ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್‌ನ ಗಾಂಧಿನಗರದಲ್ಲಿ ಸಾಮ್ರಾಟ್ ಸಂಪ್ರತಿ ವಸ್ತುಸಂಗ್ರಹಾಲಯದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

ಪ್ರಕಟಣಾ ದಿನಾಂಕ: 31 MAR 2026 2:06PM by PIB Bengaluru

ಜೈ ಜಿನೇಂದ್ರ!

ಜೈ ಜಿನೇಂದ್ರ!

ಆಚಾರ್ಯ ಭಗವಂತ ಶ್ರೀ ಪದ್ಮಸಾಗರ ಸುರೀಶ್ವರ್ ಜೀ ಮಹಾರಾಜ್ ಸಾಹೇಬ್, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಜೀ, ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ, ರಾಜ್ಯದ ಉಪಮುಖ್ಯಮಂತ್ರಿ ಭಾಯಿ ಹರ್ಷ ಸಂಘವಿ ಜೀ, ಪರಮ ಪೂಜ್ಯ ಆಚಾರ್ಯ ಭಗವಂತ, ಪೂಜ್ಯ ಸಾಧು ಭಗವಂತ, ಸಾಧ್ವಿಜಿ ಭಗವಂತ, ಎಲ್ಲ ಆಚಾರ್ಯರು ಮತ್ತು ಮುನಿ ಭಗವಂತರು ಹಾಗು ಈ ಪವಿತ್ರ ಸಮಾರಂಭದಲ್ಲಿ ಹಾಜರಿರುವ  ಗೌರವಾನಿತ ದಾನಿಗಳು, ವಿದ್ವಾಂಸರು, ಮಹಿಳೆಯರೇ ಮತ್ತು ಮಹನೀಯರೇ!

ಇಂದು, ಭಗವಾನ್ ಮಹಾವೀರ ಜಯಂತಿಯ ಶುಭ ಹಬ್ಬದಲ್ಲಿ, ಈ ಪವಿತ್ರ ಜೈನ ಯಾತ್ರಾಸ್ಥಳಕ್ಕೆ ಬರುವ ಸೌಭಾಗ್ಯ ನನಗೆ ಸಿಕ್ಕಿದೆ. ಮೊದಲನೆಯದಾಗಿ ಭಗವಾನ್ ಮಹಾವೀರರ ಪಾದಗಳಿಗೆ ನಮಸ್ಕರಿಸುತ್ತೇನೆ. ಕೋಬಾ ತೀರ್ಥರಿಂದ, ನಾನು ಎಲ್ಲಾ ದೇಶವಾಸಿಗಳಿಗೆ ಭಗವಾನ್ ಮಹಾವೀರ ಜಯಂತಿಯ ಶುಭಾಶಯಗಳನ್ನು ಹಾರೈಸುತ್ತೇನೆ.

ಸ್ನೇಹಿತರೇ,

ಇಂದು, ನಾನು ಪರಮ ಪೂಜ್ಯ ಆಚಾರ್ಯ ಶ್ರೀ ಕೈಲಾಸ್ ಸಾಗರ್ ಸುರೀಶ್ವರ್ಜಿ ಮಹಾರಾಜ್ ಸಾಹೇಬ್ ಅವರನ್ನು ಸ್ಮರಿಸುತ್ತ ನಮಿಸುತ್ತೇನೆ. ಅವರ ಕನಸು ಕೋಬಾ ಭೂಮಿಯಲ್ಲಿ ಜ್ಞಾನ ಮತ್ತು ನಂಬಿಕೆಯ ಮಹಾನ್ ಕೇಂದ್ರವನ್ನು ಸ್ಥಾಪಿಸಿದೆ. ಕೋಬಾ ತೀರ್ಥದ ಸ್ಥಳವು ಆಧ್ಯಾತ್ಮಿಕ ಶಾಂತಿಯಿಂದ ತುಂಬಿದೆ. ಇದು ಶಕ್ತಿಯು ತುಂಬಾ ದೈವಿಕವಾಗಿರುವ ಸ್ಥಳ, ಇದರಲ್ಲಿ ಹಲವಾರು ಜೈನ ಮುನಿಗಳು ಮತ್ತು ಸಂತರ ತಪಸ್ಸು ಸಂಗಮಿಸಿದೆ, ಇಲ್ಲಿ ಸೃಷ್ಟಿ ಮತ್ತು ಸೇವೆ ಬೆಳೆಯುತ್ತಲೇ ಇರುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ. ಕೋಬಾ ತೀರ್ಥದಲ್ಲಿ ನಿರಂತರ ಅಧ್ಯಯನ, ಆಧ್ಯಾತ್ಮಿಕ ಅಭ್ಯಾಸ ಮತ್ತು ಸಂಯಮದ ಸಂಪ್ರದಾಯ ಹೇಗೆ ನಡೆಯುತ್ತಿದೆ ಎಂಬುದನ್ನು ನಾನು ವರ್ಷಗಳಿಂದ ನೋಡುತ್ತಿದ್ದೇನೆ. ಇಲ್ಲಿ ಮೌಲ್ಯಗಳನ್ನು ರಕ್ಷಿಸಲಾಗುತ್ತದೆ, ಸಾಂಸ್ಕೃತಿಕ ಮೌಲ್ಯಗಳು ಬಲಪಡೆಯುತ್ತವೆ ಮತ್ತು ಜ್ಞಾನವನ್ನು ಪೋಷಿಸಲಾಗುತ್ತದೆ. ಈ 'ತ್ರಿವೇಣಿ' (ಮೂರರ ಸಂಗಮ) ಭಾರತೀಯ ನಾಗರಿಕತೆಯ ಅಡಿಪಾಯವಾಗಿದೆ. ಈ ತ್ರಿವೇಣಿಯನ್ನು ಹರಿಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಸ್ನೇಹಿತರೇ,

ಸಾವಿರಾರು ವರ್ಷಗಳ ಭಾರತೀಯ ಪರಂಪರೆ, ಜೈನ ಧರ್ಮದ ಕಾಲವನ್ನು ಮೀರಿದ ಕಾಲಾತೀತ ಜ್ಞಾನ, ನಮ್ಮ ಸಂಪತ್ತು ಮತ್ತು ಅವುಗಳಿಂದ ಪಡೆದ ಸ್ಫೂರ್ತಿಗಳನ್ನು ಮುಂಬರುವ ಶತಮಾನಗಳವರೆಗೆ ಅಮರವಾಗಿಸಲು ಮತ್ತು ಹೊಸ ಹಾಗು ಆಧುನಿಕ ರೂಪದಲ್ಲಿ ಮುಂದಿನ ಪೀಳಿಗೆಗೆ ರವಾನಿಸಲು, ನಮ್ಮ ಸಂತರು ಜೈನ ಪರಂಪರೆಯ ವಸ್ತುಸಂಗ್ರಹಾಲಯವನ್ನು ರೂಪಿಸಿದ್ದಾರೆ ಎಂಬುದನ್ನು ಅರಿತು ನನಗೆ ಸಂತೋಷವಾಗಿದೆ. ಇಂದು, ಆ ಪರಿಕಲ್ಪನೆಯನ್ನು ಭವ್ಯ ರೂಪದಲ್ಲಿ ಸಾಕಾರಗೊಳಿಸಲಾಗುತ್ತಿದೆ. ಈ ಸಾಮ್ರಾಟ್ ಸಂಪ್ರತಿ ವಸ್ತುಸಂಗ್ರಹಾಲಯವು ಜೈನ ತತ್ವಶಾಸ್ತ್ರ, ಭಾರತೀಯ ಸಂಸ್ಕೃತಿ ಮತ್ತು ನಮ್ಮ ಪ್ರಾಚೀನ ಪರಂಪರೆಯ ಪವಿತ್ರ ಕೇಂದ್ರವಾಗಿದೆ. ಈ ವಿಶಿಷ್ಟ ಪ್ರಯತ್ನಕ್ಕಾಗಿ ನಮ್ಮ ಎಲ್ಲಾ ಜೈನ ಮುನಿಗಳು ಮತ್ತು ಸಂತರನ್ನು ನಾನು ಅಭಿನಂದಿಸುತ್ತೇನೆ. ನಾನು ಅವರ ಪಾದಗಳಿಗೆ ನಮಸ್ಕರಿಸುತ್ತೇನೆ. ಈ ಕೆಲಸಕ್ಕೆ ಅಪಾರ ಕೊಡುಗೆ ನೀಡಿದ ಸಾವಿರಾರು ಸಮರ್ಪಿತ ಜನರನ್ನು ನಾನು ಕೃತಜ್ಞತೆಯಿಂದ ಅಭಿನಂದಿಸುತ್ತೇನೆ.

ಸಹೋದರರೇ ಮತ್ತು ಸಹೋದರಿಯರೇ,

ನಾವು ಹೊಸ ಪೀಳಿಗೆಗೆ ಶಾಶ್ವತ ಜ್ಞಾನವನ್ನು ರವಾನಿಸಲು, ತಾಜಾತನವನ್ನು ತರಲು ನಾವೀನ್ಯತೆಯನ್ನು ತಂದಾಗ, ಅದರಿಂದ ನಮ್ಮ ಪರಂಪರೆಯೂ ಶ್ರೀಮಂತವಾಗುತ್ತದೆ ಮತ್ತು ಮುಂಬರುವ ನಾಳೆಯೂ ಸ್ಫೂರ್ತಿ ಪಡೆಯುತ್ತದೆ. ಸಾಮ್ರಾಟ್ ಸಂಪ್ರತಿ ವಸ್ತುಸಂಗ್ರಹಾಲಯವು ಭಾರತದ ಕೋಟ್ಯಂತರ ಜನರ ಪರಂಪರೆಯಾಗಿದೆ; ಇದು ಭಾರತದ ವೈಭವಯುತ ಭೂತಕಾಲದ ಪರಂಪರೆಯಾಗಿದೆ. ಇದಕ್ಕಾಗಿ, ನಾನು ಎಲ್ಲಾ ದೇಶವಾಸಿಗಳಿಗೆ ಅನೇಕ, ಅನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಸಾಮ್ರಾಟ್ ಸಂಪ್ರತಿ ಎಂಬುದು ಕೇವಲ ಐತಿಹಾಸಿಕ ರಾಜನ ಹೆಸರಲ್ಲ. ಸಾಮ್ರಾಟ್ ಸಂಪ್ರತಿ ಭಾರತದ ತತ್ವಶಾಸ್ತ್ರ ಮತ್ತು ಆಚರಣೆಯನ್ನು ಸಂಪರ್ಕಿಸುವ ಸೇತುವೆಯಾಗಿದೆ. ಏಕೆಂದರೆ, ನಾವು ಇತಿಹಾಸವನ್ನು ನೋಡಿದಾಗ, ಪ್ರಪಂಚದ ಅನೇಕ ನಾಗರಿಕತೆಗಳಲ್ಲಿ, ಮಹಾನ್ ಚಿಂತಕರು ಮತ್ತು ದಾರ್ಶನಿಕರು ಹುಟ್ಟಿಕೊಂಡಿರುವುದನ್ನು ನಾವು ನೋಡುತ್ತೇವೆ. ಮಾನವೀಯತೆಯ ಆದರ್ಶಗಳನ್ನು ಸಹ ವಿಭಿನ್ನ ವ್ಯಾಖ್ಯಾನಗಳಲ್ಲಿ ಕೆತ್ತಲಾಗಿದೆ. ಆದರೆ, ಅಧಿಕಾರ ಮತ್ತು ಅಧಿಕಾರಯುತತೆಯ ಪ್ರಶ್ನೆ ಬಂದಾಗ, ಅನೇಕ ಆಡಳಿತಗಾರರು ಆದರ್ಶಗಳು ಮತ್ತು ಮೌಲ್ಯಗಳನ್ನು ಬದಿಗಿಟ್ಟರು. ಇದರಿಂದಾಗಿ, ಚಿಂತನೆ ಮತ್ತು ಆಚರಣೆ, ಚಿಂತನೆ ಮತ್ತು ವ್ಯವಸ್ಥೆಯ ನಡುವೆ ಕಂದಕ ಸೃಷ್ಟಿಯಾಗುತ್ತಲೇ ಇತ್ತು. ಆದರೆ, ಭಾರತದಲ್ಲಿ, ಅಧಿಕಾರವನ್ನು ಸೇವೆ ಮತ್ತು ಆಧ್ಯಾತ್ಮಿಕ ಅನುಷ್ಠಾನ ಎಂದು ಪರಿಗಣಿಸಿ ಕೆಲಸ ಮಾಡಿದ ಸಾಮ್ರಾಟ್ ಸಂಪ್ರತಿಯಂತಹ ಆಡಳಿತಗಾರರು ಇದ್ದರು. ಒಂದು ಕಡೆ ಕೆಲವು ಆಡಳಿತಗಾರರು ಹಿಂಸೆಯನ್ನು ಆಯುಧವನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸುತ್ತಿದ್ದರೆ, ಮತ್ತೊಂದೆಡೆ, ಸಾಮ್ರಾಟ್ ಸಂಪ್ರತಿ ಸಿಂಹಾಸನದ ಮೇಲೆ ಕುಳಿತಾಗ ಅಹಿಂಸೆಯನ್ನು ವಿಸ್ತರಿಸಿದರು. ಅವರು ಸತ್ಯ, ಕಳ್ಳತನ ಮಾಡದಿರುವುದು ಮತ್ತು ಸ್ವಾಧೀನಪಡಿಸಿಕೊಳ್ಳದಿರುವುದನ್ನು/ಆಸೆಪಡದಿರುವುದನ್ನು ಉತ್ತೇಜಿಸಿದರು. ಅಂತಹ ನಿರ್ಲಿಪ್ತತೆಯೊಂದಿಗೆ, ನಿಸ್ವಾರ್ಥ ಭಾವನೆಯೊಂದಿಗೆ ಜೀವನವನ್ನು ನಡೆಸಲು, ಆಡಳಿತವನ್ನು ಸೇವೆಯ ಮಾಧ್ಯಮವೆಂದು ಪರಿಗಣಿಸಿದರು - ಈ ಪಾಠವನ್ನು ನಾವು ಭಾರತದ ಭೂತಕಾಲದಿಂದ ಮಾತ್ರ ಪಡೆಯುತ್ತೇವೆ. ನಾವು ವಸ್ತುಸಂಗ್ರಹಾಲಯದಲ್ಲಿ ಭೂತಕಾಲವನ್ನು ಸಂರಕ್ಷಿಸುತ್ತಿದ್ದೇವೆ.

ಸ್ನೇಹಿತರೇ,

ನಾನು ನೋಡುತ್ತಿದ್ದೆ, ಈ ವಸ್ತುಸಂಗ್ರಹಾಲಯವನ್ನು ಭವ್ಯ ಭಾರತದ ಗುರುತನ್ನು ಪ್ರತಿ ಹಂತದಲ್ಲೂ ಗೋಚರಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರ ಏಳು ಗ್ಯಾಲರಿಗಳು, ಪ್ರತಿ ಗ್ಯಾಲರಿಯು ಭಾರತದ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಸಮೃದ್ಧಿಯನ್ನು ಸಾರುತ್ತದೆ. ಮೊದಲ ಗ್ಯಾಲರಿಯಲ್ಲಿ, ನಾವು ನವಪಾದವನ್ನು ನೋಡುತ್ತೇವೆ. ನವಪಾದ ಎಂದರೆ, ಅರಿಹಂತ್, ಸಿದ್ಧ, ಆಚಾರ್ಯ, ಉಪಾಧ್ಯಾಯ ಮತ್ತು ಸಾಧು. ಸರಿಯಾದ ದೃಷ್ಟಿ, ಸರಿಯಾದ ಜ್ಞಾನ, ಸರಿಯಾದ ನಡವಳಿಕೆ ಮತ್ತು ಸರಿಯಾದ ತಪಸ್ಸು; ಅಂದರೆ, ತಪಸ್ಸು ಮಾಡುವ ಮೂಲಕ ಜೀವನವನ್ನು ತಿಳಿದವರಿಂದ ನಾವು ಕಲಿಯುತ್ತೇವೆ ಮತ್ತು ನಾವು ಪಡೆಯುವ ಜ್ಞಾನವು ಸರಿಯಾಗಿರಬೇಕು! ನಮ್ಮ ಗುಣ-ನಡತೆಯೂ ಸರಿಯಾಗಿರಬೇಕು! ಏಕೆಂದರೆ ಜ್ಞಾನವು ಸರಿಯಾಗಿದ್ದಾಗ, ಅದು ಸಮಚಿತ್ತತೆ ಮತ್ತು ಸೇವೆಯ ಅಡಿಪಾಯವಾಗುತ್ತದೆ.

ಸ್ನೇಹಿತರೇ,

ಮೂರನೇ ಗ್ಯಾಲರಿಯಲ್ಲಿ, ನಮ್ಮ ತೀರ್ಥಂಕರರ ಜೀವನ, ಅವರ ಬೋಧನೆಗಳು ಮತ್ತು ಪ್ರಸಂಗಗಳನ್ನು ಸಹ ಕಲಾತ್ಮಕ ರೀತಿಯಲ್ಲಿ ಅಳವಡಿಸಿ ಜೀವ ತುಂಬಲಾಗಿದೆ.

ಸಹೋದರರೇ ಮತ್ತು  ಸಹೋದರಿಯರೇ,

ವಸ್ತುಸಂಗ್ರಹಾಲಯದಲ್ಲಿ, ಭಾರತದ ಶ್ರೇಷ್ಠ ವಿಶೇಷತೆ, ಶ್ರೇಷ್ಠ ಶಕ್ತಿ ಗೋಚರಿಸುತ್ತದೆ. ನಾನು ಮೊದಲೇ ಹೇಳಿದಂತೆ, ನಮ್ಮ ಶಕ್ತಿ - ಭಾರತದ ವೈವಿಧ್ಯತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯಲ್ಲಿದೆ. ನಂಬಿಕೆ, ಧರ್ಮ ಮತ್ತು ಅನುಸರಣೆಯ ಹೆಸರಿನಲ್ಲಿ ಜಗತ್ತು ಸದಾ ಸಂಘರ್ಷವನ್ನು ಕಂಡಿದೆ, ಆದರೆ ವಸ್ತುಸಂಗ್ರಹಾಲಯದಲ್ಲಿ, ಭಾರತದ ಎಲ್ಲಾ ಇತರ ಧರ್ಮಗಳ ಅದ್ಭುತ ಪ್ರಾತಿನಿಧ್ಯವೂ ಇದೆ. ವೈದಿಕ ಮತ್ತು ಬೌದ್ಧ ಸಂಪ್ರದಾಯಗಳು, ವೇದಗಳು, ಪುರಾಣಗಳು, ಆಯುರ್ವೇದ, ಯೋಗ, ತತ್ವಶಾಸ್ತ್ರ - ವಿವಿಧ ಸಂಪ್ರದಾಯಗಳ ಎಲ್ಲಾ ಬಣ್ಣಗಳು ಕಾಮನಬಿಲ್ಲಿನಂತೆ ಒಟ್ಟಿಗೆ ಇರುವಂತೆ ಪ್ರಸ್ತುತಪಡಿಸಲಾಗಿದೆ, ಇದು ಭಾರತದಲ್ಲಿ ಮಾತ್ರ ಸಂಭವಿಸಬಹುದಾದಂತಹದ್ದು.

ಸ್ನೇಹಿತರೇ,

ಇಂದು ಜಗತ್ತಿನಲ್ಲಿ ಇರುವಂತಹ ಪರಿಸ್ಥಿತಿಯಲ್ಲಿ, ಅಸ್ಥಿರತೆ ಮತ್ತು ಅಶಾಂತಿಯ ಬೆಂಕಿಯಲ್ಲಿ ಜಗತ್ತು ಹೇಗೆ ಉರಿಯುತ್ತಿದೆಯೋ, ಈ ವಸ್ತುಸಂಗ್ರಹಾಲಯದ ಪರಂಪರೆ, ಅದರ ಸಂದೇಶವು ಭಾರತಕ್ಕೆ ಮಾತ್ರವಲ್ಲದೆ ಇಡೀ ಮಾನವಕುಲಕ್ಕೆ ಬಹಳ ಮುಖ್ಯವಾಗಿದೆ. ಪ್ರಪಂಚದಾದ್ಯಂತದ ದೇಶಗಳಿಂದ ಇಲ್ಲಿಗೆ ಬರುವ ಕುತೂಹಲಕಾರಿ ಜನರು, ವಿದ್ಯಾರ್ಥಿಗಳು ಮತ್ತು ಸಂಶೋಧಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಇರಬೇಕು. ಇಲ್ಲಿಗೆ ಬರುವ ಜನರು ಭಾರತ ಮತ್ತು ಜೈನ ಧರ್ಮದ ಬೋಧನೆಗಳನ್ನು ಪ್ರಪಂಚದ ಮೂಲೆ ಮೂಲೆಗೆ ಕೊಂಡೊಯ್ಯಬೇಕು.

ಸ್ನೇಹಿತರೇ,

ಭಾರತದಲ್ಲಿ, ಜ್ಞಾನವು ಸದಾ ಮುಕ್ತ ಹರಿವಿನಂತಿತ್ತು. ಪ್ರತಿ ಯುಗದಲ್ಲೂ, ತೀರ್ಥಂಕರರು ಮತ್ತು ಋಷಿ-ಚಿಂತಕರು ಹುಟ್ಟಿಕೊಂಡರು. ಜ್ಞಾನದ ಸಂಗ್ರಹವು ಹೆಚ್ಚುತ್ತಲೇ ಇತ್ತು, ಕಾಲಾನಂತರದಲ್ಲಿ ಹೊಸದನ್ನು ಸೇರಿಸಲಾಯಿತು. ಒಂದು ಕಾಲದಲ್ಲಿ ನಮ್ಮ ತಕ್ಷಶಿಲಾ ಮತ್ತು ನಳಂದದಂತಹ ವಿಶ್ವವಿದ್ಯಾಲಯಗಳು ಲಕ್ಷಾಂತರ ಪುಸ್ತಕಗಳು ಮತ್ತು ಹಸ್ತಪ್ರತಿಗಳಿಂದ ತುಂಬಿದ್ದವು ಎಂದರೆ ಊಹಿಸಿ ಅದರ ಅಗಾಧತೆಯನ್ನು. ಆದರೆ, ವಿದೇಶಿ ಆಕ್ರಮಣಕಾರರು, ಧಾರ್ಮಿಕ ಸಂಕುಚಿತ ಮನೋಭಾವದಿಂದ, ಜ್ಞಾನವನ್ನು ತಮ್ಮ ಶತ್ರು ಎಂದು ಪರಿಗಣಿಸಿ, ಅವುಗಳನ್ನು ಸುಟ್ಟುಹಾಕಿದರು; ಮಾನವೀಯತೆಯ ಅಂತಹ ಮಹಾನ್ ಪರಂಪರೆಗಳು ನಾಶವಾದವು. ಆ ಕಷ್ಟದ ಅವಧಿಯಲ್ಲಿ, ಜನರು ಉಳಿದ ಹಸ್ತಪ್ರತಿಗಳನ್ನು ಪೀಳಿಗೆಯಿಂದ ಪೀಳಿಗೆಗೆ ಕಾಪಿಟ್ಟರು ಮತ್ತು ರಕ್ಷಿಸಿದರು. ಸ್ವಾತಂತ್ರ್ಯದ ನಂತರ, ಅವುಗಳನ್ನು ಹುಡುಕುವುದು, ಅವುಗಳನ್ನು ಸಂರಕ್ಷಿಸುವುದು ದೇಶದ ಜವಾಬ್ದಾರಿಯಾಗಬೇಕಿತ್ತು, ಆದರೆ ದುರದೃಷ್ಟವಶಾತ್, ಗುಲಾಮ ಮನಸ್ಥಿತಿಯಿಂದಾಗಿ, ಇದಕ್ಕೆ ಯಾವುದೇ ಗಮನ ನೀಡಲಾಗದೇ ಅದು ಹಾಗೆಯೇ ಉಳಿಯಿತು. ಆಚಾರ್ಯ ಭಗವಂತ ಶ್ರೀ ಪದ್ಮಸಾಗರ್ ಸುರೀಶ್ವರ್ ಜೀ ಮಹಾರಾಜ್ ಸಾಹೇಬ್ ಅವರಂತಹ ಮಹಾನ್ ವ್ಯಕ್ತಿಗಳು ಮತ್ತು ಸಂತರು ಇದರ ಮಹತ್ವವನ್ನು ಅರ್ಥಮಾಡಿಕೊಂಡರು; ಅವರು ತಮ್ಮ ಇಡೀ ಜೀವನವನ್ನು ಇದಕ್ಕಾಗಿ ಮೀಸಲಿಟ್ಟರು. 60 ವರ್ಷಗಳ ಜೀವನದಲ್ಲಿ, ಹಳ್ಳಿಯಿಂದ ಹಳ್ಳಿಗೆ, ನಗರದಿಂದ ನಗರಕ್ಕೆ, ಅಲೆದು ದೇಶದ ಪ್ರತಿಯೊಂದು ಮೂಲೆಯಿಂದ, ಅವರು ಹಸ್ತಪ್ರತಿಗಳನ್ನು ಹುಡುಕಿ ತಂದರು. ತಾಳೆ ಗರಿಗಳು ಮತ್ತು ಬರ್ಚ್ ತೊಗಟೆಯ ಮೇಲೆ ನೂರಾರು ವರ್ಷಗಳಷ್ಟು ಹಳೆಯದಾದ ಜ್ಞಾನವನ್ನು ಕೆತ್ತಲಾದ ಮೂರು ಲಕ್ಷಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಇಂದು ಕೋಬಾದಲ್ಲಿ ಭದ್ರಪಡಿಸಿ ಸಂಕಲಿಸಲಾಗಿದೆ. ಇದು ಭಾರತದ ಭೂತ, ವರ್ತಮಾನ ಮತ್ತು ನಮ್ಮ ಭವಿಷ್ಯಕ್ಕೆ ಬಹಳ ದೊಡ್ಡ ಸೇವೆಯಾಗಿದೆ.

ಸ್ನೇಹಿತರೇ,

ಹಿಂದಿನ ಸರ್ಕಾರಗಳು ಹಸ್ತಪ್ರತಿಗಳನ್ನು ನಿರ್ಲಕ್ಷಿಸುವ ಮೂಲಕ ಮಾಡಿದ ತಪ್ಪನ್ನು ಇಂದು ನಾವು ಸರಿಪಡಿಸುತ್ತಿದ್ದೇವೆ. ಇದಕ್ಕಾಗಿ ನಾವು 'ಜ್ಞಾನ ಭಾರತಂ ಮಿಷನ್' ಪ್ರಾರಂಭಿಸಿದ್ದೇವೆ. ಈ ಕೆಲಸದಲ್ಲಿ, ನಾವು ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಈ ಮಿಷನ್ ಅಡಿಯಲ್ಲಿ, ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣವನ್ನು ಮಾಡಲಾಗುತ್ತಿದೆ ಮತ್ತು ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂರಕ್ಷಿಸಲಾಗುತ್ತಿದೆ. ಸ್ಕ್ಯಾನಿಂಗ್, ರಾಸಾಯನಿಕ ಚಿಕಿತ್ಸೆ ಮತ್ತು ಡಿಜಿಟಲ್ ಸಂಗ್ರಹಣೆಯಂತಹ ಎಲ್ಲಾ ಪ್ರಯತ್ನಗಳು ದಿಕ್ಕಿನಲ್ಲಿ ನಡೆಯುತ್ತಿವೆ. ಈ ಭಾನುವಾರ 'ಮನ್ ಕಿ ಬಾತ್' ನಲ್ಲಿ, ಈ ದಿಕ್ಕಿನಲ್ಲಿ ಸಮೀಕ್ಷೆಯನ್ನು ಹೇಗೆ ಪ್ರಾರಂಭಿಸಲಾಗಿದೆ ಎಂಬುದನ್ನು ನಾನು ವಿವರವಾಗಿ ಉಲ್ಲೇಖಿಸಿದ್ದೇನೆ. ಇದರಲ್ಲಿ, ದೇಶಾದ್ಯಂತ ಜನರು ತಮ್ಮೊಂದಿಗೆ ಸಂರಕ್ಷಿಸಲ್ಪಟ್ಟ ಹಸ್ತಪ್ರತಿಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ದೇಶದ ಮೂಲೆ ಮೂಲೆಗಳಲ್ಲಿ ಹರಡಿರುವ ಹಸ್ತಪ್ರತಿಗಳನ್ನು ಸಂಗ್ರಹಿಸುವಲ್ಲಿ ಅಭಿಯಾನವು ದೊಡ್ಡ ಪಾತ್ರವನ್ನು ವಹಿಸುತ್ತದೆ.

ಸ್ನೇಹಿತರೇ,

ಸರ್ಕಾರಿ ಮಟ್ಟದಲ್ಲಿ 'ಜ್ಞಾನ ಭಾರತಂ ಮಿಷನ್' ಮತ್ತು ಕೋಬತೀರ್ಥದ ಅಸಾಧಾರಣ ಕೊಡುಗೆ, ಸಮಾಜ ಮತ್ತು ಸರ್ಕಾರದ ಹಂಚಿಕೆಯ ಪ್ರಯತ್ನಗಳಾಗಿದ್ದು ಭಾರತದ ಹೊಸ ಸಾಂಸ್ಕೃತಿಕ ಪುನರುತ್ಥಾನದ ಸಂಕೇತವಾಗಿದೆ.

ಸ್ನೇಹಿತರೇ,

ಇಂದು, ದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಅದನ್ನು ಪ್ರಪಂಚದ ಮುಂದೆ ತರುವ ಪ್ರಯತ್ನಗಳು ಪ್ರತಿಯೊಂದು ಹಂತದಲ್ಲೂ ನಡೆಯುತ್ತಿವೆ. ಹಸ್ತಪ್ರತಿಗಳು ಮತ್ತು ಜ್ಞಾನ ಪರಂಪರೆಯನ್ನು ಸಂರಕ್ಷಿಸುವ ಕೆಲಸ ನಡೆಯುತ್ತಿರುವಾಗ, ಅದರೊಂದಿಗೆ, ಪ್ರಾಚೀನ ದೇವಾಲಯಗಳ ಪುನರುಜ್ಜೀವನ, ಯಾತ್ರಾ ಸ್ಥಳಗಳ ಅಭಿವೃದ್ಧಿ, ಐತಿಹಾಸಿಕ ತಾಣಗಳ ಅಭಿವೃದ್ಧಿ ಮತ್ತು ಆಯುರ್ವೇದ ಹಾಗು ಯೋಗದ ಪ್ರಚಾರ ಮತ್ತು ವಿಸ್ತರಣೆಯನ್ನು ಪ್ರತಿ ಹಂತದಲ್ಲೂ ಮಾಡಲಾಗುತ್ತಿದೆ. ಗುಜರಾತ್‌ನಲ್ಲಿಯೇ, ಲೋಥಾಲ್‌ನಲ್ಲಿ ಬೃಹತ್ ಸಾಗರ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುತ್ತಿದೆ ಮತ್ತು ಇದು ವಿಶ್ವದ ಅತಿದೊಡ್ಡ ಸಾಗರ ವಸ್ತುಸಂಗ್ರಹಾಲಯವಾಗಲಿದೆ; ಇದು ಇಲ್ಲಿಂದ 70-80 ಕಿಲೋಮೀಟರ್ ದೂರದಲ್ಲಿದೆ. ಮತ್ತೊಂದೆಡೆ, ವಡ್ನಗರದಲ್ಲಿ ಬಹಳ ದೊಡ್ಡ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗಿದೆ; ಇದು ಈಗಾಗಲೇ ವಿಶ್ವದ ಉತ್ತಮ ವಸ್ತುಸಂಗ್ರಹಾಲಯಗಳಲ್ಲಿ ತನ್ನ ಸ್ಥಾನವನ್ನು ಕಂಡುಕೊಂಡಿದೆ. ದೆಹಲಿಯಲ್ಲಿ 'ಯುಗೆ ಯುಗೀನ್ ಭಾರತ್' ವಸ್ತುಸಂಗ್ರಹಾಲಯವನ್ನು ನಿರ್ಮಿಸಲು ಸಿದ್ಧತೆಗಳು ನಡೆಯುತ್ತಿವೆ. ಇಂದು, ಮೊದಲ ಬಾರಿಗೆ, ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಸಮಗ್ರ ರೂಪದಲ್ಲಿ ಮುಂದಕ್ಕೆ ತರಲು ಅರ್ಥಪೂರ್ಣ ಕೆಲಸ ಮಾಡಲಾಗಿದೆ. ನೀವು ನೆನಪಿನಲ್ಲಿಡಬೇಕು, ಹಿಂದೆ ಕಾರ್ಯಗಳನ್ನು ರಾಜಕೀಯ ಮಸೂರದ ಮೂಲಕ ಮಾಡಲಾಗುತ್ತಿತ್ತು; ಒಂದು ರಾಜಕೀಯ ಕುಟುಂಬದ ನಿರೂಪಣೆಯನ್ನು ಹೇಗೆ ಹೊಂದಿಸುವುದು, ಮತಬ್ಯಾಂಕ್ ಪ್ರಕಾರ ವಿಷಯಗಳನ್ನು ಹೇಗೆ ಮಾತನಾಡುವುದು – ಹೀಗೆ  ಎಲ್ಲವೂ ಇದರ ಸುತ್ತ ಸುತ್ತುತ್ತಿತ್ತು. ನಾವು ಮನಸ್ಥಿತಿಯನ್ನು ಕೊನೆಗೊಳಿಸಿದ್ದೇವೆ. ನಾವು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿದ್ದೇವೆ. ಈ ಮಂತ್ರವೇ ಅಭಿವೃದ್ಧಿ ಹೊಂದಿದ ಭಾರತದ ಕನಸಿನ ಆತ್ಮವಾಗಿದೆ.

ಸ್ನೇಹಿತರೇ,

ನೀವೆಲ್ಲ ಸಂತರು ಭಾರತದ ಪರಂಪರೆಯನ್ನು ಪಾಲಿಸಲು ಅಪಾರ ಪ್ರಯತ್ನ ಮಾಡುತ್ತಿದ್ದೀರಿ. ನಾವು ವೈಯಕ್ತಿಕ ಆಕಾಂಕ್ಷೆಗಳನ್ನು ಮೀರಿ ಸಮಾಜ ಮತ್ತು ರಾಷ್ಟ್ರದ ಗುರಿಗಳಿಗಾಗಿ ಕೆಲಸ ಮಾಡಿದಾಗ, ದೇಶದ ಅಭಿವೃದ್ಧಿ ಹೆಚ್ಚು ವೇಗವನ್ನು ಪಡೆಯುತ್ತದೆ. ಈ ಭಾವನೆಯೊಂದಿಗೆ, ನವಕರ್ ಮಹಾಮಂತ್ರ ದಿನದಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಆ ಕಾರ್ಯಕ್ರಮದಲ್ಲಿ, ಎಲ್ಲಾ ನಾಲ್ಕು ಪಂಗಡಗಳು ಒಟ್ಟುಗೂಡಿದ್ದವು. ಆ ಐತಿಹಾಸಿಕ ಸಂದರ್ಭದಲ್ಲಿ, ನಾನು ಒಂಬತ್ತು ವಿನಂತಿಗಳನ್ನು ಮಾಡಿದ್ದೆ, ಒಂಬತ್ತು ನಿರ್ಣಯಗಳ ಬಗ್ಗೆ ಮಾತನಾಡಿದ್ದೆ, ನಮ್ಮ ಮುಖ್ಯಮಂತ್ರಿ ಭೂಪೇಂದ್ರ ಭಾಯಿ ಕೂಡ ಇದನ್ನು ಉಲ್ಲೇಖಿಸಿದ್ದರು. ಪ್ರತಿ ಬಾರಿಯೂ, ನಾನು ಖಂಡಿತವಾಗಿಯೂ ಒಂಬತ್ತು ನಿರ್ಣಯಗಳನ್ನು ನಿಮ್ಮ ಮುಂದೆ ಪುನರಾವರ್ತಿಸುತ್ತೇನೆ. ಇಂದಿನ ಸಂದರ್ಭವು ಅವುಗಳನ್ನು ಮತ್ತೆ ಪುನರಾವರ್ತಿಸುವುದಕ್ಕೆ ಅವಕಾಶ ಒದಗಿಸಿದೆ. ಮೊದಲ ನಿರ್ಣಯ - ನೀರನ್ನು ಉಳಿಸುವ ನಿರ್ಣಯ. ಎರಡನೇ ನಿರ್ಣಯ - ತಾಯಿಯ ಹೆಸರಿನಲ್ಲಿ ಒಂದು ಗಿಡ. ಮೂರನೇ ನಿರ್ಣಯ - ಸ್ವಚ್ಛತೆಯ ಧ್ಯೇಯ. ನಾಲ್ಕನೇ ನಿರ್ಣಯ – ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ.. ಐದನೇ ನಿರ್ಣಯ - ದೇಶ ದರ್ಶನ (ದೇಶ ಪರ್ಯಟನೆ). ಆರನೇ ನಿರ್ಣಯ - ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವುದು. ಏಳನೇ ನಿರ್ಣಯ - ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು. ಎಂಟನೇ ನಿರ್ಣಯ - ಯೋಗ ಮತ್ತು ಕ್ರೀಡೆಗಳನ್ನು ಜೀವನದಲ್ಲಿ ಅಳವಡಿಸುವುದು. ಒಂಬತ್ತನೇ ನಿರ್ಣಯವೆಂದರೆ - ಬಡವರಿಗೆ ಸಹಾಯ ಮಾಡುವ ನಿರ್ಣಯ, ಮತ್ತು ನೀವೆಲ್ಲರೂ ನೀವಾಗಿಯೇ  ಸೇರಿಸಿಕೊಂಡಿರುವ ಹತ್ತನೇ ನಿರ್ಣಯ, ಅಂದರೆ - ಭಾರತದ ಪರಂಪರೆಯ ಸಂರಕ್ಷಣೆ. ಇಂದಿನ ಕಾರ್ಯಕ್ರಮವು ಇದರ ಪ್ರತಿಬಿಂಬವಾಗಿದೆ.

ಸ್ನೇಹಿತರೇ,

ಮುಂಬರುವ ದಿನಗಳಲ್ಲಿ, ನಮ್ಮ ಮುಂದೆ ದೊಡ್ಡ ಗುರಿಗಳಿವೆ; ನಾವು ದೊಡ್ಡ ನಿರ್ಣಯಗಳನ್ನು ಪೂರೈಸಬೇಕು. ನಮ್ಮ ಏಕತೆ, ನಮ್ಮ ಸಾಂಸ್ಕೃತಿಕ ಬೆಂಬಲಗಳು, ಇದರಲ್ಲಿ ನಮ್ಮ ಶಕ್ತಿಯಾಗುತ್ತವೆ. ಮುಂಬರುವ ದಿನಗಳಲ್ಲಿ ಸಾಮ್ರಾಟ್ ಸಂಪ್ರತಿ ವಸ್ತುಸಂಗ್ರಹಾಲಯವು ದಿಕ್ಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಇದು ಜ್ಞಾನ, ಆಧ್ಯಾತ್ಮಿಕ ಅನುಷ್ಠಾನ ಮತ್ತು ಸಂಸ್ಕೃತಿಯ ಕೇಂದ್ರವಾಗಿ ಪರಿಣಮಿಸುತ್ತದೆ, ಅಲ್ಲಿಂದ ಹೊಸ ಪೀಳಿಗೆ ಸ್ಫೂರ್ತಿ ಪಡೆಯುತ್ತದೆ ಮತ್ತು ಸಮಾಜವು ಹೊಸ ಶಕ್ತಿಯನ್ನು ಪಡೆಯುತ್ತದೆ. ಈ ವಿಶ್ವಾಸದೊಂದಿಗೆ, ಈ ಮಹತ್ವದ ಕಾರ್ಯಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಅನೇಕಾನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಮತ್ತು ಅದೇ ಸಮಯದಲ್ಲಿ, ಮಹಾರಾಜ ಸಾಹೇಬರು ಇದನ್ನೆಲ್ಲಾ ಮಾಡಿದ್ದಾರೆ, ನಾವು ಅದನ್ನು ನೋಡಲು ಸಮಯ ನೀಡದಿದ್ದರೆ, ಅದು ಕೆಲಸ ಮಾಡುವುದಾದರೂ ಹೇಗೆ?. ಹೆಚ್ಚು ಹೆಚ್ಚು ಜನರು ಇಲ್ಲಿಗೆ ಬಂದು ನೋಡಿದ ನಂತರ ಹೊರಟು ಹೋಗುವುದಲ್ಲ; ತಿಳಿದುಕೊಳ್ಳಲು ಪ್ರಯತ್ನಿಸಿ, ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ; ಇದು ಅಮೂಲ್ಯವಾದ ನಿಧಿ. ಮತ್ತು ಗುಜರಾತ್‌ನ ಎಲ್ಲಾ ತಲೆಮಾರುಗಳ ಜನರು ತಮ್ಮ ಕುಟುಂಬಗಳೊಂದಿಗೆ ಇಲ್ಲಿಗೆ ಬರಬೇಕು, ಅದನ್ನು ತಮ್ಮ ಹೃದಯಕ್ಕೆ ಸಂಬಂಧಿಸಿದ ಸಾಮಗ್ರಿ ಎಂಬಂತೆ ನೋಡಬೇಕು ಮತ್ತು ಜ್ಞಾನ ಹಾಗು ಶ್ರೇಷ್ಠ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು ಎಂದು ನಾನು ಬಯಸುತ್ತೇನೆ. ಮತ್ತು ನನಗೆ, ಇಂದಿನ ಮಹಾವೀರ ಜಯಂತಿ ಅನೇಕ ವಿಧಗಳಲ್ಲಿ ಶುಭ ಸಂದರ್ಭ ಏಕೆಂದರೆ ನಾನು ಇಲ್ಲಿ ಗಾಂಧಿನಗರಕ್ಕೆ ಬಂದ ತಕ್ಷಣ, ಗುಜರಾತ್ ಭೂಮಿಗೆ ಕಾಲಿಟ್ಟ ತಕ್ಷಣ, ಮೊದಲ ಕಾರ್ಯಕ್ರಮವು ಬೇರುಗಳೊಂದಿಗೆ ಸಂಪರ್ಕ ಸಾಧಿಸುವಂತಹದ್ದು ಮತ್ತು ಇಲ್ಲಿಂದ ನಾನು ಈಗ ಸನಂದ್‌ಗೆ ಹೋಗುತ್ತೇನೆ; ಎರಡನೇ ಕಾರ್ಯಕ್ರಮವು ಅಲ್ಲಿ ಇದೆ - ಪ್ರಪಂಚದೊಂದಿಗೆ ಸಂಪರ್ಕ ಸಾಧಿಸುವಂತಹದ್ದು. ಇಲ್ಲಿ ನಾನು ಮಹಾನ್ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಭವ್ಯ ಭೂತಕಾಲವನ್ನು ಸವಿದೆ, ಮತ್ತು ಸನಂದ್‌ನಲ್ಲಿ, ವಿಶ್ವದ ಅತ್ಯಾಧುನಿಕ ತಂತ್ರಜ್ಞಾನ ಚಿಪ್‌ಗಳ ನಿರ್ಮಾಣದ ಉದ್ಘಾಟನೆ ನಡೆಯುತ್ತಿದೆ, ಅರೆವಾಹಕಗಳ ಉದ್ಘಾಟನೆ ನಡೆಯುತ್ತಿದೆ. ಇಲ್ಲಿ ಬೇರುಗಳೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಅಲ್ಲಿಂದ ಜಗತ್ತನ್ನು ಸಂಪರ್ಕಿಸುವುದು, ಮತ್ತು ಇದೆಲ್ಲವೂ ಗುಜರಾತ್ ಭೂಮಿಯಲ್ಲಿ ನಡೆಯುತ್ತಿದೆ, ಭಾರತದ ಭೂಮಿಯಲ್ಲಿ ನಡೆಯುತ್ತಿದೆ. ನಿಮ್ಮೆಲ್ಲರಿಗೂ ಅನೇಕ, ಅನೇಕ ಶುಭಾಶಯಗಳು. ತುಂಬಾ ಧನ್ಯವಾದಗಳು.

ಜೈ ಜಿನೇಂದ್ರ!

ಜೈ ಜಿನೇಂದ್ರ!

ಜೈ ಜಿನೇಂದ್ರ!

ಘೋಷಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಸರಿಸುಮಾರಾದ ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

 

*****


(ಪ್ರಕಟಣೆ ಐ.ಡಿ.: 2247433) ವಿಸಿಟರ್ ಕೌಂಟರ್ : 23
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Manipuri , Assamese , Punjabi , Gujarati , Telugu , Malayalam