ಆಯುಷ್
azadi ka amrit mahotsav

2026ರ ವಿಶ್ವ ಹೋಮಿಯೋಪತಿ ದಿನದ ಅಂಗವಾಗಿ ಎರಡು ದಿನಗಳ ಸಂವಾದಾತ್ಮಕ ವೇದಿಕೆ ಉದ್ಘಾಟಿಸಲಿರುವ ಕೇಂದ್ರ ಸಚಿವರಾದ ಶ್ರೀ ಪ್ರತಾಪ್‌ರಾವ್ ಜಾಧವ್

ಪ್ರಕಟಣಾ ದಿನಾಂಕ: 09 APR 2026 11:39AM by PIB Bengaluru

ಆಯುಷ್ ಸಚಿವಾಲಯವು 2026ರ ಏಪ್ರಿಲ್ 10 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ 2026ರ ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಿದೆ. ಅದರ ಅಂಗವಾಗಿ ಎರಡು ದಿನಗಳ ಸಂವಾದಾತ್ಮಕ ವೇದಿಕೆಯನ್ನು ಸಹ ಆಯೋಜಿಸಲಾಗುತ್ತಿದೆ. ಸುಸ್ಥಿರ ಆರೋಗ್ಯ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಹೋಮಿಯೋಪತಿಯ ವಿಕಸನಗೊಳ್ಳುತ್ತಿರುವ ಪಾತ್ರದ ಕುರಿತು ಚರ್ಚಿಸಲು ಪ್ರಮುಖ ನೀತಿ ನಿರೂಪಕರು, ಸಂಶೋಧಕರು, ವೈದ್ಯರು ಮತ್ತು ಪ್ರತಿನಿಧಿಗಳನ್ನು ಒಗ್ಗೂಡಿಸಲು ಈ ಸಂವಾದಾತ್ಮಕ ವೇದಿಕೆ ಸಜ್ಜಾಗಿದೆ.

ಸುಸ್ಥಿರ ಆರೋಗ್ಯಕ್ಕಾಗಿ ಹೋಮಿಯೋಪತಿ’’ ಎಂಬ ವಿಷಯವನ್ನು ಕೇಂದ್ರೀಕರಿಸಿ ಈ ವರ್ಷದ ಆಚರಣೆಯು ಹೋಮಿಯೋಪತಿಯು ಆರೋಗ್ಯ ರಕ್ಷಣೆಗೆ ಸಮಗ್ರ, ಕಡಿಮೆ ವೆಚ್ಚದ ಪರಿಣಾಮಕಾರಿ ಮತ್ತು ಪರಿಸರ ಜವಾಬ್ದಾರಿಯುತ ವಿಧಾನವನ್ನು ಹೇಗೆ ನೀಡುತ್ತದೆ ಎಂಬುದನ್ನು ಪ್ರಮುಖವಾಗಿ ಬಿಂಬಿಸಲಾಗುವುದು- ಸಾರ್ವತ್ರಿಕ ಆರೋಗ್ಯ ವ್ಯಾಪ್ತಿ ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಂತಹ ವಿಶೇಷವಾಗಿ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಸುಸ್ಥಿರ ಅಭಿವೃದ್ಧಿ ಗುರಿ (ಎಸ್ ಡಿಜಿ 3) ಜಾಗತಿಕ ಆದ್ಯತೆಗಳಿಗೆ ಪೂರಕವಾಗಿ ಇದನ್ನು ಆಯೋಜಿಸಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಆಯುಷ್ ಸಚಿವಾಲಯದ ರಾಜ್ಯ ಸಚಿವರಾದ (ಸ್ವತಂತ್ರ ನಿರ್ವಹಣೆ) ಗೌರವಾನ್ವಿತ ಶ್ರೀ ಪ್ರತಾಪ್‌ರಾವ್ ಜಾಧವ್ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಹಾಗೂ ದೇಶಾದ್ಯಂತದ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಹೆಸರಾಂತ ತಜ್ಞರು ಭಾಗವಹಿಸಲಿದ್ದಾರೆ.

ಕೇಂದ್ರೀಯ ಹೋಮಿಯೋಪತಿ ಸಂಶೋಧನಾ ಮಂಡಳಿ (ಸಿ ಸಿ ಆರ್ ಎಚ್) ಆಯೋಜಿಸಿರುವ ಈ ಕಾರ್ಯಕ್ರಮವು ಹೋಮಿಯೋಪತಿ ಕ್ಷೇತ್ರದಲ್ಲಿನ ಪ್ರಮುಖ ಸಂಶೋಧನಾ ಪ್ರಗತಿಗಳು, ಸಾರ್ವಜನಿಕ ಆರೋಗ್ಯ ಉಪಕ್ರಮಗಳು ಮತ್ತು ನೀತಿ ಬೆಳವಣಿಗೆಗಳನ್ನು ಬಿಂಬಿಸುತ್ತದೆ. ವೈಜ್ಞಾನಿಕ ಪ್ರಮಾಣೀಕರಣ, ನೈತಿಕ ಮಾನದಂಡಗಳು ಮತ್ತು ಮುಖ್ಯವಾಹಿನಿಯ ಆರೋಗ್ಯ ವ್ಯವಸ್ಥೆಗಳಲ್ಲಿ ಹೋಮಿಯೋಪತಿಯನ್ನು ಸಂಯೋಜಿಸುವ ಕುರಿತ ಚರ್ಚೆಗಳನ್ನು ಸಹ ಇದು ಒಳಗೊಂಡಿರಲಿದೆ.

ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳು, ದೀರ್ಘಕಾಲದ ಕಾಯಿಲೆಗಳ ಹೆಚ್ಚುತ್ತಿರುವ ಹೊರೆ ಮತ್ತು ಆಂಟಿಮೈಕ್ರೊಬಿಯಲ್ ಪ್ರತಿರೋಧದಂತಹ ಹೆಚ್ಚುತ್ತಿರುವ ಆತಂಕಗಳ ಈ ಸಂದರ್ಭದಲ್ಲಿ ಕನಿಷ್ಠ ಪರಿಸರ ಹೆಜ್ಜೆಗುರುತು, ತರ್ಕಬದ್ಧ ಸಂಪನ್ಮೂಲ ಬಳಕೆ ಮತ್ತು ದೇಹದ ಸಹಜ ಗುಣಪಡಿಸುವ ಕಾರ್ಯವಿಧಾನಗಳನ್ನು ಉತ್ತೇಜಿಸುವತ್ತ ಗಮನಹರಿಸುವ ಮೂಲಕ ಸುಸ್ಥಿರ ವೈದ್ಯಕೀಯ ವ್ಯವಸ್ಥೆಯಾಗಿ ಹೋಮಿಯೋಪತಿಯ ಸಾಮರ್ಥ್ಯವನ್ನು ಈ ಕಾರ್ಯಕ್ರಮವು ಪ್ರಮುಖವಾಗಿ ಪ್ರತಿಪಾದಿಸುತ್ತದೆ.

ವಿಶೇಷ ಗೋಷ್ಠಿಗಳಲ್ಲಿ ಮುನ್ನೆಚ್ಚರಿಕೆ ಮತ್ತು ಉತ್ತೇಜಕ ಆರೋಗ್ಯ ರಕ್ಷಣೆ, ಜೀವನಶೈಲಿ ಮತ್ತು ದೀರ್ಘಕಾಲದ ಕಾಯಿಲೆಗಳ ನಿರ್ವಹಣೆ ಮತ್ತು ಸಾಂಪ್ರದಾಯಿಕ ಔಷಧ ಚಿಕಿತ್ಸೆಯ ಮೇಲಿನ ಅವಲಂಬನೆ ತಗ್ಗಿಸುವಲ್ಲಿ ಅದರ ಕೊಡುಗೆಯನ್ನು ಅನ್ವೇಷಿಸುತ್ತವೆ. ಪರಿಸರ ಸ್ನೇಹಿ ಔಷಧೀಯ ಪದ್ಧತಿಗಳು, ಜೀವವೈವಿಧ್ಯ ಸಂರಕ್ಷಣೆ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವೈಜ್ಞಾನಿಕ ಸಂಶೋಧನೆಯೊಂದಿಗೆ ಸಂಯೋಜಿಸುವ ಪ್ರಾಮುಖ್ಯತೆಯ ಬಗ್ಗೆಯೂ ಚರ್ಚೆಗಳು ಕೇಂದ್ರೀಕರಿಸುತ್ತವೆ.

ಹಲವು ವರ್ಷಗಳಿಂದೀಚೆಗೆ ಹೋಮಿಯೋಪತಿ ಭಾರತ ಮತ್ತು ಜಾಗತಿಕವಾಗಿ ವಿಶೇಷವಾಗಿ ಸಮುದಾಯ ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯ ಮಧ್ಯಸ್ಥಿಕೆಗಳಲ್ಲಿ ಬೆಳೆಯುತ್ತಿರುವ ಸ್ವೀಕಾರರರ್ಹತೆಗೆ ಸಾಕ್ಷಿಯಾಗಿದೆ. ಆಯುಷ್ ಸಚಿವಾಲಯವು ಸಾಕ್ಷ್ಯಾಧಾರಿತ ಪದ್ಧತಿಗಳು, ಲಭ್ಯತೆಯ ಸುಧಾರಣೆ ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಸಂಯೋಜನೆಯ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ವಿಶ್ವ ಹೋಮಿಯೋಪತಿ ದಿನ 2026 ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳನ್ನು ಉತ್ತೇಜಿಸುವಲ್ಲಿ ಭಾರತದ ನಾಯಕತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಸ್ಥಿತಿಸ್ಥಾಪಕ,  ಅಂತರ್ಗತ ಮತ್ತು ಸುಸ್ಥಿರ ಆರೋಗ್ಯ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಪ್ರಯತ್ನಗಳಿಗೆ ಹೊಸ ವೇಗವನ್ನು ನೀಡುತ್ತದೆಂದು ನಿರೀಕ್ಷಿಸಲಾಗಿದೆ.

ಈ ಕಾರ್ಯಕ್ರಮವು ಪಾಲುದಾರರಲ್ಲಿ ಸಂವಾದ, ಸಹಯೋಗ ಮತ್ತು ನಾವೀನ್ಯತೆಯನ್ನು ಬೆಳೆಸುವ ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಜತೆಗೆ  ಇದರಿಂದ ಆರೋಗ್ಯ ರಕ್ಷಣೆ ಪರಿಣಾಮಕಾರಿಯಾಗುವುದಲ್ಲದೆ, ಸಮಾನ, ಪರಿಸರ ಪ್ರಜ್ಞೆ ಮತ್ತು ಸುಸ್ಥಿರವಾಗಿರುವ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ.

 

*****


(ಪ್ರಕಟಣೆ ಐ.ಡಿ.: 2250420) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Manipuri , Bengali , Bengali-TR , Punjabi , Gujarati , Telugu