ಪ್ರಧಾನ ಮಂತ್ರಿಯವರ ಕಛೇರಿ
ಭಾರತ-ಕೊರಿಯಾ ಗಣರಾಜ್ಯ (ಆರ್‌ಒಕೆ-ದಕ್ಷಿಣ ಕೊರಿಯಾ) ವಿಶೇಷ ಕಾರ್ಯತಂತ್ರ ಪಾಲುದಾರಿಕೆಗಾಗಿ ಜಂಟಿ ಕಾರ್ಯತಂತ್ರ ದೃಷ್ಟಿಕೋನ
ಪ್ರಕಟಣಾ ದಿನಾಂಕ:
20 APR 2026 10:53PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಕೊರಿಯಾ ಗಣರಾಜ್ಯದ(ದಕ್ಷಿಣ ಕೊರಿಯಾ-ಆರ್‌ಒಕೆ) ಅಧ್ಯಕ್ಷ ಗೌರವಾನ್ವಿತ ಲೀ ಜೇ ಮ್ಯುಂಗ್ ಅವರು 2026 ಏಪ್ರಿಲ್ 19ರಿಂದ 21ರ ವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಇದು ಕೊರಿಯಾದ ಅಧ್ಯಕ್ಷರೊಬ್ಬರು ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ನೀಡಿದ ಚೊಚ್ಚಲ ಭೇಟಿಯಾಗಿದೆ. ಅಧ್ಯಕ್ಷ ಲೀ ಜೇ ಮ್ಯುಂಗ್ ಅವರೊಂದಿಗೆ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ಕೊರಿಯಾ ಉದ್ಯಮ ರಂಗದ ಪ್ರಮುಖ ಸಿಇಒಗಳು ಸೇರಿದಂತೆ ಉನ್ನತ ಮಟ್ಟದ ನಿಯೋಗ ಆಗಮಿಸಿತ್ತು.
2. ಇಬ್ಬರೂ ನಾಯಕರು 2026 ಏಪ್ರಿಲ್ 20ರಂದು ನವದೆಹಲಿಯಲ್ಲಿ ಸ್ನೇಹಪರ, ಫಲಪ್ರದ ಮತ್ತು ಪ್ರಗತಿಪರ ದ್ವಿಪಕ್ಷೀಯ ಸಭೆ ನಡೆಸಿದರು. ತಮ್ಮ ಜನರಿಗೆ ಶಾಶ್ವತ ಸಮೃದ್ಧಿ, ಶಾಂತಿ ಮತ್ತು ಪ್ರಗತಿ ತರಲು, ಪ್ರಕ್ಷುಬ್ಧತೆಯ ನಡುವೆ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಉಭಯ ರಾಷ್ಟ್ರಗಳ ನಡುವೆ ಅರ್ಥಪೂರ್ಣ ಸಹಕಾರ ಬೆಳೆಸಲು ಬಹು ಕ್ಷೇತ್ರಗಳಲ್ಲಿ ಸಂಕೀರ್ಣ ರೀತಿಯಲ್ಲಿ ಒಟ್ಟಾಗಿ ಕೆಲಸ ಮಾಡುವ ತಮ್ಮ ಸರ್ಕಾರಗಳ ಬದ್ಧತೆಯನ್ನು ಅವರು ಒತ್ತಿ ಹೇಳಿದರು. ಮುಂದಿನ 5 ವರ್ಷಗಳಲ್ಲಿ(2026-2030) ಭಾರತ-ಕೊರಿಯಾ ನಡುವಿನ ವಿಶೇಷ ಕಾರ್ಯತಂತ್ರ ಪಾಲುದಾರಿಕೆಯನ್ನು ಕಾರ್ಯಗತಗೊಳಿಸಲು ಮತ್ತು ಅದಕ್ಕೆ ಮತ್ತಷ್ಟು ವಿಷಯ ಸೇರಿಸಲು ಅವರು ಈ ಕೆಳಗಿನ ಜಂಟಿ ಕಾರ್ಯತಂತ್ರ ದೃಷ್ಟಿಕೋನ(ಮುನ್ನೋಟ)ಗಳನ್ನು ಪ್ರಕಟಿಸಿದರು.
3. ಏಷ್ಯಾದ 2 ಚೈತನ್ಯಶೀಲ ಮತ್ತು ಚೇತರಿಕೆ(ಹೊಂದಾಣಿಕೆ)ಯ ಪ್ರಜಾಪ್ರಭುತ್ವಗಳು ಮತ್ತು ಪ್ರಮುಖ ವಿಶ್ವ ಆರ್ಥಿಕತೆಗಳಾದ ಭಾರತ ಮತ್ತು ದಕ್ಷಿಣ ಕೊರಿಯಾ, ಆಳವಾದ ಐತಿಹಾಸಿಕ ಸಂಬಂಧಗಳು ಮತ್ತು ಜನರ ನಡುವಿನ ಪರಸ್ಪರ ಸದ್ಭಾವನೆಯ ಸಂಪರ್ಕ ಹೊಂದಿವೆ. ಎರಡೂ ರಾಷ್ಟ್ರಗಳು ಪ್ರಜಾಪ್ರಭುತ್ವ ಮತ್ತು ನಾಗರಿಕ ಮೌಲ್ಯಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತವೆ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಸಮಾನ ಆಸಕ್ತಿಗಳನ್ನು ಹೊಂದಿವೆ. ಭಾರತವು ಕೊರಿಯಾವನ್ನು ತನ್ನ "ಆಕ್ಟ್ ಈಸ್ಟ್(ಈಶಾನ್ಯದತ್ತ ಕ್ರಮ)" ನೀತಿಯಲ್ಲಿ ಅನಿವಾರ್ಯ ಪಾಲುದಾರನಾಗಿ ನೋಡುತ್ತದೆ. ಅದೇ ರೀತಿ, ಕೊರಿಯಾವು ಭಾರತವನ್ನು ಆರ್‌ಒಕೆಯ ಪ್ರಾಯೋಗಿಕ ರಾಜತಾಂತ್ರಿಕತೆಯ ಆಧಾರಸ್ತಂಭವಾಗಿ ಮತ್ತು ನ್ಯೂ ಸದರ್ನ್(ಹೊಸ ದಕ್ಷಿಣ ದೇಶಗಳು) ಪಾಲಿಸಿಯ ಸಾಧನೆಗಳನ್ನು ಆನುವಂಶಿಕ ಮತ್ತು ವಿಕಸನದ ಹಾದಿಯಲ್ಲಿ ನೋಡುತ್ತದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಭದ್ರತೆ ಬೆಳೆಸುವಲ್ಲಿ ತಮ್ಮ ಪಾಲುದಾರಿಕೆಯ ಮಹತ್ವದ ಪಾತ್ರವನ್ನು ಭಾರತ ಮತ್ತು ಆರ್‌ಒಕೆ ಗುರುತಿಸುತ್ತಿವೆ.
ಉನ್ನತ ಮಟ್ಟದ ವಿಚಾರ ವಿನಿಮಯಗಳ ಮೂಲಕ ರಾಜಕೀಯ ಅಡಿಪಾಯಗಳನ್ನು ಬಲಪಡಿಸುವುದು
4. 2025 ಜೂನ್ ನಲ್ಲಿ ಕನನಾಸ್ಕಿಸ್‌ನಲ್ಲಿ ನಡೆದ ಜಿ7 ಶೃಂಗಸಭೆ ಮತ್ತು 2025 ನವೆಂಬರ್ ನಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ನಡೆದ ತಮ್ಮ ಹಿಂದಿನ 2 ಸಭೆಗಳ ಸಕಾರಾತ್ಮಕ ಮನೋಭಾವ ನೆನಪಿಸಿಕೊಂಡ ನಾಯಕರು, ಭಾರತ-ಆರ್‌ಒಕೆ ವಿಶೇಷ ಕಾರ್ಯತಂತ್ರ ಪಾಲುದಾರಿಕೆಯ ಸಂಪೂರ್ಣ ಸಾಮರ್ಥ್ಯ ಅರಿತುಕೊಳ್ಳುತ್ತಾ ಮತ್ತು ಮುಂದುವರಿಸುತ್ತಾ, ಮುಂದೆಯೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅಗತ್ಯವಾದ ನಿರಂತರ ಮಾರ್ಗದರ್ಶನ ನೀಡಲು, ಎರಡೂ ದೇಶಗಳಲ್ಲಿ ಅಥವಾ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ನೇಪಥ್ಯದಲ್ಲಿ ವಾರ್ಷಿಕವಾಗಿ ನಾಯಕ ಮಟ್ಟದ ಸಭೆಗಳನ್ನು ನಡೆಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.
5. ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಆವೇಗ ನೀಡಿರುವ ಉನ್ನತ ಮಟ್ಟದ ವಿಚಾರ ವಿನಿಮಯಗಳ ಆವರ್ತನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಇಬ್ಬರೂ ನಾಯಕರು, ದ್ವಿಪಕ್ಷೀಯ ರಾಜಕೀಯ ವಿನಿಮಯ ಮತ್ತು ಸಚಿವರ ಸಂವಾದಗಳನ್ನು ಮತ್ತಷ್ಟು ತೀವ್ರಗೊಳಿಸಲು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ, ವಿದೇಶಾಂಗ ಸಚಿವರು, ಹಣಕಾಸು ಸಚಿವರ ಸಭೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಜಂಟಿ ಸಮಿತಿಯ ನೇತೃತ್ವದ ಭಾರತ-ಆರ್‌ಒಕೆ ಜಂಟಿ ಆಯೋಗದ ಸಭೆಗಳನ್ನು ಈ ವರ್ಷ ನಡೆಸಲು ಉಭಯ ನಾಯಕರು ನಿರ್ಧರಿಸಿದರು. ಇದಲ್ಲದೆ, ಕೊರಿಯಾ ಯುದ್ಧದಲ್ಲಿ ಭಾರತದ ಭಾಗವಹಿಸಿದ ನೆನಪಿಗಾಗಿ ನಿರ್ಮಿಸಲಾಗುತ್ತಿರುವ ಯುದ್ಧ ಸ್ಮಾರಕದ ಜಂಟಿ ಉದ್ಘಾಟನೆಗಾಗಿ ಭಾರತದ ರಕ್ಷಣಾ ಸಚಿವರು 2026 ಮೇನಲ್ಲಿ ಕೊರಿಯಾಗೆ ಭೇಟಿ ನೀಡಲು ಒಪ್ಪಿಗೆ ಸೂಚಿಸಿದರು. ಎರಡೂ ದೇಶಗಳಲ್ಲಿ ಕೈಗಾರಿಕೆಗಳಿಗೆ ಜವಾಬ್ದಾರರಾಗಿರುವ ಸಚಿವರ ಹೊಸ ಸಂವಾದ ಕಾರ್ಯವಿಧಾನವಾದ ಭಾರತ-ಆರ್‌ಒಕೆ ಕೈಗಾರಿಕಾ ಸಹಕಾರ ಸಮಿತಿ ಆರಂಭಿಸಲು ಮತ್ತು ಈ ವರ್ಷ ಅದರ ಮೊದಲ ಸಭೆ ನಡೆಸಲು ಅವರು ಒಪ್ಪಿಗೆ ಸೂಚಿಸಿದರು.
6. 2026 ಜನವರಿಯಲ್ಲಿ ಆರ್‌ಒಕೆ ಉಪ ಸ್ಪೀಕರ್ ಅವರು ಭಾರತಕ್ಕೆ ಭೇಟಿ ನೀಡಿದ್ದನ್ನು ಗಮನಿಸಿದ ಇಬ್ಬರೂ ನಾಯಕರು, ಭಾರತದ ಸಂಸತ್ತು ಮತ್ತು ಆರ್‌ಒಕೆ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್‌ಗಳು ಮತ್ತು ಸದಸ್ಯರ ನಿಯಮಿತ ವಿಚಾರ ವಿನಿಮಯವನ್ನು ಬೆಂಬಲಿಸಿದರು. ಎರಡೂ ದೇಶಗಳಲ್ಲಿ ಭಾರತ-ಆರ್‌ಒಕೆ ಸಂಸದೀಯ ಸ್ನೇಹ ಗುಂಪುಗಳ ಸ್ಥಾಪನೆಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.
7. ಭಾರತ ಮತ್ತು ಆರ್‌ಒಕೆಯ ಮುಂದಿನ ಪೀಳಿಗೆಯ ಚಿಂತನಾ ನಾಯಕರನ್ನು ಹತ್ತಿರಕ್ಕೆ ತರಲು, ಈ ವರ್ಷದಿಂದ ಎರಡೂ ವಿದೇಶಾಂಗ ಸಚಿವಾಲಯಗಳು ಆರಂಭಿಸುತ್ತಿರುವ ಕಾರ್ಯಕ್ರಮಗಳು ಮತ್ತು ಉಪಕ್ರಮಗಳನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಇದು ಯುವ ಶಾಸಕರು, ರಾಜತಾಂತ್ರಿಕರು, ಗಣ್ಯ ವ್ಯಕ್ತಿಗಳು, ಮಾಧ್ಯಮ ಮತ್ತು ಅಧಿಕಾರಿಗಳು ಭೇಟಿಗಳನ್ನು ವಿನಿಮಯ ಮಾಡಿಕೊಳ್ಳಲು, ಪರಸ್ಪರ ತಿಳಿವಳಿಕೆ ಹೆಚ್ಚಿಸಲು ಮತ್ತು ಸಾಮಾನ್ಯ ಸವಾಲುಗಳು ಮತ್ತು ಅವಕಾಶಗಳ ಕುರಿತು ಸಹಕರಿಸಲು ಅನುವು ಮಾಡಿಕೊಡುತ್ತದೆ.
8. ಸಮತೋಲಿತ ಪ್ರಾದೇಶಿಕ ಬೆಳವಣಿಗೆ, ಚೈತನ್ಯ ಮತ್ತು ಪುನರುಜ್ಜೀವನ ಉತ್ತೇಜಿಸಲು ಇಬ್ಬರೂ ನಾಯಕರು ತಮ್ಮ ರಾಷ್ಟ್ರಗಳ ರಾಜ್ಯಗಳು ಮತ್ತು ಪ್ರಾಂತ್ಯಗಳ ನಡುವೆ ಹೆಚ್ಚಿನ ವಿಚಾರ ವಿನಿಮಯವನ್ನು ಪ್ರೋತ್ಸಾಹಿಸಿದರು. ಬುಸಾನ್-ಮುಂಬೈ, ಇಂಚಿಯಾನ್-ಕೋಲ್ಕತ್ತಾ ಮತ್ತು ಉಲ್ಸಾನ್-ಚೆನ್ನೈ ಸೇರಿದಂತೆ ಸಹೋದರಿ-ನಗರ ಮತ್ತು ಸ್ನೇಹ-ನಗರ ಸಂಬಂಧಗಳನ್ನು ಇಬ್ಬರೂ ನಾಯಕರು ಗಮನಿಸಿದರು.
ಹೆಚ್ಚಿನ ಕಾರ್ಯತಂತ್ರ ನಂಬಿಕೆ ಮೂಲಕ ಆಳವಾದ ತಿಳಿವಳಿಕೆ ಬೆಳೆಸುವುದು
9. ಕಾನೂನು ಆಧಾರದ ಮೇಲೆ ಮುಕ್ತ, ತೆರೆದ, ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶ ನಿರ್ಮಿಸಲು ಉಭಯ ರಾಷ್ಟ್ರಗಳು ಹೊಂದಿರುವ ವಿಶಾಲ ದೃಷ್ಟಿಕೋನಗಳ ಹೋಲಿಕೆಯನ್ನು ಇಬ್ಬರು ನಾಯಕರು ಒಪ್ಪಿಕೊಂಡರು. ಈ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ಮೋದಿ ಅವರು ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮ(ಐಪಿಒಐ)ಕ್ಕೆ ದಕ್ಷಿಣ ಕೊರಿಯಾ ಸೇರುವುದನ್ನು ಸ್ವಾಗತಿಸಿದರು.
10. ಉದಯೋನ್ಮುಖ ಕಾರ್ಯತಂತ್ರ ಮತ್ತು ಭದ್ರತೆಗೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ಹಿರಿಯ ಅಧಿಕಾರಿಗಳ ನಿಯಮಿತ ಸಮಾಲೋಚನೆ ನಡೆಸುವ ಮಹತ್ವಕ್ಕೆ ಅವರು ಒತ್ತು ನೀಡಿದರು. 2026 ಫೆಬ್ರವರಿಯಲ್ಲಿ ಎರಡೂ ವಿದೇಶಾಂಗ ಸಚಿವಾಲಯಗಳ ನಡುವಿನ ಭಾರತ-ಆರ್‌ಒಕೆ ವಿದೇಶಾಂಗ ನೀತಿ ಮತ್ತು ಭದ್ರತಾ ಸಂವಾದದ ನಂತರ, ಎರಡೂ ಕಡೆಯವರು ರಕ್ಷಣಾ ಉದ್ಯಮ ಸಹಕಾರದ ಜಂಟಿ ಸಮಿತಿ ಸಭೆ ಮತ್ತು ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ 2+2 ಉದ್ಘಾಟನಾ ಸಂವಾದವನ್ನು ಪರಸ್ಪರ ಅನುಕೂಲಕರ ಸಮಯದಲ್ಲಿ ಉಪ ಮಂತ್ರಿಗಳ ಮಟ್ಟದಲ್ಲಿ ನಡೆಸುವ ಗುರಿ ಹೊಂದಿವೆ.
11. ಪರಸ್ಪರ ಕಾರ್ಯತಂತ್ರ ನಂಬಿಕೆಯ ಆಧಾರದ ಮೇಲೆ ಪೂರೈಕೆ ಸರಪಳಿಗಳಲ್ಲಿ ಚೇತರಿಕೆ ಹೆಚ್ಚಿಸುವುದು, ಮಾರುಕಟ್ಟೆ ವೈವಿಧ್ಯೀಕರಣ ಉತ್ತೇಜಿಸುವುದು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಸಹಕಾರ ಮುಂದುವರಿಸುವ ಗುರಿ ಹೊಂದಿರುವ ಭಾರತ-ಆರ್‌ಒಕೆ ಆರ್ಥಿಕ ಭದ್ರತಾ ಸಂವಾದ ಆರಂಭಿಸುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.
12. ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಎದುರಾಗುವ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಇಬ್ಬರು ನಾಯಕರು ನಿಸ್ಸಂದಿಗ್ಧವಾಗಿ ಮತ್ತು ಬಲವಾಗಿ ಖಂಡಿಸಿದರು. ಭಯೋತ್ಪಾದಕರ ಸುರಕ್ಷಿತ ತಾಣಗಳನ್ನು ಬೇರುಸಮೇತ ನಿರ್ಮೂಲನೆ ಮಾಡಲು, ಭಯೋತ್ಪಾದನೆಗೆ ಒದಗಿಸುವ ಹಣಕಾಸು ಮಾರ್ಗಗಳನ್ನು ಮತ್ತು ಅಂತಾರಾಷ್ಟ್ರೀಯ ಅಪರಾಧಗಳೊಂದಿಗೆ ಅವರ ಸಂಬಂಧವನ್ನು ತೊಡೆದುಹಾಕಲು ಮತ್ತು ಭಯೋತ್ಪಾದಕರ ಗಡಿಯಾಚೆಗಿನ ಚಲನೆಯನ್ನು ನಿಲ್ಲಿಸುವ ಸಹಕಾರ ಹೆಚ್ಚಿಸಲು ಅವರು ಒಪ್ಪಿಕೊಂಡರು. 2025 ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಎರಡೂ ಕಡೆಯವರು ಪ್ರಬಲವಾಗಿ ಖಂಡಿಸಿದರು. ಯಾವುದೇ ವಿಳಂಬವಿಲ್ಲದೆ ಅಪರಾಧಿಗಳು, ಸಂಘಟಕರು ಮತ್ತು ಹಣಕಾಸುದಾರರನ್ನು ನ್ಯಾಯದ ಕಟಕಟೆಗೆ ತರಬೇಕೆಂದು ಕರೆ ನೀಡಿದರು. ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಜವಾಬ್ದಾರಿ ಹೊತ್ತುಕೊಂಡಿದೆ ಎಂದು ಪ್ರಧಾನಮಂತ್ರಿ ಮೋದಿ ಅವರು ಅಧ್ಯಕ್ಷ ಲೀ ಅವರಿಗೆ ವಿವರಿಸಿದರು. ಅಧ್ಯಕ್ಷರಾದ ಅವರು ಇದನ್ನು ಗಂಭೀರ ಕಳವಳದಿಂದ ಗಮನಿಸಿದರು.
ಕೈಗಾರಿಕಾ ಚೈತನ್ಯದ ಮೂಲಕ ಪರಸ್ಪರ ಗೆಲುವುಗಳನ್ನು ಸೃಷ್ಟಿಸುವುದು
13. ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ಬಲಪಡಿಸಲು, ವ್ಯಾಪಾರ ಮತ್ತು ಹೂಡಿಕೆ ವಿಸ್ತರಿಸಲು ಮತ್ತು ಉದ್ಯಮದಾದ್ಯಂತ ಸಹಭಾಗಿತ್ವಕ್ಕಾಗಿ ಹೊಸ ಅವಕಾಶಗಳನ್ನು ಮುಕ್ತಗೊಳಿಸಲು, ಆಟೋಮೊಬೈಲ್, ಹಡಗು ನಿರ್ಮಾಣ, ರಾಸಾಯನಿಕಗಳು, ಸೆಮಿಕಂಡಕ್ಟರ್ ಗಳು, ದೂರಸಂಪರ್ಕ ಉಪಕರಣಗಳು, ಡಿಸ್ ಪ್ಲೇ, ದ್ವಿತೀಯ ಬ್ಯಾಟರಿಗಳು ಮುಂತಾದ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಮೇಲೆ ಗಮನ ಕೇಂದ್ರೀಕರಿಸಲು, ಕಾರ್ಯತಂತ್ರ ಸಂಪನ್ಮೂಲಗಳು, ನಿರ್ಣಾಯಕ ಖನಿಜಗಳು ಮತ್ತು ಅಪರೂಪದ ಭೂಮಿಯ ಪೂರೈಕೆ ಸರಪಳಿಗಳ ಬಲವರ್ಧನೆಗೆ ಸಹಕರಿಸಲು, ಹಸಿರು ಹೈಡ್ರೋಜನ್ ಮತ್ತು ಅದರ ಉತ್ಪನ್ನಗಳ ವ್ಯಾಪಾರ, ಪರಮಾಣು ವಿದ್ಯುತ್ ಸ್ಥಾವರ ಯೋಜನೆಗಳು; ಮತ್ತು ಸಾಗರೋತ್ತರ ಸಂಪನ್ಮೂಲ ಅಭಿವೃದ್ಧಿ ಯೋಜನೆಗಳ ಕುರಿತು ಭಾರತ-ಆರ್‌ಒಕೆ ಕೈಗಾರಿಕಾ ಸಹಕಾರ ಸಮಿತಿಯ ತಿಳಿವಳಿಕೆ ಪತ್ರ(ಎಂಒಯು)ದ ತೀರ್ಮಾನವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.
14. ಭಾರತದ ಸಾಗರ ಅಮೃತ ಕಾಲ ದೃಷ್ಟಿಕೋನವು ಪ್ರಮುಖ ಹಡಗು ನಿರ್ಮಾಣ ಮತ್ತು ಕಡಲ ರಾಷ್ಟ್ರವಾದ ಕೊರಿಯಾದೊಂದಿಗೆ ದೀರ್ಘಾವಧಿಯ ಮತ್ತು ಕಾರ್ಯತಂತ್ರ ದ್ವಿಪಕ್ಷೀಯ ಸಹಭಾಗಿತ್ವಕ್ಕಾಗಿ ಹೊಸ ಅವಕಾಶಗಳನ್ನು ಬಿಡುಗಡೆ ಮಾಡಿದೆ. ಹಡಗು ನಿರ್ಮಾಣ, ಸಾಗಣೆ ಮತ್ತು ಕಡಲ ಸರಕು ಸಾಗಣೆಯಲ್ಲಿ ಪಾಲುದಾರಿಕೆಗಾಗಿ ಸಮಗ್ರ ಮಾರ್ಗಸೂಚಿಯನ್ನು ಎರಡೂ ಕಡೆಯವರು ಅಳವಡಿಸಿಕೊಂಡಿದ್ದು, ಅದರ ಆರಂಭಿಕ ಅನುಷ್ಠಾನಕ್ಕಾಗಿ ಎದುರು ನೋಡುತ್ತಿದ್ದಾರೆ. ಹಡಗು ನಿರ್ಮಾಣ ಅಭಿವೃದ್ಧಿ, ಹಡಗು ನಿರ್ಮಾಣ ಸ್ಥಾಪನೆ, ಬಂದರು ಕಾರ್ಯಾಚರಣೆಗಳು ಮತ್ತು ಭಾರತದಲ್ಲಿ ಸಾಗಣೆ ಮತ್ತು ಸರಕು ಸಾಗಣೆಗಾಗಿ ಭಾರತೀಯ ಮತ್ತು ಕೊರಿಯಾದ ವ್ಯವಹಾರಗಳ ನಡುವೆ ತೀರ್ಮಾನಿಸಲಾದ ಮತ್ತು ಯೋಜಿಸಲಾದ ಬಿ2ಬಿ ಸಹಯೋಗಗಳ ಶ್ರೇಣಿಯನ್ನು ಇಬ್ಬರೂ ನಾಯಕರು ಸ್ವಾಗತಿಸಿ, ಬೆಂಬಲ ವ್ಯಕ್ತಪಡಿಸಿದರು. ಮುಂಬೈನಲ್ಲಿ ಕೊರಿಯಾ ಸಾಗರ ಸಲಕರಣೆ ಸಂಘ(ಕೆಒಎಂಇಎ)ದ ಕಚೇರಿ ತೆರೆಯುವುದನ್ನು ಅವರು ಸ್ವಾಗತಿಸಿದರು, ಇದು ಕಡಲ ಉದ್ಯಮವನ್ನು ಬೆಂಬಲಿಸಲು ಪೂರಕ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡುವ ಮೊದಲ ಕಚೇರಿಯಾಗಿದೆ.
15. 2026 ಏಪ್ರಿಲ್ 20ರಂದು ನಡೆದ ಭಾರತ-ಆರ್‌ಒಕೆ ವ್ಯಾಪಾರ ವೇದಿಕೆಯ ಯಶಸ್ವಿ ಆತಿಥ್ಯವನ್ನು ನಾಯಕರು ಗಮನಿಸಿದರು. ನಿರಂತರವಾಗಿ ವ್ಯಾಪಾರ ತೊಡಗಿಸಿಕೊಳ್ಳುವಿಕೆಗಳನ್ನು ಪೋಷಿಸುವ ಸಲುವಾಗಿ, ಕೈಗಾರಿಕಾ ಸಹಕಾರ ಸಮಿತಿ ಮತ್ತು ಅದರ ಕಾರ್ಯ ಗುಂಪುಗಳ ಸಭೆಗಳ ಹೊರತಾಗಿ ಪ್ರಮುಖ ಕೈಗಾರಿಕಾ ಸಂಘಗಳ ನಡುವೆ ನಿಯಮಿತ ಸಂವಾದ ನಡೆಸಲು ಎರಡೂ ಕಡೆಯವರು ಒಪ್ಪಿಕೊಂಡರು. ಹೂಡಿಕೆ ಮತ್ತು ಬಿ2ಬಿ ಸಹಯೋಗಕ್ಕಾಗಿ ಭಾರತ ಮತ್ತು ಕೊರಿಯಾದ ಉದ್ಯಮ ವ್ಯವಹಾರಗಳು ಮಾಡಿದ ಘೋಷಣೆಗಳನ್ನು ಇಬ್ಬರು ನಾಯಕರು ಸ್ವಾಗತಿಸಿದರು.
16. ಪರಸ್ಪರರ ಮಾರುಕಟ್ಟೆಗಳಲ್ಲಿ ಕೊರಿಯಾ ಮತ್ತು ಭಾರತೀಯ ಕಂಪನಿಗಳಿಂದ ಮತ್ತಷ್ಟು ಹೂಡಿಕೆ ಉತ್ತೇಜಿಸಲು ಹೆಚ್ಚು ಅನುಕೂಲಕರ ವ್ಯಾಪಾರ ವಾತಾವರಣ ಬೆಳೆಸಲು ಉಭಯ ನಾಯಕರು ಒಪ್ಪಿಕೊಂಡರು.
17. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ(ಎಸ್ಎಂಇ)ಗಳ ಕ್ಷೇತ್ರದಲ್ಲಿ ಸಹಕಾರ ಕುರಿತ ತಿಳಿವಳಿಕೆ ಪತ್ರ(ಎಂಒಯು) ಪೂರ್ಣಗೊಂಡಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಎರಡೂ ದೇಶಗಳ ಎಸ್ಎಂಇಗಳಿಗೆ ಭಾರತ-ಕೊರಿಯಾ ಸಹಕಾರ ವಿಸ್ತರಿಸುವ ಮಾರ್ಗಗಳನ್ನು ಅನ್ವೇಷಿಸಲು ಅವರು ಸಂಬಂಧಿತ ಇಲಾಖೆಗಳು, ಸಚಿವಾಲಯಗಳಿಗೆ ನಿರ್ದೇಶನ ನೀಡಿದರು, ಇದರಲ್ಲಿ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಸಂಪರ್ಕಿಸಲು ಎಂಒಯು ವ್ಯಾಪ್ತಿಯ ಚಟುವಟಿಕೆಗಳು ಎಸ್ಎಂಇಗಳಿಗೆ ಆಯಾ ಮಾರುಕಟ್ಟೆಗಳಿಂದ ಸರಾಗವಾಗಿ ಅನ್ವೇಷಿಸಲು ಮತ್ತು ಲಾಭ ಪಡೆಯಲು ಸಹಾಯ ಮಾಡುತ್ತವೆ.
18. ಉಕ್ಕಿನ ಉದ್ಯಮದಲ್ಲಿ ಬಲವಾದ ಬೆಳವಣಿಗೆ ಅನುಭವಿಸುತ್ತಿರುವ ಪ್ರಮುಖ ಆರ್ಥಿಕತೆಯಾದ ಭಾರತ ಮತ್ತು ಹಸಿರು ಉಕ್ಕಿನ ತಯಾರಿಕೆಯಲ್ಲಿ ತಂತ್ರಜ್ಞಾನ ನಾಯಕನಾಗಿರುವ ಕೊರಿಯಾ ನಡುವಿನ ಸಹಯೋಗವು ನಿರ್ಣಾಯಕ ಮಹತ್ವದ್ದಾಗಿದೆ. ವ್ಯಾಪಾರ ಅವಕಾಶಗಳನ್ನು ಹೆಚ್ಚಿಸುವುದು, ಆರ್ಥಿಕ ಸಂಬಂಧಗಳನ್ನು ಗಟ್ಟಿಗೊಳಿಸುವುದು ಮತ್ತು ಉಕ್ಕಿನ ವಲಯದಲ್ಲಿ ಸ್ವಚ್ಛ ಇಂಧನವನ್ನು ಉತ್ತೇಜಿಸುವತ್ತ ಗಮನ ಹರಿಸುವ ಭಾರತ-ಕೊರಿಯಾ ವಾರ್ಷಿಕ ಉಕ್ಕಿನ ಸಂವಾದ ಸ್ಥಾಪಿಸಲು ಅವರು ಒಪ್ಪಿಕೊಂಡರು. ಒಡಿಶಾದಲ್ಲಿ 6 ಎಂಎಂಟಿ ಸಾಮರ್ಥ್ಯದ ಸಂಯೋಜಿತ ಉಕ್ಕಿನ ಸ್ಥಾವರ ಸ್ಥಾಪಿಸಲು ಪೋಸ್ಕೊ ಮತ್ತು ಜೆಎಸ್ ಡಬ್ಲ್ಯು ನಡುವೆ ಎಂಒಯುಗೆ ಸಹಿ ಹಾಕುವುದನ್ನು ಸಹ ಅವರು ಸ್ವಾಗತಿಸಿದರು.
ವ್ಯಾಪಾರ, ಹಣಕಾಸು ಮತ್ತು ಅಭಿವೃದ್ಧಿ ಮೇಲೆ ಗಮನ ಕೇಂದ್ರೀಕರಿಸುವ ಪಾಲುದಾರಿಕೆಗಳನ್ನು ವೇಗಗೊಳಿಸುವುದು
19. ಭಾರತ-ಆರ್‌ಒಕೆ ದ್ವಿಪಕ್ಷೀಯ ವ್ಯಾಪಾರದ ಸಂಪೂರ್ಣ ಸಾಮರ್ಥ್ಯ ಅರಿತುಕೊಳ್ಳುವ ಮತ್ತು ಡಿಜಿಟಲ್ ವ್ಯಾಪಾರ, ಪೂರೈಕೆ ಸರಪಳಿ ಸಹಭಾಗಿತ್ವ ಮತ್ತು ಹಸಿರು ಆರ್ಥಿಕತೆ ಸೇರಿದಂತೆ ವ್ಯಾಪಾರದ ಹೊಸ ಮಾರ್ಗಗಳಲ್ಲಿ ಪರಸ್ಪರ ಪ್ರಯೋಜನಕಾರಿ ವಿನಿಮಯ ಉತ್ತೇಜಿಸುವ ಪ್ರಾಮುಖ್ಯತೆಗೆ ಒತ್ತು ನೀಡಿದ ಅವರು, ಸಿಇಪಿಎ ಪರಿಷ್ಕೃತ ಮಾತುಕತೆಗಳನ್ನು ಪುನರಾರಂಭಿಸಲು ಮತ್ತು ತ್ವರಿತಗೊಳಿಸುವ ನಿರ್ಧಾರವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.
20. ಏಕೀಕೃತ ಪಾವತಿ ಇಂಟರ್ಫೇಸ್ ಮತ್ತು ನಿಯಂತ್ರಕ ನಾವೀನ್ಯತೆಗಳಿಂದ ನಿರೂಪಿಸಲ್ಪಟ್ಟ ಭಾರತದ ಹಣಕಾಸು ತಂತ್ರಜ್ಞಾನ ಕ್ರಾಂತಿಯು ಗಡಿಯಾಚೆಗಿನ ಸಹಬಾಗಿತ್ವಕ್ಕೆ ಹಲವು ಅವಕಾಶಗಳನ್ನು ಸೃಷ್ಟಿಸಿದೆ. ಪರಸ್ಪರ ಕಾರ್ಯಸಾಧ್ಯತೆ ಹೆಚ್ಚಿಸಲು, ಆರ್ಥಿಕ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳನ್ನು ಬಲಪಡಿಸಲು ಎರಡೂ ದೇಶಗಳ ಡಿಜಿಟಲ್ ಪಾವತಿ ವ್ಯವಸ್ಥೆಗಳ ಹಂತ ಹಂತವಾದ ಏಕೀಕರಣಕ್ಕಾಗಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(ಎನ್‌ಪಿಸಿಐಎಲ್) ಮತ್ತು ಕೊರಿಯಾ ಫೈನಾನ್ಷಿಯಲ್ ಟೆಲಿಕಮ್ಯುನಿಕೇಷನ್ಸ್ ಮತ್ತು ಕ್ಲಿಯರಿಂಗ್ಸ್ ಇನ್‌ಸ್ಟಿಟ್ಯೂಟ್(ಕೆಎಫ್‌ಟಿಸಿ) ನಡುವೆ ಎಂಒಯುಗೆ ಸಹಿ ಹಾಕಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಗಡಿಯಾಚೆಗಿನ ಹಣಕಾಸು ಉತ್ಪನ್ನಗಳ ಅಭಿವೃದ್ಧಿ ಮತ್ತು ಮೇಲ್ವಿಚಾರಣೆಯ ಸಹಕಾರ ಮತ್ತು ಸಮಾಲೋಚನೆಗಾಗಿ ಭಾರತದ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ(ಐಎಫ್‌ಎಸ್‌ಸಿಎ) ಮತ್ತು ಆರ್‌ಒಕೆಯ ಹಣಕಾಸು ಸೇವೆಗಳ ಆಯೋಗ(ಎಫ್‌ಎಸ್‌ಸಿ) / ಹಣಕಾಸು ಮೇಲ್ವಿಚಾರಣಾ ಸೇವೆ (ಎಫ್‌ಎಸ್‌ಎಸ್) ನಡುವಿನ ಎಂಒಯು ಅನ್ನು ಸಹ ಅವರು ಸ್ವಾಗತಿಸಿದರು.
21. ಬ್ಯಾಂಕಿಂಗ್, ಬಂಡವಾಳ ಮಾರುಕಟ್ಟೆಗಳು ಮತ್ತು ಹಣಕಾಸು ತಂತ್ರಜ್ಞಾನ ಸೇರಿದಂತೆ ಹಣಕಾಸು ವಲಯದಲ್ಲಿ ಸಹಕಾರ ಬಲಪಡಿಸಲು ಎರಡೂ ದೇಶಗಳ ಹಣಕಾಸು ಅಧಿಕಾರಿಗಳು ಮತ್ತು ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ 'ಕೊರಿಯಾ-ಭಾರತ ಹಣಕಾಸು ಸಹಕಾರ ವೇದಿಕೆ' ಯಶಸ್ವಿಯಾಗಿ ನಡೆದಿರುವುದಕ್ಕೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು.
22. ಕೊರಿಯಾದ ಹಣಕಾಸು ಸಂಸ್ಥೆಗಳು ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ಮೂಲಸೌಕರ್ಯ, ಉತ್ಪಾದನೆ ಮತ್ತು ಬೆಳೆಯುತ್ತಿರುವ ಹಣಕಾಸು ಮಾರುಕಟ್ಟೆಯ ಮೇಲೆ ತಮ್ಮ ಹೂಡಿಕೆಗಳನ್ನು ಮಾಡುತ್ತಿವೆ. ಈ ಸಂದರ್ಭದಲ್ಲಿ, ಕೊರಿಯಾ ಹೂಡಿಕೆ ನಿಗಮವು ಭಾರತದಲ್ಲಿ ನಡೆಸಿರುವ ಯಶಸ್ವಿ ಕಾರ್ಯಾಚರಣೆಯನ್ನು ಇಬ್ಬರು ನಾಯಕರು ಗಮನಿಸಿದರು. ಭಾರತದಲ್ಲಿ ಕಚೇರಿ ತೆರೆಯುವ ಕೊರಿಯಾ ಅಭಿವೃದ್ಧಿ ಬ್ಯಾಂಕ್‌ನ ಆಸಕ್ತಿಯನ್ನು ಸ್ವಾಗತಿಸಿದರು. ಪ್ರಧಾನ ಮಂತ್ರಿ ಮೋದಿ ಅವರು ಕೊರಿಯಾದ ರಾಷ್ಟ್ರೀಯ ಪಿಂಚಣಿ ಸೇವೆಯು ಭಾರತದಲ್ಲಿ ತನ್ನ ಕಚೇರಿ ತೆರೆಯುವುದನ್ನು ಅನ್ವೇಷಿಸಬೇಕು ಎಂದು ಆಹ್ವಾನ ನೀಡಿದರು.
23. ಭಾರತ ಮತ್ತು ಕೊರಿಯಾ ನಡುವಿನ ಅಭಿವೃದ್ಧಿ ಪಾಲುದಾರಿಕೆಯ ಸಾಮರ್ಥ್ಯವನ್ನು ಗುರುತಿಸಿದ ಅವರು, ಕೆಒಐಸಿಎ ಜಾರಿಗೆ ತಂದಿರುವ ಪ್ರಸ್ತುತ ಯೋಜನೆಗಳು ಸೇರಿದಂತೆ ಭಾರತದಲ್ಲಿ ಕೌಶಲ್ಯಪೂರ್ಣ ಕೈಗಾರಿಕಾ ಮಾನವ ಸಂಪನ್ಮೂಲಗಳ ಸಾಮರ್ಥ್ಯ ವೃದ್ಧಿಗಾಗಿ ಅಭಿವೃದ್ಧಿ ಸಹಕಾರ ಮುಂದುವರಿಸಲು ಅಗತ್ಯವಾದ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಎರಡೂ ದೇಶಗಳ ನಡುವೆ ಪರಿಣಾಮಕಾರಿ ಅಭಿವೃದ್ಧಿ ಸಹಕಾರ ಖಚಿತಪಡಿಸಿಕೊಳ್ಳಲು ಎರಡೂ ಕಡೆಯವರು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡರು.
ಉದಯೋನ್ಮುಖ ಕೈಗಾರಿಕೆಗಳಲ್ಲಿನ ಪಾಲುದಾರಿಕೆಗಳ ಮೂಲಕ ಭವಿಷ್ಯದ ಬೆಳವಣಿಗೆ
24. ಬಲಿಷ್ಠವಾದ ಮತ್ತು ಪೂರಕ ಡಿಜಿಟಲ್ ಸಾಮರ್ಥ್ಯಗಳನ್ನು ಹೊಂದಿರುವ 2 ರಾಷ್ಟ್ರಗಳಾದ ಭಾರತ ಮತ್ತು ಕೊರಿಯಾ, ವಿಶ್ವದ ಭವಿಷ್ಯವನ್ನು ವ್ಯಾಖ್ಯಾನಿಸುವ ಕೈಗಾರಿಕೆಗಳು ಮತ್ತು ತಂತ್ರಜ್ಞಾನಗಳಿಗೆ ಕೊಡುಗೆ ನೀಡಬಹುದು. ಎಐ, ದತ್ತಾಂಶ ಆಡಳಿತ ಮತ್ತು ಡಿಜಿಟಲ್ ವ್ಯವಹಾರಗಳ ಮೇಲೆ ಗಮನ ಕೇಂದ್ರೀಕರಿಸುವ ಭಾರತ-ಕೊರಿಯಾ ಡಿಜಿಟಲ್ ಸೇತುವೆಗಾಗಿ ಮಾರ್ಗಸೂಚಿ ಆರಂಭಿಸುವುದನ್ನು ಇಬ್ಬರು ನಾಯಕರು ಸ್ವಾಗತಿಸಿದರು, ಜತೆಗೆ ಡಿಜಿಟಲ್ ನಾವೀನ್ಯತೆ ಮತ್ತು ಸಹಕಾರ ಬೆಂಬಲಿಸುವಲ್ಲಿ ಸೆಮಿಕಂಡಕ್ಟರ್ ಗಳು ಸೇರಿದಂತೆ ತಂತ್ರಜ್ಞಾನಗಳನ್ನು ಸಕ್ರಿಯಗೊಳಿಸುವ ಪಾತ್ರವನ್ನು ಗುರುತಿಸಿದರು. ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಯ ಬಗ್ಗೆ ಪ್ರಧಾನ ಮಂತ್ರಿ ಮೋದಿ ಅವರು ಅಧ್ಯಕ್ಷ ಲೀ ಅವರಿಗೆ ವಿವರಿಸಿದರು, ಅಲ್ಲದೆ ಕೊರಿಯಾದ ಉದ್ಯಮ ವ್ಯವಹಾರಗಳು ಸರ್ಕಾರದ ಪ್ರೋತ್ಸಾಹ ಮತ್ತು ಬೆಳೆಯುತ್ತಿರುವ ಮಾರುಕಟ್ಟೆಯ ಲಾಭವನ್ನು ಪಡೆದುಕೊಳ್ಳುವಂತೆ ಸ್ವಾಗತಿಸಿದರು. ಪ್ರವೇಶ ಮತ್ತು ಒಳಗೊಳ್ಳುವಿಕೆ ಜೊತೆಗೆ ನಾವೀನ್ಯತೆಯನ್ನು ಉತ್ತೇಜಿಸುವ "ಎಲ್ಲರಿಗೂ ಎಐ" ಮತ್ತು "ಮಾನವ್" ತತ್ವಗಳಿಂದ ಪ್ರೇರಿತವಾದ ಎಐ ಅಭಿವೃದ್ಧಿಗಾಗಿ ಎರಡೂ ನಾಯಕರು ತಮ್ಮ ದೃಷ್ಟಿಕೋನಗಳನ್ನು ಶ್ಲಾಘಿಸಿದರು. ಸಂಶೋಧನೆ ಮತ್ತು ಪ್ರತಿಭೆ ಪೋಷಣೆ ಸೇರಿದಂತೆ ಎಐ ಕ್ಷೇತ್ರಗಳಲ್ಲಿ ಭಾರತ-ಕೊರಿಯಾ ಪಾಲುದಾರಿಕೆಯನ್ನು ಆಳಗೊಳಿಸುವ ಬಯಕೆಯನ್ನು ಅವರು ವ್ಯಕ್ತಪಡಿಸಿದರು.
25. 'ರಕ್ಷಣಾ ಉದ್ಯಮ ಸಹಕಾರಕ್ಕೆ ಮಾರ್ಗಸೂಚಿ' ಕುರಿತ 2020ರ ಎಂಒಯು ಪುನರುಜ್ಜೀವನಗೊಳಿಸುವ ಮೂಲಕ ರಕ್ಷಣಾ ಕೈಗಾರಿಕೆಗಳಲ್ಲಿ ಭಾರತ-ಆರ್‌ಒಕೆ ಸಹಕಾರ ಕಾರ್ಯತಂತ್ರದ ಮಹತ್ವವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು. ಎರಡನೇ ಬ್ಯಾಚ್ ಉತ್ಪಾದನೆ ಪ್ರಗತಿಯಲ್ಲಿರುವಾಗ ಕೆ 9-ವಜ್ರ ಹೊವಿಟ್ಜರ್‌ಗಳ ಯಶಸ್ವಿ ಜಂಟಿ ಉದ್ಯಮದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ಸ್ವಯಂಚಾಲಿತ ವಾಯು ರಕ್ಷಣಾ ಗನ್-ಕ್ಷಿಪಣಿ ವ್ಯವಸ್ಥೆಗಳು ಮತ್ತು ಪರಸ್ಪರ ಆಸಕ್ತಿಯ ಇತರ ಕ್ಷೇತ್ರಗಳಂತಹ ಇತರೆ ಭವಿಷ್ಯದ ರಕ್ಷಣಾ ತಂತ್ರಜ್ಞಾನಗಳು/ವೇದಿಕೆಗಳಲ್ಲಿ ಮಾದರಿಯನ್ನು ಪುನರಾವರ್ತಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಅವರು ಸ್ವಾಗತಿಸಿದರು.
26. ಎರಡೂ ದೇಶಗಳಲ್ಲಿ ನಡೆಯುತ್ತಿರುವ ರಕ್ಷಣಾ ಉದ್ಯಮದಲ್ಲಿ ನಾವೀನ್ಯತೆಗಳನ್ನು ಗುರುತಿಸಿ, ಎರಡೂ ಕಡೆಯ ವ್ಯವಹಾರಗಳು, ಇನ್ ಕ್ಯುಬೇಟರ್‌ಗಳು, ಹೂಡಿಕೆದಾರರು, ರಕ್ಷಣಾ ಸ್ಟಾರ್ಟಪ್‌ಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸಲು 'ಕೊರಿಯಾ-ಭಾರತ ರಕ್ಷಣಾ ವೇಗವರ್ಧಕ'(ಕಿಂಡ್-ಎಕ್ಸ್) ನಾವೀನ್ಯತೆ ವೇದಿಕೆ ಆರಂಭಿಸಲು ಇಬ್ಬರು ನಾಯಕರು ನಿರ್ಧರಿಸಿದರು.
27. ಎರಡೂ ದೇಶಗಳಲ್ಲಿ ಬಾಹ್ಯಾಕಾಶವು ರಾಷ್ಟ್ರೀಯ ಅಭಿವೃದ್ಧಿಯ ಭರವಸೆಯ ಗಡಿಯಾಗಿದ್ದು, ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಮಟ್ಟದಲ್ಲಿ ಸಹಕಾರದ ಅವಕಾಶಗಳನ್ನು ಅನ್ವೇಷಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮತ್ತು ಕೊರಿಯಾ ಏರೋಸ್ಪೇಸ್ ಅಡ್ಮಿನಿಸ್ಟ್ರೇಷನ್(ಕೆಎಎಸ್ಎ) ನಡುವೆ ಜಂಟಿ ಕಾರ್ಯಪಡೆ ರಚಿಸುವ ಉಪಕ್ರಮಗಳನ್ನು, ಬಾಹ್ಯಾಕಾಶ ನವೋದ್ಯಮಗಳು, ಕೈಗಾರಿಕೆಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಸಹಯೋಗ ಉತ್ತೇಜಿಸಲು 2026 ಏಪ್ರಿಲ್ 2026ರಂದು ಬೆಂಗಳೂರಿನಲ್ಲಿ ಇನ್-ಸ್ಪೇಸ್(IN-SPACe) ಸಹಯೋಗದೊಂದಿಗೆ ಭಾರತ-ಆರ್‌ಒಕೆ "ಬಾಹ್ಯಾಕಾಶ ದಿನ" ನಡೆಸುವ ಉಪಕ್ರಮಗಳನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಪರಸ್ಪರರ ಉಪಗ್ರಹ ಸಂಚರಣೆ ವ್ಯವಸ್ಥೆಗಳಿಗೆ ಪರಸ್ಪರ ಬೆಂಬಲ ನೀಡುವ ಅವಕಾಶಗಳನ್ನು ಅನ್ವೇಷಿಸಲು ಇಬ್ಬರೂ ನಾಯಕರು ತಮ್ಮ ಕಡೆಯವರನ್ನು ಪ್ರೋತ್ಸಾಹಿಸಿದರು.
ಭೂಮಿ ತಾಯಿಗಾಗಿ ಒಂದಾಗುವುದು
28. ಜಾಗತಿಕ ಇಂಧನ ಮತ್ತು ಸಂಪನ್ಮೂಲ ಮಾರುಕಟ್ಟೆಯಲ್ಲಿನ ಪ್ರಸ್ತುತ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ, ಹೈಡ್ರೋಕಾರ್ಬನ್‌ಗಳು ಮತ್ತು ಪ್ರಮುಖ ಖನಿಜಗಳ ಪ್ರಮುಖ ಆಮದುದಾರರಾದ ಭಾರತ ಮತ್ತು ಆರ್‌ಒಕೆ, ಪರಿಸರಕ್ಕೆ ಸುಸ್ಥಿರ ರೀತಿಯಲ್ಲಿ ಪರಿಣಾಮಕಾರಿ ಇಂಧನ ಬಳಕೆ, ಖನಿಜ ಹೊರತೆಗೆಯುವಿಕೆ, ಸಂಸ್ಕರಣೆ, ಮರುಬಳಕೆ ಮತ್ತು ಪರ್ಯಾಯ ಇಂಧನಗಳು ಮತ್ತು ವಸ್ತುಗಳ ಸಹ-ಅಭಿವೃದ್ಧಿಯತ್ತ ಕೆಲಸ ಮಾಡಬೇಕಾಗಿದೆ ಎಂದು ಇಬ್ಬರೂ ನಾಯಕರು ಗುರುತಿಸಿದರು. ನಿರ್ಣಾಯಕ ಖನಿಜಗಳು ಮತ್ತು ಸುಧಾರಿತ ತಂತ್ರಜ್ಞಾನಗಳಲ್ಲಿ ಸುರಕ್ಷಿತ, ಚೇತರಿಕೆಯ ಮತ್ತು ನಾವೀನ್ಯತೆ-ಚಾಲಿತ ಪೂರೈಕೆ ಸರಪಳಿಗಳನ್ನು ನಿರ್ಮಿಸುವ ಮಹತ್ವಕ್ಕೆ ನಾಯಕರು ಒತ್ತು ನೀಡಿದರು. ಈ ನಿಟ್ಟಿನಲ್ಲಿ, ಕೃತಕ ಬುದ್ಧಿಮತ್ತೆಯ ಬಳಕೆ ಮೂಲಕ ನಿರ್ಣಾಯಕ ಖನಿಜಗಳ ಮ್ಯಾಪಿಂಗ್ ಮತ್ತು ಪರಿಶೋಧನೆಗಾಗಿ ಎರಡೂ ದೇಶಗಳ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಗಳ ನಡುವಿನ ಸಂಪರ್ಕಗಳನ್ನು ಬಲಪಡಿಸುವುದು ಸೇರಿದಂತೆ ನಿರ್ಣಾಯಕ ಖನಿಜಗಳ ಮೌಲ್ಯ ಸರಪಳಿಯಲ್ಲಿ ಸಹಕರಿಸಲು ಇಬ್ಬರು ನಾಯಕರು ಒಪ್ಪಿಕೊಂಡರು. ವೃತ್ತಾಕಾರ ಅಥವಾ ಹಸಿರು ಉಪಕ್ರಮಗಳ ಭಾಗವಾಗಿ ಇ-ತ್ಯಾಜ್ಯ ಮತ್ತು ಗಣಿ ಟೈಲಿಂಗ್‌ಗಳಂತಹ ಅಸಾಂಪ್ರದಾಯಿಕ ಮೂಲಗಳಿಂದ ನಿರ್ಣಾಯಕ ಖನಿಜಗಳ ಮರುಪಡೆಯುವಿಕೆಯಲ್ಲಿ ಸಹಭಾಗಿತ್ವ ಹೊಂದುವುದನ್ನು ಅವರು ಬೆಂಬಲಿಸಿದರು.
29. ಇದಲ್ಲದೆ, ಪ್ಯಾಕ್ಸ್ ಸಿಲಿಕಾ ಉಪಕ್ರಮಕ್ಕೆ ಭಾರತ ಸೇರ್ಪಡೆಗೊಂಡಿದ್ದನ್ನು ಅಧ್ಯಕ್ಷ ಲೀ ಸ್ವಾಗತಿಸಿದರೆ, ಪ್ರಧಾನ ಮಂತ್ರಿ ಮೋದಿ ಅವರು ಸಂಪನ್ಮೂಲ ಭೂ-ಕಾರ್ಯತಂತ್ರ ನಿಶ್ಚಿತಾರ್ಥ ವೇದಿಕೆ(FORGE)ಯ ಅಧ್ಯಕ್ಷರಾಗಿ ಕೊರಿಯಾ ಗಣರಾಜ್ಯದ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ವಾಣಿಜ್ಯ ಪರಿಗಣನೆಗಳಿಗೆ ಅನುಗುಣವಾಗಿ ಪೂರೈಕೆ ಅಡಚಣೆ ಅಥವಾ ಮಾರುಕಟ್ಟೆ ಅಸ್ಥಿರತೆಯ ಸಮಯದಲ್ಲಿ ನಾಫ್ತಾದಂತಹ ನಿರ್ಣಾಯಕ ವಸ್ತುಗಳನ್ನು ಪಡೆದುಕೊಳ್ಳುವಲ್ಲಿ ಸಹಕಾರ ಬಲಪಡಿಸುವ ಬಗ್ಗೆ ಅನ್ವೇಷಿಸಲು ಅವರು ಒಪ್ಪಿಕೊಂಡರು. ನಿರ್ಣಾಯಕ ವಸ್ತುಗಳ ದ್ವಿಪಕ್ಷೀಯ ವ್ಯಾಪಾರ ವಿಸ್ತರಿಸಲು ಎರಡೂ ಕಡೆಯವರು ಅವಕಾಶಗಳನ್ನು ಅನ್ವೇಷಿಸುತ್ತಾರೆ.
30. ಭಾರತ ಮತ್ತು ಕೊರಿಯಾ ತಮ್ಮ ಆರ್ಥಿಕ ಯೋಗಕ್ಷೇಮ ಉತ್ತೇಜಿಸುವ ಸಕಾರಾತ್ಮಕ ಮತ್ತು ಪೂರ್ವಭಾವಿ ಕಾರ್ಯಸೂಚಿಯ ಮೂಲಕ ಹವಾಮಾನ ಬದಲಾವಣೆಯ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಪಾಲುದಾರರಾಗಿದ್ದಾರೆ. ಈ ಸಂದರ್ಭದಲ್ಲಿ, ಹೂಡಿಕೆ-ಚಾಲಿತ ತಗ್ಗಿಸುವ ಯೋಜನೆಗಳಿಗೆ ಸಹಕಾರಿ ವಿಧಾನವನ್ನು ಸ್ಥಾಪಿಸುವ, ಆಯಾ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳ ಸಾಧನೆಯನ್ನು ಮುನ್ನಡೆಸುವ ಮತ್ತು ಹವಾಮಾನ ಕ್ರಿಯೆಯ ಕ್ಷೇತ್ರದಲ್ಲಿ ತಮ್ಮ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಪ್ಯಾರಿಸ್ ಒಪ್ಪಂದದ ವಿಧಿ 6.2ರ ಅಡಿ ಆಗಿರುವ ಎಂಒಸಿ ತೀರ್ಮಾನವನ್ನು ಇಬ್ಬರು ನಾಯಕರು ಸ್ವಾಗತಿಸಿದರು.
31. ಪರಿಸರ ಜವಾಬ್ದಾರಿಯುತ ರಾಷ್ಟ್ರಗಳಾಗಿ, ಭಾರತ ಮತ್ತು ಕೊರಿಯಾ ಹವಾಮಾನ ಮತ್ತು ಪರಿಸರ ಕ್ಷೇತ್ರದಲ್ಲಿ ಸಹಕಾರ ಕುರಿತು ಎಂಒಯು ಮೂಲಕ ಸಾಂಸ್ಥಿಕ ಸಹಕಾರ ಮುಂದುವರಿಸಲು ನಿರ್ಧರಿಸಿದವು. ಅಂತಾರಾಷ್ಟ್ರೀಯ ಸೌರ ಒಕ್ಕೂಟ(ಐಎಸ್ಎ) ಸದಸ್ಯರಾಗಿ ಕೊರಿಯಾ ಸೇರ್ಪಡೆ ಮತ್ತು ಜಾಗತಿಕ ಹಸಿರು ಬೆಳವಣಿಗೆಯ ಸಂಸ್ಥೆಯ (ಜಿಜಿಜಿಐ) ಸದಸ್ಯರಾಗಿ ಭಾರತದ ಸೇರ್ಪಡೆಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಜಾಗತಿಕ ಜೈವಿಕ ಇಂಧನ ಒಕ್ಕೂಟ ಮತ್ತು ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಒಕ್ಕೂಟ ಮತ್ತು ವಿಪತ್ತು ನಿರ್ವಹಣೆಯ ಮೂಲಸೌಕರ್ಯ ಒಕ್ಕೂಟ(ಸಿಡಿಆರ್ ಐ)ಕ್ಕೆ ಸೇರುವಂತೆ ಪ್ರಧಾನ ಮಂತ್ರಿ ಮೋದಿ ಅವರು ಕೊರಿಯಾವನ್ನು ಆಹ್ವಾನಿಸಿದರು.
32. ಮಾನವತೆಯ ಭವಿಷ್ಯದ ಮೇಲೆ ಪರಿಣಾಮ ಬೀರುವ ಜಾಗತಿಕ ಸವಾಲುಗಳನ್ನು ಪರಿಹರಿಸಲು ಭಾರತ-ಕೊರಿಯಾದ ವ್ಯಾಪಕ ಆಸಕ್ತಿಗಳನ್ನು ಗುರುತಿಸಿ, ಹವಾಮಾನ ಬದಲಾವಣೆ, ಆರ್ಕ್ಟಿಕ್ ಮತ್ತು ಕಡಲ ಸಹಕಾರ ಸೇರಿದಂತೆ ಜಾಗತಿಕ ವಿಷಯಗಳ ಕುರಿತು ಎರಡು ವಿದೇಶಾಂಗ ಸಚಿವಾಲಯಗಳ ನಡುವೆ ಸಂವಾದ ಆರಂಭಿಸುವ ಜತೆಗೆ ಸುಸ್ಥಿರತೆ ಕ್ಷೇತ್ರದಲ್ಲಿ ಸಹಕಾರ ಕುರಿತು ಜಂಟಿ ಹೇಳಿಕೆ ಅಂಗೀಕರಿಸುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.
ಮೃದು ಶಕ್ತಿಯನ್ನು ಹೆಚ್ಚಿಸುವುದು
33. ಭಾರತ ಮತ್ತು ಕೊರಿಯಾದ ಶ್ರೀಮಂತ ಮತ್ತು ಹಂಚಿಕೆಯ ಸಾಂಸ್ಕೃತಿಕ ಪರಂಪರೆಯನ್ನು ಆಧರಿಸಿ, ಎರಡೂ ದೇಶಗಳಲ್ಲಿನ ಸಂಸ್ಥೆಗಳ ನಡುವಿನ ಸಾಂಸ್ಕೃತಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಇಬ್ಬರೂ ನಾಯಕರು ಬೆಂಬಲ ನೀಡಿದರು. 2026-2030ರ ಅವಧಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ(ಸಿಇಪಿ)ದ ವಿಸ್ತರಣೆಯನ್ನು ಅವರು ಸ್ವಾಗತಿಸಿದರು, ಇದನ್ನು ಸೂಕ್ತ ರೀತಿಯಲ್ಲಿ ಕಾರ್ಯಗತಗೊಳಿಸಲು ಸೂಕ್ತ ಯೋಜನೆಗಳನ್ನು ಅಭಿವೃದ್ಧಿಪಡಿಸಲು ತಮ್ಮ ಸಂಬಂಧಪಟ್ಟ ಸಂಸ್ಥೆಗಳನ್ನು ಪ್ರೋತ್ಸಾಹಿಸಿದರು. 2028-29ನೇ ವರ್ಷವನ್ನು ಭಾರತ-ಕೊರಿಯಾ ಸ್ನೇಹ ವರ್ಷವನ್ನು ಸರಣಿ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಆಚರಿಸಲು ಅವರು ನಿರ್ಧರಿಸಿದರು.
34. ಸಾಂಸ್ಕೃತಿಕ ಮತ್ತು ಸೃಜನಶೀಲ ಕೈಗಾರಿಕೆಗಳ(ಸಿಸಿಐ) ಕುರಿತಾದ ಎಂಒಯುಗೆ ಸಹಿ ಹಾಕಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಇದಲ್ಲದೆ, ಅನಿಮೇಷನ್ ಮತ್ತು ದೃಶ್ಯ ಪರಿಣಾಮ(ವಿಎಫ್ಎಕ್ಸ್)ಗಳಂತಹ ಕ್ಷೇತ್ರಗಳಲ್ಲಿ ಸಹ-ನಿರ್ಮಾಣಗಳು, ತರಬೇತಿ ವಿನಿಮಯ ಮತ್ತು ತಂತ್ರಜ್ಞಾನ ಹಂಚಿಕೆ ಸೇರಿದಂತೆ ಚಲನಚಿತ್ರ ವಲಯದಲ್ಲಿ ಸಹಭಾಗಿತ್ವ ಉತ್ತೇಜಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
35. ಕೊರಿಯಾದಲ್ಲಿ ಭಾರತ ದಿನ ಮತ್ತು ಭಾರತದಲ್ಲಿ ಕೊರಿಯಾ ದಿನ ಆಚರಿಸುವುದು ಸೇರಿದಂತೆ ಉಭಯ ದೇಶಗಳ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಮೃದು ಶಕ್ತಿಯ ಪ್ರಕ್ಷೇಪಣದ ಬಗ್ಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಬೆಂಬಲಿಸಲು ಇಬ್ಬರು ನಾಯಕರು ಒಪ್ಪಿಕೊಂಡರು.
36. ಎರಡೂ ದೇಶಗಳ ಹಂಚಿಕೆಯ ಬೌದ್ಧ ಪರಂಪರೆಯನ್ನು ನೆನಪಿಸಿಕೊಂಡ ನಾಯಕರು, ಭಾರತ ಮತ್ತು ಕೊರಿಯಾ ನಡುವಿನ ಐತಿಹಾಸಿಕ ಮತ್ತು ನಾಗರಿಕ ಸಂಪರ್ಕವನ್ನು ಗಾಢವಾಗಿಸುವ ಉದ್ದೇಶಕ್ಕೆ ಅನುಗುಣವಾಗಿ, ಭಾರತವು ಕೊರಿಯಾಗೆ 200 ಕಲಾಕೃತಿಗಳನ್ನು ದಾನ ಮಾಡಿರುವುದನ್ನು ಇಬ್ಬರು ನಾಯಕರು ಸ್ವಾಗತಿಸಿದರು. ಎರಡೂ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ ಉತ್ತೇಜಿಸಲು ಗಿಮ್ಹೇ ಅವರ ಪ್ರಯತ್ನಗಳನ್ನು ಸ್ವಾಗತಿಸಿದರು.
37. ಭಾರತ ಮತ್ತು ಆರ್‌ಒಕೆ ನಡುವೆ ತಜ್ಞರು ಮತ್ತು ಸಿಬ್ಬಂದಿ ವಿನಿಮಯ, ತರಬೇತಿ, ಪ್ರತಿಭಾ ಅಭಿವೃದ್ಧಿ ಮತ್ತು ಕ್ರೀಡಾ ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತು ಜ್ಞಾನದ ವಿನಿಮಯ, ಕ್ರೀಡಾ ಪ್ರಾಧಿಕಾರಗಳು ಮತ್ತು ಇತರೆ ಕ್ರೀಡಾ ಸಂಸ್ಥೆಗಳ ನಡುವಿನ ಸಹಕಾರ ಕಾರ್ಯಕ್ರಮಗಳನ್ನು ಉತ್ತೇಜಿಸಲು ಮತ್ತು ಸುಗಮಗೊಳಿಸಲು ಕ್ರೀಡಾ ಕ್ಷೇತ್ರದಲ್ಲಿ ಸಹಕಾರದ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.
ಜನರಿಂದ ಜನರ ಸಂಬಂಧಗಳು
38. ದ್ವಿಪಕ್ಷೀಯ ಪಾಲುದಾರಿಕೆಯ ಮೂಲಾಧಾರವಾಗಿ ಶೈಕ್ಷಣಿಕ ಸಹಕಾರ ಬಲಪಡಿಸುವ ತಮ್ಮ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು. ವಿಸ್ತೃತ ಮಾಹಿತಿ ಹಂಚಿಕೆ, ಹಾಗೆಯೇ ಅಧ್ಯಾಪಕರು ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು ಮತ್ತು ಜಂಟಿ ಶೈಕ್ಷಣಿಕ ಉಪಕ್ರಮಗಳ ಮೂಲಕ - ವಿಶೇಷವಾಗಿ ಕೃತಕ ಬುದ್ಧಿಮತ್ತೆ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ(STEM) ಕ್ಷೇತ್ರಗಳಲ್ಲಿ - ವಿಶ್ವವಿದ್ಯಾಲಯಗಳು ಮತ್ತು ಮಾಧ್ಯಮಿಕ ಶಾಲೆಗಳ ನಡುವಿನ ಸಹಭಾಗಿತ್ವವನ್ನು ಅವರು ಸ್ವಾಗತಿಸಿದರು.
39. ಭಾಷಾ ಮತ್ತು ಸಾಂಸ್ಕೃತಿಕ ತಿಳಿವಳಿಕೆಯ ಮಹತ್ವವನ್ನು ಗುರುತಿಸಿದ ಇಬ್ಬರು ನಾಯಕರು, ಶೈಕ್ಷಣಿಕ ಪಠ್ಯಕ್ರಮ, ಡಿಜಿಟಲ್ ಪರಿಕರಗಳು, ಶಿಕ್ಷಕರ ತರಬೇತಿ ಮತ್ತು ಸಂಬಂಧಿತ ಸಾಂಸ್ಥಿಕ ಮಾರ್ಗಸೂಚಿಗಳ ಮೂಲಕ ಭಾರತದಲ್ಲಿ ಕೊರಿಯಾ ಭಾಷೆಯ ಬೋಧನೆ ಮತ್ತು ಕಲಿಕೆಯನ್ನು ಮತ್ತು ಕೊರಿಯಾದಲ್ಲಿ ಭಾರತೀಯ ಭಾಷೆಗಳು, ವಿಶೇಷವಾಗಿ ಹಿಂದಿಯನ್ನು ಬೆಂಬಲಿಸಿದರು. 2026 ಜನವರಿಯಲ್ಲಿ ಭಾರತದಲ್ಲಿ ಮೊದಲ ಕೊರಿಯಾ ಶಿಕ್ಷಣ ಕೇಂದ್ರ ಆರಂಭಿಸಿರುವುದನ್ನು ಅವರು ಸ್ವಾಗತಿಸಿದರು.
40. ಕೊರಿಯಾದ ಕೆಎನ್ ಯು10 ಒಕ್ಕೂಟದಲ್ಲಿ ಭಾಗವಹಿಸುವ 23 ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿಗಳು) ಮತ್ತು ಕೊರಿಯಾದ 10 ರಾಷ್ಟ್ರೀಯ ವಿಶ್ವವಿದ್ಯಾಲಯಗಳ ನಡುವೆ ಜಂಟಿ ಸಂಶೋಧನೆ, ಸಾಲ ವರ್ಗಾವಣೆ ಮತ್ತು ವಿದ್ಯಾರ್ಥಿಗಳ ವಿನಿಮಯದ ಮೂಲಕ ವಿಶ್ವವಿದ್ಯಾಲಯ ಮಟ್ಟದ ಶೈಕ್ಷಣಿಕ ಸಹಕಾರ ಹೆಚ್ಚಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
41. ಭಾರತೀಯ ಫಲಾನುಭವಿಗಳಿಗೆ ಜಾಗತಿಕ ಕೊರಿಯಾ ವಿದ್ಯಾರ್ಥಿವೇತನ(ಜಿಕೆಎಸ್) ನೀಡುವುದನ್ನು ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ(ಐಸಿಸಿಆರ್) ಅಟಲ್ ಬಿಹಾರಿ ವಾಜಪೇಯಿ ಸಾಮಾನ್ಯ ವಿದ್ಯಾರ್ಥಿವೇತನ ಮತ್ತು ಐಸಿಸಿಆರ್ ಕಲೆ ಮತ್ತು ಸಂಸ್ಕೃತಿಗಾಗಿ ಲತಾ ಮಂಗೇಶ್ಕರ್ ವಿದ್ಯಾರ್ಥಿವೇತನ ಯೋಜನೆ ಮತ್ತು ಸಮಗ್ರ ಯೋಗಕ್ಷೇಮಕ್ಕಾಗಿ ಆಯುಷ್ ವಿದ್ಯಾರ್ಥಿವೇತನ ಯೋಜನೆಯ ಮೂಲಕ ಕೊರಿಯಾದ ಫಲಾನುಭವಿಗಳಿಗೆ ಪರಸ್ಪರ ವಿದ್ಯಾರ್ಥಿವೇತನ ನೀಡುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ದ್ವಿಪಕ್ಷೀಯ ಶೈಕ್ಷಣಿಕ ಸಂಬಂಧಗಳನ್ನು ಗಾಢವಾಗಿಸಲು, ಇಬ್ಬರೂ ನಾಯಕರು ತಮ್ಮ ಯೋಜನೆಗಳ ಅಡಿ ಪರಸ್ಪರರ ನಾಗರಿಕರಿಗೆ ವಿದ್ಯಾರ್ಥಿವೇತನಗಳನ್ನು ಹೆಚ್ಚಿಸುವ ಮೂಲಕ ಈ ಕಾರ್ಯಕ್ರಮಗಳನ್ನು ವಿಸ್ತರಿಸುವ ಗುರಿ ಹೊಂದಿದ್ದಾರೆ.
42. ಭಾರತ ಮತ್ತು ಕೊರಿಯಾ ಮಾನವ ಸಂಪನ್ಮೂಲಗಳ ಕ್ಷೇತ್ರದಲ್ಲಿ ಬಲವಾದ ಪೂರಕತೆಯನ್ನು ಹಂಚಿಕೊಳ್ಳುತ್ತವೆ. ಪರಸ್ಪರರ ವೈಜ್ಞಾನಿಕ ಮತ್ತು ತಾಂತ್ರಿಕ ಪರಾಕ್ರಮ ಬಳಸಿಕೊಳ್ಳಲು ಮತ್ತು 2 ದೇಶಗಳ ವೈಜ್ಞಾನಿಕ ಸಂಸ್ಥೆಗಳು ಮತ್ತು ಮಾನವ ಬಂಡವಾಳದ ನಡುವಿನ ಸಂಪರ್ಕ ಬಲಪಡಿಸಲು ಇಬ್ಬರೂ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ, ಮುಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಜಂಟಿ ಸಮಿತಿಯ ಮೂಲಕ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಉತ್ತೇಜಿಸುವ ನಿರ್ಧಾರವನ್ನು ಅವರು ಸ್ವಾಗತಿಸಿದರು.
43. ಹೆಚ್ಚು ಸಕ್ರಿಯರಾದ ಜನರಿಂದ ಜನರಿಗೆ ವಿನಿಮಯ ಉತ್ತೇಜಿಸುವ ದೃಷ್ಟಿಯಿಂದ, ವೀಸಾ ಮತ್ತು ವಲಸೆ ಸಂಬಂಧಿತ ಪ್ರಕ್ರಿಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಮಾರ್ಗಗಳನ್ನು ಹುಡುಕುವ ಬಗ್ಗೆ ಎರಡೂ ಕಡೆಯವರು ಸಮ್ಮತಿಸಿದರು. ಜನರು ಮತ್ತು ಸರಕುಗಳ ಹೆಚ್ಚು ಸಕ್ರಿಯ ವಿನಿಮಯವನ್ನು ಉತ್ತೇಜಿಸಲು ಭಾರತ ಮತ್ತು ಕೊರಿಯಾ ನಡುವಿನ ವಾಯು ಸಂಪರ್ಕ ಬಲಪಡಿಸುವುದನ್ನು ನಾಯಕರು ಬೆಂಬಲಿಸಿದರು.
44. ಎರಡೂ ದೇಶಗಳಲ್ಲಿ ವಾಸಿಸುವ ಕೊರಿಯಾ ಮತ್ತು ಭಾರತೀಯ ಸಮುದಾಯಗಳ ಕೊಡುಗೆಗಳನ್ನು ಆಚರಿಸುತ್ತಾ, ಇಬ್ಬರೂ ನಾಯಕರು ಎರಡೂ ದೇಶಗಳ ಸುಧಾರಣೆಗಾಗಿ ಅವರ ಯೋಗಕ್ಷೇಮ ಮತ್ತು ಆಯಾ ಸಮಾಜಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಬೆಂಬಲಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ಜಾಗತಿಕ ಒಳಿತಿಗಾಗಿ ಪಾಲುದಾರಿಕೆ
45. ಜಾಗತಿಕ ಅಣ್ವಸ್ತ್ರ ಪ್ರಸರಣ ತಡೆ ಪ್ರಯತ್ನಗಳಿಗೆ ಎರಡೂ ದೇಶಗಳ ಕೊಡುಗೆ ಮತ್ತು ಬದ್ಧತೆಯನ್ನು ಗುರುತಿಸಿ, ಅಂತಾರಾಷ್ಟ್ರೀಯ ಅಣ್ವಸ್ತ್ರ ಪ್ರಸರಣ ತಡೆ ಆಡಳಿತವನ್ನು ಮತ್ತಷ್ಟು ಬಲಪಡಿಸುವ ಗುರಿಯೊಂದಿಗೆ, ಪರಮಾಣು ಪೂರೈಕೆದಾರರ ಗುಂಪಿನಲ್ಲಿ ಭಾರತದ ಸದಸ್ಯತ್ವಕ್ಕಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಎರಡೂ ಕಡೆಯವರು ಬದ್ಧರಾಗಿದ್ದಾರೆ.
46. ವಿಶ್ವ ವ್ಯಾಪಾರ ಸಂಸ್ಥೆಯನ್ನು ಅದರ ಮೂಲದಲ್ಲಿಟ್ಟುಕೊಂಡು ನಿಯಮ ಆಧಾರಿತ, ಮುಕ್ತ, ನ್ಯಾಯಯುತ, ಸಮಾನ, ಪಾರದರ್ಶಕ, ಎಲ್ಲರನ್ನೂ ಒಳಗೊಂಡ ಮತ್ತು ತಾರತಮ್ಯವಿಲ್ಲದ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಗೆ ಎರಡೂ ಕಡೆಯವರು ತಮ್ಮ ಬಲವಾದ ಬದ್ಧತೆ ಪುನರುಚ್ಚರಿಸಿದರು. ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆ ಮತ್ತು ವಿಶ್ವ ವ್ಯಾಪಾರ ಸಂಘಟನೆಯ ಕಾರ್ಯ ನಿರ್ವಹಣೆ ಬಲಪಡಿಸಲು ರಚನಾತ್ಮಕವಾಗಿ ತೊಡಗಿಸಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು. 2028ರಲ್ಲಿ ಕೊರಿಯಾ ಗುಂಪಿನ ಅಧ್ಯಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಜಿ20 ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಸಹಭಾಗಿತ್ವ ಹೆಚ್ಚಿಸಲು ಭಾರತ ಮತ್ತು ಕೊರಿಯಾ ಒಪ್ಪಿಕೊಂಡಿವೆ.
47. ವಿಶ್ವಸಂಸ್ಥೆಯ ಸಮುದ್ರ ಕಾನೂನು ಸಮಾವೇಶದಲ್ಲಿ(ಯುಎನ್‌ಸಿಎಲ್‌ಒಎಸ್) ಗಮನಾರ್ಹವಾಗಿ ಪ್ರತಿಫಲಿಸಿದಂತೆ, ಅಂತಾರಾಷ್ಟ್ರೀಯ ಕಾನೂನು ತತ್ವಗಳ ಆಧಾರದ ಮೇಲೆ, ಸಂಚರಣೆ ಮತ್ತು ಓವರ್‌ಫ್ಲೈಟ್‌ನ ಸ್ವಾತಂತ್ರ್ಯ ಮತ್ತು ಅಡೆತಡೆಯಿಲ್ಲದ ಕಾನೂನುಬದ್ಧ ವಾಣಿಜ್ಯವನ್ನು ಗೌರವಿಸುವ ತಮ್ಮ ಬದ್ಧತೆಯನ್ನು ಇಬ್ಬರು ನಾಯಕರು ಪುನರುಚ್ಚರಿಸಿದರು. ಯುಎನ್‌ಸಿಎಲ್‌ಒಎಸ್ ಸೇರಿದಂತೆ ಅಂತಾರಾಷ್ಟ್ರೀಯ ಕಾನೂನಿನ ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟ ತತ್ವಗಳಿಗೆ ಅನುಸಾರವಾಗಿ ಶಾಂತಿಯುತ ವಿಧಾನಗಳ ಮೂಲಕ ವಿವಾದಗಳನ್ನು ಪರಿಹರಿಸಲು ಇಬ್ಬರೂ ನಾಯಕರು ಎಲ್ಲಾ ದೇಶಗಳನ್ನು ಒತ್ತಾಯಿಸಿದರು.
48. ಪಶ್ಚಿಮ ಏಷ್ಯಾದಲ್ಲಿನ ಪ್ರಸ್ತುತ ಪ್ರಕ್ಷುಬ್ದ ಪರಿಸ್ಥಿತಿಯ ಬಗ್ಗೆ ಇಬ್ಬರೂ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದರು. ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ, ನಾಗರಿಕರ ರಕ್ಷಣೆ ಮತ್ತು ಸಂಚರಣೆಯ ಸ್ವಾತಂತ್ರ್ಯ ಸೇರಿದಂತೆ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಮೂಲಭೂತ ತತ್ವಗಳನ್ನು ಎತ್ತಿಹಿಡಿಯಲು ಅವರು ಎಲ್ಲಾ ದೇಶಗಳಿಗೆ ಕರೆ ನೀಡಿದರು. ಉದ್ವಿಗ್ನತೆ ಕಡಿಮೆ ಮಾಡಲು ಮತ್ತು ಇದಕ್ಕೆ ಆಧಾರವಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಸಂವಾದ ಮತ್ತು ರಾಜತಾಂತ್ರಿಕತೆ ಅನುಸರಿಸಬೇಕು ಎಂದು ಅವರು ಒತ್ತಿ ಹೇಳಿದರು.
49. ಕೊರಿಯಾದ ಪರ್ಯಾಯ ದ್ವೀಪದಲ್ಲಿ ಸಂಪೂರ್ಣ ಪರಮಾಣು ನಿಶ್ಯಸ್ತ್ರೀಕರಣ ಮತ್ತು ಶಾಶ್ವತ ಶಾಂತಿಗೆ ತಮ್ಮ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು. ಕೊರಿಯಾದ ಪರ್ಯಾಯ ದ್ವೀಪದಲ್ಲಿ ಶಾಂತಿಯುತ ಸಹಬಾಳ್ವೆ ಮತ್ತು ಹಂಚಿಕೆಯ ಬೆಳವಣಿಗೆ ಸಾಧಿಸುವ ಗುರಿ ಹೊಂದಿರುವ, ಪೂರ್ವಭಾವಿಯಾಗಿ ಉಲ್ಬಣಗೊಳಿಸುವಿಕೆ ಮತ್ತು ವಿಶ್ವಾಸ-ನಿರ್ಮಾಣ ಕ್ರಮಗಳ ಮೂಲಕ ಅಂತರ-ಕೊರಿಯಾ ಸಂವಾದ ಪುನರಾರಂಭಿಸುವ ಕೊರಿಯಾದ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ. ಕೊರಿಯಾದ ಪರ್ಯಾಯ ದ್ವೀಪದಲ್ಲಿ ಶಾಂತಿಯುತ ಸಹಬಾಳ್ವೆ ಮತ್ತು ಹಂಚಿಕೆಯ ಬೆಳವಣಿಗೆಯನ್ನು ಸಾಧಿಸುವ ಗುರಿ ಹೊಂದಿದೆ, ವಿಶೇಷವಾಗಿ ಭಯೋತ್ಪಾದಕರು ಮತ್ತು ಹೊರರಾಷ್ಟ್ರಗಳ ದುಷ್ಟ ಶಕ್ತಿಗಳಿಗೆ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣ ಮತ್ತು ವಿತರಣಾ ವ್ಯವಸ್ಥೆಗಳ ಪ್ರಸರಣ ತಡೆಗಟ್ಟಲು ಅವರು ಸಂಕಲ್ಪ ಮಾಡಿದರು.
50. ವಿಶ್ವಸಂಸ್ಥೆಯ ನಾಗರೀಕ ಸನ್ನದು ಸೇರಿದಂತೆ ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಉಕ್ರೇನ್‌ನಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸ್ಥಾಪಿಸಲು ಇಬ್ಬರು ನಾಯಕರು ಬೆಂಬಲ ವ್ಯಕ್ತಪಡಿಸಿದರು. ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಉಕ್ರೇನ್‌ನಲ್ಲಿ ಯುದ್ಧ ನಿಲ್ಲಿಸುವ ಮಹತ್ವಕ್ಕೆ ಅವರು ಒತ್ತು ನೀಡಿದರು.
51. ಇಂದಿನ ಜಗತ್ತಿನ ಹೆಚ್ಚು ಪ್ರಜಾಪ್ರಭುತ್ವ, ಜವಾಬ್ದಾರಿಯುತ, ಭಾಗವಹಿಸುವಿಕೆ ಮತ್ತು ಪ್ರತಿನಿಧಿಯನ್ನಾಗಿ ಮಾಡಲು ಭದ್ರತಾ ಮಂಡಳಿಯ ವಿಸ್ತರಣೆ ಸೇರಿದಂತೆ ಸಮಗ್ರ ವಿಶ್ವಸಂಸ್ಥೆಯ ಸುಧಾರಣೆಗಳಿಗಾಗಿ ಒಟ್ಟಾಗಿ ಕೆಲಸ ಮಾಡಲು ಎರಡೂ ಕಡೆಯವರು ನಿರ್ಧರಿಸಿದರು. ಹೆಚ್ಚುವರಿಯಾಗಿ, ಸಮಕಾಲೀನ ಜಾಗತಿಕ ವಾಸ್ತವಗಳನ್ನು ಪ್ರತಿಬಿಂಬಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗಳ ಕಡೆಗೆ ಕೆಲಸ ಮಾಡಲು ಇಬ್ಬರೂ ನಾಯಕರು ಒಪ್ಪಿಕೊಂಡರು.
52. ತಮ್ಮ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಭಾರತ-ಕೊರಿಯಾ ಗಣರಾಜ್ಯ ವಿಶೇಷ ಕಾರ್ಯತಂತ್ರ ಪಾಲುದಾರಿಕೆಯ ಸಮಗ್ರ ಪರಿಶೀಲನೆಯ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು. 2025ರಲ್ಲಿ ಪಾಲುದಾರಿಕೆಯ 10 ವರ್ಷಗಳು ಪೂರ್ಣಗೊಂಡಿದ್ದು, ಇದು ಒಂದು ದಶಕದ ಆಳವಾದ ಸಹಕಾರವನ್ನು ಸೂಚಿಸುತ್ತದೆ ಎಂದು ಗಮನಿಸಿದ ಅವರು, ಮುಂದಿನ ವರ್ಷಗಳಲ್ಲಿ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದರು.
*****
(ಪ್ರಕಟಣೆ ಐ.ಡಿ.: 2254120)
ವಿಸಿಟರ್ ಕೌಂಟರ್ : 5