ಕೃಷಿ ಸಚಿವಾಲಯ
ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯಗಳು "ಸುಧಾರಣಾ ಎಕ್ಸ್ ಪ್ರೆಸ್" ಮುನ್ನಡೆಸುತ್ತಿವೆ - ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಪ್ರಧಾನಮಂತ್ರಿ ಮೋದಿಯವರ ‘ಸುಧಾರಣೆ, ಸಾಧನೆ, ಪರಿವರ್ತನೆ ಮತ್ತು ಮಾಹಿತಿ’ ಎಂಬ ಮಂತ್ರವು ರೈತರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿದೆ - ಕೇಂದ್ರ ಕೃಷಿ ಸಚಿವರು
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತಾತ್ಮಕ ನಿರ್ದೇಶನ ಬೆನ್ನಲ್ಲೇ ತಕ್ಷಣದ ಕಾರ್ಯಪ್ರವೃತ್ತರಾದ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಪ್ರಧಾನಮಂತ್ರಿ ನೇತೃತ್ವದ ಸಚಿವ ಸಂಪುಟ ಸಭೆಯ ಮರುದಿನವೇ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಉನ್ನತ ಮಟ್ಟದ ಪರಿಶೀಲನೆ; ಹಿರಿಯ ಅಧಿಕಾರಿಗಳಿಗೆ ಪ್ರಮುಖ ನಿರ್ದೇಶನಗಳ ಜಾರಿ
ರೈತರು ಮತ್ತು ಬಡವರು ಅಲೆದಾಡುವಂತೆ ಮಾಡಬಾರದು; ಕುಂದುಕೊರತೆ ನಿವಾರಣೆಗೆ ಪ್ರಥಮ ಆದ್ಯತೆ ನೀಡಬೇಕು: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡಲು ಮಾಸಿಕ ಪರಿಶೀಲನೆ; ದೂರುಗಳ ವಿಲೇವಾರಿ ಮಾತ್ರ ಸಾಕಾಗುವುದಿಲ್ಲ, ತಳಮಟ್ಟದ ಪರಿಹಾರ ಅತ್ಯಗತ್ಯ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಸರಳಗೊಳಿಸಿ; ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಹೊಸ ವೇಗವನ್ನು ನೀಡಲು ಎಐ, ಡೇಟಾ ಮತ್ತು ಡಿಜಿಟಲ್ ಆಡಳಿತದ ಬಳಕೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ನ್ಯಾಯಾಲಯದ ಪ್ರಕರಣಗಳು, ಕಡತ ಸಂಸ್ಕೃತಿ ಮತ್ತು ಆಡಳಿತಾತ್ಮಕ ಕರಡು ರಚನೆಯಲ್ಲಿ ಪ್ರಮುಖ ಸುಧಾರಣಾ ಕಾರ್ಯಸೂಚಿಗೆ ತೀವ್ರ ಒತ್ತು ನೀಡಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಪ್ರಕಟಣಾ ದಿನಾಂಕ:
22 MAY 2026 7:43PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ಆಡಳಿತಾತ್ಮಕ ನಿರ್ದೇಶನಗಳನ್ನು ನೀಡಿದ ಮರುದಿನವೇ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಶುಕ್ರವಾರ ತಮ್ಮ ಎರಡೂ ಸಚಿವಾಲಯಗಳ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆಯನ್ನು ನಡೆಸಿದರು. ಆಡಳಿತವು ಕೇವಲ ಕಡತಗಳಿಗೆ ಸೀಮಿತವಾಗದೆ ಜನರ ಜೀವನದಲ್ಲಿ ಗೋಚರಿಸಬೇಕು ಎಂಬ ಸ್ಪಷ್ಟ ಸಂದೇಶವನ್ನು ಅವರು ನೀಡಿದರು.

ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಅಥವಾ ಕುಂದುಕೊರತೆಗಳ ನಿವಾರಣೆಗಾಗಿ ರೈತರು, ಬಡವರು, ಗ್ರಾಮೀಣ ನಾಗರಿಕರು ಮತ್ತು ಸಾಮಾನ್ಯ ಸಾರ್ವಜನಿಕರು ಅಲೆದಾಡದಂತೆ ನೋಡಿಕೊಳ್ಳಲು ತಕ್ಷಣವೇ ಯೋಜನಾಬದ್ಧ, ಕಾಲಮಿತಿ ಮತ್ತು ಫಲಿತಾಂಶ ಆಧಾರಿತ ವ್ಯವಸ್ಥೆಯನ್ನು ಸ್ಥಾಪಿಸುವಂತೆ ಕೇಂದ್ರ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಮಾತನಾಡಿದ ಶ್ರೀ ಚೌಹಾಣ್ ಅವರು, ಸಾಮಾನ್ಯ ನಾಗರಿಕರು ಅನಗತ್ಯ ಅಲೆದಾಟಗಳಿಗೆ ಅಥವಾ ಅಧಿಕಾರಶಾಹಿ ವಿಳಂಬಕ್ಕೆ ಸಿಲುಕಬಾರದು ಮತ್ತು ಸರ್ಕಾರಿ ಯೋಜನೆಗಳ ಪ್ರಯೋಜನಗಳು ಯಾವುದೇ ಅಡೆತಡೆಗಳಿಲ್ಲದೆ, ಸರಳವಾಗಿ ಹಾಗೂ ಸಕಾಲದಲ್ಲಿ ಅವರಿಗೆ ತಲುಪಬೇಕು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಪಷ್ಟವಾಗಿ ಒತ್ತಿಹೇಳಿದ್ದಾರೆ ಎಂದರು. ಇದನ್ನು ಸರ್ಕಾರದ ಅತ್ಯುನ್ನತ ಆದ್ಯತೆ ಎಂದು ಕರೆದ ಅವರು, ಕೃಷಿ, ಗ್ರಾಮೀಣಾಭಿವೃದ್ಧಿ, ಭೂ ಸಂಪನ್ಮೂಲ ಮತ್ತು ಐಸಿಎಆರ್ ಸೇರಿದಂತೆ ಎಲ್ಲಾ ಸಂಬಂಧಪಟ್ಟ ಇಲಾಖೆಗಳು ಹಾಗೂ ಸಂಸ್ಥೆಗಳು ತಮ್ಮ ಕುಂದುಕೊರತೆ ನಿವಾರಣಾ ವ್ಯವಸ್ಥೆಗಳನ್ನು ಬಲಪಡಿಸಬೇಕು ಮತ್ತು ಅವುಗಳನ್ನು ಹೆಚ್ಚು ಪರಿಣಾಮಕಾರಿ, ಜವಾಬ್ದಾರಿಯುತ ಹಾಗೂ ಜನಸ್ನೇಹಿಯಾಗಿಸಬೇಕು ಎಂದು ಸೂಚಿಸಿದರು.

ಪ್ರಸ್ತುತ ವಿಭಿನ್ನ ಯೋಜನೆಗಳು ಮತ್ತು ಇಲಾಖೆಗಳು ಪ್ರತ್ಯೇಕ ಕುಂದುಕೊರತೆ ಪೋರ್ಟಲ್ ಗಳು ಹಾಗೂ ವ್ಯವಸ್ಥೆಗಳ ಮೂಲಕ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿದ ಅವರು, ಹೆಚ್ಚು ಏಕೀಕೃತ ಮತ್ತು ಫಲಿತಾಂಶ ಆಧಾರಿತ ವ್ಯವಸ್ಥೆಯ ಅಗತ್ಯವನ್ನು ಒತ್ತಿಹೇಳಿದರು. ಇದನ್ನು ಸಾಕಾರಗೊಳಿಸಲು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯಗಳಲ್ಲಿ ತಲಾ ಕನಿಷ್ಠ 10 ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸುವಂತೆ ಅವರು ನಿರ್ದೇಶಿಸಿದರು. ಈ ತಂಡಗಳು ದೂರುಗಳು, ಸಾರ್ವಜನಿಕ ಕುಂದುಕೊರತೆಗಳು, ಜನಪ್ರತಿನಿಧಿಗಳ ಮನವಿಗಳು, ನಾಗರಿಕರ ಪತ್ರಗಳು ಮತ್ತು ವಿವಿಧ ಪೋರ್ಟಲ್‌ಗಳ ಮೂಲಕ ಬರುವ ಸಮಸ್ಯೆಗಳನ್ನು ಪ್ರತಿದಿನವೂ ಪರಿಶೀಲಿಸಬೇಕು ಎಂದು ಹೇಳಿದರು.
ಕುಂದುಕೊರತೆ ನಿವಾರಣೆಯು ಕಾಗದದ ಮೇಲಿನ ಕೇವಲ ‘ವಿಲೇವಾರಿ’ಗೆ ಸೀಮಿತವಾಗಿರಬಾರದು ಎಂದು ಶ್ರೀ ಚೌಹಾಣ್ ಬಲವಾಗಿ ಒತ್ತಿಹೇಳಿದರು. ಫಲಾನುಭವಿಗಳಿಗೆ ನಿಜವಾಗಿಯೂ ಪರಿಹಾರ ಸಿಕ್ಕಿದೆಯೇ ಮತ್ತು ಯೋಜನೆಯ ಪ್ರಯೋಜನಗಳು ಉದ್ದೇಶಿತ ಜನರನ್ನು ತಲುಪಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು. ದಾಖಲೆಗಳಲ್ಲಿ ಸೌಲಭ್ಯಗಳ ವಿತರಣೆಯಾಗಿರುವುದು ಕಂಡುಬಂದು, ತಳಮಟ್ಟದಲ್ಲಿ ಫಲಾನುಭವಿಗಳಿಗೆ ಏನೂ ಸಿಗದ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಅವರು ಎಚ್ಚರಿಕೆ ನೀಡಿದರು.
ಪರಿಶೀಲನೆಗಾಗಿ ತಾವೇ ಖುದ್ದಾಗಿ ಫಲಾನುಭವಿಗಳಿಗೆ ನೇರ ಕರೆ ಮಾಡಿದ ತಮ್ಮದೇ ಆದ ಅನುಭವವನ್ನು ಹಂಚಿಕೊಂಡ ಸಚಿವರು, ಕೆಲವು ಸಂದರ್ಭಗಳಲ್ಲಿ ಅಧಿಕೃತ ದಾಖಲೆಗಳು ಮತ್ತು ತಳಮಟ್ಟದ ವಾಸ್ತವಗಳ ನಡುವೆ ಅಜಗಜಾಂತರ ವ್ಯತ್ಯಾಸಗಳಿರುವುದು ಗೋಚರಿಸಿದೆ ಎಂದರು. ಈ ಸಮಸ್ಯೆಯು ಸಂಕೀರ್ಣವಾಗಿದ್ದು, ದೂರುಗಳ ಸ್ವರೂಪ, ವಲಯವಾರು ಪ್ರವೃತ್ತಿಗಳು ಮತ್ತು ಯೋಜನೆ-ನಿರ್ದಿಷ್ಟ ಅಡೆತಡೆಗಳನ್ನು ಸೂಕ್ಷ್ಮವಾಗಿ ಗುರುತಿಸಿ, ನಂತರ ಅಗತ್ಯ ಕ್ರಮಬದ್ಧ ಸುಧಾರಣೆಗಳನ್ನು ತರಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕುಂದುಕೊರತೆ ನಿವಾರಣಾ ವ್ಯವಸ್ಥೆಗಳನ್ನು ಪ್ರತಿ ತಿಂಗಳು ಪರಿಶೀಲಿಸಲಾಗುವುದು ಎಂದು ಅವರು ಘೋಷಿಸಿದರು. ಈ ಪರಿಶೀಲನೆಯನ್ನು ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ಸೋಮವಾರದಂದು ನಡೆಸಲಾಗುತ್ತದೆ; ಆದಾಗ್ಯೂ, ಬಿಡುವಿಲ್ಲದ ಮುಂಗಾರು ಹಂಗಾಮಿನ ಕಾರಣದಿಂದಾಗಿ, ಜೂನ್ ತಿಂಗಳ ಪರಿಶೀಲನೆಯು ಎರಡನೇ ಸೋಮವಾರದಂದು ನಡೆಯಲಿದೆ. ಅಷ್ಟರೊಳಗೆ ಇಡೀ ವ್ಯವಸ್ಥೆಯು ಗಮನಾರ್ಹವಾಗಿ ಹೆಚ್ಚು ಸುವ್ಯವಸ್ಥಿತ, ಸ್ಪಂದಿಸುವ ಮತ್ತು ಪರಿಣಾಮಕಾರಿಯಾಗಬೇಕು ಎಂದು ಅವರು ಹೇಳಿದರು.
ಸುಧಾರಣೆಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿರಂತರ ಒತ್ತು ನೀಡುವುದನ್ನು ಉಲ್ಲೇಖಿಸಿದ ಶ್ರೀ ಚೌಹಾಣ್, ಪ್ರತಿಯೊಂದು ವಿಭಾಗ, ಯೋಜನೆ ಮತ್ತು ಇಲಾಖೆಯು ತೊಂದರೆಗಳು ಎದುರಾಗುವ ನಿಖರವಾದ ಅಂಶಗಳನ್ನು ಗುರುತಿಸಬೇಕು ಎಂದು ಹೇಳಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆ, ರಸ್ತೆ ಯೋಜನೆಗಳು, ಕೃಷಿ ಕಾರ್ಯಕ್ರಮಗಳು, ತೋಟಗಾರಿಕೆ, ವಿಮೆ, ಮಾರುಕಟ್ಟೆ ಅಥವಾ ಯಾವುದೇ ಇತರ ಉಪಕ್ರಮ ಇರಲಿ, ಫಲಾನುಭವಿಗಳಿಗೆ ಅನಗತ್ಯ ಅನಾನುಕೂಲತೆಯನ್ನು ಉಂಟುಮಾಡುವ ಯಾವುದೇ ಪ್ರಕ್ರಿಯೆಯನ್ನು ನಿಯಮಗಳು, ಕಾರ್ಯವಿಧಾನಗಳು ಮತ್ತು ವ್ಯವಸ್ಥೆಗಳಲ್ಲಿನ ಸುಧಾರಣೆಗಳ ಮೂಲಕ ಸರಳಗೊಳಿಸಬೇಕು ಎಂದರು.
ಕಾರ್ಯವಿಧಾನಗಳನ್ನು ಸರಳಗೊಳಿಸುವ ಮತ್ತು ಹಳತಾದ ಹಾಗೂ ಅಪ್ರಸ್ತುತ ನಿಯಮಾವಳಿಗಳನ್ನು ತೆಗೆದುಹಾಕುವ ಅಗತ್ಯವನ್ನು ಕೇಂದ್ರ ಸಚಿವರು ಒತ್ತಿಹೇಳಿದರು. ಅತಿಯಾದ ಪರವಾನಗಿ ಅಗತ್ಯತೆಯನ್ನು ಪ್ರಶ್ನಿಸಿದ ಅವರು, ಅನೇಕ ಸಂದರ್ಭಗಳಲ್ಲಿ ಸರಳ ನೋಂದಣಿ ಆಧಾರಿತ ವ್ಯವಸ್ಥೆಗಳೇ ಸಾಕಾಗಬಹುದು ಎಂದು ಸಲಹೆ ನೀಡಿದರು. ಅನುಷ್ಠಾನಕ್ಕೆ ಅಡ್ಡಿಪಡಿಸುವ ಮತ್ತು ಸುಧಾರಣೆಯ ಅಗತ್ಯವಿರುವ ಎಲ್ಲಾ ನಿಬಂಧನೆಗಳು, ಸಂಕೀರ್ಣ ಕಾರ್ಯವಿಧಾನಗಳು ಮತ್ತು ನೀತಿ ಅಡೆತಡೆಗಳನ್ನು ಒಂದು ವಾರದೊಳಗೆ ಗುರುತಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು, ಇದರಿಂದಾಗಿ ಶೀಘ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದರು.
ಈ ಸಭೆಯು ಆಡಳಿತದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ತಂತ್ರಜ್ಞಾನದ ಬಳಕೆಯ ಮೇಲೆಯೂ ವ್ಯಾಪಕವಾಗಿ ಗಮನಹರಿಸಿತು. ಕೃಷಿ, ಗ್ರಾಮೀಣಾಭಿವೃದ್ಧಿ, ಭೂ ಸಂಪನ್ಮೂಲ ಮತ್ತು ಐಸಿಎಆರ್ ನಾದ್ಯಂತ ಎಐ, ಡಿಜಿಟಲ್ ವೇದಿಕೆಗಳು, ಡೇಟಾ ಹಂಚಿಕೆ, ಡೇಟಾ ಆಧಾರಿತ ನಿರ್ಧಾರ ಕೈಗೊಳ್ಳುವಿಕೆ, ಮೇಲ್ವಿಚಾರಣಾ ವ್ಯವಸ್ಥೆಗಳು ಮತ್ತು ಇಲಾಖಾ ಸಮನ್ವಯವನ್ನು ಬಲಪಡಿಸಬೇಕು ಎಂದು ಶ್ರೀ ಚೌಹಾಣ್ ಹೇಳಿದರು. ತಾಂತ್ರಿಕ ಸಂಯೋಜನೆಯನ್ನು ಅಧ್ಯಯನ ಮಾಡಲು ಮತ್ತು ಪ್ರಾಯೋಗಿಕ ಪ್ರಸ್ತಾಪಗಳನ್ನು ಸಲ್ಲಿಸಲು ಪ್ರತ್ಯೇಕ ತಂಡವನ್ನು ರಚಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಡಿಜಿಟಲ್ ಆಡಳಿತವು ಪಾರದರ್ಶಕತೆ ಮತ್ತು ದಕ್ಷತೆ ಎರಡನ್ನೂ ಗಮನಾರ್ಹವಾಗಿ ಸುಧಾರಿಸುತ್ತದೆ, ಆದರೆ ಇದಕ್ಕೆ ಇಲಾಖೆಗಳ ನಡುವೆ ಬಲವಾದ ಸಮನ್ವಯ ಮತ್ತು ಡೇಟಾ ಸಂಯೋಜನೆಯ ಅಗತ್ಯವಿರುತ್ತದೆ ಎಂದು ಅವರು ಹೇಳಿದರು. ಪ್ರತ್ಯೇಕ ಪೋರ್ಟಲ್ ಆಧಾರಿತ ಮೌಲ್ಯಮಾಪನಗಳ ಬದಲಿಗೆ ಏಕೀಕೃತ ಕುಂದುಕೊರತೆ ಮೌಲ್ಯಮಾಪನ ವ್ಯವಸ್ಥೆಯನ್ನು ರಚಿಸಲು ಬಹು ಕುಂದುಕೊರತೆ ಡೇಟಾಬೇಸ್ ಗಳನ್ನು ಸಂಯೋಜಿಸುವ ಕೆಲಸ ಈಗಾಗಲೇ ನಡೆಯುತ್ತಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಆಡಳಿತಾತ್ಮಕ ಕೆಲಸದ ಸಂಸ್ಕೃತಿಯನ್ನು ಪರಿವರ್ತಿಸುವ ಅಗತ್ಯತೆಯ ಬಗ್ಗೆಯೂ ಶ್ರೀ ಚೌಹಾಣ್ ಮಾತನಾಡಿದರು. ಕಡತಗಳು ಕೆಳ ಹಂತಗಳಲ್ಲಿ ಪ್ರಾರಂಭವಾಗುತ್ತವೆ ಮತ್ತು ಹಳತಾದ ಮನಸ್ಥಿತಿಗಳನ್ನು ಮುಂದುವರಿಸುತ್ತವೆ, ಇದು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳನ್ನು ಸಂಕೀರ್ಣಗೊಳಿಸುತ್ತದೆ ಎಂದು ಅವರು ಹೇಳಿದರು. ಆದ್ದರಿಂದ, ಕೇವಲ ಉನ್ನತ ಮಟ್ಟದಲ್ಲಿ ಮಾತ್ರವಲ್ಲದೆ ತಳಮಟ್ಟದ ಆಡಳಿತಾತ್ಮಕ ಮಟ್ಟದಲ್ಲಿ ಕಡತ ಸಿದ್ಧಪಡಿಸುವುದು, ಟಿಪ್ಪಣಿ ಬರೆಯುವುದು, ಕರಡು ರಚನೆ ಮತ್ತು ನಿರ್ಧಾರದ ಬೆಂಬಲದಲ್ಲಿ ಸುಧಾರಣೆಯ ಅಗತ್ಯವಿದೆ ಎಂದು ಅವರು ತಿಳಿಸಿದರು.
ಕರಡು ರಚನೆಯು ಅತ್ಯಂತ ಪ್ರಮುಖವಾದ ಕ್ಷೇತ್ರವೆಂದು ಕರೆದ ಅವರು, ಸ್ಪಷ್ಟ, ಬಲವಾದ ಮತ್ತು ನೀತಿಗೆ ಅನುಗುಣವಾದ ಟಿಪ್ಪಣಿಗಳು ಮತ್ತು ಕಡತಗಳನ್ನು ಸಿದ್ಧಪಡಿಸುವ ಸಾಮರ್ಥ್ಯವಿರುವ ಅಧಿಕಾರಿಗಳನ್ನು ಸಿದ್ಧಪಡಿಸುವ ಅಗತ್ಯವನ್ನು ಒತ್ತಿಹೇಳಿದರು. ಕಡತಗಳು ಅನಗತ್ಯವಾಗಿ ವಿಳಂಬವಾಗದಂತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಗುಣಮಟ್ಟ ಸುಧಾರಿಸುವಂತೆ ಇಲಾಖೆಗಳು ತರಬೇತಿ, ಸಾಮರ್ಥ್ಯ ವೃದ್ಧಿ ಮತ್ತು ಕೌಶಲ್ಯ ವರ್ಧನೆಯನ್ನು ಬಲಪಡಿಸಬೇಕು ಎಂದು ಅವರು ನಿರ್ದೇಶಿಸಿದರು.
ಬಾಕಿ ಉಳಿದಿರುವ ನ್ಯಾಯಾಲಯದ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ಸಚಿವರು, ನ್ಯಾಯಾಲಯಗಳ ಮುಂದೆ ಅಧಿಕೃತ ನಿಲುವನ್ನು ಪರಿಣಾಮಕಾರಿಯಾಗಿ ಅಥವಾ ಸಕಾಲದಲ್ಲಿ ಮಂಡಿಸದ ಕಾರಣ ಸರ್ಕಾರಗಳು ಹೆಚ್ಚಾಗಿ ಪ್ರಕರಣಗಳನ್ನು ಸೋಲುತ್ತವೆ ಎಂದು ಹೇಳಿದರು. ಬಾಕಿ ಇರುವ ಮೊಕದ್ದಮೆಗಳ ಪಟ್ಟಿಗಳನ್ನು ಸಿದ್ಧಪಡಿಸಲು, ಪರಿಶೀಲನೆಗಳನ್ನು ನಡೆಸಲು, ನೋಡಲ್ ಅಧಿಕಾರಿಗಳನ್ನು ನೇಮಿಸಲು, ಕಾನೂನು ಸಿದ್ಧತೆಯನ್ನು ಬಲಪಡಿಸಲು ಮತ್ತು ಅಗತ್ಯವಿರುವ ಕಡೆಗಳಲ್ಲಿ ಉತ್ತಮ ಕಾನೂನು ಪ್ರಾತಿನಿಧ್ಯವನ್ನು ಪಡೆದುಕೊಳ್ಳಲು ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿದರು. ನ್ಯಾಯಾಲಯದಲ್ಲಿನ ಸೋಲುಗಳು ನೇರವಾಗಿ ಸಾರ್ವಜನಿಕ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದರು.
ಅಭಿವೃದ್ಧಿಯ ಅಡೆತಡೆಗಳನ್ನು ಗುರುತಿಸುವ ಮತ್ತು ತೆಗೆದುಹಾಕುವ ಕುರಿತು ಪ್ರಧಾನಮಂತ್ರಿ ಮೋದಿಯವರ ಸಂದೇಶವನ್ನು ಒತ್ತಿ ಹೇಳಿದ ಶ್ರೀ ಚೌಹಾಣ್, ಕೆಲಸ ಏಕೆ ವಿಳಂಬವಾಗುತ್ತದೆ, ಯಾವ ಅಡೆತಡೆಗಳು ನಿರ್ಧಾರಗಳು, ಅನುಷ್ಠಾನ ಮತ್ತು ಪ್ರಯೋಜನಗಳ ವಿತರಣೆಗೆ ಅಡ್ಡಿಪಡಿಸುತ್ತವೆ ಮತ್ತು ಅವುಗಳನ್ನು ತೆಗೆದುಹಾಕಲು ಯಾವ ಸುಧಾರಣೆಗಳು ಅಗತ್ಯವಾಗಿವೆ ಎಂಬುದನ್ನು ಪ್ರತಿಯೊಂದು ವಿಭಾಗವೂ ಗುರುತಿಸಬೇಕು ಎಂದು ಹೇಳಿದರು. ಈ ಪ್ರಕ್ರಿಯೆಯು “ಸುಧಾರಣೆ, ಸಾಧನೆ, ಪರಿವರ್ತನೆ” ಜೊತೆಗೆ “ಮಾಹಿತಿ” ಚೌಕಟ್ಟಿನಡಿಯಲ್ಲಿ ಏಕಕಾಲದಲ್ಲಿ ಮುಂದುವರಿಯಬೇಕು ಎಂದು ಅವರು ಹೇಳಿದರು.
ಅನೇಕ ಯೋಜನೆಗಳು ಮತ್ತು ಸುಧಾರಣೆಗಳು ಜನರ ನಡುವೆ ಜಾಗೃತಿ ಇಲ್ಲದ ಕಾರಣ ಸಂಪೂರ್ಣ ಪ್ರಭಾವ ಬೀರಲು ವಿಫಲವಾಗುತ್ತವೆ ಎಂದು ಅವರು ಹೇಳಿದರು. ಆದ್ದರಿಂದ, ವ್ಯಾಪಕ ಸಾರ್ವಜನಿಕ ಜಾಗೃತಿಯನ್ನು ಖಚಿತಪಡಿಸಿಕೊಳ್ಳಲು ರೈತ ಸಂಘಟನೆಗಳು, ಕಾರ್ಮಿಕ ಗುಂಪುಗಳು, ಸರಪಂಚರು, ಜನಪ್ರತಿನಿಧಿಗಳು, ಸಾಮಾಜಿಕ ಮಾಧ್ಯಮಗಳು, ಗ್ರಾಫಿಕ್ಸ್, ವೀಡಿಯೊಗಳು, ರೀಲ್ಸ್ ಗಳು ಮತ್ತು ಇತರ ಸೃಜನಶೀಲ ಸಂವಹನ ಮಾಧ್ಯಮಗಳ ಮೂಲಕ ಪಾಲುದಾರರೊಂದಿಗೆ ಸಂವಹನ ನಡೆಸಬೇಕು ಎಂದು ಅವರು ಹೇಳಿದರು.
ಈಗಾಗಲೇ ಜಾರಿಗೊಳಿಸಲಾದ ಸುಧಾರಣೆಗಳನ್ನು “ಸುಧಾರಣಾ ಉತ್ಸವ”ದ ಉತ್ಸಾಹದಲ್ಲಿ ಪ್ರಚಾರ ಮಾಡಬೇಕು ಎಂದು ಸಭೆಯಲ್ಲಿ ಒತ್ತಿಹೇಳಲಾಯಿತು. ಸುಧಾರಣೆಗಳು ಮಾತ್ರ ಸಾಕಾಗುವುದಿಲ್ಲ; ಫಲಾನುಭವಿಗಳು ಮತ್ತು ಪಾಲುದಾರರನ್ನು ಸಂವಾದಕ್ಕೆ ಆಹ್ವಾನಿಸಬೇಕು ಮತ್ತು ಏನು ಬದಲಾಗಿದೆ, ಅವರು ಹೇಗೆ ಪ್ರಯೋಜನ ಪಡೆಯುತ್ತಿದ್ದಾರೆ ಮತ್ತು ಇನ್ನು ಏನೆಲ್ಲಾ ಹೆಚ್ಚುವರಿ ಸುಧಾರಣೆಗಳು ಸಾಧ್ಯ ಎಂಬುದರ ಕುರಿತು ಅವರಿಗೆ ತಿಳಿಸಬೇಕು ಎಂದು ಶ್ರೀ ಚೌಹಾಣ್ ಹೇಳಿದರು.
ಐಸಿಎಆರ್ ನಲ್ಲಿನ ಹೊಸ ಬಡ್ತಿ ವ್ಯವಸ್ಥೆಯನ್ನು ಉಲ್ಲೇಖಿಸಿದ ಅವರು, ಕೇವಲ ಸಂಶೋಧನಾ ಪ್ರಬಂಧಗಳಿಗಿಂತ ತಳಮಟ್ಟದ ಪ್ರಭಾವ ಮತ್ತು ಪ್ರಾಯೋಗಿಕ ಕೆಲಸಗಳಿಗೆ ಈಗ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ಅದನ್ನು ಸಾಂಸ್ಥಿಕ ಕೆಲಸದ ಸಂಸ್ಕೃತಿಯನ್ನು ಬದಲಾಯಿಸುವ ಸಾಮರ್ಥ್ಯವಿರುವ ಪ್ರಮುಖ ಸುಧಾರಣೆ ಎಂದು ಬಣ್ಣಿಸಿದರು ಮತ್ತು ಇಂತಹ ಸುಧಾರಣೆಗಳು ಕೇವಲ ಇಲಾಖೆಗಳ ಒಳಗೆ ಸೀಮಿತವಾಗಿರದೆ ರೈತರು ಮತ್ತು ಸಾರ್ವಜನಿಕರಿಗೆ ವ್ಯಾಪಕವಾಗಿ ತಲುಪಬೇಕು ಎಂದು ಹೇಳಿದರು.
ರಾಜ್ಯಗಳೊಂದಿಗಿನ ಪಾಲುದಾರಿಕೆಯನ್ನು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಯಶಸ್ಸಿನ ಪ್ರಮುಖ ಸೂತ್ರ ಎಂದು ಶ್ರೀ ಚೌಹಾಣ್ ಬಣ್ಣಿಸಿದರು. ನಿಜವಾದ ಅನುಷ್ಠಾನವು ರಾಜ್ಯ ಮಟ್ಟದಲ್ಲಿ ನಡೆಯುತ್ತದೆ ಮತ್ತು ಆದ್ದರಿಂದ ಮಾರ್ಗಸೂಚಿ ಆಧಾರಿತ ಪಾಲುದಾರಿಕೆಗಳು, ವಲಯ ಸಮ್ಮೇಳನಗಳು, ಯೋಜನೆವಾರು ಸಮನ್ವಯ ಮತ್ತು ರಾಜ್ಯಗಳೊಂದಿಗೆ ವಿಷಯ ಆಧಾರಿತ ಸಂವಾದವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ಹೇಳಿದರು. ಹಿಂಜರಿಕೆ ತೋರಿಸಿರುವ ರಾಜ್ಯಗಳೊಂದಿಗೂ ಸಹ ತೊಡಗಿಸಿಕೊಳ್ಳುವಿಕೆಯನ್ನು ವಿಸ್ತರಿಸಲಾಗುವುದು ಎಂದು ಅವರು ಸೂಚಿಸಿದರು, ಏಕೆಂದರೆ ಕೇಂದ್ರವು ಇಡೀ ದೇಶದ ಕಲ್ಯಾಣಕ್ಕೆ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಆಹಾರ ಸಂಸ್ಕರಣೆ ಮತ್ತು ಪೂರಕ ವಲಯಗಳ ನಡುವೆ ಬಲವಾದ ಸಮನ್ವಯದ ಅಗತ್ಯವನ್ನು ಸಚಿವರು ಒತ್ತಿಹೇಳಿದರು. ಸಮಗ್ರ ಬೇಸಾಯ, ಮೌಲ್ಯವರ್ಧನೆ, ಆಹಾರ ಸಂಸ್ಕರಣೆ ಮತ್ತು ಪ್ರಾದೇಶಿಕ ಕೃಷಿ ಮಾರ್ಗಸೂಚಿಗಳಿಗೆ ಸಚಿವಾಲಯಗಳು ಮತ್ತು ಇಲಾಖೆಗಳ ನಡುವೆ ಜಂಟಿ ಕಾರ್ಯನಿರ್ವಹಣೆಯ ಅಗತ್ಯವಿದೆ ಎಂದು ಅವರು ಹೇಳಿದರು.
“ವಿಕಸಿತ ಭಾರತ 2047” ರ ಗುರಿಗೆ ಅನುಗುಣವಾಗಿ ಇಲಾಖಾವಾರು ದೃಷ್ಟಿಕೋನ ದಾಖಲೆಗಳನ್ನು ಸಿದ್ಧಪಡಿಸುವುದರ ಮೇಲೆಯೂ ಸಭೆಯಲ್ಲಿ ಒತ್ತು ನೀಡಲಾಯಿತು. ಮೇಲ್ವಿಚಾರಣೆಯನ್ನು ಬಲಪಡಿಸಲು ಮತ್ತು ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಸುಧಾರಿಸಲು ಪ್ರತಿಯೊಂದು ಇಲಾಖೆಯು ತನ್ನ ವಿಷನ್ 2047 ರ ಚೌಕಟ್ಟಿನೊಂದಿಗೆ ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ, ಸಾಪ್ತಾಹಿಕ ಮತ್ತು ದೈನಂದಿನ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುವಂತೆ ಶ್ರೀ ಚೌಹಾಣ್ ನಿರ್ದೇಶಿಸಿದರು.
ಪ್ರಧಾನಮಂತ್ರಿ ಸೂರ್ಯ ಘರ್ ನಂತಹ ಯೋಜನೆಗಳಿಗೆ ಅನುಗುಣವಾಗಿ ಸರ್ಕಾರಿ ಕಟ್ಟಡಗಳು ಮತ್ತು ಸಂಸ್ಥೆಗಳಲ್ಲಿ ಸೌರಶಕ್ತಿ ಅಳವಡಿಕೆ ಉಪಕ್ರಮಗಳನ್ನು ವೇಗಗೊಳಿಸಲು ಅವರು ಕರೆ ನೀಡಿದರು. ಪೂರ್ಣಗೊಂಡ ಮತ್ತು ಬಾಕಿ ಇರುವ ಕೆಲಸಗಳನ್ನು ಮೌಲ್ಯಮಾಪನ ಮಾಡಲು ಮತ್ತು ಕಾಲಮಿತಿಯೊಳಗೆ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಇಲಾಖೆಗಳಿಗೆ ಸೂಚಿಸಲಾಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಸ್ತುತ ಅವಧಿಯ ಸಾಧನೆಗಳನ್ನು ಹಾಗೂ ಕಳೆದ 12 ವರ್ಷಗಳ ಒಟ್ಟಾರೆ ಸಾಧನೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಾಧನೆಗಳನ್ನು ವ್ಯವಸ್ಥಿತವಾಗಿ ಕ್ರೋಡೀಕರಿಸಲು ಮತ್ತು ಪತ್ರಿಕಾಗೋಷ್ಠಿಗಳು, ಗ್ರಾಮ ಮಟ್ಟದ ಸಂಪರ್ಕ ಕಾರ್ಯಕ್ರಮಗಳು, ಪ್ರಸ್ತುತಿಗಳು, ಸೃಜನಶೀಲ ವಿಷಯಗಳು, ವೀಡಿಯೊಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಚಾರಗಳ ಮೂಲಕ ಜನರಿಗೆ ತಿಳಿಸಲು ಶ್ರೀ ಚೌಹಾಣ್ ಇಲಾಖೆಗಳಿಗೆ ನಿರ್ದೇಶನ ನೀಡಿದರು.
ಡಿಜಿಟಲ್ ಮಾಧ್ಯಮದ ಬೆಳೆಯುತ್ತಿರುವ ಪ್ರಭಾವವನ್ನು ಉಲ್ಲೇಖಿಸಿದ ಅವರು, ಕಿರು ವೀಡಿಯೊಗಳು, ಗ್ರಾಫಿಕ್ಸ್, ಫಲಾನುಭವಿಗಳ ಯಶೋಗಾಥೆಗಳು ಮತ್ತು ಸರ್ಕಾರಿ ಯೋಜನೆಗಳಿಂದ ತಂದ ನಿಜ ಜೀವನದ ಪರಿವರ್ತನೆಗಳ ಮೇಲೆ ಗಮನ ಕೇಂದ್ರೀಕರಿಸಲು ಸೂಚಿಸಿದರು. ಪತ್ರಿಕೆಗಳು ಮತ್ತು ದೂರದರ್ಶನದ ಜೊತೆಗೆ, ಪ್ರಭಾವಶಾಲಿ ಡಿಜಿಟಲ್ ಸಂವಹನವು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅವರು ಹೇಳಿದರು.
ವಿದೇಶ ಪ್ರವಾಸಗಳಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಮೋದಿಯವರ ಮಾರ್ಗದರ್ಶನವನ್ನು ಉಲ್ಲೇಖಿಸಿದ ಶ್ರೀ ಚೌಹಾಣ್, ಅನಗತ್ಯ ವಿದೇಶ ಪ್ರವಾಸಗಳನ್ನು ತಪ್ಪಿಸಲು ಮತ್ತು ನಿಜವಾಗಿಯೂ ಅಗತ್ಯವಿರುವ ಸಂದರ್ಭಗಳಲ್ಲಿ ಮಾತ್ರ ಅಂತಹ ಪ್ರಸ್ತಾಪಗಳನ್ನು ಪರಿಗಣಿಸಲು ಅಧಿಕಾರಿಗಳಿಗೆ ಸೂಚಿಸಿದರು. ದೇಶದೊಳಗಿನ ಕೆಲಸದ ವೇಗ, ಗುಣಮಟ್ಟ ಮತ್ತು ಫಲಿತಾಂಶಗಳನ್ನು ಸುಧಾರಿಸುವುದು ಸದ್ಯದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ಕಡತ ವಿಲೇವಾರಿ ಕುರಿತು ಸ್ಪಷ್ಟನೆ ನೀಡಿದ ಶ್ರೀ ಚೌಹಾಣ್, ತಮ್ಮ ಆದ್ಯತೆಯು ಕೇವಲ ವೇಗವಲ್ಲ, ಬದಲಿಗೆ ಗುಣಮಟ್ಟ ಮತ್ತು ಫಲಿತಾಂಶ ಆಧಾರಿತ ನಿರ್ಧಾರ ತೆಗೆದುಕೊಳ್ಳುವುದಾಗಿದೆ ಎಂದು ಹೇಳಿದರು. ಪ್ರತಿಯೊಂದು ನಿಯಮ ಮತ್ತು ಪ್ರತಿಯೊಂದು ಕಡತ ಅನೇಕ ಜನರ ಜೀವನದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ನಿರ್ಧಾರಗಳನ್ನು ಎಚ್ಚರಿಕೆಯಿಂದ, ಧನಾತ್ಮಕವಾಗಿ ಮತ್ತು ಸಂಪೂರ್ಣ ತಿಳುವಳಿಕೆಯೊಂದಿಗೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು. ಅದೇ ಸಮಯದಲ್ಲಿ, ಅನಗತ್ಯ ವಿಳಂಬವನ್ನು ತಡೆಯುವ ಮತ್ತು ಪ್ರಮುಖ ವಿಷಯಗಳ ಸಮಯೋಚಿತ ಚರ್ಚೆಯನ್ನು ಖಚಿತಪಡಿಸುವ ವ್ಯವಸ್ಥೆಗಳ ಅಗತ್ಯವನ್ನು ಅವರು ಒತ್ತಿಹೇಳಿದರು.
ಯಾವುದೇ ಇಲಾಖೆಯು ಹಿಂದೆ ಬೀಳಬಾರದು ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರ ಸಚಿವರು ನೀಡಿದರು. ಕುಂದುಕೊರತೆ ನಿವಾರಣೆ ಮತ್ತು ಸುಧಾರಣೆಗಳಿಂದ ಹಿಡಿದು ತಂತ್ರಜ್ಞಾನದ ಅಳವಡಿಕೆ, ನ್ಯಾಯಾಲಯದ ಪ್ರಕರಣಗಳು, ರಾಜ್ಯಗಳೊಂದಿಗೆ ಸಮನ್ವಯ, ಸಾರ್ವಜನಿಕ ಸಂಪರ್ಕ, ವಿಷನ್ 2047 ಯೋಜನೆ ಮತ್ತು ಸಾಧನೆಗಳ ಪ್ರಸ್ತುತಿಯವರೆಗೆ, ಪ್ರತಿಯೊಂದು ಇಲಾಖೆಯು ಸಕ್ರಿಯ, ಜವಾಬ್ದಾರಿಯುತ ಮತ್ತು ಕಾಲಮಿತಿಯ ಕೆಲಸದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಉತ್ತಮ ಆಡಳಿತದ ದೃಷ್ಟಿಕೋನಕ್ಕೆ ಅನುಗುಣವಾಗಿ ಆಡಳಿತದ ಪ್ರಯೋಜನಗಳು ಕೊನೆಯ ವ್ಯಕ್ತಿಗೂ ಪರಿಣಾಮಕಾರಿಯಾಗಿ ತಲುಪುವುದನ್ನು ಇದು ಖಚಿತಪಡಿಸುತ್ತದೆ ಎಂದು ಹೇಳಿದರು.
*****
(ಪ್ರಕಟಣೆ ಐ.ಡಿ.: 2264403)
ವಿಸಿಟರ್ ಕೌಂಟರ್ : 9