ರಕ್ಷಣಾ ಸಚಿವಾಲಯ
azadi ka amrit mahotsav

ʻಟ್ಯಾಕ್ಟಿಕಲ್ ಅಡ್ವಾನ್ಸ್ಡ್ ರೇಂಜ್ ಆಗ್ಮೆಂಟೇಶನ್’ ಶಸ್ತ್ರಾಸ್ತ್ರದ ಮೊದಲ ಹಾರಾಟ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ ʻಡಿಆರ್‌ಡಿಒʼ ಮತ್ತು ಭಾರತೀಯ ವಾಯುಪಡೆ

ಪ್ರಕಟಣಾ ದಿನಾಂಕ: 08 MAY 2026 10:07AM by PIB Bengaluru

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ವಾಯುಪಡೆ (ಐಎಎಫ್) ಮೇ 07, 2026 ರಂದು ಒಡಿಶಾ ಕರಾವಳಿಯಲ್ಲಿ ʻಟ್ಯಾಕ್ಟಿಕಲ್ ಅಡ್ವಾನ್ಸ್ಡ್ ರೇಂಜ್ ಆಗ್ಮೆಂಟೇಶನ್ʼ (ತಾರಾ) ಶಸ್ತ್ರಾಸ್ತ್ರದ ಮೊದಲ ಹಾರಾಟ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದವು. ʻತಾರಾʼ - ಇದೊಂದು ಮಾಡ್ಯುಲರ್ ವ್ಯಾಪ್ತಿ ವಿಸ್ತರಣಾ ಕಿಟ್ ಆಗಿದ್ದು, ಪಥಮಾರ್ಗದರ್ಶನ ಇಲ್ಲದ ಸಿಡಿತಲೆಗಳನ್ನು ನಿಖರ ಮಾರ್ಗದರ್ಶಿ ಶಸ್ತ್ರಾಸ್ತ್ರಗಳಾಗಿ ಪರಿವರ್ತಿಸುವ ಭಾರತದ ಮೊದಲ ಸ್ವದೇಶಿ ʻಗ್ಲೈಡ್ʼ ಶಸ್ತ್ರಾಸ್ತ್ರ ವ್ಯವಸ್ಥೆ ಎನಿಸಿದೆ.

ನೆಲದ ಮೇಲಿನ ಗುರಿಗಳನ್ನು ತಟಸ್ಥಗೊಳಿಸಲು ಅಗ್ಗದ ವೆಚ್ಚದ ಶಸ್ತ್ರಾಸ್ತ್ರದ ತೀಕ್ಷ್ಣತೆ ಮತ್ತು ನಿಖರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೈದರಾಬಾದ್‌ನ ʻಸಂಶೋಧನಾ ಕೇಂದ್ರ ಇಮಾರತ್ʼ (ಆರ್‌ಸಿಐ) ಮತ್ತು ಇತರ ʻಡಿಆರ್‌ಡಿಒʼ ಪ್ರಯೋಗಾಲಯಗಳು ʻತಾರಾʼವನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿವೆ. ಇದು ಅತ್ಯಾಧುನಿಕ ಕಡಿಮೆ-ವೆಚ್ಚದ ವ್ಯವಸ್ಥೆಗಳನ್ನು ಬಳಸುವ ಮೊದಲ ʻಗ್ಲೈಡ್ʼ ಅಸ್ತ್ರವಾಗಿದೆ. ಅಭಿವೃದ್ಧಿ ಮತ್ತು ಉತ್ಪಾದನಾ ಪಾಲುದಾರರು(ಡಿಸಿಪಿಪಿ) ಮತ್ತು ಇತರ ಭಾರತೀಯ ಕೈಗಾರಿಕೆಗಳೊಂದಿಗೆ ಕಿಟ್ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಉತ್ಪಾದನಾ ಚಟುವಟಿಕೆಯನ್ನು ಪ್ರಾರಂಭಿಸಲಾಗಿದೆ.

ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಚೊಚ್ಚಲ ಹಾರಾಟ ಪ್ರಯೋಗ ಯಶಸ್ವಿಗಾಗಿ ʻಡಿಆರ್‌ಡಿಒʼ, ಐಎಎಫ್, ಡಿಸಿಪಿಪಿ ಮತ್ತು ಉದ್ಯಮವನ್ನು ಅಭಿನಂದಿಸಿದ್ದಾರೆ. ಇದು ಭಾರತದ ದೇಶೀಯ ರಕ್ಷಣಾ ಸಾಮರ್ಥ್ಯಗಳನ್ನು ಮುನ್ನಡೆಸುವಲ್ಲಿ ಮಹತ್ವದ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಡಿಆರ್‌ಡಿಒ ಅಧ್ಯಕ್ಷರಾದ ಡಾ ಸಮೀರ್ ವಿ ಕಾಮತ್ ಅವರು ಯಶಸ್ವಿ ಹಾರಾಟ-ಪ್ರಯೋಗಕ್ಕೆ ಸಂಬಂಧಿಸಿದ ತಂಡಗಳನ್ನು ಅಭಿನಂದಿಸಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2259006) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Marathi , Bengali , Telugu