ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರಿಂದ ಇಟಲಿ ಅಧ್ಯಕ್ಷರ ಭೇಟಿ

ಪ್ರಕಟಣಾ ದಿನಾಂಕ: 20 MAY 2026 7:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರೋಮ್ ನ ಅಧ್ಯಕ್ಷರ ಅರಮನೆಯಾದ ಕ್ವಿರಿನಾಲೆಯಲ್ಲಿ ಇಟಲಿ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಸೆರ್ಗಿಯೋ ಮಟ್ಟರೆಲ್ಲಾ ಅವರನ್ನು ಭೇಟಿ ಮಾಡಿದರು.

ಭಾರತ ಮತ್ತು ಇಟಲಿ ಸಂಬಂಧವನ್ನು ಬಲಪಡಿಸುವಲ್ಲಿ ನೀಡಿದ ಬೆಂಬಲ ಮತ್ತು ನಾಯಕತ್ವಕ್ಕಾಗಿ ಪ್ರಧಾನಮಂತ್ರಿಯವರು ಅಧ್ಯಕ್ಷ ಮಟ್ಟರೆಲ್ಲಾ ಅವರಿಗೆ ಧನ್ಯವಾದ ಅರ್ಪಿಸಿದರು. ಭಾರತ ಮತ್ತು ಇಟಲಿ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯು ಪ್ರಗತಿಯ ಹಾದಿಯಲ್ಲಿರುವುದನ್ನು ಉಭಯ ನಾಯಕರು ಪರಿಗಣಿಸಿದರು ಹಾಗು ವ್ಯಾಪಾರ ಮತ್ತು ಹೂಡಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆ, ರಕ್ಷಣೆ ಮತ್ತು ಭದ್ರತೆ, ಬಾಹ್ಯಾಕಾಶ, ಇಂಧನ, ಕೃತಕ ಬುದ್ಧಿಮತ್ತೆ   ಮತ್ತು ನಿರ್ಣಾಯಕ ತಂತ್ರಜ್ಞಾನಗಳು, ಶಿಕ್ಷಣ, ಸಂಸ್ಕೃತಿ ಹಾಗೂ ಜನರ ನಡುವಿನ ಬಾಂಧವ್ಯದಲ್ಲಿ ನಡೆಯುತ್ತಿರುವ ಸಹಕಾರದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಅವರು ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆಯ ಕುರಿತು ತಮ್ಮ ಅನಿಸಿಕೆಗಳನ್ನು ವಿನಿಮಯ ಮಾಡಿಕೊಂಡರು.

ಭಾರತ-ಇಯು  ಮುಕ್ತ ವ್ಯಾಪಾರ ಒಪ್ಪಂದಕ್ಕೆ ಶೀಘ್ರವಾಗಿ ಸಹಿ ಹಾಕುವುದರಿಂದ ಈ ಪಾಲುದಾರಿಕೆಗೆ ಹೊಸ ವೇಗ ಸಿಗಲಿದೆ ಎಂದು ಉಭಯ ನಾಯಕರು ಅಭಿಪ್ರಾಯಪಟ್ಟರು. ಕಡಲ ಭದ್ರತೆ, ಡಿಜಿಟಲ್ ಸಂಪರ್ಕ ಮತ್ತು ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ  ಬಹು ಮಾದರಿಯ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ನ ಮಹತ್ವದ ಕುರಿತು ಅವರು ಚರ್ಚಿಸಿದರು.

ಉಭಯ ನಾಯಕರು ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಿದರು ಮತ್ತು ಪಶ್ಚಿಮ ಏಷ್ಯಾ ಹಾಗೂ ಯುರೋಪ್ ನಲ್ಲಿನ ಸಂಘರ್ಷಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಅಂತರರಾಷ್ಟ್ರೀಯ ಕಾನೂನು, ನೌಕಾಯಾನದ ಸ್ವಾತಂತ್ರ್ಯ ಮತ್ತು ವಿವಾದಗಳ ಶಾಂತಿಯುತ ಪರಿಹಾರವನ್ನು ಎತ್ತಿಹಿಡಿಯುವ ತಮ್ಮ ಹಂಚಿಕೆಯ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಪ್ರಧಾನಮಂತ್ರಿ ಅವರು ಅಧ್ಯಕ್ಷರಾದ ಮಟ್ಟರೆಲ್ಲಾ ಅವರ ಆತ್ಮೀಯತೆ ಮತ್ತು ಸೌಹಾರ್ದಯುತ ಆತಿಥ್ಯಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು ಹಾಗೂ ಪರಸ್ಪರ ಅನುಕೂಲಕರವಾದ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಅಧ್ಯಕ್ಷರನ್ನು ಆಹ್ವಾನಿಸಿದರು.

 

*****


(ಪ್ರಕಟಣೆ ಐ.ಡಿ.: 2263463) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Gujarati , Tamil , Malayalam