ರಕ್ಷಣಾ ಸಚಿವಾಲಯ
ಪ್ರಸ್ತುತ ಬಿಕ್ಕಟ್ಟಿನ ನಡುವೆ ಭಾರತದಲ್ಲಿ ಅಗತ್ಯ ವಸ್ತುಗಳ ಲಭ್ಯತೆ ಮತ್ತು ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು, ಪಶ್ಚಿಮ ಏಷ್ಯಾದ ಕುರಿತಾದ ರಕ್ಷಣಾ ಸಚಿವರ ನೇತೃತ್ವದ ಐಜಿಒಎಂ (IGoM) ಸಭೆಯಲ್ಲಿ ಪರಿಶೀಲಿಸಲಾಯಿತು
ಪೂರೈಕೆ ಪರಿಸ್ಥಿತಿ ಸಾಮಾನ್ಯವಾಗಿದೆ, ಸಾರ್ವಜನಿಕರು ಇಂಧನವನ್ನು ಆತಂಕದಿಂದ ಖರೀದಿಸುವುದನ್ನು ತಪ್ಪಿಸಬೇಕು: ರಕ್ಷಣಾ ಸಚಿವರು
“ಎಲ್ಲಾ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಯಾವುದೇ ಎಲ್ಲಾ ರೀತಿಯಲ್ಲೂ ಪ್ರಯತ್ನಗಳನ್ನು ಮಾಡುತ್ತಿದೆ”
ಸಂಕಷ್ಟದ ಸಮಯದಲ್ಲಿ ಅತ್ಯುತ್ತಮ ನಾಯಕತ್ವ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಐಜಿಒಎಂ (IGoM)
ಪ್ರಕಟಣಾ ದಿನಾಂಕ:
27 MAY 2026 7:54PM by PIB Bengaluru
ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರ ನೇತೃತ್ವದ ಪಶ್ಚಿಮ ಏಷ್ಯಾದ ಕುರಿತಾದ ಸಚಿವರ ಅನೌಪಚಾರಿಕ ತಂಡವು (IGoM), ಮೇ 27, 2026 ರಂದು ನವದೆಹಲಿಯ ಕರ್ತವ್ಯ ಭವನ-2 ರಲ್ಲಿ ನಡೆದ ತನ್ನ ಆರನೇ ಸಭೆಯಲ್ಲಿ ಸಂಘರ್ಷದಲ್ಲಿ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ಪರಿಶೀಲಿಸಿತು ಮತ್ತು ಭಾರತದ ಸನ್ನದ್ಧತೆ ಹಾಗೂ ಕೈಗೊಂಡಿರುವ ಕ್ರಮಗಳನ್ನು ಮೌಲ್ಯಮಾಪನ ಮಾಡಿತು. ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ; ವಿದ್ಯುತ್ ಸಚಿವರಾದ ಶ್ರೀ ಮನೋಹರ್ ಲಾಲ್; ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ; ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ; ರೈಲ್ವೆ, ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್; ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು; ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್; ಕಾರ್ಮಿಕ ಮತ್ತು ಉದ್ಯೋಗ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ; ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್ ಈ ಸಭೆಯಲ್ಲಿ ಉಪಸ್ಥಿತರಿದ್ದರು.


ದೇಶದಲ್ಲಿ ಅಗತ್ಯ ವಸ್ತುಗಳ ಲಭ್ಯತೆ ಮತ್ತು ಪೂರೈಕೆ ಸರಪಳಿಗಳ ಸ್ಥಿತಿಸ್ಥಾಪಕತ್ವವನ್ನು ಐಜಿಒಎಂ ಪರಿಶೀಲಿಸಿತು. ಎಕ್ಸ್ (X) ನಲ್ಲಿನ ಪೋಸ್ಟ್‌ನಲ್ಲಿ ರಕ್ಷಣಾ ಸಚಿವರು, ಇಂದು ದೇಶದಲ್ಲಿ ಪೂರೈಕೆ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ತಿಳಿಸಿದ್ದಾರೆ, ಜೊತೆಗೆ ಎಲ್ಲಾ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಹಗಲಿರುಳು ಶ್ರಮಿಸುತ್ತಿರುವುದರಿಂದ ಸಾರ್ವಜನಿಕರು ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯನ್ನು ಆತಂಕದಿಂದ ಮುಗಿಬಿದ್ದು ಖರೀದಿಸುವುದನ್ನು ತಪ್ಪಿಸಬೇಕು ಎಂದು ವಿನಂತಿಸಿದ್ದಾರೆ. ಜಾಗತಿಕ ಅಡೆತಡೆಗಳ ಪ್ರಭಾವವು ಜನರ ಮೇಲೆ ಕನಿಷ್ಠ ಮಟ್ಟದಲ್ಲಿರುವಂತೆ ನೋಡಿಕೊಂಡ, ಕಷ್ಟದ ಸಮಯದಲ್ಲಿ ದೂರದರ್ಶಿತ್ವದ ದೃಷ್ಟಿಕೋನ ಮತ್ತು ಅತ್ಯುತ್ತಮ ನಾಯಕತ್ವವನ್ನು ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಐಜಿಒಎಂ ಕೃತಜ್ಞತೆ ವ್ಯಕ್ತಪಡಿಸಿತು.
ಬದಲಾಗುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೇಶದ ಸನ್ನದ್ಧತೆಯನ್ನು ಹೆಚ್ಚಿಸಲು ನಿರಂತರ ಪ್ರಯತ್ನಗಳನ್ನು ಮಾಡುವಂತೆ, ಶ್ರೀ ರಾಜನಾಥ್ ಸಿಂಗ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯು ಸಂಪೂರ್ಣವಾಗಿ ಸಮರ್ಪಕವಾಗಿದೆ ಎಂದು ಐಜಿಒಎಂಗೆ ತಿಳಿಸಲಾಯಿತು. ಭಾರತವು ವಿಶ್ವದ ನಾಲ್ಕನೇ ಅತಿ ದೊಡ್ಡ ತೈಲ ಶುದ್ಧೀಕರಣ (refiner) ದೇಶವಾಗಿದ್ದು, ಕಳೆದ ಹಣಕಾಸು ವರ್ಷದಲ್ಲಿ 243.2 MT ದೇಶೀಯ ಬಳಕೆಗೆ ಹೋಲಿಸಿದರೆ, 258.1 MTPA ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ ಮತ್ತು ವಾರ್ಷಿಕವಾಗಿ ಸರಿಸುಮಾರು 61.5 MT ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಹಾಗಾಗಿ, ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ.
ಪ್ರಸ್ತುತ ಬಿಕ್ಕಟ್ಟಿನ ಸಮಯದಲ್ಲಿ, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMCs) ಅಂತಾರಾಷ್ಟ್ರೀಯ ಬೆಲೆ ಏರಿಕೆಯ ಸಂಪೂರ್ಣ ಹೊರೆಯನ್ನು ಚಿಲ್ಲರೆ ಮಾರಾಟದ ಮೇಲೆ ಹಾಕದೆ, ದೂರ ಉಳಿದಿವೆ ಮತ್ತು ಪ್ರತಿದಿನ ಸುಮಾರು ₹550 ಕೋಟಿ ನಷ್ಟವನ್ನು ತಾವೇ ಭರಿಸುತ್ತಿವೆ. ಈ ರಕ್ಷಣಾತ್ಮಕ ಕವಚವು ಕೇವಲ ಚಿಲ್ಲರೆ ಬಳಕೆಗೆ ಮಾತ್ರ ಸೀಮಿತವಾಗಿದೆ; ಚಾಲ್ತಿಯಲ್ಲಿರುವ ನೀತಿಯ ಪ್ರಕಾರ ಕೈಗಾರಿಕಾ ಮತ್ತು ವಾಣಿಜ್ಯ ಡೀಸೆಲ್ ಬೆಲೆಗಳು ಅಂತಾರಾಷ್ಟ್ರೀಯ ಬೆಲೆಗಳನ್ನು ಆಧರಿಸಿರುತ್ತವೆ. ಕೈಗಾರಿಕಾ ಬಳಕೆದಾರರು ತಮಗೆ ನಿಗದಿಪಡಿಸಿದ ಕೈಗಾರಿಕಾ ಖರೀದಿಯ ಬದಲಿಗೆ, ರಕ್ಷಿತ ಬೆಲೆಯ ಲಾಭ ಪಡೆಯಲು ಚಿಲ್ಲರೆ ಮಾರುಕಟ್ಟೆಯಿಂದ ಖರೀದಿಸುತ್ತಿರುವ ಪ್ರವೃತ್ತಿ ಕಂಡುಬಂದಿದೆ, ಜೊತೆಗೆ ಕೆಲವು ವಿತರಕರಿಂದ ಕಾಳಸಂತೆಯ ಪ್ರಕರಣಗಳೂ ವರದಿಯಾಗಿವೆ. ಸಚಿವಾಲಯ, ಒಎಂಸಿಗಳು ಮತ್ತು ರಾಜ್ಯ ಸರ್ಕಾರಗಳು ಕ್ಷೇತ್ರ ಮಟ್ಟದ ಜಾರಿ ಕ್ರಮಗಳನ್ನು ತೀವ್ರಗೊಳಿಸಿವೆ ಮತ್ತು ಉದ್ಯಮ ಸಂಘಟನೆಗಳ ಸದಸ್ಯರಿಗೆ ನಿರೀಕ್ಷಿತ ನಡವಳಿಕೆಯನ್ನು ನೆನಪಿಸಲು ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.
ದೇಶದಲ್ಲಿ ರಸಗೊಬ್ಬರಗಳ ಒಟ್ಟಾರೆ ದಾಸ್ತಾನು ಪರಿಸ್ಥಿತಿ ಉತ್ತಮವಾಗಿದೆ ಎಂದು ಐಜಿಒಎಂಗೆ ಮಾಹಿತಿ ನೀಡಲಾಯಿತು. 2026ರ ಮುಂಗಾರು ಋತುವಿಗಾಗಿ, ರಸಗೊಬ್ಬರ ಅಗತ್ಯವನ್ನು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು 390.54 LMT ಎಂದು ಅಂದಾಜಿಸಿದೆ ಮತ್ತು ಇಂದಿನ ದಿನಾಂಕದವರೆಗೆ, ಇದು ಸುಮಾರು 200.47 LMT (51% ಕ್ಕಿಂತ ಹೆಚ್ಚು) ಲಭ್ಯವಿದೆ, ಇದು ಸಾಮಾನ್ಯ ಮಟ್ಟದ ಶೇಕಡಾ 33 ಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಸರ್ಕಾರದ ಸುಧಾರಿತ ಯೋಜನೆ, ಮುಂಗಡ ದಾಸ್ತಾನು ಮತ್ತು ದಕ್ಷ ಲಾಜಿಸ್ಟಿಕ್ಸ್ ನಿರ್ವಹಣೆಯನ್ನು ಪ್ರತಿಬಿಂಬಿಸುತ್ತದೆ.
|
ಉತ್ಪನ್ನ
|
ಬಿಕ್ಕಟ್ಟಿನ ನಂತರ ದೇಶೀಯ ಉತ್ಪಾದನೆ (LMT)
|
ಬಿಕ್ಕಟ್ಟಿನ ನಂತರ ಭಾರತೀಯ ಬಂದರುಗಳನ್ನು ತಲುಪಿದ ಆಮದು (LMT)
|
|
ಯೂರಿಯಾ
|
59.51
|
13.60
|
|
ಡಿಎಪಿ
|
8.26
|
0.88
|
|
ಎನ್‌ಪಿಕೆಗಳು
|
19.38
|
5.65
|
|
ಎಸ್‌ಎಸ್‌ಎಫ್
|
11.24
|
0
|
|
ಎಂಒಪಿ
|
0
|
3.83
|
|
ಒಟ್ಟು
|
98.39
|
23.96
|
ಬಿಕ್ಕಟ್ಟಿನ ಪರಿಸ್ಥಿತಿಯ ನಂತರ ಆಮದು ಮತ್ತು ದೇಶೀಯ ಉತ್ಪಾದನೆಯ ಮೂಲಕ ಸರಿಸುಮಾರು 122.4 LMT ರಸಗೊಬ್ಬರಗಳನ್ನು ಲಭ್ಯತೆಗೆ ಸೇರಿಸಲಾಗಿದೆ. ಮೇ ಮತ್ತು ಜೂನ್ ತಿಂಗಳುಗಳಲ್ಲಿ ಭಾರತೀಯ ಬಂದರುಗಳಿಗೆ ತಲುಪಲಿರುವ SOH ನಿಂದ ಭಾರತವು ಸುಮಾರು 15 LMT DAP (TSP ಒಳಗೊಂಡಂತೆ) ಮತ್ತು AS ಒಳಗೊಂಡಂತೆ 10 LMT NPK ಗಳನ್ನು ಕಾಯ್ದಿರಿಸಿದೆ. ಇದು ಅತ್ಯಾವಶ್ಯಕ ಸ್ಥಿತಿಯಲ್ಲಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ರಸಗೊಬ್ಬರ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ಸಾಮಗ್ರಿಗಳ, ಅಂದರೆ ಯೂರಿಯಾ ಮತ್ತು P&K ರಸಗೊಬ್ಬರಗಳ ಲಭ್ಯತೆಯನ್ನು ರಸಗೊಬ್ಬರ ಇಲಾಖೆಯು ನಿಯಮಿತವಾಗಿ ಪರಿಶೀಲಿಸುತ್ತಿದೆ. ಇದು ಕಂಪನಿಗಳು ಸಲ್ಲಿಸುವ ಎಲ್ಲಾ ಸಬ್ಸಿಡಿ ಬಿಲ್‌ಗಳನ್ನು ವಾರಕ್ಕೊಮ್ಮೆ ನಿಯಮಿತವಾಗಿ ಪಾವತಿಸುತ್ತಿದೆ.
ರಸಗೊಬ್ಬರಗಳ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಇದುವರೆಗೆ ಕಾರ್ಯದರ್ಶಿಗಳ ಅಧಿಕಾರಯುಕ್ತ ಸಮಿತಿಯ (EGoS) ಹತ್ತು (10) ಸಭೆಗಳನ್ನು ನಡೆಸಲಾಗಿದೆ. ಲಭ್ಯತೆಯಲ್ಲಿದ್ದ ಹೆಚ್ಚಿನ ಸವಾಲುಗಳನ್ನು EGoS ಪರಿಹರಿಸಿದೆ. ಭಾರತದ ರಸಗೊಬ್ಬರ ಭದ್ರತೆಯು ಬಲವಾಗಿ, ಸ್ಥಿರವಾಗಿ ಮತ್ತು ಉತ್ತಮವಾಗಿ ನಿರ್ವಹಿಸಲ್ಪಡುತ್ತಿದ್ದು, ಲಭ್ಯತೆಯು ಎಲ್ಲಾ ಪ್ರಮುಖ ರಸಗೊಬ್ಬರಗಳ ಅಗತ್ಯಕ್ಕಿಂತ ನಿರಂತರವಾಗಿ ಹೆಚ್ಚಾಗಿದೆ. ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆಗಳು ಸ್ಥಿರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ರೈತರಿಗೆ ರಸಗೊಬ್ಬರಗಳು ಮತ್ತು ಇತರ ಅತ್ಯಗತ್ಯ ಕೃಷಿ ಪರಿಕರಗಳು ಸಮರ್ಪಕವಾಗಿ ಲಭ್ಯವಿರಬೇಕು ಎಂದು ರಕ್ಷಣಾ ಸಚಿವರು ಒತ್ತು ನೀಡಿದರು.

ಉದ್ಯಮ ವಲಯ, ವಿಶೇಷವಾಗಿ ಎಂಎಸ್‌ಎಂಇಗಳು (MSMEs), ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ 5.0 (ECLGS 5.0) ಗಾಗಿ ಸರ್ಕಾರಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿವೆ ಎಂದು ಐಜಿಒಎಂಗೆ ತಿಳಿಸಲಾಯಿತು, ಇದು ಎಂಎಸ್‌ಎಂಇಗಳ ಕಾರ್ಯವಾಹಿ ಬಂಡವಾಳದ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತಿದೆ.
*****
(ಪ್ರಕಟಣೆ ಐ.ಡಿ.: 2266084)
ವಿಸಿಟರ್ ಕೌಂಟರ್ : 7