ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

'ಜಾಗತಿಕ ಪ್ರಭಾವಕ್ಕಾಗಿ ಸ್ಥಳೀಯವಾಗಿ ಕಾರ್ಯನಿರ್ವಹಿಸುವುದು' ಎಂಬ ಧ್ಯೇಯವಾಕ್ಯದೊಂದಿಗೆ 2026ನೇ ಸಾಲಿನ ʻಅಂತಾರಾಷ್ಟ್ರೀಯ ಜೈವಿಕ ವೈವಿಧ್ಯತೆಯ ದಿನʼ ಆಚರಣೆ ಮೂಲಕ ಜೀವವೈವಿಧ್ಯ ಸಂರಕ್ಷಣೆ ಮತ್ತು ಸಮುದಾಯ ನೇತೃತ್ವದ ಉಪಕ್ರಮಕ್ಕೆ ಬದ್ಧತೆಯನ್ನು ಪುನರುಚ್ಚರಿಸಿದ ಭಾರತ


ಜೀವವೈವಿಧ್ಯ ಸಂರಕ್ಷಣೆಯಲ್ಲಿ ಸ್ಥಳೀಯ ಉಪಕ್ರಮ, ʻಎಬಿಎಸ್ʼ ನೀತಿ ಚೌಕಟ್ಟು ಮತ್ತು ಸಮುದಾಯದ ಭಾಗವಹಿಸುವಿಕೆಯ ಪಾತ್ರವನ್ನು ಉಲ್ಲೇಖಿಸಿದ ಕೇಂದ್ರ ಪರಿಸರ ಸಚಿವರು

ʻಪ್ರಾಜೆಕ್ಟ್‌ ಚೀತಾʼ ಯೋಜನೆಯು ಆವಾಸಸ್ಥಾನ ಸಂರಕ್ಷಣೆ, ವೈಜ್ಞಾನಿಕ ವನ್ಯಜೀವಿ ನಿರ್ವಹಣೆ ಮತ್ತು ಸಂರಕ್ಷಣಾ ಪ್ರಯತ್ನಗಳಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸಿದೆ: ಮುಖ್ಯಮಂತ್ರಿ (ಮಧ್ಯ ಪ್ರದೇಶ)

ಪ್ರಕಟಣಾ ದಿನಾಂಕ: 22 MAY 2026 1:15PM by PIB Bengaluru

ಭೋಪಾಲ್‌ನ ಭಾರತೀಯ ಅರಣ್ಯ ನಿರ್ವಹಣೆ ಸಂಸ್ಥೆಯಲ್ಲಿ (ಐಐಎಫ್ಎಂ) ಇಂದು ನಡೆದ ʻಅಂತಾರಾಷ್ಟ್ರೀಯ ಜೈವಿಕ ವೈವಿಧ್ಯತೆಯ ದಿನ-2026ʼ (ಐಡಿಬಿ) ರಾಷ್ಟ್ರಮಟ್ಟದ ಆಚರಣೆ ಮತ್ತು ಚಿರತೆ ಸಂರಕ್ಷಣೆ ಕುರಿತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ವಹಿಸಿದರು. 'ಜಾಗತಿಕ ಪರಿಣಾಮಕ್ಕಾಗಿ ಸ್ಥಳೀಯವಾಗಿ ಕಾರ್ಯನಿರ್ವಹಿಸುವುದು' ಎಂಬ ವಿಷಯಾಧಾರಿತವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದು ಜೀವವೈವಿಧ್ಯ ಸಂರಕ್ಷಣೆ, ಸಮುದಾಯದ ಭಾಗವಹಿಸುವಿಕೆ ಮತ್ತು ಪರಿಸರ ಪುನಃಸ್ಥಾಪನೆಯ ಬಗ್ಗೆ ಭಾರತದ ಬದ್ಧತೆಯನ್ನು ಉಲ್ಲೇಖಿಸುತ್ತದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಂಒಇಎಫ್‌ಸಿಸಿ), ಮಧ್ಯಪ್ರದೇಶ ಸರ್ಕಾರ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ (ಎನ್‌ಬಿಎ) ಮತ್ತು ʻಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ʼ (ಐಬಿಸಿಎ) ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಹಾಯಕ ಸಚಿವರಾದ ಶ್ರೀ ಕೀರ್ತಿ ವರ್ಧನ್ ಸಿಂಗ್ ಮತ್ತು ಮಧ್ಯಪ್ರದೇಶದ ಅರಣ್ಯ ಮತ್ತು ಪರಿಸರ ಸಚಿವರಾದ ಶ್ರೀ ದಿಲೀಪ್ ಅಹಿರ್ವಾರ್ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು, ಎನ್‌ಬಿಎ ಮತ್ತು ಐಬಿಸಿಎ ಅಧಿಕಾರಿಗಳು, ವಿಜ್ಞಾನಿಗಳು, ಅರಣ್ಯ ಅಧಿಕಾರಿಗಳು, ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ಸದಸ್ಯರು, ಸಂಶೋಧಕರು, ಕೈಗಾರಿಕೆಗಳ ಪ್ರತಿನಿಧಿಗಳು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ.ಮೋಹನ್ ಯಾದವ್ ಅವರು, 'ಭಾರತದ ಹುಲಿ ರಾಜ್ಯ' ಎಂಬ ಹೆಗ್ಗಳಿಕೆ ಪಡೆದಿರುವ ಮಧ್ಯಪ್ರದೇಶವು ದೇಶದ ಜೀವವೈವಿಧ್ಯ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಜೀವನೋಪಾಯ ಮತ್ತು ಪರಿಸರ ಭದ್ರತೆಯನ್ನು ಬೆಂಬಲಿಸುವ ಅರಣ್ಯಗಳು, ಜೌಗು ಪ್ರದೇಶಗಳು ಮತ್ತು ನದಿ ಪರಿಸರ ವ್ಯವಸ್ಥೆಗಳು ಸೇರಿದಂತೆ ರಾಜ್ಯದ ಶ್ರೀಮಂತ ಪರಿಸರ ವೈವಿಧ್ಯತೆಯನ್ನು ಅವರು ಉಲ್ಲೇಖಿಸಿದರು.

ಭಾರತದ ಸಂರಕ್ಷಣಾ ಪ್ರಯಾಣದಲ್ಲಿ ಒಂದು ಹೆಗ್ಗುರುತಿನ ಸಾಧನೆಯಾಗಿ ಮತ್ತು ಪರಿಸರ ಪುನಃಸ್ಥಾಪನೆ ಹಾಘೂ ಜೀವವೈವಿಧ್ಯತೆಯ ಚೇತರಿಕೆಯ ಸಂಕೇತವಾಗಿ ಮಧ್ಯಪ್ರದೇಶದಲ್ಲಿ ಚೀತಾಗಳನ್ನು ಮರುಪರಿಚಯಿಸುತ್ತಿರುವುದನ್ನು ಮುಖ್ಯಮಂತ್ರಿ ಒತ್ತಿ ಹೇಳಿದರು. ʻಪ್ರಾಜೆಕ್ಟ್ ಚೀತಾʼ ಯೋಜನೆಯು ಆವಾಸಸ್ಥಾನ ಸಂರಕ್ಷಣೆ, ವೈಜ್ಞಾನಿಕ ವನ್ಯಜೀವಿ ನಿರ್ವಹಣೆ ಮತ್ತು ಸಂರಕ್ಷಣಾ ಪ್ರಯತ್ನಗಳಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸಿದೆ ಎಂದು ಅವರು ಹೇಳಿದರು.

ʻಜೀವವೈವಿಧ್ಯ ನಿರ್ವಹಣಾ ಸಮಿತಿʼಗಳು ಮತ್ತು ʻಜನರ ಜೀವವೈವಿಧ್ಯ ರಿಜಿಸ್ಟರ್‌ʼಗಳನ್ನು ರಚಿಸುವ ಮೂಲಕ ಜೀವವೈವಿಧ್ಯ ಆಡಳಿತವನ್ನು ಬಲಪಡಿಸುವ ನಿಟ್ಟಿನಲ್ಲಿ ಮಧ್ಯಪ್ರದೇಶವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಆ ಮೂಲಕ ಸಾಂಪ್ರದಾಯಿಕ ಜ್ಞಾನ ಮತ್ತು ಜೈವಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಸ್ಥಳೀಯ ಸಮುದಾಯಗಳನ್ನು ಸಶಕ್ತಗೊಳಿಸುತ್ತದೆ ಎಂದು ಡಾ.ಯಾದವ್ ಒತ್ತಿ ಹೇಳಿದರು.

ಶ್ರೀ ಭೂಪೇಂದರ್ ಯಾದವ್ ಅವರು ತಮ್ಮ ಭಾಷಣದಲ್ಲಿ, 'ಜಾಗತಿಕ ಪರಿಣಾಮಕ್ಕಾಗಿ ಸ್ಥಳೀಯವಾಗಿ ಕಾರ್ಯನಿರ್ವಹಿಸುವುದು' ಎಂಬ 2026ರ ಅಂತಾರಾಷ್ಟ್ರೀಯ ಜೈವಿಕ ವೈವಿಧ್ಯತೆಯ ದಿನದ ಧ್ಯೇಯವಾಕ್ಯವು ಪರಿಸರ ಸುಸ್ಥಿರತೆ ಮತ್ತು ಪರಿಸರ ಭದ್ರತೆಯನ್ನು ಸಾಧಿಸಲು ಸಮುದಾಯಗಳು ಮತ್ತು ಸ್ಥಳೀಯ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ಮಹತ್ವವನ್ನು ಒತ್ತಿಹೇಳುತ್ತದೆ ಎಂದು ಹೇಳಿದರು. ಬಲವಾದ ಸ್ಥಳೀಯ ಕ್ರಿಯೆಗಳು, ಸಮುದಾಯದ ಭಾಗವಹಿಸುವಿಕೆ ಮತ್ತು ಸುಸ್ಥಿರ ಜೀವನಶೈಲಿಯ ಮೂಲಕ ಮಾತ್ರ ಅರ್ಥಪೂರ್ಣ ಜಾಗತಿಕ ಫಲಿತಾಂಶಗಳು ಹೊರಹೊಮ್ಮುತ್ತವೆ ಎಂದು ಅವರು ಒತ್ತಿ ಹೇಳಿದರು.

ಭಾರತದ ಶ್ರೀಮಂತ ಜೀವವೈವಿಧ್ಯ ಪರಂಪರೆ ಮತ್ತು ಸಾಂಪ್ರದಾಯಿಕ ಪರಿಸರ ಜ್ಞಾನ ವ್ಯವಸ್ಥೆಗಳನ್ನು ಉಲ್ಲೇಖಿಸಿದ ಸಚಿವರು, ವಿಶ್ವದ ಬೃಹತ್ ವೈವಿಧ್ಯಮಯ ದೇಶಗಳಲ್ಲಿ ಒಂದಾಗಿರುವ ಭಾರತವು ಹಿಮಾಲಯ ಮತ್ತು ಕಾಡುಗಳಿಂದ ಹಿಡಿದು ಜೌಗು ಪ್ರದೇಶಗಳು, ಹುಲ್ಲುಗಾವಲುಗಳು, ಮರುಭೂಮಿಗಳು, ಕರಾವಳಿ ಮತ್ತು ಸಮುದ್ರದವರೆಗೆ ವೈವಿಧ್ಯಮಯ ಪರಿಸರ ವ್ಯವಸ್ಥೆಗಳನ್ನು ಹೊಂದಿದೆ ಎಂದು ಹೇಳಿದರು. ಪವಿತ್ರ ತೋಪುಗಳು, ಜಾನಪದ ಪ್ರಭೇದಗಳು, ಭೂಜನಾಂಗಗಳು ಮತ್ತು ಸ್ಥಳೀಯ ಉಸ್ತುವಾರಿ ಅಭ್ಯಾಸಗಳಂತಹ ಸಮುದಾಯ ನೇತೃತ್ವದ ಸಂರಕ್ಷಣಾ ಸಂಪ್ರದಾಯಗಳು ಜನರು ಮತ್ತು ಪ್ರಕೃತಿಯ ನಡುವಿನ ಆಳವಾದ ಸಾಂಸ್ಕೃತಿಕ ಮತ್ತು ಪರಿಸರ ಸಂಬಂಧವನ್ನು ಪ್ರದರ್ಶಿಸುತ್ತವೆ ಎಂದು ಅವರು ಹೇಳಿದರು.

ಸಂರಕ್ಷಣೆಯ ಚಿಂತನೆಯು ಮೊದಲು ಕೇವಲ ಒಂದೇ ಪ್ರಭೇದಗಳ ಮೇಲೆ ಗಮನ ಕೇಂದ್ರೀಕರಿಸುತ್ತಿತ್ತು. ಈಗ ಜೀವಿಗಳ ಸಂಪೂರ್ಣ ವ್ಯಾಪ್ತಿ ಮತ್ತು ಪರಸ್ಪರ ಸಂಪರ್ಕಿತ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವವರೆಗೆ ಅದು ವಿಕಸನಗೊಂಡಿದೆ ಎಂದು ಸಚಿವರು ಹೇಳಿದರು. ಸಸ್ಯಗಳು ಮತ್ತು ಪ್ರಾಣಿಗಳು ಪ್ರತ್ಯೇಕವಾಗಿ ಬದುಕಲು ಸಾಧ್ಯವಿಲ್ಲ, ಬದಲಿಗೆ ಅವು ಸಂಕೀರ್ಣ ಮತ್ತು ಪರಸ್ಪರ ಅವಲಂಬಿತ ಪರಿಸರ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿವೆ ಎಂದು ಪರಿಸರ ವಿಜ್ಞಾನಿಗಳು ಹೆಚ್ಚು ಗುರುತಿಸಿದ್ದಾರೆ ಎಂದು ಅವರು ಹೇಳಿದರು. ಒಟ್ಟಾರೆ ಜೀವವೈವಿಧ್ಯತೆಯನ್ನು ಸಂರಕ್ಷಿಸುವುದು ಹವಾಮಾನ ಬದಲಾವಣೆಯಂತಹ ಸವಾಲುಗಳ ವಿರುದ್ಧ ಪ್ರಕೃತಿಯ ಸ್ಥಿತಿಸ್ಥಾಪಕತ್ವ ಮತ್ತು ಹೊಂದಾಣಿಕೆಯ ಸಾಮರ್ಥ್ಯವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ಜೈವಿಕ ವೈವಿಧ್ಯತೆಯ ಸಮಾವೇಶ ಮತ್ತು ʻಕುನ್ಮಿಂಗ್-ಮಾಂಟ್ರಿಯಲ್ʼ ಜಾಗತಿಕ ಜೀವವೈವಿಧ್ಯ ನೀತಿಯನ್ನು ಅನುಷ್ಠಾನಗೊಳಿಸುವ ಭಾರತದ ಬದ್ಧತೆಯನ್ನು ಶ್ರೀ ಯಾದವ್ ಪುನರುಚ್ಚರಿಸಿದರು. ʻಜೈವಿಕ ವೈವಿಧ್ಯತೆ ಕಾಯ್ದೆ-2002ʼ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ, ರಾಜ್ಯ ಜೀವವೈವಿಧ್ಯ ಮಂಡಳಿಗಳು ಮತ್ತು ಜೀವವೈವಿಧ್ಯ ನಿರ್ವಹಣಾ ಸಮಿತಿಗಳ (ಬಿಎಂಸಿ) ಮೂಲಕ ಬಲವಾದ ವಿಕೇಂದ್ರೀಕೃತ ಸಾಂಸ್ಥಿಕ ಚೌಕಟ್ಟನ್ನು ಭಾರತವು ಸ್ಥಾಪಿಸಿದೆ ಎಂದು ಅವರು ಹೇಳಿದರು.

ಜೀವ ವೈವಿಧ್ಯತೆ ಕಾಯ್ದೆ, ನಿಯಮಗಳು ಮತ್ತು ನಿಬಂಧನೆಗಳಿಗೆ ಇತ್ತೀಚಿನ ತಿದ್ದುಪಡಿಗಳು ಕೈಗಾರಿಕೆಗಳಿಗೆ ಅನುಕೂಲಕರ ವಾತಾವರಣವನ್ನು ಒದಗಿಸುತ್ತವೆ ಮತ್ತು ವ್ಯವಹಾರವನ್ನು ಸುಲಭಗೊಳಿಸುತ್ತವೆ ಎಂದು ಸಚಿವರು ಹೇಳಿದರು. ಇದರ ಪರಿಣಾಮವಾಗಿ ಕೈಗಾರಿಕೆಗಳಿಂದ ಸ್ಥಳೀಯ ಸಮುದಾಯಗಳು ಸೂಕ್ತ ಪ್ರಯೋಜನಗಳನ್ನು ಪಡೆಯಲು ನೆರವಾಗಿದೆ. ಪ್ರವೇಶ ಮತ್ತು ಲಾಭ ಹಂಚಿಕೆ (ಎಬಿಎಸ್) ಕಾರ್ಯವಿಧಾನದ ಅಡಿಯಲ್ಲಿ ಸಾಧಿಸಿದ ಪ್ರಗತಿಯನ್ನು ಉಲ್ಲೇಖಿಸಿದ ಸಚಿವರು, ದೇಶಾದ್ಯಂತ ಫಲಾನುಭವಿಗಳಿಗೆ ಸುಮಾರು 145 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ, ಇದು ಸುಮಾರು 11,000 ಜೀವವೈವಿಧ್ಯ ನಿರ್ವಹಣಾ ಸಮಿತಿಗಳಿಗೆ ಪ್ರಯೋಜನವನ್ನು ನೀಡಿದೆ ಎಂದು ಹೇಳಿದರು. ʻಎಬಿಎಸ್ʼ ಪ್ರಯೋಜನಗಳನ್ನು ವರ್ಗಾಯಿಸುವ ಮೂಲಕ ಗ್ರಾಮ ಮಟ್ಟದ ʻಬಿಎಂಸಿʼಗಳಿಗೆ ಅನುಕೂಲ ಮಾಡಿಕೊಡುವಂತೆ ಸಚಿವರು ಮ‍್ಯಪ್ರದೇಶ ಮುಖ್ಯಮಂತ್ರಿಗಳಿಗೆ ವಿನಂತಿಸಿದರು, ಇದು ಸಮರೋಪಾದಿಯಲ್ಲಿ ಜೀವವೈವಿಧ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಕೆಲಸ ಮಾಡಲು ಅವರನ್ನು ಹೆಚ್ಚು ಸಶಕ್ತಗೊಳಿಸುತ್ತದೆ ಎಂದರು.

ದೊಡ್ಡ ಮಾಂಸಾಹಾರಿ ಪ್ರಾಣಿಗಳ ವಿಶ್ವದ ಮೊದಲ ಖಂಡಾಂತರ ಸ್ಥಳಾಂತರದ ಮೂಲಕ 2022ರಲ್ಲಿ ಪ್ರಾರಂಭಿಸಲಾದ ʻಪ್ರಾಜೆಕ್ಟ್ ಚೀತಾʼ ಯೋಜನೆಯು, ಪರಿಸರ ಪುನಃಸ್ಥಾಪನೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಹುಲ್ಲುಗಾವಲು ಪರಿಸರ ವ್ಯವಸ್ಥೆಗಳ ಪುನರುಜ್ಜೀವನದ ಬಗ್ಗೆ ಭಾರತದ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಯಾದವ್ ಹೇಳಿದರು. ಭಾರತದಲ್ಲಿ ಚೀತಾಗಳ ಯಶಸ್ವಿ ಹೊಂದಾಣಿಕೆ ಮತ್ತು ಸಂತಾನೋತ್ಪತ್ತಿಯು ದೀರ್ಘಕಾಲೀನ ಪ್ರಭೇದಗಳ ಚೇತರಿಕೆ ಮತ್ತು ಆವಾಸಸ್ಥಾನ ಪುನಃಸ್ಥಾಪನೆ ಪ್ರಯತ್ನಗಳಲ್ಲಿ ಉತ್ತೇಜನಕಾರಿ ಪ್ರಗತಿಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶ್ರೀ ಕೀರ್ತಿ ವರ್ಧನ್ ಸಿಂಗ್ ಅವರು, ಜೀವವೈವಿಧ್ಯ ಸಂರಕ್ಷಣೆಯು ಆಹಾರ ಭದ್ರತೆ, ಜಲ ಭದ್ರತೆ, ಜೀವನೋಪಾಯ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರ ಅಭಿವೃದ್ಧಿಯೊಂದಿಗೆ ಅಂತರ್ಗತವಾಗಿ ಸಂಬಂಧ ಹೊಂದಿದೆ ಎಂದು ಒತ್ತಿ ಹೇಳಿದರು. ʻಪರಿಸರಕ್ಕಾಗಿ ಜೀವನಶೈಲಿʼ(ಲೈಫ್) ಜಾಗತಿಕ ಆಂದೋಲನ ಸೇರಿದಂತೆ ಭಾರತದ ಸಾಂಪ್ರದಾಯಿಕ ಪರಿಸರ ಜಾಣ್ಮೆ ಮತ್ತು ಸುಸ್ಥಿರ ಜೀವನಶೈಲಿಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಜೀವವೈವಿಧ್ಯತೆಯ ಮೇಲಿನ ಚರ್ಚೆಯು ಎಲ್ಲಾ ಪರಿಸರ ಸಂರಕ್ಷಣಾ ಕ್ರಮಗಳಿಗೆ ಅಡಿಪಾಯವನ್ನು ರೂಪಿಸುತ್ತದೆ ಎಂದು ಅವರು ಹೇಳಿದರು.

ಜೀವವೈವಿಧ್ಯತೆಯ ಉಸ್ತುವಾರಿ, ಪರಿಸರ ಪುನಃಸ್ಥಾಪನೆ, ಸುಸ್ಥಿರ ಕಚ್ಚಾವಸ್ತು ಸಂಗ್ರಹ ಮತ್ತು ಸಂರಕ್ಷಣಾ ಪಾಲುದಾರಿಕೆಯನ್ನು ಉತ್ತೇಜಿಸುವಲ್ಲಿ ಕೈಗಾರಿಕೆಗಳು, ಶೈಕ್ಷಣಿಕ ಸಂಸ್ಥೆಗಳು, ಸಂರಕ್ಷಣಾ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳ ಪಾತ್ರವನ್ನು ಈ ಕಾರ್ಯಕ್ರಮವು ಉಲ್ಲೇಖಿಸಿತು.

ಈ ಸಂದರ್ಭದಲ್ಲಿ, ಈ ಕೆಳಗಿನ ಪ್ರಕಟಣೆಗಳು, ಉಪಕ್ರಮಗಳು ಮತ್ತು ಜನಸಂಪರ್ಕ ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು:

ಎ. ವೈಯಕ್ತೀಕರಿಸಿದ ʻಮೈಸ್ಟ್ಯಾಂಪ್ʼ

ಬಿ. ಭಾರತದ ಜೀವವೈವಿಧ್ಯ ವರದಿ-2026: ʻಸಿಬಿಡಿʼಗೆ ನೀಡಿದ 7ನೇ ರಾಷ್ಟ್ರೀಯ ವರದಿಯ ಒಳನೋಟಗಳು

ಸಿ. ʻಎಬಿಎಸ್ʼ ಅನುಷ್ಠಾನದಲ್ಲಿ ಭಾರತದ ಪ್ರಗತಿ: ನಾಗೋಯಾ ಶಿಷ್ಟಾಚಾರದ ಬಗ್ಗೆ ಭಾರತದ ಮೊದಲ ರಾಷ್ಟ್ರೀಯ ವರದಿಯ ಒಳನೋಟಗಳು

ಡಿ. ʻಎಬಿಎಸ್ʼ ಸಮಗ್ರ ಪೋರ್ಟಲ್

ಇ. ಪ್ರವೇಶ ಮತ್ತು ಪ್ರಯೋಜನ ಹಂಚಿಕೆ ಕುರಿತ ಸಾಕ್ಷ್ಯಚಿತ್ರ

ಎಫ್‌. ಅಮರಕಂಠಕ್ ಜೀವವೈವಿಧ್ಯ ಪರಂಪರೆಯ ತಾಣದ ಕುರಿತ ಸಾಕ್ಷ್ಯಚಿತ್ರ

ಜಿ. ಮಧ್ಯಪ್ರದೇಶದ ದೇವಲೋಕ ವನಗಳ (ಪವಿತ್ರ ತೋಪುಗಳು) ಸಂರಕ್ಷಣೆ ಕುರಿತ ಸಾಕ್ಷ್ಯಚಿತ್ರ

ಕಾರ್ಯಕ್ರಮದ ನೇಪಥ್ಯದಲ್ಲಿ, ರಾಜ್ಯ ಜೀವವೈವಿಧ್ಯ ಮಂಡಳಿಗಳು, ಜೀವವೈವಿಧ್ಯ ನಿರ್ವಹಣಾ ಸಮಿತಿಗಳು (ಬಿಎಂಸಿ) ಮತ್ತು ವಿವಿಧ ಇಲಾಖೆಗಳು ವಿಷಯಾಧಾರಿತ ಪ್ರದರ್ಶನಗಳ ಮೂಲಕ ತಮ್ಮ ಸಾಧನೆಗಳು, ನವೀನ ಉಪಕ್ರಮಗಳು ಮತ್ತು ಜೈವಿಕ ಆಧಾರಿತ ಉತ್ಪನ್ನಗಳನ್ನು ಪ್ರದರ್ಶಿಸಿದವು. ಪ್ರದರ್ಶನವು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು, ಸಮುದಾಯ ನೇತೃತ್ವದ ಸಂರಕ್ಷಣಾ ಪ್ರಯತ್ನಗಳನ್ನು ಉತ್ತೇಜಿಸಲು ಮತ್ತು ಜೀವವೈವಿಧ್ಯ ಆಧಾರಿತ ಸುಸ್ಥಿರ ಜೀವನೋಪಾಯವನ್ನು ಉಲ್ಲೇಖಿಸಲು ಅಮೂಲ್ಯವಾದ ವೇದಿಕೆಯನ್ನು ಒದಗಿಸಿತು. ಭೋಪಾಲ್‌ನ  ʻಐಐಎಫ್ಎಂʼನಲ್ಲಿ ರಾಜ್ಯ ಅರಣ್ಯ ಇಲಾಖೆಯ 20 ಬೈಕ್‌ಗಳು ಮತ್ತು ಒಂದು ರಕ್ಷಣಾ ಟ್ರಕ್‌ಗೆ ಗಣ್ಯರು ಹಸಿರು ನಿಶಾನೆ ತೋರಿದರು.

 

*****


(ಪ್ರಕಟಣೆ ಐ.ಡಿ.: 2264058) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: Marathi , Telugu , Urdu , Bengali , Bengali-TR , English , हिन्दी , Gujarati , Tamil