ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಇಟಲಿಯ ಪ್ರಧಾನಮಂತ್ರಿ ಅವರನ್ನು ಭೇಟಿಯಾದರು

ಪ್ರಕಟಣಾ ದಿನಾಂಕ: 20 MAY 2026 7:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಟಲಿ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀಮತಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಮೇ 20, 2026 ರಂದು ರೋಮ್ ನಲ್ಲಿ ಅಧಿಕೃತ ಮಾತುಕತೆ ನಡೆಸಿದರು.

ಉಭಯ ದೇಶಗಳ ಪ್ರಧಾನಮಂತ್ರಿಗಳು ಉನ್ನತ ಮಟ್ಟದ ವಿನಿಮಯಗಳ ಬಲವಾದ ವೇಗ ಹಾಗೂ ದ್ವಿಪಕ್ಷೀಯ ಸಹಕಾರದ ಅತ್ಯುತ್ತಮ ಬೆಳವಣಿಗೆ ಮತ್ತು ವೈವಿಧ್ಯೀಕರಣವನ್ನು ಶ್ಲಾಘಿಸಿದರು. ಅವರು ಭಾರತ ಮತ್ತು ಇಟಲಿ ಕಾರ್ಯತಂತ್ರದ ಪಾಲುದಾರಿಕೆಯನ್ನು 'ವಿಶೇಷ ಕಾರ್ಯತಂತ್ರದ ಪಾಲುದಾರಿಕೆ' ಮಟ್ಟಕ್ಕೆ ಏರಿಸಲು ನಿರ್ಧರಿಸಿದರು. ಬಹುಪಕ್ಷೀಯ ಕಾರ್ಯಕ್ರಮಗಳು ಸೇರಿದಂತೆ ನಾಯಕರ ವಾರ್ಷಿಕ ಸಭೆಗಳನ್ನು ನಡೆಸಲು, ಹಾಗೆಯೇ ನಿಯಮಿತ ಸಚಿವ ಸಂಪುಟ ಮತ್ತು ಸಾಂಸ್ಥಿಕ ಮಟ್ಟದ ಸಭೆಗಳನ್ನು ನಡೆಸಲು ಅವರು ಒಪ್ಪಿಕೊಂಡರು.

ಉಭಯ ನಾಯಕರು ಭಾರತ ಮತ್ತುಇಟಲಿ ಪಾಲುದಾರಿಕೆಯ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಂಡ ಸಮಗ್ರ ಚರ್ಚೆಗಳಲ್ಲಿ ತೊಡಗಿಸಿಕೊಂಡರು. ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆ 2025-2029ರ ಎಲ್ಲಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದಲ್ಲಿ ಸಾಧಿಸಲಾದ ಪ್ರಗತಿಯನ್ನು ಉಭಯ ನಾಯಕರು ಪರಿಶೀಲಿಸಿದರು. ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆ, ಬಾಹ್ಯಾಕಾಶ, ಇಂಧನ, ಕೃತಕ ಬುದ್ಧಿಮತ್ತೆ  ಮತ್ತು ನಿರ್ಣಾಯಕ ತಂತ್ರಜ್ಞಾನಗಳು, ಶಿಕ್ಷಣ, ಸಂಸ್ಕೃತಿ ಮತ್ತು ಜನರ ನಡುವಿನ ಬಾಂಧವ್ಯದಲ್ಲಿ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಉಭಯ ನಾಯಕರು ಒಪ್ಪಿಕೊಂಡರು. ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆಯನ್ನು ನಿಯಮಿತವಾಗಿ ಪರಿಶೀಲಿಸಲು ವಿದೇಶಾಂಗ ಸಚಿವರ ಮಟ್ಟದ ಕಾರ್ಯವಿಧಾನವನ್ನು ಸ್ಥಾಪಿಸಲು ಅವರು ನಿರ್ಧರಿಸಿದರು.

ದ್ವಿಪಕ್ಷೀಯ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳಲ್ಲಿನ ನವೀಕೃತ ವೇಗ, ಬೆಳೆಯುತ್ತಿರುವ ಹೂಡಿಕೆಗಳು ಮತ್ತು ದೀರ್ಘಕಾಲೀನ ಸಹಯೋಗಗಳನ್ನು ನಿರ್ಮಿಸುವ ಪ್ರಯತ್ನಗಳನ್ನು ನಾಯಕರು ಪರಿಶೀಲಿಸಿದರು. ಈ ಸಂದರ್ಭದಲ್ಲಿ, ಕಳೆದ ವರ್ಷ ಮೂರು ವ್ಯಾಪಾರ ವೇದಿಕೆಗಳ   ವಿನಿಮಯವನ್ನು ಅವರು ಸ್ವಾಗತಿಸಿದರು. ರಕ್ಷಣೆ, ಡಿಜಿಟಲ್, ಇಂಧನ ಪರಿವರ್ತನೆ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ನಂತಹ (ಸಾರಿಗೆ) ವಲಯಗಳನ್ನು ಪ್ರತಿನಿಧಿಸುವ ಆಯ್ದ ಇಟಾಲಿಯನ್ ಮತ್ತು ಭಾರತೀಯ ಸಿಇಒಗಳನ್ನು ಸಹ ಅವರು ಭೇಟಿಯಾದರು. 2029ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 20 ಶತಕೋಟಿ ಯೂರೋಗಳಿಗೆ ವಿಸ್ತರಿಸುವ ಹಂಚಿಕೆಯ ಉದ್ದೇಶವನ್ನು  ಉಲ್ಲೇಖಿಸಿದ ಉಭಯ ನಾಯಕರು, ಭಾರತ-ಯುರೋಪಿಯನ್ ಒಕ್ಕೂಟದ   ಮುಕ್ತ ವ್ಯಾಪಾರ ಒಪ್ಪಂದದಿಂದ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಲು ಒಪ್ಪಿಕೊಂಡರು ಮತ್ತು ಅದರ ಶೀಘ್ರ ಅನುಷ್ಠಾನಕ್ಕೆ ಕರೆ ನೀಡಿದರು.

ಸಚಿವರ ಮತ್ತು ಅಧಿಕೃತ ಮಟ್ಟದ ಸಂವಹನಗಳು, ಬಂದರು ಭೇಟಿಗಳ ವಿನಿಮಯ ಮತ್ತು ರಕ್ಷಣಾ ಪಡೆಗಳ ನಿಯಮಿತ ತೊಡಗಿಸಿಕೊಳ್ಳುವಿಕೆಯ ಮೂಲಕ ರಕ್ಷಣಾ ಸಹಕಾರವನ್ನು ಆಳವಾಗಿಸುತ್ತಿರುವುದಕ್ಕೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ರಕ್ಷಣಾ ಉತ್ಪನ್ನಗಳ ಜಂಟಿ ವಿನ್ಯಾಸ, ಜಂಟಿ ಅಭಿವೃದ್ಧಿ ಮತ್ತು ಜಂಟಿ ಉತ್ಪಾದನೆಯಲ್ಲಿನ ಸಹಯೋಗಕ್ಕಾಗಿ 'ಉದ್ದೇಶದ ಜಂಟಿ ಘೋಷಣೆ'  ಮತ್ತು ಕೈಗಾರಿಕಾ ಮಾರ್ಗಸೂಚಿಗೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು.

ಉಭಯ ದೇಶಗಳ ಸಂಶೋಧಕರು ಮತ್ತು ವೈಜ್ಞಾನಿಕ ಸಂಸ್ಥೆಗಳ ನಡುವೆ ಹೆಚ್ಚುತ್ತಿರುವ ತೊಡಗಿಸಿಕೊಳ್ಳುವಿಕೆಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಇಟಾಲಿಯನ್ ಬಾಹ್ಯಾಕಾಶ ಸಂಸ್ಥೆ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಡುವೆ ನಡೆಯುತ್ತಿರುವ ಸಹಯೋಗವನ್ನು ಮತ್ತು ವಾಣಿಜ್ಯ ಬಾಹ್ಯಾಕಾಶ ಸಹಕಾರವನ್ನು ಬಲಪಡಿಸುವ ಪ್ರಯತ್ನಗಳನ್ನು ಅವರು ಸ್ವಾಗತಿಸಿದರು. ಭಾರತದ ಪ್ರತಿಭಾನ್ವಿತ ಕಾರ್ಯಪಡೆ ಮತ್ತು ಇಟಲಿಯ ತಾಂತ್ರಿಕ ಪರಿಣಿತಿಯನ್ನು ಸಂಯೋಜಿಸುವ ಮೂಲಕ ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ ಗಳು, ನಿರ್ಣಾಯಕ ಖನಿಜಗಳು ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಯೋಗಕ್ಕೆ ಅವರು ಕರೆ ನೀಡಿದರು.

ಭಯೋತ್ಪಾದನೆಯ ಪಿಡುಗನ್ನು ಮಟ್ಟಹಾಕಲು ತಮ್ಮ ಬಲವಾದ ಬದ್ಧತೆಯನ್ನು ಪುನರುಚ್ಚರಿಸಿದ ಉಭಯ ನಾಯಕರು, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಟ್ಟದಲ್ಲಿ ಸಹಕಾರವನ್ನು ಮುಂದುವರಿಸಲು ಒಪ್ಪಿಕೊಂಡರು. ನವೆಂಬರ್ 2025 ರಲ್ಲಿ ಅಂಗೀಕರಿಸಲಾದ 'ಭಯೋತ್ಪಾದನೆಗೆ ಧನಸಹಾಯ ತಡೆಗಟ್ಟುವ ಜಂಟಿ ಉಪಕ್ರಮ'ದ  ಅನುಷ್ಠಾನದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.

ಇಟಲಿಯಲ್ಲಿರುವ ಭಾರತೀಯ ಸಮುದಾಯದ ಅಮೂಲ್ಯ ಕೊಡುಗೆಯನ್ನು ಉಭಯ ನಾಯಕರು ಶ್ಲಾಘಿಸಿದರು ಮತ್ತು ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಶೈಕ್ಷಣಿಕ ವಲಯದವರ ಸಂಚಾರವನ್ನು ಸುಗಮಗೊಳಿಸಲು ಒಪ್ಪಿಕೊಂಡರು. 2027ನೇ ವರ್ಷವನ್ನು "ಭಾರತ ಮತ್ತು ಇಟಲಿ ನಡುವಿನ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ವರ್ಷ" ಎಂದು ಆಚರಿಸಲು ಅವರು ಒಪ್ಪಿಕೊಂಡರು. ಗುಜರಾತಿನ ಲೋಥಲ್ ನಲ್ಲಿ ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣದ ಅಭಿವೃದ್ಧಿಗೆ ಸಹಕಾರ ಮತ್ತು ಭಾರತದಿಂದ ದಾದಿಯರ  ನೇಮಕಾತಿಯ ಕುರಿತು ಭಾರತ ಮತ್ತು ಇಟಲಿ ನಡುವೆ ತಿಳುವಳಿಕಾ ಪತ್ರಗಳಿಗೆ   ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು.

ಉಭಯ ನಾಯಕರು ನಿರ್ದಿಷ್ಟ ಯೋಜನೆಗಳ ಮೂಲಕ ಸಂಪರ್ಕ ಮೂಲಸೌಕರ್ಯವನ್ನು ನಿರ್ಮಿಸುವ ತಮ್ಮ ತೀವ್ರ ಬಯಕೆಯನ್ನು ವ್ಯಕ್ತಪಡಿಸಿದರು ಹಾಗು ಭಾರತ - ಮಧ್ಯಪ್ರಾಚ್ಯ - ಯುರೋಪ್ ಆರ್ಥಿಕ ಕಾರಿಡಾರ್ ಅನುಷ್ಠಾನಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಇಂಡೋ-ಪೆಸಿಫಿಕ್ ಹಾಗು ಭಾರತ – ಇಯು ಸಂಬಂಧಗಳಲ್ಲಿನ ಬೆಳವಣಿಗೆಗಳು ಮತ್ತು ಪಶ್ಚಿಮ ಏಷ್ಯಾ ಹಾಗೂ ಯುರೋಪ್ನಲ್ಲಿನ ಸಂಘರ್ಷಗಳು ಸೇರಿದಂತೆ ಪರಸ್ಪರ ಹಿತಾಸಕ್ತಿಯ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ನಾಯಕರು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಪ್ರಸ್ತುತ ನಡೆಯುತ್ತಿರುವ ಸಂಘರ್ಷಗಳ ಶಾಂತಿಯುತ ಪರಿಹಾರಕ್ಕಾಗಿ ಸಂವಾದ ಮತ್ತು ರಾಜತಾಂತ್ರಿಕತೆಯ ಮಹತ್ವವನ್ನು ಪ್ರಧಾನಮಂತ್ರಿಯವರು ಒತ್ತಿಹೇಳಿದರು.

ಇಟಲಿ ಗಣರಾಜ್ಯದ ಸರ್ಕಾರ ಮತ್ತು ಅಲ್ಲಿನ ಜನರು ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಅವರು ಪ್ರಧಾನಮಂತ್ರಿ ಮೆಲೋನಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಪರಸ್ಪರ ಅನುಕೂಲಕರ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಮೆಲೋನಿ ಅವರನ್ನು ಆಹ್ವಾನಿಸಿದರು.

 

*****


(ಪ್ರಕಟಣೆ ಐ.ಡಿ.: 2263474) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Urdu , Marathi , हिन्दी , Gujarati , Odia , Tamil