ಗಣಿ ಸಚಿವಾಲಯ
ಬಾಕಿ ಇರುವ ಗಣಿಗಾರಿಕೆ ಮತ್ತು ಪರಿಶೋಧನಾ ಯೋಜನೆಗಳನ್ನು ತ್ವರಿತಗೊಳಿಸುವಂತೆ ಬೆಂಗಳೂರಿನ ಪರಿಶೀಲನಾ ಸಭೆಗಳಲ್ಲಿ ಏಜೆನ್ಸಿಗಳಿಗೆ ನಿರ್ದೇಶನ ನೀಡಿದ ಜಿ. ಕಿಶನ್ ರೆಡ್ಡಿ
ಗೌರವಾನ್ವಿತ ಸಚಿವರು ಬೆಂಗಳೂರಿನಲ್ಲಿ ಜಿಎಸ್‌ಐ, ಎನ್‌ಐಆರ್‌ಎಂ ಮತ್ತು ಐಬಿಎಂನ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸಿದ್ದರು, ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಆಶೀರ್ವಾದ ಪಡೆದರು
ಪ್ರಕಟಣಾ ದಿನಾಂಕ:
25 MAY 2026 3:09PM by PIB Bengaluru
ಗೌರವಾನ್ವಿತ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಜಿ. ಕಿಶನ್ ರೆಡ್ಡಿ ಸೋಮವಾರ, ಸಚಿವಾಲಯದ ಅಡಿಯಲ್ಲಿರುವ ಎಲ್ಲಾ ಗಣಿಗಾರಿಕೆ ಮತ್ತು ಪರಿಶೋಧನಾ ಸಂಸ್ಥೆಗಳು ಬಾಕಿ ಇರುವ ಯೋಜನೆಗಳನ್ನು ತ್ವರಿತಗೊಳಿಸುವಂತೆ ಮತ್ತು ಭಾರತದ ಖನಿಜ ಭದ್ರತೆ ಹಾಗು ಕಾರ್ಯತಂತ್ರದ ಬೆಳವಣಿಗೆಯ ಉದ್ದೇಶಗಳನ್ನು ಬಲಪಡಿಸಲು ಆಂದೋಲನದೋಪಾದಿಯಲ್ಲಿ ಕೆಲಸ ಮಾಡಲು ಮಿಷನ್-ಮೋಡ್ ವಿಧಾನವನ್ನು ಅಳವಡಿಸಿಕೊಳ್ಳುವಂತೆ ನಿರ್ದೇಶಿಸಿದ್ದಾರೆ.
“ಎಲ್ಲಾ ಸಂಸ್ಥೆಗಳು ಬಾಕಿ ಇರುವ ಯೋಜನೆಗಳನ್ನು ತ್ವರಿತಗೊಳಿಸಬೇಕು ಮತ್ತು ತಂತ್ರಜ್ಞಾನ, ಪಾರದರ್ಶಕತೆ ಹಾಗು ದಕ್ಷತೆಯು ಪ್ರತಿಯೊಂದು ಸಾಂಸ್ಥಿಕ ಪ್ರಕ್ರಿಯೆಯ ಅಡಿಪಾಯವಾಗುವುದನ್ನು ಖಚಿತಪಡಿಸಿಕೊಳ್ಳಬೇಕು. ಭಾರತದ ಜನರು ಮತ್ತು ಭಾರತ ಸರ್ಕಾರವು ಈ ವಲಯದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಂದು ಸಂಸ್ಥೆಯಿಂದ ವೇಗ, ಹೊಣೆಗಾರಿಕೆ ಮತ್ತು ಗೋಚರ ಫಲಿತಾಂಶಗಳನ್ನು ನಿರೀಕ್ಷಿಸುತ್ತದೆ” ಎಂದು ಸಚಿವರು ಬೆಂಗಳೂರಿನಲ್ಲಿ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿ.ಎಸ್.ಐ.-GSI), ರಾಷ್ಟ್ರೀಯ ರಾಕ್ ಮೆಕ್ಯಾನಿಕ್ಸ್ ಸಂಸ್ಥೆ (ಎನ್.ಐ.ಆರ್.ಎಂ.-NIRM), ಭಾರತೀಯ ಗಣಿ ಬ್ಯೂರೋ (ಐ.ಬಿ.ಎಂ.-IBM) ಮತ್ತು ರಿಮೋಟ್ ಸೆನ್ಸಿಂಗ್ ಹಾಗು ವೈಮಾನಿಕ ಸಮೀಕ್ಷೆ (ಆರ್.ಎಸ್.ಎ.ಎಸ್.-RSAS) ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸರಣಿ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸಿದ ಸಂದರ್ಭದಲ್ಲಿ ಹೇಳಿದರು.

ಸಭೆಗಳು ಖನಿಜ ಪರಿಶೋಧನೆಯನ್ನು ವೇಗಗೊಳಿಸುವುದು, ವೈಜ್ಞಾನಿಕ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುವುದು, ಸುಸ್ಥಿರ ಗಣಿಗಾರಿಕೆ ಪದ್ಧತಿ/ಅಭ್ಯಾಸಗಳನ್ನು ಉತ್ತೇಜಿಸುವುದು ಮತ್ತು ವಿಕಸಿತ ಭಾರತ 2047ರ ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಸಾಂಸ್ಥಿಕ ಪ್ರಯತ್ನಗಳನ್ನು ಹೊಂದಿಸುವುದರ ಮೇಲೆ ಗಮನ ಕೇಂದ್ರೀಕರಿಸಿದವು.
ಪರಿಶೀಲನೆಯ ಸಮಯದಲ್ಲಿ, ದೇಶಾದ್ಯಂತ ಕೈಗೊಳ್ಳಲಾಗುತ್ತಿರುವ ಯೋಜನೆಗಳು, ತಾಂತ್ರಿಕ ಪ್ರಗತಿಗಳು ಮತ್ತು ಪರಿಶೋಧನಾ ಚಟುವಟಿಕೆಗಳನ್ನು ಸಚಿವರು ಮೌಲ್ಯಮಾಪನ ಮಾಡಿದರು, ವಿಶೇಷವಾಗಿ ಅಪರೂಪದ ಭೂಮಿಯ ಖನಿಜಗಳು (ಆರ್.ಇ.ಇ.-REE), ಲಿಥಿಯಂ, ನಿಕಲ್, ಕೋಬಾಲ್ಟ್, ಟಂಗ್ಸ್ಟನ್, ವನಾಡಿಯಮ್ ಮತ್ತು ಪ್ಲಾಟಿನಂ ಗುಂಪಿನ ಖನಿಜಗಳು (ಪಿ.ಜಿ.ಇ.-PGE) ಸೇರಿದಂತೆ ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳ ಕ್ಷೇತ್ರದಲ್ಲಿ. ಭಾರತದ ಖನಿಜ ಭದ್ರತೆ ಮತ್ತು ಕಾರ್ಯತಂತ್ರದ ಬೆಳವಣಿಗೆಯ ಉದ್ದೇಶಗಳನ್ನು ಬಲಪಡಿಸಲು ಸಂಪನ್ಮೂಲ ವರ್ಧನೆ, ಖನಿಜ ಗುರಿ, ವೈಜ್ಞಾನಿಕ ಸಮೀಕ್ಷೆಗಳು, ಗಣಿ ಸುಸ್ಥಿರತೆ, ಜಿಯೋಸ್ಪೇಷಿಯಲ್ ತಂತ್ರಜ್ಞಾನಗಳು ಮತ್ತು ಸುಧಾರಿತ ಪರಿಶೋಧನಾ ವ್ಯವಸ್ಥೆಗಳ ಕುರಿತು ಸಂಸ್ಥೆಗಳು ವಿವರವಾದ ಮಾಹಿತಿಗಳನ್ನು ಪ್ರಸ್ತುತಪಡಿಸಿದವು.

ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಜಿ. ಕಿಶನ್ ರೆಡ್ಡಿ ಅವರು:
“ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ದೂರದೃಷ್ಟಿಯಡಿಯಲ್ಲಿ, ಭಾರತವು ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಆರ್ಥಿಕತೆಯಾಗುವತ್ತ ನಿರ್ಧಾರಾತ್ಮಕವಾಗಿ ಸಾಗುತ್ತಿದೆ. ಭಾರತದ ಭವಿಷ್ಯದ ಬೆಳವಣಿಗೆ, ಕೈಗಾರಿಕಾ ವಿಸ್ತರಣೆ ಮತ್ತು ಕಾರ್ಯತಂತ್ರದ ಖನಿಜ ಭದ್ರತೆಯನ್ನು ಭದ್ರಪಡಿಸುವಲ್ಲಿ ಗಣಿಗಾರಿಕೆ ಮತ್ತು ಪರಿಶೋಧನಾ ವಲಯವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.”ಎಂದರು.
ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಸಮಯಸೂಚಿಗಳು, ಅಳೆಯಬಹುದಾದ ಫಲಿತಾಂಶಗಳು ಮತ್ತು ಹೆಚ್ಚಿನ ಹೊಣೆಗಾರಿಕೆಯೊಂದಿಗೆ ಸಂಘಟಿತ ಮಿಷನ್-ಮೋಡ್ ವಿಧಾನದಲ್ಲಿ ಕೆಲಸ ಮಾಡಲು ಅವರು ಎಲ್ಲಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದರು.
ಭಾರತದ ಪರಿಶೋಧನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸುಧಾರಿತ ತಂತ್ರಜ್ಞಾನಗಳು, ದತ್ತಾಂಶ ಏಕೀಕರಣ ಮತ್ತು ವೈಜ್ಞಾನಿಕ ನಾವೀನ್ಯತೆಯ ಮಹತ್ವವನ್ನು ಸಚಿವರು ಒತ್ತಿ ಹೇಳಿದರು.
"ಖನಿಜ ಪರಿಶೋಧನೆಯ ಭವಿಷ್ಯವು ಕೃತಕ ಬುದ್ಧಿಮತ್ತೆ (AI) , ರಿಮೋಟ್ ಸೆನ್ಸಿಂಗ್, ಇಂಟಿಗ್ರೇಟೆಡ್ ಜಿಯೋಸೈನ್ಸ್ ಅನಾಲಿಟಿಕ್ಸ್ ಮತ್ತು ಮುಂದುವರಿದ ಆಧುನಿಕ ಪರಿಶೋಧನಾ ವಿಧಾನಗಳು ಸೇರಿದಂತೆ ತಂತ್ರಜ್ಞಾನ-ಚಾಲಿತ ವ್ಯವಸ್ಥೆಗಳಲ್ಲಿದೆ. ಭಾರತವನ್ನು ಭವಿಷ್ಯಕ್ಕೆ ಸಿದ್ಧ ಮತ್ತು ಸಂಪನ್ಮೂಲ-ಸುರಕ್ಷಿತವಾಗಿಸಲು ನಮ್ಮ ಸಂಸ್ಥೆಗಳು ಈ ರೂಪಾಂತರವನ್ನು ಮುನ್ನಡೆಸಬೇಕು" ಎಂದು ಹೇಳಿದರು.
ಭಾರತದ ಭೂವೈಜ್ಞಾನಿಕ ಸಮೀಕ್ಷೆಯು ಕರ್ನಾಟಕ ಮತ್ತು ಗೋವಾದಾದ್ಯಂತ ಪ್ರಮುಖ ಪರಿಶೋಧನಾ ಫಲಿತಾಂಶಗಳನ್ನು ಉಲ್ಲೇಖಿಸಿದೆ. ಇದರಲ್ಲಿ ಚಿನ್ನ, ತಾಮ್ರ, ಪಿ.ಜಿ.ಇ., ನಿಕಲ್ ಮತ್ತು ಕೋಬಾಲ್ಟ್-ಇರುವ ವಲಯಗಳ ಗುರುತಿಸುವಿಕೆ, ಜೊತೆಗೆ ಎಂ.ಎಂ.ಡಿ.ಆರ್. (MMDR) ತಿದ್ದುಪಡಿ ಕಾಯ್ದೆ, 2015 ರ ಅಡಿಯಲ್ಲಿ ಪರಿಚಯಿಸಲಾದ ಸುಧಾರಣೆಗಳ ನಂತರ ಖನಿಜ ಸಂಪನ್ಮೂಲಗಳ ಗಮನಾರ್ಹ ವೃದ್ಧಿ ಸೇರಿವೆ. ಜಿ.ಎಸ್.ಐ.(GSI) ದೊಡ್ಡ ಪ್ರಮಾಣದ ವಿಷಯಾಧಾರಿತ ಮ್ಯಾಪಿಂಗ್, ಎ.ಐ./ಎಂ.ಎಲ್. (AI/ML) -ಸಕ್ರಿಯಗೊಳಿಸಿದ ಖನಿಜ ಗುರಿ ಮತ್ತು ಸುಮಾರು 48,000 ಚದರ ಕಿ.ಮೀ. ವ್ಯಾಪ್ತಿಯನ್ನು ಒಳಗೊಂಡಿರುವ ತನ್ನ ಐದು ವರ್ಷಗಳ ಪರಿಶೋಧನಾ ಮಾರ್ಗಸೂಚಿಯನ್ನು ಸಹ ವಿವರಿಸಿದೆ.
ಜಲವಿದ್ಯುತ್, ಮೆಟ್ರೋ ರೈಲು, ಸುರಂಗ ಎಂಜಿನಿಯರಿಂಗ್, ಭೂಕಂಪನ ಮೇಲ್ವಿಚಾರಣೆ ಮತ್ತು ಸೂಕ್ಷ್ಮ ಮೂಲಸೌಕರ್ಯದ ಬಳಿ ನಿಯಂತ್ರಿತ ಬ್ಲಾಸ್ಟಿಂಗ್ ಸೇರಿದಂತೆ ರಾಷ್ಟ್ರೀಯ ಮಹತ್ವದ ಮೂಲಸೌಕರ್ಯ ಮತ್ತು ಗಣಿಗಾರಿಕೆ ಸುರಕ್ಷತಾ ಯೋಜನೆಗಳಿಗೆ ರಾಷ್ಟ್ರೀಯ ರಾಕ್ ಮೆಕ್ಯಾನಿಕ್ಸ್ ಸಂಸ್ಥೆಯು ತನ್ನ ಕೊಡುಗೆಗಳನ್ನು ಪ್ರದರ್ಶಿಸಿತು. ಈ ಸಂಸ್ಥೆಯು ರಾಕ್ ಮೆಕ್ಯಾನಿಕ್ಸ್, ಎಂಜಿನಿಯರಿಂಗ್ ಭೂವಿಜ್ಞಾನ, ಸೂಕ್ಷ್ಮ ಭೂಕಂಪನ ಮೇಲ್ವಿಚಾರಣೆ ಮತ್ತು ಕಾರ್ಯತಂತ್ರದ ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸುವ ಭೂತಾಂತ್ರಿಕ ಪರಿಹಾರಗಳಲ್ಲಿ ತನ್ನ ಸಾಮರ್ಥ್ಯಗಳನ್ನು ಸಹ ಪ್ರಸ್ತುತಪಡಿಸಿತು.
ಭಾರತೀಯ ಗಣಿ ಬ್ಯೂರೋ ಸುಸ್ಥಿರ ಗಣಿಗಾರಿಕೆ ಪದ್ಧತಿಗಳಲ್ಲಿನ ಪ್ರಗತಿ, ಹರಾಜಾದ ಖನಿಜ ಬ್ಲಾಕ್‌ಗಳ ಕಾರ್ಯಾಚರಣೆ, ವೈಜ್ಞಾನಿಕ ಗಣಿ ಮುಚ್ಚುವಿಕೆ, ಖನಿಜ ಪ್ರಯೋಜನೀಕರಣ ಮತ್ತು ಪರಿಸರ ಸುರಕ್ಷತೆಗಳನ್ನು ಪರಿಶೀಲಿಸಿತು. ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಗಣಿಗಾರಿಕೆ ಪರಿಸರ ವ್ಯವಸ್ಥೆಗಳಿಂದ ನಿರ್ಣಾಯಕ ಖನಿಜ ಪುಷ್ಟೀಕರಣ ಮತ್ತು ಚೇತರಿಕೆ ಸಾಮರ್ಥ್ಯಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಐಬಿಎಂ ಪ್ರಸ್ತುತಪಡಿಸಿತು.
ವಾಯುಗಾಮಿ ಭೂಭೌತಿಕ ಸಮೀಕ್ಷೆಗಳು, ಹೈಪರ್‌ಸ್ಪೆಕ್ಟ್ರಲ್ ರಿಮೋಟ್ ಸೆನ್ಸಿಂಗ್ ಮತ್ತು ಎ.ಐ/ಎಂ.ಎಲ್. (AI/ML-) ಚಾಲಿತ ಖನಿಜ ಪ್ರಾಸ್ಪೆಕ್ಟಿವ್ಲಿ ಮ್ಯಾಪಿಂಗ್ ಸೇರಿದಂತೆ ರಾಷ್ಟ್ರೀಯ ವಾಯುಭೌತಿಕ ನಕ್ಷೆ ಕಾರ್ಯಕ್ರಮ (NAGMP) ಅಡಿಯಲ್ಲಿ ಸಾಧಿಸಿದ ಪ್ರಗತಿಯನ್ನು ಆರ್.ಎಸ್.ಎ.ಎಸ್. (RSAS) ವಿಭಾಗವು ಪ್ರಸ್ತುತಪಡಿಸಿತು. ಈ ಕಾರ್ಯಕ್ರಮದ ಅಡಿಯಲ್ಲಿ ಈಗಾಗಲೇ 6.5 ಲಕ್ಷ ಚದರ ಕಿ.ಮೀ.ಗಿಂತ ಹೆಚ್ಚು ಪ್ರದೇಶವನ್ನು ಒಳಗೊಂಡಿದ್ದು, ಇದು ವಾಯು-ಭೂ ಭೌತಿಕ ದತ್ತಾಂಶಗಳನ್ನು ಬಳಸಿಕೊಂಡು 200 ಕ್ಕೂ ಹೆಚ್ಚು ಪರಿಶೋಧನಾ ಯೋಜನೆಗಳನ್ನು ರೂಪಿಸುತ್ತದೆ ಎಂಬುದನ್ನು ಪ್ರಗತಿ ಪರಿಶೀಲನೆಯು ಉಲ್ಲೇಖಿಸಿದೆ.
ಬೆಂಗಳೂರು ಭೇಟಿಯ ಭಾಗವಾಗಿ, ಗೌರವಾನ್ವಿತ ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿ ಅವರು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಅಂತರರಾಷ್ಟ್ರೀಯ ಕೇಂದ್ರಕ್ಕೂ ಭೇಟಿ ನೀಡಿ ಆರ್ಟ್ ಆಫ್ ಲಿವಿಂಗ್ ಕುಟುಂಬದ ಸದಸ್ಯರೊಂದಿಗೆ ಸಂವಾದ ನಡೆಸಿದರು. ಸಚಿವರು ಗುರುಕುಲ ಮತ್ತು ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡಿ, ಮೌಲ್ಯಾಧಾರಿತ ಶಿಕ್ಷಣ, ಆಧ್ಯಾತ್ಮಿಕ ಅರಿವು ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಬೇರೂರಿರುವ ಸಾಮಾಜಿಕ ಪರಿವರ್ತನೆಯತ್ತ ಸಂಸ್ಥೆಯ ಪ್ರಯತ್ನಗಳನ್ನು ಶ್ಲಾಘಿಸಿದರು.

ಶ್ರೀ ಶ್ರೀ ರವಿಶಂಕರ್ ಅವರೊಂದಿಗೆ ಸಂವಹನ ನಡೆಸುವ ಸೌಭಾಗ್ಯವೂ ಸಚಿವರಿಗೆ ಸಿಕ್ಕಿತು ಮತ್ತು ಅವರ ಆಶೀರ್ವಾದವನ್ನು ಸಚಿವರು ಪಡೆದರು.
ಈ ಭೇಟಿಯ ಬಗ್ಗೆ ಮಾತನಾಡಿದ , ಶ್ರೀ ಜಿ. ಕಿಶನ್ ರೆಡ್ಡಿ ಅವರು:
"ವಿಕಸಿತ ಭಾರತ 2047 ಕಡೆಗೆ ಭಾರತದ ಅಭಿವೃದ್ಧಿ ಪ್ರಯಾಣವು ಆರ್ಥಿಕ ಪ್ರಗತಿ ಮತ್ತು ತಾಂತ್ರಿಕ ಪ್ರಗತಿಯಿಂದ ಮಾತ್ರವಲ್ಲದೆ, ಆಧ್ಯಾತ್ಮಿಕ ಪ್ರಜ್ಞೆ, ಸಾಂಸ್ಕೃತಿಕ ಮೌಲ್ಯಗಳು ಮತ್ತು ಸಮಾಜಕ್ಕೆ ಸಾಮೂಹಿಕ ಸೇವೆಯ ಮನೋಭಾವದಿಂದ ಕೂಡ ಮಾರ್ಗದರ್ಶಿಸಲ್ಪಡಬೇಕು." ಎಂದರು.
ವಿಕಸಿತ ಭಾರತ 2047 ರ ದೃಷ್ಟಿಕೋನಕ್ಕೆ ಅನುಗುಣವಾಗಿ ವೈಜ್ಞಾನಿಕ ಪ್ರಗತಿ, ಸುಸ್ಥಿರ ಅಭಿವೃದ್ಧಿ, ಸಾಂಸ್ಕೃತಿಕ ಮೌಲ್ಯಗಳು ಮತ್ತು ಸಾಂಸ್ಥಿಕ ಶ್ರೇಷ್ಠತೆಯ ಮೂಲಕ ರಾಷ್ಟ್ರ ನಿರ್ಮಾಣದ ಮೇಲೆ ಹೊಸ ಒತ್ತು ನೀಡುವ ಒತ್ತಾಸೆಯೊಂದಿಗೆ ಭೇಟಿ ಮುಕ್ತಾಯವಾಯಿತು.
*****
(ಪ್ರಕಟಣೆ ಐ.ಡಿ.: 2264974)
ವಿಸಿಟರ್ ಕೌಂಟರ್ : 8