ರೈಲ್ವೇ ಸಚಿವಾಲಯ
azadi ka amrit mahotsav

ಸುಧಾರಣೆಗಳ ಫಲವಾಗಿ ಕಳೆದ ನಾಲ್ಕು ತಿಂಗಳಲ್ಲಿ ರೈಲ್ವೆಯು ಶೇ. 170 ರಷ್ಟು ಹೆಚ್ಚು ಸಿಮೆಂಟ್ ಸಾಗಣೆ ಮಾಡಿದೆ; ಈಗ ಫ್ಲೈ ಆಶ್ (ಹಾರು ಬೂದಿ) ಮಾರುಕಟ್ಟೆಯ ಮೇಲೆ ಗಮನ ಹರಿಸಿದೆ


ಪರಿಸರ ಸ್ನೇಹಿ ಹೊಸ ಕಂಟೈನರ್ ವ್ಯಾಗನ್‌ ಗಳು ಲೋಡಿಂಗ್ ಮತ್ತು ಅನ್‌ ಲೋಡಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸುವುದಲ್ಲದೆ, ಸಾಮಗ್ರಿಗಳ ಮೇಲಿನ ವೆಚ್ಚವನ್ನು ತಗ್ಗಿಸಿ ಸಾಗಣೆಯ ಸಮಯವನ್ನು ಉಳಿಸುತ್ತವೆ

ಸಾಗಣೆ ಪ್ರಕ್ರಿಯೆಯಲ್ಲಿನ ಈ ವೇಗವು ನಿರ್ಮಾಣ ವಲಯದಲ್ಲಿ ಮೌನ ಕ್ರಾಂತಿಯನ್ನೇ ತಂದಿದೆ; ಸಿಮೆಂಟ್ ದರ ಇಳಿಕೆಯು ಬಡ ಮತ್ತು ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಹಕಾರಿಯಾಗಿದೆ

ರೈಲ್ವೆ ಮೂಲಕ ಹೆಚ್ಚು ಸಿಮೆಂಟ್ ಸಾಗಣೆಯು ರಸ್ತೆಗಳ ಮೇಲಿನ ಟ್ರಕ್ ಲೋಡ್ ಅನ್ನು ಕಡಿಮೆ ಮಾಡುತ್ತದೆ, ಸಂಚಾರ ದಟ್ಟಣೆಯನ್ನು ತಗ್ಗಿಸುತ್ತದೆ ಮತ್ತು ಸರಕು ಸಾಗಣೆ ದಕ್ಷತೆಯನ್ನು ಸುಧಾರಿಸುತ್ತದೆ

ಫ್ಲೈ ಆಶ್ (ಬೂದಿ) ಸಾಗಣೆ ಮಾರುಕಟ್ಟೆಯಲ್ಲಿರುವ ಅಪಾರ ಸಾಧ್ಯತೆಗಳನ್ನು ಬಳಸಿಕೊಳ್ಳುವಂತೆ ಮತ್ತು ವಿದ್ಯುತ್ ಸ್ಥಾವರಗಳ ತ್ಯಾಜ್ಯವನ್ನು ರಾಷ್ಟ್ರದ ಸಂಪತ್ತನ್ನಾಗಿ ಪರಿವರ್ತಿಸಲು ನೆರವಾಗುವಂತೆ ರೈಲ್ವೆ ಸಚಿವರು ಅಧಿಕಾರಿಗಳಿಗೆ ಕರೆ ನೀಡಿದರು

ಪ್ರಕಟಣಾ ದಿನಾಂಕ: 14 MAY 2026 6:55PM by PIB Bengaluru

ರೈಲ್ವೆ ಸುಧಾರಣೆಗಳ ಪ್ರಮುಖ ಯಶಸ್ಸಿನ ಭಾಗವಾಗಿ, ಭಾರತೀಯ ರೈಲ್ವೆಯು ಕಳೆದ ನಾಲ್ಕು ತಿಂಗಳಲ್ಲಿ ಸಿಮೆಂಟ್ ಸಾಗಣೆಯಲ್ಲಿ ಶೇಕಡಾ 170 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಕಳೆದ ವರ್ಷ ನವೆಂಬರ್‌ ನಲ್ಲಿ ರೈಲ್ವೆಯು ಸಿಮೆಂಟ್ ಸಾಗಣೆಯಲ್ಲಿ ಸರಣಿ ಸುಧಾರಣೆಗಳನ್ನು ಪರಿಚಯಿಸಿದ ನಂತರ ಈ ಹೆಚ್ಚಳ ಕಂಡುಬಂದಿದೆ. ಈ ಸುಧಾರಣೆಗಳು ಅಂತ್ಯದಿಂದ ಅಂತ್ಯದವರೆಗೆ ತಡೆರಹಿತ ಲಾಜಿಸ್ಟಿಕ್ಸ್ ಉದ್ದೇಶದ ನವೀನ ‘ಬಲ್ಕ್ ಸಿಮೆಂಟ್ ಟ್ಯಾಂಕ್ ಕಂಟೈನರ್‌ʼಗಳ ಮೇಲೆ ಆಧಾರಿತವಾಗಿವೆ. ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಕಂಟೈನರ್ ವಲಯದ ಸುಧಾರಣೆಗಳು ಮತ್ತು ಅವುಗಳ ಅನುಷ್ಠಾನವನ್ನು ಪರಿಶೀಲಿಸಿದರು.

ಸಿಮೆಂಟ್ ಸಾಗಣೆಯಲ್ಲಿ ರೈಲು ಆಧಾರಿತ ಚಲನೆಯನ್ನು ಹೆಚ್ಚಿಸಲು ಮತ್ತು ರಸ್ತೆ ಸಾರಿಗೆಯಿಂದ ಸ್ವಚ್ಛ ಹಾಗೂ ಹೆಚ್ಚು ದಕ್ಷತೆಯ ರೈಲು ಲಾಜಿಸ್ಟಿಕ್ಸ್ ಕಡೆಗೆ ಬದಲಾವಣೆಯನ್ನು ಉತ್ತೇಜಿಸಲು ಸಿಮೆಂಟ್ ಸುಧಾರಣೆಗಳನ್ನು ತರಲಾಗಿತ್ತು. ಸಿಮೆಂಟ್‌ ನ ಮಲ್ಟಿಮೋಡಲ್ ನಿರ್ವಹಣೆಯನ್ನು ಬೆಂಬಲಿಸಲು ರೈಲ್ವೆಯು ಕಸ್ಟಮೈಸ್ ಮಾಡಿದ ಟ್ಯಾಂಕ್ ಕಂಟೈನರ್‌ ಗಳು ಮತ್ತು ಬಲ್ಕ್ ಸಿಮೆಂಟ್ ಟರ್ಮಿನಲ್ ನೀತಿಯನ್ನು ಪರಿಚಯಿಸಿದೆ.

ಹೊಸ ವ್ಯವಸ್ಥೆಯು ಲೋಡಿಂಗ್ ಮತ್ತು ಅನ್‌ ಲೋಡಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ ಮತ್ತು ಸಾಮಗ್ರಿ ನಷ್ಟವನ್ನು ಕಡಿಮೆ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಒಂದು ಸ್ಥಳದಲ್ಲಿ ತಯಾರಾದ ಸಿಮೆಂಟ್ ಈಗ ನೇರವಾಗಿ ಬಳಕೆಯ ಕೇಂದ್ರಗಳಿಗೆ ವಿಶೇಷ ಟ್ಯಾಂಕ್ ಕಂಟೈನರ್‌ ಗಳಲ್ಲಿ ಚಲಿಸಬಹುದಾಗಿದ್ದು, ಇದು ಹಂತ-ಹಂತದ ನಿರ್ವಹಣಾ ಪ್ರಕ್ರಿಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ತಯಾರಿಕಾ ಘಟಕದಿಂದ ಮಾರುಕಟ್ಟೆಯವರೆಗಿನ ದಕ್ಷತೆಯನ್ನು ಸುಧಾರಿಸುತ್ತದೆ. ಈ ಕಂಟೈನರ್‌ ಗಳು ಪ್ರಮಾಣಿತ ಆಕಾರವನ್ನು ಹೊಂದಿದ್ದು, ರೆಡಿ-ಮಿಕ್ಸ್ ಕಾಂಕ್ರೀಟ್ (ಆರ್‌ ಎಂ ಸಿ) ಯಂತ್ರಗಳೊಂದಿಗೆ ಹೊಂದಿಕೆಯಾಗುವುದರಿಂದ, ಸಿಮೆಂಟ್ ಬಳಸಬಹುದಾದ ರೂಪದಲ್ಲಿ ನಿರ್ಮಾಣ ತಾಣಗಳನ್ನು ನೇರವಾಗಿ ತಲುಪುತ್ತದೆ. ಇದು ಎರಡು ಹಂತದ ನಿರ್ವಹಣೆಯನ್ನು ಕಡಿಮೆ ಮಾಡಿದ್ದು, ಕಡಿಮೆ ಲಾಜಿಸ್ಟಿಕ್ಸ್ ವೆಚ್ಚ ಮತ್ತು ವೇಗದ ಸಾಗಣೆ ಸಮಯಕ್ಕೆ ಕಾರಣವಾಗಿದೆ.

ಸಿಮೆಂಟ್ ಲಾಜಿಸ್ಟಿಕ್ಸ್‌ ನಲ್ಲಿ ಕಂಡುಬಂದಿರುವ ಈ ಸುಧಾರಣೆಯು ನಿರ್ಮಾಣ ಉದ್ಯಮದಲ್ಲಿ ಮೌನ ಕ್ರಾಂತಿಯನ್ನು ತರುತ್ತಿದೆ. ನಿರ್ವಹಣಾ ಹಂತಗಳು ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ, ಸಿಮೆಂಟ್‌ ನ ಒಟ್ಟಾರೆ ವಿತರಣಾ ವೆಚ್ಚವು ಕಡಿಮೆಯಾಗುವ ನಿರೀಕ್ಷೆಯಿದೆ, ಇದು ಅಗ್ಗದ ನಿರ್ಮಾಣ ಸಾಮಗ್ರಿಗಳಿಗೆ ದಾರಿಯಾಗಲಿದೆ. ಈ ವೆಚ್ಚದ ದಕ್ಷತೆಯು ವಸತಿ ಬೇಡಿಕೆಗೆ ಅತ್ಯಂತ ಮಹತ್ವದ್ದಾಗಿದೆ, ಏಕೆಂದರೆ ಇದು ಮೌಲ್ಯ ಸರಪಳಿಯಾದ್ಯಂತ ನಿರ್ಮಾಣ ವೆಚ್ಚಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದವರಿಗೆ ಮನೆಗಳನ್ನು ಹೆಚ್ಚು ಕೈಗೆಟಕುವಂತೆ ಮಾಡುತ್ತದೆ.

ನವೀನ “ಮೇಕ್ ಇನ್ ಇಂಡಿಯಾ” ಟ್ಯಾಂಕ್ ಕಂಟೈನರ್‌ ಗಳನ್ನು ರೈಲಿನಿಂದ ಟ್ರೈಲರ್‌ ಗೆ ಮತ್ತು ಪುನಃ ರೈಲಿಗೆ ಸುಗಮವಾಗಿ ಸ್ಥಳಾಂತರಿಸಲು ವಿನ್ಯಾಸಗೊಳಿಸಲಾಗಿದೆ, ಇದು ದಕ್ಷತೆಯ ಮನೆ-ಮನೆಗೆ ಲಾಜಿಸ್ಟಿಕ್ಸ್ ಪರಿಹಾರಗಳನ್ನು ಸಕ್ರಿಯಗೊಳಿಸುತ್ತದೆ. ಪ್ರತಿ ಕಂಟೈನರ್ ಯಾಂತ್ರಿಕೃತ ಲೋಡಿಂಗ್ ಮತ್ತು ಅನ್‌ ಲೋಡಿಂಗ್ ಅನ್ನು ಬೆಂಬಲಿಸುತ್ತದೆ, ಜೊತೆಗೆ ಸಾಂಪ್ರದಾಯಿಕ ಚೀಲದ ಸಿಮೆಂಟ್ ಸಾಗಣೆಗೆ ಹೋಲಿಸಿದರೆ ಚೆಲ್ಲುವಿಕೆ ಮತ್ತು ಪ್ಯಾಕೇಜಿಂಗ್ ನಷ್ಟವನ್ನು ಕಡಿಮೆ ಮಾಡುತ್ತದೆ.

ಲೋಡಿಂಗ್ ಮತ್ತು ಅನ್‌ ಲೋಡಿಂಗ್ ಸಮಯದಲ್ಲಿ ಧೂಳಿನ ಉತ್ಪಾದನೆಯು ಗಮನಾರ್ಹವಾಗಿ ಕಡಿಮೆಯಾಗಿರುವುದರಿಂದ ಈ ಸುಧಾರಣೆಯು ಪರಿಸರ ಸ್ನೇಹಿಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಕಂಟೈನರ್‌ ಗಳ ಮೂಲಕ ಬೃಹತ್ ಸಾಗಣೆಯತ್ತ ಬದಲಾಗುತ್ತಿರುವುದು ಇಂಧನ ಬಳಕೆಯನ್ನು ಕಡಿಮೆ ಮಾಡುತ್ತಿದೆ, ಹೊರಸೂಸುವಿಕೆಯನ್ನು ತಗ್ಗಿಸುತ್ತಿದೆ ಮತ್ತು ಸ್ವಚ್ಛವಾದ ಲಾಜಿಸ್ಟಿಕ್ಸ್ ಅನ್ನು ಉತ್ತೇಜಿಸುತ್ತಿದೆ ಹಾಗೂ ರಸ್ತೆಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತಿದೆ ಎಂದು ಅವರು ಹೇಳಿದರು.

ಸಿಮೆಂಟ್ ಸಾಗಣೆಯಲ್ಲಿನ ಯಶಸ್ಸಿನ ನಂತರ, ರೈಲ್ವೆಯು ಈಗ ಫ್ಲೈ ಆಶ್ ( ಹಾರು ಬೂದಿ) ಸಾಗಣೆಗಾಗಿ ಇದೇ ರೀತಿಯ ಸುಧಾರಣೆಯ ಮೇಲೆ ಕೆಲಸ ಮಾಡುತ್ತಿದೆ. ಹಿರಿಯ ಅಧಿಕಾರಿಗಳೊಂದಿಗೆ ವಲಯವನ್ನು ಪರಿಶೀಲಿಸಿದ ಶ್ರೀ ವೈಷ್ಣವ್ ಅವರು, ಫ್ಲೈ ಆಶ್ ಸಾಗಣೆ ಮಾರುಕಟ್ಟೆಯಲ್ಲಿನ ಬೃಹತ್ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಾಷ್ಟ್ರೀಯ ಸಂಪತ್ತನ್ನಾಗಿ ಪರಿವರ್ತಿಸಲು ಅಧಿಕಾರಿಗಳಿಗೆ ಸೂಚಿಸಿದರು.

ದೇಶದಲ್ಲಿ ಸುಮಾರು 300 ಮಿಲಿಯನ್ ಮೆಟ್ರಿಕ್ ಟನ್ ಫ್ಲೈ ಆಶ್ ಉತ್ಪತ್ತಿಯಾಗುತ್ತಿದೆ, ಆದರೆ ಸದ್ಯಕ್ಕೆ ಕೇವಲ 13 ಮಿಲಿಯನ್ ಟನ್ ಮಾತ್ರ ರೈಲ್ವೆ ಮೂಲಕ ಸಾಗಣೆಯಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ರೈಲ್ವೆಯ ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಲು ಮತ್ತು ದೇಶಾದ್ಯಂತ ಇರುವ ಇಟ್ಟಿಗೆ ಗೂಡುಗಳು, ಸಿಮೆಂಟ್ ಉದ್ಯಮಗಳು ಮತ್ತು ನಿರ್ಮಾಣ ತಾಣಗಳಿಗೆ ಫ್ಲೈ ಆಶ್ ಚಲನೆಯನ್ನು ಸುಲಭಗೊಳಿಸಲು ಅವರು ಅಧಿಕಾರಿಗಳಿಗೆ ಒತ್ತಾಯಿಸಿದರು. ಇದನ್ನು ಪ್ರಮುಖ “ತ್ಯಾಜ್ಯದಿಂದ ಸಂಪತ್ತು” ಅವಕಾಶ ಎಂದು ಕರೆದ ಅವರು, ವಿದ್ಯುತ್ ಸ್ಥಾವರಗಳಿಂದ ಹೆಚ್ಚಾಗಿ ತ್ಯಾಜ್ಯ ಎಂದು ಪರಿಗಣಿಸಲ್ಪಡುವ ಫ್ಲೈ ಆಶ್ ವಾಸ್ತವವಾಗಿ ರಸ್ತೆ ನಿರ್ಮಾಣ, ಸಿಮೆಂಟ್ ತಯಾರಿಕೆ ಮತ್ತು ಇಟ್ಟಿಗೆ ಉತ್ಪಾದನೆಗೆ ಅಮೂಲ್ಯವಾದ ಸಂಪನ್ಮೂಲವಾಗಿದೆ ಎಂದು ಹೇಳಿದರು.

ಫ್ಲೈ ಆಶ್‌ ನ ವ್ಯಾಪಕ ಸಾಗಣೆ ಮತ್ತು ಬಳಕೆಯು ಮಾಲಿನ್ಯವನ್ನು ಕಡಿಮೆ ಮಾಡಲು, ಕೈಗಾರಿಕಾ ತ್ಯಾಜ್ಯದ ಮರುಬಳಕೆಯನ್ನು ಉತ್ತೇಜಿಸಲು ಮತ್ತು ಇಟ್ಟಿಗೆ ಹಾಗೂ ಸಿಮೆಂಟ್‌ ನಂತಹ ನಿರ್ಮಾಣ ಸಾಮಗ್ರಿಗಳ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಹಲವಾರು ನಿರ್ಮಾಣ ಚಟುವಟಿಕೆಗಳಲ್ಲಿ ಬಳಸಬಹುದು, ಇದು ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ.

ಸಿಮೆಂಟ್ ಸಾಗಣೆಯಲ್ಲಿನ ಸುಧಾರಣೆಗಳು ಮತ್ತು ನವೀನ ಕಂಟೈನರ್ ವ್ಯಾಗನ್‌ಗಳ ಬಿಡುಗಡೆಯು ಭಾರತೀಯ ರೈಲ್ವೆಯಲ್ಲಿ ಹೆಚ್ಚು ದಕ್ಷತೆಯ, ವೆಚ್ಚ-ಪರಿಣಾಮಕಾರಿ ಮತ್ತು ಸ್ಕೇಲೆಬಲ್ ಸರಕು ಸಾಗಣೆ ಲಾಜಿಸ್ಟಿಕ್ಸ್‌ನತ್ತ ಮಹತ್ವದ ಹೆಜ್ಜೆಯಾಗಿದೆ. ಈ ವೇಗವನ್ನು ಮುಂದುವರಿಸುತ್ತಾ, ಫ್ಲೈ ಆಶ್ ಮೇಲಿನ ಗಮನವು “ತ್ಯಾಜ್ಯದಿಂದ ಸಂಪತ್ತು” ವಿಧಾನವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆಯಿದೆ ಮತ್ತು ಪ್ರಮುಖ ಮೂಲಸೌಕರ್ಯ ವಲಯಗಳಲ್ಲಿ ಸುಸ್ಥಿರ ಸರಕು ಚಲನೆಯನ್ನು ವಿಸ್ತರಿಸಲಿದೆ.

 

*****


(ಪ್ರಕಟಣೆ ಐ.ಡಿ.: 2261215) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Odia