ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯ ಮಾಧ್ಯಮಗೋಷ್ಠಿ


ಪ್ರಸ್ತುತ ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 72 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳು ಅಥವಾ ಭಾರತೀಯ ಸಿಬ್ಬಂದಿಯನ್ನು ಹೊಂದಿರುವ ವಿದೇಶಿ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಘಟನೆ ವರದಿಯಾಗಿಲ್ಲ

ದುರುಪಯೋಗವನ್ನು ತಡೆಗಟ್ಟಲು 'ವಿತರಣಾ ದೃಢೀಕರಣ ಕೋಡ್' (ಡಿಎಸಿ) ಆಧಾರಿತ ಎಲ್‌ ಪಿ ಜಿ ಸಿಲಿಂಡರ್ ವಿತರಣೆ ಶೇಕಡಾ 96 ರಷ್ಟು ಹೆಚ್ಚಾಗಿದೆ

ನಿನ್ನೆಯವರೆಗೆ 58,500 ಕ್ಕೂ ಹೆಚ್ಚು ಪಿ ಎನ್‌ ಜಿ ಗ್ರಾಹಕರು MYPNGD.in ವೆಬ್‌ಸೈಟ್ ಮೂಲಕ ತಮ್ಮ ಎಲ್‌ ಪಿ ಜಿ ಸಂಪರ್ಕಗಳನ್ನು ಬಿಟ್ಟುಕೊಟ್ಟಿದ್ದಾರೆ

ದೇಶದ ಎಲ್ಲಾ ಪೆಟ್ರೋಲ್ ಬಂಕ್‌ ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನು ಲಭ್ಯವಿದೆ

प्रविष्टि तिथि: 21 MAY 2026 6:36PM by PIB Bengaluru

ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿಯ ನಡುವೆ, ಭಾರತ ಸರ್ಕಾರವು ನಿಯಮಿತ ನವೀಕರಣಗಳ ಮೂಲಕ ನಾಗರಿಕರಿಗೆ ಮಾಹಿತಿ ನೀಡುವ ಪ್ರಯತ್ನಗಳನ್ನು ಮುಂದುವರೆಸಿದೆ. ಈ ನಿಟ್ಟಿನಲ್ಲಿ, ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಠಿ ನಡೆಯಿತು. ಇದರಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಅಧಿಕಾರಿಗಳು ಇಂಧನ ಲಭ್ಯತೆ, ಕಡಲ ಕಾರ್ಯಾಚರಣೆಗಳು ಮತ್ತು ಪ್ರಮುಖ ವಲಯಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿಗಳನ್ನು ನೀಡಿದರು.

ಇಂಧನ ಪೂರೈಕೆ ಮತ್ತು ಲಭ್ಯತೆ

ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ ಜಿ ಯ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪ್ರಸ್ತುತ ಇಂಧನ ಪೂರೈಕೆಯ ಪರಿಸ್ಥಿತಿಯ ಕುರಿತು ಮಾಹಿತಿಯನ್ನು ನೀಡಿತು. 

ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ

  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ, ನಾಗರಿಕರು ಇವುಗಳನ್ನು ಆತಂಕದಿಂದ ಮುಗಿಬಿದ್ದು ಖರೀದಿಸುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ.
  • ವದಂತಿಗಳ ಬಗ್ಗೆ ಎಚ್ಚರದಿಂದಿರಿ ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಅವಲಂಬಿಸಿ.
  • ಎಲ್‌ ಪಿ ಜಿ ಗ್ರಾಹಕರು ಡಿಜಿಟಲ್ ಬುಕಿಂಗ್ ಪ್ಲಾಟ್‌ಫಾರ್ಮ್‌ ಗಳನ್ನು ಬಳಸಲು ಮತ್ತು ವಿತರಕರ ಬಳಿ ಭೇಟಿ ನೀಡುವುದನ್ನು ತಪ್ಪಿಸಲು ವಿನಂತಿಸಲಾಗಿದೆ.
  • ನಾಗರಿಕರು ಪಿ ಎನ್‌ ಜಿ ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಸ್ಟೌವ್‌ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ಪ್ರೋತ್ಸಾಹಿಸಲಾಗುತ್ತದೆ.
  • ಪ್ರಸ್ತುತ ಪರಿಸ್ಥಿತಿಯಲ್ಲಿ ನಾಗರಿಕರೆಲ್ಲರೂ ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಉಳಿಸಲು ಅಗತ್ಯ ಪ್ರಯತ್ನಗಳನ್ನು ಮಾಡಲು ವಿನಂತಿಸಲಾಗಿದೆ.

ಸರ್ಕಾರದ ಸಿದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು

  • ಪ್ರಸ್ತುತ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ಗೃಹಬಳಕೆ ಎಲ್‌ ಪಿ ಜಿ, ಗೃಹಬಳಕೆ ಪಿ ಎನ್‌ ಜಿ ಮತ್ತು ಸಿ ಎನ್‌ ಜಿ (ಸಾರಿಗೆ) ಗೆ ಸರ್ಕಾರವು ಶೇಕಡಾ 100 ರಷ್ಟು ಪೂರೈಕೆಯನ್ನು ಖಚಿತಪಡಿಸಿದೆ.
  • ವಾಣಿಜ್ಯ ಎಲ್‌ ಪಿ ಜಿ ಗಾಗಿ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ, ಫಾರ್ಮಾ, ಉಕ್ಕು, ಆಟೋಮೊಬೈಲ್, ಬೀಜ, ಕೃಷಿ ಇತ್ಯಾದಿ ವಲಯಗಳಿಗೂ ಆದ್ಯತೆ ನೀಡಲಾಗಿದೆ. ಇದಲ್ಲದೆ, ವಲಸೆ ಕಾರ್ಮಿಕರಿಗೆ 5 ಕೆಜಿ ಎಫ್‌ ಟಿ ಎಲ್ ಪೂರೈಕೆಯನ್ನು 2 ಮತ್ತು 3 ಮಾರ್ಚ್ 2026 ರ ಸರಾಸರಿ ದೈನಂದಿನ ಪೂರೈಕೆಯ ಆಧಾರದ ಮೇಲೆ ದ್ವಿಗುಣಗೊಳಿಸಲಾಗಿದೆ.
  • ಸಂಸ್ಕರಣಾ ಘಟಕಗಳ ಉತ್ಪಾದನೆಯನ್ನು ಹೆಚ್ಚಿಸುವುದು, ಬುಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳವರೆಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಲಯಗಳಿಗೆ ಆದ್ಯತೆ ನೀಡುವುದು ಸೇರಿದಂತೆ ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಸರ್ಕಾರವು ಈಗಾಗಲೇ ಹಲವಾರು ತರ್ಕಬದ್ಧ ಕ್ರಮಗಳನ್ನು ಜಾರಿಗೊಳಿಸಿದೆ.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಘಟಿತ ಪ್ರಯತ್ನಗಳು ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು

  • ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ದಾಸ್ತಾನು ಹಾಗೂ ಕಾಳಸಂತೆಯ ವಿರುದ್ಧ ಕ್ರಮ ಕೈಗೊಳ್ಳಲು ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್‌ ಪಿ ಜಿ ನಿಯಂತ್ರಣ ಆದೇಶ, 2000 ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ.
  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಮುಖ ಪಾತ್ರ ವಹಿಸಬೇಕಾಗಿದೆ. ಭಾರತ ಸರ್ಕಾರವು ಹಲವಾರು ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್‌ ಗಳ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಇದನ್ನೇ ಪುನರುಚ್ಚರಿಸಿದೆ.
  • ಭಾರತ ಸರ್ಕಾರವು 27.03.2026 ಮತ್ತು 02.04.2026 ದಿನಾಂಕದ ಪತ್ರಗಳ ಮೂಲಕ, ಸಾಕಷ್ಟು ಇಂಧನ ಲಭ್ಯತೆಯ ಬಗ್ಗೆ ನಾಗರಿಕರಿಗೆ ಭರವಸೆ ನೀಡಲು ಸಕ್ರಿಯ ಸಾರ್ವಜನಿಕ ಸಂವಹನದ ಅಗತ್ಯವನ್ನು ಒತ್ತಿಹೇಳಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತ ಪರಾಮರ್ಶೆ ಸಭೆಗಳನ್ನು ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ, 02.04.2026 ರಂದು (ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ) ಮತ್ತು 06.04.2026 ರಂದು (ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಹಾಗೂ ವಾರ್ತಾ ಮತ್ತು ಪ್ರಸಾರ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿಗಳ ಜೊತೆಯಲ್ಲಿ) ಸಭೆಗಳನ್ನು ಕರೆಯಲಾಗಿತ್ತು, ಅದರಲ್ಲಿ ಈ ಕೆಳಗಿನ ಅಂಶಗಳಿಗೆ ಒತ್ತು ನೀಡಲಾಯಿತು:

o    ದಿನನಿತ್ಯದ ಪತ್ರಿಕಾಗೋಷ್ಠಿಗಳನ್ನು ನಡೆಸಬೇಕು ಮತ್ತು ನಿಯಮಿತ ಸಾರ್ವಜನಿಕ ಸಲಹೆಗಳನ್ನು ಬಿಡುಗಡೆ ಮಾಡಬೇಕು.
o    ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ / ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ಎದುರಿಸಬೇಕು.
o    ಜಿಲ್ಲಾಡಳಿತದಿಂದ ದಿನನಿತ್ಯದ ಜಾರಿ ಕಾರ್ಯಚರಣೆಗಳನ್ನು ಚುರುಕುಗೊಳಿಸಲು ಮತ್ತು ತೈಲ ಮಾರುಕಟ್ಟೆ ಕಂಪನಿಗಳ ಸಮನ್ವಯದೊಂದಿಗೆ ದಾಳಿ ಮತ್ತು ತಪಾಸಣೆಗಳನ್ನು ಮುಂದುವರಿಸಬೇಕು.
o    ಪಿ ಎನ್‌ ಜಿ ಅಳವಡಿಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸಬೇಕು.
o  ಎಲ್‌ ಪಿ ಜಿ ಪೂರೈಕೆಗೆ, ವಿಶೇಷವಾಗಿ ದೇಶೀಯ ಅಗತ್ಯಗಳಿಗಾಗಿ ಆದ್ಯತೆ ನೀಡಲು ಮತ್ತು ಪೂರೈಕೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳ ಉದ್ದೇಶಿತ ವಿತರಣೆಯನ್ನು ಅಳವಡಿಸಿಕೊಳ್ಳಬೇಕು.

ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು

  • ಎಲ್‌ ಪಿ ಜಿ ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಗಟ್ಟಲು ದೇಶಾದ್ಯಂತ ಜಾರಿ ಕ್ರಮಗಳು ಮುಂದುವರೆದಿವೆ. ಕಳೆದ 3 ದಿನಗಳಲ್ಲಿ ದೇಶಾದ್ಯಂತ 5000 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ.
  • ಅದೇ ರೀತಿ, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ ಅಧಿಕಾರಿಗಳಿಂದ ದಿಢೀರ್ ತಪಾಸಣೆಗಳೂ ಮುಂದುವರೆದಿದ್ದು, ಕಳೆದ 3 ದಿನಗಳಲ್ಲಿ 3100 ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಎಲ್‌ ಪಿ ಜಿ ವಿತರಕರ ತಪಾಸಣೆ ನಡೆಸಲಾಗಿದೆ.
  • ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ದಿಢೀರ್ ತಪಾಸಣೆಗಳನ್ನು ಬಲಪಡಿಸಿವೆ ಮತ್ತು ಮುಂದುವರೆಸಿವೆ ಹಾಗೂ 463 ಎಲ್‌ ಪಿ ಜಿ ವಿತರಕರಿಗೆ ದಂಡ ವಿಧಿಸಿವೆ ಮತ್ತು ನಿನ್ನೆಯವರೆಗೆ 81 ಎಲ್‌ ಪಿ ಜಿ ವಿತರಕರನ್ನು ಅಮಾನತುಗೊಳಿಸಲಾಗಿದೆ.

ಎಲ್‌ ಪಿ ಜಿ ಪೂರೈಕೆ

ಗೃಹಬಳಕೆ ಎಲ್‌ ಪಿ ಜಿ ಪೂರೈಕೆ ಸ್ಥಿತಿ:

•    ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಎಲ್‌ ಪಿ ಜಿ ಪೂರೈಕೆಯ ಮೇಲೆ ಪರಿಣಾಮ ಮುಂದುವರೆದಿದೆ.
•    ಗೃಹಬಳಕೆ ಎಲ್‌ ಪಿ ಜಿ ಪೂರೈಕೆಗೆ ಆದ್ಯತೆ ನೀಡಲಾಗಿದೆ.
•    ಎಲ್‌ ಪಿ ಜಿ ವಿತರಕರಲ್ಲಿ ಯಾವುದೇ ದಾಸ್ತಾನು ಖಾಲಿಯಾದ ಘಟನೆಗಳು ವರದಿಯಾಗಿಲ್ಲ.
•    ನಿನ್ನೆ ಆನ್‌ಲೈನ್ ಎಲ್‌ ಪಿ ಜಿ ಸಿಲಿಂಡರ್ ಬುಕಿಂಗ್ ಶೇಕಡಾ 99 ಕ್ಕೆ ಹೆಚ್ಚಾಗಿದೆ.
•    ದುರುಪಯೋಗವನ್ನು ತಡೆಗಟ್ಟಲು 'ವಿತರಣಾ ದೃಢೀಕರಣ ಕೋಡ್' (ಡಿಎಸಿ) ಆಧಾರಿತ ವಿತರಣೆಗಳು ಶೇಕಡಾ 96 ರಷ್ಟು ಹೆಚ್ಚಾಗಿದೆ. ಡಿಎಸಿ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ.
•    ಕಳೆದ 3 ದಿನಗಳಲ್ಲಿ, ಸುಮಾರು 1.32 ಕೋಟಿ ಎಲ್‌ ಪಿ ಜಿ ಸಿಲಿಂಡರ್‌ ಗಳ ಬುಕಿಂಗ್‌ ಗೆ ಪ್ರತಿಯಾಗಿ ಸುಮಾರು 1.34 ಕೋಟಿ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ವಿತರಿಸಲಾಗಿದೆ.
•    ನಿನ್ನೆ, ಸುಮಾರು 45.36 ಲಕ್ಷ ಎಲ್‌ ಪಿ ಜಿ ಸಿಲಿಂಡರ್‌ಗಳ ಬುಕಿಂಗ್‌ ಗೆ ಪ್ರತಿಯಾಗಿ ಸುಮಾರು 47.51 ಲಕ್ಷ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ವಿತರಿಸಲಾಗಿದೆ.

ವಾಣಿಜ್ಯ ಎಲ್‌ ಪಿ ಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:

•    ಒಟ್ಟು ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ಬಿಕ್ಕಟ್ಟಿನ ಮುಂಚಿನ ಮಟ್ಟದ ಶೇಕಡಾ 70 ಕ್ಕೆ ಹೆಚ್ಚಿಸಲಾಗಿದೆ, ಇದರಲ್ಲಿ ಶೇಕಡಾ 10 ರಷ್ಟು ಸುಧಾರಣೆ-ಸಂಯೋಜಿತ ಹಂಚಿಕೆಯೂ ಸೇರಿದೆ.
•    ಕಳೆದ 3 ದಿನಗಳಲ್ಲಿ, ಸುಮಾರು 1.87 ಲಕ್ಷ - 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳನ್ನು ಮಾರಾಟ ಮಾಡಲಾಗಿದೆ.
•    3 ಏಪ್ರಿಲ್ 2026 ರಿಂದ, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳಿಗಾಗಿ 14,500 ಕ್ಕೂ ಹೆಚ್ಚು ಜಾಗೃತಿ ಶಿಬಿರಗಳನ್ನು ಆಯೋಜಿಸಿವೆ, ಇದರಲ್ಲಿ 2.34 ಲಕ್ಷಕ್ಕೂ ಹೆಚ್ಚು - 5 ಕೆಜಿ ಎಫ್‌ ಟಿ 
ಎಲ್ ಸಿಲಿಂಡರ್‌ ಗಳನ್ನು ಮಾರಾಟ ಮಾಡಲಾಗಿದೆ.

•    ನಿನ್ನೆ, ಸುಮಾರು 348 ಶಿಬಿರಗಳ ಮೂಲಕ ಸುಮಾರು 4919 - 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳನ್ನು ಮಾರಾಟ ಮಾಡಲಾಗಿದೆ.
•    ಐಒಸಿಎಲ್, ಎಚ್‌ ಪಿ ಸಿ ಎಲ್ ಮತ್ತು ಬಿಪಿಸಿಎಲ್ ನ ಕಾರ್ಯನಿರ್ವಾಹಕ ನಿರ್ದೇಶಕರ ಮೂವರು ಸದಸ್ಯರ ಸಮಿತಿಯು, ರಾಜ್ಯ ಅಧಿಕಾರಿಗಳು ಮತ್ತು ಉದ್ಯಮ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ರಾಜ್ಯಗಳು/ಕೇಂದ್ರಾಡಳಿತ

ಪ್ರದೇಶಗಳಲ್ಲಿ ವಾಣಿಜ್ಯ ಎಲ್‌ ಪಿ ಜಿ ಮಾರಾಟದ ಯೋಜನೆಯನ್ನು ಅಂತಿಮಗೊಳಿಸುತ್ತದೆ.

•    ಮೇ-26 ರಿಂದ, ಒಟ್ಟು 1,32,341 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ ಪಿ ಜಿ ಮಾರಾಟ ಮಾಡಲಾಗಿದೆ.
•    ಕಳೆದ 3 ದಿನಗಳಲ್ಲಿ, ಒಟ್ಟು 23,588 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ ಪಿ ಜಿ ಮಾರಾಟ ಮಾಡಲಾಗಿದೆ.
•    ಕಳೆದ 3 ದಿನಗಳಲ್ಲಿ, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಂದ ಸುಮಾರು 963 ಮೆಟ್ರಿಕ್ ಟನ್ ಆಟೋ ಎಲ್‌ ಪಿ ಜಿ ಮಾರಾಟ ಮಾಡಲಾಗಿದೆ.

ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿ ಎನ್‌ ಜಿ ವಿಸ್ತರಣಾ ಉಪಕ್ರಮಗಳು

•    ಗ್ರಾಹಕರಿಗೆ ಡಿ-ಪಿ ಎನ್‌ ಜಿ ಮತ್ತು ಸಿ ಎನ್‌ ಜಿ-ಸಾರಿಗೆಗೆ ಶೇಕಡಾ 100 ರಷ್ಟು ಪೂರೈಕೆಯೊಂದಿಗೆ ಆದ್ಯತೆ ನೀಡಲಾಗಿದೆ.
•    ಸಿಜಿಡಿ ಜಾಲಗಳ ಮೂಲಕ ಸರಬರಾಜು ಸೇರಿದಂತೆ ಇತರ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಅನಿಲ ಪೂರೈಕೆಯನ್ನು ಶೇಕಡಾ 80 ರವರೆಗೆ ಹೆಚ್ಚಿಸಲಾಗಿದೆ.
•    ವಾಣಿಜ್ಯ ಎಲ್‌ ಪಿ ಜಿ ಲಭ್ಯತೆಯ ಮೇಲಿನ ಕಳವಳಗಳನ್ನು ನಿವಾರಿಸಲು, ಹೋಟೆಲ್‌ ಗಳು, ರೆಸ್ಟೋರೆಂಟ್‌ ಗಳು ಮತ್ತು ಕ್ಯಾಂಟೀನ್‌ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ತಮ್ಮ ಎಲ್ಲಾ ಭೌಗೋಳಿಕ ವ್ಯಾಪ್ತಿಯಲ್ಲಿ ಪಿ ಎನ್‌ ಜಿ ಸಂಪರ್ಕಗಳಿಗೆ 
ಆದ್ಯತೆ ನೀಡಲು ಸಿಜಿಡಿ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ.

•    ಸಿಜಿಡಿ ಜಾಲಗಳ ವಿಸ್ತರಣೆಗೆ ಅಗತ್ಯವಿರುವ ಅನುಮೋದನೆಗಳನ್ನು ಚುರುಕುಗೊಳಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳನ್ನು ವಿನಂತಿಸಲಾಗಿದೆ.
•    ಭಾರತ ಸರ್ಕಾರವು 18.03.2026 ದಿನಾಂಕದ ಪತ್ರದ ಮೂಲಕ ರಾಜ್ಯಗಳು ಎಲ್‌ ಪಿ ಜಿಯಿಂದ ಪಿ ಎನ್‌ ಜಿ ಗೆ ದೀರ್ಘಕಾಲೀನ ಪರಿವರ್ತನೆಗೆ ಸಹಾಯ ಮಾಡುವುದಾದರೆ, ರಾಜ್ಯಗಳಿಗೆ ವಾಣಿಜ್ಯ ಎಲ್‌ ಪಿ ಜಿಯ ಹೆಚ್ಚುವರಿ ಶೇಕಡಾ 10 ರಷ್ಟು ಹಂಚಿಕೆಯನ್ನು ನೀಡಲು ಮುಂದಾಗಿದೆ.
•    22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪಿ ಎನ್‌ ಜಿ ವಿಸ್ತರಣಾ ಸುಧಾರಣೆಗಳಿಗೆ ಲಿಂಕ್ ಮಾಡಲಾದ ಹೆಚ್ಚುವರಿ ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ಪಡೆಯುತ್ತಿವೆ.
•    ಭಾರತ ಸರ್ಕಾರವು 24.03.2026 ರ ದಿನಾಂಕದ ಗೆಜೆಟ್ ಮೂಲಕ ಅಗತ್ಯ ವಸ್ತುಗಳ ಕಾಯ್ದೆ, 1955 ರ ಅಡಿಯಲ್ಲಿ 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ (ಪೈಪ್‌ಲೈನ್‌ ಗಳು ಮತ್ತು ಇತರ ಸೌಲಭ್ಯಗಳ ಅಳವಡಿಕೆ, ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026' ಅನ್ನು ಅಧಿಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್‌ಲೈನ್‌ಗಳನ್ನು ಅಳವಡಿಸಲು ಮತ್ತು ವಿಸ್ತರಿಸಲು ಸುವ್ಯವಸ್ಥಿತ ಮತ್ತು ಸಮಯೋಚಿತ ಚೌಕಟ್ಟನ್ನು ಒದಗಿಸುತ್ತದೆ, ಅನುಮೋದನೆಗಳು ಮತ್ತು ಭೂಮಿ ಲಭ್ಯತೆಯಲ್ಲಿನ ವಿಳಂಬವನ್ನು ನಿವಾರಿಸುತ್ತದೆ ಮತ್ತು ವಸತಿ ಪ್ರದೇಶಗಳು ಸೇರಿದಂತೆ ನೈಸರ್ಗಿಕ ಅನಿಲ ಮೂಲಸೌಕರ್ಯಗಳ ತ್ವರಿತ ಅಭಿವೃದ್ಧಿಯನ್ನು ಸಕ್ರಿಯಗೊಳಿಸುತ್ತದೆ. ಇದು ಪಿ ಎನ್‌ ಜಿ ನೆಟ್‌ವರ್ಕ್ ಬೆಳವಣಿಗೆಯನ್ನು ವೇಗಗೊಳಿಸಲು, ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸಲು ಮತ್ತು ಸ್ವಚ್ಛ ಇಂಧನಗಳ ಕಡೆಗೆ ಪರಿವರ್ತನೆಯನ್ನು ಬೆಂಬಲಿಸಲು ನಿರೀಕ್ಷಿಸಲಾಗಿದೆ, ಆ ಮೂಲಕ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಅನಿಲ ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುತ್ತದೆ.
•    ಪಿ ಎನ್‌ ಜಿ ಆರ್‌ ಬಿ ಸಂಸ್ಥೆಯು ಡಿ-ಪಿ ಎನ್‌ ಜಿ ಸಂಪರ್ಕಗಳನ್ನು ಚುರುಕುಗೊಳಿಸಲು ಸಿಜಿಡಿಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಪಿ ಎನ್‌ ಜಿ ವಿಸ್ತರಣೆಯ ವೇಗವನ್ನು ಕಾಯ್ದುಕೊಳ್ಳಲು ರಾಷ್ಟ್ರೀಯ ಪಿ ಎನ್‌ ಜಿ ಅಭಿಯಾನ 2.0 ಅನ್ನು 30.06.2026 ರವರೆಗೆ ವಿಸ್ತರಿಸಲಾಗಿದೆ.
•    ಸ್ವಚ್ಛವಾದ, ಹೆಚ್ಚು ಸುರಕ್ಷಿತವಾದ ಮತ್ತು ಸ್ವಾವಲಂಬಿ ಇಂಧನ ಭವಿಷ್ಯವನ್ನು ಪ್ರೋತ್ಸಾಹಿಸಲು, ಭಾರತ ಸರ್ಕಾರವು ಮಾದರಿ ಕರಡು ರಾಜ್ಯ ಸಿಬಿಜಿ ನೀತಿಯನ್ನು ಅಭಿವೃದ್ಧಿಪಡಿಸಿದೆ. ಈ ಮಾದರಿ ನೀತಿಯು ರಾಜ್ಯಗಳು ಸಿಬಿಜಿ ಅಭಿವೃದ್ಧಿಗಾಗಿ ತಮ್ಮದೇ ಆದ ಹೂಡಿಕೆದಾರ ಸ್ನೇಹಿ ಮತ್ತು ಅನುಷ್ಠಾನ ಆಧಾರಿತ ಪರಿಸರ ವ್ಯವಸ್ಥೆಯನ್ನು ರಚಿಸಲು ಸಮಗ್ರ ಸುಲಭ ಮಾರ್ಗದರ್ಶಿ ಚೌಕಟ್ಟಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಇದನ್ನು ಆಯ್ಕೆ ಮಾಡುವ ರಾಜ್ಯಗಳಿಗೆ ವಾಣಿಜ್ಯ ಎಲ್‌ ಪಿ ಜಿ ಯ ಮುಂದಿನ ಕಂತಿನ ಹೆಚ್ಚುವರಿ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು.
•    ಮಾರ್ಚ್ 2026 ರಿಂದ, ಸುಮಾರು 7.64 ಲಕ್ಷ ಪಿ ಎನ್‌ ಜಿ ಸಂಪರ್ಕಗಳಿಗೆ ಅನಿಲ ಪೂರೈಸಲಾಗಿದೆ ಮತ್ತು ಹೆಚ್ಚುವರಿ 2.81 ಲಕ್ಷ ಸಂಪರ್ಕಗಳಿಗೆ ಮೂಲಸೌಕರ್ಯವನ್ನು ಸೃಷ್ಟಿಸಲಾಗಿದೆ, ಇದು ಒಟ್ಟು ಸಂಪರ್ಕಗಳನ್ನು 10.45 ಲಕ್ಷಕ್ಕೆ ಕೊಂಡೊಯ್ದಿದೆ. ಇದಲ್ಲದೆ, ಸುಮಾರು 7.99 ಲಕ್ಷ ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ.
•    20.05.2026 ರವರೆಗೆ, 58,500 ಕ್ಕೂ ಹೆಚ್ಚು ಪಿ ಎನ್‌ ಜಿ ಗ್ರಾಹಕರು MYPNGD.in ವೆಬ್‌ಸೈಟ್ ಮೂಲಕ ತಮ್ಮ ಎಲ್‌ ಪಿ ಜಿ ಸಂಪರ್ಕಗಳನ್ನು ಬಿಟ್ಟುಕೊಟ್ಟಿದ್ದಾರೆ.

ಕಚ್ಚಾ ತೈಲದ ಸ್ಥಿತಿ ಮತ್ತು ಸಂಸ್ಕರಣಾ ಘಟಕಗಳ ಕಾರ್ಯಾಚರಣೆ

•    ಎಲ್ಲಾ ಸಂಸ್ಕರಣಾ ಘಟಕಗಳು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳೊಂದಿಗೆ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ, ಮತ್ತು ಪೆಟ್ರೋಲ್ ಹಾಗೂ ಡೀಸೆಲ್‌ ನ ಸಾಕಷ್ಟು ದಾಸ್ತಾನುಗಳನ್ನು ನಿರ್ವಹಿಸಲಾಗುತ್ತಿದೆ.
•    ದೇಶೀಯ ಬಳಕೆಯನ್ನು ಬೆಂಬಲಿಸಲು ಸಂಸ್ಕರಣಾ ಘಟಕಗಳಿಂದ ದೇಶೀಯ ಎಲ್‌ ಪಿ ಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
•    ದೇಶೀಯ ಮಾರುಕಟ್ಟೆಗೆ ಪೆಟ್ರೋಕೆಮಿಕಲ್ ಫೀಡ್‌ಸ್ಟಾಕ್ ಪೂರೈಕೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತರ-ಸಚಿವಾಲಯ ಜಂಟಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ತರುವಾಯ, ಭಾರತ ಸರ್ಕಾರವು 01.04.2026 ರ ದಿನಾಂಕದ ಆದೇಶದ ಮೂಲಕ ತೈಲ ಸಂಸ್ಕರಣಾ ಕಂಪನಿಗಳಿಗೆ (ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಸೇರಿದಂತೆ), ಹೈ ಟೆಕ್ನಾಲಜಿ ಕೇಂದ್ರವು ನಿರ್ಧರಿಸಿದಂತೆ ನಿರ್ಣಾಯಕ ವಲಯಗಳಿಗೆ ಸಿ3 ಮತ್ತು ಸಿ4 ಸ್ಟ್ರೀಮ್‌ ಗಳ ಕೆಲವು ಕನಿಷ್ಠ ಪ್ರಮಾಣಗಳನ್ನು ಲಭ್ಯವಾಗುವಂತೆ ಮಾಡಲು ಅನುಮತಿಸಿದೆ.
•    ಫಾರ್ಮಾಸ್ಯುಟಿಕಲ್ಸ್ ಇಲಾಖೆ, ಕೆಮಿಕಲ್ಸ್ ಮತ್ತು ಪೆಟ್ರೋ ಕೆಮಿಕಲ್ಸ್ ಇಲಾಖೆ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ ಕಡೆಯಿಂದ ಬಂದ ವಿನಂತಿಗಳ ಆಧಾರದ ಮೇಲೆ, ಎಲ್‌ ಪಿ ಜಿ ಪೂಲ್‌ ನಿಂದ ದಿನಕ್ಕೆ 1120 ಮೆಟ್ರಿಕ್ ಟನ್ ಸಿ3-ಸಿ4 ಮಾಲಿಕ್ಯೂಲಸ್‌  ನಿಬಂಧನೆಯನ್ನು ಫಾರ್ಮಾ, ಕೆಮಿಕಲ್ ಮತ್ತು ಪೇಂಟ್ ವಲಯದ ಕಂಪನಿಗಳಿಗೆ ಮಾಡಲಾಗಿದೆ.
•    1 ಮೇ 2026 ರಿಂದ, ಮುಂಬೈ, ಕೊಚ್ಚಿ, ವೈಜಾಗ್, ಚೆನ್ನೈ, ಮಥುರಾ ಮತ್ತು ಗುಜರಾತ್ ಸಂಸ್ಕರಣಾ ಘಟಕಗಳಿಂದ ಕೆಮಿಕಲ್, ಫಾರ್ಮಾ ಮತ್ತು ಪೇಂಟ್ ಉದ್ಯಮಕ್ಕೆ ಸುಮಾರು 10,600 ಮೆಟ್ರಿಕ್ ಟನ್ ಸಿ3-ಸಿ4 ಮಾಲಿಕ್ಯೂಲಸ್‌ (ಪ್ರೊಪಿಲೀನ್ ಮತ್ತು ಬ್ಯುಟಿಲೀನ್ ಸೇರಿದಂತೆ) ಮತ್ತು ಸುಮಾರು 3940 ಮೆಟ್ರಿಕ್ ಟನ್ ಬ್ಯುಟೈಲ್ ಅಕ್ರಿಲೇಟ್ ಅನ್ನು ಮಾರಾಟ ಮಾಡಲಾಗಿದೆ.

ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ಕ್ರಮಗಳು

•    ದೇಶಾದ್ಯಂತ ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ.
•    ಮಧ್ಯಪ್ರಾಚ್ಯ ಬಿಕ್ಕಟ್ಟು ಕಚ್ಚಾ ತೈಲ ಬೆಲೆಗಳಲ್ಲಿ ಅಸಹಜ ಹೆಚ್ಚಳಕ್ಕೆ ಕಾರಣವಾಗಿದೆ. ಗ್ರಾಹಕರನ್ನು ಈ ಪರಿಣಾಮದಿಂದ ರಕ್ಷಿಸಲು, ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ ಗೆ 10 ರೂ. ಕಡಿತಗೊಳಿಸುವ ಮೂಲಕ ಈ ಹೊರೆಯಲ್ಲಿ ಒಂದು ಭಾಗವನ್ನು ತಾನೇ ಭರಿಸಲು ನಿರ್ಧರಿಸಿದೆ.
•    ಭಾರತ ಸರ್ಕಾರವು 15.05.2026 ರ ದಿನಾಂಕದ ಗೆಜೆಟ್ ಅಧಿಸೂಚನೆಯ ಮೂಲಕ ಡೀಸೆಲ್ ಮೇಲಿನ ರಫ್ತು ಸುಂಕವನ್ನು ಲೀಟರ್‌ ಗೆ 23 ರೂ. ನಿಂದ 16.50 ರೂ. ಗೆ ಮತ್ತು ಎಟಿಎಫ್ ಮೇಲಿನ ರಫ್ತು ಸುಂಕವನ್ನು ಲೀಟರ್‌ ಗೆ 33 ರೂ. ನಿಂದ 16 ರೂ. ಗೆ ಇಳಿಸಿದೆ. ಇದಲ್ಲದೆ, ಪೆಟ್ರೋಲ್ ಮೇಲೆ ಲೀಟರ್‌ ಗೆ 3 ರೂ. ರಫ್ತು ಸುಂಕವನ್ನು ವಿಧಿಸಲಾಗಿದೆ.
•    ದೇಶದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನು ಲಭ್ಯವಿದೆ.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಪರ್ಷಿಯನ್ ಗಲ್ಫ್‌ನಲ್ಲಿನ ಪ್ರಸ್ತುತ ಕಡಲ ಪರಿಸ್ಥಿತಿಯ ಮಾಹಿತಿಯನ್ನು ಒದಗಿಸಿತು, ಈ ವಲಯದಲ್ಲಿ ಭಾರತೀಯ ಹಡಗುಗಳು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಿತು:
•    ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ನಾವಿಕರ ಕಲ್ಯಾಣ ಮತ್ತು ಅಡೆತಡೆಯಿಲ್ಲದ ಕಡಲ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ರಾಯಭಾರ ಕಚೇರಿಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯವನ್ನು ಮುಂದುವರೆಸಿದೆ.
•    ಪ್ರಸ್ತುತ ವಲಯದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 72 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳು ಅಥವಾ ಭಾರತೀಯ ಸಿಬ್ಬಂದಿಯನ್ನು ಹೊಂದಿರುವ ವಿದೇಶಿ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಘಟನೆ ವರದಿಯಾಗಿಲ್ಲ.
•    ಹಡಗು ಮಹಾನಿರ್ದೇಶನಾಲಯದ ನಿಯಂತ್ರಣ ಕೊಠಡಿಯು ಕಾರ್ಯಾರಂಭ ಮಾಡಿದಾಗಿನಿಂದ 10,106 ಕರೆಗಳು ಮತ್ತು 22,215 ಕ್ಕೂ ಹೆಚ್ಚು ಇಮೇಲ್‌ ಗಳನ್ನು ನಿರ್ವಹಿಸಿದೆ. ಕಳೆದ 72 ಗಂಟೆಗಳಲ್ಲಿ, ನಾವಿಕರು, ಅವರ ಕುಟುಂಬಗಳು ಮತ್ತು ಕಡಲ ಪಾಲುದಾರರಿಂದ ಒಟ್ಟು 404 ಕರೆಗಳು ಮತ್ತು 903 ಇಮೇಲ್‌ ಗಳು ಬಂದಿವೆ.
•    ಸಚಿವಾಲಯವು, ಹಡಗು ಮಹಾನಿರ್ದೇಶನಾಲಯದ ಮೂಲಕ, ಗಲ್ಫ್ ವಲಯದ ವಿವಿಧ ಸ್ಥಳಗಳಿಂದ ಕಳೆದ 72 ಗಂಟೆಗಳಲ್ಲಿ 99 ನಾವಿಕರು ಸೇರಿದಂತೆ ಇದುವರೆಗೆ 3,316 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಅನುಕೂಲ ಮಾಡಿಕೊಟ್ಟಿದೆ.
•    ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜವಾಗಿವೆ, ಯಾವುದೇ ದಟ್ಟಣೆ ವರದಿಯಾಗಿಲ್ಲ.

 

*****


(रिलीज़ आईडी: 2263878) आगंतुक पटल : 90
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Gujarati , Odia , Tamil , Telugu , Malayalam