ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

3ನೇ ಭಾರತ-ನಾರ್ಡಿಕ್ ಶೃಂಗಸಭೆಯ ಜಂಟಿ ಪತ್ರಿಕಾ ಹೇಳಿಕೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ

ಪ್ರಕಟಣಾ ದಿನಾಂಕ: 19 MAY 2026 8:00PM by PIB Bengaluru

ನಾರ್ಡಿಕ್ ದೇಶಗಳ ಎಲ್ಲಾ ನಾಯಕರು ಮತ್ತು ಪ್ರತಿನಿಧಿಗಳೆ,

ಮಾಧ್ಯಮ ಸ್ನೇಹಿತರೆ,

ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು!

ಇಂದು 3ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಮೊದಲನೆಯದಾಗಿ, ಈ ಶೃಂಗಸಭೆ ಆಯೋಜಿಸಿದ್ದಕ್ಕಾಗಿ ನಾರ್ವೆ ಪ್ರಧಾನಮಂತ್ರಿ ಅವರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಇಲ್ಲಿ ಉಪಸ್ಥಿತರಿರುವ ಎಲ್ಲಾ ನಾರ್ಡಿಕ್ ನಾಯಕರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

ಪ್ರಜಾಪ್ರಭುತ್ವ, ಕಾನೂನು ನಿಯಮಗಳು ಮತ್ತು ಬಹುಪಕ್ಷೀಯತೆಗೆ ನಾವು ಹೊಂದಿರುವ ಹಂಚಿಕೆಯ ಬದ್ಧತೆಯೇ ನಮ್ಮನ್ನು ಸಹಜ ಪಾಲುದಾರರನ್ನಾಗಿ ಮಾಡಿದೆ. ಅದೇ ಸಮಯದಲ್ಲಿ, ತಂತ್ರಜ್ಞಾನ ಮತ್ತು ಸುಸ್ಥಿರತೆಯಲ್ಲಿ ನಮ್ಮ ಹಂಚಿಕೆಯ ಆದ್ಯತೆಗಳು ನಮ್ಮ ಸಂಬಂಧವನ್ನು ಅಪಾರ ಅವಕಾಶಗಳೊಂದಿಗೆ ಹೆಚ್ಚಿಸಿವೆ. ಅದಕ್ಕಾಗಿಯೇ 8 ವರ್ಷಗಳ ಹಿಂದೆ ನಾರ್ಡಿಕ್ ದೇಶಗಳೊಂದಿಗಿನ ನಮ್ಮ ಸಂಬಂಧಗಳಿಗೆ ಹೆಚ್ಚಿನ ಶಕ್ತಿ ಮತ್ತು ಆವೇಗ ತರಲು ನಾವು ಈ ವಿಧಾನವನ್ನು ಸ್ಥಾಪಿಸಿದ್ದೇವೆ.

ಸ್ನೇಹಿತರೆ,

ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ಸಂಬಂಧಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ ಎಂಬುದರಿಂದ ನನಗೆ ತುಂಬಾ ಸಂತೋಷವಾಗಿದೆ. ಕಳೆದ 10 ವರ್ಷಗಳಲ್ಲಿ ನಮ್ಮ ದ್ವಿಪಕ್ಷೀಯ ವ್ಯಾಪಾರವು ಸುಮಾರು 4 ಪಟ್ಟು ಹೆಚ್ಚಾಗಿದೆ.

ಭಾರತದ ತ್ವರಿತ ಬೆಳವಣಿಗೆಯ ಪ್ರಯಾಣದಲ್ಲಿ ನಾರ್ಡಿಕ್ ದೇಶಗಳ ಹೂಡಿಕೆ ನಿಧಿಗಳು ಪ್ರಮುಖ ಪಾಲುದಾರರಾಗುತ್ತಿವೆ. ಕಳೆದ ದಶಕದಲ್ಲಿ, ನಾರ್ಡಿಕ್ ದೇಶಗಳಿಂದ ಭಾರತಕ್ಕೆ ಹರಿದುಬಂದಿರುವ ಹೂಡಿಕೆಗಳ ಪ್ರಮಾಣ ಸುಮಾರು 200 ಪ್ರತಿಶತ ಬೆಳೆದಿವೆ.

ವೇಗವಾಗಿ ಬೆಳೆಯುತ್ತಿರುವ ವ್ಯಾಪಾರ ಮತ್ತು ಹೂಡಿಕೆಯು ಭಾರತದ ಬೆಳವಣಿಗೆಯ ಯಶೋಗಾಥೆಗೆ ಕೊಡುಗೆ ನೀಡುವುದಲ್ಲದೆ, ನಾರ್ಡಿಕ್ ದೇಶಗಳ ಆರ್ಥಿಕತೆಗಳಲ್ಲಿ ಹೆಚ್ಚು ಸಕಾರಾತ್ಮಕ ಪಾತ್ರ ವಹಿಸಿದೆ, ಜತೆಗೆ ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ. ಈ ಬಲವಾದ ಅಡಿಪಾಯದ ಆಧಾರದಲ್ಲಿ, ನಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಾವು ಇತ್ತೀಚೆಗೆ ಹಲವಾರು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದ್ದೇವೆ.

ಸ್ನೇಹಿತರೆ,

2025 ಅಕ್ಟೋಬರ್ ನಿಂದ ನಾವು ನಾರ್ವೆ, ಐಸ್ ಲ್ಯಾಂಡ್ ಮತ್ತು ಇತರೆ ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಸಂಘಟನೆಯ ದೇಶಗಳೊಂದಿಗೆ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು ಜಾರಿಗೆ ತಂದಿದ್ದೇವೆ. ಕೆಲವೇ ತಿಂಗಳ ಹಿಂದೆ, ನಾವು ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದೇವೆ, ಇದರಲ್ಲಿ ಡೆನ್ಮಾರ್ಕ್, ಫಿನ್ ಲ್ಯಾಂಡ್ ಮತ್ತು ಸ್ವೀಡನ್ ಸಹ ಪಾಲುದಾರರಾಗಿದ್ದಾರೆ. ಈ ಮಹತ್ವಾಕಾಂಕ್ಷೆಯ ವ್ಯಾಪಾರ ಒಪ್ಪಂದಗಳ ಮೂಲಕ, ನಾವು ಭಾರತ ಮತ್ತು ನಾರ್ಡಿಕ್ ದೇಶಗಳ ನಡುವಿನ ಸಂಬಂಧಗಳಲ್ಲಿ ಹೊಸ ಸುವರ್ಣ ಯುಗ ಆರಂಭಿಸುತ್ತಿದ್ದೇವೆ.

ಸ್ನೇಹಿತರೆ,

ಇಂದು ನಾವು ಭಾರತ-ನಾರ್ಡಿಕ್ ಸಂಬಂಧಗಳನ್ನು ಹಸಿರು ತಂತ್ರಜ್ಞಾನ ಮತ್ತು ನಾವೀನ್ಯತೆ ಕಾರ್ಯತಂತ್ರ ಪಾಲುದಾರಿಕೆಯಾಗಿ ರೂಪಿಸಲು ನಿರ್ಧರಿಸಿದ್ದೇವೆ. ಈ ಹಸಿರು ತಂತ್ರಜ್ಞಾನ ಪಾಲುದಾರಿಕೆಯ ಮೂಲಕ, ಇಡೀ ಜಗತ್ತಿಗೆ ಉತ್ತಮ ಭವಿಷ್ಯ ಭದ್ರಪಡಿಸುವ ಸಲುವಾಗಿ, ಭೂಶಾಖದ ಶಕ್ತಿ(ಇಂಧನ) ಮತ್ತು ಮೀನುಗಾರಿಕೆಯಲ್ಲಿ ಐಸ್ ಲ್ಯಾಂಡ್ ಪರಿಣತಿ, ನೀಲಿ ಆರ್ಥಿಕತೆ ಮತ್ತು ಆರ್ಕ್ಟಿಕ್‌ನಲ್ಲಿ ನಾರ್ವೆಯ ಸಾಮರ್ಥ್ಯಗಳು ಮತ್ತು ಎಲ್ಲಾ ನಾರ್ಡಿಕ್ ದೇಶಗಳ ಕಡಲ ಮತ್ತು ಸುಸ್ಥಿರತೆ ಪರಿಣತಿಯನ್ನು ಭಾರತದ ಪ್ರಮಾಣದೊಂದಿಗೆ ಸಂಯೋಜಿಸುತ್ತೇವೆ.

ನಮ್ಮ ನಡುವಿನ ಈ ವಿಶಿಷ್ಟ ಕಾರ್ಯತಂತ್ರ ಪಾಲುದಾರಿಕೆ ಸ್ಥಾಪನೆಯ ಮೂಲಕ ಜಗತ್ತಿಗೆ ವಿಶ್ವಾಸಾರ್ಹ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ, ಸ್ವೀಡನ್‌ನ ಮುಂದುವರಿದ ಉತ್ಪಾದನೆ ಮತ್ತು ರಕ್ಷಣಾ ಸಾಮರ್ಥ್ಯಗಳು, ದೂರಸಂಪರ್ಕ ಮತ್ತು ಡಿಜಿಟಲ್ ತಂತ್ರಜ್ಞಾನದಲ್ಲಿ ಫಿನ್‌ಲ್ಯಾಂಡ್‌ನ ಪರಿಣತಿ ಮತ್ತು ಸೈಬರ್ ಭದ್ರತೆ ಮತ್ತು ಆರೋಗ್ಯ-ತಂತ್ರಜ್ಞಾನದಲ್ಲಿ ಡೆನ್ಮಾರ್ಕ್‌ನ ಸಾಮರ್ಥ್ಯಗಳನ್ನು ಭಾರತದ ಪ್ರತಿಭಾವಂತ ಕಾರ್ಯಪಡೆಯೊಂದಿಗೆ ಸಂಯೋಜಿಸುತ್ತೇವೆ.

ಸ್ನೇಹಿತರೆ,

ಭಾರತ-ನಾರ್ಡಿಕ್ ಪಾಲುದಾರಿಕೆಯ ಪ್ರಮುಖ ಆಧಾರಸ್ತಂಭವೆಂದ,ರೆ ನಮ್ಮ ವ್ಯಾಪಕ ಸಂಶೋಧನೆ ಮತ್ತು ನಾವೀನ್ಯತೆ ಸಂಬಂಧಗಳು. ಇವುಗಳನ್ನು ಮತ್ತಷ್ಟು ಬಲಪಡಿಸಲು ವಿಶ್ವವಿದ್ಯಾಲಯಗಳು, ಪ್ರಯೋಗಾಲಯಗಳು ಮತ್ತು ನವೋದ್ಯಮ ಪರಿಸರ ವ್ಯವಸ್ಥೆಗಳ ನಡುವಿನ ಸಂಪರ್ಕ ಹೆಚ್ಚಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಆರ್ಕ್ಟಿಕ್ ಮತ್ತು ಧ್ರುವ(ಪೋಲಾರ್) ಸಂಶೋಧನೆಯಲ್ಲಿ ನಾವು ನಮ್ಮ ಸಹಕಾರವನ್ನು ಗಾಢವಾಗಿಸುತ್ತೇವೆ. ಭಾರತ ಮತ್ತು ನಾರ್ಡಿಕ್ ದೇಶಗಳ ನಡುವೆ ಕೌಶಲ್ಯ ಅಭಿವೃದ್ಧಿ ಮತ್ತು ಪ್ರತಿಭಾ ಚಲನಶೀಲತೆಗೆ ನಾವು ಹೊಸ ಅವಕಾಶಗಳನ್ನು ಸಹ ಸೃಷ್ಟಿಸುತ್ತೇವೆ.

ಸ್ನೇಹಿತರೆ,

ಇಂದು ನಾವೆಲ್ಲರೂ ಜಾಗತಿಕ ವಿಷಯಗಳ ಬಗ್ಗೆಯೂ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಜಾಗತಿಕ ಉದ್ವಿಗ್ನತೆ ಮತ್ತು ಸಂಘರ್ಷಗಳ ಈ ಅವಧಿಯಲ್ಲಿ, ನಿಯಮ ಆಧಾರಿತ ಜಾಗತಿಕ ಕ್ರಮಗಳನ್ನು ಬಲಪಡಿಸಲು ಭಾರತ ಮತ್ತು ನಾರ್ಡಿಕ್ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ. ಅದು ಉಕ್ರೇನ್ ಆಗಿರಲಿ ಅಥವಾ ಪಶ್ಚಿಮ ಏಷ್ಯಾವಾಗಿರಲಿ, ಸಂಘರ್ಷಗಳನ್ನು ಮೊದಲೇ ಕೊನೆಗೊಳಿಸಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಗುರಿ ಹೊಂದಿರುವ ಪ್ರಯತ್ನಗಳನ್ನು ನಾವು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ.

ಬಹುಪಕ್ಷೀಯ ಸಂಸ್ಥೆಗಳ ಸುಧಾರಣೆ ಅಗತ್ಯ ಮತ್ತು ತುರ್ತು ಎಂದು ನಾವು ಒಪ್ಪುತ್ತೇವೆ. ಭಯೋತ್ಪಾದನೆಯ ಬಗ್ಗೆಯೂ ನಮ್ಮ ನಿಲುವು ಸ್ಪಷ್ಟವಾಗಿದೆ ಮತ್ತು ಒಗ್ಗಟ್ಟಿನಿಂದ ಕೂಡಿದೆ - ಯಾವುದೇ ರಾಜಿ ಇಲ್ಲ, ಮತ್ತು ಯಾವುದೇ ದ್ವಿಮುಖ ಮಾನದಂಡಗಳಿಲ್ಲ.

ಮಾನ್ಯರೆ,

ನಾವೆಲ್ಲರೂ ವಿಭಿನ್ನ ಭಾಷೆಗಳನ್ನು ಮಾತನಾಡುತ್ತಿದ್ದರೂ, ಕೆಲವೊಮ್ಮೆ ಒಂದೇ ಪದವು ನಮ್ಮ ನೈಸರ್ಗಿಕ ಪಾಲುದಾರಿಕೆಯನ್ನು ಪ್ರತಿಬಿಂಬಿಸಿದರೆ ಸಾಕು. ಇಂದು ನಾನು "ಸಂಬಂಧ್" ಎಂಬ ಪದವನ್ನು ಹಲವಾರು ಬಾರಿ ಬಳಸಿದ್ದೇನೆ. ಅನೇಕ ನಾರ್ಡಿಕ್ ಭಾಷೆಗಳಲ್ಲಿ, "ಸಂಬಂಧ್" ಎಂಬ ಪದವು ಸಂಪರ್ಕ, ಸಂಬಂಧಗಳು ಅಥವಾ ಬಂಧವನ್ನು ಸೂಚಿಸುತ್ತದೆ. ಹಿಂದಿಯಲ್ಲಿಯೂ ಸಹ, "ಸಂಬಂಧ್" ಅದೇ ಅರ್ಥ ಹೊಂದಿದೆ.

ಇದು ಕೇವಲ ಪದಗಳ ಹೋಲಿಕೆಯಲ್ಲ, ಇದು ನಮ್ಮ ಚಿಂತನೆಯ ನಿಕಟತೆಯನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಾಢವಾಗಿಸೋಣ. ಭಾರತ-ನಾರ್ಡಿಕ್ ಪಾಲುದಾರಿಕೆಯನ್ನು ಹಂಚಿಕೆಯ ಸಮೃದ್ಧಿ, ನಾವೀನ್ಯತೆ ಮತ್ತು ಸುಸ್ಥಿರ ಭವಿಷ್ಯದ ಮಾದರಿಯನ್ನಾಗಿ ಮಾಡೋಣ.

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****

 


(ಪ್ರಕಟಣೆ ಐ.ಡಿ.: 2263623) ವಿಸಿಟರ್ ಕೌಂಟರ್ : 7