ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

"ಭಾರತದಲ್ಲಿ ಮಹಿಳೆಯರು ಮತ್ತು ಪುರುಷರು 2025: ಆಯ್ದ ಸೂಚಕಗಳು ಮತ್ತು ದತ್ತಾಂಶ" ಪ್ರಕಟಣೆಯ ಬಿಡುಗಡೆ

ಪ್ರಕಟಣಾ ದಿನಾಂಕ: 29 APR 2026 3:22PM by PIB Bengaluru

ಭಾರತ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು, 2026ರ ಏಪ್ರಿಲ್ 29ರಂದು ಒಡಿಶಾದ ಭುವನೇಶ್ವರದಲ್ಲಿ ನಡೆದ “ಅಭಿವೃದ್ಧಿಗಾಗಿ ದತ್ತಾಂಶ” ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ತನ್ನ ಪ್ರಕಟಣೆಯ 27ನೇ ಆವೃತ್ತಿಯಾದ “ಭಾರತದಲ್ಲಿ ಮಹಿಳೆಯರು ಮತ್ತು ಪುರುಷರು 2025: ಆಯ್ದ ಸೂಚಕಗಳು ಮತ್ತು ದತ್ತಾಂಶ” ವನ್ನು ಬಿಡುಗಡೆ ಮಾಡಿತು.

ಈ ಪ್ರಕಟಣೆಯು ಜನಸಂಖ್ಯೆ, ಶಿಕ್ಷಣ, ಆರೋಗ್ಯ, ಆರ್ಥಿಕ ಭಾಗವಹಿಸುವಿಕೆ, ನಿರ್ಧಾರ ಕೈಗೊಳ್ಳುವಿಕೆ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಇತರ ಲಿಂಗ-ಸಂಬಂಧಿತ ವಿಷಯಗಳೂ ಸೇರಿದಂತೆ ಪ್ರಮುಖ ಕ್ಷೇತ್ರಗಳ ಆಯ್ದ ಸೂಚಕಗಳ ಸಂಕಲನದ ಮೂಲಕ ಭಾರತದಲ್ಲಿ ಮಹಿಳೆಯರು ಮತ್ತು ಪುರುಷರ ಸ್ಥಿತಿಗತಿಯ ಸಮಗ್ರ ಅವಲೋಕನವನ್ನು ಒದಗಿಸುತ್ತದೆ; ಇವುಗಳನ್ನು ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಪ್ರಕಟಣೆಯಲ್ಲಿ ಪ್ರಸ್ತುತಪಡಿಸಲಾದ ಅಂಕಿಅಂಶಗಳ ಹಿಂದಿನ ಪರಿಕಲ್ಪನೆಗಳು, ವ್ಯಾಖ್ಯಾನಗಳು, ಮೂಲಗಳು ಮತ್ತು ಸಾಂಖ್ಯಿಕ ವಿಧಾನಗಳ ಬಗ್ಗೆ ಸ್ಪಷ್ಟತೆ ನೀಡಲು ಮತ್ತು ಉತ್ತಮ ತಿಳುವಳಿಕೆಯನ್ನು ಸುಗಮಗೊಳಿಸಲು 50 ಪ್ರಮುಖ ಸೂಚಕಗಳಿಗೆ ಮೆಟಾಡೇಟಾವನ್ನು ಸಹ ಸೇರಿಸಲಾಗಿದೆ.

ಅಧಿಕೃತ ಅಂಕಿಅಂಶಗಳ ಆಧಾರದ ಮೇಲೆ, ಈ ಪ್ರಕಟಣೆಯು ವ್ಯಾಪಕ ಶ್ರೇಣಿಯ ವಿಷಯಗಳಲ್ಲಿ ಲಿಂಗ-ವಿಂಗಡಿತ ದತ್ತಾಂಶವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಹಲವು ಸೂಚಕಗಳನ್ನು ಗ್ರಾಮೀಣ-ನಗರ ವರ್ಗೀಕರಣ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಮತ್ತು ಲಭ್ಯವಿರುವ ಕಡೆಗಳಲ್ಲಿ ಕಾಲಾನುಕ್ರಮದ ಬದಲಾವಣೆಗಳಿಗೆ ಅನುಗುಣವಾಗಿ ಪ್ರಸ್ತುತಪಡಿಸಲಾಗಿದೆ. ಇದು ದೇಶದಾದ್ಯಂತ ವಿಕಸನಗೊಳ್ಳುತ್ತಿರುವ ಲಿಂಗ ತಾರತಮ್ಯಗಳು ಮತ್ತು ಅಭಿವೃದ್ಧಿಯ ಪ್ರವೃತ್ತಿಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀಡುತ್ತದೆ.

ಪ್ರಮುಖ ಸಾಮಾಜಿಕ-ಆರ್ಥಿಕ ಸೂಚಕಗಳ ವಿಶ್ಲೇಷಣೆಯನ್ನು ಪ್ರಸ್ತುತಪಡಿಸುವ ಮೂಲಕ ಮತ್ತು ಉದಯೋನ್ಮುಖ ಪ್ರವೃತ್ತಿಗಳನ್ನು ಎತ್ತಿ ತೋರಿಸುವ ಮೂಲಕ, ಈ ಪ್ರಕಟಣೆಯು ನೀತಿ ನಿರೂಪಕರು, ಸಂಶೋಧಕರು ಮತ್ತು ಇತರ ಪಾಲುದಾರರಿಗೆ ಒಳಗೊಳ್ಳುವ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿ ಹೊಂದಿರುವ ಲಿಂಗ-ಪ್ರತಿಸ್ಪಂದಕ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಮೌಲ್ಯಯುತ ಪುರಾವೆಗಳನ್ನು ಒದಗಿಸುತ್ತದೆ.

“ಭಾರತದಲ್ಲಿ ಮಹಿಳೆಯರು ಮತ್ತು ಪುರುಷರು 2025: ಆಯ್ದ ಸೂಚಕಗಳು ಮತ್ತು ದತ್ತಾಂಶ” ಪ್ರಕಟಣೆಯು ಸಚಿವಾಲಯದ ವೆಬ್‌ಸೈಟ್‌ ನಲ್ಲಿ (https://mospi.gov.in/) ಲಭ್ಯವಿದೆ.

ಪ್ರಕಟಣೆಯ ಕೆಲವು ಮುಖ್ಯಾಂಶಗಳು ಕೆಳಗಿನಂತಿವೆ:

  1. ಅಖಿಲ ಭಾರತ ಮಟ್ಟದಲ್ಲಿ ಜನನ ಸಮಯದಲ್ಲಿನ ಲಿಂಗ ಅನುಪಾತವು ಹೆಚ್ಚಾಗಿದೆ, ಇದು ಹೆಣ್ಣುಮಕ್ಕಳ ಬದುಕುಳಿಯುವಿಕೆಯ ದರ ಸುಧಾರಿಸಿರುವುದನ್ನು ಸೂಚಿಸುತ್ತದೆ. ಈ ಅನುಪಾತವು 2017-19ರಲ್ಲಿ 904 ಇದ್ದದ್ದು, 2021-23ರ ವೇಳೆಗೆ 917ಕ್ಕೆ ಏರಿಕೆಯಾಗಿದೆ.

  1. 2008 ಮತ್ತು 2023ರ ನಡುವೆ ಹೆಣ್ಣು ಮತ್ತು ಗಂಡು ಮಕ್ಕಳ ಶಿಶು ಮರಣ ದರದಲ್ಲಿ ಗಮನಾರ್ಹ ಮತ್ತು ನಿರಂತರ ಇಳಿಕೆ ದಾಖಲಾಗಿದೆ.

  1. ಪ್ರಾಥಮಿಕ ಹಂತದಿಂದ ಉನ್ನತ ಪ್ರೌಢ ಶಿಕ್ಷಣದವರೆಗೆ ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲಾಗಿದೆ.

  1. 2021-22 ಮತ್ತು 2022-23ರ ನಡುವೆ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತವು (ಜಿಇಆರ್) ಮಹಿಳೆಯರಿಗೆ 28.5 ರಿಂದ 30.2 ಕ್ಕೆ ಮತ್ತು ಪುರುಷರಿಗೆ 28.3 ರಿಂದ 28.9 ಕ್ಕೆ ಸುಧಾರಿಸಿದೆ. ‌

  1. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ಮತ್ತು ಮಹಿಳೆಯರಿಬ್ಬರ ಕಾರ್ಮಿಕ ಶಕ್ತಿ ಭಾಗವಹಿಸುವಿಕೆ ದರದಲ್ಲಿ (ಎಲ್‌ ಎಫ್‌ ಪಿ ಆರ್) ಹೆಚ್ಚಳ ಕಂಡುಬಂದಿದೆ. ವಿಶೇಷವಾಗಿ, ಗ್ರಾಮೀಣ ಮಹಿಳೆಯರು 2022 ರಿಂದ 2025 ರ ಅವಧಿಯಲ್ಲಿ ಶೇಕಡಾ 37.5 ರಿಂದ ಶೇಕಡಾ 45.9 ಕ್ಕೆ ಏರುವ ಮೂಲಕ ಎಲ್‌ ಎಫ್‌ ಪಿ ಆರ್ ನಲ್ಲಿ ಅತ್ಯಧಿಕ ಹೆಚ್ಚಳವನ್ನು ಕಂಡಿದ್ದಾರೆ.

  1. 2017 ಮತ್ತು 2025ರ ನಡುವೆ ವ್ಯವಸ್ಥಾಪಕ ಹುದ್ದೆಗಳಲ್ಲಿ ತೊಡಗಿರುವ ಪುರುಷರ ಸಂಖ್ಯೆಯಲ್ಲಿ ಶೇಕಡಾ 73.80 ರಷ್ಟು ಹೆಚ್ಚಳವಾಗಿದ್ದರೆ, ಅದೇ ಅವಧಿಯಲ್ಲಿ ವ್ಯವಸ್ಥಾಪಕ ಹುದ್ದೆಗಳಲ್ಲಿ ತೊಡಗಿರುವ ಮಹಿಳೆಯರ ಸಂಖ್ಯೆಯಲ್ಲಿ ಶೇಕಡಾ 102.54 ರಷ್ಟು ಗಮನಾರ್ಹ ಹೆಚ್ಚಳವಾಗಿದೆ.

ಈ ಪ್ರಕಟಣೆಯು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ ನಲ್ಲಿ ಲಭ್ಯವಿದ್ದು, ಕೆಳಗಿನ ಕ್ಯುಆರ್‌ ಕೋಡ್ ಮೂಲಕವೂ ಸಹ ಇದನ್ನು ಪಡೆಯಬಹುದಾಗಿದೆ.

 

******

 


(ಪ್ರಕಟಣೆ ಐ.ಡಿ.: 2256780) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: Odia , Urdu , हिन्दी , Marathi , Gujarati , Telugu , English