ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಪ್ರಧಾನಮಂತ್ರಿ ಅವರ ನೆದರ್‌ಲ್ಯಾಂಡ್ಸ್ ಭೇಟಿ ಕುರಿತು ಭಾರತ- ನೆದರ್‌ಲ್ಯಾಂಡ್ಸ್ ಜಂಟಿ ಹೇಳಿಕೆ
ಪ್ರಕಟಣಾ ದಿನಾಂಕ:
17 MAY 2026 3:45AM by PIB Bengaluru
ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ಶ್ರೀ ರಾಬ್ ಜೆಟ್ಟನ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026 ಮೇ 16-17ರಂದು ನೆದರ್‌ಲ್ಯಾಂಡ್ಸ್ ಗೆ ಅಧಿಕೃತ ಭೇಟಿ ನೀಡಿದ್ದರು. ಇದು ಪ್ರಧಾನಮಂತ್ರಿ ಮೋದಿ ಅವರು ನೆದರ್‌ಲ್ಯಾಂಡ್ಸ್ ಗೆ ನೀಡುತ್ತಿರುವ 2ನೇ ಭೇಟಿಯಾಗಿದೆ.
ಮೇ 16ರ ಬೆಳಗ್ಗೆ ಪ್ರಧಾನಮಂತ್ರಿ ಮೋದಿ ಅವರನ್ನು ದ್ವಿಪಕ್ಷೀಯ ಸಭೆಗಾಗಿ ಹೇಗ್‌ನಲ್ಲಿರುವ ರಾಯಲ್ ಪ್ಯಾಲೇಸ್ ಹುಯಿಸ್ ಟೆನ್ ಬಾಷ್‌ನಲ್ಲಿ ನೆದರ್‌ಲ್ಯಾಂಡ್ಸ್ ರಾಜ ವಿಲ್ಲೆಮ್ ಅಲೆಕ್ಸಾಂಡರ್ ಮತ್ತು ರಾಣಿ ಮ್ಯಾಕ್ಸಿಮಾ ಅವರು ಆತಿಥ್ಯ ವಹಿಸಿದ್ದರು. ರಾಜ ಮನೆತನವು ಪ್ರಧಾನಮಂತ್ರಿ ಮೋದಿ ಅವರಿಗೆ ಭೋಜನಕೂಟ ಆಯೋಜಿಸಿತ್ತು.
ಪ್ರಧಾನಮಂತ್ರಿ ಜೆಟ್ಟನ್ ಮತ್ತು ಪ್ರಧಾನಿ ಮೋದಿ ಅವರು ಸೀಮಿತ ಮತ್ತು ನಿಯೋಗ ಮಟ್ಟದ ಮಾತುಕತೆಗಾಗಿ ಭೇಟಿಯಾದರು, ನಂತರ ಮೇ 16 ರ ಸಂಜೆ ಭೋಜನಕೂಟ ನಡೆಯಿತು. ಇಬ್ಬರೂ ಪ್ರಧಾನ ಮಂತ್ರಿಗಳು ಉಭಯ ದೇಶಗಳ ನಡುವಿನ ದೀರ್ಘಕಾಲದ ಮತ್ತು ಐತಿಹಾಸಿಕ ವ್ಯಾಪಾರ ಸಂಪರ್ಕಗಳು, ಜನರಿಂದ ಜನರಿಗೆ ಆಳವಾಗಿ ಬೇರೂರಿರುವ ಸಂಬಂಧಗಳು ಮತ್ತು ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ನೆನಪಿಸಿಕೊಂಡರು. ಈ ಬಹುಮುಖಿ ಸಂಬಂಧವನ್ನು ಮತ್ತಷ್ಟು ವಿಸ್ತರಿಸುವ ಮತ್ತು ಆಳಗೊಳಿಸುವ ಬಯಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ, ಉನ್ನತ ರಾಜಕೀಯ ಮಟ್ಟದಲ್ಲಿ ಮತ್ತು 2023ರಲ್ಲಿ ಭಾರತದ ಜಿ-20 ಅಧ್ಯಕ್ಷತೆಯ ಸಮಯದಲ್ಲಿ ಮತ್ತು 2026 ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ನಡೆದ ಎಐಇಂಪ್ಯಾಕ್ಟ್ ಶೃಂಗಸಭೆಯ ಮೂಲಕ ನಿಯಮಿತ ಸಂವಹನಗಳ ಮೂಲಕ ವಿವಿಧ ಸಹಕಾರ ಕಾರ್ಯಕ್ರಮಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಧಿಸಿದ ಪ್ರಗತಿಯನ್ನು ಉಭಯ ನಾಯಕರು ತೃಪ್ತಿಯಿಂದ ಗಮನಿಸಿದರು.
ಎರಡೂ ದೇಶಗಳ ನಡುವಿನ ಸಂಬಂಧದಲ್ಲಿನ ಬಲವಾದ ಆವೇಗ ಮತ್ತು ಹೆಚ್ಚುತ್ತಿರುವ ಒಮ್ಮುಖವನ್ನು ಒಪ್ಪಿಕೊಂಡ ಇಬ್ಬರೂ ನಾಯಕರು, ಭಾರತ ಮತ್ತು ನೆದರ್‌ಲ್ಯಾಂಡ್ಸ್ ನಡುವಿನ ಸಂಬಂಧವನ್ನು 'ಕಾರ್ಯತಂತ್ರ ಪಾಲುದಾರಿಕೆ'ಗೆ ಹೆಚ್ಚಿಸಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ರಾಜಕೀಯ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತಾ ಸಹಕಾರ, ಸೈಬರ್ ಭದ್ರತೆ, ಸೆಮಿಕಂಡಕ್ಟರ್, ಬಾಹ್ಯಾಕಾಶ, ಎಐ ಮತ್ತು ಕ್ವಾಂಟಮ್ ವ್ಯವಸ್ಥೆ, ವಿಜ್ಞಾನ ಮತ್ತು ನಾವೀನ್ಯತೆ, ಸುಸ್ಥಿರತೆ, ಆರೋಗ್ಯ, ಸುಸ್ಥಿರ ಕೃಷಿ ಮತ್ತು ಆಹಾರ ವ್ಯವಸ್ಥೆಗಳು, ನೀರು ನಿರ್ವಹಣೆ, ಹವಾಮಾನ ಬದಲಾವಣೆ ಮತ್ತು ಇಂಧನ ಪರಿವರ್ತನೆ, ಸುಸ್ಥಿರ ಸಾರಿಗೆ, ಕಡಲ ಅಭಿವೃದ್ಧಿ, ಶಿಕ್ಷಣ, ಸಂಸ್ಕೃತಿ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನಿಯಮಿತ ಮತ್ತು ರಚನಾತ್ಮಕ ಸಹಕಾರದ ಮೂಲಕ ಕೆಲಸ ಮಾಡಲು ಎರಡೂ ಕಡೆಯವರು ಒಪ್ಪಿಕೊಂಡರು, ಜತೆಗೆ ಕಾರ್ಯತಂತ್ರ ಪಾಲುದಾರಿಕೆ ಮಾರ್ಗಸೂಚಿ ಅಳವಡಿಸಿಕೊಳ್ಳುವುದನ್ನು ಅವರು ಸ್ವಾಗತಿಸಿದರು. ನೀತಿ ಯೋಜನೆಯ ಕ್ಷೇತ್ರದಲ್ಲಿ ವಿಚಾರ ವಿನಿಮಯ ಅನ್ವೇಷಿಸಲು ಸಹ ಎರಡೂ ಕಡೆಯವರು ಒಪ್ಪಿಕೊಂಡರು.
ಈ ನಿಟ್ಟಿನಲ್ಲಿ ರಕ್ಷಣೆ, ಸೆಮಿಕಂಡಕ್ಟರ್ ಗಳು ಮತ್ತು ಸಂಬಂಧಿತ ಉದಯೋನ್ಮುಖ ತಂತ್ರಜ್ಞಾನಗಳು, ಡಿಜಿಟಲ್ ಮತ್ತು ಸೈಬರ್ ವಲಯದಲ್ಲಿ ಹೆಚ್ಚಿನ ಸಹಕಾರ, ಔಷಧಗಳು ಮತ್ತು ವೈದ್ಯಕೀಯ ಸಾಧನಗಳಲ್ಲಿ ಸಹಭಾಗಿತ್ವ, ಜಂಟಿ ವ್ಯಾಪಾರ ಮತ್ತು ಹೂಡಿಕೆ ಸಮಿತಿಯ ಸ್ಥಾಪನೆ, ಹಾಗೆಯೇ ಲೋಥಾಲ್ ಮತ್ತು ಆಮ್ ಸ್ಟರ್ ಡ್ಯಾಮ್‌ನಲ್ಲಿರುವ ಕಡಲ ವಸ್ತುಸಂಗ್ರಹಾಲಯಗಳ ನಡುವಿನ ಸಹಕಾರದಂತಹ ವಿವಿಧ ಆದ್ಯತೆಯ ವಲಯಗಳಲ್ಲಿ 2025 ಡಿಸೆಂಬರ್ ನಲ್ಲಿ ತೀರ್ಮಾನಿಸಲಾದ ಒಪ್ಪಂದಗಳನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.
ಭವಿಷ್ಯದ ಒಪ್ಪಂದಗಳನ್ನು ಇಬ್ಬರು ನಾಯಕರು ಗಮನಿಸಿದರು. ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಮತ್ತು ವಿಶ್ವಸಂಸ್ಥೆಯ ಸನ್ನದು ಉದ್ದೇಶಗಳು ಮತ್ತು ತತ್ವಗಳಿಗೆ ಅನುಗುಣವಾಗಿ ನಿಯಮ ಆಧಾರಿತ ಅಂತಾರಾಷ್ಟ್ರೀಯ ಕ್ರಮ ಸೇರಿದಂತೆ ಹಂಚಿಕೆಯ ಮೌಲ್ಯಗಳು ಮತ್ತು ತತ್ವಗಳನ್ನು ಎತ್ತಿಹಿಡಿಯುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಸಮಕಾಲೀನ ವಾಸ್ತವಗಳನ್ನು ಪ್ರತಿಬಿಂಬಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯತ್ವದ ಕಾಯಂ ಮತ್ತು ಶಾಶ್ವತವಲ್ಲದ ವರ್ಗಗಳ ವಿಸ್ತರಣೆ ಸೇರಿದಂತೆ ಬಹುಪಕ್ಷೀಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸುಧಾರಿಸಲು ಎರಡೂ ಸರ್ಕಾರಗಳು ತಮ್ಮ ಬದ್ಧತೆಯನ್ನು ಒತ್ತಿಹೇಳಿದವು, ನಿಗದಿತ ಸಮಯದೊಳಗೆ ಪಠ್ಯ ಆಧಾರಿತ ಮಾತುಕತೆಗಳಿಗೆ ಕರೆ ನೀಡಿದರು. ಸುಧಾರಿತ ಮತ್ತು ವಿಸ್ತೃತ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ಡಚ್ ಬೆಂಬಲ ಮುಂದುವರಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ಮೋದಿ ಅವರುಪ್ರಧಾನಿ ಜೆಟ್ಟನ್ ಅವರಿಗೆ ಧನ್ಯವಾದ ಅರ್ಪಿಸಿದರು.
ಭಾರತ-ಐರೋಪ್ಯ ಒಕ್ಕೂಟದ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಗಾಢಗೊಳಿಸುವ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರ. ಈ ವರ್ಷದ ಜನವರಿಯಲ್ಲಿ ಪರಸ್ಪರ ಪ್ರಯೋಜನಕಾರಿ ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆ ಅಂತಿಮವಾಗಿದ್ದನ್ನು ಸ್ವಾಗತಿಸಿದರು. ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಜಾಗತಿಕ ಆರ್ಥಿಕ ಸವಾಲುಗಳ ಸಮಯದಲ್ಲಿ, ಮುಕ್ತ ವ್ಯಾಪಾರ ಒಪ್ಪಂದವು ವಿಶ್ವದ 2ನೇ ಮತ್ತು 4ನೇ ಅತಿದೊಡ್ಡ ಆರ್ಥಿಕತೆಗಳ ನಡುವಿನ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸುತ್ತದೆ. ಜತೆಗೆ ಆರ್ಥಿಕ ಮುಕ್ತತೆ ಮತ್ತು ನಿಯಮ ಆಧಾರಿತ ವ್ಯಾಪಾರದ ಜಂಟಿ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಒಪ್ಪಿಕೊಂಡರು. ಭದ್ರತೆ ಮತ್ತು ರಕ್ಷಣೆಯ ಕುರಿತು ಐರೋಪ್ಯ ಒಕ್ಕೂಟ ಮತ್ತು ಭಾರತದ ಸಂವಾದ ಮತ್ತು ಸಹಕಾರ ಬಲಪಡಿಸುವ, ಕಡಲ ಭದ್ರತೆ, ಸೈಬರ್, ಭಯೋತ್ಪಾದನೆ ನಿಗ್ರಹ ಮತ್ತು ರಕ್ಷಣಾ ಕೈಗಾರಿಕಾ ಸಹಯೋಗದಂತಹ ಕ್ಷೇತ್ರಗಳಲ್ಲಿ ಸಂಕೀರ್ಣ ಫಲಿತಾಂಶಗಳನ್ನು ನೀಡುವ ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆಗೆ ಏಕಕಾಲದಲ್ಲಿ ಸಹಿ ಹಾಕುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.
ಅಂತಾರಾಷ್ಟ್ರೀಯ ಕಾನೂನಿನ ಗೌರವ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ, ಸಂಚರಣೆಯ ಸ್ವಾತಂತ್ರ್ಯ, ಬಲವಂತ ಮತ್ತು ಸಂಘರ್ಷಗಳ ಅನುಪಸ್ಥಿತಿಯ ಆಧಾರದ ಮೇಲೆ ಮುಕ್ತ, ತೆರೆದ, ಸುರಕ್ಷಿತ ಮತ್ತು ಶಾಂತಿಯುತ ಭಾರತ-ಪೆಸಿಫಿಕ್ ವಲಯದ ಮಹತ್ವವನ್ನು ನಾಯಕರು ಒಪ್ಪಿಕೊಂಡರು. ಇಂಡೋ-ಪೆಸಿಫಿಕ್ ಕುರಿತು ಐರೋಪ್ಯ ಒಕ್ಕೂಟದ ಕಾರ್ಯತಂತ್ರವನ್ನು ನೆನಪಿಸಿಕೊಂಡ ಪ್ರಧಾನಿ ಜೆಟ್ಟನ್, ನೆದರ್ ಲ್ಯಾಂಡ್ಸ್ ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ(ಐಪಿಒಐ)ಕ್ಕೆ ಸೇರುವ, ಜರ್ಮನಿ ಮತ್ತು ಐರೋಪ್ಯ ಒಕ್ಕೂಟದೊಂದಿಗೆ ಸಾಮರ್ಥ್ಯ ನಿರ್ಮಾಣ ಮತ್ತು ಸಂಪನ್ಮೂಲ ಹಂಚಿಕೆಯ ಆಧಾರಸ್ತಂಭದಲ್ಲಿ ಸಹ-ನೇತೃತ್ವ ವಹಿಸುವ ನಿರ್ಧಾರವನ್ನು ಘೋಷಿಸಿದರು.
ಉಕ್ರೇನ್ ಯುದ್ಧದ ಬಗ್ಗೆ ಎರಡೂ ಕಡೆಯವರು ಕಳವಳ ವ್ಯಕ್ತಪಡಿಸಿದರು, ಇದು ಮಾನವತೆಗೆ ಅಪಾರ ನೋವುಂಟು ಮಾಡುತ್ತಿದೆ, ಜತೆಗೆ ಜಾಗತಿಕ ಪರಿಣಾಮಗಳನ್ನು ಬೀರುತ್ತಿದೆ. ವಿಶ್ವಸಂಸ್ಥೆಯ ಸನ್ನದು ಮತ್ತು ಅಂತಾರಾಷ್ಟ್ರೀಯ ಕಾನೂನು ತತ್ವಗಳ ಆಧಾರದ ಮೇಲೆ ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸಾಧಿಸುವ ಪ್ರಯತ್ನಗಳಿಗೆ ಬೆಂಬಲ ನೀಡುವುದನ್ನು ಮುಂದುವರಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.
ಪಶ್ಚಿಮ ಏಷ್ಯಾ / ಮಧ್ಯಪ್ರಾಚ್ಯ ಪರಿಸ್ಥಿತಿಯ ಬಗ್ಗೆ ಇಬ್ಬರೂ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದರು, ಆ ಪ್ರದೇಶ ಮತ್ತು ವಿಶಾಲ ಪ್ರಪಂಚದ ಮೇಲೆ ಅದರ ಗಂಭೀರ ಪರಿಣಾಮಗಳು ಉಂಟಾಗುತ್ತಿವೆ. ಇದರಲ್ಲಿ ಅಪಾರ ಮಾನವ ನೋವುಗಳು ಮತ್ತು ಜಾಗತಿಕ ಇಂಧನ ಸರಬರಾಜು ಮತ್ತು ವ್ಯಾಪಾರ ಜಾಲಗಳಿಗೆ ಅಡ್ಡಿಗಳಿವೆ. 2026 ಏಪ್ರಿಲ್ 08ರಂದು ಘೋಷಿಸಲಾದ ಕದನ ವಿರಾಮವನ್ನು ಉಭಯ ನಾಯಕರು ಸ್ವಾಗತಿಸಿದರು. ಸಂಘರ್ಷ ಉಲ್ಬಣ ಸಾಧ್ಯತೆ, ಶಾಂತಿ ಸಂವಾದ ಮತ್ತು ರಾಜತಾಂತ್ರಿಕತೆಯ ಮಹತ್ವವನ್ನು ಒತ್ತಿ ಹೇಳಿದರು. ಪಶ್ಚಿಮ ಏಷ್ಯಾ / ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ನೆಲೆಸಬೇಕು ಎಂಬ ಆಶಾವಾದ ವ್ಯಕ್ತಪಡಿಸಿದರು. ಹಾರ್ಮುಜ್ ಜಲಸಂಧಿಯ ಮೂಲಕ ನೌಕಾಯಾನ ಸ್ವಾತಂತ್ರ್ಯ ಮತ್ತು ಜಾಗತಿಕ ವಾಣಿಜ್ಯ ಹರಿವು ಹೆಚ್ಚಾಗಬೇಕು. ಆದರೆ ಯಾವುದೇ ನಿರ್ಬಂಧಿತ ಕ್ರಮಗಳು ಸಲ್ಲದು, ಈ ನಿಟ್ಟಿನಲ್ಲಿ ನಡೆಯುತ್ತಿರುವ ಸಂಧಾನ ಪ್ರಯತ್ನಗಳು ಮತ್ತು ಉಪಕ್ರಮಗಳಿಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು.
ಆರ್ಥಿಕ ಸಹಕಾರ, ವ್ಯಾಪಾರ ಮತ್ತು ಹೂಡಿಕೆ
ನೆದರ್ ಲ್ಯಾಂಡ್ಸ್-ಭಾರತ ಆರ್ಥಿಕ ಪಾಲುದಾರಿಕೆಯು ಸಹಕಾರದ ಮಾದರಿಯಾಗಿ ಎದ್ದು ಕಾಣುತ್ತದೆ ಎಂದು ಇಬ್ಬರೂ ನಾಯಕರು ಗಮನಿಸಿದರು. ಇದು ಸುಸ್ಥಿರತೆ, ನಾವೀನ್ಯತೆ ಮತ್ತು ದೀರ್ಘಾವಧಿಯ ಬೆಳವಣಿಗೆಯಂತಹ ಹಂಚಿಕೆಯ ಆದ್ಯತೆಗಳಿಂದ ನಡೆಸಲ್ಪಡುತ್ತದೆ, ಎರಡೂ ರಾಷ್ಟ್ರಗಳಿಗೆ ಪರಸ್ಪರ ಸಮೃದ್ಧಿಯನ್ನು ಸೃಷ್ಟಿಸುತ್ತದೆ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಬೆಳವಣಿಗೆಯನ್ನು ಅವರು ಸ್ವಾಗತಿಸಿದರು, ಇದು ಪರಿಣಾಮಕಾರಿ ಪೂರೈಕೆ ಸರಪಳಿಗಳು ಮತ್ತು ಮುಕ್ತ ಮಾರುಕಟ್ಟೆಗಳಿಗೆ ಹಂಚಿಕೆಯ ಬದ್ಧತೆಯಿಂದ ಬೆಂಬಲಿತವಾಗಿದೆ. ವಿಶ್ವ ದರ್ಜೆಯ ಸರಕು ಸಾಘಣೆ ಜಾಲದೊಂದಿಗೆ ನೆದರ್‌ಲ್ಯಾಂಡ್ಸ್ ಭಾರತೀಯ ರಫ್ತುದಾರರಿಗೆ ಯುರೋಪ್‌ಗೆ ಒಂದು ಕಾರ್ಯತಂತ್ರದ ಪ್ರವೇಶ ದ್ವಾರವಾಗಿ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ರೋಟರ್‌ಡ್ಯಾಮ್ ಬಂದರು ಸೇರಿದೆ, ಆದರೆ ಭಾರತವು ಡಚ್ ಕಂಪನಿಗಳಿಗೆ ವಿಶಾಲ ಮತ್ತು ಕ್ರಿಯಾತ್ಮಕ ಮಾರುಕಟ್ಟೆಯನ್ನು ನೀಡುತ್ತದೆ, ಅದರ ಉನ್ನತೀಕರಣ ಅವಕಾಶಗಳು, ವ್ಯಾಪಾರ ಸ್ನೇಹಿ ವಾತಾವರಣ ಮತ್ತು ಭಾರತದಲ್ಲಿ ವಿಶಾಲ ಮತ್ತು ಕೌಶಲ್ಯಪೂರ್ಣ ಪ್ರತಿಭಾನ್ವಿತ ಗುಂಪಿನ ಲಭ್ಯತೆಯಿಂದ ಗಮನಾರ್ಹವಾಗಿ ಪ್ರಯೋಜನ ಪಡೆಯುತ್ತಾರೆ. ಅದೇ ಸಮಯದಲ್ಲಿ, ಭಾರತೀಯ ವ್ಯವಹಾರಗಳು ಮುಂದುವರಿದ ಡಚ್ ಪರಿಣತಿಯನ್ನು ವಿಶೇಷವಾಗಿ ನೀರಿನ ನಿರ್ವಹಣೆ, ಸುಸ್ಥಿರ ಕೃಷಿ ಮತ್ತು ಸ್ಮಾರ್ಟ್ ಸಿಟಿಗಳಲ್ಲಿ ಬಳಸಿಕೊಳ್ಳಬಹುದು.
ಎರಡೂ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ಆರ್ಥಿಕ ಸಹಯೋಗದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ನಾಯಕರು, ವಿಶೇಷವಾಗಿ ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದಿಂದ ಉಂಟಾಗುವ ಅವಕಾಶಗಳ ಹಿನ್ನೆಲೆಯಲ್ಲಿ ಮತ್ತಷ್ಟು ಬೆಳವಣಿಗೆಗೆ ಅಪಾರ ಸಾಮರ್ಥ್ಯಗಳಿವೆ. ದ್ವಿಪಕ್ಷೀಯ ಆರ್ಥಿಕ ಸಂಬಂಧಗಳ ಆಳ ಮತ್ತು ಚೇತರಿಕೆಯನ್ನು ಪ್ರತಿಬಿಂಬಿಸುವ ನೆದರ್ ಲ್ಯಾಂಡ್ಸ್ ಭಾರತದ ಪ್ರಮುಖ ವ್ಯಾಪಾರ ಮತ್ತು ಹೂಡಿಕೆ ಪಾಲುದಾರರಲ್ಲಿ ಒಂದಾಗಿ ಮುಂದುವರೆದಿದೆ.
ವ್ಯಾಪಾರ ಮತ್ತು ಹೂಡಿಕೆಯನ್ನು ಮತ್ತಷ್ಟು ಸುಗಮಗೊಳಿಸುವ ಸಲುವಾಗಿ, ದೇಶಗಳ ಕಸ್ಟಮ್ಸ್ ಅಧಿಕಾರಿಗಳ ನಡುವೆ ಮಾಹಿತಿ ವಿನಿಮಯ ಸಕ್ರಿಯಗೊಳಿಸುವ ಮತ್ತು ಇದರಿಂದಾಗಿ ಹೆಚ್ಚಿನ ಸುಂಕ ಜಾರಿ ಮತ್ತು ಭಾರತ ಮತ್ತು ನೆದರ್ ಲ್ಯಾಂಡ್ಸ್ ನಡುವಿನ ಕಾನೂನುಬದ್ಧ ವ್ಯಾಪಾರವನ್ನು ಸುಗಮಗೊಳಿಸುವ ಒಪ್ಪಂದಕ್ಕೆ ಸಹಿ ಹಾಕುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.
ಭಾರತ-ನೆದರ್ ಲ್ಯಾಂಡ್ಸ್ ವ್ಯಾಪಾರ ಮತ್ತು ಹೂಡಿಕೆ ಸಮಿತಿ ಮತ್ತು ತ್ವರಿತ ಗತಿಯ ವ್ಯವಸ್ಥೆ ಮೂಲಕ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಮತ್ತಷ್ಟು ಮುನ್ನಡೆಸುವ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ಸುಸ್ಥಿರ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಚೇತರಿಕೆಯ ಮೌಲ್ಯ ಸರಪಳಿಗಳನ್ನು ಬೆಂಬಲಿಸಲು ಹೂಡಿಕೆ ಸೌಲಭ್ಯವನ್ನು ಹೆಚ್ಚಿಸುವುದು ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುವತ್ತ ಗಮನ ಹರಿಸಲು ಅವರು ಒಪ್ಪಿಕೊಂಡರು.
ಭಾರತ ಮತ್ತು ನೆದರ್ ಲ್ಯಾಂಡ್ಸ್ ನಲ್ಲಿ ಅಭಿವೃದ್ಧಿಪಡಿಸಲಾದ ಪರಿಹಾರಗಳು ಭಾರತೀಯ ಮತ್ತು ಐರೋಪ್ಯ ಒಕ್ಕೂಟದ ಮಾರುಕಟ್ಟೆಗಳನ್ನು ಒಳಗೊಂಡಂತೆ ಜಾಗತಿಕವಾಗಿ ವಿಸ್ತರಿಸಬಹುದು ಎಂದು ಗಮನಿಸಿದ ಇಬ್ಬರೂ ಪ್ರಧಾನ ಮಂತ್ರಿಗಳು, ಸ್ಟಾರ್ಟಪ್‌ಗಳು ಮತ್ತು ನಾವೀನ್ಯತೆಯಲ್ಲಿ ಸಹಕಾರದ ಬಲವಾದ ಸಾಮರ್ಥ್ಯವನ್ನು ಒತ್ತಿ ಹೇಳಿದರು. ಎರಡೂ ದೇಶಗಳ ಸ್ಟಾರ್ಟಪ್ ಪರಿಸರ ವ್ಯವಸ್ಥೆಗಳನ್ನು ಮತ್ತಷ್ಟು ಸಂಪರ್ಕಿಸಲು, ವಿನಿಮಯಗಳನ್ನು ಸುಗಮಗೊಳಿಸಲು ಮತ್ತು ಡಿಜಿಟಲ್ ಸಾಫ್ಟ್-ಲ್ಯಾಂಡಿಂಗ್ ಕಾರ್ಯಕ್ರಮಗಳನ್ನು ಅನ್ವೇಷಿಸಲು, ವ್ಯಾಪಾರ ಕಾರ್ಯಾಚರಣೆಗಳು, ನಾವೀನ್ಯತೆ ಕಾರ್ಯಾಚರಣೆಗಳು ಮತ್ತು ತಂತ್ರಜ್ಞಾನ ಶೃಂಗಸಭೆಗಳಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಅವರು ಒಪ್ಪಿಕೊಂಡರು.
ರಕ್ಷಣಾ ಮತ್ತು ಭದ್ರತಾ ಸಹಕಾರ
ರಕ್ಷಣಾ ಸಹಕಾರ ಕುರಿತ ಉದ್ದೇಶ ಪತ್ರಕ್ಕೆ ಸಹಿ ಹಾಕುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು, ಆಯಾ ರಕ್ಷಣಾ ಸಚಿವಾಲಯಗಳ ನಡುವಿನ ನಿಯಮಿತ ಸಂವಹನ ಮತ್ತು ಸಿಬ್ಬಂದಿ ಮಟ್ಟದ ಮಾತುಕತೆಗಳ ಮೂಲಕ ಮಾಹಿತಿ ವಿನಿಮಯ, ಭೇಟಿಗಳು, ಸಂಶೋಧನೆ, ನಾವೀನ್ಯತೆ ಮತ್ತು ತರಬೇತಿ ಚಟುವಟಿಕೆಗಳನ್ನು ಸಂಘಟಿಸಲು ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಆಳಗೊಳಿಸುವ ಮಹತ್ವವನ್ನು ಒತ್ತಿ ಹೇಳಿದರು. ಎರಡೂ ದೇಶಗಳ ನಡುವಿನ ರಕ್ಷಣಾ ಕೈಗಾರಿಕಾ ಸಹಕಾರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವತ್ತ ಸಾಗಲು ಅವರು ಸಮ್ಮತಿಸಿದರು.
ಐರೋಪ್ಯ ಒಕ್ಕೂಟದ ಕಾರ್ಯವಿಧಾನಗಳ ಅಡಿ ಮತ್ತು ಇತರೆ ಪಾಲುದಾರರೊಂದಿಗೆ ರಕ್ಷಣಾ ವಲಯದಲ್ಲಿ ಸಹಕಾರ ಹೆಚ್ಚಿಸಲು, ರಕ್ಷಣಾ ಉಪಕರಣಗಳು, ವ್ಯವಸ್ಥೆಗಳು, ಘಟಕಗಳು ಮತ್ತು ಇತರೆ ಪ್ರಮುಖ ಸಾಮರ್ಥ್ಯಗಳ ಉತ್ಪಾದನೆಗೆ ರಕ್ಷಣಾ ಕೈಗಾರಿಕಾ ಸಹಯೋಗವನ್ನು ಸಹ-ಅಭಿವೃದ್ಧಿ, ತಂತ್ರಜ್ಞಾನದ ವರ್ಗಾವಣೆ ಮತ್ತು ಎರಡೂ ದೇಶಗಳ ಸಶಸ್ತ್ರ ಪಡೆಗಳ ಅಗತ್ಯಗಳನ್ನು ಪೂರೈಸುವ ಸಲುವಾಗಿ ಸಹ-ಉತ್ಪಾದನೆಗಾಗಿ ಜಂಟಿ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ರಕ್ಷಣಾ ಕೈಗಾರಿಕಾ ಮಾರ್ಗಸೂಚಿಯನ್ನು ಸ್ಥಾಪಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.
ರಕ್ಷಣೆ, ಕಡಲ ಭದ್ರತೆ, ಆರ್ಥಿಕ ಭದ್ರತೆ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಸೈಬರ್ ಭದ್ರತೆ, ಭಯೋತ್ಪಾದನೆ ನಿಗ್ರಹ ಮತ್ತು ಅಂತಾರಾಷ್ಟ್ರೀಯ ಭದ್ರತೆಯ ಇತರೆ ಪರಸ್ಪರ ಒಪ್ಪಿಗೆಯ ವಿಷಯಗಳು ಸೇರಿದಂತೆ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಭದ್ರತಾ ವಿಷಯಗಳ ಕುರಿತು ಎರಡೂ ದೇಶಗಳ ರಾಷ್ಟ್ರೀಯ ಭದ್ರತಾ ಸಾಧನಗಳ ನಡುವೆ ನಿಯಮಿತ ವಿನಿಮಯದ ಮೂಲಕ ಭದ್ರತಾ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ನಾಯಕರು ಒಪ್ಪಿಕೊಂಡರು.
ವಾರ್ಷಿಕ ದ್ವಿಪಕ್ಷೀಯ ಸೈಬರ್ ಸಮಾಲೋಚನೆಗಳ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಮುಕ್ತ, ತೆರೆದ ಮತ್ತು ಸುರಕ್ಷಿತ ಸೈಬರ್ ವಲಯವನ್ನು ಖಚಿತಪಡಿಸಿಕೊಳ್ಳಲು ಎರಡೂ ದೇಶಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಒಂದು ಮಾರ್ಗವಾಗಿ ಆನ್‌ಲೈನ್ ಸೈಬರ್ ಶಾಲೆಯ 8 ಅಧಿವೇಶನ ನಡೆಸುವುದನ್ನು ಗಮನಿಸಿದರು. ಈ ಸಂದರ್ಭದಲ್ಲಿ, ಬಹುಪಕ್ಷೀಯ ವೇದಿಕೆಗಳಲ್ಲಿ ನಿಕಟ ಸಮನ್ವಯ ಮತ್ತು ಸಾಮರ್ಥ್ಯ ವೃದ್ಧಿ ಮತ್ತು ಜ್ಞಾನ ವಿನಿಮಯದ ಮೂಲಕ ಸೈಬರ್ ಬೆದರಿಕೆಗಳು ಮತ್ತು ಸೈಬರ್ ಅಪರಾಧಗಳನ್ನು ಎದುರಿಸುವ ಜಂಟಿ ಪ್ರಯತ್ನಗಳು ಸೇರಿದಂತೆ ಸೈಬರ್ ವಲಯದಲ್ಲಿ ಹೆಚ್ಚಿನ ಸಹಯೋಗ ಕುರಿತ ಉದ್ದೇಶ ಪತ್ರಕ್ಕೆ ಸಹಿ ಹಾಕುವುದನ್ನು ನಾಯಕರು ಸ್ವಾಗತಿಸಿದರು.
ಮುಕ್ತ, ತೆರೆದ, ಸುರಕ್ಷಿತ, ಸ್ಥಿರ, ಪ್ರವೇಶಿಸಬಹುದಾದ ಮತ್ತು ಶಾಂತಿಯುತ ಐಸಿಟಿ ಪರಿಸರದ ಮಹತ್ವಕ್ಕೆ ಇಬ್ಬರೂ ನಾಯಕರು ಒತ್ತು ನೀಡಿದರು, ಇದು ನಾವೀನ್ಯತೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಸಕ್ರಿಯಗೊಳಿಸುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಮೋದಿ ಅವರು 2026 ಫೆಬ್ರವರಿ 19ರಂದು ನವದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ನೆದರ್ ಲ್ಯಾಂಡ್ಸ್ ನ ರಚನಾತ್ಮಕ ಭಾಗವಹಿಸುವಿಕೆಗೆ ಧನ್ಯವಾದ ಅರ್ಪಿಸಿದರು.
2025 ಏಪ್ರಿಲ್ ನಲ್ಲಿ ಭಾರತದ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಾಗರಿಕರ ಮೇಲೆ ನಡೆದ ಘೋರ ಮತ್ತು ಅಸಹ್ಯಕರ ಭಯೋತ್ಪಾದಕ ದಾಳಿಯನ್ನು ಪ್ರಧಾನಮಂತ್ರಿ ಜೆಟ್ಟನ್ ಬಲವಾಗಿ ಖಂಡಿಸಿದರು. ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆದರ್ ಲ್ಯಾಂಡ್ಸ್ ನ ಒಗ್ಗಟ್ಟು ಮತ್ತು ಅಚಲ ಬೆಂಬಲ ವ್ಯಕ್ತಪಡಿಸಿದರು. ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಲು ಇಬ್ಬರು ನಾಯಕರು ಕರೆ ನೀಡಿದರು. ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಇಬ್ಬರೂ ಪ್ರಧಾನಮಂತ್ರಿಗಳು ನಿಸ್ಸಂದಿಗ್ಧವಾಗಿ ಖಂಡಿಸಿದರು. ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ವಿಧಾನಕ್ಕೆ ಅವರು ಕರೆ ನೀಡಿದರು, ಭಯೋತ್ಪಾದನೆ ಎದುರಿಸುವ ದ್ವಿಮುಖ ನೀತಿಗಳನ್ನು ತಿರಸ್ಕರಿಸಿದರು.
ವಿಶ್ವಸಂಸ್ಥೆ ಮತ್ತು ಎಫ್‌ಎಟಿಎಫ್ ಸೇರಿದಂತೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಕಾರ್ಯವಿಧಾನಗಳ ಮೂಲಕ ಭಯೋತ್ಪಾದನೆಯನ್ನು ಸಮಗ್ರ ಮತ್ತು ನಿರಂತರ ರೀತಿಯಲ್ಲಿ ಎದುರಿಸುವ ಅಗತ್ಯವನ್ನು ಇಬ್ಬರು ನಾಯಕರು ಪುನರುಚ್ಚರಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಯುಎನ್‌ಎಸ್‌ಸಿ) 1267 ನಿರ್ಬಂಧಗಳ ಸಮಿತಿಯಿಂದ ನಿಷೇಧಿಸಲ್ಪಟ್ಟ ಗುಂಪುಗಳು ಮತ್ತು ಅವರ ಪ್ರಾಕ್ಸಿಗಳು, ಅಂಗಸಂಸ್ಥೆಗಳು, ಪ್ರಾಯೋಜಕರು, ಬೆಂಬಲಿಗರು ಮತ್ತು ಹಣಕಾಸು ಒದಗಿಸುವವರು ಸೇರಿದಂತೆ ಎಲ್ಲಾ ಭಯೋತ್ಪಾದಕರು ಮತ್ತು ಭಯೋತ್ಪಾದಕ ಗುಂಪುಗಳ ವಿರುದ್ಧ ಸಂಘಟಿತ ಕ್ರಮ ಕೈಗೊಳ್ಳಬೇಕೆಂದು ಅವರು ಕರೆ ನೀಡಿದರು. ಭಯೋತ್ಪಾದಕ ಸುರಕ್ಷಿತ ತಾಣಗಳು ಮತ್ತು ಮೂಲಸೌಕರ್ಯಗಳನ್ನು ನಿರ್ಮೂಲನೆ ಮಾಡಲು ಹಾಗೂ ಭಯೋತ್ಪಾದಕ ಜಾಲಗಳು ಮತ್ತು ಅವರ ಹಣಕಾಸು ವ್ಯವಸ್ಥೆಯನ್ನು ಅಡ್ಡಿಪಡಿಸಲು ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಭಯೋತ್ಪಾದನೆಯ ಅಪರಾಧಿಗಳನ್ನು ತ್ವರಿತವಾಗಿ ನ್ಯಾಯದ ಕಟಕಟೆಗೆ ತರಲು ಎಲ್ಲಾ ದೇಶಗಳು ಕೆಲಸ ಮಾಡುವುದನ್ನು ಮುಂದುವರಿಸಬೇಕೆಂದು ಎರಡೂ ಕಡೆಯವರು ಕರೆ ನೀಡಿದರು. ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತ ವಿಶ್ವಸಂಸ್ಥೆಯ ಸಮಗ್ರ ಒಡಂಬಡಿಕೆ(ಸಿಸಿಐಟಿ) ಸ್ಥಾಪಿಸುವ ಭಾರತದ ಪ್ರಯತ್ನಗಳಿಗೆ ಪ್ರಧಾನಿ ಜೆಟ್ಟನ್ ಬೆಂಬಲ ವ್ಯಕ್ತಪಡಿಸಿದರು.
ಮಾನವರಹಿತ ವಿಮಾನ ವ್ಯವಸ್ಥೆಗಳು, ಭಯೋತ್ಪಾದಕರು ಮತ್ತು ಭಯೋತ್ಪಾದಕ ಘಟಕಗಳಿಂದ ವರ್ಚುವಲ್ ಸ್ವತ್ತುಗಳ ಬಳಕೆ ಮತ್ತು ಆಮೂಲಾಗ್ರೀಕರಣಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ದುರುಪಯೋಗದಂತಹ ಭಯೋತ್ಪಾದಕ ಉದ್ದೇಶಗಳಿಗಾಗಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯಿಂದ ಹೆಚ್ಚುತ್ತಿರುವ ಬೆದರಿಕೆಗಳನ್ನು ಇಬ್ಬರೂ ನಾಯಕರು ಕಳವಳದಿಂದ ಗಮನಿಸಿದರು.
ಭಯೋತ್ಪಾದನೆ ಎದುರಿಸಲು ಮತ್ತು ಈ ನಿಟ್ಟಿನಲ್ಲಿ ಜಾಗತಿಕ ಸಹಕಾರದ ಮಾರ್ಗಸೂಚಿ ಬಲಪಡಿಸಲು ಹಂಚಿಕೆಯ ಬದ್ಧತೆಯನ್ನು ಗುರುತಿಸಿದ ಇಬ್ಬರೂ ನಾಯಕರು, ಅಕ್ರಮ ಹಣ ವರ್ಗಾವಣೆ ಮತ್ತು ಎಲ್ಲಾ ದೇಶಗಳಿಂದ ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ಎದುರಿಸಲು ಅಂತಾರಾಷ್ಟ್ರೀಯ ಮಾನದಂಡಗಳನ್ನು ಎತ್ತಿಹಿಡಿಯಬೇಕು ಎಂದರು.
ಉದಯೋನ್ಮುಖ ತಂತ್ರಜ್ಞಾನಗಳು, ನಾವೀನ್ಯತೆ, ವಿಜ್ಞಾನ ಮತ್ತು ಶಿಕ್ಷಣ
ಸೆಮಿಕಂಡಕ್ಟರ್‌ಗಳು ಮತ್ತು ಸಂಬಂಧಿತ ಉದಯೋನ್ಮುಖ ತಂತ್ರಜ್ಞಾನದ ಪಾಲುದಾರಿಕೆ ಕುರಿತ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು, ಇದು ಹೂಡಿಕೆ, ಸಂಶೋಧನೆ ಮತ್ತು ಪ್ರತಿಭಾ ವಿನಿಮಯ ಕ್ಷೇತ್ರಗಳನ್ನು ಒಳಗೊಂಡಂತೆ ಸೆಮಿಕಂಡಕ್ಟರ್ ವಲಯದಲ್ಲಿ ಹೆಚ್ಚಿನ ಸಹಕಾರ ಹೊಂದವು ಮಾರ್ಗಸೂಚಿ ಒದಗಿಸುತ್ತದೆ.
ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ನಡೆಯುತ್ತಿರುವ ಸಹಕಾರವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು, ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳನ್ನು ಹೆಚ್ಚಿಸಬೇಕು. ಸರ್ಕಾರಗಳು, ವ್ಯವಹಾರಗಳು ಮತ್ತು ಜ್ಞಾನ ಸಂಸ್ಥೆಗಳ ಪರಿಣತಿಯನ್ನು ಸಂಪರ್ಕಿಸುವತ್ತ ಗಮನ ಹರಿಸಬೇಕು. ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕುರಿತಾದ ಜಂಟಿ ಕಾರ್ಯಪಡೆ ಈಗಾಗಲೇ ಸಕ್ರಿಯವಾಗಿದೆ, ಇದು ಜಂಟಿ ಆರ್ & ಡಿ ಯೋಜನೆಗಳು, ಪ್ರತಿಭೆ ಚಲನಶೀಲತೆ ಮತ್ತು ತಂತ್ರಜ್ಞಾನ ವರ್ಗಾವಣೆಯನ್ನು ನಿಯಮಿತ ದ್ವಿಪಕ್ಷೀಯ ಸಂವಾದಗಳ ಮೂಲಕ ಸುಗಮಗೊಳಿಸುತ್ತದೆ. ಕಳೆದ ವರ್ಷಗಳಲ್ಲಿ ಜಂಟಿಯಾಗಿ ಪ್ರಾರಂಭಿಸಲಾದ ಸುಮಾರು 50 ದೊಡ್ಡ ಸಂಶೋಧನೆ ಮತ್ತು ನಾವೀನ್ಯತೆ ಕಾರ್ಯಕ್ರಮಗಳನ್ನು ಇಬ್ಬರೂ ನಾಯಕರು ಪ್ರಸ್ತಾಪಿಸಿದರು. ಹಂಚಿಕೆಯ ಪರಿಹಾರಗಳೊಂದಿಗೆ ಸಾಮಾನ್ಯ ಸಾಮಾಜಿಕ ಸವಾಲುಗಳನ್ನು ಪರಿಹರಿಸುವ ಗುರಿ ಹೊಂದಿರುವ ಪ್ರಮುಖ ಸಕ್ರಿಯಗೊಳಿಸುವ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ನಿರಂತರ ಸಹಯೋಗದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ಡಚ್ ಸೆಮಿಕಾನ್ ಕಾಂಪಿಟೆನ್ಸ್ ಸೆಂಟರ್ ಅನ್ನು ಭಾರತೀಯ ಸೆಮಿಕಂಡಕ್ಟರ್ ಮಿಷನ್ (ಐಎಸ್ಎಂ)ಗೆ ಸಂಪರ್ಕಿಸುವ ಉಪಕ್ರಮವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಇದು ಸೆಮಿಕಂಡಕ್ಟರ್ ವಲಯವನ್ನು ನಿರ್ದಿಷ್ಟವಾಗಿ ಕೈಗಾರಿಕೆಗಳು, ಸ್ಟಾರ್ಟಪ್‌ಗಳು, ಸ್ಕೇಲ್-ಅಪ್‌ಗಳು, ಎಸ್ಎಂಇಗಳು ಮತ್ತು ಅವುಗಳ ಪೂರೈಕೆದಾರರನ್ನು ಸಹಯೋಗ, ತಂತ್ರಜ್ಞಾನ ಮತ್ತು ಪ್ರತಿಭೆ ಅಭಿವೃದ್ಧಿಯ ಮೂಲಕ ಬೆಂಬಲಿಸುವ ಮತ್ತು ಬಲಪಡಿಸುವ ಗುರಿ ಹೊಂದಿದೆ. ಇದಲ್ಲದೆ, ಇಬ್ಬರೂ ಪ್ರಧಾನ ಮಂತ್ರಿಗಳು ಇಂಡೋ-ಡಚ್ ಸೆಮಿಕಾನ್ ಆನ್‌ಲೈನ್ ಶಾಲೆ ಮತ್ತು ಮುಂದಿನ ಹಂತಕ್ಕೆ ಅದರ ಮುಂದುವರಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎನ್‌ಎಕ್ಸ್‌ಪಿ, ಎಎಸ್‌ಎಂಎಲ್, ಟಾಟಾ ಮತ್ತು ಸಿಜಿ ಸೆಮಿಯಿಂದ ಬೆಂಬಲಿತವಾದ ಸೆಮಿಕಂಡಕ್ಟರ್‌ಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳಲ್ಲಿ ಎಐ-ಚಾಲಿತ ಮತ್ತು ರೋಬೋಟಿಕ್ ತಲೆ ಮತ್ತು ಮುಖ ಕಸಿ(ಬ್ರೈನ್ ಬ್ರಿಡ್ಜ್)ಗಾಗಿ ಐಂಡ್‌ಹೋವನ್ ತಂತ್ರಜ್ಞಾನ ವಿಶ್ವವಿದ್ಯಾಲಯ ಮತ್ತು ಟ್ವೆಂಟೆ ವಿಶ್ವವಿದ್ಯಾಲಯ ಮತ್ತು 6 ಭಾರತೀಯ ಪ್ರಮುಖ ತಾಂತ್ರಿಕ ಸಂಸ್ಥೆಗಳು (ಐಐಎಸ್ಸಿ ಬೆಂಗಳೂರು, ಐಐಟಿ ಬಾಂಬೆ, ಐಐಟಿ ದೆಹಲಿ, ಐಐಟಿ ಗಾಂಧಿನಗರ, ಐಐಟಿ ಗುವಾಹತಿ ಮತ್ತು ಐಐಟಿ ಮದ್ರಾಸ್) ನಡುವಿನ ಸಹಕಾರದ ಜ್ಞಾಪಕ ಪತ್ರ ಅಳವಡಿಸಿಕೊಂಡಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಇದು ಎರಡೂ ಕಡೆಯಿಂದ ಶೈಕ್ಷಣಿಕ ಮತ್ತು ಉದ್ಯಮ ಭಾಗವಹಿಸುವಿಕೆಯೊಂದಿಗೆ ಸಂಶೋಧನೆ & ಅಭಿವೃದ್ಧಿ ಮತ್ತು ಪ್ರತಿಭಾ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.
ನಿರಂತರ ನಾವೀನ್ಯತೆಗಾಗಿ ನಿರ್ಣಾಯಕ ಖನಿಜಗಳ ಕಾರ್ಯತಂತ್ರ ಪ್ರಾಮುಖ್ಯತೆಯನ್ನು ಮತ್ತು ಚೇತರಿಕೆಯ ಮತ್ತು ಸುಸ್ಥಿರ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಜಾಗತಿಕ ಸಹಕಾರದ ಅಗತ್ಯವನ್ನು ಗುರುತಿಸಿದ ಇಬ್ಬರೂ ನಾಯಕರು, ಪರಿಶೋಧನೆ, ಸಂಶೋಧನೆ ಮತ್ತು ನಾವೀನ್ಯತೆ, ಮೌಲ್ಯ ಸರಪಳಿಗಳ ಏಕೀಕರಣ, ಪೂರೈಕೆ ಸರಪಳಿಯ ಚೇತರಿಕೆ, ಮರುಬಳಕೆ, ಪರಿಸರ, ಸಾಮಾಜಿಕ ಮತ್ತು ಆಡಳಿತ(ಇಎಸ್ ಜಿ) ಮಾನದಂಡಗಳು ಮತ್ತು ಸಂಬಂಧಿತ ಮೌಲ್ಯಮಾಪನಗಳು ಸೇರಿದಂತೆ ನಿರ್ಣಾಯಕ ಖನಿಜಗಳ ಮೌಲ್ಯ ಸರಪಳಿಯಲ್ಲಿ ಸಹಕಾರ ಬಲಪಡಿಸುವಲ್ಲಿ ತಮ್ಮ ಪರಸ್ಪರ ಆಸಕ್ತಿ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ, ನಿರ್ಣಾಯಕ ಖನಿಜಗಳ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು.
ಭಾರತದ ಶಿಕ್ಷಣ ಸಚಿವಾಲಯ ಮತ್ತು ನೆದರ್‌ಲ್ಯಾಂಡ್ಸ್‌ನ ಶಿಕ್ಷಣ, ಸಂಸ್ಕೃತಿ ಮತ್ತು ವಿಜ್ಞಾನ ಸಚಿವಾಲಯದ ನಡುವೆ ಉನ್ನತ ಶಿಕ್ಷಣದ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಎರಡೂ ದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಸಹಕಾರ ಉತ್ತೇಜಿಸಲು ಒಪ್ಪಿಗೆ ಸೂಚಿಸಿದರು.
ಡಚ್ ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ನಡುವೆ ನಡೆಯುತ್ತಿರುವ ಸಾಂಸ್ಥಿಕ ಸಹಕಾರದ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು, ಉದಾಹರಣೆಗೆ ಗ್ರೋನಿಂಗೆನ್ ವಿಶ್ವವಿದ್ಯಾಲಯ ಮತ್ತು ನಳಂದ ವಿಶ್ವವಿದ್ಯಾಲಯ; ಡೆಲ್ಫ್ಟ್ ತಂತ್ರಜ್ಞಾನ ವಿಶ್ವವಿದ್ಯಾಲಯ ಮತ್ತು ಮುಂಬೈ ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ; ಸರ್ವೇ ಆಫ್ ಇಂಡಿಯಾ ಮತ್ತು ಐಟಿಸಿ, ಟ್ವೆಂಟೆ ವಿಶ್ವವಿದ್ಯಾಲಯ; ವ್ರಿಜೆ ವಿಶ್ವವಿದ್ಯಾಲಯ ಆಮ್ ಸ್ಟರ್ ಡ್ಯಾಮ್ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ ರೂರ್ಕಿ ಮತ್ತು ಇನ್ನೂ ಹಲವು ಸೇರಿವೆ. ಇಂಡೋ-ಡಚ್ ಶಿಕ್ಷಣ ಮತ್ತು ಶೈಕ್ಷಣಿಕ ಜಾಲದಂತಹ ವೇದಿಕೆಗಳು ಶೈಕ್ಷಣಿಕ ಮತ್ತು ವೈಜ್ಞಾನಿಕ ಸಹಯೋಗವನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಬಹುದು ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು.
ಭಾರತ ಮತ್ತು ನೆದರ್ ಲ್ಯಾಂಡ್ಸ್ ನಡುವೆ ನಡೆಯುತ್ತಿರುವ ಬಾಹ್ಯಾಕಾಶ ಪಾಲುದಾರಿಕೆ ಮತ್ತು ಅದನ್ನು ತೀವ್ರಗೊಳಿಸುವ ಸಾಧ್ಯತೆಯನ್ನು ನಿರ್ದಿಷ್ಟವಾಗಿ ಹವಾಮಾನ ಬದಲಾವಣೆ, ನೀರಿನ ಸಮಸ್ಯೆಗಳು, ಆಹಾರ ಭದ್ರತೆ ಹಾಗೂ ಗಾಳಿಯ ಗುಣಮಟ್ಟ ಸೇರಿದಂತೆ ಸಾಮಾಜಿಕ ಸವಾಲುಗಳನ್ನು ಪರಿಹರಿಸುವಲ್ಲಿ ಬಾಹ್ಯಾಕಾಶ ಆಧಾರಿತ ಅನ್ವಯಿಕೆಗಳನ್ನು ಬಳಸುವ ಸಾಧ್ಯತೆಯನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು.
ಇಂಧನ ಭದ್ರತೆ ಮತ್ತು ಪರಿವರ್ತನೆ / ಹಸಿರು(ಮರುಬಳಕೆ) ಆರ್ಥಿಕತೆ
ಜೈವಿಕ ಇಂಧನಗಳು ಮತ್ತು ಜೈವಿಕ ರಾಸಾಯನಿಕಗಳಲ್ಲಿ ಸಕ್ರಿಯ ದ್ವಿಪಕ್ಷೀಯ ಸಹಕಾರವನ್ನು ಗಮನಿಸಿದ ಪ್ರಧಾನಿ ಮೋದಿ, ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಆರಂಭಿಸಲಾದ ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ ನೆದರ್ ಲ್ಯಾಂಡ್ಸ್ ಸೇರ್ಪಡೆಗೊಳ್ಳುವುದನ್ನು ಸ್ವಾಗತಿಸಿದರು. ಜೈವಿಕ ಆರ್ಥಿಕತೆಯ ಮೇಲೆ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು. ಭಾರತ ಮತ್ತು ನೆದರ್ ಲ್ಯಾಂಡ್ಸ್ ಜಂಟಿಯಾಗಿ ಅಧ್ಯಕ್ಷತೆ ವಹಿಸಿರುವ ಜೈವಿಕ ಸಂಸ್ಕರಣಾಗಾರಗಳ ಮೇಲಿನ ಮಿಷನ್ ಇನ್ನೋವೇಶನ್ ಕಾರ್ಯಕ್ರಮದ ಯಶಸ್ಸನ್ನು ಸ್ವಾಗತಿಸಿದರು.
'ತ್ಯಾಜ್ಯದಿಂದ ಮೌಲ್ಯಕ್ಕೆ' ನಡೆಯುತ್ತಿರುವ ಸಹಕಾರವನ್ನು ಒಪ್ಪಿಕೊಂಡ ನಾಯಕರು, ಡಚ್ ರಾಷ್ಟ್ರೀಯ ಹಸಿರು ಆರ್ಥಿಕ ಕಾರ್ಯಕ್ರಮ 2023-2030ರ 2025ರಲ್ಲಿ ಆಗಿರುವ ಪರಿಷ್ಕರಣೆ ಮತ್ತು ವಿಶ್ವ ಹಸಿರು ಆರ್ಥಿಕ ವೇದಿಕೆ (ಡಬ್ಲ್ಯುಸಿಇಎಫ್) 2026ರ ಭಾರತೀಯ ಅಧ್ಯಕ್ಷತೆಯು ಹೊಸ ಕ್ಷೇತ್ರಗಳಲ್ಲಿ ಪಾಲುದಾರಿಕೆಯ ವಿಸ್ತರಣೆಗೆ ಅವಕಾಶ ಒದಗಿಸುತ್ತದೆ ಎಂದು ಗಮನಿಸಿದರು. ಇದರಲ್ಲಿ ಹಸಿರು ಕೈಗಾರಿಕೆ, ಸುಸ್ಥಿರ ಮತ್ತು ಹವಾಮಾನ ಚೇತರಿಕೆಯ ನಗರ ವ್ಯವಸ್ಥೆಗಳಿಗೆ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಪೈಲಟ್ ಮತ್ತು ಅಳೆಯಬಹುದಾದ ಯೋಜನೆಗಳಲ್ಲಿ ತಂತ್ರಜ್ಞಾನ ನಿಯೋಜನೆ, ನಾವೀನ್ಯತೆಯ ಪರಿಚಯ ಮತ್ತು ವ್ಯಾಪಾರ ಮತ್ತು ಹೂಡಿಕೆ ಉತ್ತೇಜನದ ಅವಕಾಶಗಳು ಸೇರಿವೆ. ಉದಾಹರಣೆಗೆ ಡಚ್ ಕಂಪನಿಗಳನ್ನು ಸಂಪನ್ಮೂಲ ದಕ್ಷತೆ ಮತ್ತು ಹಸಿರು ಆರ್ಥಿಕ ಉದ್ಯಮ ಒಕ್ಕೂಟ (ಆರ್‌ಇ ಸಿಇಐಸಿ)ಗೆ ಸೇರಲು ಆಹ್ವಾನಿಸಲಾದ ಬಿ2ಬಿ ಪಾಲುದಾರಿಕೆಗಳ ಮೂಲಕ. ಸುಸ್ಥಿರ ಚಲನಶೀಲತೆಯ ಕ್ಷೇತ್ರದಲ್ಲಿ ಸ್ಮಾರ್ಟ್ ಮತ್ತು ಅಂತರ್-ಕಾರ್ಯಾಚರಣೆಯ ಚಾರ್ಜಿಂಗ್ ಮೂಲಸೌಕರ್ಯ, ಬ್ಯಾಟರಿ ತಂತ್ರಜ್ಞಾನ ಮತ್ತು ಸಿಸ್ಟಮ್ ಏಕೀಕರಣ, ಪ್ರಮಾಣೀಕರಣ ಮತ್ತು ಮುಕ್ತ ಪ್ರೋಟೊಕಾಲ್‌ಗಳು, ಭಾರಿ ಮತ್ತು ಮಧ್ಯಮ ಭಾರಿ ಗಾತ್ರದ ಶೂನ್ಯ ಇಂಗಾಲ ಹೊರಸೂಸುವಿಕೆ ವಾಹನಗಳು, ಸ್ಮಾರ್ಟ್ ಅರ್ಬನ್ ಮೊಬಿಲಿಟಿ ವ್ಯವಸ್ಥೆಗಳು ಮತ್ತು ಬಹುಮಾದರಿಗಳ ಏಕೀಕರಣ ಮತ್ತು ಪರ್ಯಾಯ ಇಂಧನಗಳು ಮತ್ತು ಸಕ್ರಿಯ ಚಲನಶೀಲತೆಯಂತಹ ಕ್ಷೇತ್ರಗಳಲ್ಲಿ ಸಹಕಾರ ಆಳಗೊಳಿಸಬಹುದು.
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಮತ್ತು ನೆದರ್‌ಲ್ಯಾಂಡ್ಸ್ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ನವೀಕರಿಸಬಹುದಾದ ಇಂಧನದ ತಿಳಿವಳಿಕೆ ಒಪ್ಪಂದದಡಿ ಜಂಟಿ ಕಾರ್ಯಪಡೆ ಸ್ಥಾಪಿಸುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಇದು ನವೀಕರಿಸಬಹುದಾದ ಇಂಧನ ವಲಯದಲ್ಲಿ ನವೀನ ಸೌರಶಕ್ತಿ, ಹಸಿರು ಹೈಡ್ರೋಜನ್, ಸಂಗ್ರಹಣೆ ಮತ್ತು ಇಂಧನ ಪರಿವರ್ತನೆಗೆ ಅನುಕೂಲವಾಗುವಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಗಳು ಸೇರಿದಂತೆ ಸಹಕಾರದ ವೈವಿಧ್ಯಮಯ ಕಾರ್ಯಸೂಚಿಗೆ ಸಾಕಷ್ಟು ಅವಕಾಶ ಒದಗಿಸುತ್ತದೆ.
ನವೀಕರಿಸಬಹುದಾದ ಇಂಧನದ ಮೇಲಿನ ಸಹಕಾರ ಮತ್ತು ದ್ವಿಮುಖ ಹೂಡಿಕೆಗಳನ್ನು ಮತ್ತಷ್ಟು ಬಲಪಡಿಸಲು, ನಾಯಕರು ಹಸಿರು ಹೈಡ್ರೋಜನ್ ಅಭಿವೃದ್ಧಿ ಕುರಿತು ಮಹತ್ವಾಕಾಂಕ್ಷೆಯ ಭಾರತ-ನೆದರ್‌ಲ್ಯಾಂಡ್ಸ್ ಮಾರ್ಗಸೂಚಿ ಪ್ರಾರಂಭಿಸಿದರು. ಹಸಿರು ಹೈಡ್ರೋಜನ್ ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಭಾರತದ ಮಹತ್ವಾಕಾಂಕ್ಷೆ, ವಿಶಾಲ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕ ಅನುಕೂಲಗಳನ್ನು ಬೆಂಬಲಿಸಲು ಮಾರ್ಗಸೂಚಿ ಸಹಾಯ ಮಾಡುತ್ತದೆ. ಎರಡೂ ದೇಶಗಳಲ್ಲಿ ಸುಸ್ಥಿರ ಇಂಧನ ಮೂಲವಾಗಿ ಹಸಿರು ಹೈಡ್ರೋಜನ್ ಅನ್ನು ತ್ವರಿತವಾಗಿ ಅಳವಡಿಸಿಕೊಳ್ಳಲು ಕೊಡುಗೆ ನೀಡುತ್ತದೆ ಎಂದು ನಾಯಕರು ಒಪ್ಪಿಕೊಂಡರು.
ಇದರ ಜತೆಗೆ, ನೀತಿ ಆಯೋಗ ಮತ್ತು ನೆದರ್‌ಲ್ಯಾಂಡ್ಸ್ ನಡುವಿನ ಇಂಧನ ಪರಿವರ್ತನೆಯ ಸಾಮರ್ಥ್ಯ ನಿರ್ಮಾಣ ಕುರಿತ ಜಂಟಿ ಹೇಳಿಕೆಯ ಪರಿಷ್ಕರಣೆವು ಇಂಧನ ಭದ್ರತೆ ಮತ್ತು ಪರಿವರ್ತನೆ ಕ್ಷೇತ್ರಗಳಲ್ಲಿ ನಿರಂತರ ಸಹಯೋಗವನ್ನು ಖಚಿತಪಡಿಸುತ್ತದೆ.
ಶೈಕ್ಷಣಿಕ ಸಹಕಾರ ಬಲಪಡಿಸಲು ಗ್ರೊನಿಂಗೆನ್ ವಿಶ್ವವಿದ್ಯಾಲಯ (ಆರ್ ಯು ಜಿ) ಮತ್ತು 19 ಭಾರತೀಯ ತಂತ್ರಜ್ಞಾನ ಸಂಸ್ಥೆಗಳು(ಐಐಟಿಗಳು) ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಆರ್ ಯುಜಿ ನಡುವೆ ಹೈಡ್ರೋಜನ್ ಕುರಿತು ಪಿಎಚ್‌ಡಿ ಫೆಲೋಶಿಪ್ ಕಾರ್ಯಕ್ರಮ ಆರಂಭಿಸುವುದನ್ನು ಅವರು ಸ್ವಾಗತಿಸಿದರು.
ನೀರಿನ(ಜಲ) ನಿರ್ವಹಣೆ
ಭಾರತದ ನೀರು ಸಂಬಂಧಿತ ಅವಶ್ಯಕತೆಗಳು ಮತ್ತು ನೆದರ್‌ಲ್ಯಾಂಡ್ಸ್‌ನ ಪರಿಣತಿ ಮತ್ತು ಅನುಭವ ಬಳಸಿಕೊಂಡು ನೀರಿನ ಕಾರ್ಯತಂತ್ರ ಪಾಲುದಾರಿಕೆಯ ಅಡಿಯಲ್ಲಿ ಸಾಧಿಸಿದ ಪ್ರಗತಿಯನ್ನು ಇಬ್ಬರೂ ನಾಯಕರು ಗಮನಿಸಿದರು. ನಮಾಮಿ ಗಂಗೆ ಮಿಷನ್‌ನಲ್ಲಿ ಪಾಲುದಾರಿಕೆ, ನಗರ ನದಿ ನಿರ್ವಹಣಾ ಯೋಜನೆಗಳ ಮೂಲಕ ಹವಾಮಾನ ಚೇತರಿಕೆಗಾಗಿ ನಗರ ನೀರಿನ ನಿರ್ವಹಣೆ 'ಹತೋಟಿಯಾಗಿ ನೀರು', ಜಲಾನಯನ ಪ್ರದೇಶಗಳ ನಿರ್ವಹಣೆ, ನೀರಿನ ಗುಣಮಟ್ಟ ನಿರ್ವಹಣೆ, ತ್ಯಾಜ್ಯ ನೀರಿನ ಮರುಬಳಕೆ ಮತ್ತು ಹೊಸ ನೀರಿನ ತಂತ್ರಜ್ಞಾನಗಳ ಪರಿಚಯ ಸೇರಿದಂತೆ ನೀರು ಮತ್ತು ನದಿ ನಿರ್ವಹಣೆ ಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿರುವ ಜಂಟಿ ಪ್ರಯತ್ನಗಳನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಶ್ಲಾಘಿಸಿದರು. ಸುರಕ್ಷಿತವಾಗಿ ನಿರ್ವಹಿಸಲಾದ ನೈರ್ಮಲ್ಯ ಮತ್ತು ಶುದ್ಧ ನೀರಿಗೆ ಸಮಗ್ರ ಪ್ರವೇಶದ ಮಹತ್ವವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು. ಭಾರತದ ಸ್ವಚ್ಛ ಭಾರತ ಮಿಷನ್ ಗುರಿಗಳೊಂದಿಗೆ ಹೊಂದಿಕೆಯಾಗುವ ಅಂತಾರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳಿಗೆ ಸುಸ್ಥಿರ ಹಣಕಾಸು ಒದಗಿಸುವಲ್ಲಿ ನೆದರ್‌ಲ್ಯಾಂಡ್ಸ್‌ನ ಕೊಡುಗೆಯನ್ನು ಒಪ್ಪಿಕೊಂಡರು.
ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯಲ್ಲಿ ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದ ಆಶ್ರಯದಲ್ಲಿ ನೆದರ್‌ಲ್ಯಾಂಡ್ಸ್ ಸರ್ಕಾರದ ಮೂಲಸೌಕರ್ಯ ಮತ್ತು ನೀರು ನಿರ್ವಹಣಾ ಸಚಿವಾಲಯದ ಸಹಯೋಗದೊಂದಿಗೆ ನೀರಿಗೆ ಸಂಬಂಧಿಸಿದ ಶ್ರೇಷ್ಠತಾ ಕೇಂದ್ರ ಸ್ಥಾಪಿಸುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ನಡೆಯುತ್ತಿರುವ ವಿವಿಧ ಜಂಟಿ ಕಾರ್ಯಕ್ರಮಗಳ ಪ್ರಗತಿಯನ್ನು ನಾಯಕರು ಗಮನಿಸಿದರು.
ಗುಜರಾತ್‌ನ ಕಲ್ಪಸರ್ ಯೋಜನೆಗೆ ಸಹಕಾರ ಮತ್ತಷ್ಟು ಹೆಚ್ಚಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು, ಆ ಯೋಜನೆಯಲ್ಲಿ ಡಚ್ ಪರಿಣತಿ ಮತ್ತು ತಾಂತ್ರಿಕ ನೆರವು ನೀರಿನ ಮೇಲಿನ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಕಾರಣವಾಗಿದೆ.
ಭಾರತ ನೇತೃತ್ವದ ಜಾಗತಿಕ ವಿಪತ್ತು ಚೇತರಿಕೆ ಮೂಲಸೌಕರ್ಯ ಒಕ್ಕೂಟ(ಸಿಡಿಆರ್ ಐ)ದ ನಗರ ಜಲ ಮೂಲಸೌಕರ್ಯ ಚೇತರಿಕೆ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೆ ಸಾಧಿಸಿದ ಪ್ರಗತಿಯನ್ನು ನಾಯಕರು ಗಮನಿಸಿದರು. ಇದರ ಮೂಲಕ ನೆದರ್ ಲ್ಯಾಂಡ್ಸ್ ತನ್ನ ಸದಸ್ಯತ್ವದ ಭಾಗವಾಗಿ ತನ್ನ ಪರಿಣತಿ ಹಂಚಿಕೊಳ್ಳುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ) ಹೊಂದಿರುವ ಭಾರತೀಯ ನಗರಗಳಲ್ಲಿ ಮತ್ತು ಜಾಗತಿಕವಾಗಿ 50+ ಸಿಡಿಆರ್ ಐ ಸದಸ್ಯ ರಾಷ್ಟ್ರಗಳ ಇತರೆ ದೇಶಗಳಲ್ಲಿ ಅಭಿವೃದ್ಧಿಪಡಿಸಿದ ತರಬೇತಿ ಕಾರ್ಯಕ್ರಮದ ಅನುಷ್ಠಾನವನ್ನು ಇಬ್ಬರೂ ನಾಯಕರು ಎದುರು ನೋಡುತ್ತಿದ್ದಾರೆ.
ಕಡಲು ಅಭಿವೃದ್ಧಿ
ಇತ್ತೀಚೆಗೆ ನವೀಕರಿಸಲಾದ ಕಡಲ ಸಹಕಾರದ ತಿಳಿವಳಿಕೆ ಒಪ್ಪಂದವನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಗಮನಿಸಿದರು. ಸುರಕ್ಷಿತ, ಸುಸ್ಥಿರ ಮತ್ತು ಭದ್ರತೆಯ ಕಡಲ ವಲಯದ ಕಡೆಗೆ ಸಾಗುವನಿರಂತರ ಸಹಯೋಗದ ಮಹತ್ವವನ್ನು ಒತ್ತಿ ಹೇಳಿದರು. ಇದು ಭಾರತ ಮತ್ತು ನೆದರ್ ಲ್ಯಾಂಡ್ಸ್ ನಡುವಿನ ಕಾರ್ಯತಂತ್ರ 'ಹಸಿರು ಮತ್ತು ಡಿಜಿಟಲ್ ಸಮುದ್ರ ಕಾರಿಡಾರ್' ಅಭಿವೃದ್ಧಿಯನ್ನು ಬೆಂಬಲಿಸುತ್ತದೆ, ಇದನ್ನು 2025 ಅಕ್ಟೋಬರ್ ನಲ್ಲಿ ಸಹಿ ಮಾಡಿದ ಉದ್ದೇಶ ಪತ್ರದಲ್ಲಿ ವಿವರಿಸಲಾಗಿದೆ. ಈ ಸಂದರ್ಭದಲ್ಲಿ, ಬಂದರುಗಳು ಮತ್ತು ಒಳನಾಡಿನ ಜಲಮಾರ್ಗಗಳ ಸ್ಮಾರ್ಟ್ ಮತ್ತು ಸುಸ್ಥಿರ ಅಭಿವೃದ್ಧಿ, ಪೂರೈಕೆ ಸರಪಳಿ ಹೆಚ್ಚಳ, ಹಸಿರು ಬಂದರುಗಳು ಮತ್ತು ಸಾಗಣೆ ಕ್ಷೇತ್ರಗಳಲ್ಲಿ ತಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸಲು ಮತ್ತು ವಿಸ್ತರಿಸಲು ಅವರು ಒಪ್ಪಿಕೊಂಡರು. ಮುಂದಿನ ಹಂತವಾಗಿ, ಭಾರತ ಮತ್ತು ನೆದರ್ ಲ್ಯಾಂಡ್ಸ್ ನಡುವೆ ಸುಸ್ಥಿರ ಪರಿಸರ, ಡಿಜಿಟಲ್ ಸಂಯೋಜಿತ ಮತ್ತು ಆರ್ಥಿಕವಾಗಿ ಪರಿಣಾಮಕಾರಿ ಭವಿಷ್ಯದ ಸಿದ್ಧ ಕಡಲ ಕಾರಿಡಾರ್ ಕಡೆಗೆ ಕೆಲಸ ಮಾಡುವ ಗುರಿ ಹೊಂದಿರುವ ಸಮಗ್ರ 'ಹಸಿರು ಮತ್ತು ಡಿಜಿಟಲ್ ಸಮುದ್ರ ಕಾರಿಡಾರ್‌ನಲ್ಲಿ ಕಾರ್ಯತಂತ್ರ ಮಾರ್ಗಸೂಚಿ' ಅಭಿವೃದ್ಧಿಪಡಿಸುವುದನ್ನು ಅನ್ವೇಷಿಸಲು ಇಬ್ಬರೂ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು.
ಜಾಗತಿಕ ಮತ್ತು ಪ್ರಾದೇಶಿಕ ಕಡಲ ಭದ್ರತೆಯಲ್ಲಿ, ವಿಶೇಷವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಹಂಚಿಕೆಯ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಬಂದರುಗಳು ಮತ್ತು ಒಳನಾಡಿನ ಜಲಮಾರ್ಗಗಳಲ್ಲಿ ಸೈಬರ್ ಚೇತರಿಕೆ ಸೇರಿದಂತೆ ನಿರ್ಣಾಯಕ ಮೂಲಸೌಕರ್ಯ ರಕ್ಷಿಸುವ ಮತ್ತು ವೈವಿಧ್ಯಮಯ ಮತ್ತು ಚೇತರಿಕೆಯ ಪೂರೈಕೆ ಸರಪಳಿಗಳನ್ನು (ನಿರ್ಣಾಯಕ ಕಚ್ಚಾ ವಸ್ತುಗಳು, ಔಷಧ ಮತ್ತು ಆಹಾರ ಸೇರಿದಂತೆ) ಉತ್ತೇಜಿಸುವ ಕ್ಷೇತ್ರದಲ್ಲಿ ಸಂಬಂಧಿತ ಸರ್ಕಾರಿ ಸಂಸ್ಥೆಗಳು, ವ್ಯವಹಾರಗಳು ಮತ್ತು ಜ್ಞಾನ ಸಂಸ್ಥೆಗಳ ನಡುವೆ ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳಲು ಇಬ್ಬರೂ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು.
ಆರೋಗ್ಯ ವಲಯ
ಸಾಂಕ್ರಾಮಿಕ ರೋಗಗಳು ಮತ್ತು ಸೂಕ್ಷ್ಮಜೀವಿ ಪ್ರತಿರೋಧದಂತಹ ಜಾಗತಿಕ ಸಾರ್ವಜನಿಕ ಆರೋಗ್ಯ ಅಪಾಯಗಳನ್ನು ಪರಿಹರಿಸುವಲ್ಲಿ ಹಾಗೂ ಅಸಾಂಕ್ರಾಮಿಕ ರೋಗಗಳ ಹೆಚ್ಚುತ್ತಿರುವ ಪ್ರಭಾವವನ್ನು ಪರಿಹರಿಸುವಲ್ಲಿ ಆರೋಗ್ಯದ ಮೇಲೆ ದ್ವಿಪಕ್ಷೀಯ ಸಹಕಾರ ಹೆಚ್ಚಿಸುವ ಮಹತ್ವವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು. ಡಿಜಿಟಲ್ ಆರೋಗ್ಯ (ಎಐ ಮತ್ತು ಸೈಬರ್ ಭದ್ರತೆ ಸೇರಿದಂತೆ) ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಮತ್ತಷ್ಟು ಸಹಕಾರವನ್ನು ಪ್ರೋತ್ಸಾಹಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ಮೇಲಿನ ತಿಳಿವಳಿಕೆ ಒಪ್ಪಂದದ ನವೀಕರಣ, ಮಹಿಳೆಯರ ಆರೋಗ್ಯ, ಹವಾಮಾನ ಮತ್ತು ಆರೋಗ್ಯ ಸಿದ್ಧತೆಗಾಗಿ ಸಾಮರ್ಥ್ಯ ಅಭಿವೃದ್ಧಿ ಮತ್ತು ಎರಡೂ ದೇಶಗಳಲ್ಲಿ ಸುಸ್ಥಿರ ಆರೋಗ್ಯ ವ್ಯವಸ್ಥೆಗಳ ಕುರಿತು ಜ್ಞಾನ ವಿನಿಮಯದಂತಹ ಕ್ಷೇತ್ರಗಳಲ್ಲಿ ಹೊಸ ಸಹಕಾರ ಉಪಕ್ರಮಗಳ ಪರಿಗಣನೆಯನ್ನು ಅವರು ಸ್ವಾಗತಿಸಿದರು. ಈ ನವೀಕರಿಸಿದ ತಿಳಿವಳಿಕೆ ಒಪ್ಪಂದದ ಹಿನ್ನೆಲೆಯಲ್ಲಿ. ಸಾಂಕ್ರಾಮಿಕ ರೋಗಗಳು, ವೆಕ್ಟರ್-ಹರಡುವ ರೋಗಗಳು, ಒಂದು ಆರೋಗ್ಯ ಮತ್ತು ರೋಗ ಕಣ್ಗಾವಲು ಮುಂತಾದ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ಡಚ್ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂಸ್ಥೆ(ಆರ್‌ಐವಿಎಂ) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ನಡುವೆ ಇತ್ತೀಚೆಗೆ ಸಹಿ ಹಾಕಲಾದ ಉದ್ದೇಶ ಪತ್ರವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.
ಭಾರತ-ನೆದರ್ ಲ್ಯಾಂಡ್ಸ್ ಕಾರ್ಯತಂತ್ರ ಪಾಲುದಾರಿಕೆಯ ಮಾರ್ಗಸೂಚಿಯೊಳಗೆ, ಉತ್ತಮ ಗುಣಮಟ್ಟದ, ಪ್ರವೇಶಿಸಬಹುದಾದ, ಸುರಕ್ಷಿತ ಮತ್ತು ಸುಸ್ಥಿರ ಆರೋಗ್ಯ ರಕ್ಷಣೆ ಖಚಿತಪಡಿಸಿಕೊಳ್ಳಲು ಔಷಧಗಳು ಮತ್ತು ವೈದ್ಯಕೀಯ ಸಾಧನಗಳಲ್ಲಿನ ಸಹಯೋಗಕ್ಕೆ ಹೆಚ್ಚಿನ ಗಮನ ನೀಡಲಾಗುವುದು ಎಂದು ಇಬ್ಬರೂ ನಾಯಕರು ಒತ್ತಿ ಹೇಳಿದರು. 2026ರಲ್ಲಿ ಹೊಸದಾಗಿ ಸಹಿ ಹಾಕಲಾದ ತಿಳಿವಳಿಕೆ ಒಪ್ಪಂದದಡಿ, ಮೊದಲ ಜಂಟಿ ಕಾರ್ಯಪಡೆ ಸಭೆ ಕರೆಯಲಾಗುವುದು, ಇದು ತಿಳಿವಳಿಕೆ ಒಪ್ಪಂದ ಮತ್ತು ಅದರ ಕಾರ್ಯಯೋಜನೆಯ ಅನುಷ್ಠಾನ ಮತ್ತು ಮತ್ತಷ್ಟು ಅಭಿವೃದ್ಧಿಯನ್ನು ಚರ್ಚಿಸಲು ಮತ್ತು ಶೈಕ್ಷಣಿಕ ಸಹಕಾರ, ನಿಯಂತ್ರಕ ಸಹಕಾರ, ವ್ಯವಹಾರ ತೊಡಗಿಸಿಕೊಳ್ಳುವಿಕೆ ಮತ್ತು ಮಾರುಕಟ್ಟೆ ಪ್ರವೇಶ ಕುರಿತ ಜ್ಞಾನ ವಿನಿಮಯ ಸೇರಿದಂತೆ ಸಹಯೋಗಕ್ಕಾಗಿ ಪ್ರಮುಖ ಅವಕಾಶಗಳನ್ನು ಗುರುತಿಸಲು ಉದ್ದೇಶಿಸಲಾಗಿದೆ.
ಕೃಷಿ ಮತ್ತು ಆಹಾರ ವ್ಯವಸ್ಥೆಗಳು
ಕೃಷಿ, ಆಹಾರ ವ್ಯವಸ್ಥೆಗಳು ಮತ್ತು ಜವಾಬ್ದಾರಿಯುತ ಮೌಲ್ಯ ಸರಪಳಿಗಳಲ್ಲಿ ನಡೆಯುತ್ತಿರುವ ಭಾರತ-ನೆದರ್‌ಲ್ಯಾಂಡ್ಸ್ ಸಹಯೋಗವನ್ನು ಇಬ್ಬರೂ ನಾಯಕರು ತೃಪ್ತಿಯಿಂದ ಗಮನಿಸಿದರು, ಇದರಲ್ಲಿ ಕೃಷಿಯ ಜಂಟಿ ಕಾರ್ಯಪಡೆ ಮೂಲಕ ಜ್ಞಾನ ಮತ್ತು ಅನುಭವ ಹಂಚಿಕೆಯ ವಿನಿಮಯವೂ ಸೇರಿದೆ. ಸಂರಕ್ಷಿತ ಕೃಷಿ, ಆಹಾರ ಸಂಸ್ಕರಣೆ, ಡೇರಿ ಮತ್ತು ಕೋಳಿ ಕ್ಷೇತ್ರದಲ್ಲಿ ಭಾರತದಲ್ಲಿ ಡಚ್ ಕಂಪನಿಗಳ ಹೆಚ್ಚುತ್ತಿರುವ ಉಪಸ್ಥಿತಿಯನ್ನು ನಾಯಕರು ಸ್ವಾಗತಿಸಿದರು. ಕೃಷಿ ತಂತ್ರಜ್ಞಾನ ಸೇರಿದಂತೆ ಕೃಷಿ ವಲಯಕ್ಕೆ ಸಂಬಂಧಿಸಿದ ಭಾರತೀಯ ಮತ್ತು ಡಚ್ ಕಂಪನಿಗಳ ನಡುವಿನ ಸಹಕಾರದ ಅವಕಾಶಗಳನ್ನು ಬಳಸಿಕೊಳ್ಳುವ ಮಹತ್ವವನ್ನು ನಾಯಕರು ಒತ್ತಿ ಹೇಳಿದರು.
ಡಚ್ ಪರಿಣತಿಯೊಂದಿಗೆ ಭಾರತದಲ್ಲಿ ಕೃಷಿ ಸಂಬಂಧಿತ ವಲಯಗಳಲ್ಲಿ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಆಗಿರುವ ಪ್ರಗತಿಯನ್ನು ನಾಯಕರು ಪರಿಶೀಲಿಸಿದರು. ಈ ಕೇಂದ್ರಗಳು ಹೈಟೆಕ್ ಹಸಿರುಮನೆ ಕೃಷಿ ಉತ್ಪಾದನೆಗಳಲ್ಲಿ ತಂತ್ರಜ್ಞಾನ ಉತ್ತೇಜಿಸುತ್ತಿವೆ, ಸಣ್ಣ ಹಿಡುವಳಿದಾರರಿಗೆ ಸುಧಾರಿತ ಕೃಷಿ ಒಳಹರಿವು ಮತ್ತು ಸಾಮರ್ಥ್ಯ ವೃದ್ಧಿ ಮಾಡುತ್ತಿವೆ, ಇದು ಹೆಚ್ಚು ಸುಸ್ಥಿರ ಮತ್ತು ಉತ್ತಮ ಗುಣಮಟ್ಟ/ಉತ್ಪಾದಕತೆ ಮತ್ತು ಕಡಿಮೆ ನೀರು ಮತ್ತು ಕೃಷಿ-ರಾಸಾಯನಿಕ ಬಳಕೆಗೆ ಕಾರಣವಾಗುತ್ತಿದೆ.
ನಿರಂತರ ಸಹಯೋಗ ಮತ್ತು ಜ್ಞಾನ ವಿನಿಮಯದ ಮೂಲಕ ಕೇಂದ್ರಗಳ ಪರಿಣಾಮ ಮತ್ತು ಪರಿಣಾಮಕಾರಿತ್ವವನ್ನು ಮತ್ತಷ್ಟು ಹೆಚ್ಚಿಸುವ ಬದ್ಧತೆಯನ್ನು ನಾಯಕರು ಒತ್ತಿ ಹೇಳಿದರು. ಆಹಾರ ವ್ಯವಸ್ಥೆಗಳ ವಿವಿಧ ಅಂಶಗಳಲ್ಲಿ ವೃತ್ತಿಪರ ಶಿಕ್ಷಣದಲ್ಲಿ ವಿಸ್ತೃತ ಸಹಯೋಗವನ್ನು ಅನ್ವೇಷಿಸಲು ಸಹ ಅವರು ಒಪ್ಪಿಕೊಂಡರು.
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಮತ್ತು ನೆದರ್ ಲ್ಯಾಂಡ್ಸ್ ನ ಕೃಷಿ, ಮೀನುಗಾರಿಕೆ, ಆಹಾರ ಭದ್ರತೆ ಮತ್ತು ಪ್ರಕೃತಿ ಸಚಿವಾಲಯದ ನಡುವೆ ಜಂಟಿ ಘೋಷಣೆಗೆ ಸಹಿ ಹಾಕುವುದನ್ನು ಹಾಗೂ ಬೆಂಗಳೂರಿನ ಪಶುಸಂಗೋಪನೆ ಶ್ರೇಷ್ಠತಾ ಕೇಂದ್ರ (ಸಿಇಎಹೆಚ್)ದ ಡೇರಿಯಲ್ಲಿ ತರಬೇತಿಗಾಗಿ ಇಂಡೋ-ಡಚ್ ಶ್ರೇಷ್ಠತಾ ಕೇಂದ್ರ ಸ್ಥಾಪಿಸುವುದನ್ನು ನಾಯಕರು ಸ್ವಾಗತಿಸಿದರು. ಆಹಾರ ಸಂಸ್ಕರಣೆ ಸೇರಿದಂತೆ ಡೇರಿ ಮತ್ತು ಇತರೆ ಸಂಬಂಧಿತ ಕೃಷಿ ಕ್ಷೇತ್ರಗಳಲ್ಲಿ ಸಹಕಾರ ಅನ್ವೇಷಿಸುವುದನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ಭಾರತೀಯ ತೋಟಗಾರಿಕೆ ಕ್ಷೇತ್ರದ ಜಾಗತಿಕ ಸ್ಪರ್ಧಾತ್ಮಕತೆಗಾಗಿ ಹೆಚ್ಚಿನ ಮೌಲ್ಯದ ಆರೋಗ್ಯಕರ ತೋಟಗಾರಿಕೆ ಮತ್ತು ಹಣ್ಣಿನ ಬೆಳೆಗಳನ್ನು ಉತ್ತೇಜಿಸಲು ಭಾರತದ ಪ್ರಸ್ತುತ ಸ್ವಚ್ಛ ಸಸ್ಯ ಕಾರ್ಯಕ್ರಮದ ಅಡಿ, ಸ್ವಚ್ಛ ಸಸ್ಯ ಕೇಂದ್ರಗಳನ್ನು(ಸಿಪಿಸಿಗಳು) ಸ್ಥಾಪಿಸಲು ತೋಟಗಾರಿಕೆಯಲ್ಲಿ ಭಾರತೀಯ-ಡಚ್ ಸಹಕಾರ ಹೆಚ್ಚಿಸಲು ಕೈಗೊಳ್ಳಲಾಗುತ್ತಿರುವ ಕೆಲಸವನ್ನು ನಾಯಕರು ಗಮನಿಸಿದರು. ಈ ನಿಟ್ಟಿನಲ್ಲಿ, ನಕ್ಟುಯಿನ್‌ಬೌ ಮತ್ತು ಭಾರತ ಸರ್ಕಾರದ ಕೃಷಿ ಮತ್ತು ಕೃಷಿಕರ ಕಲ್ಯಾಣ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ನಡುವಿನ ಸಾಮರ್ಥ್ಯ ವೃದ್ಧಿ ಮತ್ತು ಬೆಂಬಲದ ತಿಳಿವಳಿಕೆ ಒಪ್ಪಂದ ಅಂತಿಮವಾಗಿರುವುದನ್ನು ನಾಯಕರು ಸ್ವಾಗತಿಸಿದರು.
ಆಹಾರ ಸುರಕ್ಷತೆ ಮತ್ತು ಭದ್ರತೆಯ ಮಹತ್ವವನ್ನು ಒತ್ತಿಹೇಳಿದ ಇಬ್ಬರೂ ನಾಯಕರು, ನೆದರ್‌ಲ್ಯಾಂಡ್ಸ್ ಆಹಾರ ಮತ್ತು ಗ್ರಾಹಕ ಉತ್ಪನ್ನ ಸುರಕ್ಷತಾ ಪ್ರಾಧಿಕಾರ(ಎನ್‌ವಿಡಬ್ಲ್ಯುಎ) ಮತ್ತು ಭಾರತದ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಡುವಿನ ತಿಳಿವಳಿಕೆ ಒಪ್ಪಂದವನ್ನು ಸ್ವಾಗತಿಸಿದರು.
ಜನರಿಂದ ಜನರಿಗೆ ವಿನಿಮಯ ಮತ್ತು ಸಂಸ್ಕೃತಿ
ಭಾರತ-ನೆದರ್‌ಲ್ಯಾಂಡ್ಸ್ ಸಂಬಂಧದ ಪ್ರಮುಖ ಆಧಾರಸ್ತಂಭವನ್ನು ಪ್ರತಿನಿಧಿಸುವ ಬಲವಾದ ಜನರಿಂದ ಜನರಿಗೆ ಸಂಬಂಧಗಳನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಗುರುತಿಸಿದರು. ನೆದರ್‌ಲ್ಯಾಂಡ್ಸ್‌ನಲ್ಲಿರುವ ಭಾರತೀಯ ಸಮುದಾಯವು ಡಚ್ ಸಮಾಜಕ್ಕೆ ನೀಡಿದ ಕೊಡುಗೆಗೆ ಪ್ರಧಾನಿ ಜೆಟ್ಟನ್ ಕೃತಜ್ಞತೆ ಸಲ್ಲಿಸಿದರು. ವಿಶೇಷವಾಗಿ ಯುವಜನರು, ಶೈಕ್ಷಣಿಕ, ವೃತ್ತಿಪರ ಕಾರ್ಯಪಡೆ, ಕ್ರೀಡೆ ಮತ್ತು ಸಾಂಸ್ಕೃತಿಕ ವಿನಿಮಯದ ಮೂಲಕ ಎರಡೂ ದೇಶಗಳ ನಡುವಿನ ಜನರಿಂದ ಜನರಿಗೆ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುವ ತಮ್ಮ ಸಂಕಲ್ಪವನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.
ಎರಡೂ ದೇಶಗಳ ನಡುವೆ ನ್ಯಾಯಯುತ ವಲಸೆ ಮತ್ತು ಚಲನಶೀಲತೆಯನ್ನು ಸುಗಮಗೊಳಿಸುವ ಪ್ರಾಮುಖ್ಯತೆಯನ್ನು ಗಮನಿಸಿದ ಇಬ್ಬರೂ ನಾಯಕರು, ವಲಸೆ ಮತ್ತು ಚಲನಶೀಲತೆಯ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವುದನ್ನು ಸ್ವಾಗತಿಸಿದರು.
ಅನಿಯಮಿತ ವಲಸೆ ಮತ್ತು ಮಾನವ ಕಳ್ಳಸಾಗಣೆ ತಡೆಗಟ್ಟುವ ಮತ್ತು ಎದುರಿಸುವ ಉದ್ದೇಶದಿಂದ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮತ್ತು ಹೆಚ್ಚು ಕೌಶಲ್ಯಪೂರ್ಣ ವೃತ್ತಿಪರರ ನ್ಯಾಯಯುತ ಚಲನಶೀಲತೆಯನ್ನು ಪ್ರೋತ್ಸಾಹಿಸಲು ಎರಡೂ ದೇಶಗಳು ಒಪ್ಪಿಕೊಂಡವು. ನ್ಯಾಯಯುತ ಚಲನಶೀಲತೆ, ಪಾರದರ್ಶಕ ವೀಸಾ ಪ್ರಕ್ರಿಯೆಗಳು ಮತ್ತು ಕಾರ್ಮಿಕರ ಹಕ್ಕುಗಳ ರಕ್ಷಣೆ ಸೇರಿದಂತೆ ವಲಸೆ ಕಾರ್ಮಿಕರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ಅಂತಾರಾಷ್ಟ್ರೀಯ ಮಾನದಂಡಗಳಿಂದ ಈ ವಿಧಾನವು ಮಾರ್ಗದರ್ಶಿಸಲ್ಪಟ್ಟಿದೆ.
ವಿನ್ಯಾಸ, ಪ್ರದರ್ಶನ ಕಲೆಗಳು, ದೃಶ್ಯ ಕಲೆಗಳು, ವಸ್ತುಸಂಗ್ರಹಾಲಯ ಮತ್ತು ಪರಂಪರೆ ಸಹಕಾರದಂತಹ ಕ್ಷೇತ್ರಗಳಲ್ಲಿ ಪರಸ್ಪರ ಜ್ಞಾನವನ್ನು ಹೆಚ್ಚಿಸಲು ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಉಪಕ್ರಮಗಳನ್ನು ಉತ್ತೇಜಿಸುವ ಮೂಲಕ ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸಲು ಇಬ್ಬರೂ ಪ್ರಧಾನಮಂತ್ರಿಗಳು ಒಪ್ಪಿಕೊಂಡರು. ಸಾಂಸ್ಕೃತಿಕ ಸಹಕಾರದ ಜಂಟಿ ಕಾರ್ಯಕಾರಿ ಗುಂಪಿನ ಸಂಭಾವ್ಯ ಸ್ಥಾಪನೆಯ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಪರಸ್ಪರ ಸಾಂಸ್ಕೃತಿಕ ಮೆಚ್ಚುಗೆಯ ಮಹತ್ವವನ್ನು ಪ್ರಸ್ತಾಪಿಸಿದ ನಾಯಕರು, ಡ್ರೆಂಟ್ಸ್ ವಸ್ತುಸಂಗ್ರಹಾಲಯ ಮತ್ತು ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯ ನಡುವಿನ ತಿಳಿವಳಿಕೆ ಒಪ್ಪಂದದ ಭಾಗವಾಗಿ ಡ್ರೆಂಟ್ಸ್ ವಸ್ತುಸಂಗ್ರಹಾಲಯದಲ್ಲಿ ಅಮೃತ ಶೇರ್-ಗಿಲ್ ಪ್ರದರ್ಶನದ ಕಲಾಕೃತಿಗಳನ್ನು ಪ್ರದರ್ಶಿಸುವ ಪ್ರಯತ್ನಗಳನ್ನು ಶ್ಲಾಘಿಸಿದರು. ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯಲ್ಲಿ ವ್ಯಾನ್ ಗಾಗ್ ಮತ್ತು ಇತರ ಡಚ್ ಕಲಾಕೃತಿಗಳನ್ನು ಪ್ರದರ್ಶಿಸುವ ಮತ್ತು ಮರಳಿಸುವ ಕಾರ್ಯಗಳಿಗೆ ಅವರು ಎದುರು ನೋಡುತ್ತಿದ್ದಾರೆ.
ಸಾಂಸ್ಕೃತಿಕ ಕಲಾಕೃತಿಗಳನ್ನು ವಾಪಸ್ ನೀಡುವುದು ಮತ್ತು ಪುನಃಸ್ಥಾಪನೆಯಲ್ಲಿ ಸಹಕರಿಸುವ ಮಹತ್ವವನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು, ಆ ನಿಟ್ಟಿನಲ್ಲಿ ಲೈಡೆನ್ ವಿಶ್ವವಿದ್ಯಾಲಯದಿಂದ ಚೋಳ ಯುಗದ ತಾಮ್ರ ಫಲಕಗಳನ್ನು ಭಾರತೀಯ ಅಧಿಕಾರಿಗಳಿಗೆ ಹಿಂದಿರುಗಿಸುವುದನ್ನು ಸ್ವಾಗತಿಸಿದರು.
ಭಾರತ ಮತ್ತು ನೆದರ್‌ಲ್ಯಾಂಡ್ಸ್ ನಡುವಿನ ಶತಮಾನಗಳಷ್ಟು ಹಳೆಯದಾದ ದ್ವಿಪಕ್ಷೀಯ ಕಡಲ ಇತಿಹಾಸವನ್ನು ನೆನಪಿಸಿಕೊಂಡ ಯಕರು, ಆಮ್ ಸ್ಟರ್ ಡ್ಯಾಂನ ರಾಷ್ಟ್ರೀಯ ಕಡಲ ವಸ್ತುಸಂಗ್ರಹಾಲಯ ಮತ್ತು ಭಾರತದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ನಡುವೆ, ಗುಜರಾತ್‌ನ ಲೋಥಾಲ್‌ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ (ಎನ್‌ಎಂಎಚ್‌ಸಿ) ಅಭಿವೃದ್ಧಿ ಸಹಕಾರದ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.
ಮಾತುಕತೆಗಳು ಸ್ನೇಹಪರ ಮತ್ತು ಸೌಹಾರ್ದಯುತ ವಾತಾವರಣದಲ್ಲಿ ನಡೆದವು. ಭಾರತ-ನೆದರ್‌ಲ್ಯಾಂಡ್ಸ್ ಕಾರ್ಯತಂತ್ರ ಪಾಲುದಾರಿಕೆ ಮಾರ್ಗಸೂಚಿಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳು ಮತ್ತು ಬಹುಮುಖಿ ಸಹಕಾರದ ಮತ್ತಷ್ಟು ಅಭಿವೃದ್ಧಿಗೆ ವಿಶಾಲವಾದ ಅವಕಾಶದ ಬಗ್ಗೆ ಇಬ್ಬರೂ ನಾಯಕರು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಮೋದಿ ಅವರು ಪ್ರಧಾನಮಂತ್ರಿ ಜೆಟ್ಟನ್ ಅವರ ಆತ್ಮೀಯ ಆತಿಥ್ಯಕ್ಕೆ ಧನ್ಯವಾದ ಅರ್ಪಿಸಿದರು, ಸಾಧ್ಯವಾದಷ್ಟು ಬೇಗ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಜೆಟ್ಟನ್ ಅವರಿಗೆ ಆಹ್ವಾನ ನೀಡಿದರು.
*****
(ಪ್ರಕಟಣೆ ಐ.ಡಿ.: 2262023)
ವಿಸಿಟರ್ ಕೌಂಟರ್ : 5