ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಜನಗಣತಿ 2027: ಮನೆಪಟ್ಟಿ ಮತ್ತು ವಸತಿ ಗಣತಿಯೊಂದಿಗೆ ವಿಶ್ವದ ಅತಿದೊಡ್ಡ ಜನಗಣತಿ ಪ್ರಕ್ರಿಯೆ ಆರಂಭ


ಮೊಟ್ಟಮೊದಲ ಬಾರಿಗೆ ಡಿಜಿಟಲ್ ದತ್ತಾಂಶ ಸಂಗ್ರಹಣೆ ಮತ್ತು ಸ್ವಯಂ-ಗಣತಿ ಸೌಲಭ್ಯದೊಂದಿಗೆ ಜನಗಣತಿ 2027ರ ರಾಷ್ಟ್ರೀಯ ಚಾಲನೆ ಆರಂಭ

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸ್ವಯಂ-ಗಣತಿ ಪೂರ್ಣಗೊಳಿಸಿದ ದೇಶದ ಮೊದಲ ವ್ಯಕ್ತಿಯಾದರು

ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದಲೂ ಆನ್‌ಲೈನ್ ಮೂಲಕ ಸ್ವಯಂ-ಗಣತಿ

ತಮ್ಮ ಮನೆಯ ವಿವರಗಳನ್ನು ತಾವೇ ಸ್ವಯಂ-ಗಣತಿ ಮಾಡುವ ಮೂಲಕ ಜನಗಣತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಭಾರತದ ಜನತೆಗೆ ಪ್ರಧಾನ ಮಂತ್ರಿ ಕರೆ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗೋವಾ, ಕರ್ನಾಟಕ, ಲಕ್ಷದ್ವೀಪ, ಮಿಜೋರಾಂ, ಒಡಿಶಾ, ಸಿಕ್ಕಿಂ, ಎನ್.ಡಿ.ಎಂ.ಸಿ ಮತ್ತು ದೆಹಲಿಯ ಕಂಟೋನ್ಮೆಂಟ್ ಬೋರ್ಡ್ ಪ್ರದೇಶಗಳಲ್ಲಿ ಸ್ವಯಂ-ಗಣತಿ ಪ್ರಾರಂಭ

ಮೊದಲ ದಿನವೇ ಈ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸುಮಾರು 55,000 ಕುಟುಂಬಗಳಿಂದ ಸ್ವಯಂ-ಗಣತಿ ಸೌಲಭ್ಯದ ಸದುಪಯೋಗ

ಜನಗಣತಿ ಕಾಯ್ದೆ 1948 ರ ಅಡಿಯಲ್ಲಿ ಸಂಗ್ರಹಿಸಲಾದ ಮಾಹಿತಿಯು ಅತ್ಯಂತ ಗೌಪ್ಯವಾಗಿರುತ್ತದೆ

ಜನಗಣತಿಯು ಮುಂದಿನ ದಶಕದ ಭಾರತದ ಅಭಿವೃದ್ಧಿ ಯೋಜನೆಗೆ ಭದ್ರ ಬುನಾದಿ ಒದಗಿಸುವ ಆಡಳಿತದ ಪ್ರಮುಖ ಸಾಧನವಾಗುತ್ತದೆ

ಪ್ರಕಟಣಾ ದಿನಾಂಕ: 01 APR 2026 8:45PM by PIB Bengaluru

ವಿಶ್ವದ ಅತಿದೊಡ್ಡ ಜನಗಣತಿ ಪ್ರಕ್ರಿಯೆಯಾದ 'ಜನಗಣತಿ 2027' ಆರಂಭವಾಗಿದೆ. ಭಾರತ ಸರ್ಕಾರವು ಜನಗಣತಿ 2027ರ ಮೊದಲ ಹಂತವಾದ – ಮನೆಪಟ್ಟಿ ಮತ್ತು ವಸತಿ ಗಣತಿಯನ್ನು (ಎಚ್‌ ಎಲ್‌ ಒ) ಇಂದಿನಿಂದ ಪ್ರಾರಂಭಿಸಿದೆ, ಇದು ದೇಶದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಾಂಖ್ಯಿಕ ಕಾರ್ಯಾಚರಣೆಯ ಆರಂಭವನ್ನು ಸೂಚಿಸುತ್ತದೆ. ಇದು ಭಾರತದ ಮೊಟ್ಟಮೊದಲ ಡಿಜಿಟಲ್ ದತ್ತಾಂಶ ಸಂಗ್ರಹಣೆ ಮತ್ತು ಸ್ವಯಂ-ಗಣತಿಯಾಗಿದೆ.

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಸ್ವಯಂ ಗಣತಿ ಆಯ್ಕೆಯ ಮೂಲಕ ರಾಷ್ಟ್ರೀಯ ಗಣತಿ ಕಾರ್ಯವನ್ನು ಪ್ರಾರಂಭಿಸಲಾಯಿತು, ಇದು ಭಾರತದ ಪ್ರಥಮ ಪ್ರಜೆಯೊಂದಿಗೆ ರಾಷ್ಟ್ರೀಯ ಗಣತಿಯನ್ನು ಪ್ರಾರಂಭಿಸುವ ಹೆಮ್ಮೆಯ ಸಂಪ್ರದಾಯವನ್ನು ಎತ್ತಿ ಹಿಡಿಯಿತು.

ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಉಪರಾಷ್ಟ್ರಪತಿ ಭವನದಲ್ಲಿ ಜನಗಣತಿ 2027ಕ್ಕಾಗಿ ಆನ್‌ಲೈನ್ ಮೂಲಕ ಸ್ವಯಂ-ಗಣತಿ ನಮೂನೆಯನ್ನು ಭರ್ತಿ ಮಾಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸ್ವಯಂ-ಗಣತಿಯನ್ನು ಪೂರ್ಣಗೊಳಿಸಿದರು. ಭಾರತದ ಜನತೆ ತಮ್ಮ ಮನೆಯ ವಿವರಗಳನ್ನು ತಾವೇ ಸ್ವಯಂ-ಗಣತಿ ಮಾಡಿಕೊಳ್ಳುವ ಮೂಲಕ ಜನಗಣತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಧಾನ ಮಂತ್ರಿಯವರು ಮನವಿ ಮಾಡಿದರು.

 

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕೂಡ ಸ್ವಯಂ-ಗಣತಿ ಪೋರ್ಟಲ್ ಮೂಲಕ ತಮ್ಮ ಗಣತಿಯನ್ನು ಪೂರ್ಣಗೊಳಿಸಿದರು, ಈ ರಾಷ್ಟ್ರೀಯ ಕಾರ್ಯದಲ್ಲಿ ಜನರ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿಹೇಳಿದರು.

 

ಮೊದಲ ಹಂತದಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗೋವಾ, ಕರ್ನಾಟಕ, ಲಕ್ಷದ್ವೀಪ, ಮಿಜೋರಾಂ, ಒಡಿಶಾ, ಸಿಕ್ಕಿಂ, ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ ಡಿ ಎಂ ಸಿ) ಪ್ರದೇಶ ಮತ್ತು ರಾಷ್ಟ್ರ ರಾಜಧಾನಿಯ ದೆಹಲಿ ಕಂಟೋನ್ಮೆಂಟ್ ಬೋರ್ಡ್ ಸೇರಿದಂತೆ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದಿನಿಂದ ಸ್ವಯಂ-ಗಣತಿ ಪ್ರಕ್ರಿಯೆ ಆರಂಭವಾಗಿದೆ. ಮೊದಲ ದಿನವೇ ಈ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸುಮಾರು 55,000 ಕುಟುಂಬಗಳು ಸ್ವಯಂ-ಗಣತಿ ಸೌಲಭ್ಯವನ್ನು ಬಳಸಿಕೊಂಡಿವೆ. ಈ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆಪಟ್ಟಿ ಮತ್ತು ವಸತಿ ಗಣತಿಯು ಏಪ್ರಿಲ್ 16, 2026 ರಿಂದ ಆರಂಭವಾಗಿ ಮೇ 15, 2026 ರವರೆಗೆ ಮುಂದುವರಿಯಲಿದೆ.

ಸ್ವಯಂ-ಗಣತಿ ಪ್ರಕ್ರಿಯೆಯು 16 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುವ ಸುರಕ್ಷಿತ, ವೆಬ್-ಆಧಾರಿತ ಸೌಲಭ್ಯವಾಗಿದೆ. ಮೊದಲ ಬಾರಿಗೆ, ಪ್ರತಿಕ್ರಿಯೆ ನೀಡುವವರು ಗಣತಿದಾರರ ಭೇಟಿಗೆ ಮುಂಚಿತವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಆನ್‌ಲೈನ್‌ ನಲ್ಲಿ ವಿವರಗಳನ್ನು ಭರ್ತಿ ಮಾಡಬಹುದು. ಹಿಂದಿನ ಜನಗಣತಿಗಳಂತೆಯೇ ಗಣತಿದಾರರು ತಮಗೆ ನಿಗದಿಪಡಿಸಿದ ಎಲ್ಲಾ ಮನೆಪಟ್ಟಿ ಬ್ಲಾಕ್‌ ಗಳಲ್ಲಿ ಮನೆ-ಮನೆಗೆ ಭೇಟಿ ನೀಡಲಿದ್ದಾರೆ, ಆದರೆ ಸ್ವಯಂ-ಗಣತಿಯು ಹೆಚ್ಚುವರಿ ಸೌಲಭ್ಯವಾಗಿ ಕಾರ್ಯನಿರ್ವಹಿಸುತ್ತದೆ. ಸ್ವಯಂ-ಗಣತಿಯಲ್ಲಿ ಭಾಗವಹಿಸಲು, ಜನರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಮೂಲಭೂತ ವಿವರಗಳನ್ನು ಬಳಸಿ se.census.gov.in ಪೋರ್ಟಲ್‌ ಗೆ ಲಾಗಿನ್ ಮಾಡಬಹುದು. ಯಶಸ್ವಿಯಾಗಿ ಸಲ್ಲಿಕೆಯಾದ ನಂತರ, ವಿಶಿಷ್ಟವಾದ ಸ್ವಯಂ-ಗಣತಿ ಐಡಿ (ಎಸ್‌ ಇ ಐ ಡಿ) ಸೃಷ್ಟಿಯಾಗುತ್ತದೆ, ಇದನ್ನು ನಂತರದ ಮನೆ ಭೇಟಿಯ ಸಮಯದಲ್ಲಿ ದೃಢೀಕರಣಕ್ಕಾಗಿ ಗಣತಿದಾರರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ.

ಮನೆಪಟ್ಟಿ ಮತ್ತು ವಸತಿ ಗಣತಿ ಹಂತದಲ್ಲಿ, ವಸತಿ ಸ್ಥಿತಿಗತಿ, ಮನೆಯ ಸೌಕರ್ಯಗಳು ಮತ್ತು ಹೊಂದಿರುವ ಆಸ್ತಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಮೊದಲ ಹಂತಕ್ಕಾಗಿ ಒಟ್ಟು 33 ಪ್ರಶ್ನೆಗಳನ್ನು ಜನವರಿ 2026 ರಲ್ಲಿ ಅಧಿಸೂಚಿಸಲಾಗಿದೆ. ಇವು ಪುರಾವೆ ಆಧಾರಿತ ಯೋಜನೆ, ನೀತಿ ನಿರೂಪಣೆ ಮತ್ತು ಉದ್ದೇಶಿತ ಕಲ್ಯಾಣ ಮಧ್ಯಸ್ಥಿಕೆಗಳಿಗೆ ಭದ್ರ ಬುನಾದಿಯಾಗಿ ಕಾರ್ಯನಿರ್ವಹಿಸುತ್ತವೆ.

ಮನೆಪಟ್ಟಿ ಮತ್ತು ವಸತಿ ಗಣತಿ (ಎಚ್‌ ಎಲ್‌ ಒ) ಹಂತವನ್ನು ದೇಶಾದ್ಯಂತ ಏಪ್ರಿಲ್ 1 ಮತ್ತು ಸೆಪ್ಟೆಂಬರ್ 30, 2026 ರ ನಡುವೆ ನಡೆಸಲಾಗುವುದು. ಈ ಆರು ತಿಂಗಳ ಅವಧಿಯಲ್ಲಿ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ಆಯಾ ಸರ್ಕಾರಗಳು ಅಧಿಸೂಚಿಸಿದಂತೆ 30 ದಿನಗಳ ನಿರಂತರ ಕ್ಷೇತ್ರ ಕಾರ್ಯಾಚರಣೆಯನ್ನು ಕೈಗೊಳ್ಳಲಿವೆ. ಮೊದಲ ಬಾರಿಗೆ, ಮನೆ-ಮನೆ ಸಮೀಕ್ಷೆಯ ಮೊದಲು ಸ್ವಯಂ-ಗಣತಿಗಾಗಿ ಹೆಚ್ಚುವರಿ 15 ದಿನಗಳ ಕಾಲಾವಕಾಶವನ್ನು ನೀಡಲಾಗುತ್ತಿದೆ. ಈ ಸೌಲಭ್ಯವು ಜನರು ಗಣತಿದಾರರ ಭೇಟಿಗೆ ಮುಂಚಿತವಾಗಿಯೇ ತಮ್ಮ ಮನೆಗಳಿಂದ ಡಿಜಿಟಲ್ ರೂಪದಲ್ಲಿ ವಿವರಗಳನ್ನು ದಾಖಲಿಸಲು ಅನುವು ಮಾಡಿಕೊಡುತ್ತದೆ.

ಮುಂದಿನ ದಶಕದ ಭಾರತದ ಅಭಿವೃದ್ಧಿ ಯೋಜನೆಗೆ ಭದ್ರ ಬುನಾದಿ ಒದಗಿಸುವ ಮೂಲಕ ಜನಗಣತಿಯು ಆಡಳಿತದ ಪ್ರಮುಖ ಸಾಧನವಾಗಿ ಮುಂದುವರಿಯಲಿದೆ. ಜನಗಣತಿ ಕಾಯ್ದೆ, 1948 ರ ಅಡಿಯಲ್ಲಿ ಸಂಗ್ರಹಿಸಲಾದ ಮಾಹಿತಿಯು ಅತ್ಯಂತ ಗೌಪ್ಯವಾಗಿರುತ್ತದೆ. ಜನಗಣತಿ 2027 ಕ್ಕಾಗಿ ಬಳಸಲಾಗುವ ಡಿಜಿಟಲ್ ಸಾಧನಗಳು ದತ್ತಾಂಶ ಭದ್ರತೆಯ ಉನ್ನತ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ದೃಢವಾದ ಎನ್‌ಕ್ರಿಪ್ಶನ್ ಮತ್ತು ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್‌ ನೊಂದಿಗೆ ಸಜ್ಜುಗೊಂಡಿವೆ. ಜನರು ಸ್ವಯಂ-ಗಣತಿ ಮೂಲಕ ಅಥವಾ ಎಣಿಕೆದಾರರ ಭೇಟಿಯ ಸಮಯದಲ್ಲಿ ಪೂರ್ಣ ಸಹಕಾರ ನೀಡುವ ಮೂಲಕ ಜನಗಣತಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೋತ್ಸಾಹಿಸಲಾಗುತ್ತದೆ.

 

******

 


(ಪ್ರಕಟಣೆ ಐ.ಡಿ.: 2248080) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Marathi , हिन्दी , Gujarati , Odia