ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಕೇಂದ್ರ ಸಂವಹನ ಖಾತೆ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರಿಂದ ಸೆಲ್ ಬ್ರಾಡ್‌ಕಾಸ್ಟ್ ಸಿಸ್ಟಮ್ (ಸಿಬಿಎಸ್ – ಮೊಬೈಲ್ ಸಂದೇಶ ವ್ಯವಸ್ಥೆ) ಉದ್ಘಾಟನೆ; ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿರುವ ವ್ಯವಸ್ಥೆ
ಪ್ರತಿಕ್ರಿಯಾತ್ಮಕದಿಂದ ಪೂರ್ವಭಾವಿಯತ್ತ: ಭಾರತವು ಮೊಬೈಲ್ ಸಂದೇಶ ಪ್ರಸಾರ ಸೌಲಭ್ಯದೊಂದಿಗೆ ವಿಪತ್ತು ಪ್ರತಿಕ್ರಿಯಾ ವ್ಯವಸ್ಥೆಯ ಬಲವರ್ಧನೆ
ತತ್ ಕ್ಷಣದ ಎಚ್ಚರಿಕೆಗಳು, ಶೂನ್ಯ ವಿಳಂಬ: ಸಾರ್ವಜನಿಕ ಸುರಕ್ಷತೆಗಾಗಿ ಭಾರತದ ರಾಷ್ಟ್ರವ್ಯಾಪಿ ಸೆಲ್ ಪ್ರಸಾರ ವ್ಯವಸ್ಥೆಯ ಪ್ರಾರಂಭ
ಪ್ರಕಟಣಾ ದಿನಾಂಕ:
02 MAY 2026 4:56PM by PIB Bengaluru
ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ಸೆಲ್ ಬ್ರಾಡ್‌ಕಾಸ್ಟ್ ಸಿಸ್ಟಮ್ (ಸಿಬಿಎಸ್) ಗೆ ಚಾಲನೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ ಡಿ ಎಂ ಎ) ಮತ್ತು ಗೃಹ ವ್ಯವಹಾರಗಳ ಸಚಿವಾಲಯ (ಎಂ ಎಚ್ ಎ) ಸಹಯೋಗದೊಂದಿಗೆ ದೂರಸಂಪರ್ಕ ಇಲಾಖೆಯ (ಡಿಒಟಿ) ಅಡಿಯಲ್ಲಿನ ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರ (ಸಿ-ಡಿಒಟಿ) ಅಭಿವೃದ್ಧಿಪಡಿಸಿರುವ ಸ್ಥಳೀಯ ತಂತ್ರಜ್ಞಾನದ ವಿಪತ್ತಿನ ಮುನ್ನೆಚ್ಚರಿಕಾ ಸಂದೇಶ ವ್ಯವಸ್ಥೆ ಇದಾಗಿದೆ. ಈ ಉಪಕ್ರಮವು ಭಾರತದ ತುರ್ತು ಸಂವಹನ ವ್ಯವಸ್ಥೆಗಳನ್ನು ಬಲಪಡಿಸುವ ಮತ್ತು ಸಾರ್ವಜನಿಕ ಸುರಕ್ಷತಾ ಮೂಲಸೌಕರ್ಯವನ್ನು ವರ್ಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್; ಕಾರ್ಯದರ್ಶಿ (ಟೆಲಿಕಾಂ) ಶ್ರೀ ಅಮಿತ್ ಅಗರ್ ವಾಲ್; ಎನ್ ಡಿ ಆರ್ ಎಫ್ ಮಹಾನಿರ್ದೇಶಕರಾದ ಶ್ರೀ ಪಿಯೂಷ್ ಆನಂದ್; ಎನ್ ಡಿ ಎಂ ಎ ಕಾರ್ಯದರ್ಶಿ ಶ್ರೀ ಮನೀಷ್ ಭಾರದ್ವಾಜ್; ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅನುಜ್ ಶರ್ಮಾ; ಎನ್ ಡಿ ಎಂ ಎ ಸದಸ್ಯ ಶ್ರೀ ಕೃಷ್ಣ ವತ್ಸ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೃಹ ವ್ಯವಹಾರಗಳ ಸಚಿವಾಲಯ, ಎನ್ ಡಿ ಎಂ ಎ ಮತ್ತು ಸಿ – ಡಾಟ್ ನ ಈ ಹೆಗ್ಗುರುತಿನ ಸಾಧನೆಯ ಕುರಿತು ಮಾತನಾಡಿದ ಕೇಂದ್ರ ಸಂವಹನ ಖಾತೆ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು, “ಸೆಲ್ ಬ್ರಾಡ್ ಕಾಸ್ಟ್ ಸಿಸ್ಟಮ್ ನ ಆರಂಭವು ಭಾರತದ ವಿಪತ್ತು ನಿರ್ವಹಣಾ ಚೌಕಟ್ಟಿನಲ್ಲಿ ಒಂದು ಪರಿವರ್ತನಾ ಹೆಜ್ಜೆಯನ್ನು ಗುರುತಿಸುತ್ತದೆ, ನಾಗರಿಕರನ್ನು ರಕ್ಷಿಸುವಲ್ಲಿ ಪ್ರತಿಕ್ರಿಯಾತ್ಮಕ ವಿಧಾನದಿಂದ ಪೂರ್ವಭಾವಿ ವಿಧಾನಕ್ಕೆ ನಮ್ಮ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.
ಮುಂದುವರಿದ ದೂರಸಂಪರ್ಕ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ, ಬಹುತೇಕ ನೈಜ-ಸಮಯದ, ಬೌಗೋಳಿಕ ಕೇಂದ್ರಿತ (ಜಿಯೋ-ಟಾರ್ಗೆಟೆಡ್) ಎಚ್ಚರಿಕೆಗಳು ಲಕ್ಷಾಂತರ ಜನರನ್ನು ತಕ್ಷಣವೇ ತಲುಪಲು ಸಿಬಿಎಸ್ ಅನುವು ಮಾಡಿಕೊಡುತ್ತಾ, ಯಾವುದೇ ವ್ಯಕ್ತಿ ಮುನ್ನೆಚ್ಚರಿಕಾ ಜಾಗೃತಿಯಿಂದ ವಂಚಿತರಾಗದಿರುವುದನ್ನು ಖಚಿತಪಡಿಸಲಿದೆ.
ಈ ದೇಶೀಯ, ಜಾಗತಿಕ ಮಾನದಂಡಕ್ಕನುಗುಣವಾಗಿನ ಈ ಪರಿಹಾರವು ನಮ್ಮ ಸನ್ನದ್ಧತೆಯನ್ನು ಬಲಪಡಿಸುತ್ತಾ ಪ್ರತಿಕ್ರಿಯೆ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಹಾಗೂ ಸುರಕ್ಷಿತ, ಇನ್ನಷ್ಟು ಸ್ಥಿರ ಚೇತರಿಕೆ ಹೊಂದಬಲ್ಲ ಭಾರತವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಬಲಪಡಿಸಲಿದೆ ಎಂದು ಅವರು ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅನುಜ್ ಶರ್ಮಾ ಅವರು ವಿಪತ್ತು ಸನ್ನದ್ಧತೆ ಮತ್ತು ಎನ್ ಡಿ ಎಂ ಎ ನ ಪ್ರಸ್ತುತದ ಉಪಕ್ರಮಗಳ ಕುರಿತು ಕೇಂದ್ರ ಸಚಿವರಿಗೆ ಪ್ರಸ್ತುತಿ ನೀಡಿದರು.
ಸೆಲ್ ಬ್ರಾಡ್‌ಕಾಸ್ಟ್ ಸಲ್ಯೂಷನ್ (ಸಿ ಬಿ ಎಸ್) ಎನ್ನುವುದು ದೂರಸಂಪರ್ಕ-ಸಕ್ರಿಯಗೊಳಿಸಿದ ಸಾರ್ವಜನಿಕ ಎಚ್ಚರಿಕೆ ವ್ಯವಸ್ಥೆಯಾಗಿದ್ದು, ಇದು ಪ್ರಾಧಿಕಾರಗಳು ನಿರ್ದಿಷ್ಟ ಪ್ರದೇಶದೊಳಗೆ ಮೊಬೈಲ್ ಸಾಧನಗಳಿಗೆ ಏಕಕಾಲದಲ್ಲಿ, ಭೌಗೋಳಿಕ ಕೇಂದ್ರಿತ (ಜಿಯೋ-ಟಾರ್ಗೆಟ್) ಮುನ್ನೆಚ್ಚರಿಕೆಗಳನ್ನು ರವಾನಿಸಲು ಮಾಡಲು ಅನುವು ಮಾಡಿಕೊಡಲಿದೆ. ಸಿಎಪಿ-ಆಧಾರಿತ ಸಾಚೇತ್ (ಎಸ್ ಎ ಸಿ ಹೆಚ್ ಇ ಟಿ) ವೇದಿಕೆಯೊಂದಿಗೆ ಸಂಯೋಜಿಸಲ್ಪಟ್ಟ ಇದು, ಎಚ್ಚರಿಕೆಗಳ ತ್ವರಿತ ಮತ್ತು ಪ್ರಮಾಣೀಕೃತ ಪ್ರಸರಣ ಸಾಧ್ಯವಾಗಿಸಲಿದೆ. ಇದು ಸಾಂಪ್ರದಾಯಿಕ ಎಸ್ ಎಂ ಎಸ್ ಆಧಾರಿತ ವ್ಯವಸ್ಥೆಗಳ ಮಿತಿಗಳನ್ನು ನಿವಾರಿಸಲಿದೆ. ನಿಗದಿತ ಪ್ರದೇಶಗಳಲ್ಲಿನ ಬೃಹತ್ ಜನಸಂಖ್ಯೆಗೆ ನಿರ್ಣಾಯಕ ಮಾಹಿತಿಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪುವುದನ್ನು ಖಚಿತಪಡಿಸಲಿದೆ.
ಈ ವ್ಯವಸ್ಥೆಯ ಆರಂಭಿಕ ಭಾಗವಾಗಿ, ಇಂದು ರಾಷ್ಟ್ರವ್ಯಾಪಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು, ಈ ಸಮಯದಲ್ಲಿ ದೇಶಾದ್ಯಂತ ಮೊಬೈಲ್ ಫೋನ್ ಗಳಿಗೆ ತುರ್ತು ಎಚ್ಚರಿಕೆ ಸಂದೇಶಗಳನ್ನು ವಿಶಿಷ್ಟ ಎಚ್ಚರಿಕೆಯ ಧ್ವನಿಯೊಂದಿಗೆ ರವಾನಿಸಲಾಯಿತು. ವಿಪತ್ತುಗಳು ಮತ್ತು ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆಗಳ ಸಕಾಲಿಕ ಪ್ರಸರಣವನ್ನು ಖಚಿತಪಡಿಸಿಕೊಳ್ಳುವಲ್ಲಿ ಇಂದಿನ ಅಣಕು ಪ್ರಾತ್ಯಕ್ಷಿಕೆಯು ಒಂದು ಪ್ರಮುಖ ಮೈಲಿಗಲ್ಲಾಗಿದೆ.
ಭಾರತದಲ್ಲಿ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮತ್ತು ಅಮೂಲ್ಯ ಕೊಡುಗೆ ನೀಡಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಬ್ಬರನ್ನೂ ಗುರುತಿಸಿ, ಸುಭಾಷ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರ್ (ಎಸ್ ಸಿ ಬಿ ಎ ಪಿ ಪಿ) ಅನ್ನು ಸಹ ಶ್ರೀ ಸಿಂಧಿಯಾ ಅವರು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣೆಯ ಮಾರ್ಗಸೂಚಿಗಳು ಮತ್ತು ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಸಿಬಿಎಸ್ ನಿಖರವಾದ ಜಿಯೋ-ಟಾರ್ಗೆಟಿಂಗ್ ಸಾಮರ್ಥ್ಯಗಳನ್ನು ಹೊಂದಿದ್ದು, ಇದು ಪ್ರತ್ಯೇಕ ಮೊಬೈಲ್ ಟವರ್ ಗಳು ಅಥವಾ ಕ್ಲಸ್ಟರ್ ಗಳ ಮಟ್ಟದಲ್ಲಿ ಎಚ್ಚರಿಕೆ ಸಂದೇಶಗಳನ್ನು ಪ್ರಸಾರ ಮಾಡಲು ಅನುವು ಮಾಡಿಕೊಡಲಿದೆ, ಜೊತೆಗೆ ದೊಡ್ಡ ಭೌಗೋಳಿಕ ಪ್ರದೇಶಗಳನ್ನು ಒಳಗೊಳ್ಳಲು ವಿಸ್ತರಣೆ ಸಾಧ್ಯವಾಗಿಸಲಿದೆ. ಸಂದೇಶಗಳನ್ನು ನೈಜ ಸಮಯದಲ್ಲಿ ತಲುಪಿಸಲಾಗುತ್ತಿದ್ದು, ಯಾವುದೇ ಸರತಿ ಸಾಲಿನ ವಿಳಂಬವಿಲ್ಲದೆ ಸೆಕೆಂಡುಗಳಲ್ಲಿ ಅದು ಬಳಕೆದಾರರನ್ನು ತಲುಪಲಿದೆ. ಹೆಚ್ಚಿನ ವಿಶ್ವಾಸಾರ್ಹತೆಗಾಗಿ ವಿನ್ಯಾಸಗೊಳಿಸಲಾದ ಈ ವ್ಯವಸ್ಥೆಯು ನೆಟ್ ವರ್ಕ್ ದಟ್ಟಣೆಯಿಂದ ಬಾಧಿತವಾಗುವುದಿಲ್ಲ, ಜೊತೆಗೆ ನಿರ್ಣಾಯಕ ಸಂದರ್ಭಗಳಲ್ಲಿ ನಿರಂತರ ಸಂವಹನವನ್ನು ಖಚಿತಪಡಿಸಲಿದೆ. ಇದು ರೋಮಿಂಗ್ ನಲ್ಲಿರುವವರು ಸೇರಿದಂತೆ ಉದ್ದೇಶಿತ ಪ್ರದೇಶದೊಳಗಿನ ಎಲ್ಲಾ ಮೊಬೈಲ್ ಬಳಕೆದಾರರನ್ನು ಒಳಗೊಳ್ಳುವ ಮೂಲಕ ಸಾರ್ವತ್ರಿಕ ವ್ಯಾಪ್ತಿಯನ್ನು ಒದಗಿಸಲಿದೆ ಮತ್ತು ಈ ಎಚ್ಚರಿಕೆಗಳನ್ನು ಬಳಕೆದಾರರು ನಿಷ್ಕ್ರಿಯಗೊಳಿಸಲು ಬರುವುದಿಲ್ಲ. ಅಲ್ಲದೇ, ಎಚ್ಚರಿಕೆಗಳನ್ನು ಆದ್ಯತೆಯ ಅಧಿಸೂಚನೆಗಳಾಗಿ ತಲುಪಿಸಲಾಗುತ್ತದೆ. ಸಂದೇಶವು ಧ್ವನಿ ರೂಪದಲ್ಲಿ ಪ್ರಕಟವಾಗುವ ವಿಧಾನ ಲಭ್ಯವಿರುವ ಮೊಬೈಲ್ ಗಳಲ್ಲಿ ಈ ಸಂದೇಶವು ವಿಭಿನ್ನ ಜೋರಾದ ಸ್ವರಗಳೊಂದಿಗೆ ಉಚ್ಚರಣೆಯಾಗಲಿದೆ ಹಾಗೂ ಪಾಪ್-ಅಪ್ ಸಂದೇಶವಾಗಿ ತೋರಿಸಲ್ಪಡುತ್ತದೆ.
ಈ ವ್ಯವಸ್ಥೆಯು ಬಹುಭಾಷಾ ಎಚ್ಚರಿಕೆಗಳನ್ನು ಬಹುತೇಕ ನೈಜ-ಸಮಯದ ಮೂಲಕ ಸಕ್ರಿಯಗೊಳಿಸಲಿದೆ, ಇದರಿಂದ ಹಠಾತ್ ಪ್ರವಾಹ ಮತ್ತು ಅನಿಲ ಸೋರಿಕೆಯಂತಹ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾತ್ಮಕ ಕ್ರಮಕ್ಕೆ ನಿರ್ಣಾಯಕ ಸಮಯ ಸಿಗಲಿದೆ. 2ಜಿ ನಿಂದ 5ಜಿ ನೆಟ್ ವರ್ಕ್ ಗಳಲ್ಲಿ ಬೆಂಬಲಿತವಾಗಿದ್ದು, ಇದು ಕೊನೆಯ ಮೈಲಿ ಮತ್ತು ರೋಮಿಂಗ್ ಜನಸಂಖ್ಯೆ ಸೇರಿದಂತೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಹು ವ್ಯಾಪ್ತಿಯನ್ನು ಖಚಿತಪಡಿಸಲಿದೆ. ನೇರ, ಅಧಿಕೃತ ಸಂವಹನವನ್ನು ಸಕ್ರಿಯಗೊಳಿಸುವ ಮೂಲಕ, ಇದು ವಿಪತ್ತು ನಿರ್ವಹಣೆಯನ್ನು ಬಲಪಡಿಸುತ್ತದೆ, ತ್ವರಿತ ಪ್ರತಿಕ್ರಿಯೆಯನ್ನು ನೀಡುತ್ತದೆ, ಭೀತಿಯನ್ನು ಕಡಿಮೆ ಮಾಡುತ್ತದೆ ಮತ್ತು ಸಾರ್ವಜನಿಕ ನಂಬಿಕೆ ಮತ್ತು ನಿಯಮ ಪಾಲನೆ ಹೆಚ್ಚಿಸುತ್ತದೆ.
ಸಿ ಎ ಪಿ -ಆಧಾರಿತ ಎಸ್ ಎ ಸಿ ಹೆಚ್ ಇ ಟಿ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಸೆಲ್ ಬ್ರಾಡ್‌ಕಾಸ್ಟ್ ಸಲ್ಯೂಷನ್ (ಸಿ ಬಿ ಎಸ್) ನ ಅಖಿಲ ಭಾರತ ಪ್ರಯೋಗಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತರಬೇತಿ ನಡೆಸಲಾಗಿದೆ. ಈ ವ್ಯವಸ್ಥೆಯು ವಿಪತ್ತುಗಳ ಸಮಯದಲ್ಲಿ ಪರಿಣಾಮಕಾರಿ ಎಂಬುದು ಸಾಬೀತಾಗಿದ್ದು ಆಂಧ್ರಪ್ರದೇಶ, ಒಡಿಶಾ ಮತ್ತು ಉತ್ತರಾಖಂಡದಾದ್ಯಂತ ಲಕ್ಷಾಂತರ ಜನರನ್ನು ತಲುಪಿದೆ ಮತ್ತು ಈಗ ಈ ಸೌಲಭ್ಯವನ್ನು ಚಾರ್ ಧಾಮ್ ಯಾತ್ರೆಗೂ ಕಲ್ಪಿಸಲಾಗುತ್ತಿದೆ. ವಿಶ್ವಸಂಸ್ಥೆಯ "ಎಲ್ಲರಿಗೂ ಮುಂಚಿತವಾಗಿ ಎಚ್ಚರಿಕೆಗಳು" ಉಪಕ್ರಮದೊಂದಿಗೆ ಅನುಗುಣವಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಿಷಸ್, ಕಾಂಬೋಡಿಯಾ, ಎಲ್ ಸಾಲ್ವಡಾರ್ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಸಿ - ಡಾಟ್ ಇದರ ಯಶಸ್ವಿ ಪ್ರದರ್ಶನ ನೀಡಿದೆ.
Follow DoT Handles for more: -
X - https://x.com/DoT_India
Insta- https://www.instagram.com/department_of_telecom?igsh=MXUxbHFjd3llZTU0YQ==
Fb - https://www.facebook.com/DoTIndia
Youtube: https://youtube.com/@departmentoftelecom?si=DALnhYkt89U5jAaa
*****
(ಪ್ರಕಟಣೆ ಐ.ಡಿ.: 2257590)
ವಿಸಿಟರ್ ಕೌಂಟರ್ : 13