ಆಯುಷ್
azadi ka amrit mahotsav

ಲೋನಾರ್‌ನಲ್ಲಿ ಯೋಗ ಮಹೋತ್ಸವ–2026 ಆಚರಣೆ ಮೂಲಕ ಐಡಿವೈ 2026ರ 75 ದಿನಗಳ ಕೌಂಟ್‌ಡೌನ್ ಆರಂಭಿಸಿದ ಆಯುಷ್ ಸಚಿವಾಲಯ


ಯೋಗ ಮಹೋತ್ಸವ–2026ರಲ್ಲಿ ಸಾಮೂಹಿಕ ತ್ರಿಕೋನಾಸನ ಅಭ್ಯಾಸದೊಂದಿಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸ್ಥಾಪನೆ

ಸಾಮೂಹಿಕ ತ್ರಿಕೋನಾಸನವು ಎಲ್ಲರ ಪಾಲ್ಗೊಳ್ಳುವಿಕೆ ಮತ್ತು ಸಮಾನ ಹಂಚಿಕೆಯ ಸ್ವಾಸ್ಥ್ಯದ ಮನೋಭಾವ ಪ್ರತಿಬಿಂಬಿಸುತ್ತದೆ: ಶ್ರೀ ಪ್ರತಾಪ್‌ರಾವ್ ಜಾಧವ್

ಯೋಗ ಮಹೋತ್ಸವ–2026 ಸಮಗ್ರ ಆರೋಗ್ಯದ ಕಡೆಗೆ ಜಾಗತಿಕ ಜಾಗೃತಿಯ ಸಂಕೇತ: ಶ್ರೀ ಜಾಧವ್

ಪ್ರಕಟಣಾ ದಿನಾಂಕ: 07 APR 2026 2:56PM by PIB Bengaluru

ಆಯುಷ್ ಸಚಿವಾಲಯದ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ (ಎಂ ಡಿ ಎನ್ ಐ ವೈ) ಇಂದು ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯ ಲೋನಾರ್‌ನ ಛತ್ರಪತಿ ಶ್ರೀ ಶಿವಾಜಿ ಮಹಾರಾಜ್ ಉದ್ಯಾನವನದಲ್ಲಿ ಯೋಗ ಮಹೋತ್ಸವ -2026 ಅನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಸಾಮೂಹಿಕ ತ್ರಿಕೋನಾಸನವನ್ನು ಪ್ರದರ್ಶಿಸುವ ಅತಿಹೆಚ್ಚಿನ ಜನರ ಸೇರಿದ್ದಕ್ಕಾಗಿ  ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ದಾಖಲಾಗುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ.

ಸಾಮಾನ್ಯ ಯೋಗ ಶಿಷ್ಟಾಚಾರ (ಸಿವೈಪಿ) ನಿರ್ವಹಿಸಲು ಸುಮಾರು 5,000 ಯೋಗಪಟ್ಟುಗಳು ಮುಂಜಾನೆ ಒಗ್ಗೂಡಿದ್ದರು, ಆ ಮೂಲಕ ಐತಿಹಾಸಿಕ ಪಟ್ಟಣವಾದ ಲೋನಾರ್ ಅನ್ನು ಸಾಮೂಹಿಕ ಸ್ವಾಸ್ಥ್ಯದ ಕ್ರಿಯಾಶೀಲ ಕೇಂದ್ರವಾಗಿ ಪರಿವರ್ತಿಸಿದರು. ದೊಡ್ಡ ಪ್ರಮಾಣದ ಜನರ ಪಾಲ್ಗೊಳ್ಳುವಿಕೆಯು ಏಕತೆ, ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಪ್ರಬಲ ಮಾಧ್ಯಮವಾಗಿ ಯೋಗದ ಬೆಳೆಯುತ್ತಿರುವ ಜಾಗತಿಕ ಸ್ವೀಕಾರವನ್ನು ಬಿಂಬಿಸಿತು.

ಕೇಂದ್ರ ಆಯುಷ್‌ ರಾಜ್ಯ ಖಾತೆ ಸಚಿವರಾದ (ಸ್ವತಂತ್ರ ಹೊಣೆಗಾರಿಕೆ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಗೌರವಾನ್ವಿತ ಕೇಂದ್ರ ಪ್ರತಾಪ್‌ರಾವ್ ಜಾಧವ್ ಈ ಕಾರ್ಯಕ್ರಮವನ್ನು “ಅಂತಾರಾಷ್ಟ್ರೀಯ ಯೋಗ ದಿನ (ಐಡಿವೈ) 2026 ರ 75 ದಿನಗಳ ಕ್ಷಣಗಣನೆಗೆ ಬಲವಾದ ಆರಂಭ’’ ಎಂದು ಬಣ್ಣಿಸಿದರು. ಭೌಗೋಳಿಕವಾಗಿ ಮಹತ್ವದ ಲೋನಾರ್ ಪ್ರದೇಶದಲ್ಲಿ ಆಚರಣೆಯನ್ನು ಆಯೋಜಿಸುವುದು ಸಮಗ್ರ ಆರೋಗ್ಯ ಮತ್ತು ಸಾಮರಸ್ಯದೆಡೆಗೆ ವಿಶಾಲವಾದ ಜಾಗತಿಕ ಜಾಗೃತಿಯನ್ನು ಸಂಕೇತವಾಗಿದೆ ಎಂದು ಅವರು ಉಲ್ಲೇಖಿಸಿದರು. ಯೋಗದ ಮಹತ್ವವನ್ನು ಒತ್ತಿ ಹೇಳಿದ ಅವರು, ಈ ಅಭ್ಯಾಸವು ದೈಹಿಕ ಆರೋಗ್ಯ, ಮಾನಸಿಕ ಸ್ವಾಸ್ಥ್ಯ ಮತ್ತು ಭಾವನಾತ್ಮಕ ಸಮತೋಲನವನ್ನು ವೃದ್ಧಿಸುತ್ತದೆ ಎಂದು ಹೇಳಿದರು.

ದಾಖಲೆ ನಿರ್ಮಿಸಿರುವ ತ್ರಿಕೋನಾಸನ ಪ್ರದರ್ಶನದ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ಜಾಧವ್ ಈ ಸಾಧನೆಯು ಯೋಗದಲ್ಲಿ ಅಂತರ್ಗತವಾಗಿರುವ ಸಾಮೂಹಿಕ ಪಾಲ್ಗೊಳ್ಳುವಿಕೆ ಮತ್ತು ಹಂಚಿಕೆಯ ಯೋಗಕ್ಷೇಮದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ಸಮಗ್ರ ಆರೋಗ್ಯವನ್ನು ಉತ್ತೇಜಿಸುವಲ್ಲಿ ಸಿರಿಧಾನ್ಯ, ರಾಗಿ, ತೆಂಗಿನ ಎಣ್ಣೆ ಮತ್ತು ಔಷಧೀಯ ಮಸಾಲೆಗಳಂತಹ ಸಾಂಪ್ರದಾಯಿಕ ಮತ್ತು ನೈಸರ್ಗಿಕ ಆಹಾರಗಳ ಪಾತ್ರವನ್ನು ಒತ್ತಿ ಹೇಳಿದ ಅವರು ಆಯುಷ್ ಆಹಾರದ ಮಹತ್ವವನ್ನು ಬಲವಾಗಿ ಪ್ರತಿಪಾದಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಮೊನಾಲಿಸಾ ದಾಸ್‌, ಯೋಗವು ಜಗತ್ತಿಗೆ ಭಾರತದ ಅತ್ಯಂತ ಅಮೂಲ್ಯ ಕೊಡುಗೆಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದರು. ಇದು ಮನಸ್ಸು, ದೇಹ ಮತ್ತು ಆತ್ಮದ ನಡುವೆ ಸಾಮರಸ್ಯವನ್ನು ಬೆಳೆಸುವ ಜೀವನ ವಿಧಾನವನ್ನು ಪ್ರತಿನಿಧಿಸುತ್ತದೆ ಎಂದು ಉಲ್ಲೇಖಿಸಿದರು.

ಈ ಕಾರ್ಯಕ್ರಮದಲ್ಲಿ ಎಂಡಿಎನ್ ಐವೈ ನಿರ್ದೇಶಕ ಪ್ರೊ. (ಡಾ.) ಕಾಶಿನಾಥ್ ಸಮಗಂಡಿ ನೇತೃತ್ವದ ಸಾಮಾನ್ಯ ಯೋಗ ಶಿಷ್ಟಾಚಾರದ ನೇರ ಪ್ರದರ್ಶನವಿತ್ತು. ಗೋಷ್ಠಿಯಲ್ಲಿ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನವನ್ನು ಒಳಗೊಂಡಿತ್ತು, ಇದು ಪಾಲ್ಗೊಂಡಿದ್ದವರೆಲ್ಲರಿಗೂ ಯೋಗದ ಸಮಗ್ರ ಪ್ರಯೋಜನಗಳನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ.

ಯೋಗ ಮಹೋತ್ಸವ–2026 ಗಾಗಿ ಕೈಗೊಂಡಿರುವ ಹಲವಾರು ಪ್ರಮುಖ ಉಪಕ್ರಮಗಳನ್ನು ಆಯುಷ್ ಸಚಿವಾಲಯ ಪ್ರದರ್ಶಿಸಿತು, ಅವುಗಳಲ್ಲಿ “ವಿಮಾನ ಪ್ರಯಾಣಕ್ಕಾಗಿ ಯೋಗ’’ ಶಿಷ್ಟಾಚಾರ, “ಸಾಂಕ್ರಾಮಿಕವಲ್ಲದ ರೋಗಗಳಿಗೆ 10 ಯೋಗ ಶಿಷ್ಟಾಚಾರಗಳು’’ ಮತ್ತು ದೈನಂದಿನ ಜೀವನದಲ್ಲಿ ಯೋಗವನ್ನು ಸಂಯೋಜಿಸುವ ಗುರಿಯನ್ನು ಹೊಂದಿರುವ ಯೋಗ 365 ಅಭಿಯಾನ ಸೇರಿವೆ. 14 ದಿನಗಳ ಉಚಿತ ಮಾರ್ಗದರ್ಶಿ ಯೋಗಾಭ್ಯಾಸವನ್ನು ನೀಡುವ ಟೋಲ್-ಫ್ರೀ ಸಹಾಯವಾಣಿ (1800-315-7008) ಅನ್ನು ಸಹ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು.

ಈ ಕಾರ್ಯಕ್ರಮವು 12ನೇ ಅಂತಾರಾಷ್ಟ್ರೀಯ ಯೋಗ ದಿನ (ಐಡಿವೈ) 2026ಕ್ಕೆ 75 ದಿನಗಳ ಕೌಂಟ್‌ಡೌನ್‌ನ ಅಧಿಕೃತ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಆಯುಷ್ ಸಚಿವಾಲಯದ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತದ ಪ್ರತಿನಿಧಿಗಳು ಮತ್ತು ಇತರ ಗಣ್ಯ ಅತಿಥಿಗಳು ಭಾಗವಹಿಸಿದ್ದರು.

ಕಳೆದ ಹನ್ನೊಂದು ಆವೃತ್ತಿಗಳಲ್ಲಿ, ಅಂತಾರಾಷ್ಟ್ರೀಯ ಯೋಗ ದಿನವು ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಅತಿದೊಡ್ಡ ಜಾಗತಿಕ ಚಳವಳಿಗಳಲ್ಲಿ ಒಂದಾಗಿ ಹೊರಹೊಮ್ಮಿದ್ದು, ಪ್ರತಿ ವರ್ಷವೂ ಅಂತಾರಾಷ್ಟ್ರೀಯ ಪಾಲ್ಗೊಳ್ಳುವಿಕೆ ಹೆಚ್ಚುತ್ತಲೇ ಇದೆ. ಮುಂಬರುವ 12ನೇ ಆವೃತ್ತಿಯು ಸಾಂಕ್ರಾಮಿಕವಲ್ಲದ ರೋಗಗಳನ್ನು ಪರಿಹರಿಸುವುದು, ವೃದ್ಧರ ಆರೋಗ್ಯವನ್ನು ಉತ್ತೇಜಿಸುವುದು ಮತ್ತು ಯೋಗದೊಂದಿಗೆ ಕೃತಕ ಬುದ್ಧಿಮತ್ತೆ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳನ್ನು ಸಂಯೋಜಿಸುವುದನ್ನು ಅನ್ವೇಷಿಸುವುದರ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತದೆ.

2026ರ ಐಡಿವೈಗೆ ಮುಂಚಿತವಾಗಿ ದೇಶಾದ್ಯಂತ ಮತ್ತು ಜಾಗತಿಕವಾಗಿ ವ್ಯಾಪಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲಾಗುತ್ತಿದ್ದು, ಜನ ಭಾಗೀದಾರಿ ಮೂಲಕ ಯೋಗವನ್ನು ಸಾಮೂಹಿಕ ಚಳವಳಿಯಾಗಿ ಉತ್ತೇಜಿಸುವ ತನ್ನ ಬದ್ಧತೆಯನ್ನು ಆಯುಷ್ ಸಚಿವಾಲಯ ಪುನರುಚ್ಚರಿಸಿದೆ.

 

*****


(ಪ್ರಕಟಣೆ ಐ.ಡಿ.: 2249700) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Manipuri , Bengali , Gujarati , Odia , Telugu