ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
"ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಸಮಾವೇಶವು ಮುಂಬರುವ ಏಷ್ಯನ್, ಕಾಮನ್‌ವೆಲ್ತ್ ಮತ್ತು ಒಲಿಂಪಿಕ್ ಕ್ರೀಡಾಕೂಟಗಳಿಗೆ ಭಾರತದ ಸಿದ್ಧತೆಯತ್ತ ಇಟ್ಟ ಒಂದು ಸಂಘಟಿತ ಹೆಜ್ಜೆಯಾಗಿದೆ": ಗೌರವಾನ್ವಿತ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ
“ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯಿಂದ ಮಾದಕ ವಸ್ತುಗಳ ಬಳಕೆಯನ್ನು ನಿರ್ಮೂಲನೆ ಮಾಡಲು ಸಾಮೂಹಿಕ ಜವಾಬ್ದಾರಿ ಮತ್ತು ಕಟ್ಟುನಿಟ್ಟಿನ ಕ್ರಮದ ಅಗತ್ಯವಿದೆ”: ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಸಮಾವೇಶವನ್ನು ಉದ್ದೇಶಿಸಿ ಡಾ. ಮಾಂಡವೀಯ
“ಕ್ರೀಡಾಪಟುಗಳ ಕಲ್ಯಾಣ ಮತ್ತು ಕ್ರೀಡಾಪಟು ಕೇಂದ್ರಿತ ಆಡಳಿತವು ಪ್ರತಿ ಒಕ್ಕೂಟದ ಪ್ರಮುಖ ಕೇಂದ್ರಬಿಂದುವಾಗಿರಬೇಕು”: ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ
“ಮುಂಬರುವ ಅಂತಾರಾಷ್ಟ್ರೀಯ ಕ್ರೀಡಾಕೂಟಗಳತ್ತ ಭಾರತದ ಪಯಣವು ಪ್ರದರ್ಶನದಿಂದ ಪ್ರೇರಿತವಾಗಲಿದೆ, ವಿಜ್ಞಾನದಿಂದ ಶಕ್ತಿ ಪಡೆಯಲಿದೆ ಮತ್ತು ಬಲಿಷ್ಠ ಒಕ್ಕೂಟಗಳಿಂದ ಸುಭದ್ರವಾಗಲಿದೆ”: ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ಖಡ್ಸೆ
“ಭಾರತದ ಕ್ರೀಡಾ ಭವಿಷ್ಯವು ಕ್ರೀಡಾಪಟುಗಳು, ಒಕ್ಕೂಟಗಳು ಮತ್ತು ಸರ್ಕಾರಗಳ ನಡುವಿನ ಬಲಿಷ್ಠ ಸಮನ್ವಯದ ಮೇಲೆ ಅವಲಂಬಿತವಾಗಿದೆ”: ಡಾ. ಮಾಂಡವೀಯ
ಪ್ರಕಟಣಾ ದಿನಾಂಕ:
07 MAY 2026 5:24PM by PIB Bengaluru
ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರು 'ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಸಮಾವೇಶ 2026' ರಲ್ಲಿ ಭಾಗವಹಿಸಿದರು. ಈ ಸಮಾವೇಶದಲ್ಲಿ ಭಾರತೀಯ ಒಲಿಂಪಿಕ್ ಸಂಸ್ಥೆ ಸೇರಿದಂತೆ 37 ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ (NSFs) ಪ್ರತಿನಿಧಿಗಳು ಪಾಲ್ಗೊಂಡು, ಕಾಮನ್‌ವೆಲ್ತ್ ಗೇಮ್ಸ್ 2026, ಏಷ್ಯನ್ ಗೇಮ್ಸ್ 2026 ಮತ್ತು 2028ರ ಬೇಸಿಗೆ ಒಲಿಂಪಿಕ್ಸ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಭಾರತದ ಭವಿಷ್ಯದ ಮಾರ್ಗಸೂಚಿ ಮತ್ತು ಸಿದ್ಧತೆಗಳ ಕುರಿತು ಚರ್ಚಿಸಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಕ್ರೀಡಾ ಸಚಿವರಾದ ಡಾ. ಮಾಂಡವೀಯ, “ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಸಮಾವೇಶವು ಮುಂಬರುವ ಜಾಗತಿಕ ಕ್ರೀಡಾಕೂಟಗಳಿಗೆ ಭಾರತದ ಸಿದ್ಧತೆಯತ್ತ ಇಟ್ಟ ಸಂಘಟಿತ ಹೆಜ್ಜೆಯಾಗಿದೆ,” ಎಂದು ತಿಳಿಸಿದರು.
ದೀರ್ಘಾವಧಿಯ ಯೋಜನೆ, ವೈಜ್ಞಾನಿಕ ತರಬೇತಿ, ಬಲಿಷ್ಠ ಕ್ರೀಡಾ ಮೂಲಸೌಕರ್ಯ ಮತ್ತು ಪ್ರಮುಖ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸಿದ್ಧರಾಗುತ್ತಿರುವ ಕ್ರೀಡಾಪಟುಗಳಿಗೆ ನಿರಂತರ ಬೆಂಬಲ ನೀಡುವ ಮೂಲಕ ಭಾರತವನ್ನು ಪ್ರಮುಖ ಕ್ರೀಡಾ ರಾಷ್ಟ್ರವನ್ನಾಗಿ ಪರಿವರ್ತಿಸುವ ಸರ್ಕಾರದ ವಿಶಾಲ ದೃಷ್ಟಿಕೋನವನ್ನು ಕ್ರೀಡಾ ಸಚಿವರು ಉಲ್ಲೇಖಿಸಿದರು.
WNGT.jpeg)
ಸಾಂಸ್ಥಿಕ ಸುಧಾರಣೆಗಳು ಮತ್ತು ಉತ್ತಮ ಆಡಳಿತ ಪದ್ಧತಿಗಳ ಮಹತ್ವದ ಕುರಿತು ಹೇಳಿದ ಡಾ. ಮಾಂಡವೀಯ, “ಭಾರತದ ಕ್ರೀಡಾ ಭವಿಷ್ಯವು ಕ್ರೀಡಾಪಟುಗಳು, ಒಕ್ಕೂಟಗಳು ಮತ್ತು ಸರ್ಕಾರಗಳ ನಡುವಿನ ಬಲಿಷ್ಠ ಸಮನ್ವಯದ ಮೇಲೆ ಅವಲಂಬಿತವಾಗಿದೆ,” ಎಂದು ಹೇಳಿದರು.
ಒಕ್ಕೂಟಗಳ ಒಳಗಿನ ಆಡಳಿತವು ಕ್ರೀಡಾಪಟು ಕೇಂದ್ರಿತವಾಗಿರಬೇಕು ಎಂದು ಪ್ರತಿಪಾದಿಸಿದ ಅವರು, ಕ್ರೀಡಾಪಟುಗಳ ಕಲ್ಯಾಣವು ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯ ಕೇಂದ್ರಬಿಂದುವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಪಾರದರ್ಶಕತೆ, ಸಕಾಲಿಕ ಚುನಾವಣೆಗಳು, ಹೊಣೆಗಾರಿಕೆ ಮತ್ತು ಬಲಿಷ್ಠ ಸಾಂಸ್ಥಿಕ ಕಾರ್ಯವಿಧಾನಗಳಿಗೆ ಕರೆ ನೀಡಿದರು.
ಕೇಂದ್ರ ಸಚಿವರು ಜಾಗೃತಿ, ಶಿಕ್ಷಣ ಮತ್ತು ಕಟ್ಟುನಿಟ್ಟಿನ ಕಾನೂನು ಕ್ರಮಗಳ ಮೂಲಕ ಭಾರತೀಯ ಕ್ರೀಡಾ ವಲಯದಿಂದ ಡೋಪಿಂಗ್ ಅನ್ನು ನಿರ್ಮೂಲನೆ ಮಾಡುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.
“ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯಿಂದ ಮಾದಕ ವಸ್ತುಗಳನ್ನು ನಿರ್ಮೂಲನೆ ಮಾಡಲು ಸಾಮೂಹಿಕ ಜವಾಬ್ದಾರಿ ಮತ್ತು ಕಟ್ಟುನಿಟ್ಟಿನ ಕ್ರಮದ ಅಗತ್ಯವಿದೆ,” ಎಂದ ಡಾ. ಮಾಂಡವೀಯ ಅವರು, ದೇಶದಲ್ಲಿ ಸ್ವಚ್ಛ ಮತ್ತು ಪಾರದರ್ಶಕ ಕ್ರೀಡಾ ಸಂಸ್ಕೃತಿಯನ್ನು ನಿರ್ಮಿಸಲು ಸಕ್ರಿಯವಾಗಿ ಕೊಡುಗೆ ನೀಡುವಂತೆ ಒಕ್ಕೂಟಗಳು, ತರಬೇತುದಾರರು ಮತ್ತು ಪೂರಕ ಸಿಬ್ಬಂದಿಯನ್ನು ಒತ್ತಾಯಿಸಿದರು.

ಖೇಲೋ ಇಂಡಿಯಾ, ಫಿಟ್ ಇಂಡಿಯಾ ಚಳವಳಿ ಮತ್ತು ಮುಂಬರುವ 'ಖೇಲೋ ಭಾರತ್ ಮಿಷನ್' ನಂತಹ ಉಪಕ್ರಮಗಳ ಮೂಲಕ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಸರ್ಕಾರದ ದೊಡ್ಡ ದೃಷ್ಟಿಕೋನವನ್ನು ಡಾ. ಮಾಂಡವೀಯ ವಿವರಿಸಿದರು.
ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು 2028ರ ಲಾಸ್ ಏಂಜಲೀಸ್ (LA) ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಸಾಧ್ಯತೆಗಳನ್ನು ಹೆಚ್ಚಿಸಲು ವೈಜ್ಞಾನಿಕ ತರಬೇತಿ, ನಿಯಮಿತ ಸ್ಪರ್ಧೆಗಳ ಎಕ್ಸ್‌ಪೋಸರ್, ಖಾಸಗಿ ವಲಯದ ಭಾಗವಹಿಸುವಿಕೆ, ಕ್ರೀಡಾ ಲೀಗ್‌ಗಳು, ಅಕಾಡೆಮಿಗಳು ಮತ್ತು ಆಡಳಿತ ಸುಧಾರಣೆಗಳ ಮಹತ್ವವನ್ನು ಅವರು ಹೇಳಿದರು.
ಸಮಾವೇಶದ ಸಂದರ್ಭದಲ್ಲಿ, 'ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ 2025ರ ನಿಯಮಗಳು ಮತ್ತು ಸುಧಾರಣಾ ಮಾರ್ಗಸೂಚಿಗಳ ಕೈಪಿಡಿ'ಯನ್ನು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರು ಅಧಿಕೃತವಾಗಿ ಬಿಡುಗಡೆ ಮಾಡಿದರು.
ಹೆಚ್ಚಿನ ಹೊಣೆಗಾರಿಕೆ, ಪಾರದರ್ಶಕ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಮತ್ತು ಒಕ್ಕೂಟಗಳಿಗೆ ನಿರಂತರ ಸಾಂಸ್ಥಿಕ ಬೆಂಬಲದ ಮೂಲಕ ಭಾರತದ ಕ್ರೀಡಾ ರಚನೆಯನ್ನು ಬಲಪಡಿಸುವ ಅಗತ್ಯವನ್ನು ಕ್ರೀಡಾ ಸಚಿವರು ಒತ್ತಿಹೇಳಿದರು.
ಮುಕ್ತ ಮತ್ತು ನ್ಯಾಯೋಚಿತ ಆಯ್ಕೆ ವ್ಯವಸ್ಥೆಗಳು, ಹೆಚ್ಚಿನ ಸ್ಪರ್ಧಾತ್ಮಕ ಎಕ್ಸ್‌ಪೋಸರ್, ಒಕ್ಕೂಟಗಳಿಗೆ ಬಲಿಷ್ಠ ಅಂತಾರಾಷ್ಟ್ರೀಯ ತೊಡಗಿಸಿಕೊಳ್ಳುವಿಕೆ ಮತ್ತು ಕ್ರೀಡಾಪಟುಗಳು, ತರಬೇತುದಾರರು ಹಾಗೂ ಆಡಳಿತ ಕಾರ್ಯವಿಧಾನಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ಡಾ. ಮಾಂಡವೀಯ ವಿವರಿಸಿದರು.
ಯುವ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ಶ್ರೀಮತಿ ರಕ್ಷಾ ಖಡ್ಸೆ ಅವರು, ದೇಶಕ್ಕಾಗಿ ಭವಿಷ್ಯದ ಸಿದ್ಧ ಕ್ರೀಡಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ದೀರ್ಘಾವಧಿಯ ಯೋಜನೆ, ಕ್ರೀಡಾಪಟು ಬೆಂಬಲ ವ್ಯವಸ್ಥೆಗಳು ಮತ್ತು ವೈಜ್ಞಾನಿಕ ತರಬೇತಿ ಪದ್ಧತಿಗಳ ಮಹತ್ವವನ್ನು ಹೇಳಿದರು.
ಇದರ ಜೊತೆಗೆ, “ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು 2028ರ ಒಲಿಂಪಿಕ್ಸ್‌ನತ್ತ ಭಾರತದ ಪಯಣವು ಪ್ರದರ್ಶನದಿಂದ ಪ್ರೇರಿತವಾಗಲಿದೆ, ವಿಜ್ಞಾನದಿಂದ ಶಕ್ತಿ ಪಡೆಯಲಿದೆ ಮತ್ತು ಬಲಿಷ್ಠ ಒಕ್ಕೂಟಗಳಿಂದ ಸುಭದ್ರವಾಗಲಿದೆ,” ಎಂದೂ ಅವರು ತಿಳಿಸಿದರು.
ಕ್ರೀಡಾ ಕಾರ್ಯದರ್ಶಿ ಶ್ರೀ ಹರಿ ರಂಜನ್ ರಾವ್ ಅವರು, ಭಾರತದ ಕ್ರೀಡಾ ಮಹತ್ವಾಕಾಂಕ್ಷೆಗಳನ್ನು ಸಾಧಿಸುವಲ್ಲಿ ಸಾಮೂಹಿಕ ಜವಾಬ್ದಾರಿ ಮತ್ತು ದೀರ್ಘಾವಧಿಯ ಯೋಜನೆಯ ಮಹತ್ವವನ್ನು ತಿಳೀಸಿದರು.
“ಆಗಾಧವಾದ ಕನಸು ಕಾಣುವ ರಾಷ್ಟ್ರವು ಅಷ್ಟೇ ಬೃಹತ್ ಪ್ರಮಾಣದಲ್ಲಿ ಸಿದ್ಧತೆ ನಡೆಸುತ್ತದೆ; ಇಂದಿನ ಚರ್ಚೆಗಳು 2036 ರ ಭಾರತದ ಕ್ರೀಡಾ ಭವಿಷ್ಯವನ್ನು ರೂಪಿಸಲಿವೆ,” ಎಂದು ಅವರು ಹೇಳಿದರು.
4HBZ.jpeg)
ಹೆಚ್ಚಿನ ಸ್ಪರ್ಧೆಗಳು, ಲೀಗ್‌ಗಳು ಮತ್ತು ಆಧುನಿಕ ತರಬೇತಿ ವ್ಯವಸ್ಥೆಗಳ ಅಗತ್ಯವನ್ನು ಹೇಳಿದ ಅವರು, ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿಯನ್ನಾಗಿ ಮಾಡುವ ಆಕಾಂಕ್ಷೆಗಳನ್ನು ಈಡೇರಿಸಲು ಒಕ್ಕೂಟಗಳು ಮತ್ತು ಮಧ್ಯಸ್ಥಗಾರರ ನಡುವೆ ಸಂಘಟಿತ ತಂಡದ ಕೆಲಸಕ್ಕೆ ಕರೆ ನೀಡಿದರು.
ಈ ಸಮಾವೇಶದಲ್ಲಿ ಭಾರತದ ವಿಕಸನಗೊಳ್ಳುತ್ತಿರುವ ಕ್ರೀಡಾ ಮಾರ್ಗಸೂಚಿಯ ಕುರಿತು ಕೇಂದ್ರೀಕೃತ ಚರ್ಚೆಗಳು ನಡೆದವು. ಇವುಗಳಲ್ಲಿ ಖೇಲೋ ಇಂಡಿಯಾ ಮಿಷನ್ ಪದಕ ತಂತ್ರ, ಕ್ರೀಡಾ ಸಾಮಗ್ರಿಗಳ ತಯಾರಿಕೆಗೆ ಉತ್ತೇಜನ, ವೈಜ್ಞಾನಿಕ ಫಿಟ್‌ನೆಸ್ ಪ್ರೋಟೋಕಾಲ್‌ಗಳು ಮತ್ತು ಕ್ರೀಡಾಪಟುಗಳ ಮೌಲ್ಯಮಾಪನ, ಉದ್ದೀಪನ ಮದ್ದು ವಿರೋಧಿ ಕಾನೂನುಗಳ ಬಲವರ್ಧನೆ, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ತಾಂತ್ರಿಕ ಮಧ್ಯಸ್ಥಿಕೆಗಳು, ಎನ್‌ಎಸ್‌ಜಿ (NSG) ಕಾಯ್ದೆ 2025 ರ ಅಡಿಯಲ್ಲಿ ಆಡಳಿತ ಮತ್ತು ಅನುಸರಣೆ, ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸುವ ಭಾರತದ ಮಹತ್ವಾಕಾಂಕ್ಷೆ ಮತ್ತು ಜಾಗತಿಕ ಒಕ್ಕೂಟಗಳಲ್ಲಿ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ಹಾಗೂ ಮುಂಬರುವ ಕ್ರೀಡಾಕೂಟಗಳಿಗೆ ಕಾರ್ಯತಂತ್ರದ ಸಿದ್ಧತೆಗಳು ಒಳಗೊಂಡಿದ್ದವು.
ಎಲ್ಲಾ ಅಧಿವೇಶನಗಳಲ್ಲಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಒಕ್ಕೂಟಗಳ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿ ಚರ್ಚೆಗಳನ್ನು ನಡೆಸಿದರು.
******
(ಪ್ರಕಟಣೆ ಐ.ಡಿ.: 2258886)
ವಿಸಿಟರ್ ಕೌಂಟರ್ : 4