ರೈಲ್ವೇ ಸಚಿವಾಲಯ
azadi ka amrit mahotsav

ಸುಸ್ಥಿರತೆಯತ್ತ ಮುನ್ನಡೆ: 2025-26ರಲ್ಲಿ ಭಾರತೀಯ ರೈಲ್ವೆಯಿಂದ ವಿವಿಧ ವಲಯಗಳಾದ್ಯಂತ 81 ಲಕ್ಷ 59 ಸಾವಿರ ಸಸಿಗಳ ನೆಡುವಿಕೆ


ರೈಲು ಹಳಿಗಳ ಉದ್ದಕ್ಕೂ ವ್ಯಾಪಕವಾಗಿ ಸಸಿಗಳನ್ನು ನೆಡುವ ಮೂಲಕ ಮಣ್ಣಿನ ಸವಕಳಿಯನ್ನು ತಡೆಗಟ್ಟಲಾಗುತ್ತಿದೆ; ಇದು ನಮ್ಮ ಪ್ರಯಾಣವನ್ನು ಮತ್ತಷ್ಟು ಹಸಿರುಮಯ, ಸುರಕ್ಷಿತ ಹಾಗೂ ಸುಖದಾಯಕವಾಗಿಸುತ್ತಿದೆ

"ನಮ್ಮ ಶಕ್ತಿ, ನಮ್ಮ ಭೂಮಿ" ದೃಷ್ಟಿಕೋನವನ್ನು ಮುಂದುವರಿಸುತ್ತಾ, ವಿದ್ಯುದೀಕರಣಗೊಂಡ ಹಸಿರು ರೈಲ್ವೆ, ಸಂಸ್ಕರಿಸಿದ ಮಳೆನೀರಿನ ಪರಿಣಾಮಕಾರಿ ಬಳಕೆ ಮತ್ತು ಬಯೋ-ಟಾಯ್ಲೆಟ್‌ ಗಳ ನಿರ್ಮಾಣ

2014 ರಿಂದ 3.66 ಲಕ್ಷ ಬಯೋ-ಟಾಯ್ಲೆಟ್‌ ಗಳ ಅಳವಡಿಕೆ; ಇದು ಸ್ವಚ್ಛ ಹಳಿಗಳನ್ನು ಖಚಿತಪಡಿಸುವುದರ ಜೊತೆಗೆ ಮಣ್ಣು ಮತ್ತು ಅಂತರ್ಜಲವನ್ನು ಸಂರಕ್ಷಿಸುತ್ತಿದೆ ಹಾಗೂ ದಿನನಿತ್ಯದ ಪ್ರಯಾಣಿಕರ ನೈರ್ಮಲ್ಯವನ್ನು ಸುಧಾರಿಸುತ್ತಿದೆ

ಶೇ. 99.6 ರಷ್ಟು ಬ್ರಾಡ್ ಗೇಜ್ ಜಾಲದ ವಿದ್ಯುದೀಕರಣದೊಂದಿಗೆ, ಭಾರತೀಯ ರೈಲ್ವೆಯು ಡೀಸೆಲ್ ಬಳಕೆಯನ್ನು ಕಡಿತಗೊಳಿಸಿದೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ತೈಲ ಆಮದು ಅವಲಂಬನೆಯನ್ನು ಕನಿಷ್ಠಗೊಳಿಸಿದೆ

2016-17 ರಿಂದ 8,313 ಮಳೆನೀರು ಕೊಯ್ಲು ರಚನೆಗಳ ಸ್ಥಾಪನೆ; ಮಳೆನೀರನ್ನು ದಕ್ಷತೆಯಿಂದ ಹಿಡಿಯುವ ಮೂಲಕ ರೈಲು ನಿಲ್ದಾಣಗಳಾದ್ಯಂತ ಜಲ ಸಂರಕ್ಷಣೆಯನ್ನು ಬಲಪಡಿಸಲಾಗಿದೆ

ಕಳೆದ ಹಣಕಾಸು ವರ್ಷವೊಂದರಲ್ಲೇ 26 ಹೊಸ ನೀರು ಮರುಬಳಕೆ ಘಟಕಗಳ ಕಾರ್ಯಾರಂಭ ಮತ್ತು 2015-16 ರಿಂದ ಒಟ್ಟು 185 ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಮೂಲಕ ರೈಲ್ವೆಯು ಹಸಿರುಮಯವಾಗುವತ್ತ "ನಿಶ್ಯಬ್ದ ಕ್ರಾಂತಿ"ಯನ್ನು ಮುನ್ನಡೆಸುತ್ತಿದೆ

ರೈಲ್ವೆ ಭೂಮಿಯಲ್ಲಿರುವ 109 ಹಳ್ಳ, ಕೆರೆ ಮತ್ತು ಜೌಗು ಪ್ರದೇಶಗಳ ಪುನಶ್ಚೇತನ; ಇದರಿಂದ ಸ್ಥಳೀಯ ಅಂತರ್ಜಲ ಮರುಪೂರಣಗೊಳ್ಳುತ್ತಿರುವುದಲ್ಲದೆ, ರೈಲ್ವೆ ಸೀಮೆಯನ್ನು ಮೀರಿ ಸಮುದಾಯಗಳಿಗೆ ಪ್ರಯೋಜನವಾಗುವಂತೆ ಜೀವವೈವಿಧ್ಯದ ಆವಾಸಸ್ಥಾನಗಳು ಸೃಷ್ಟಿಯಾಗಿವೆ

909 MW ಸೌರ ಮತ್ತು 103 MW ಪವನ ವಿದ್ಯುತ್ ಸಾಮರ್ಥ್ಯದ ಕಾರ್ಯಾರಂಭ ಹಾಗೂ ಹೆಚ್ಚುವರಿ 3,300 MW ಗಾಗಿ ಒಪ್ಪಂದ; ಇದು ನಮ್ಮನ್ನು ಸ್ವಾವಲಂಬಿ ಮತ್ತು ಸುಸ್ಥಿರವಾಗಿಸಲು ಸಹಾಯ ಮಾಡುತ್ತಿದೆ

ಪ್ರಕಟಣಾ ದಿನಾಂಕ: 22 APR 2026 6:26PM by PIB Bengaluru

"ನಮ್ಮ ಶಕ್ತಿ, ನಮ್ಮ ಭೂಮಿ" (Our Power, Our Planet) ಎಂಬ ಜಾಗತಿಕ ವಿಷಯದ ಅಡಿಯಲ್ಲಿ ವಿಶ್ವವು 2026ರ ವಿಶ್ವ ಭೂ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಭಾರತೀಯ ರೈಲ್ವೆಯು ಪರಿಸರ ಸಂರಕ್ಷಣೆಯ ಬಗ್ಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ವಿಶಾಲ ಮತ್ತು ವೈವಿಧ್ಯಮಯ ಭೌಗೋಳಿಕ ಪ್ರದೇಶದಾದ್ಯಂತ ಪ್ರತಿದಿನ 2 ಕೋಟಿಗೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ರೈಲ್ವೇಯು ಕೇವಲ ಸಾರಿಗೆ ಮಾಧ್ಯಮವಲ್ಲ; ಬದಲಾಗಿ, ಭಾರತವನ್ನು ಹಸಿರು ಭವಿಷ್ಯದತ್ತ ಮುನ್ನಡೆಸುವ ಸಾಮರ್ಥ್ಯ, ವ್ಯಾಪ್ತಿ ಮತ್ತು ದೃಢ ಇಚ್ಛಾಶಕ್ತಿಯನ್ನು ಹೊಂದಿರುವ ಒಂದು ಬಲಿಷ್ಠ ಸಂಸ್ಥೆಯಾಗಿದೆ.

ಕಳೆದ ಒಂದು ದಶಕದಲ್ಲಿ, ಭಾರತೀಯ ರೈಲ್ವೆಯು ಮೂಲಸೌಕರ್ಯ ಯೋಜನೆ, ನಿಲ್ದಾಣ ನಿರ್ವಹಣೆ, ರೈಲು ಎಂಜಿನ್ ಮತ್ತು ಬೋಗಿಗಳು (Rolling stock) ಹಾಗೂ ಭೂಬಳಕೆಯಲ್ಲಿ ಪರಿಸರ ಹೊಣೆಗಾರಿಕೆಯನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ಕಾರ್ಯಾಚರಣೆಗಳನ್ನು ವ್ಯವಸ್ಥಿತವಾಗಿ ರೂಪಾಂತರಿಸಿದೆ. ಇಂದು, ಸುಸ್ಥಿರ ಸಾರಿಗೆ ಕ್ಷೇತ್ರದಲ್ಲಿ ಇದು ವಿಶ್ವದ ಅತ್ಯಂತ ಪ್ರಭಾವಶಾಲಿ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಹಸಿರು ಬೆಳವಣಿಗೆ, ಸುರಕ್ಷಿತ ಸಂಚಾರ: ಭಾರತೀಯ ರೈಲ್ವೆಯ ಸಸಿ ನೆಡುವ ಅಭಿಯಾನವು ರೈಲು ಮಾರ್ಗಗಳಿಗೆ ಹೊಸ ರೂಪ ನೀಡುತ್ತಿರುವ ಬಗೆ

ಭಾರತೀಯ ರೈಲ್ವೆಯ ಸಸಿ ನೆಡುವ ಅಭಿಯಾನವು ಎಲ್ಲಾ ವಲಯಗಳಲ್ಲಿ ಜಾರಿಯಲ್ಲಿದೆ, ಇದು ಪರಿಸರ ಸುಸ್ಥಿರತೆಯತ್ತ ಒಂದು ಸಮನ್ವಯದ ರಾಷ್ಟ್ರವ್ಯಾಪಿ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ. 2025-26ನೇ ಸಾಲಿನಲ್ಲಿ ಎಲ್ಲಾ ವಲಯಗಳಲ್ಲಿ ನೆಡಲಾದ ಒಟ್ಟು 81.59 ಲಕ್ಷ ಸಸಿಗಳಲ್ಲಿ, ಈಶಾನ್ಯ ಗಡಿ ರೈಲ್ವೆ (9.3 ಲಕ್ಷ), ದಕ್ಷಿಣ ಮಧ್ಯ ರೈಲ್ವೆ (9 ಲಕ್ಷ), ಈಶಾನ್ಯ ರೈಲ್ವೆ (8.7 ಲಕ್ಷ) ಮತ್ತು ಉತ್ತರ ರೈಲ್ವೆ (8.5 ಲಕ್ಷ) ಮುಂತಾದ ಪ್ರಮುಖ ವಲಯಗಳಿಂದ ಗಮನಾರ್ಹ ಕೊಡುಗೆಗಳು ಬಂದಿವೆ. ರೈಲು ಹಳಿಗಳ ಉದ್ದಕ್ಕೂ, ನಿಲ್ದಾಣದ ಆವರಣದಲ್ಲಿ ಮತ್ತು ಲಭ್ಯವಿರುವ ರೈಲ್ವೆ ಭೂಮಿಯಲ್ಲಿ ವ್ಯಾಪಕವಾಗಿ ಸಸಿಗಳನ್ನು ನೆಡುವ ಮೂಲಕ ವಿವಿಧ ಪ್ರದೇಶಗಳಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸಲಾಗುತ್ತಿದೆ. ಈ ಉಪಕ್ರಮವು ಇಂಗಾಲದ ಹೊರಸೂಸುವಿಕೆಯನ್ನು (Carbon footprint) ತಗ್ಗಿಸುತ್ತಿದೆ, ಜೀವವೈವಿಧ್ಯಕ್ಕೆ ಬೆಂಬಲ ನೀಡುತ್ತಿದೆ ಮತ್ತು ಪರಿಸರ ಸ್ಥಿತಿಗತಿಗಳನ್ನು ಸುಧಾರಿಸುತ್ತಿದೆ. ಇದರಿಂದ ಪ್ರಯಾಣಿಕರಿಗೆ ರೈಲು ಪ್ರಯಾಣವು ಮತ್ತಷ್ಟು ಹಸಿರುಮಯ ಹಾಗೂ ಆರೋಗ್ಯಕರವಾಗುತ್ತಿದೆ.

ಬೃಹತ್ ಪ್ರಮಾಣದ ಈ ಸಸಿ ನೆಡುವ ಪ್ರಯತ್ನವು ನೈಸರ್ಗಿಕ ಇಂಗಾಲದ ಶೇಖರಣಾ ತಾಣವಾಗಿ (natural carbon sink) ಕಾರ್ಯನಿರ್ವಹಿಸುವ ಮೂಲಕ ಹವಾಮಾನ ಸ್ಥಿತಿಸ್ಥಾಪಕತ್ವವನ್ನು (climate resilience) ಬಲಪಡಿಸುತ್ತಿದೆ, ಜೊತೆಗೆ ಶಬ್ದ ಮತ್ತು ಧೂಳಿನ ಪ್ರಭಾವವನ್ನು ತಗ್ಗಿಸಲು ನೆರವಾಗುತ್ತಿದೆ. ಸುಧಾರಿತ ಹಸಿರು ಹೊದಿಕೆಯು ರೈಲು ನಿಲ್ದಾಣಗಳಲ್ಲಿ ಮತ್ತು ರೈಲು ಮಾರ್ಗಗಳ ಉದ್ದಕ್ಕೂ ಉತ್ತಮ ಸೂಕ್ಷ್ಮ ಹವಾಮಾನ ಪರಿಸ್ಥಿತಿಗಳನ್ನು ನಿರ್ಮಿಸಲು ಕೊಡುಗೆ ನೀಡುತ್ತಿದ್ದು, ಪ್ರಯಾಣದ ಸಮಯದಲ್ಲಿ ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುತ್ತಿದೆ.

ಹೆಚ್ಚುವರಿಯಾಗಿ, ರೈಲು ಹಳಿಗಳ ಉದ್ದಕ್ಕೂ ಸಸಿಗಳನ್ನು ನೆಡುವುದು ಮೂಲಸೌಕರ್ಯದ ಸುರಕ್ಷತೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮರಗಳ ಬೇರುಗಳು ಮಣ್ಣನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುವುದರಿಂದ ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ ಮತ್ತು ವಿಶೇಷವಾಗಿ ಗುಡ್ಡಗಾಡು ಹಾಗೂ ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಭೂಕುಸಿತವನ್ನು ತಡೆಯಲು ಸಹಕಾರಿಯಾಗುತ್ತದೆ. ಸಸ್ಯವರ್ಗದ ಹೊದಿಕೆಯು ಮೇಲ್ಮೈ ನೀರಿನ ಹರಿವನ್ನು ನಿಯಂತ್ರಿಸುತ್ತದೆ ಮತ್ತು ನೀರಿನ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ, ಇದರಿಂದ ರೈಲು ಹಳಿಗಳು ಅಸ್ಥಿರಗೊಳ್ಳುವ ಅಪಾಯಗಳು ಕನಿಷ್ಠಗೊಳ್ಳುತ್ತವೆ. ಪ್ರಕೃತಿ ಆಧಾರಿತ ಇಂತಹ ಕ್ರಮಗಳು ರೈಲ್ವೆ ಆಸ್ತಿಗಳನ್ನು ರಕ್ಷಿಸುವುದು ಮಾತ್ರವಲ್ಲದೆ, ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಹೆಚ್ಚು ವಿಶ್ವಾಸಾರ್ಹ ಪ್ರಯಾಣವನ್ನು ಖಚಿತಪಡಿಸುತ್ತವೆ.

ನೀರು: ಕೊಯ್ಲು, ಮರುಬಳಕೆ, ಲೆಕ್ಕಪರಿಶೋಧನೆ ಮತ್ತು ಪುನಶ್ಚೇತನ

ನೀರಿನ ಕೊರತೆಯು ನಮ್ಮ ಶತಮಾನದ ನಿರ್ಣಾಯಕ ಬಿಕ್ಕಟ್ಟುಗಳಲ್ಲಿ ಒಂದಾಗಿದೆ. ಪ್ರತಿದಿನ ಲಕ್ಷಾಂತರ ಲೀಟರ್ ನೀರನ್ನು ಬಳಸುವ ನೂರಾರು ವಾಷಿಂಗ್ ಲೈನ್‌ಗಳು, ನಿರ್ವಹಣಾ ಡಿಪೋಗಳು, ಕ್ಯಾಟರಿಂಗ್ ಸೌಲಭ್ಯಗಳು ಮತ್ತು ಪ್ರಯಾಣಿಕರ ಸೌಕರ್ಯಗಳನ್ನು ನಿರ್ವಹಿಸುವ ಭಾರತೀಯ ರೈಲ್ವೆಯು, ಒಂದು ಸಂಸ್ಥೆಯಾಗಿ ತನ್ನ ಎಲ್ಲಾ ವಲಯಗಳಲ್ಲಿ ನೀರಿನ ಬಳಕೆಯ ಹೊರೆ ತಗ್ಗಿಸಲು ಉದ್ದೇಶಪೂರ್ವಕ ಮತ್ತು ಅಳೆಯಬಹುದಾದ ಕ್ರಮಗಳನ್ನು ಕೈಗೊಂಡಿದೆ.     ಈ ವಿಧಾನವು ಸಮಗ್ರವಾಗಿದ್ದು: ಮಳೆಯ ನೀರು ಹರಿದು ವ್ಯರ್ಥವಾಗುವ ಮೊದಲು ಅದನ್ನು ಸಂಗ್ರಹಿಸುವುದು, ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗಾಗಿ ಬಳಸಿದ ನೀರನ್ನು ಮರುಬಳಕೆ ಮಾಡುವುದು, ನೀರಿನ ಪೋಲನ್ನು ಗುರುತಿಸಲು ಬಳಕೆಯ ಲೆಕ್ಕಪರಿಶೋಧನೆ ನಡೆಸುವುದು ಮತ್ತು ರೈಲ್ವೆ ಭೂಮಿಯಲ್ಲಿ ಕ್ಷೀಣಿಸಿರುವ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವುದನ್ನು ಒಳಗೊಂಡಿದೆ.

ಮೇಲ್ಛಾವಣಿ ಮಳೆನೀರು ಕೊಯ್ಲು (RWH): ಮಳೆ ಎಲ್ಲಿ ಬೀಳುತ್ತದೆಯೋ ಅಲ್ಲಿಯೇ ಸಂಗ್ರಹಿಸುವುದು

2016-17ರಿಂದ, ಭಾರತೀಯ ರೈಲ್ವೆಯು ಎಲ್ಲಾ ರೈಲ್ವೆ ವಲಯಗಳಾದ್ಯಂತ ಒಟ್ಟು 8,313 ಮೇಲ್ಛಾವಣಿ ಮಳೆನೀರು ಕೊಯ್ಲು (RWH) ರಚನೆಗಳನ್ನು ಸ್ಥಾಪಿಸಿದೆ. ಕಳೆದ ಎರಡು ವರ್ಷಗಳಲ್ಲಿಯೇ 2,915 ಹೊಸ ರಚನೆಗಳನ್ನು ಕಾರ್ಯಗತಗೊಳಿಸಲಾಗಿದೆ; ಇದರಲ್ಲಿ 2024-25ರಲ್ಲಿ 'ಜಲ ಸಂಚಯ ಜನ ಭಾಗೀದಾರಿ' (JSJB) ಅಭಿಯಾನದ ಅಡಿಯಲ್ಲಿ ಸ್ಥಾಪಿಸಲಾದ 1,215 ಘಟಕಗಳು ಸೇರಿವೆ. ಇದು ರಾಷ್ಟ್ರೀಯ ಜಲ ಸಂರಕ್ಷಣಾ ಮಿಷನ್‌ ಗಳೊಂದಿಗೆ ರೈಲ್ವೆಯ ಸಕ್ರಿಯ ಸಮ್ಮಿಲನವನ್ನು ಎತ್ತಿ ತೋರಿಸುತ್ತದೆ. 3,128 ಮಳೆನೀರು ಕೊಯ್ಲು ರಚನೆಗಳನ್ನು ಸ್ಥಾಪಿಸುವ ಮೂಲಕ ದಕ್ಷಿಣ ಮಧ್ಯ ರೈಲ್ವೆಯು ಈ ಉಪಕ್ರಮದಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿದೆ.

ಭಾರತೀಯ ರೈಲ್ವೆಯ ಮಳೆನೀರು ಕೊಯ್ಲು ಮೂಲಸೌಕರ್ಯವು ದ್ವಿಮುಖ ಉದ್ದೇಶವನ್ನು ಪೂರೈಸುತ್ತದೆ, ಇದು ವಿಶೇಷವಾಗಿ ಹವಾಮಾನ ವೈಪರೀತ್ಯಗಳ ಸಮಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ನಿಲ್ದಾಣಗಳು ಮತ್ತು ಯಾರ್ಡ್‌ಗಳಲ್ಲಿ ಅಳವಡಿಸಲಾದ ಮೇಲ್ಛಾವಣಿ ಕೊಯ್ಲು ವ್ಯವಸ್ಥೆಗಳು ಮಳೆಯ ನೀರನ್ನು ಸಂಗ್ರಹಿಸಿ ಸಾಗಿಸುತ್ತವೆ. ಇದು ಒಂದು ಕಡೆ ಪ್ಲಾಟ್‌ ಫಾರ್ಮ್‌ ಗಳು ಮತ್ತು ಪಕ್ಕದ ಹಳಿಗಳ ಮೇಲೆ ನೀರು ನಿಲ್ಲದಂತೆ ತಡೆದರೆ, ಮತ್ತೊಂದೆಡೆ ಅಂತರ್ಜಲ ಮಟ್ಟವನ್ನು ಮರುಪೂರಣಗೊಳಿಸಲು ಸಹಾಯ ಮಾಡುತ್ತದೆ. ರಾಜಸ್ಥಾನದ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ, ಅಥವಾ ದಖ್ಖನಿನ ಮಳೆ ನೆರಳು ವಲಯಗಳಲ್ಲಿ, (rain-shadow zones), ಈ ವ್ಯವಸ್ಥೆಗಳು ಕಾರ್ಯಾಚರಣೆಯ ಜೀವನಾಡಿಯಾಗಿವೆ. ಸಂಗ್ರಹಿಸಿದ ನೀರನ್ನು ಶೌಚಾಲಯಗಳು, ಸ್ವಚ್ಛತೆ ಮತ್ತು ತೋಟಗಾರಿಕೆಯಂತಹ ನಿಲ್ದಾಣದ ಬಳಕೆಗಳಿಗೆ ಬಳಸಲಾಗುತ್ತಿದೆ. ಇದು ದೂರದ ನಿಲ್ದಾಣಗಳಲ್ಲಿ ಅನಿಶ್ಚಿತವಾಗಿರುವ ಟ್ಯಾಂಕರ್ ಸರಬರಾಜು ಮತ್ತು ಪುರಸಭೆಯ ನೀರಿನ ಸಂಪರ್ಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ನೀರು ಮರುಬಳಕೆ ಘಟಕಗಳು

ಎಲ್ಲಾ ವಲಯಗಳಾದ್ಯಂತ ಭಾರತೀಯ ರೈಲ್ವೆಯು ಒಟ್ಟು 185 ನೀರು ಮರುಬಳಕೆ ಘಟಕಗಳನ್ನು (WRPs) ಕಾರ್ಯಗತಗೊಳಿಸಿದೆ. 2015-16ಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಕೇವಲ 21 ಘಟಕಗಳಿಂದ ಆರಂಭಗೊಂಡು, ಈ ಪ್ರಕ್ರಿಯೆಯು ಸ್ಥಿರವಾಗಿ ಮುಂದುವರೆದಿದೆ; ಕಳೆದ ಹಣಕಾಸು ವರ್ಷವೊಂದರಲ್ಲೇ 26 ಹೊಸ ಘಟಕಗಳನ್ನು ಕಾರ್ಯಗತಗೊಳಿಸುವ ಮೂಲಕ ಇದುವರೆಗಿನ ಅತ್ಯಂತ ಯಶಸ್ವಿ ವರ್ಷವಾಗಿ ಹೊರಹೊಮ್ಮಿದೆ. ಉತ್ತರ ರೈಲ್ವೆಯು 27 ಘಟಕಗಳೊಂದಿಗೆ ಎಲ್ಲಾ ವಲಯಗಳಿಗಿಂತ ಮುಂಚೂಣಿಯಲ್ಲಿದ್ದು, ನಂತರದ ಸ್ಥಾನಗಳಲ್ಲಿ ಮಧ್ಯ ರೈಲ್ವೆ (21) ಮತ್ತು ದಕ್ಷಿಣ ರೈಲ್ವೆ (20) ಇವೆ. ಈ ಘಟಕಗಳು ಬೋಗಿ ತೊಳೆಯುವಿಕೆ ಮತ್ತು ಯಾರ್ಡ್ ಕಾರ್ಯಾಚರಣೆಗಳಿಂದ ಹೊರಬರುವ ತ್ಯಾಜ್ಯ ನೀರನ್ನು ಸಂಸ್ಕರಿಸುತ್ತವೆ. ಈ ಸಂಸ್ಕರಿಸಿದ ನೀರನ್ನು ನಿಲ್ದಾಣದ ಸ್ವಚ್ಛತೆ, ತೋಟಗಾರಿಕೆ ಮತ್ತು ಕೈಗಾರಿಕಾ ಪ್ರಕ್ರಿಯೆಗಳಂತಹ ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗಾಗಿ ಮರುಬಳಕೆ ಮಾಡಲಾಗುತ್ತದೆ. ಇದರಿಂದ ಕ್ಷೀಣಿಸುತ್ತಿರುವ ಅಂತರ್ಜಲ ಮತ್ತು ಪುರಸಭೆಯ ವ್ಯವಸ್ಥೆಗಳಿಂದ ತಾಜಾ ನೀರಿನ ಬಳಕೆಯನ್ನು ಕಡಿಮೆ ಮಾಡಬಹುದಾಗಿದೆ.

2019ರಲ್ಲಿ ಚೆನ್ನೈ ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸಿದಾಗ, ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ರೈಲ್ವೆ ನಿಲ್ದಾಣಗಳು ತೀವ್ರ ನೀರಿನ ಕೊರತೆಯನ್ನು ಅನುಭವಿಸಿದವು. ಆ ಸಂದರ್ಭದಲ್ಲಿ ಬೇಸಿನ್ ಬ್ರಿಡ್ಜ್ ಮತ್ತು ಎಗ್ಮೋರ್‌ನಲ್ಲಿರುವ ದಕ್ಷಿಣ ರೈಲ್ವೆಯ ನೀರು ಮರುಬಳಕೆ ಘಟಕಗಳು ನಿರ್ಣಾಯಕ ಆಸ್ತಿಗಳಾಗಿ ಹೊರಹೊಮ್ಮಿದವು. ನಗರದ ಸಮೂಹ ನೀರು ಸರಬರಾಜು ವ್ಯವಸ್ಥೆಯು ಕುಸಿದಿದ್ದಾಗಲೂ, ಈ ಘಟಕಗಳಿಂದಾಗಿ ಬೋಗಿಗಳನ್ನು ತೊಳೆಯುವ ಮತ್ತು ಪ್ಲಾಟ್‌ ಫಾರ್ಮ್‌ ಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಿರಂತರವಾಗಿ ಸಾಗಲು ಸಾಧ್ಯವಾಯಿತು. ಈ ಘಟನೆಯು ಒಂದು ಸ್ಪಷ್ಟ ಪಾಠವನ್ನು ಕಲಿಸಿತು: ನೀರು ಮರುಬಳಕೆ ಘಟಕಗಳು ಕೇವಲ ಪರಿಸರ ಸಂರಕ್ಷಣೆಯ ಕ್ರಮಗಳಲ್ಲ; ಬದಲಾಗಿ ಅವು ಕಾರ್ಯಾಚರಣೆಯ ಸ್ಥಿತಿಸ್ಥಾಪಕತ್ವವನ್ನು ಕಾಪಾಡುವ ಮೂಲಸೌಕರ್ಯಗಳಾಗಿವೆ.

ನೀರಿನ ಲೆಕ್ಕಪರಿಶೋಧನೆ 

2015-16ರಿಂದ ಎಲ್ಲಾ ರೈಲ್ವೆ ವಲಯಗಳಲ್ಲಿ ಒಟ್ಟು 1,944 ನೀರಿನ ಲೆಕ್ಕಪರಿಶೋಧನೆಗಳನ್ನು ನಡೆಸಲಾಗಿದೆ. 2025-26ರ ಸಾಲಿನಲ್ಲಿ ಈಗಾಗಲೇ 310 ಲೆಕ್ಕಪರಿಶೋಧನೆಗಳು ದಾಖಲಾಗಿದ್ದು, ಇದು ಯಾವುದೇ ಒಂದು ವರ್ಷದಲ್ಲಿ ನಡೆದ ಗರಿಷ್ಠ ಸಂಖ್ಯೆಯಾಗಿದೆ. ದಕ್ಷಿಣ ಮಧ್ಯ ರೈಲ್ವೆಯು 442 ಲೆಕ್ಕಪರಿಶೋಧನೆಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಉತ್ತರ ರೈಲ್ವೆ (323) ಮತ್ತು ಪಶ್ಚಿಮ ರೈಲ್ವೆ (216) ಇವೆ. ಈ ಲೆಕ್ಕಪರಿಶೋಧನೆಗಳು ಅತಿ ಹೆಚ್ಚು ನೀರು ಬಳಕೆಯಾಗುವ ಸ್ಥಳಗಳು, ಪೈಪ್ ಸೋರಿಕೆಗಳು ಮತ್ತು ವ್ಯವಸ್ಥೆಯ ಅಸಮರ್ಥತೆಗಳನ್ನು ಗುರುತಿಸುತ್ತವೆ; ಆ ಮೂಲಕ ಅರಿವನ್ನು ಯೋಜಿತ ಉಳಿತಾಯವಾಗಿ ಪರಿವರ್ತಿಸುತ್ತವೆ. ಅಳತೆಯ ಶಿಸ್ತು ಅರ್ಥಪೂರ್ಣ ಸಂರಕ್ಷಣೆಗೆ ಅಡಿಪಾಯವಾಗಿದೆ.

ಜಲಮೂಲಗಳ ಪುನಶ್ಚೇತನ: ಪ್ರಕೃತಿಗೆ ಮರಳಿ ನೀಡುವುದು

ಆಂತರಿಕ ಕಾರ್ಯಾಚರಣೆಗಳ ಹೊರತಾಗಿ, ಭಾರತೀಯ ರೈಲ್ವೆಯು ರೈಲ್ವೆ ಭೂಮಿಯ ಒಳಗಿರುವ ಅಥವಾ ಪಕ್ಕದಲ್ಲಿರುವ, ಬಳಕೆಯಲ್ಲಿಲ್ಲದ, ಒತ್ತುವರಿಯಾಗಿದ್ದ ಅಥವಾ ಕ್ಷೀಣಿಸಿದ್ದ ಹಳ್ಳಗಳು, ಕೆರೆಗಳು ಮತ್ತು ಜೌಗು ಪ್ರದೇಶಗಳಂತಹ 109 ಜಲಮೂಲಗಳನ್ನು ಪುನಶ್ಚೇತನಗೊಳಿಸಿದೆ. ದಕ್ಷಿಣ ಮಧ್ಯ ರೈಲ್ವೆ (34), ಆಗ್ನೇಯ ಮಧ್ಯ ರೈಲ್ವೆ (SECR - 44) ಮತ್ತು ಪಶ್ಚಿಮ ರೈಲ್ವೆ (11) ಈ ನಿಟ್ಟಿನಲ್ಲಿ ಪ್ರಮುಖ ಕೊಡುಗೆ ನೀಡಿವೆ. ಈ ಪುನಶ್ಚೇತನಗೊಂಡ ಜಲಮೂಲಗಳು ಸ್ಥಳೀಯ ಅಂತರ್ಜಲವನ್ನು ಮರುಪೂರಣಗೊಳಿಸುತ್ತವೆ, ಜೀವವೈವಿಧ್ಯದ ಆವಾಸಸ್ಥಾನಗಳನ್ನು ಸೃಷ್ಟಿಸುತ್ತವೆ ಮತ್ತು ನೈಸರ್ಗಿಕ ಮಳೆನೀರು ನಿರ್ವಹಣಾ ವ್ಯವಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಪ್ರಯೋಜನವು ರೈಲ್ವೆ ಸೀಮೆಯನ್ನು ಮೀರಿ ಸುತ್ತಮುತ್ತಲಿನ ಸಮುದಾಯಗಳಿಗೂ ವಿಸ್ತರಿಸುತ್ತದೆ. ಜಲಮೂಲಗಳ ಪುನಶ್ಚೇತನವು ಬಳಕೆಯಿಲ್ಲದ ಅಥವಾ ಕ್ಷೀಣಿಸಿದ ಭೂಪ್ರದೇಶಗಳನ್ನು ಪರಿಸರ ಆಸ್ತಿಗಳನ್ನಾಗಿ ಪರಿವರ್ತಿಸುತ್ತದೆ. ಇವು ನೈಸರ್ಗಿಕ ಮಳೆನೀರು ತಡೆಗೋಡೆಗಳಾಗಿ ಕಾರ್ಯನಿರ್ವಹಿಸುವ ಮೂಲಕ, ಪಕ್ಕದ ಸಮುದಾಯಗಳು ಪ್ರವಾಹ ಮತ್ತು ಬರ ಎರಡನ್ನೂ ಎದುರಿಸುವ ಸಾಮರ್ಥ್ಯವನ್ನು ಹೊಂದುವಂತೆ ಮಾಡುತ್ತವೆ.

ಅಹಮದಾಬಾದ್‌ ನ ಕಂಕರಿಯಾದಲ್ಲಿ ಭಾರತದ ಮೊದಲ ಜಲ-ತಟಸ್ಥ  ರೈಲ್ವೆ ಡಿಪೋ

ಅಹಮದಾಬಾದ್‌ ನಲ್ಲಿರುವ ಪಶ್ಚಿಮ ರೈಲ್ವೆಯ ಕಂಕರಿಯಾ ಕೋಚಿಂಗ್ ಡಿಪೋವು ಭಾರತದ ಕೆಲವೇ ಕೆಲವು ಕೈಗಾರಿಕಾ ಘಟಕಗಳು ಸಾಧಿಸಿರುವಂತಹ ಒಂದು ಮೈಲಿಗಲ್ಲನ್ನು ತಲುಪಿದೆ: ಅದುವೇ ಸಂಪೂರ್ಣ ಜಲ-ತಟಸ್ಥತೆ. ಈ ಡಿಪೋವು ಬೋಗಿಗಳ ತೊಳೆಯುವಿಕೆ ಮತ್ತು ನಿರ್ವಹಣೆಯ ಸಮಯದಲ್ಲಿ ಉತ್ಪತ್ತಿಯಾಗುವ ಬಹುತೇಕ ಎಲ್ಲಾ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುತ್ತದೆ, ಆ ಮೂಲಕ ಹೊರಗಿನ ತಾಜಾ ನೀರಿನ ಮೂಲಗಳ ಮೇಲಿನ ಅವಲಂಬನೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸಿದೆ.

ನಿರ್ಣಾಯಕ ಮಧ್ಯಸ್ಥಿಕೆ: ಮಿಷನ್ ವಿದ್ಯುದ್ದೀಕರಣ

ಭಾರತೀಯ ರೈಲ್ವೆಯ ಪರಿಸರ ಸ್ವರೂಪವನ್ನು ಮೂಲಭೂತವಾಗಿ ಬದಲಾಯಿಸಿದ ಒಂದೇ ಒಂದು ಮಧ್ಯಸ್ಥಿಕೆ ಇದ್ದರೆ, ಅದು ಬ್ರಾಡ್ ಗೇಜ್ ಜಾಲದ ತೀವ್ರಗತಿಯ ವಿದ್ಯುದ್ದೀಕರಣವಾಗಿದೆ. ಭಾರತೀಯ ರೈಲ್ವೆಯು ತನ್ನ ಬ್ರಾಡ್ ಗೇಜ್ ಜಾಲದ 99.6% ಅನ್ನು ವಿದ್ಯುದ್ದೀಕರಿಸಿದೆ, ಇದು ಕಳೆದ ದಶಕದಲ್ಲಿ ಮಿಷನ್ ಮೋಡ್‌ ನಲ್ಲಿ ಸಾಧಿಸಿದ ಪರಿವರ್ತನೆಯಾಗಿದೆ. ಮಾರ್ಚ್ 2026 ರ ಹೊತ್ತಿಗೆ, 69,873 ರೂಟ್ ಕಿಲೋಮೀಟರ್‌ ಗಳು (rkm) ವಿದ್ಯುದ್ದೀಕರಿಸಲ್ಪಟ್ಟಿವೆ, ಇದು 2014 ರಲ್ಲಿದ್ದ ಕೇವಲ 21,801 rkm ನಿಂದ ಆದ ದೊಡ್ಡ ಜಿಗಿತವಾಗಿದೆ. ಎಲ್ಲಾ ಹೊಸ ಮಾರ್ಗ ಮತ್ತು ಬಹು-ಟ್ರ್ಯಾಕಿಂಗ್ ಯೋಜನೆಗಳನ್ನು ಈಗ ಕಡ್ಡಾಯವಾಗಿ ವಿದ್ಯುದ್ದೀಕರಣದೊಂದಿಗೆ ನಿರ್ಮಿಸಲಾಗುತ್ತಿದೆ.

ಭಾರತೀಯ ರೈಲ್ವೆಯು 2016-17 ಕ್ಕೆ ಹೋಲಿಸಿದರೆ 2024-25 ರಲ್ಲಿ 178 ಕೋಟಿ ಲೀಟರ್ ಡೀಸೆಲ್ ಉಳಿತಾಯ ಮಾಡಿದೆ, ಇದು 62% ರಷ್ಟು ಉಳಿತಾಯವಾಗಿದೆ, ಹೀಗಾಗಿ ಕಚ್ಚಾ ತೈಲದ ಆಮದು ಮೇಲಿನ ಅವಲಂಬನೆಯನ್ನು ಇದು ಕಡಿಮೆ ಮಾಡಿದೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಡುವೆ ಭಾರತವು ಕಚ್ಚಾ ತೈಲಕ್ಕಾಗಿ ಆಮದಿನ ಮೇಲೆ ಹೊಂದಿರುವ ಅವಲಂಬನೆಯನ್ನು ಇದು ನೇರವಾಗಿ ಕಡಿಮೆ ಮಾಡುತ್ತದೆ. ಡೀಸೆಲ್‌ ನಿಂದ ಹಂತಹಂತವಾಗಿ ದೇಶೀಯವಾಗಿ ಉತ್ಪಾದಿಸಲಾದ ವಿದ್ಯುತ್‌ಗೆ, ಅದರಲ್ಲೂ ಹೆಚ್ಚಾಗಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ಪಡೆದ ವಿದ್ಯುತ್‌ ಗೆ ಬದಲಾಯಿಸುವ ಮೂಲಕ, ರೈಲ್ವೆಯು ತನ್ನ ಕಾರ್ಯಾಚರಣೆಯನ್ನು ಜಾಗತಿಕ ತೈಲ ಮಾರುಕಟ್ಟೆಯ ಏರಿಳಿತಗಳಿಂದ ಪರಿಣಾಮಕಾರಿಯಾಗಿ ಬೇರ್ಪಡಿಸಿದೆ. ವಿದ್ಯುತ್ ಚಾಲಿತ ವ್ಯವಸ್ಥೆಯು ಬಯೋಡೀಸೆಲ್‌ ನಂತಹ ಪರ್ಯಾಯಗಳಿಗಿಂತ ಹೆಚ್ಚು ವೆಚ್ಚ-ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಎಂದು ನಿರ್ಣಯಿಸಲಾಗಿದೆ. ಇದು ಕೇವಲ 'ಹಸಿರು ಆಯ್ಕೆ'ಯಾಗಿರದೆ ಆರ್ಥಿಕವಾಗಿ ಜವಾಬ್ದಾರಿಯುತವಾದ ನಿರ್ಧಾರವೂ ಆಗಿದೆ.

ಬಯೋ-ಟಾಯ್ಲೆಟ್‌ ಗಳು: ರೈಲುಗಳಲ್ಲಿ ಪರಿಸರ ಸ್ನೇಹಿ ನೈರ್ಮಲ್ಯ

ಭಾರತೀಯ ರೈಲ್ವೆಯು 2014ರಿಂದ ಪ್ರಯಾಣಿಕರ ಬೋಗಿಗಳಲ್ಲಿ 3.66 ಲಕ್ಷಕ್ಕೂ ಹೆಚ್ಚು ಬಯೋ-ಟಾಯ್ಲೆಟ್‌ ಗಳನ್ನು ಅಳವಡಿಸುವ ಮೂಲಕ ಪರಿಸರ ಸುಸ್ಥಿರತೆ ಮತ್ತು ಪ್ರಯಾಣಿಕರ ನೈರ್ಮಲ್ಯಕ್ಕೆ ಬೃಹತ್ ಪ್ರಮಾಣದ ಕೊಡುಗೆ ನೀಡಿದೆ. ಈ ಉಪಕ್ರಮವು ರೈಲು ಹಳಿಗಳ ಮೇಲೆ ಮಾನವ ತ್ಯಾಜ್ಯದ ನೇರ ವಿಸರ್ಜನೆಯನ್ನು ಪರಿಣಾಮಕಾರಿಯಾಗಿ ಇಲ್ಲವಾಗಿಸಿದೆ, ಆ ಮೂಲಕ ನಿಲ್ದಾಣಗಳ ಸ್ವಚ್ಛತೆ, ರೈಲಿನಲ್ಲಿನ ಸುಧಾರಿತ ನೈರ್ಮಲ್ಯ ಮತ್ತು ಲಕ್ಷಾಂತರ ಪ್ರಯಾಣಿಕರಿಗೆ ಹೆಚ್ಚು ಆರೋಗ್ಯಕರ ಪ್ರಯಾಣದ ಅನುಭವವನ್ನು ಖಚಿತಪಡಿಸಿದೆ. ಬಯೋ-ಟಾಯ್ಲೆಟ್ ವ್ಯವಸ್ಥೆಯು ಮಾನವ ತ್ಯಾಜ್ಯವನ್ನು ನೀರು ಮತ್ತು ಅನಿಲಗಳಾಗಿ ವಿಘಟಿಸಲು ಸೂಕ್ಷ್ಮಜೀವಿಗಳ ಕ್ರಿಯೆಯ ಆಧಾರಿತ ಸ್ವದೇಶಿ ತಂತ್ರಜ್ಞಾನವನ್ನು ಬಳಸುತ್ತದೆ. ಇದು ಪರಿಸರ ಮಾಲಿನ್ಯ ಮತ್ತು ದುರ್ವಾಸನೆಯನ್ನು ಗಣನೀಯವಾಗಿ ಕಡಿಮೆ ಮಾಡುವುದರ ಜೊತೆಗೆ ರೈಲ್ವೆ ಜಾಲದಾದ್ಯಂತ ಸ್ವಚ್ಛತೆಯನ್ನು ಕಾಪಾಡುತ್ತದೆ.

ಈ ಉಪಕ್ರಮವು ಮಣ್ಣು ಮತ್ತು ಹಳಿಗಳ ಮಾಲಿನ್ಯವನ್ನು ತಡೆಯುವ ಮೂಲಕ, ರೈಲ್ವೆ ಆಸ್ತಿಗಳ ತುಕ್ಕು ಹಿಡಿಯುವಿಕೆಯನ್ನು  ಕಡಿಮೆ ಮಾಡುವ ಮೂಲಕ ಮತ್ತು ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶೂನ್ಯ ನೇರ ವಿಸರ್ಜನೆಯನ್ನು ಖಚಿತಪಡಿಸುವ ಮತ್ತು ಸುಸ್ಥಿರ ನೈರ್ಮಲ್ಯ ಪದ್ಧತಿಗಳನ್ನು ಬೆಂಬಲಿಸುವ ಮೂಲಕ, ಭಾರತೀಯ ರೈಲ್ವೆಯು ಪ್ರಯಾಣಿಕರ ಸೌಕರ್ಯವನ್ನು ಸುಧಾರಿಸುವುದರ ಜೊತೆಗೆ ಸ್ವಚ್ಛ ಪರಿಸರ ವ್ಯವಸ್ಥೆ ಮತ್ತು ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುತ್ತಿದೆ.

ನವೀಕರಿಸಬಹುದಾದ ಇಂಧನ: ಸೂರ್ಯ ಮತ್ತು ಗಾಳಿಯಿಂದ ಭವಿಷ್ಯಕ್ಕೆ ಶಕ್ತಿ

ಭಾರತೀಯ ರೈಲ್ವೆಯು ನವೀಕರಿಸಬಹುದಾದ ಇಂಧನವನ್ನು ತನ್ನ ದೀರ್ಘಕಾಲೀನ ಕಾರ್ಯಾಚರಣೆಯ ತಂತ್ರದ ಮೂಲಾಧಾರವನ್ನಾಗಿ ಮಾಡಿಕೊಂಡಿದೆ. ಡಿಸೆಂಬರ್ 2025ರ ಹೊತ್ತಿಗೆ, ರೈಲ್ವೆ ಜಾಲದಾದ್ಯಂತ ಸುಮಾರು 909 ಮೆಗಾವ್ಯಾಟ್ (MW) ಸೌರ ವಿದ್ಯುತ್ ಸ್ಥಾವರಗಳು ಮತ್ತು 103 ಮೆಗಾವ್ಯಾಟ್ ಪವನ ವಿದ್ಯುತ್ ಸ್ಥಾವರಗಳನ್ನು ಕಾರ್ಯಗತಗೊಳಿಸಲಾಗಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವುದನ್ನು ಹೊರತುಪಡಿಸಿ, ರಾಜಸ್ಥಾನ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಾದ್ಯಂತ ಅಭಿವರ್ಧಕರೊಂದಿಗೆ ಸೌರ, ಪವನ ಮತ್ತು ಹೈಬ್ರಿಡ್ ಅಹೋರಾತ್ರಿ (Round-the-clock - RTC) ವ್ಯವಸ್ಥೆಗಳನ್ನು ಒಳಗೊಂಡಂತೆ ಇನ್ನೂ 3,300 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯಕ್ಕಾಗಿ ರೈಲ್ವೆಯು ಒಪ್ಪಂದ ಮಾಡಿಕೊಂಡಿದೆ. ಇದು ದೀರ್ಘಕಾಲೀನ ಇಂಧನ ಭದ್ರತೆಯನ್ನು ಬೆಂಬಲಿಸಲು ಪರಿಸರ ಸ್ನೇಹಿ ವಿದ್ಯುತ್‌ನ ನಿರಂತರ ಪೂರೈಕೆಯನ್ನು ಖಚಿತಪಡಿಸುತ್ತದೆ. ಇದು ದೀರ್ಘಕಾಲೀನ ಮತ್ತು ಬೆಲೆ ಸ್ಥಿರತೆಯನ್ನು ಹೊಂದಿರುವ 'ಹಸಿರು ಖರೀದಿ'ಯತ್ತ ನಡೆಸಿದ ಉದ್ದೇಶಪೂರ್ವಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.

LED ಲೈಟಿಂಗ್: ಇಡೀ ರೈಲ್ವೆ ಜಾಲದ ದಕ್ಷ ವಿದ್ಯುದ್ದೀಕರಣ

ಭಾರತೀಯ ರೈಲ್ವೆಯು ತನ್ನ ಕಚೇರಿಗಳು, ರೈಲ್ವೆ ನಿಲ್ದಾಣಗಳು, ಸೇವಾ ಕಟ್ಟಡಗಳು ಮತ್ತು ವಸತಿ ಕಾಲೋನಿಗಳಲ್ಲಿ 100% LED ಲೈಟಿಂಗ್ ಸಾಧಿಸಿದೆ. ಇದು ದೇಶದ ಅತ್ಯಂತ ದೂರದ ಸಣ್ಣ ನಿಲ್ದಾಣಗಳಿಂದ ಹಿಡಿದು ಅತಿದೊಡ್ಡ ಜಂಕ್ಷನ್‌ಗಳವರೆಗೆ ಸಾವಿರಾರು ಸ್ಥಳಗಳಲ್ಲಿ ವ್ಯಾಪಿಸಿರುವ ಬೃಹತ್ ರೂಪಾಂತರವಾಗಿದೆ. ಸಾಂಪ್ರದಾಯಿಕ ವಿದ್ಯುತ್ ದೀಪಗಳಿಂದ LED ದೀಪಗಳಿಗೆ ಬದಲಾಗಿರುವುದು ಎರಡು ಪ್ರಮುಖ ಪ್ರಯೋಜನಗಳನ್ನು ನೀಡಿದೆ: ವಿದ್ಯುತ್ ಬಳಕೆಯಲ್ಲಿ ಗಣನೀಯ ಇಳಿಕೆ ಮತ್ತು ಬೆಳಕಿನ ಗುಣಮಟ್ಟದಲ್ಲಿ ಸುಧಾರಣೆ. ಪ್ರಯಾಣಿಕರಿಗೆ ಇದು ಉತ್ತಮ ಬೆಳಕಿನ ವ್ಯವಸ್ಥೆ ಹೊಂದಿರುವ ಕಾಯುವ ಕೋಣೆಗಳು, ಪ್ಲಾಟ್‌ಫಾರ್ಮ್‌ ಗಳು ಮತ್ತು ಸಬ್‌ ವೇಗಳನ್ನು ಒದಗಿಸಿದೆ. ಪರಿಸರದ ದೃಷ್ಟಿಯಿಂದ, ದಿನದ 24 ಗಂಟೆಯೂ ನಿಲ್ದಾಣಗಳನ್ನು ತೆರೆದಿಡುವಾಗ ಉಂಟಾಗುವ ಇಂಗಾಲದ ಹೊರೆಯನ್ನು ಅಳೆಯಬಹುದಾದಷ್ಟು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ.

ಇಂಧನ ಸಂರಕ್ಷಣೆ: ರಾಷ್ಟ್ರೀಯ ಮಟ್ಟದ ಮಾನ್ಯತೆ

ಇಂಧನ ದಕ್ಷತೆಯ ಕುರಿತಾದ ಭಾರತೀಯ ರೈಲ್ವೆಯ ಬದ್ಧತೆಯು ಕೇವಲ ವೈಯಕ್ತಿಕ ಕ್ರಮಗಳಿಗಷ್ಟೇ ಸೀಮಿತವಾಗಿರದೆ, ಅದರ ಕಾರ್ಯಾಚರಣೆಗಳಾದ್ಯಂತ ಅಳವಡಿಸಲಾಗಿರುವ ವ್ಯವಸ್ಥಿತ ಸಂರಕ್ಷಣಾ ಸಂಸ್ಕೃತಿಯಾಗಿ ವಿಸ್ತರಿಸಿದೆ. BEE 5-ಸ್ಟಾರ್ ರೇಟಿಂಗ್ ಹೊಂದಿರುವ ಉಪಕರಣಗಳು, BLDC ಫ್ಯಾನ್‌ ಗಳು, ವೇರಿಯಬಲ್ ಫ್ರೀಕ್ವೆನ್ಸಿ ಡ್ರೈವ್‌ ಗಳು ಮತ್ತು ಇಂಧನ-ದಕ್ಷ ಮೋಟಾರ್‌ ಗಳು ಹಾಗೂ ಪಂಪ್‌ ಗಳ ಖರೀದಿಯು ರೈಲ್ವೆ ಕಟ್ಟಡಗಳು, ಡಿಪೋಗಳು ಮತ್ತು ಯಾರ್ಡ್‌ ಗಳ ಇಂಧನ ಬಳಕೆಯ ತೀವ್ರತೆಯನ್ನು ಸ್ಥಿರವಾಗಿ ಕಡಿಮೆ ಮಾಡಿದೆ. ಈ ಬದ್ಧತೆಯು ಉನ್ನತ ಮಟ್ಟದಲ್ಲಿ ಅಧಿಕೃತ ಮಾನ್ಯತೆಯನ್ನು ಪಡೆದಿದೆ. ಭಾರತೀಯ ರೈಲ್ವೆಯು 2025ರಲ್ಲಿ 3 ವಿಭಾಗಗಳಾದ್ಯಂತ ಒಟ್ಟು 7 ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಈ ಪ್ರಶಸ್ತಿಗಳು ಕೇವಲ ಸಾಂಕೇತಿಕವಲ್ಲ; ಅವು ಭಾರತದ ವಿಶಾಲವಾದ ಇಂಧನ ದಕ್ಷತೆಯ ಕ್ಷೇತ್ರದಲ್ಲಿ ರೈಲ್ವೆಯನ್ನು ಒಂದು ಮಾದರಿ ಸಂಸ್ಥೆಯನ್ನಾಗಿ ಗುರುತಿಸಿವೆ ಮತ್ತು ಇತರ ದೊಡ್ಡ ಸಾರ್ವಜನಿಕ ವಲಯದ ಸಂಸ್ಥೆಗಳು ಅನುಸರಿಸಬೇಕಾದ ಮಾನದಂಡಗಳನ್ನು ನಿಗದಿಪಡಿಸಿವೆ.

ಮುಕ್ತಾಯ

ಭಾರತದ ಪ್ರತಿಯೊಂದು ಭೌಗೋಳಿಕ ಭಾಗವನ್ನು ತಲುಪುವ ಮತ್ತು ಜನಸಂಖ್ಯೆಯ ಪ್ರತಿಯೊಂದು ವರ್ಗಕ್ಕೂ ಸೇವೆ ಸಲ್ಲಿಸುವ ಒಂದು ಸಂಸ್ಥೆಯಾಗಿ, ಭಾರತೀಯ ರೈಲ್ವೆಯು ಮುನ್ನಡೆಸುವ ಶಕ್ತಿ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದೆ. ವಿದ್ಯುದ್ದೀಕರಣ, ಜಲ ಸಂರಕ್ಷಣೆ, ಅರಣ್ಯೀಕರಣ, ನೈರ್ಮಲ್ಯ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯೇ ಇದರ ಅಡಿಪಾಯವಾಗಿದೆ. ನೆಡಲಾದ ಪ್ರತಿಯೊಂದು ಮರ, ಸಂಗ್ರಹಿಸಲಾದ ಪ್ರತಿಯೊಂದು ಲೀಟರ್ ನೀರು, ಸೂರ್ಯನಿಂದ ಉತ್ಪಾದಿಸಲಾದ ಪ್ರತಿಯೊಂದು ಕಿಲೋವ್ಯಾಟ್ ವಿದ್ಯುತ್ ಮತ್ತು ಜಲ-ತಟಸ್ಥವಾಗಿಸಿದ ಪ್ರತಿಯೊಂದು ಡಿಪೋ ಆ ಹಾದಿಯಲ್ಲಿನ ಒಂದು ಹೆಜ್ಜೆಯಾಗಿದೆ.

 

*****


(ಪ್ರಕಟಣೆ ಐ.ಡಿ.: 2254715) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati