ಪ್ರಧಾನ ಮಂತ್ರಿಯವರ ಕಛೇರಿ
ಸುಮಾರು ₹11,200 ಕೋಟಿ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲಾದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ I ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ-I ಉದ್ಘಾಟನೆಯು ಉತ್ತರ ಪ್ರದೇಶದ ಬೆಳವಣಿಗೆಯ ಕಥನ ಮತ್ತು ಭಾರತದ ವಾಯುಯಾನ ಭವಿಷ್ಯದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ: ಪ್ರಧಾನಮಂತ್ರಿ
ಯುಪಿ ಈಗ ಭಾರತದಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮಿದೆ: ಪ್ರಧಾನಮಂತ್ರಿ
ಯಾವುದೇ ದೇಶದಲ್ಲಿ ವಿಮಾನ ನಿಲ್ದಾಣಗಳು ಕೇವಲ ಮೂಲಭೂತ ಸೌಲಭ್ಯಗಳಲ್ಲ, ಅವು ಪ್ರಗತಿಗೆ ರೆಕ್ಕೆಗಳನ್ನು ನೀಡುತ್ತವೆ: ಪ್ರಧಾನಮಂತ್ರಿ
ವಿಕಸಿತ ಭಾರತವನ್ನು ನಿರ್ಮಿಸಲು ನಮ್ಮ ಸರ್ಕಾರ ಆಧುನಿಕ ಮೂಲಸೌಕರ್ಯಗಳಲ್ಲಿ ಅಭೂತಪೂರ್ವ ಹೂಡಿಕೆಗಳನ್ನು ಮಾಡುತ್ತಿದೆ: ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
28 MAR 2026 2:23PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಜೇವರ್‌ನಲ್ಲಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಮ್ಮ ಹೆಮ್ಮೆ ಮತ್ತು ಸಂತೋಷವನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿ , ಇಂದು ವಿಕ್ಷಿತ್ ಯುಪಿ, ವಿಕಸಿತ ಭಾರತ ಅಭಿಯಾನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ ಎಂದು ಹೇಳಿದರು. ಭಾರತದ ಅತಿದೊಡ್ಡ ರಾಜ್ಯವು ಈಗ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ ಎಂಬುದರತ್ತ ಅವರು ಗಮನ ಸೆಳೆದರು. ಮೊದಲನೆಯದಾಗಿ, ಈ ವಿಮಾನ ನಿಲ್ದಾಣದ ಅಡಿಪಾಯವನ್ನು ಹಾಕಿದ್ದಕ್ಕಾಗಿ ಮತ್ತು ಈಗ ಅದನ್ನು ಉದ್ಘಾಟಿಸಿದ್ದಕ್ಕಾಗಿ ಹಾಗು ಎರಡನೆಯದಾಗಿ, ಈ ಭವ್ಯ ವಿಮಾನ ನಿಲ್ದಾಣದ ಹೆಸರು ಉತ್ತರ ಪ್ರದೇಶದೊಂದಿಗೆ ಸಂಬಂಧ ಹೊಂದಿರುವುದರಿಂದಾಗಿ ತಮಗೆ ಎರಡು ಪಟ್ಟು ಹೆಮ್ಮೆಯಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಸಂತಸ ಹಂಚಿಕೊಂಡರು. "ನನ್ನನ್ನು ತನ್ನ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಸಂಸತ್ ಸದಸ್ಯನನ್ನಾಗಿ ಮಾಡಿದ ರಾಜ್ಯ ಇದು, ಮತ್ತು ಅದರ ಗುರುತು ಈಗ ಈ ಭವ್ಯ ವಿಮಾನ ನಿಲ್ದಾಣದೊಂದಿಗೆ ಸಂಬಂಧ ಹೊಂದಿದೆ" ಎಂದು ಶ್ರೀ ಮೋದಿ ಹೇಳಿದರು.
ಹೊಸ ವಿಮಾನ ನಿಲ್ದಾಣದ ದೂರಗಾಮಿ ಪರಿಣಾಮವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ನೋಯ್ಡಾ ವಿಮಾನ ನಿಲ್ದಾಣವು ಆಗ್ರಾ, ಮಥುರಾ, ಅಲಿಗಢ, ಗಾಜಿಯಾಬಾದ್, ಮೀರತ್, ಇಟಾವಾ, ಬುಲಂದ್‌ಶಹರ್ ಮತ್ತು ಫರಿದಾಬಾದ್‌ಗಳನ್ನು ಒಳಗೊಂಡ ವಿಶಾಲ ಪ್ರದೇಶಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು. ಈ ವಿಮಾನ ನಿಲ್ದಾಣವು ರೈತರು, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗು ಪಶ್ಚಿಮ ಉತ್ತರ ಪ್ರದೇಶದ ಯುವಜನರಿಗೆ ಹಲವಾರು ಹೊಸ ಅವಕಾಶಗಳನ್ನು ತರುತ್ತದೆ ಎಂದು ಅವರು ಒತ್ತಿ ಹೇಳಿದರು. "ವಿಮಾನಗಳು ಇಲ್ಲಿಂದ ಜಗತ್ತಿಗೆ ಹಾರುತ್ತವೆ ಮತ್ತು ಈ ವಿಮಾನ ನಿಲ್ದಾಣವು ಅಭಿವೃದ್ಧಿ ಹೊಂದಿದ ಉತ್ತರ ಪ್ರದೇಶವು ಹಾರಾಟ ನಡೆಸುವ ಸಂಕೇತವಾಗಲಿದೆ" ಎಂದು ಶ್ರೀ ಮೋದಿ ಹೇಳಿದರು, ರಾಜ್ಯದ ಜನರಿಗೆ, ವಿಶೇಷವಾಗಿ ಪಶ್ಚಿಮ ಯುಪಿಗೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರಸ್ತುತ ಜಾಗತಿಕ ಪರಿಸ್ಥಿತಿಯ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಪಶ್ಚಿಮ ಏಷ್ಯಾದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಯುದ್ಧವು ಆಹಾರ, ಪೆಟ್ರೋಲ್, ಡೀಸೆಲ್, ಅನಿಲ ಮತ್ತು ರಸಗೊಬ್ಬರಗಳು ಸೇರಿದಂತೆ ಅಗತ್ಯ ವಸ್ತುಗಳ ಬಿಕ್ಕಟ್ಟನ್ನು ಸೃಷ್ಟಿಸುತ್ತಿರುವುದರಿಂದ ಇಂದು ಇಡೀ ಜಗತ್ತು ತೀವ್ರ ಕಳವಳಗೊಂಡಿದೆ ಎಂದು ಹೇಳಿದರು. ಸಂಘರ್ಷ ಪೀಡಿತ ಪ್ರದೇಶದಿಂದ ಭಾರತವು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುತ್ತಿದೆ ಎಂಬುದರತ್ತ ಅವರು ಗಮನ ಸೆಳೆದರು. "ಈ ಬಿಕ್ಕಟ್ಟಿನ ಹೊರೆ ಸಾಮಾನ್ಯ ಕುಟುಂಬಗಳು ಮತ್ತು ರೈತರ ಮೇಲೆ ಬೀಳದಂತೆ ನೋಡಿಕೊಳ್ಳಲು ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ" ಎಂದೂ ಶ್ರೀ ಮೋದಿ ದೃಢಪಡಿಸಿದರು.
ಜಾಗತಿಕ ಬಿಕ್ಕಟ್ಟಿನ ಸಮಯದಲ್ಲೂ ಭಾರತದ ತ್ವರಿತ ಅಭಿವೃದ್ಧಿಯ ವೇಗವನ್ನು ಒತ್ತಿಹೇಳುತ್ತಾ, ಪಶ್ಚಿಮ ಉತ್ತರ ಪ್ರದೇಶವೊಂದರಲ್ಲಿಯೇ ಇತ್ತೀಚಿನ ವಾರಗಳಲ್ಲಿ ಉದ್ಘಾಟನೆಯಾಗುತ್ತಿರುವ ಅಥವಾ ಶಂಕುಸ್ಥಾಪನೆಯಾಗುತ್ತಿರುವ ನಾಲ್ಕನೇ ಪ್ರಮುಖ ಯೋಜನೆ ಇದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಈ ಅವಧಿಯಲ್ಲಿ, ನೋಯ್ಡಾದಲ್ಲಿ ಪ್ರಮುಖ ಸೆಮಿಕಂಡಕ್ಟರ್ ಕಾರ್ಖಾನೆಯ ಶಂಕುಸ್ಥಾಪನೆ ಮಾಡಲಾಯಿತು, ದೇಶದ ಮೊದಲ ದೆಹಲಿ-ಮೀರತ್ ನಮೋ ಭಾರತ್ ರೈಲು ವೇಗ ಪಡೆದುಕೊಂಡಿತು, ಮೀರತ್ ಮೆಟ್ರೋವನ್ನು ವಿಸ್ತರಿಸಲಾಯಿತು ಮತ್ತು ಇಂದು ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಾಗುತ್ತಿದೆ" ಎಂದು ಪ್ರಧಾನಮಂತ್ರಿ ಮೋದಿ ಪ್ರಮುಖಾಂಶಗಳನ್ನು ಪಟ್ಟಿ ಮಾಡಿದರು.
ಉತ್ತರ ಪ್ರದೇಶದ ಅಭಿವೃದ್ಧಿಯಲ್ಲಿನ ಈ ಗಮನಾರ್ಹ ಸಾಧನೆಗಳಿಗೆ ಪ್ರಧಾನಮಂತ್ರಿ ಯವರು ಪ್ರಸ್ತುತ ಸರ್ಕಾರವನ್ನು ಶ್ಲಾಘಿಸಿದರು. ಸೆಮಿಕಂಡಕ್ಟರ್ ಕಾರ್ಖಾನೆ ಭಾರತವನ್ನು ತಂತ್ರಜ್ಞಾನದಲ್ಲಿ ಸ್ವಾವಲಂಬಿಯನ್ನಾಗಿ ಮಾಡುತ್ತಿದೆ, ಮೀರತ್ ಮೆಟ್ರೋ ಮತ್ತು ನಮೋ ಭಾರತ್ ರೈಲು ವೇಗದ ಮತ್ತು ಸ್ಮಾರ್ಟ್ ಸಂಪರ್ಕವನ್ನು ಒದಗಿಸುತ್ತಿದೆ ಹಾಗು ಜೇವರ್ ವಿಮಾನ ನಿಲ್ದಾಣವು ಇಡೀ ಉತ್ತರ ಭಾರತವನ್ನು ಜಗತ್ತಿಗೆ ಸಂಪರ್ಕಿಸುತ್ತಿದೆ ಎಂದು ಅವರು ಗಮನಿಸಿದರು. "ಇಂದು ಪ್ರಸ್ತುತ ಸರ್ಕಾರದ ಅಡಿಯಲ್ಲಿ, ಅದೇ ನೋಯ್ಡಾ ಯುಪಿ ಅಭಿವೃದ್ಧಿಯ ಪ್ರಬಲ ಎಂಜಿನ್ ಆಗುತ್ತಿದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ವಿಮಾನ ನಿಲ್ದಾಣ ಯೋಜನೆಯ ಇತಿಹಾಸವನ್ನು ವಿವರಿಸುತ್ತಾ, ಜೇವರ್ ವಿಮಾನ ನಿಲ್ದಾಣವನ್ನು 2003 ರಷ್ಟು ಹಿಂದೆಯೇ ಅಟಲ್ ಜೀ ಅನುಮೋದಿಸಿದ್ದರು ಎಂದು ಪ್ರಧಾನಮಂತ್ರಿ ನೆನಪಿಸಿಕೊಂಡರು. ಮತ್ತು ಇಲ್ಲಿ ಪ್ರಸ್ತುತ ಸರ್ಕಾರ ರಚನೆಯಾದ ತಕ್ಷಣ, ಅಡಿಪಾಯ ಹಾಕಲಾಯಿತು, ನಿರ್ಮಾಣ ಕಾರ್ಯ ನಡೆಯಿತು ಮತ್ತು ಈಗ ಅದು ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ" ಎಂದು ಶ್ರೀ ಮೋದಿ ಹೇಳಿದರು.
ಲಾಜಿಸ್ಟಿಕ್ಸ್ ಕೇಂದ್ರವಾಗಿ ಈ ಪ್ರದೇಶದ ಉದಯೋನ್ಮುಖ ಪಾತ್ರದ ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿ, ಈ ಪ್ರದೇಶವು ಎರಡು ಪ್ರಮುಖ ಸರಕು ಕಾರಿಡಾರ್‌ಗಳ ಕೇಂದ್ರವಾಗುತ್ತಿದೆ, ಸರಕು ರೈಲುಗಳಿಗಾಗಿ ನಿರ್ಮಿಸಲಾದ ವಿಶೇಷ ರೈಲು ಹಳಿಗಳು, ಬಂಗಾಳ ಮತ್ತು ಗುಜರಾತ್ ಸಮುದ್ರಗಳೊಂದಿಗೆ ಉತ್ತರ ಭಾರತದ ಸಂಪರ್ಕವನ್ನು ಹೆಚ್ಚಿಸಿವೆ ಎಂದು ನುಡಿದರು. ದಾದ್ರಿ ಈ ಎರಡೂ ಕಾರಿಡಾರ್‌ಗಳು ಸಂಗಮಿಸುವ ಕಾರ್ಯತಂತ್ರದ ಬಿಂದುವಾಗಿದೆ, ಅಂದರೆ ಇಲ್ಲಿ ರೈತರು ಬೆಳೆಯುವ ಮತ್ತು ಕೈಗಾರಿಕೆಗಳು ಉತ್ಪಾದಿಸುವ ಯಾವುದೇ ವಸ್ತುವು ಈಗ ಭೂಮಿ ಮತ್ತು ವಾಯುಮಾರ್ಗದ ಮೂಲಕ ಪ್ರಪಂಚದ ಪ್ರತಿಯೊಂದು ಮೂಲೆಯನ್ನು ತ್ವರಿತವಾಗಿ ತಲುಪಬಹುದು ಎಂದು ಅವರು ಗಮನಿಸಿದರು. "ಈ ರೀತಿಯ ಬಹು-ಮಾದರಿ ಸಂಪರ್ಕವು ಉತ್ತರ ಪ್ರದೇಶವನ್ನು ವಿಶ್ವಾದ್ಯಂತ ಹೂಡಿಕೆದಾರರಿಗೆ ಪ್ರಮುಖ ಆಕರ್ಷಣೆಯನ್ನಾಗಿ ಮಾಡುತ್ತಿದೆ" ಎಂದು ಪ್ರಧಾನಮಂತ್ರಿ ಮೋದಿ ವಿವರಿಸಿದರು.
ಪ್ರದೇಶದ ಇಮೇಜ್‌ನ ಪರಿವರ್ತನೆ/ರೂಪಾಂತರವನ್ನು ಕುರಿತು ಮಾತನಾಡಿದ ಪ್ರಧಾನಮಂತ್ರಿ, "ಇಂದು, ನೋಯ್ಡಾ ಇಡೀ ಜಗತ್ತನ್ನು ಸ್ವಾಗತಿಸಲು ಸಿದ್ಧವಾಗಿದೆ. ಈ ಇಡೀ ಪ್ರದೇಶವು ಆತ್ಮನಿರ್ಭರ ಭಾರತದ ಸಂಕಲ್ಪವನ್ನು ಬಲಪಡಿಸುತ್ತಿದೆ" ಎಂದೂ ಹೇಳಿದರು.
ಈ ಯೋಜನೆಯನ್ನು ನನಸಾಗಿಸಲು ತಮ್ಮ ಭೂಮಿಯನ್ನು ಬಿಟ್ಟುಕೊಟ್ಟ ರೈತರಿಗೆ ಪ್ರಧಾನಮಂತ್ರಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು, ಕೃಷಿ ಮತ್ತು ವ್ಯವಸಾಯ ಈ ಪ್ರದೇಶದ ಆರ್ಥಿಕತೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಿದರು. ಆಧುನಿಕ ಸಂಪರ್ಕದ ವಿಸ್ತರಣೆಯು ಪಶ್ಚಿಮ ಯುಪಿಯಲ್ಲಿ ಆಹಾರ ಸಂಸ್ಕರಣಾ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು, "ಇಲ್ಲಿಂದ ಕೃಷಿ ಉತ್ಪನ್ನಗಳು ಈಗ ಹೆಚ್ಚು ಪರಿಣಾಮಕಾರಿಯಾಗಿ ಜಾಗತಿಕ ಮಾರುಕಟ್ಟೆಗಳನ್ನು ತಲುಪುತ್ತವೆ" ಎಂದು ಹೇಳಿದರು.
ಕಚ್ಚಾ ತೈಲದ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಕಬ್ಬು ಬೆಳೆಗಾರರ ಕೊಡುಗೆಯನ್ನು ಪರಿಗಣಿಸಿದ ಪ್ರಧಾನಮಂತ್ರಿ , ಕಬ್ಬಿನಿಂದ ಉತ್ಪಾದಿಸುವ ಎಥೆನಾಲ್‌ನ ಮಹತ್ವದ ಪಾತ್ರವನ್ನು ಎತ್ತಿ ತೋರಿಸಿದರು. ಎಥೆನಾಲ್ ಉತ್ಪಾದನೆಯಲ್ಲಿ ಹೆಚ್ಚಳ ಮತ್ತು ಅದನ್ನು ಪೆಟ್ರೋಲ್‌ನೊಂದಿಗೆ ಬೆರೆಸದಿದ್ದರೆ, ಭಾರತವು ಹೆಚ್ಚುವರಿಯಾಗಿ ನಾಲ್ಕುವರೆ ಕೋಟಿ ಬ್ಯಾರೆಲ್‌ಗಳನ್ನು ಅಂದರೆ ವಾರ್ಷಿಕವಾಗಿ ಸುಮಾರು 700 ಕೋಟಿ ಲೀಟರ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಬೇಕಾಗಿತ್ತು ಎಂದು ಪ್ರಧಾನಮಂತ್ರಿ ಮೋದಿ ಒತ್ತಿ ಹೇಳಿದರು, "ನಮ್ಮ ರೈತರ ಕಠಿಣ ಪರಿಶ್ರಮವು ಬಿಕ್ಕಟ್ಟಿನ ಸಮಯದಲ್ಲಿ ದೇಶಕ್ಕೆ ಈ ಅಗಾಧ ಪರಿಹಾರವನ್ನು ನೀಡಿದೆ" ಎಂದು ಅವರು ಹೇಳಿದರು.
ಎಥೆನಾಲ್ ರಾಷ್ಟ್ರಕ್ಕೆ ಮಾತ್ರವಲ್ಲದೆ ರೈತರಿಗೂ ಸಹ ಪ್ರಯೋಜನವನ್ನು ನೀಡಿದೆ ಎಂದು ಪ್ರಧಾನಮಂತ್ರಿ ಮತ್ತಷ್ಟು ವಿವರಿಸಿದರು, ಸುಮಾರು 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಿದೇಶಿ ವಿನಿಮಯವನ್ನು ಉಳಿಸಲಾಗಿದೆ. ಕಬ್ಬು ರೈತರು ತಮ್ಮ ಬಾಕಿ ಹಣಕ್ಕಾಗಿ ವರ್ಷಗಳ ಕಾಲ ಕಾಯಬೇಕಾದ ಹಿಂದಿನ ದಿನಗಳನ್ನು ಅವರು ನೆನಪಿಸಿಕೊಂಡರು. "ಇಂದು, ಪ್ರಸ್ತುತ ಸರ್ಕಾರದ ಪ್ರಯತ್ನಗಳಿಗೆ ಧನ್ಯವಾದಗಳು, ಕಬ್ಬು ರೈತರ ಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ" ಎಂದು ಶ್ರೀ ಮೋದಿ ದೃಢಪಡಿಸಿದರು.
ವಿಮಾನ ನಿಲ್ದಾಣಗಳು ಕೇವಲ ಸೌಲಭ್ಯಗಳಲ್ಲ, ಬದಲಾಗಿ ಪ್ರಗತಿಗೆ ವೇಗವರ್ಧಕಗಳಾಗಿವೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ , ಭಾರತದ ವಾಯುಯಾನ ಮೂಲಸೌಕರ್ಯದ ಗಮನಾರ್ಹ ವಿಸ್ತರಣೆಯನ್ನು ಉಲ್ಲೇಖಿಸಿದರು. ಇಂದು 160ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಿವೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ ಮೋದಿ, ವಾಯು ಸಂಪರ್ಕವು ಈಗ ಮಹಾನಗರಗಳನ್ನು ಮಾತ್ರವಲ್ಲದೆ ಸಣ್ಣ ಪಟ್ಟಣಗಳನ್ನು ಸಹ ತಲುಪುತ್ತಿದೆ ಎಂದು ಹೇಳಿದರು. "ಪ್ರಸ್ತುತ ಸರ್ಕಾರವು ಸಾಮಾನ್ಯ ಭಾರತೀಯರಿಗೂ ವಿಮಾನ ಪ್ರಯಾಣವನ್ನು ಕೈಗೆಟಕುವಂತೆ ಮಾಡಿದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು, ಉತ್ತರ ಪ್ರದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ಹದಿನೇಳಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಉಡಾನ್ ಯೋಜನೆಯ ಪರಿಣಾಮವನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿ, ವಿಮಾನ ನಿಲ್ದಾಣಗಳು ನಿರ್ಮಾಣವಾಗುತ್ತಿದ್ದರೂ, ವಿಮಾನ ದರಗಳು ಸಾಮಾನ್ಯ ಕುಟುಂಬಗಳ ವ್ಯಾಪ್ತಿಯಲ್ಲಿ ಉಳಿಯುವಂತೆ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ಉಡಾನ್ ಯೋಜನೆಯಡಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವ ಮೂಲಕ ಒಂದು ಕೋಟಿ ಅರವತ್ತು ಲಕ್ಷಕ್ಕೂ ಹೆಚ್ಚು ನಾಗರಿಕರು ಕೈಗೆಟುಕುವ ದರದಲ್ಲಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂಬುದನ್ನು ಗಮನಿಸಿದ ಶ್ರೀ ಮೋದಿ, "ಇತ್ತೀಚೆಗೆ, ಕೇಂದ್ರ ಸರ್ಕಾರವು ಸುಮಾರು 29,000 ಕೋಟಿ ರೂ.ಗಳ ಅನುಮೋದನೆಯೊಂದಿಗೆ ಉಡಾನ್ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿದೆ, ಇದರ ಅಡಿಯಲ್ಲಿ ಮುಂಬರುವ ವರ್ಷಗಳಲ್ಲಿ ಸಣ್ಣ ನಗರಗಳಲ್ಲಿ 100 ಹೊಸ ವಿಮಾನ ನಿಲ್ದಾಣಗಳು ಮತ್ತು 200 ಹೊಸ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗುವುದು. ಯುಪಿ ಕೂಡ ಇದರಿಂದ ಅಪಾರ ಪ್ರಯೋಜನ ಪಡೆಯಲಿದೆ" ಎಂದು ಹೇಳಿದರು.
ಭಾರತದ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಕ್ಷೇತ್ರದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ಹೊಸ ವಿಮಾನ ನಿಲ್ದಾಣಗಳು ನಿರ್ಮಾಣವಾಗುತ್ತಿದ್ದಂತೆ, ಹೊಸ ವಿಮಾನಗಳ ಬೇಡಿಕೆಯೂ ಹೆಚ್ಚುತ್ತಿದೆ, ವಿವಿಧ ವಿಮಾನಯಾನ ಸಂಸ್ಥೆಗಳು ನೂರಾರು ಹೊಸ ವಿಮಾನಗಳಿಗೆ ಬೇಡಿಕೆ ಆದೇಶ ನೀಡುತ್ತಿವೆ ಎಂದು ಹೇಳಿದರು. ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿ ಮತ್ತು ನಿರ್ವಹಣಾ ವೃತ್ತಿಪರರು ಸೇರಿದಂತೆ ಯುವಜನರಿಗೆ ಇದು ಅಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬುದರತ್ತ ಶ್ರೀ ಮೋದಿ ಗಮನ ಸೆಳೆದರು, ಈ ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು "ನಮ್ಮ ಸರ್ಕಾರ ವಾಯುಯಾನ ವಲಯದಲ್ಲಿ ತರಬೇತಿ ಸೌಲಭ್ಯಗಳನ್ನು ವಿಸ್ತರಿಸುತ್ತಿದೆ" ಎಂದೂ ಹೇಳಿದರು.
ಭಾರತದ ವಾಯುಯಾನ ಪರಿಸರ ವ್ಯವಸ್ಥೆಯಲ್ಲಿನ ನಿರ್ಣಾಯಕ ಅಂತರವನ್ನು ನಿಭಾಯಿಸಲು, ಪ್ರಧಾನಮಂತ್ರಿಯವರು ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ ಮೂಲಕ ಸಮಗ್ರ ದುರಸ್ತಿ (MRO) ವಲಯದತ್ತ ಗಮನ ಸೆಳೆದರು, ಭಾರತೀಯ ವಿಮಾನಗಳಲ್ಲಿ ಶೇ. 85 ರಷ್ಟು ಇನ್ನೂ ಎಂ.ಆರ್.ಒ. ಸೇವೆಗಳಿಗಾಗಿ ವಿದೇಶಗಳಿಗೆ ಹೋಗಬೇಕಾಗಿದೆ ಎಂದು ಹೇಳಿದರು. ಎಂ.ಆರ್.ಒ. ವಲಯದಲ್ಲಿಯೂ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಸರ್ಕಾರ ಸಂಕಲ್ಪಿಸಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು ಮತ್ತು ಇಂದು, ಜೇವರ್‌ನಲ್ಲಿ ಎಂ.ಆರ್.ಒ. ಸೌಲಭ್ಯದ ಅಡಿಪಾಯ ಹಾಕಲಾಗಿದೆ ಎಂದು ಒತ್ತಿ ಹೇಳಿದರು. "ಸಿದ್ಧವಾದಾಗ, ಇದು ಭಾರತ ಮತ್ತು ವಿದೇಶಗಳಿಂದ ಬರುವ ವಿಮಾನಗಳಿಗೆ ಸೇವೆ ಸಲ್ಲಿಸುತ್ತದೆ, ದೇಶಕ್ಕೆ ಆದಾಯವನ್ನು ಗಳಿಸುತ್ತದೆ, ನಮ್ಮ ಹಣವನ್ನು ಭಾರತದೊಳಗೆ ಇಡುತ್ತದೆ ಮತ್ತು ಯುವಜನರಿಗೆ ಹಲವಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ" ಎಂದು ಶ್ರೀ ಮೋದಿ ಘೋಷಿಸಿದರು.
ನಾಗರಿಕರ ಅನುಕೂಲತೆಯನ್ನು ಖಚಿತಪಡಿಸುವುದು ಮತ್ತು ಅವರ ಸಮಯ ಹಾಗು ಹಣವನ್ನು ಉಳಿಸುವ ಸರ್ಕಾರದ ಆದ್ಯತೆಯನ್ನು ಒತ್ತಿಹೇಳುತ್ತಾ, ಮೆಟ್ರೋ ಮತ್ತು ವಂದೇ ಭಾರತ್‌ನಂತಹ ಆಧುನಿಕ ರೈಲು ಸೇವೆಗಳ ವಿಸ್ತರಣೆಯ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದರು. "ದೆಹಲಿ-ಮೀರತ್ ನಮೋ ಭಾರತ್ ರೈಲನ್ನು ಈಗಾಗಲೇ ಎರಡೂವರೆ ಕೋಟಿಗೂ ಹೆಚ್ಚು ಪ್ರಯಾಣಿಕರು ಬಳಸಿದ್ದಾರೆ. ದೆಹಲಿ ಮತ್ತು ಮೀರತ್ ನಡುವಿನ ಗಂಟೆಗಳನ್ನು ತೆಗೆದುಕೊಳ್ಳುವ ಪ್ರಯಾಣವು ಈಗ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ" ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.
ವಿಕಸಿತ ಭಾರತಕ್ಕಾಗಿ ಆಧುನಿಕ ಮೂಲಸೌಕರ್ಯದಲ್ಲಿ ಅಭೂತಪೂರ್ವ ಹೂಡಿಕೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಕಳೆದ ಹನ್ನೊಂದು ವರ್ಷಗಳಲ್ಲಿ ಮೂಲಸೌಕರ್ಯ ಬಜೆಟ್ ಆರು ಪಟ್ಟು ಹೆಚ್ಚಿಸಲಾಗಿದೆ, ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಿಗೆ 17 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಮತ್ತು ಒಂದು ಲಕ್ಷ ಕಿಲೋಮೀಟರ್‌ಗೂ ಹೆಚ್ಚು ಹೆದ್ದಾರಿಗಳನ್ನು ನಿರ್ಮಿಸಲಾಗಿದೆ ಎಂದು ಹಂಚಿಕೊಂಡರು. 2014 ರ ಮೊದಲು 20,000 ಕಿಲೋಮೀಟರ್‌ಗಳಷ್ಟು ಇದ್ದ ರೈಲ್ವೆ ವಿದ್ಯುದ್ದೀಕರಣವು 40,000 ಕಿಲೋಮೀಟರ್‌ಗಳಿಗೆ ವಿಸ್ತರಿಸಿದೆ ಮತ್ತು ಬ್ರಾಡ್-ಗೇಜ್ ಜಾಲದ ಸುಮಾರು 100 ಪ್ರತಿಶತವು ಈಗ ವಿದ್ಯುದ್ದೀಕರಿಸಲ್ಪಟ್ಟಿದೆ ಎಂದು ಅವರು ಗಮನಿಸಿದರು. ಮೊದಲ ಬಾರಿಗೆ ಕಾಶ್ಮೀರ ಕಣಿವೆ ಮತ್ತು ಈಶಾನ್ಯದ ರಾಜಧಾನಿಗಳು ರೈಲು ಜಾಲಕ್ಕೆ ಸಂಪರ್ಕಗೊಂಡಿವೆ, ಜೊತೆಗೆ ಕಳೆದ ದಶಕದಲ್ಲಿ ಬಂದರು ಸಾಮರ್ಥ್ಯವು ದ್ವಿಗುಣಗೊಂಡಿದೆ ಮತ್ತು ಒಳನಾಡಿನ ಜಲಮಾರ್ಗಗಳ ಸಂಖ್ಯೆ ಬೆಳೆಯುತ್ತಲೇ ಇದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. "ವಿಕಸಿತ ಭಾರತವನ್ನು ನಿರ್ಮಿಸಲು ಅಗತ್ಯವಿರುವ ಪ್ರತಿಯೊಂದು ವಲಯದಲ್ಲೂ ಭಾರತ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿದೆ" ಎಂದು ಶ್ರೀ ಮೋದಿ ಹೇಳಿದರು.
ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಸಾಮೂಹಿಕ ಪ್ರಯತ್ನ ಮತ್ತು ರಾಷ್ಟ್ರೀಯ ಏಕತೆಗೆ ಕರೆ ನೀಡಿದ ಪ್ರಧಾನಮಂತ್ರಿ , ಪ್ರಸ್ತುತ ನಡೆಯುತ್ತಿರುವ ಸಂಘರ್ಷದಿಂದ ಉಂಟಾಗುವ ಬಿಕ್ಕಟ್ಟನ್ನು ನಿಭಾಯಿಸುವ ಬಗ್ಗೆ ಸಂಸತ್ತಿನಲ್ಲಿ ಸುದೀರ್ಘವಾಗಿ ಮಾತನಾಡಿದ್ದೇನೆ ಮತ್ತು ಮುಖ್ಯಮಂತ್ರಿಗಳೊಂದಿಗೆ ವಿವರವಾದ ಚರ್ಚೆಗಳನ್ನು ನಡೆಸಿದ್ದೇನೆ ಎಂದು ಹೇಳಿದರು. ಜನರು ಈ ಬಿಕ್ಕಟ್ಟನ್ನು ಶಾಂತ ಮನಸ್ಸು ಮತ್ತು ತಾಳ್ಮೆಯಿಂದ ಎದುರಿಸಬೇಕೆಂದು ಅವರು ಮನವಿ ಮಾಡಿದರು, ಇದು ಭಾರತೀಯರ ದೊಡ್ಡ ಶಕ್ತಿ ಎಂದು ಬಣ್ಣಿಸಿದರು. ಭಾರತೀಯರ ಹಿತಾಸಕ್ತಿ ಮತ್ತು ಭಾರತದ ಹಿತಾಸಕ್ತಿಗೆ ಅನುಗುಣವಾಗಿರುವುದೇ ಭಾರತ ಸರ್ಕಾರದ ನೀತಿ ಮತ್ತು ಕಾರ್ಯತಂತ್ರ ಎಂದು ಪ್ರಧಾನಮಂತ್ರಿ ಮೋದಿ ಪುನರುಚ್ಚರಿಸಿದರು. "ದೇಶದ ಒಗ್ಗಟ್ಟಿನ ಪ್ರಯತ್ನಗಳಿಗೆ ಎಲ್ಲಾ ರಾಜಕೀಯ ಪಕ್ಷಗಳು ಬಲ ನೀಡುತ್ತವೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ" ಎಂದು ಶ್ರೀ ಮೋದಿ ಮಾತುಗಳನ್ನು ಮುಕ್ತಾಯಗೊಳಿಸಿದರು.
*****
(ಪ್ರಕಟಣೆ ಐ.ಡಿ.: 2246546)
ವಿಸಿಟರ್ ಕೌಂಟರ್ : 4