇವಿನ ಬೆಳೆಗಳು ಸೇರಿವೆ.

2024–25ರ ಅವಧಿಯಲ್ಲಿ, ತಳಿ ಬೀಜಗಳ ಉತ್ಪಾದನೆಯು 109,370.2 ಕ್ವಿಂಟಾಲ್ ಗಳನ್ನು ತಲುಪಿದ್ದರೆ, ಗುಣಮಟ್ಟದ ಬೀಜಗಳ ಉತ್ಪಾದನೆಯು 433,114.7 ಕ್ವಿಂಟಾಲ್ ಗಳಷ್ಟಿತ್ತು. ಮಣ್ಣು ಮತ್ತು ಜಲ ಸಂಪನ್ಮೂಲ ನಿರ್ವಹಣೆಯಲ್ಲಿನ ಸಮಗ್ರ ನಾವೀನ್ಯತೆಗಳು, ಹವಾಮಾನ ಸ್ನೇಹಿ ಕೃಷಿ, ಡಿಜಿಟಲ್ ಮಣ್ಣಿನ ಬುದ್ಧಿಮತ್ತೆ  ಮತ್ತು ಸುಸ್ಥಿರ ಕೃಷಿ ತಂತ್ರಜ್ಞಾನಗಳು ಪ್ರಮುಖ ಕೃಷಿ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿವೆ.

 

*****


(ಪ್ರಕಟಣೆ ಐ.ಡಿ.: 2266096) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Punjabi , Gujarati , Tamil