ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಎಲೆಕ್ಟ್ರಾನಿಕ್ ಉತ್ಪಾದನೆಯಲ್ಲಿ ಭಾರತವು ವಿಶ್ವಕ್ಕೆ ಪ್ರಮುಖ ವಿಶ್ವಾಸಾರ್ಹ ಮೌಲ್ಯ ಸರಪಳಿ ಮತ್ತು ಪೂರೈಕೆ ಸರಪಳಿ ಪಾಲುದಾರನಾಗಿ ಹೊರಹೊಮ್ಮಲಿದೆ: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್
ವಿಶಾಖಪಟ್ಟಣಂನಲ್ಲಿ ಗೂಗಲ್ ಕ್ಲೌಡ್ ಇಂಡಿಯಾ ಎಐ ಹಬ್ ಭೂಮಿ ಪೂಜೆ ಸಮಾರಂಭದಲ್ಲಿ ಕೇಂದ್ರ ಸಚಿವರ ಭಾಗಿಯಾದರು
ಭಾರತದ ಎಐ ಮತ್ತು ದತ್ತಾಂಶ ಕ್ರಾಂತಿಗೆ ಚಾಲನೆ ನೀಡುವ ಮೂಲಕ ವಿಶಾಖಪಟ್ಟಣಂ "ಎಐ ಪಟ್ನಂ" ಆಗಲು ಸಜ್ಜು
ಪ್ರಕಟಣಾ ದಿನಾಂಕ:
28 APR 2026 1:55PM by PIB Bengaluru
ಬಲಿಷ್ಠ ನೀತಿ ಬೆಂಬಲ ಮತ್ತು ದೂರದೃಷ್ಟಿಯ ನಾಯಕತ್ವದಿಂದಾಗಿ, ಭಾರತವು ಎಲೆಕ್ಟ್ರಾನಿಕ್ ಉತ್ಪಾದನೆಯಲ್ಲಿ ಜಗತ್ತಿಗೆ ಪ್ರಮುಖ ವಿಶ್ವಾಸಾರ್ಹ ಮೌಲ್ಯ ಸರಪಳಿ ಮತ್ತು ಪೂರೈಕೆ ಸರಪಳಿ ಪಾಲುದಾರನಾಗಿ ಹೊರಹೊಮ್ಮಲು ಸನ್ನದ್ಧವಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಮತ್ತು ವಾರ್ತಾ ಹಾಗೂ ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ತಿಳಿಸಿದರು.
ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ, ಹಲವಾರು ಕೇಂದ್ರ ಸಚಿವರು, ರಾಜ್ಯ ಸಚಿವರು ಮತ್ತು ಉದ್ಯಮದ ಗಣ್ಯರ ಉಪಸ್ಥಿತಿಯಲ್ಲಿ ವಿಶಾಖಪಟ್ಟಣಂನಲ್ಲಿ ನಡೆದ ಗೂಗಲ್ ಕ್ಲೌಡ್ ಇಂಡಿಯಾ ಎಐ ಹಬ್ ನ ಭೂಮಿ ಪೂಜೆ ಸಮಾರಂಭದ ನಂತರ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಅಂದಾಜು 15 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯ ಈ ಯೋಜನೆಯನ್ನು ಅದಾನಿ ಕನೆಕ್ಸ್ (Adani ConneX) ಮತ್ತು ಏರ್‌ಟೆಲ್ ಎನ್‌ಕ್ಸ್ಟ್ರಾ (Airtel Nxtra) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ವಿಶಾಖಪಟ್ಟಣಂನಲ್ಲಿ 1 ಗಿಗಾವಾಟ್ ಸಾಮರ್ಥ್ಯದ ಹೈಪರ್‌ಸ್ಕೇಲ್ ಎಐ ದತ್ತಾಂಶ ಕೇಂದ್ರವನ್ನು ಒಳಗೊಂಡಿರುತ್ತದೆ. ಆಂಧ್ರಪ್ರದೇಶ ಸರ್ಕಾರವು ಈ ಯೋಜನೆಗಾಗಿ ತುರ್ಲುವಾಡ, ರಂಬಿಲ್ಲಿ ಮತ್ತು ಅಡವಿವರಂ ಪ್ರದೇಶಗಳಲ್ಲಿ ಸುಮಾರು 600 ಎಕರೆ ಭೂಮಿಯನ್ನು ಮಂಜೂರು ಮಾಡಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಉತ್ಪಾದನೆಯಲ್ಲಿ ಭಾರತದ ಬೆಳವಣಿಗೆ:
ಭಾರತವು ಈಗಾಗಲೇ ಐಟಿ ಸೇವೆಗಳಲ್ಲಿ ನಾಯಕನಾಗಿ ಹೊರಹೊಮ್ಮಿದೆ ಮತ್ತು ಈಗ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ವೇಗವಾಗಿ ಮುನ್ನಡೆಯುತ್ತಿದೆ ಎಂದು ಶ್ರೀ ಅಶ್ವಿನಿ ವೈಷ್ಣವ್ ಹೈಲೈಟ್ ಮಾಡಿದರು.
ಗೌರವಾನ್ವಿತ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಶ್ಲಾಘಿಸಿದ ಸಚಿವರು, ಸೆಮಿಕಂಡಕ್ಟರ್, ಕ್ವಾಂಟಮ್, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆಯಂತಹ ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೇಶವು ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವ ಅಗತ್ಯವನ್ನು ಒತ್ತಿಹೇಳಿದರು.
ಮೊಬೈಲ್ ಉತ್ಪಾದನೆಯಲ್ಲಿ ಭಾರತವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಅವರು ಹೇಳಿದರು, ಮೊಬೈಲ್ ಫೋನ್ ಗಳು ದೇಶದ ಪ್ರಮುಖ ರಫ್ತು ವಸ್ತುಗಳಲ್ಲಿ ಒಂದಾಗಿವೆ. ದೇಶೀಯ ಎಲೆಕ್ಟ್ರಾನಿಕ್ ಬೇಡಿಕೆಯ ಸುಮಾರು ಶೇ. 50 ರಷ್ಟನ್ನು ಈಗ ಸ್ಥಳೀಯ ಉತ್ಪಾದನೆಯ ಮೂಲಕ ಪೂರೈಸಲಾಗುತ್ತಿದೆ. ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ, ಭಾರತದಲ್ಲಿ ಈಗಾಗಲೇ ವಾಣಿಜ್ಯ ಉತ್ಪಾದನೆ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.
ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಭಾರತವು ವಿಶ್ವಾಸಾರ್ಹ ಪಾಲುದಾರನಾಗುತ್ತಿದೆ ಎಂದು ಸಚಿವರು ಒತ್ತಿಹೇಳಿದರು ಮತ್ತು ಗೂಗಲ್ ಸೇರಿದಂತೆ ಜಾಗತಿಕ ತಂತ್ರಜ್ಞಾನ ಕಂಪನಿಗಳು ತಮ್ಮ ಸರ್ವರ್ ಗಳು, ಜಿಪಿಯುಗಳು ಮತ್ತು ಚಿಪ್ ಗಳನ್ನು ದೇಶದೊಳಗೆ ತಯಾರಿಸುವಂತೆ ಅವರು ಕರೆ ನೀಡಿದರು.
PFFK.jpeg)
ಎಐ ಹಬ್ ಆಗಿ ಹೊರಹೊಮ್ಮುತ್ತಿರುವ ವಿಶಾಖಪಟ್ಟಣಂ:
ಈ ಯೋಜನೆಯನ್ನು ಪರಿವರ್ತನಾಕಾರಿ ಎಂದು ಬಣ್ಣಿಸಿದ ಸಚಿವರು, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಜಾಗತಿಕ ಹೂಡಿಕೆಗಳಿಂದಾಗಿ ವಿಶಾಖಪಟ್ಟಣಂ "ಎಐ ಪಟ್ನಂ" ಆಗಿ ವಿಕಸನಗೊಳ್ಳಲಿದೆ ಎಂದು ಹೇಳಿದರು.
ಐಟಿ ಪೂರಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಅವರ ದೂರದೃಷ್ಟಿಯನ್ನು ಅವರು ಶ್ಲಾಘಿಸಿದರು ಮತ್ತು ಹೊಸ ಎಐ ದತ್ತಾಂಶ ಕೇಂದ್ರವು ಶಿಕ್ಷಣ, ಆರೋಗ್ಯ, ಏರೋಸ್ಪೇಸ್, ಲಾಜಿಸ್ಟಿಕ್ಸ್ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತದೆ ಎಂದು ಹೇಳಿದರು.
ವಿಶಾಖಪಟ್ಟಣಂನಿಂದ ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ, ಯುರೋಪ್, ಆಫ್ರಿಕಾ ಮತ್ತು ಅಮೆರಿಕ ಮೂಲಕ ಜಾಗತಿಕ ಡಿಜಿಟಲ್ ಮಾರ್ಗಗಳನ್ನು ಸಂಪರ್ಕಿಸುವ ಮೂರು ಸಬ್-ಸೀ ಕೇಬಲ್ ಗಳನ್ನು ಅಳವಡಿಸುತ್ತಿರುವುದಕ್ಕಾಗಿ ಅವರು ಗೂಗಲ್ ಸಂಸ್ಥೆಗೆ ಧನ್ಯವಾದ ತಿಳಿಸಿದರು.
ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ ಉದ್ಯಮ ಮುಖಂಡರು:
ಗೂಗಲ್ ಕ್ಲೌಡ್ ಜಾಗತಿಕ ಮೂಲಸೌಕರ್ಯ ವಿಭಾಗದ ಉಪಾಧ್ಯಕ್ಷ ಬಿಕಾಶ್ ಕೋಲಿ ಮಾತನಾಡಿ, ಎಐ ಹಬ್ ವಿಕಸಿತ ಭಾರತ 2047ಕ್ಕೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತದ ಡಿಜಿಟಲ್ ರೂಪಾಂತರ ಹಾಗೂ ಜಾಗತಿಕ ಎಐ ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಅದಾನಿ ಗ್ರೂಪ್ ಅಧ್ಯಕ್ಷ ಜೀತ್ ಅದಾನಿ ಮಾತನಾಡಿ, 1 ಗಿಗಾವಾಟ್ ಹೈಪರ್ ಸ್ಕೇಲ್ ಎಐ ದತ್ತಾಂಶ ಕೇಂದ್ರವು ಭಾರತದ ಎಐ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಮತ್ತು ವಿಶಾಖಪಟ್ಟಣಂ ಅನ್ನು ಭಾರತದ ಹೊಸ ಡಿಜಿಟಲ್ ಗೇಟ್ ವೇ ಆಗಿ ರೂಪಿಸಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ರಾಜ್ಯದ ಹಿರಿಯ ಸಚಿವರು, ಸಂಸತ್ ಸದಸ್ಯರು, ಉದ್ಯಮದ ಮುಖಂಡರು ಮತ್ತು ಗೂಗಲ್, ಅದಾನಿ ಗ್ರೂಪ್, ಏರ್‌ಟೆಲ್ ಎನ್‌ಕ್ಸ್ಟ್ರಾ ಮತ್ತು ಇತರ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2256242)
ವಿಸಿಟರ್ ಕೌಂಟರ್ : 11