ಹಣಕಾಸು ಸಚಿವಾಲಯ
ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) — ಸಣ್ಣ ಮತ್ತು ಅತಿಸಣ್ಣ ಉದ್ಯಮಿಗಳ ಸಬಲೀಕರಣದ 11 ವರ್ಷಗಳನ್ನು ಪೂರ್ಣಗೊಳಿಸಿದೆ
ಪಿಎಂಎಂವೈ ಯೋಜನೆಯು ದೇಶದ ಎಂ ಎಸ್ ಎಂ ಇ ಗಳು ಮತ್ತು ಅಸಂಖ್ಯಾತ ವೈಯಕ್ತಿಕ ಉದ್ಯಮಿಗಳ ಸಾಲದ ವ್ಯವಸ್ಥೆಯನ್ನು ಮರುರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ: ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್
ಪಿಎಂಎಂವೈ ಸಣ್ಣ ಉದ್ಯಮಿಗಳಿಗೆ ಬ್ಯಾಂಕುಗಳು, ಎನ್ ಬಿ ಎಫ್ ಸಿ ಗಳು ಮತ್ತು ಎಂ ಎಫ್ ಐ ಗಳಿಂದ ಸಾಲದ ನೆರವು ಪಡೆಯಲು ವೇದಿಕೆ ಕಲ್ಪಿಸಿಕೊಡುವ ಮೂಲಕ ಸಾಲದ ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ: ಕೇಂದ್ರ ಹಣಕಾಸು ರಾಜ್ಯಖಾತೆ ಸಚಿವರಾದ ಶ್ರೀ ಪಂಕಜ್ ಚೌಧರಿ
ಮುದ್ರಾ ಯೋಜನೆಯು ಕಾರ್ಪೊರೇಟ್ ಯೇತರ ಮತ್ತು ಕೃಷಿಯೇತರ ಆದಾಯ ಉತ್ಪಾದನಾ ಚಟುವಟಿಕೆಗಳಿಗಾಗಿ 20 ಲಕ್ಷ ರೂಪಾಯಿಗಳವರೆಗೆ ಸುಲಭ ಮತ್ತು ಭದ್ರತೆ ರಹಿತ ಸಾಲ ಸೌಲಭ್ಯವನ್ನು ಒದಗಿಸುತ್ತದೆ
ಪಿಎಂಎಂವೈ ಅಡಿಯಲ್ಲಿ 57.79 ಕೋಟಿ ಸಾಲಗಳ ಮೂಲಕ 40.07 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ವಿತರಿಸಲಾಗಿದ್ದು, ಸಣ್ಣ ಮತ್ತು ಅತಿಸಣ್ಣ ಉದ್ಯಮಗಳ ಸಾಲದ ಪರಿಸರ ವ್ಯವಸ್ಥೆಯನ್ನು ಬಲಪಡಿಸಲಾಗಿದೆ
ಪ್ರಕಟಣಾ ದಿನಾಂಕ:
08 APR 2026 9:37AM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 8, 2015 ರಂದು ಚಾಲನೆ ನೀಡಿದ ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ), ಭಾರತದ ತಳಮಟ್ಟದ ಉದ್ಯಮಿಗಳನ್ನು ಬಲಪಡಿಸುವಲ್ಲಿ 11 ಯಶಸ್ವಿ ವರ್ಷಗಳನ್ನು ಪೂರೈಸುತ್ತಿದೆ. ಈ ಉಪಕ್ರಮವನ್ನು ಹಣಕಾಸಿನ ಲಭ್ಯತೆಯ ಅಂತರವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದ್ದು, ಕಾರ್ಪೊರೇಟ್ ಯೇತರ ಮತ್ತು ಕೃಷಿಯೇತರ ಆದಾಯ ಉತ್ಪಾದನಾ ಚಟುವಟಿಕೆಗಳಿಗಾಗಿ ಸಣ್ಣ ಪ್ರಮಾಣದ ವ್ಯಾಪಾರೋದ್ಯಮಗಳಿಗೆ 20 ಲಕ್ಷ ರೂಪಾಯಿಗಳವರೆಗೆ ಸರಳವಾದ, ಸುಲಭವಾದ ಮತ್ತು ಭದ್ರತೆ ರಹಿತ ಸಾಲಗಳನ್ನು ನೀಡುತ್ತದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂ ಎಸ್ ಎಂ ಇ) ಕೈಗಾರಿಕಾ ಪರಿಸರ ವ್ಯವಸ್ಥೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತವೆ. ಇವು ಪ್ರಮುಖ ಕಾರ್ಪೊರೇಷನ್ ಗಳಿಗೆ ಅಗತ್ಯ ಪಾಲುದಾರರಾಗಿ ಮತ್ತು ಸಮತೋಲಿತ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತವೆ. ಹೊಸ ಕೈಗಾರಿಕೆಗಳಲ್ಲಿ ತಮ್ಮ ವ್ಯಾಪ್ತಿಯನ್ನು ವೈವಿಧ್ಯಗೊಳಿಸುವ ಮೂಲಕ ಮತ್ತು ತಮ್ಮ ಉತ್ಪಾದನೆಯನ್ನು ಸುಧಾರಿಸುವ ಮೂಲಕ, ಈ ಉದ್ಯಮಗಳು ಸ್ಥಳೀಯ ಗ್ರಾಹಕರು ಮತ್ತು ಜಾಗತಿಕ ಮಾರುಕಟ್ಟೆಗಳ ಅಗತ್ಯತೆಗಳನ್ನು ಪರಿಣಾಮಕಾರಿಯಾಗಿ ಪೂರೈಸುತ್ತಿವೆ.
ವ್ಯಾಪಾರ ಹಣಕಾಸಿನ ಚಿತ್ರಣವು ವೇಗವಾಗಿ ವಿಕಸನಗೊಂಡಿದೆ. ಡಿಜಿಟಲ್ ಆವಿಷ್ಕಾರಗಳು ಮತ್ತು ಡೇಟಾ ಅನಾಲಿಟಿಕ್ಸ್ ಸಣ್ಣ ಸಂಸ್ಥೆಗಳಿಗೆ ಬಂಡವಾಳ ಪಡೆಯುವುದನ್ನು ಸುಲಭಗೊಳಿಸಿವೆ. ಈ ಪ್ರಗತಿಯ ಮೂಲಾಧಾರವೆಂದರೆ ಪಿಎಂಎಂವೈ. "ಬಂಡವಾಳ ರಹಿತರಿಗೆ ಬಂಡವಾಳ ಒದಗಿಸುವುದು" ಎಂಬ ಉದ್ದೇಶದೊಂದಿಗೆ ಪ್ರಾರಂಭವಾದ ಈ ಕಾರ್ಯತಂತ್ರದ ಸರ್ಕಾರಿ ಉಪಕ್ರಮವು, ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಯಿಂದ ಇದುವರೆಗೆ ನಿರ್ಲಕ್ಷಿಸಲ್ಪಟ್ಟವರಿಗೆ ಸಾಲ ತಲುಪುವುದನ್ನು ಖಚಿತಪಡಿಸಿದೆ.
ಪಿಎಂಎಂವೈ ಯ 11ನೇ ಯಶಸ್ವಿ ವರ್ಷದ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, “ಕಳೆದ ದಶಕದಲ್ಲಿ, ಕೋಟ್ಯಂತರ ಸಾಮಾನ್ಯ ನಾಗರಿಕರು ಹೊಸ ಆತ್ಮವಿಶ್ವಾಸದೊಂದಿಗೆ ಉದ್ಯಮಶೀಲತೆಯೆಡೆಗೆ ಹೆಜ್ಜೆ ಹಾಕಿದ ಒಂದು ಮೌನ ಕ್ರಾಂತಿಗೆ ಭಾರತ ಸಾಕ್ಷಿಯಾಗಿದೆ. ಇದರ ಕೇಂದ್ರಬಿಂದು ಪ್ರಧಾನ ಮಂತ್ರಿಯವರು ಏಪ್ರಿಲ್ 08, 2015 ರಂದು ಪ್ರಾರಂಭಿಸಿದ ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಆಗಿದೆ. ಇದು ವಿನ್ಯಾಸವೇ 'ಬಂಡವಾಳ ರಹಿತರಿಗೆ ಬಂಡವಾಳ ಒದಗಿಸುವುದರ' ಮೇಲೆ ಗಮನ ಕೇಂದ್ರೀಕರಿಸಿದೆ” ಎಂದು ಹೇಳಿದರು.
“ಹನ್ನೊಂದು ವರ್ಷಗಳ ನಂತರ, ಈ ಯೋಜನೆಯು ದೇಶದ ಎಂ ಎಸ್ ಎಂ ಇ ಗಳು ಮತ್ತು ಅಸಂಖ್ಯಾತ ವೈಯಕ್ತಿಕ ಉದ್ಯಮಿಗಳ ಸಾಲದ ಚಿತ್ರಣವನ್ನು ಮರುರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇವರು ಈ ಹಿಂದೆ ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿದ್ದ ಉದ್ಯಮಿಗಳಾಗಿದ್ದರು. ಈ ಉಪಕ್ರಮದ ಮೂಲಕ, ಸಾಲ ಪಡೆಯಲು ಇದ್ದ ಅಡೆತಡೆಗಳನ್ನು ತೆಗೆದುಹಾಕಿ ಉದ್ಯಮಶೀಲತೆಯನ್ನು ನಿಜವಾಗಿಯೂ ಪ್ರಜಾಪ್ರಭುತ್ವೀಕರಣಗೊಳಿಸಲಾಗಿದೆ” ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಲಕ್ಷಾಂತರ ಜನರನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ಸರ್ವರನ್ನೂ ಒಳಗೊಳ್ಳುವ ಬೆಳವಣಿಗೆಯ ದೃಷ್ಟಿಕೋನವನ್ನು ಈಡೇರಿಸುವಲ್ಲಿ ಪಿಎಂಎಂವೈ ಪಾತ್ರವನ್ನು ಉಲ್ಲೇಖಿಸಿದ ಕೇಂದ್ರ ಹಣಕಾಸು ಸಚಿವರು, “ಒಟ್ಟಾರೆಯಾಗಿ, 57.79 ಕೋಟಿಗೂ ಹೆಚ್ಚು ಸಾಲಗಳನ್ನು ಮಂಜೂರು ಮಾಡಲಾಗಿದ್ದು, 40.07 ಲಕ್ಷ ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ. ಮಂಜೂರಾದ ಸಾಲಗಳಲ್ಲಿ ಮೂರನೇ ಎರಡರಷ್ಟು ಭಾಗ ಮಹಿಳಾ ಉದ್ಯಮಿಗಳಿಗೆ ನೀಡಲಾಗಿದೆ. ಒಟ್ಟು ಸಾಲಗಳಲ್ಲಿ ಸುಮಾರು ಐದನೇ ಒಂದು ಭಾಗದಷ್ಟು ಸಾಲವನ್ನು ಮೊದಲ ಬಾರಿಗೆ ಉದ್ಯಮ ಆರಂಭಿಸಿದವರಿಗೆ ನೀಡಲಾಗಿದೆ. ಇದರ ಒಟ್ಟು 12.15 ಕೋಟಿ ಸಾಲಗಳಾಗಿದ್ದು, 12 ಲಕ್ಷ ಕೋಟಿ ರೂಪಾಯಿಗಳನ್ನು ಹೊಸ ಉದ್ಯಮಿಗಳಿಗೆ ನೀಡಲಾಗಿದೆ” ಎಂದು ಹೇಳಿದರು.
ಈ ಯೋಜನೆಯನ್ನು ಸಾಮಾನ್ಯ ಜನರಿಗೆ ತಲುಪಿಸಿ, ಅದ್ಭುತ ಯಶಸ್ಸು ಸಾಧಿಸಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವರು ಬ್ಯಾಂಕುಗಳು, ವಿವಿಧ ಹಣಕಾಸು ಸಂಸ್ಥೆಗಳು ಮತ್ತು ಸಂಬಂಧಪಟ್ಟವರನ್ನು ಶ್ಲಾಘಿಸಿದರು.
“2047 ರ ವೇಳೆಗೆ ನಮ್ಮ ರಾಷ್ಟ್ರವು 'ವಿಕಸಿತ ಭಾರತ' ಆಗುವ ಪ್ರಯಾಣದಲ್ಲಿ ಉದ್ಯಮಿಗಳು ಸಕ್ರಿಯ ಪಾಲ್ಗೊಳ್ಳುವವರಾಗಲು ಪ್ರಧಾನಮಂತ್ರಿ ಮುದ್ರಾ ಯೋಜನೆಯು ಸಬಲೀಕರಣವನ್ನು ಮುಂದುವರಿಸುತ್ತದೆ” ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ರಾಜ್ಯಖಾತೆ ಸಚಿವರಾದ ಶ್ರೀ ಪಂಕಜ್ ಚೌಧರಿ ಮಾತನಾಡಿ, “ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಸೂಕ್ಷ್ಮ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಅತ್ಯಂತ ಗಮನಾರ್ಹ ಉಪಕ್ರಮಗಳಲ್ಲಿ ಒಂದಾಗಿದೆ. ಹಣಕಾಸಿನ ಒಳಗೊಳ್ಳುವಿಕೆಯು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ, ಏಕೆಂದರೆ ಇದು ಸರ್ವರನ್ನೂ ಒಳಗೊಳ್ಳುವ ಬೆಳವಣಿಗೆಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಿಎಂಎಂವೈ ಸಣ್ಣ ಉದ್ಯಮಿಗಳಿಗೆ ಬ್ಯಾಂಕುಗಳು, ಎನ್ ಬಿ ಎಫ್ ಸಿ ಗಳು ಮತ್ತು ಎಂ ಎಫ್ ಐ ಗಳಿಂದ ಸಾಲದ ನೆರವು ಪಡೆಯಲು ವೇದಿಕೆ ಕಲ್ಪಿಸಿಕೊಡುವ ಮೂಲಕ ಸಾಲದ ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ” ಎಂದರು.
“ಮುದ್ರಾ ಯೋಜನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 8, 2015 ರಂದು ಚಾಲನೆ ನೀಡಿದರು. ಯೋಜನೆಯನ್ನು ಪ್ರಾರಂಭಿಸುವಾಗ, ಭಾರತದ ಸಣ್ಣ ಉದ್ಯಮಿಗಳನ್ನು ಬೆಂಬಲಿಸುವುದು ಭಾರತದ ಆರ್ಥಿಕತೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದರು. ಈ ಯೋಜನೆಯು ಅಪಾರ ಸಂಖ್ಯೆಯ ಉದ್ಯಮಿಗಳಿಗೆ ನಿರ್ಣಾಯಕ ಹಣಕಾಸಿನ ನೆರವು ನೀಡಿದೆ, ಅವರ ವ್ಯಾಪಾರವನ್ನು ಸ್ಥಾಪಿಸಲು ಮತ್ತು ನಡೆಸಲು ಸಹಾಯ ಮಾಡಿದೆ ಮತ್ತು ಅವರಲ್ಲಿ ಆರ್ಥಿಕ ಭದ್ರತೆಯ ಭಾವನೆಯನ್ನು ಮೂಡಿಸಿದೆ” ಎಂದು ರಾಜ್ಯ ಖಾತೆ ಸಚಿವರು ಹೇಳಿದರು.
“ಇದು ದೇಶಾದ್ಯಂತ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ, ವಿಶೇಷವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳು (ಶೇ. 51 ಸಾಲದ ಫಲಾನುಭವಿಗಳು) ಮತ್ತು ಮಹಿಳೆಯರು (ಶೇ. 67 ಸಾಲದ ಫಲಾನುಭವಿಗಳು) ಸೇರಿದಂತೆ ಸಮಾಜದ ಹಿಂದುಳಿದ ವರ್ಗಗಳಿಗೆ ನೆರವಾಗಿದೆ” ಎಂದು ಅವರು ಹೇಳಿದರು.
ಮುದ್ರಾ ಯೋಜನೆಯ ಪ್ರಭಾವದ ಬಗ್ಗೆ ಒತ್ತಿಹೇಳಿದ ಅವರು, “ಮುದ್ರಾ ಯೋಜನೆಯ ಪ್ರಮುಖ ಉದ್ದೇಶವೇ 'ಬಂಡವಾಳ ರಹಿತರಿಗೆ ಬಂಡವಾಳ ಒದಗಿಸುವುದು'. ಈ ಯೋಜನೆಯು ಭಾರತದ ಸಣ್ಣ ಉದ್ಯಮಿಗಳನ್ನು ಅನೌಪಚಾರಿಕ ಲೇವಾದೇವಿದಾರರಿಂದ ಆಗುತ್ತಿದ್ದ ಶೋಷಣೆಯಿಂದ ಯಶಸ್ವಿಯಾಗಿ ಮುಕ್ತಗೊಳಿಸಿದೆ. ಕಳೆದ 11 ವರ್ಷಗಳಲ್ಲಿ, ಇದು 57.7 ಕೋಟಿ ಸಾಲಗಳ ಮೂಲಕ 40 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಒದಗಿಸಿದ್ದು, ಸಾಲಗಾರರಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿದೆ. ಇದು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯ ಮೂಲಕ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.
ಮುದ್ರಾ ಯೋಜನೆಯ ಮೂಲ ತತ್ವಗಳ ಮೂಲಕ ಹಣಕಾಸಿನ ಒಳಗೊಳ್ಳುವಿಕೆಯನ್ನು ಮುನ್ನಡೆಸುತ್ತಿರುವ ಈ ಹನ್ನೊಂದು ವರ್ಷಗಳ ಸಂದರ್ಭದಲ್ಲಿ, ಯೋಜನೆಯ ಕೆಲವು ಪ್ರಾಥಮಿಕ ಗುಣಲಕ್ಷಣಗಳು ಮತ್ತು ಪ್ರಮುಖ ಮೈಲಿಗಲ್ಲುಗಳನ್ನು ಗಮನಿಸೋಣ:
ದೇಶದಲ್ಲಿ ಹಣಕಾಸಿನ ಒಳಗೊಳ್ಳುವಿಕೆ ಕಾರ್ಯಕ್ರಮದ ಅನುಷ್ಠಾನವು ಮೂರು ಸ್ತಂಭಗಳ ಮೇಲೆ ಆಧಾರಿತವಾಗಿದೆ, ಅವುಗಳೆಂದರೆ:
- ಬ್ಯಾಂಕಿಂಗ್ ಸೌಲಭ್ಯ ಇಲ್ಲದವರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುವುದು
- ಭದ್ರತೆ ಇಲ್ಲದವರಿಗೆ ಭದ್ರತೆ ಒದಗಿಸುವುದು ಮತ್ತು
- ಬಂಡವಾಳ ರಹಿತರಿಗೆ ಬಂಡವಾಳ ಒದಗಿಸುವುದು
ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಮತ್ತು ಬಹು-ಪಾಲುದಾರರ ಸಹಯೋಗದ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಈ ಮೂರು ಉದ್ದೇಶಗಳನ್ನು ಸಾಧಿಸಲಾಗುತ್ತಿದೆ
ಪಿಎಂಎಂವೈ ನ ಪ್ರಮುಖ ಲಕ್ಷಣಗಳು:
ಮುದ್ರಾ ಸಾಲಗಳನ್ನು ನಾಲ್ಕು ವಿಭಾಗಗಳಲ್ಲಿ ನೀಡಲಾಗುತ್ತಿದೆ, ಅವುಗಳೆಂದರೆ 'ಶಿಶು', 'ಕಿಶೋರ್', 'ತರುಣ್' ಮತ್ತು 'ತರುಣ್ ಪ್ಲಸ್' ಇದು ಸಾಲಗಾರರ ಬೆಳವಣಿಗೆ ಅಥವಾ ಅಭಿವೃದ್ಧಿಯ ಹಂತ ಮತ್ತು ಹಣಕಾಸಿನ ಅಗತ್ಯಗಳನ್ನು ಸೂಚಿಸುತ್ತದೆ:
- ಶಿಶು: 50,000 ರೂಪಾಯಿಗಳವರೆಗೆ ಸಾಲ.
- ಕಿಶೋರ್: 50,000 ರೂಪಾಯಿಗಳಿಗಿಂತ ಹೆಚ್ಚು ಮತ್ತು 5 ಲಕ್ಷ ರೂಪಾಯಿಗಳವರೆಗೆ ಸಾಲ.
- ತರುಣ್: 5 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಮತ್ತು 10 ಲಕ್ಷ ರೂಪಾಯಿಗಳವರೆಗೆ ಸಾಲ.
- ತರುಣ್ ಪ್ಲಸ್: 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಮತ್ತು 20 ಲಕ್ಷ ರೂಪಾಯಿಗಳವರೆಗೆ ಸಾಲ.
ಸಾಲಗಳು ಉತ್ಪಾದನೆ, ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿನ ಅವಧಿ ಸಾಲ ಮತ್ತು ದುಡಿಯುವ ಬಂಡವಾಳದ ಅಗತ್ಯಗಳನ್ನು ಒಳಗೊಂಡಿವೆ. ಇದು ಕೋಳಿ ಸಾಕಣೆ, ಡೈರಿ ಮತ್ತು ಜೇನು ಸಾಕಣೆಯಂತಹ ಕೃಷಿ ಪೂರಕ ಚಟುವಟಿಕೆಗಳನ್ನೂ ಒಳಗೊಂಡಿದೆ. ಬಡ್ಡಿ ದರವನ್ನು ಆರ್ ಬಿ ಐ ಮಾರ್ಗಸೂಚಿಗಳ ಮೂಲಕ ನಿರ್ಧರಿಸಲಾಗುತ್ತದೆ ಮತ್ತು ಮರುಪಾವತಿ ನಿಯಮಗಳು ಸುಲಭವಾಗಿರುತ್ತವೆ.
27.03.2026 ರವರೆಗಿನ ಪ್ರಧಾನಮಂತ್ರಿ ಮುದ್ರಾ ಯೋಜನೆಯ (ಪಿಎಂಎಂವೈ) ಸಾಧನೆಗಳು:
- ಮಹಿಳಾ ಸಾಲಗಾರರು: ಶಿಶು ವರ್ಗದ ಅಡಿಯಲ್ಲಿ ಒಟ್ಟು 9.02 ಲಕ್ಷ ಕೋಟಿ ರೂ., ಕಿಶೋರ್ ಅಡಿಯಲ್ಲಿ 6.22 ಲಕ್ಷ ಕೋಟಿ ರೂ. ಮತ್ತು ತರುಣ್ ವರ್ಗದ ಅಡಿಯಲ್ಲಿ 1.09 ಲಕ್ಷ ಕೋಟಿ ರೂ. ವಿತರಿಸಲಾಗಿದೆ.

- ಅಲ್ಪಸಂಖ್ಯಾತ ಸಾಲಗಾರರು: ಶಿಶು ಅಡಿಯಲ್ಲಿ 1.33 ಲಕ್ಷ ಕೋಟಿ ರೂ., ಕಿಶೋರ್ ಅಡಿಯಲ್ಲಿ 1.54 ಲಕ್ಷ ಕೋಟಿ ರೂ. ಮತ್ತು ತರುಣ್ ಅಡಿಯಲ್ಲಿ 0.62 ಲಕ್ಷ ಕೋಟಿ ರೂ. ವಿತರಿಸಲಾಗಿದೆ.

ಹೊಸ ಉದ್ಯಮಿಗಳು/ಖಾತೆಗಳು:
- ಶಿಶು ವರ್ಗ: 2.47 ಲಕ್ಷ ಕೋಟಿ ರೂ. ಮಂಜೂರಾತಿ ಮತ್ತು 2.42 ಲಕ್ಷ ಕೋಟಿ ರೂ. ವಿತರಣೆಯೊಂದಿಗೆ 8.80 ಕೋಟಿ ಖಾತೆಗಳು.
- ಕಿಶೋರ್ ವರ್ಗ: 5.09 ಲಕ್ಷ ಕೋಟಿ ರೂ. ಮಂಜೂರಾತಿ ಮತ್ತು 4.87 ಲಕ್ಷ ಕೋಟಿ ರೂ. ವಿತರಣೆಯೊಂದಿಗೆ 2.79 ಕೋಟಿ ಖಾತೆಗಳು.
- ತರುಣ್ ವರ್ಗ: 4.82 ಲಕ್ಷ ಕೋಟಿ ರೂ. ಮಂಜೂರಾತಿ ಮತ್ತು 4.67 ಲಕ್ಷ ಕೋಟಿ ರೂ. ವಿತರಣೆಯೊಂದಿಗೆ 55 ಲಕ್ಷ ಖಾತೆಗಳು.

ವರ್ಗವಾರು ವಿವರಣೆ:-(ಸಾಲಗಳ ಸಂಖ್ಯೆ ಮತ್ತು ಮಂಜೂರಾದ ಮೊತ್ತ)
|
ವರ್ಗ
|
ಸಾಲಗಳ ಸಂಖ್ಯೆಯ ಶೇಕಡಾವಾರು
|
ಮಂಜೂರಾದ ಮೊತ್ತದ ಶೇಕಡಾವಾರು
|
|
ಶಿಶು
|
74%
|
32%
|
|
ಕಿಶೋರ್
|
24%
|
43%
|
|
ತರುಣ್
|
2%
|
25%
|
|
ತರುಣ್ ಪ್ಲಸ್
|
0.004%
|
0.095%
|
|
ಒಟ್ಟು
|
100%
|
100%
|

ವರ್ಷವಾರು ಮಂಜೂರಾದ ಮೊತ್ತದ ವಿವರ:
|
ಹಣಕಾಸು ವರ್ಷ
|
ಮಂಜೂರಾದ ಸಾಲಗಳ ಸಂಖ್ಯೆ (ಕೋಟಿಗಳಲ್ಲಿ)
|
ಮಂಜೂರಾದ ಮೊತ್ತ (ಲಕ್ಷ ಕೋಟಿ ರೂ.ಗಳಲ್ಲಿ)
|
|
2015-16
|
3.49
|
1.37
|
|
2016-17
|
3.97
|
1.80
|
|
2017-18
|
4.81
|
2.54
|
|
2018-19
|
5.98
|
3.22
|
|
2019-20
|
6.23
|
3.37
|
|
2020-21
|
5.07
|
3.22
|
|
2021-22
|
5.38
|
3.39
|
|
2022-23
|
6.24
|
4.56
|
|
2023-24
|
6.67
|
5.41
|
|
2024-25
|
5.47
|
5.53
|
|
2025-26 (27.03.2026 ರವರೆಗೆ)
|
4.49
|
5.65
|
|
ಒಟ್ಟು
|
57.79
|
40.07
|

ಪಿಎಂಎಂವೈ ಒಂದು ದಶಕವನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಭಾರತವು ಸಮಾಜದ ಹಿಂದುಳಿದವರನ್ನು ಔಪಚಾರಿಕ ಆರ್ಥಿಕತೆಗೆ ಸೇರಿಸುವ ತನ್ನ ಸಮರ್ಪಿತ ಉದ್ದೇಶವನ್ನು ಒತ್ತಿಹೇಳುತ್ತದೆ. "ಬ್ಯಾಂಕಿಂಗ್ ಸೌಲಭ್ಯ ಇಲ್ಲದವರಿಗೆ ಬ್ಯಾಂಕಿಂಗ್", "ಭದ್ರತೆ ಇಲ್ಲದವರಿಗೆ ಭದ್ರತೆ" ಮತ್ತು "ಬಂಡವಾಳ ರಹಿತರಿಗೆ ಬಂಡವಾಳ" ಎಂಬ ಮೂಲ ತತ್ವಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಸರ್ಕಾರವು ಹಣಕಾಸಿನ ಅಂತರವನ್ನು ನೀಗಿಸುವುದನ್ನು ಮತ್ತು ಉದ್ಯಮಿಗಳ ಆಕಾಂಕ್ಷೆಗಳನ್ನು ವಾಸ್ತವವನ್ನಾಗಿ ಮಾಡುವುದನ್ನು ಮುಂದುವರಿಸಿದೆ.
******
(ಪ್ರಕಟಣೆ ಐ.ಡಿ.: 2249937)
ವಿಸಿಟರ್ ಕೌಂಟರ್ : 23